Tag: k srinivas gowda

  • ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

    ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

    ಕೋಲಾರ: ಜೆಡಿಎಸ್ ನಿಂದ ಈಗಾಗಲೇ ಉಚ್ಛಾಟನೆ ಆಗಿದ್ದೇನೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದೇನೆ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

    ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ದೇವೇಗೌಡರು ಹಾಗೂ ಅವರ ಮಕ್ಕಳ ಬಗ್ಗೆ ಮಾತನಾಡಿದಕ್ಕೆ ಉಚ್ಛಾಟನೆ ಮಾಡಿದ್ದಾರೆ. ರಮೇಶ್ ಕುಮಾರ್ ಹಾಗೂ ಕೃಷ್ಣಬೈರೇಗೌಡರನ್ನು ಹೊಗಳಿದ್ದೇ ಉಚ್ಛಾಟನೆಗೆ ಕಾರಣ. ಅಲ್ಲದೆ ಕೆ.ಸಿ.ವ್ಯಾಲಿ ಯೋಜನೆ ನೀರನ್ನು ಕೊಳಚೆ ನೀರು ಎಂದು ಕುಮಾರಸ್ವಾಮಿ ಹೇಳಿದ್ದರು. ಅವರ ಮಾತಿಗೆ ವಿರೋಧ ಮಾಡಿದ್ದಕ್ಕೆ ನನ್ನ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರ ಮಾಡಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿ ಬಂದಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ನನ್ನ ಮಗನಿಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಹೇಳಲಾಗಿದೆ. ನನ್ನ ಮುಂದಿನ ನಿರ್ಧಾರವನ್ನು ನಮ್ಮ ಬೆಂಬಲಿಗರ ಜೊತೆಗೆ ಚರ್ಚಿಸಿ ನಂತರ ಕೈಗೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಮೂರು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಗೆ ಮೋದಿ ಚಿಂತನೆ ನಡೆಸಿದ್ದಾರೆ: ಅಪ್ಪಚ್ಚು ರಂಜನ್

    ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ, ಎಲ್ಲ ಅಧಿಕಾರ ದೇವೇಗೌಡರ ಕುಟುಂಬಕ್ಕೇ ಬೇಕು. ದೇವೇಗೌಡರು ಪ್ರಧಾನಿಯಾದರು, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರು. ಅಲ್ಲದೆ ರೇವಣ್ಣ ಸಚಿವರಾದರು. ಅವರ ಬಂಧು ಬಳಗದವರೂ ಶಾಸಕರು, ಸಚಿವರಾದರು. ಎಲ್ಲ ಅಧಿಕಾರ ಅವರಿಗೇ ಬೇಕು ಒಳ್ಳೆಯ ಖಾತೆಗಳೂ ಅವರಿಗೇ ಬೇಕು ಎಂದು ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ. ಕೆ.ಸಿ.ವ್ಯಾಲಿ ಯೋಜನೆ ಕ್ರೆಡಿಟ್ ರಮೇಶ್ ಕುಮಾರ್ ಹಾಗೂ ಕೃಷ್ಣಭೈರೇಗೌಡ ಅವರಿಗೆ ಬರುತ್ತೆ ಎಂಬುದು ಕುಮಾರಸ್ವಾಮಿಯವರಿಗೆ ಹೊಟ್ಟೆಕಿಚ್ಚು. ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಅಗಿದ್ದವರು, ಕೆಆರ್‍ಎಸ್ ಡ್ಯಾಂ ನಿಂದಲೇ ಕೋಲಾರಕ್ಕೆ ನೀರು ಕೊಡಬಹುದಾಗಿತ್ತು. ನಾನು ರೈತನ ಮಗನಾಗಿ ಕೆ.ಸಿ.ವ್ಯಾಲಿ ನೀರು ತಂದ ಇಬ್ಬರು ಮಹಾನುಭಾವರಿಗೆ ಕೃತಜ್ಞತೆ ಸಲ್ಲಿಸಿದ್ದಕ್ಕೆ ಕುಮಾರಸ್ವಾಮಿ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಇದು ಕುಮಾರಸ್ವಾಮಿಯವರಿಗೆ ಹಿಡಿಸಲಿಲ್ಲ, ಅದಕ್ಕೆ ನನ್ನನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಿದ್ದಾರೆ ಎಂದರು.

    ದೇವೇಗೌಡರು, ಅವರ ಮಕ್ಕಳೆಲ್ಲಾ ದೊಡ್ಡವರು. ನಮ್ಮನ್ನ ಉಚ್ಛಾಟನೆ ಮಾಡಿದ್ದಾರೆ, ನಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಹೇಳಿದ್ದೇನೆ. ಆದರೂ ಗುರುವಾರ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ನಾನು ನಾಲ್ಕು ಬಾರಿ ನಾಲ್ಕು ಪಕ್ಷದಿಂದ ಗೆದ್ದಿದ್ದೇನೆ. ನನ್ನ ಕ್ಷೇತ್ರದ ಜನರೊಂದಿಗೆ ಮಾತನಾಡಿ ತೀರ್ಮಾನ ಮಾಡುವೆ. ನಾನು ಕಳೆದ ಬಾರಿ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರಿಗೆ ಸಹಾಯ ಮಾಡಿಲ್ಲ. ಈ ಬಾರಿ ನನ್ನ ಮಗ ಹೊಳೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಆಕಾಂಕ್ಷಿ. ಕಾಂಗ್ರೆಸ್ ನಿಂದಲೇ ನನ್ನ ಮಗನಿಗೆ ಟಿಕೇಟ್ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆಯೇ ನಾನು ಕಾಂಗ್ರೇಸ್ ಗೆ ಸೇರ್ಪಡೆಯಾಗುವ ಸಾಧ್ಯತೆ ಇತ್ತು. ಆದರೆ ಮಹಾನುಭಾವ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅಡ್ಡಪಡಿಸಿದರು. ಅವರಿಗೆ ಜನ ತಕ್ಕ ಶಾಸ್ತಿ ಮಾಡಿದ್ದಾರೆ, ಇಂದು ಅವರು ಮೂಲೆ ಗುಂಪಾಗಿದ್ದಾರೆ. 7 ಬಾರಿ ಸಂಸದರಾದರೂ ಜನ ಅವರನ್ನು ಮರೆತಿದ್ದಾರೆ, ಇನ್ನಾದರೂ ಅವರು ಬುದ್ಧಿ ಕಲಿಯಲಿ.

  • ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

    ಕೊಚ್ಚೆ ನೀರೇ ಕುಡಿದಿದ್ದೇನೆ – ಹೆಚ್‍ಡಿಕೆಗೆ ಜೆಡಿಎಸ್ ಶಾಸಕ ಟಾಂಗ್

    ಕೋಲಾರ: ನಾನು ಕೊಚ್ಚೆ ನೀರನ್ನೇ ಕುಡಿದಿದ್ದೇನೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ.

    ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ 2 ನೇ ಬಾರಿಗೆ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಕುಮಾರಸ್ವಾಮಿಗೆ ನೇರ ಟಾಂಗ್ ನೀಡಿದರು. ಕೊಚ್ಚೆ ನೀರನ್ನ ನಾನು ಕುಡಿದಿದ್ದೇನೆ, ನಾನು ಸತ್ತಿದ್ದರೆ ಅದು ಕೊಚ್ಚೆ ನೀರು. ನಾವು ರೈತರು ನಮಗೆ ನೀರು ಮುಖ್ಯ ಯಾವ ನೀರು ಅನ್ನೋದಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ

    ಆಗಸ್ಟ್ 18 ರಂದು ಕೋಲಾರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ವೇಳೆ ಶಾಸಕ ರಮೇಶ್ ಕುಮಾರ್ ವಿರುದ್ಧ ಹೆಚ್‍ಡಿಕೆ ಹರಿಹಾಯ್ದಿದಿದ್ದರು. ಕೆ.ಸಿ.ವ್ಯಾಲಿ ಕೊಚ್ಚೆ ನೀರು ಕೊಟ್ಟು ಮಹಾನ್ ಕಾರ್ಯ ಎಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ರು. ಇದಕ್ಕೆ ಇಂದು ರಮೇಶ್ ಕುಮಾರ್ ಎದುರಿಗೆ ತಮ್ಮ ನಾಯಕನಿಗೆ ಟಾಂಗ್ ನೀಡಿದ ಕೋಲಾರ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಎಂದಿನಂತೆ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಕೊಂಡಾಡಿದ್ರು. ಇನ್ನೂ ಬಳಿಕ ಮಾತನಾಡಿದ ರಮೇಶ್ ಕುಮಾರ್ ಗಾಳಿಯಲ್ಲಿ ಬಂದು ಮಾತನಾಡಿ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರೆಲ್ಲಾ ಹಾಗೆ ಇರಲಿ ದೊಡ್ಡವರು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು.