Tag: K.R.Pete

  • ಪ್ರೀತಿಸಿದ ಹುಡುಗಿ ಜೊತೆ ವಿವಾಹ – ಮದುವೆಯಾದ 3 ದಿನಕ್ಕೆ ಹೃದಯಾಘಾತದಿಂದ ನವವಿವಾಹಿತ ಸಾವು

    ಪ್ರೀತಿಸಿದ ಹುಡುಗಿ ಜೊತೆ ವಿವಾಹ – ಮದುವೆಯಾದ 3 ದಿನಕ್ಕೆ ಹೃದಯಾಘಾತದಿಂದ ನವವಿವಾಹಿತ ಸಾವು

    -ಜಾರ್ಖಂಡ್ ಮೂಲದ ಯುವತಿಯನ್ನು ವಿವಾಹವಾಗಿದ್ದ ಯುವಕ

    ಮಂಡ್ಯ: 3 ದಿನಗಳ ಹಿಂದೆ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (K R Pete) ಪಟ್ಟಣದಲ್ಲಿ ನಡೆದಿದೆ.

    ಕೆ.ಆರ್.ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್(28) ಮೃತ ದುರ್ದೈವಿ.

    ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿ ಆಗಿದ್ದ ಶಶಾಂಕ್. ಜಾರ್ಖಂಡ್ (Jharkhand) ಮೂಲದ ಅಷ್ಣಾರ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದರು. ಈ ವಿಚಾರವನ್ನು ಮನೆಯವರಿಗೆಲ್ಲಾ ತಿಳಿಸಿ, ಒಪ್ಪಿಗೆ ಪಡೆದು ಮಾ.2ರಂದು ಮೈಸೂರಿನ ರೆಸಾರ್ಟ್ವೊಂದರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಕುಡಿಯುವ ನೀರು ಅನ್ಯ ಕೆಲಸಗಳಿಗೆ ಬಳಕೆ; 417 ಜನರಿಗೆ 20.85 ಲಕ್ಷ ರೂ. ದಂಡ

    ಮದುವೆ ದಿನವೂ ಶಶಾಂಕ್ ಸ್ವಲ್ಪ ಜ್ವರ ಇದೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು. ಮಂಗಳವಾರ ಶಶಾಂಕ್‌ಗೆ ಬೆಂಗಳೂರಿನ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶಶಾಂಕ್ ಪತ್ನಿ, ತಂದೆ-ತಾಯಿ, ಸ್ನೇಹಿತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ‘ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್‌ ಮೇಲೆ ದಾಳಿ – ಕೋಟಿ ಕೋಟಿ ಮೌಲ್ಯದ ಚಿನ್ನ ವಶ

  • ಮಂಡ್ಯದಲ್ಲಿ ಈ ಬಾರಿಯೂ ಜೆಡಿಎಸ್ ವಿರುದ್ಧ ಕುತಂತ್ರದ ರಾಜಕೀಯ ನಡೆಯುತ್ತಿದೆ: ಹೆಚ್‍ಡಿಕೆ

    ಮಂಡ್ಯದಲ್ಲಿ ಈ ಬಾರಿಯೂ ಜೆಡಿಎಸ್ ವಿರುದ್ಧ ಕುತಂತ್ರದ ರಾಜಕೀಯ ನಡೆಯುತ್ತಿದೆ: ಹೆಚ್‍ಡಿಕೆ

    ಮಂಡ್ಯ: ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯ ರೀತಿ ಈ ಬಾರಿಯೂ ಜೆಡಿಎಸ್ (JDS) ವಿರುದ್ಧ ಕುತಂತ್ರದ ರಾಜಕೀಯಕ್ಕೆ ಕಾಂಗ್ರೆಸ್ (Congress), ಬಿಜೆಪಿ (BJP) ಹಾಗೂ ರೈತ ಸಂಘ ಒಟ್ಟಾಗಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಆರೋಪಿಸಿದ್ದಾರೆ.

    ಕೆ.ಆರ್.ಪೇಟೆಯಲ್ಲಿ (K.R.Pete) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮಣಿಸಲು ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕುತಂತ್ರದ ರಾಜಕೀಯ ಶುರುವಾಗಿದೆ. ಜಿಲ್ಲೆಯ ಜನರಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ರೈತ ಸಂಘ ಮೋಸ ಮಾಡಲು ಮುಂದಾಗಿವೆ. ಇಂತಹ ಕುತಂತ್ರಗಳ ವಿರುದ್ಧ ಮತದಾರರೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಗುಡ್ ಬೈ ರಾಜಕೀಯಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ

    ಕುತಂತ್ರದ ರಾಜಕೀಯಕ್ಕೆ ಮೇಲುಕೋಟೆ (Melukote) ಕ್ಷೇತ್ರ ಹೆಸರಿಗೆ ಅಷ್ಟೇ ಒಂದು ಉದಾಹರಣೆ. ಜೆಡಿಎಸ್ ಬಗ್ಗೆ ಎಲ್ಲಾ ಕಡೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಆಂತರಿಕ ಒಳ ಒಪ್ಪಂದಗಳು ಬಹಳ ವರ್ಷದಿಂದ ಇದೆ. ಆಪರೇಶನ್ ಕಮಲದಿಂದಲೂ ಇದು ನಡೆಯುತ್ತಿದೆ. ಈ ಸೇಡನ್ನೂ ಜೆಡಿಎಸ್ ಹಾಗೂ ಮತದಾರರು ತೀರಿಸಿಕೊಳ್ಳುತ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕುತಂತ್ರದ ಫಲಿತಾಂಶ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ಆ ಸೇಡನ್ನು ತೀರಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಿ ನಿಮ್ಮ ಪ್ರಾಣ ಹೋಗಬಾರದು: ಎಚ್‌ಡಿಡಿ ಬಗ್ಗೆ ಎಚ್‌ಡಿಕೆ ಭಾವುಕ

  • ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಟವಲ್‍ನಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ಕಾಂಗ್ರೆಸ್ ಮಾಜಿ ಶಾಸಕನ ಸಹೋದರ

    ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್!

    ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ (Dowry) ಕಿರುಕುಳದ ದೂರನ್ನು ಸಹ ನೀಡಿದ್ದಳು. ಅಲ್ಲದೇ ನನಗೆ ವಿಚ್ಛೇದನ (Divorce) ಬೇಕು ಎಂದು ಕಳೆದ ತಿಂಗಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದ್ದಳು.

    ಒಂದು ಕಡೆ ಕೆ.ಬಿ.ಚಂದ್ರಶೇಖರ್ ರಾಜಕೀಯದಲ್ಲಿ ಬೆಳವಣಿಗೆ ಪಡೆಯಬೇಕೆಂದು ಸರ್ಕಸ್ ಮಾಡ್ತಾ ಇದ್ದಾರೆ. ಇತ್ತ ಸಹೋದರ ಮಹಿಳೆಯ ಜೊತೆ ಸಿಕ್ಕಿ ಬಿದ್ದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ಈ ಪ್ರಕರಣ ಯಾವ ಆಯಾಮ ಪಡೆದುಕೊಳ್ಳುತ್ತದೆ ಎಂದು ಜನ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡುವ ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ

  • ಪವರ್ ಇದ್ದಾಗಲೇ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ನಾರಾಯಣಗೌಡ

    ಪವರ್ ಇದ್ದಾಗಲೇ ನಮ್ಮ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ನಾರಾಯಣಗೌಡ

    ಮಂಡ್ಯ: ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಬೇಕು ಇಲ್ಲ ಎಂದರೆ ಕಷ್ಟ ಆಗುತ್ತದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದ ಮೇಲುಕೋಟೆ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಟ್ಟರಾಜು ಅವರು ಮಂತ್ರಿಯಾಗಿದ್ದಾಗ ಅವರ ಕ್ಷೇತ್ರಕ್ಕೆ 1,600 ಕೋಟಿ ಅಭಿವೃದ್ಧಿ ಕೆಲಸವನ್ನು ತೆಗೆದುಕೊಂಡರು. ಆಗ ನಾನು ಕೇಳಿಕೊಂಡೆ ನಮಗೂ ಸ್ವಲ್ಪ ಕೊಡಿ ಎಂದು. ಆಗ ಅವರು ನಮ್ಮನ್ನು ಕೈ ಬಿಟ್ಟು ಬಿಟ್ಟರು. ಅವರು ಏಕೆ ಮಾಡಿದರು ಅಂತಾ ನನಗೆ ಈಗ ಗೊತ್ತಾಗುತ್ತಿದೆ ಎಂದರು.

    ನಮ್ಮ ಪವರ್ ಇದ್ದಾಗಲೇ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಗೊತ್ತಾಗಿದೆ. ನಮಗೆ ಈಗ ಪವರ್ ಇರುವ ಕಾರಣ ಕೆ.ಆರ್.ಪೇಟೆ ಕ್ಷೇತ್ರಕ್ಕೆ 1,200 ಕೋಟಿ ಅಭಿವೃದ್ಧಿ ಕೆಲಸಗಳನ್ನು ತೆಗೆದುಕೊಂಡಿದ್ದೇನೆ. ಹಾಗಂತಾ ನಾನು ಬೇರೆ ಕ್ಷೇತ್ರಗಳಿಗೆ ಮೋಸ ಮಾಡಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿ ಕೆಲಸಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.

    ರಾಜಕೀಯ ಎಂಬುದು ನೀರಿನ ಮೇಲೆ ಇರುವ ಗುಳ್ಳೆ ಇದ್ದ ಹಾಗೆ, ಯಾವಾಗಲೂ ನಾವು ಪವರ್ ನಲ್ಲಿ ಇರುತ್ತೇವೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಪವರ್‍ನಲ್ಲಿ ಇರುವ ತನಕ ಕ್ಷೇತ್ರ ಹಾಗೂ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಬೇಕು. ನಮ್ಮ ಮುಖ್ಯಮಂತ್ರಿಯಾಗಿ ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಇರುತ್ತಾರೆ. ಹೀಗಾಗಿ ಮಂಡ್ಯ ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬಹುದು.

    ಮುಂದುವರೆದು ಮಾತನಾಡಿದ ನಾರಾಯಣಗೌಡರು, ನಾನು ಮಂಡ್ಯ ಜಿಲ್ಲೆಯಲ್ಲಿ ಕೊಡುವುದು ತೆಗೆದುಕೊಳ್ಳುವುದು ಮಾಡಿದ್ದೇನೆ. ಬೇರೆ ಯಾರ ಬಳಿಯೂ ನಾನು ಯಾವ ವ್ಯವಹಾರವನ್ನು ಮಾಡಿಲ್ಲ. ನಾನು ಯಾರ ಬಳಿಯೂ ಡೀಲ್ ಮಾಡಿಲ್ಲ. ನಾನು ಸ್ವಚ್ಛವಾಗಿ ಇದ್ದೀನಿ. ಪುಟ್ಟರಾಜು ಅವರ ಬಳಿ ಆತ್ಮೀಯನಾಗಿ ಇದ್ದೀನಿ ಎಂದರು.

  • ಪೊಲೀಸರಿಗೆ ಕಗ್ಗಂಟಾದ ಯುವತಿ ಅಂಗಾಂಗ ಕತ್ತರಿಸಿ ನದಿಗೆಸೆದಿದ್ದ ಪ್ರಕರಣ

    ಪೊಲೀಸರಿಗೆ ಕಗ್ಗಂಟಾದ ಯುವತಿ ಅಂಗಾಂಗ ಕತ್ತರಿಸಿ ನದಿಗೆಸೆದಿದ್ದ ಪ್ರಕರಣ

    – 15 ದಿನವಾದ್ರೂ ಪತ್ತೆಯಾಗದ ಮೃತ ಯುವತಿ ಗುರುತು
    – ಉಸಿರುಗಟ್ಟಿಸಿ ಕೊಂದು, ಅಂಗಾಂಗ ಕತ್ತರಿಸಿದ್ದ ಸೈಕೋ ಕಿಲ್ಲರ್

    ಮಂಡ್ಯ: ಸಕ್ಕರೆ ನಾಡು ಮಂಡ್ಯ ಜನರನ್ನ ಬೆಚ್ಚಿ ಬೀಳಿಸಿದ್ದ ಅಪರಿಚಿತ ಯುವತಿಯ ಅಂಗಾಂಗ ಕತ್ತರಿಸಿ ನದಿಗೆಸೆದಿದ್ದ ಪ್ರಕರಣ ಪೊಲೀಸ್ ಇಲಾಖೆಗೆ ಕಗ್ಗಂಟಾಗಿದೆ. ಶವ ಪತ್ತೆಯಾಗಿ 15 ದಿನವಾದ್ರೂ ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಇದರಿಂದ ಕೊಲೆ ಪ್ರಕರಣ ಬೇಧಿಸಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಶೀಘ್ರ ಹಂತಕರನ್ನು ಪತ್ತೆ ಹಚ್ಚುವಂತೆ ಜನರ ಒತ್ತಾಯಿಸ್ತಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ನದಿಯಲ್ಲಿ ಅಪರಿಚಿತ ಯುವತಿಯ ಅಂಗಾಂಗ ಬೇರ್ಪಡಿಸಿದ್ದ ಮೃತ ದೇಹ ಪತ್ತೆಯಾಗಿ 15 ದಿನ ಕಳೆದಿದೆ. ಹಂತಕರ ಹೆಡೆಮುರಿ ಕಟ್ಟಲು ತನಿಖೆ ತೀವ್ರಗೊಳಿಸಿರುವ ಪೊಲೀಸರಿಗೆ ಯುವತಿಯ ಗುರುತು ಪತ್ತೆಯಾಗದಿರುವುದೇ ಕಗ್ಗಂಟಾಗಿ ಪರಿವರ್ತನೆಯಾಗಿದೆ.

    ಏನಿದು ಪ್ರಕರಣ?:
    ನವೆಂಬರ್ 17ರಂದು ಬಂಡಿಹೊಳೆ ಬಳಿಯ ತ್ರಿಶೂಲ್ ವಿದ್ಯುತ್ ಸ್ಥಾವರದ ಕಾಲುವೆಯಲ್ಲಿ ಕೈ-ಕಾಲು, ತಲೆ ಇಲ್ಲದ ಯುವತಿಯ ದೇಹ ಪತ್ತೆಯಾಗಿತ್ತು. ಕಾಲುವೆ ಗೇಟ್ ನಲ್ಲಿ ಸಿಕ್ಕ ಕಸ ತೆಗೆಯುವಾಗ ರುಂಡ ನೋಡಿದ ಸಿಬ್ಬಂದಿ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದಾಗ ದೇಹ ಸಿಕ್ಕಿದ್ದ ಗೇಟ್ ಬಳಿಯೇ ತೊಡೆ ಭಾಗ ಸಿಕ್ಕಿದ್ರೆ, ಕಾಲುವೆಯ ಸ್ವಲ್ಪ ದೂರದಲ್ಲಿ ಕೈಕಾಲುಗಳು ಹಾಗೂ ಹೇಮಾವತಿ ನದಿಯಲ್ಲಿ ತಲೆಬುರುಡೆ ಪತ್ತೆಯಾಗಿತ್ತು.

    ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಪಂಚನಾಮೆಗಾಗಿ ಆಸ್ಪತ್ರೆಗೆ ರವಾನಿಸಿ, ಇನ್ನೊಂದೆಡೆ ಯುವತಿಯ ಗುರುತು ಪತ್ತೆಗೆ ಮುಂದಾಗಿದ್ದರು. ಪೊಲೀಸರು ಎಷ್ಟೇ ಹುಡುಕಿದ್ರೂ ಮೃತ ಯುವತಿ ಯಾರೆಂದು ಪತ್ತೆಯಾಗಿಲ್ಲ. ಇನ್ನು ಮೃತದೇಹದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ದುಷ್ಕರ್ಮಿಗಳು ಮೊದಲು ಯುವತಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಅಂಗಾಂಗ ಕತ್ತರಿಸಿದ್ದಾರೆ ಎಂಬುದು ರಿಪೋರ್ಟ್ ನಲ್ಲಿ ಬಯಲಾಗಿದೆ.

    ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿರೊ ಪೊಲೀಸರು, ಎಲ್ಲಾ ಠಾಣೆಗಳಿಗೂ 25-30 ವರ್ಷದ ಯುವತಿ ನಾಪತ್ತೆ ಪ್ರಕರಣ ವರದಿಯಾಗಿದ್ರೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇನ್ನೊಂದೆಡೆ ಯುವತಿಯ ಕೈ ಮೇಲಿದ್ದ ಮೀನಿನ ಅಚ್ಚೆ ಗುರುತು ಆಧರಿಸಿ ಮೀನುಗಾರಿಕೆ ಕುಟುಂಬಗಳು ವಾಸಿಸುವ ಸ್ಥಳಗಳಿಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಯುವತಿಯ ಗುರುತು ಪತ್ತೆಯಾಗದಿರೋದ್ರಿಂದ ಪ್ರಕರಣ ಭೇದಿಸಲು ಸಾಧ್ಯವಾಗುತ್ತಿಲ್ಲ.

    ಇನ್ನೊಂದೆಡೆ ಪ್ರಕರಣದಿಂದ ಭೀತಿಗೊಂಡಿದ್ದ ಕೆ.ಆರ್.ಪೇಟೆ ತಾಲೂಕಿನ ಜನರಲ್ಲಿ ಇನ್ನೂ ಭಯ ಕಡಿಮೆಯಾಗಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿ ಪ್ರಕರಣ ಬೇಧಿಸಬೇಕು. ಆ ಮೂಲಕ ಜನರಲ್ಲಿ ಆವರಿಸಿರುವ ಭಯ ದೂರ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

    ವಿಕೃತ ಮನಸ್ಸಿನ ಹಂತಕರ ಕೃತ್ಯ ಪೊಲೀಸರಿಗೆ ತಲೆನೋವು ತರಿಸಿದೆ. ಯುವತಿಯ ಗುರುತು ಪತ್ತೆಯಾಗದಿರುವುದು ತನಿಖೆಗೆ ಹಿನ್ನಡೆಯಾಗಿದೆ.

  • ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆ

    ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆ

    ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಬಳಿಯ ಹೇಮಾವತಿ ನದಿಯಲ್ಲಿ ಯುವತಿಯ ಅಂಗಾಂಗಗಳು ಪತ್ತೆಯಾಗಿವೆ.

    ಯುವತಿಯನ್ನು ವಿಕೃತವಾಗಿ ಕೊಲೆಗೈದಿರುವ ದುಷ್ಕರ್ಮಿಗಳು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿದ್ದಾರೆ. ಬಂಡಿಹೊಳೆ ಗ್ರಾಮದ ಹೇಮಾವತಿ ದಡದಲ್ಲಿರುವ ವಿದ್ಯುತ್ ಸ್ಥಾವರ ಘಟಕದ ಸಮೀಪ ಯುವತಿ ರುಂಡ ಮತ್ತು ದೇಹದ ಅಂಗಾಂಗಗಳು ಪತ್ತೆಯಾಗಿವೆ. ಎರಡು ದಿನಗಳ ಹಿಂದೆ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: 18 ವರ್ಷದ ಯುವತಿಯ ಕತ್ತು ಕೊಯ್ದು ಕೊಲೆ- ಅತ್ಯಾಚಾರದ ಶಂಕೆ

    ಸ್ಥಳೀಯರಿಗೆ ಮೃತದೇಹ ಒಂದು ಭಾಗ ಮಾತ್ರ ಕಾಣಿಸಿತ್ತು. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧಿಸಿದಾಗ ಉಳಿದ ಅಂಗಾಂಗಗಳು ಸಿಕ್ಕಿವೆ. ಘಟನೆಯಿಂದಾಗಿ ಬಂಡಿಹೊಳೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಮಾಡಿ, ನಾಲಿಗೆ ಕತ್ತರಿಸಿ ಚಿತ್ರಹಿಂಸೆ – ಚಿಕಿತ್ಸೆ ಫಲಿಸದೆ 20ರ ಯುವತಿ ಸಾವು

  • ಕೆ.ಆರ್ ಪೇಟೆ ಗೆಲುವಿನ ಹಿಂದೆ ಸೀಕ್ರೆಟ್ – ಅದೃಷ್ಟ ತಂದು ಕೊಟ್ಟ ತೋಟದ ಮನೆ

    ಕೆ.ಆರ್ ಪೇಟೆ ಗೆಲುವಿನ ಹಿಂದೆ ಸೀಕ್ರೆಟ್ – ಅದೃಷ್ಟ ತಂದು ಕೊಟ್ಟ ತೋಟದ ಮನೆ

    ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯ ಫಲಿತಾಂಶ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಉಲ್ಟಾ ಮಾಡುವುದರ ಜೊತೆಗೆ ಜೆಡಿಎಸ್ ಭದ್ರಕೋಟೆಯನ್ನು ಒಡೆದು ಬಿಜೆಪಿ ತನ್ನ ಅಸ್ತಿತ್ವಕ್ಕೆ ಇದೀಗ ಭದ್ರ ಬುನಾದಿ ಹಾಕಿಕೊಂಡಿದೆ.

    ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು, ವಿಜಯೇಂದ್ರ ಎಂಬ ಮಾಸ್ಟರ್ ಮೈಂಡ್. ಸಿಎಂ ಬಿಎಸ್‍ವೈ ಪುತ್ರ ವಿಜಯೇಂದ್ರ 15 ದಿನ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಪಟ್ಟನ್ನು ಹಾಕಿದ್ದೇ ನಾರಾಯಣಗೌಡ ಅವರ ಗೆಲುವಿಗೆ ಪ್ರಮುಖ ಕಾರಣ. ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿ – ಹುಟ್ಟೂರಿನಲ್ಲಿ ಪಕ್ಷ ಗೆಲ್ಲಿಸಿ ಜೆಡಿಎಸ್ ಕೋಟೆ ಛಿದ್ರಗೊಳಿಸಿದ ಸಿಎಂ

    ತೋಟದ ಮನೆಯ ಗೆಲುವಿನ ರಹಸ್ಯ:
    ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡರೂ ಪ್ರತಿದಿನ ಬೆಂಗಳೂರಿನಿಂದ ಬರುವುದು ಕಷ್ಟ. ಮೈಸೂರಿನ ಯಾವುದೋ ಹೋಟೆಲ್‍ನಲ್ಲಿ ಉಳಿದುಕೊಂಡು ಬರಬಹುದು ಎಂದು ಬಿಜೆಪಿ ಕಾರ್ಯಕರ್ತರು ಊಹಿಸಿದ್ದರು. ಆದರೆ ವಿಜಯೇಂದ್ರ ಉಪಚುನಾವಣೆ ಘೋಷಣೆ ಆದಾಗಿನಿಂದಲೂ ಕೆಆರ್‍ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ್ದರು.

    ತನ್ನ ಮೇಲೆ ಹೊರಿಸಿದ್ದ ಉಸ್ತುವಾರಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕೆ.ಆರ್ ಪೇಟೆ ಕ್ಷೇತ್ರದಲ್ಲೇ 15 ದಿನಗಳ ಕಾಲ ವಾಸ್ತವ್ಯ ಹೂಡಿದ್ದರು. ಅದು ಕೂಡ ಒಂದು ತೋಟದ ಮನೆಯಲ್ಲಿ. ಕೆ.ಆರ್ ಪೇಟೆಯಿಂದ 4 ಕಿ.ಮೀ ದೂರವಿರುವ ಪುರ ಗ್ರಾಮದ ಹೊರಭಾಗದ ಒಂದು ತೋಟದ ಮನೆಯಲ್ಲಿ ವಿಜಯೇಂದ್ರ ನೆಲೆಸಿದ್ದರು. ಇದನ್ನು ಓದಿ: ಅಭಿವೃದ್ಧಿಯೇ ನನ್ನ ಗುರಿ, ತಾಲೂಕಿನ ಕನಸನ್ನು ನನಸು ಮಾಡ್ತೀನಿ: ನಾರಾಯಣ ಗೌಡ

    ವಿಜಯೇಂದ್ರ ಈ ತೋಟದ ಮನೆಯಲ್ಲಿ ಸುಮ್ಮನೆ ಮಲಗಿಕೊಂಡು ಅಥವಾ ವಿಶ್ರಾಂತಿ ಪಡೆಯುತ್ತ ಕಾಲ ಕಳೆಯುತ್ತಿರಲಿಲ್ಲ. ಈ ತೋಟದ ಮನೆಯಲ್ಲಿ ಜೆಡಿಎಸ್ ಭದ್ರ ಕೋಟೆಯನ್ನು ಭೇದಿಸುವುದು ಹೇಗೆ ಎಂದು ರಣತಂತ್ರವನ್ನು ಹೆಣೆಯುತ್ತಿದ್ದರು. ಪ್ರತಿನಿತ್ಯ ಈ ತೋಟದ ಮನೆಯಲ್ಲಿ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಯಾವ ಊರುಗಳಲ್ಲಿ ಎಷ್ಟು ಮತಗಳಿವೆ ಎಷ್ಟು ಮತಗಳನ್ನು ಪಡೆಯಬೇಕು ಎಂಬ ಸ್ಟಾಟರ್ಜಿ ಮಾಡುತ್ತಿದ್ದರು. ಇದನ್ನೂ ಓದಿ: 43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?

    ಪ್ರಶಾಂತ ವಾತಾವರಣ:
    ಕೆ.ಆರ್ ಪೇಟೆಯ ಹೊರವಲಯದ ತೋಟದ ಮನೆಯಲ್ಲಿ ಉಳಿದುಕೊಂಡಿದ್ದ ವಿಜಯೇಂದ್ರ ಅಲ್ಲಿನ ಪ್ರಶಾಂತ ವಾತಾವರಣವನ್ನು ಸವಿಯುತ್ತಿದ್ದರು. ಪ್ರತಿದಿನ ವಿಜಯೇಂದ್ರ ತೋಟದಲ್ಲಿ ಇದ್ದ ಕೆರೆಯ ಏರಿ ಮೇಲೆ ವಾಕ್ ಮಾಡುತ್ತಿದ್ದರು. ಇದಲ್ಲದೇ ಇಡೀ ತೋಟವನ್ನು ಒಂದು ಸುತ್ತು ಹಾಕುತ್ತಿದ್ದರು. ವಿಜಯೇಂದ್ರ ರಣತಂತ್ರ ಹೆಣೆಯಲು ಈ ಪ್ರಶಾಂತವಾದ ವಾತಾವರಣ ತುಂಬಾ ಅನುಕೂಲವಾಗಿದೆ ಎಂದು ಅವರ ಆಪ್ತರು ಸಹ ಹೇಳಿದ್ದಾರೆ. ಇದಲ್ಲದೇ ಈ ತೋಟದ ಮನೆ ವಿಜಯೇಂದ್ರ ಅವರಿಗೆ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಅದೃಷ್ಟವನ್ನು ತಂದುಕೊಟ್ಟಿದೆ ಎಂದು ಸಹ ವಿಜಯೇಂದ್ರ ಆಪ್ತರು ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ.

  • ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ಮಂಡ್ಯ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಕೆ.ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರು ವಾಸ್ತುಪ್ರಕಾರ ಮತಯಂತ್ರ ತಿರುಗಿಸಿಟ್ಟು ವೋಟ್ ಮಾಡಿದ್ದಾರೆ.

    ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಮತದಾನ ಮಾಡಿದ ದೇವರಾಜು, ಚುನಾವಣಾ ಸಿಬ್ಬಂದಿ ಮತಯಂತ್ರವಿಟ್ಟಿದ್ದ ವಾಸ್ತು ಸರಿಯಿಲ್ಲವೆಂದು, ಸಿಬ್ಬಂದಿ ಕರೆದು ಇವಿಎಂ ತಿರುಗಿಸಿದ ನಂತರವೇ ವೋಟ್ ಮಾಡಿದರು. ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ವೋಟ್ ಹಾಕಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗಬೇಕೆಂದು ಮನವಿ ಮಾಡಿಕೊಂಡರು.

    ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಮತಯಂತ್ರದ ಬಳಿ ಚಪ್ಪಲಿ ಬಿಟ್ಟು ನಂತರ ಮತದಾನ ಮಾಡಿದರು. ಕೆ.ಆರ್ ಪೇಟೆ ಪಟ್ಟಣದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ನಾರಾಯಣಗೌಡರು ಕುಟುಂಬದ ಜೊತೆ ಬಂದು ಮತದಾನ ಮಾಡಿದರು.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಅನರ್ಹ ಶಾಸಕ ನಾರಾಯಣಗೌಡರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್ ಕಣದಲ್ಲಿದ್ದಾರೆ.

  • ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ- ಕೈ, ದಳಕ್ಕೆ ಬಿಜೆಪಿ ಟಕ್ಕರ್

    ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ- ಕೈ, ದಳಕ್ಕೆ ಬಿಜೆಪಿ ಟಕ್ಕರ್

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಈ ಎರಡು ಪಕ್ಷಗಳಿಗೆ ಬಿಜೆಪಿ ಸಾಕಷ್ಟು ಪೈಪೋಟಿ ನೀಡುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಕೆ.ಆರ್.ಪೇಟೆ ಉಪಚುನಾವಣೆ ಅಖಾಡ ರಂಗೇರಿದೆ. ಗೆಲುವಿಗಾಗಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದುವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ಇತ್ತು. 1994ರಲ್ಲಿ ಬಿಜೆಪಿ ಅಭ್ಯರ್ಥಿ ಕೆಂಗೇಗೌಡ ಮಾತ್ರ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಅದನ್ನು ಹೊರತು ಪಡಿಸಿದರೆ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಸದ್ದೇ ಮಾಡಿರಲಿಲ್ಲ. ಆದರೆ ಈ ಬಾರಿ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಟಕ್ಕರ್ ನೀಡಲು ಸಜ್ಜಾಗಿದೆ.

    ಸಿಎಂ ಯಡಿಯೂರಪ್ಪ ಅವರ ಹುಟ್ಟುರೂ ಕ್ಷೇತ್ರವಾದ ಕೆ.ಆರ್ ಪೇಟೆಯಲ್ಲಿ ಕಮಲವನ್ನು ಅರಳಿಸಲು ಚತುರೋಪಾಯಗಳನ್ನೇ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಸಿಎಂ ಪುತ್ರ ವಿಜಯೇಂದ್ರ ಕೆ.ಆರ್ ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದಲ್ಲದೆ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯ ಇರುವುದರಿಂದ ಬಿಜೆಪಿಯ ಒಕ್ಕಲಿಗ ಮುಖಂಡರನ್ನೇ ಹಾಕಿಕೊಂಡು ಪ್ರಚಾರ ನಡೆಸುತ್ತಿದೆ.

    ಕೆ.ಆರ್ ಪೇಟೆ ಇತಿಹಾಸದಲ್ಲಿ ನಡೆದ ಚುನಾವಣೆಗಳಲ್ಲಿ ಅಬ್ಬರ ಮಾಡದ ಬಿಜೆಪಿ, ಇದೀಗ ಉಪ ಕದನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರು ಪಕ್ಷದ ಅಭ್ಯರ್ಥಿಗಳ ಪೈಕಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನ ಕಾದುನೋಡಬೇಕಿದೆ.

  • ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಬಿಎಸ್‍ವೈ ಫೋಟೋವಿರುವ ಫ್ಲೆಕ್ಸ್‌ನಲ್ಲಿ ಜೆಡಿಎಸ್‍ನ ಅನರ್ಹ ಶಾಸಕ

    ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್‍ನ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ. ಯಾಕಂದರೆ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌ಗಳಲ್ಲಿ ನಾರಾಯಣಗೌಡರ ಫೋಟೋ ರಾರಾಜಿಸುತ್ತಿದೆ.

    ಒಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಗ ನಿಖಿಲ್ ಅವರನ್ನು ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ಎಚ್‍ಡಿಕೆಗೆ ಟಕ್ಕರ್ ಕೊಡಲು ಕೆ.ಆರ್.ಪೇಟೆ ಬಿಜೆಪಿ ಘಟಕ ಮುಂದಾಗಿದ್ದು, ಬಸವಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಭಕೋರಿ ಅಳವಡಿಸಿರುವ ಫ್ಲೆಕ್ಸ್‌ಗಳಲ್ಲಿ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋವನ್ನು ಹಾಕಲಾಗಿದೆ. ಆ ಫ್ಲೆಕ್ಸ್‌ಗಳು ಕೆ.ಆರ್.ಪೇಟೆ ಪಟ್ಟಣದಾದ್ಯಂತ ರಾರಾಜಿಸುತ್ತಿವೆ.

    ಇಂದು ಸಂಜೆ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರ ಸಭೆ ನಡೆಸಿ ಉಪಚುನಾವಣೆ ಸಿದ್ಧತೆಗೆ ಕರೆ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಜೊತೆ ನಾರಾಯಣಗೌಡರ ಫೋಟೋಗಳಿರುವ ಫ್ಲೆಕ್ಸ್ ಅಳವಡಿಸಿ ಟಾಂಗ್ ಕೊಡಲು ಬಿಜೆಪಿ ಘಟಕ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಸದ್ಯಕ್ಕೆ ನಾರಾಯಣಗೌಡ ಶಾಸಕ ಸ್ಥಾನದ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದಿದ್ದರೂ ಶಾಸಕರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಎಂದೇ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗಿದೆ. ಈ ಮೂಲಕ ಅನರ್ಹತೆ ಪ್ರಕರಣ ಇತ್ಯರ್ಥದ ಬಳಿಕ ನಾರಾಯಣಗೌಡ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.