Tag: K Sudhakr

  • ಸ್ವಪಕ್ಷೀಯರಿಂದಲೇ ಟೀಕೆ – ವಿಷಾದ ವ್ಯಕ್ತಪಡಿಸಿದ ಸುಧಾಕರ್‌

    ಸ್ವಪಕ್ಷೀಯರಿಂದಲೇ ಟೀಕೆ – ವಿಷಾದ ವ್ಯಕ್ತಪಡಿಸಿದ ಸುಧಾಕರ್‌

    ಬೆಂಗಳೂರು: ಏಕಪತ್ನಿವ್ರತಸ್ಥ ಹೇಳಿಕೆಗೆ ಬಿಜೆಪಿ ನಾಯಕರಿಂದಲೇ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಸಚಿವ ಸುಧಾಕರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್‌ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

    ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ.

    ಸುಧಾಕರ್‌ ಹೇಳಿದ್ದು ಏನು?
    ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಕರ್‌, ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕಪತ್ನಿವ್ರತಸ್ಥರಾ ಎಂದು ಪ್ರಶ್ನೆ ಮಾಡಿದ್ದರು.

  • ಒಬ್ಬರು ಮಣಿಲಿಲ್ಲ, ಇನ್ನೊಬ್ಬರು ಒಪ್ಪಲಿಲ್ಲ, ಮಗದೊಬ್ಬರು ಸಿಗಲೇ ಇಲ್ಲ

    ಒಬ್ಬರು ಮಣಿಲಿಲ್ಲ, ಇನ್ನೊಬ್ಬರು ಒಪ್ಪಲಿಲ್ಲ, ಮಗದೊಬ್ಬರು ಸಿಗಲೇ ಇಲ್ಲ

    ಬೆಂಗಳೂರು: ದೋಸ್ತಿ ಸರ್ಕಾರಕ್ಕೆ ಸಂಕಷ್ಟದ ಮೇಲೆ ಕಷ್ಟಗಳು ಎದುರಾಗುತ್ತಿವೆ. ಈಗಾಗಲೇ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅತೃಪ್ತರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ವಿಫಲವಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಸಹ ಅತೃಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಸಚಿವ ಎಂಟಿಬಿ ನಾಗರಾಜ್ ವಿಶೇಷ ವಿಮಾನದ ಮೂಲಕ ಮುಂಬೈ ತಲುಪಿದ್ದಾರೆ.

    ಮೇಲ್ನೋಟಕ್ಕೆ ಸರ್ಕಾರ ಪತನದಂಚಿಗೆ ತಲುಪಿದ್ದರೂ, ಸಿಎಂ ಮಾತ್ರ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲಿರುವ ರಾಮಲಿಂಗಾ ರೆಡ್ಡಿ ಯಾವ ಸಂಧಾನಕ್ಕೂ ರಾಜಿ ಆಗುತ್ತಿಲ್ಲ. ಇತ್ತ ರಾಜೀನಾಮೆ ವಾಪಾಸ್ ಪಡೆಯುತ್ತೇನೆ ಎಂದು ಹೇಳಿದ್ದ ಎಂಟಿಬಿ ನಾಗರಾಜ್ ದಿಢೀರ್ ಅಂತ ಭಾನುವಾರ ಮುಂಬೈನ ಹೋಟೆಲ್ ಸೇರಿಕೊಂಡಿದ್ದಾರೆ. ರಾಜೀನಾಮೆ ಬಳಿಕ ವಿಮಾನ ಹತ್ತಿದ ಶಾಸಕ ಕೆ.ಸುಧಾಕರ್ ಮಾತ್ರ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

    ಶತಾಯಗತಾಯ ಸರ್ಕಾರ ಉಳಸಿಕೊಳ್ಳಲೇಬೇಕು ಎಂದುಕೊಂಡ ದೋಸ್ತಿ ನಾಯಕರಿಗೆ ಸರ್ಕಾರ ಉಳಿಸಿಕೊಳ್ಳಲು ನೂರೆಂಟು ವಿಘ್ನಗಳು ಎದುರಾಗುತ್ತಿವೆ. ನೂರೆಂಟು ವಿಘ್ನಗಳ ನಡುವೆಯು ಈ ಮೂವರು ಶಾಸಕರುಗಳು ದೋಸ್ತಿ ನಾಯಕರ ಪಾಲಿಗೆ ಆಪತ್ಭಾಂದವರಾಗಬಹುದು ಎಂದು ಕೊಳ್ಳಲಾಗಿತ್ತು. ಆದರೆ ಆ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ.