Tag: K.S Muniyappa

  • ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    – ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್

    ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ.

    ಕಳೆದ ವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಒಕ್ಕೂಟದ ಮುಖಂಡರು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎಚ್ ಮುನಿಯಪ್ಪನ ವಿರುದ್ಧ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಕೊಡಗಿನಲ್ಲಿದ್ದ ಸುಮಾರು 204.42 ಎಕ್ರೆ ಏಲಕ್ಕಿ ತೋಟವನ್ನು ತನ್ನ ಸೊಸೆ ಎಸ್.ಎಲ್ ಶ್ರುತಿಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಮಡಿಕೇರಿಯ ಅಕ್ರಮ ಆಸ್ತಿ ಸಂಪಾದನೆ ಕುರಿತು ಮಾ.19 ರಂದು ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಅಂದು ಮಧ್ಯಾಹ್ನವೇ ಬಿಡುಗಡೆ ಮಾಡಿದ ದಾಖಲೆಗಳ ಆಸ್ತಿಯನ್ನು ಸೊಸೆ ಎಸ್.ಎಲ್ ಶ್ರುತಿಶ್ರೀ ಹೆಸರಿಗೆ ಮಡಿಕೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಡಂಬಡಿಕೆ ನೋಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತನ್ನ ಆಸ್ತಿ ಘೋಷಣೆ ಮಾಡಬೇಕಾಗಿದ್ದ ಮುನಿಯಪ್ಪ ಅವರು ತಮ್ಮ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ ಮಡಿಕೇರಿಯ ಕುಂದಚೇರಿ ಗ್ರಾಮದ ಸರ್ವೇ ನಂ.1/10 ಸುಮಾರು 300 ಕೋಟಿ ಬೆಲೆಬಾಳುವ 204.42 ಎಕರೆ ಆಸ್ತಿ ಬಗ್ಗೆ ಮಾಹಿತಿ ತಿಳಿಸಿರಲಿಲ್ಲ ಎಂದು ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರು ಆರೋಪಿಸಿದ್ದರು.

  • ಯಾವುದೇ ಕಾರಣಕ್ಕೂ ಮುನಿಯಪ್ಪಗೆ ಬೆಂಬಲ ನೀಡಲ್ಲ: ಕೈ ಶಾಸಕ ನಾರಾಯಣಸ್ವಾಮಿ

    ಯಾವುದೇ ಕಾರಣಕ್ಕೂ ಮುನಿಯಪ್ಪಗೆ ಬೆಂಬಲ ನೀಡಲ್ಲ: ಕೈ ಶಾಸಕ ನಾರಾಯಣಸ್ವಾಮಿ

    ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದು, ಕೈ ನಾಯಕ ಕೆ.ಎಚ್.ಮುನಿಯಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ವಿ.ಮುನಿಯಪ್ಪ, ಸುಧಾಕರ್ ರೆಡ್ಡಿ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್, ವೆಂಕಟಶಿವಾರೆಡ್ಡಿ, ಚೌಡರೆಡ್ಡಿ, ಎಂ.ನಾರಾಯಣಸ್ವಾಮಿ ಅವರನ್ನ ಮೂಲೆಗುಂಪು ಮಾಡಿದ್ದಷ್ಟೆ ಮುನಿಯಪ್ಪನವರ ಸಾಧನೆ. ಕೋಲಾರ ಜಿಲ್ಲೆಗೆ ಮುನಿಯಪ್ಪ ಕೊಡುಗೆ ಶೂನ್ಯ. ಹೀಗಾಗಿ ಬದಲಾವಣೆ ಬೇಕು ಎಂದು ಲೋಕಸಭೆ ಚುನಾವಣೆಗೆ ಹೆಚ್.ಸಿ ಮಹದೇವಪ್ಪರನ್ನು ಕಣಕ್ಕಿಳಿಸುವಂತೆ ಹೈಕಮಾಂಡ್‍ನಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಒಂದು ವೇಳೆ ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದ್ದಲ್ಲಿ, ನಾವೆಲ್ಲ ಕೂತು ಚರ್ಚಿಸಿ ಮುಂದೇನು ಮಾಡಬೇಕು ಅಂತ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾಳೆ ಎಲ್ಲವೂ ತಿಳಿಯುತ್ತದೆ. ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ, ಯಾವುದೇ ಕಾರಣಕ್ಕೂ ಮುನಿಯಪ್ಪ ಅವರಿಗೆ ಬೆಂಬಲ ನೀಡಲ್ಲ ಎಂದು ಪರೋಕ್ಷವಾಗಿ ನಾರಾಯಣಸ್ವಾಮಿ ಹೇಳಿದ್ದಾರೆ.