Tag: K.J.Yesudas

  • 81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    ಉಡುಪಿ: ಗಾನ ಗಂಧರ್ವ, ಪದ್ಮಭೂಷಣ ಡಾ.ಜೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಿಕೊಂಡರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಹೋಮದಲ್ಲಿ ಸಂಗೀತ ಮಾಂತ್ರಿಕ ಭಾಗಿಯಾದರು.

    ಜೇಸುದಾಸ್ ಉಡುಪಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರು, ಮೊದಲು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದರು. ನಂತರ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ನೆರವೇರಿಸಿದರು.

    ಜೇಸುದಾಸ್ ಕೊಲ್ಲೂರಿನಲ್ಲಿ ಕಳೆದ 30 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮಗೆ ಮಕ್ಕಳಾಗದ ಸಂಕಟವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹೇಳಿಕೊಂಡಿದ್ದರು. ನಂತರ ಜೇಸುದಾಸ್ ಅವರಿಗೆ ಮಕ್ಕಳಾದವು. ಹೀಗಾಗಿ ಅವರು ಪ್ರತಿ ವರ್ಷ ಕೊಲ್ಲೂರಿಗೆ ಬಂದು ದೇವರ ಸೇವೆಯೊಂದಿಗೆ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಸಂಗೀತ ಮಾಂತ್ರಿಕ ಬರುವ ಹಿನ್ನೆಲೆಯಲ್ಲಿ ಭಕ್ತರ, ಸಂಗೀತ ಪ್ರೇಮಿಗಳ ಸಂಖ್ಯೆಯೂ ಕೊಲ್ಲೂರಿನಲ್ಲಿ ಜಾಸ್ತಿಯಾಗಿತ್ತು.

    ದೇವಸ್ಥಾನದ ಪ್ರಾಂಗಣ ಸಂಗೀತ ರಸಿಕರಿಂದ ತುಂಬಿಕೊಂಡಿತ್ತು. ಪ್ರತಿ ವರ್ಷ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಅಭಿಮಾನಿಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾರೆ. ದೇಶಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜೇಸುದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷ ಸಂಗೀತ ಸೇವೆ ಸಲ್ಲಿಸುತ್ತಿದ್ದ ಜೇಸುದಾಸ್ ಅವರು ಅನಾರೋಗ್ಯದ ಕಾರಣ ದೇವಿಯ ಸನ್ನಿಧಾನದಲ್ಲಿ ಹಾಡಲಿಲ್ಲ. ಎಂದಿನಂತೆ ದೇವಿಗೆ ಪ್ರಾರ್ಥನೆ ಮತ್ತು ಚಂಡಿಕಾಹೋಮ ಸಲ್ಲಿಸಿದರು.

    ಗೋವಿಂದ ಅಡಿಗ ಮತ್ತು ಜಯರಾಮ ಮಾತನಾಡಿ, ಜೇಸುದಾಸ್ ಮೂಕಾಂಬಿಕಾ ದೇವಿಯ ಪರಮ ಭಕ್ತ. ಎಷ್ಟೇ ಒತ್ತಡ ಇದ್ದರೂ ಅವರ ಹುಟ್ಟುಹಬ್ಬದ ದಿನ ಕೊಲ್ಲೂರಿಗೆ ಬಂದೇ ಬರುತ್ತಾರೆ. ಅವರ ಲವಲವಿಕೆ, ಈ ವಯಸ್ಸಿಗೂ ಅವರ ಸ್ವರ ಮಾಧುರ್ಯ ದೇವರ ಸಿದ್ಧಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

  • 79ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    79ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    ಉಡುಪಿ: ಗಾನ ಗಂಧರ್ವ ಜೇಸುದಾಸ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಬೆಳಗ್ಗೆ ಪತ್ನಿ ಪ್ರಭಾ ಜೇಸುದಾಸ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅವರು, ದೇವರ ದರ್ಶನ ಪಡೆದರು.

    ಪ್ರತಿ ವರ್ಷ ಕೊಲ್ಲೂರಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಬಂದಿರುವ ಜೇಸುದಾಸ್, ಸಂಕಲ್ಪದಂತೆ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದರು. ಅರ್ಚಕ ಗೋವಿಂದ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಸೇವೆ ನಡೆಸಿದರು.

    ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಭಕ್ತರು ಜೇಸುದಾಸ್ ಮೂಲಕ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿಕೊಂಡರು. ಭಕ್ತಿಯಲ್ಲಿ ಮಿಂದೆದ್ದ ಜೇಸುದಾಸ್ ಇದೇ ಸಂದರ್ಭ ಸ್ವರ್ಣಮುಖಿ ಸಭಾಭವನದಲ್ಲಿ ಭಕ್ತರ ಸಮ್ಮುಖದಲ್ಲಿ ಭಕ್ತಿಗೀತೆಯನ್ನು ಹಾಡಿದರು.

    ಸಾವಿರಾರು ಭಕ್ತರು ಜೇಸುದಾಸ್ ಗಾಯನದಿಂದ ಭಾವಪರವಶರಾದರು. ಜೇಸುದಾಸ್ ಹುಟ್ಟುಹಬ್ಬದ ನಿಮಿತ್ತ ಗಾಯಕ ಕಾಂಞಗಾಡ್ ರಾಮಚಂದ್ರನ್ ಆಯೋಜಿಸಿದ್ದ ಸಂಗೀತೋತ್ಸವಕ್ಕೆ ಸ್ವತಃ ಜೇಸುದಾಸ್ ಗಾಯನದ ಮೂಲಕ ಚಾಲನೆ ನೀಡಿದರು. ಧಾರ್ಮಿಕ ವಿಧಿ, ಹುಟ್ಟುಹಬ್ಬ ಪೂರೈಸಿ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿ ನಿರ್ಗಮಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv