Tag: K Chandrasekhar Rao

  • ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ರಾಮದಾಸ್ ಅಠವಳೆ

    ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಮೋದಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ರಾಮದಾಸ್ ಅಠವಳೆ

    ನವದೆಹಲಿ: ಶಿವಸೇನೆ, ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಮತ್ತು ಇತರ ಪಕ್ಷಗಳು ಸೇರಿ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದಿಂದ ಜನರು ಸಂತೋಷವಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚಿಸಿದರೂ ಯಾವುದೇ ಅಪಾಯವಿಲ್ಲ ಎಂದ ಅವರು, 2024ರ ರಾಷ್ಟ್ರೀಯ ಚುನಾವಣೆ ಮತ್ತು ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಿಆರ್‌ಎಸ್ ಮುಖ್ಯಸ್ಥರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಭಾನುವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು.

    ಶಿವಸೇನಾ ಸಂಸದ ಮತ್ತು ಪಕ್ಷದ ಮುಖ್ಯ ವಕ್ತಾರ ಸಂಜಯ್ ರಾವತ್ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದು, ನಂತರದ ದಿನದಲ್ಲಿ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರವನ್ನು ಹಂಚಿಕೊಂಡಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆಯನ್ನು ಭೇಟಿಯಾದ ತೆಲಂಗಾಣ CM ಕೆಸಿಆರ್

    ಬಿಜೆಪಿ ನೀತಿಗಳ ವಿರುದ್ಧ ಹೋರಾಟ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವ ರಾವ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಠಾಕ್ರೆ ಇತ್ತೀಚಿಗೆ ಘೋಷಿಸಿದ್ದರು. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಹಲವು ವಿಷಯಗಳಿಂದ ಬಿಜೆಪಿ ಮತ್ತು ಕೇಂದ್ರವನ್ನು ಟೀಕಿಸುತ್ತಾ ಬಂದಿರುವ ತೆಲಂಗಾಣ ಸಿಎಂ, ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಲು ಪ್ರಯತ್ನಗಳನ್ನು ನಡೆಸುತ್ತಿದ್ದು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸಹವರ್ತಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರು.

  • ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

    ದೇಶದ ಪ್ರಗತಿಗಾಗಿ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯಿರಿ: ಸಿಎಂ ಕೆಸಿಆರ್

    ಹೈದರಾಬಾದ್: ದೇಶದ ಪ್ರಗತಿಗಾಗಿ ಕೇಂದ್ರದಿಂದ ಆಡಳಿತರೂಢ ಬಿಜೆಪಿಯನ್ನು ಬಂಗಾಳಕೊಲ್ಲಿಗೆ ಎಸೆಯುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕತ್ವದಲ್ಲಿ ಬದಲಾವಣೆ ತರಲು ಅವಶ್ಯಕತೆಯಿದೆ. ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ವಿಫಲವಾಗಿದೆ. ವಾಸ್ತವವಾಗಿ ನಮಗೆ ಹೊಸ ಸಂವಿಧಾನದ ಅಗತ್ಯವಿದ್ದು, ಸಂವಿಧಾನವನ್ನು ಮರಳಿ ಬರೆಯಬೇಕಿದೆ ಎಂದು ಕಿಡಿಕಾರಿದರು.

    bjp - congress

    ಉತ್ತರಪ್ರದೇಶದದಲ್ಲಿ ಬಿಜೆಪಿ ಸೋತರೆ ಅವರ ವರ್ಚಸ್ಸು ಗಣನೀಯವಾಗಿ ಕಡಿಮೆಯಾಗಲಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಅವರಿಗೆ ದುರಹಂಕಾರ ಹೆಚ್ಚುತ್ತದೆ ಎಂದು ಟೀಕಿಸಿದರು.

    ನಾನು ರಾಷ್ಟ್ರಮಟ್ಟದಲ್ಲಿ ನಾಯಕತ್ವ ಬದಲಾವಣೆಗಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಆದರೆ ದೇಶದ ಯುವಜನತೆ ಎಚ್ಚೆತ್ತುಕೊಂಡು ಬದಲಾವಣೆ ತರಲು ಮನಸ್ಸು ಮಾಡಬೇಕಿದೆ ಎಂದರು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

    2019ರ ಲೋಕಸಭೆ ಚುನಾವಣೆಗೂ ಮುನ್ನ ಕೆಸಿಆರ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಪ್ರಯತ್ನಿಸಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

  • ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜನರು ಕೂಡ ಇದ್ದಾರೆ. ಹೀಗಾಗಿ ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುವ ಜನರಿಗೆ 1,000ರೂ. ದಂಡ ವಿಧಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಗುರುವಾರ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಚಂದ್ರಶೇಖರ್ ನಂತರ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಸ್ತುತ ಕೊರೊನಾ ಸೋಂಕಿನ ಬಗ್ಗೆ ಚರ್ಚೆ ನಡೆಸಿದರು.

    ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಆರೋಗ್ಯ ಸಿಬ್ಬಂದಿಗೂ ಲಸಿಕೆ ನೀಡಬೇಕು ಹಾಗೂ ಈ ಪ್ರಕ್ರಿಯೆ ಈ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

    ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಮಾಸ್ಕ್ ಧರಿಸದಿದ್ದರೆ, ಪ್ರತಿ ವ್ಯಕ್ತಿಗೆ 1000 ರೂ. ದಂಡ ವಿಧಿಸಬೇಕು ಹಾಗೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆಯ ಡಿಜಿಪಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ 45 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವಂತೆ ಆಗ್ರಹಿಸಿದರು.

  • ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    – ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ನಿರ್ಧಾರ

    ಹೈದರಾಬಾದ್: ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯ ಸಚಿವಾಲಯದ ಆವರಣದಲ್ಲಿ 2 ಮಸೀದಿ, 1 ದೇವಸ್ಥಾನ, 1 ಚರ್ಚ್ ನಿರ್ಮಿಸುವ ನಿರ್ಧಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೈಗೊಂಡಿದ್ದಾರೆ.

    ಪ್ರಗತಿ ಭವನದಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ. ಗಂಗಾ, ಯಮುನಾ, ತೆಹ್ಜೀಬ್ ಸಂಕೇತವಾಗಿ ಇವುಗಳನ್ನು ನಿರ್ಮಿಸುತ್ತಿರುವುದಾಗಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಎಲ್ಲ ಪೂಜಾ ಸ್ಥಳಗಳಿಗೆ ಒಂದೇ ದಿನ ಅಡಿಪಾಯ ಹಾಕಿ, ಒಂದೇ ದಿನ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿದ್ದಾರೆ.

    ಸಚಿವಾಲಯದ ಹಳೆಯ ಕಟ್ಟಡವನ್ನು ಕೆಡುವುವಾಗ ಒಂದು ದೇವಸ್ಥಾನ, ಎರಡು ಮಸೀದಿಗಳಿಗೆ ಹಾನಿಯಾಗಿತ್ತು, ಈ ಹಿನ್ನೆಲೆ ಮುಸ್ಲಿಂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ.

    ಒಂದು ಇಮಾಮ್ ಕ್ವಾರ್ಟರ್ಸ್ ಸೇರಿ ತಲಾ 750 ಚ.ಅಡಿ ಒಟ್ಟು 1,500 ಚ.ಅಡಿಯಲ್ಲಿ 2 ಮಸೀದಿಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಮಸೀದಿಗಳಿದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

    ದೇವಸ್ಥಾನವನ್ನು 1,500 ಚ.ಅಡಿ ಜಾಗದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಇದನ್ನೂ ಸಹ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆ ನಡೆಯುತ್ತಿರುವಾಗಲೇ ಕ್ರಿಶ್ಚಿಯನ್ ಸಮುದಾಯದವರು ಸಹ ಚರ್ಚ್‍ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೊಸ ಸಚಿವಾಲಯದ ಕಟ್ಟಡದ ಆವರಣದಲ್ಲಿ ಚರ್ಚ್ ಸಹ ಇರಬೇಕು ಎಂದು ಬೇಡಿಕೆ ಇಟ್ಟಿದೆ. ಹೀಗಾಗಿ ಚರ್ಚ್ ಸಹ ನಿರ್ಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

    ರಾಜ್ಯವು ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ತೆಲಂಗಾಣ ಧಾರ್ಮಿಕ ಸಹಿಷ್ಣುತೆಯನ್ನು ಪಾಲಿಸುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಈ ಕುರಿತು ತೆಲಂಗಾಣದಲ್ಲಿ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.

    ಅನಾಥ ಮುಸ್ಲಿಂ ಮಕ್ಕಳಿಗಾಗಿ ಆಶ್ರಯ ಕೇಂದ್ರ ನಿರ್ಮಾಣ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಇನ್ನೂ 18 ಕೋಟಿ ರೂ.ಗಳನ್ನು ಇದೀಗ ಕೆಸಿಆರ್ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೈದರಾಬಾದ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮುಸ್ಲಿಂ ಕೇಂದ್ರವನ್ನು ಸ್ಥಾಪಿಸಲು ಸಹ ಕೆಸಿಆರ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಾಗವನ್ನು ಸಹ ಸರ್ಕಾರ ಗುರುತಿಸಿದೆ.

    ಅಲ್ಲದೆ ಮುಸ್ಲಿಂ ಸಮುದಾಯದವರಿಗಾಗಿ ಸಮಾಧಿ ಸ್ಥಳ(ಖಬ್ರಾಸ್ತಾನ್)ಗಳನ್ನು ಸಹ ಗುರುತಿಸಲು ಸರ್ಕಾರ ಮುಂದಾಗಿದ್ದು, ನಗರದ ಹಲವು ಸ್ಥಳಗಳಲ್ಲಿ 150-200 ಖಬ್ರಾಸ್ತಾನ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಉರ್ದುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಲು ಕೆಸಿಆರ್ ಮುಂದಾಗಿದ್ದಾರೆ. ಉರ್ದು ಭಾಷೆಯ ರಕ್ಷಣೆ, ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಸಿಆರ್ ಯೋಜನೆ ರೂಪಿಸಿದ್ದಾರೆ. ಸರ್ಕಾರ ನಡೆಸಿದ ಸಭೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಸಹ ಸಭೆಯಲ್ಲಿ ಭಾಗವಹಿಸಿದ್ದರು.

  • ಆಂಧ್ರದಲ್ಲಿ ಎನ್ಆರ್‌ಸಿ ಜಾರಿ ಇಲ್ಲ- ಜಗನ್ ಘೋಷಣೆ

    ಆಂಧ್ರದಲ್ಲಿ ಎನ್ಆರ್‌ಸಿ ಜಾರಿ ಇಲ್ಲ- ಜಗನ್ ಘೋಷಣೆ

    ಹೈದರಾಬಾದ್: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ಎನ್‍ಆರ್ ಸಿಯನ್ನು ತಮ್ಮ ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿಗಳ ಸಾಲಿಗೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಸೇರ್ಪಡೆಯಾಗಿದ್ದಾರೆ.

    ರಾಜ್ಯಗಳಲ್ಲಿ ಎನ್‍ಆರ್ ಸಿ ಜಾರಿ ಕುರಿತು ಪಕ್ಷದ ಸಂಸದರು ಅಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಜಗನ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಗನ್, ಎನ್ಆರ್‌ಸಿ ಜಾರಿ ಮಾಡುವ ಕುರಿತು ನನ್ನ ಸಹೋದದರಿಗೆ ಅಭಿಪ್ರಾಯ ತಿಳಿಸುವಂತೆ ಹೇಳಿದ್ದೆ. ಸದ್ಯ ಈ ಕುರಿತು ಸ್ಪಷ್ಟ ನಿರ್ಧಾರವನ್ನು ಮಾಡಿದ್ದು, ಆಂಧ್ರಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಎನ್ಆರ್‌ಸಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದಿದ್ದಾರೆ.

    ಎನ್‍ಆರ್ ಸಿ ಬೆಂಬಲ ನೀಡದಿರುವ ಕುರಿತ ಈ ನಿರ್ಧಾರ ಪ್ರಕಟಿಸುವ ಮುನ್ನ ಜಗನ್, ತಮ್ಮ ಸಂಪುಟದ ಉಪಮುಖ್ಯಮಂತ್ರಿ ಅಜ್ಮತ್ ಬಾಷಾ ಅವರ ಅಭಿಪ್ರಾಯ ಪಡೆದಿದ್ದರು. ಜಗನ್ ಅವರ ಈ ನಿರ್ಧಾರ ಎನ್‍ಆರ್ ಸಿ ಜಾರಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುದ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ಅವರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ ಸಹ ಸಿಎಂ ಕೆಸಿಆರ್ ಅವರಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಭಾನುವಾರವರೆಗೂ ಡೆಡ್ ಲೈನ್ ನೀಡಿತ್ತು. ಆದರೆ ಈ ಕುರಿತು ಕೆಸಿಆರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ‘ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಪ್ರಾಮಾಣಿಕ ನಾಗರಿಕರನ್ನು ರಕ್ಷಿಸುತ್ತದೆ. ಕೇಂದ್ರ ಸರ್ಕಾರ ಆದೇಶಗಳನ್ನು ನೀಡಿದಾಗ ಈ ಕುರಿತು ಮಾತನಾಡೋಣ’ ಎಂಬುವುದು ಅವರ ಸದ್ಯದ ನಿರ್ಧಾರ ಎಂದು ಅವರ ಅಪ್ತ ವಲಯದಿಂದ ಕೇಳಿ ಬಂದಿದೆ.

    ದೇಶದಲ್ಲಿ ಇದುವರೆಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ್ ಸಿಎಂ ನಿತಿಶ್ ಕುಮಾರ್, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಮಧ್ಯ ಪ್ರದೇಶ ಸಿಎಂ ಕಮಲ್‍ನಾಥ್, ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೋಟ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಎನ್ಆರ್‌ಸಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ.

  • ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನೀತಿ ಆಯೋಗದ ಮೊದಲ ಸಭೆಗೆ ಮೂವರು ಮುಖ್ಯಮಂತ್ರಿಗಳು ಗೈರು

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ನೀತಿ ಆಯೋಗದ ಸಭೆಗೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ.

    ನೀತಿ ಆಯೋಗದ ಐದನೇ ಆಡಳಿತ ಮಂಡಳಿ ಸಭೆ ಶನಿವಾರ ನಡೆದಿದ್ದು, ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಅವರು ಸಭೆಗೆ ಗೈರಾಗಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜನಯಗಳಿಸಿ ಅಧಿಕಾರದ ಗದ್ದುಗೆಯನ್ನೇರಿದ ಎನ್‍ಡಿಎ ಸರ್ಕಾರದ ಮೊದಲ ನೀತಿ ಆಯೋಗದ ಸಭೆಯನ್ನು ಮೂವರು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಮುಖ ನಾಯಕರು, ಅಧಿಕಾರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಭಾಗವಹಿಸಿದ್ದರು.

    ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹವಾಮಾನದ ವೈಪರಿತ್ಯದಿಂದಾಗಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಅಮರಿಂದರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕರೆದಿದ್ದ ಸಭೆಗೂ ಗೈರಾಗಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆಗೆ ಚಾಲನೆ ನೀಡುತ್ತಿರುವ ಹಿನ್ನೆಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟಿಆರ್‍ಎಸ್ ನಾಯಕ ಹಾಗೂ ಮಾಜಿ ಸಂಸದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಪ್ರತಿಕ್ರಿಯಿಸಿ ಗುರುವಾರದ ನಂತರ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಕುರಿತು ಕೆಸಿಆರ್ ಖಚಿತಪಡಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ರೈತಬಂಧು ಯೋಜನೆ ಕುರಿತು ನೀತಿ ಆಯೋಗದ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಗಮನ ಸೆಳೆಯಲು ತಯಾರಾಗಿದ್ದರು. ಈ ಯೋಜನೆ ವಿವಿಧ ರಾಜ್ಯಗಳಿಗೆ ಮಾದರಿಯಾಗಲಿದೆ ಎಂದು ಸಹ ಹೇಳಿದ್ದರು. ಆದರೆ, ದಿಢೀರನೆ ನೀತಿ ಆಯೋಗದ ಸಭೆಯನ್ನು ಕೆಸಿಆರ್ ತಿರಸ್ಕರಿಸಲು ಕಾರಣ ಏನೆಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಲೇಶ್ವರಂ ನೀರಾವರಿ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪ್ರಧಾನಿಗಳ ಭೇಟಿಗೆ ಅನುಮತಿ ಕೋರಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದ ಅನುಮತಿ ದೊರೆಯದ ಹಿನ್ನೆಲೆ ಕೆಸಿಆರ್ ಅವರು ಅಸಮಾಧಾನಗೊಂಡು ನೀತಿ ಆಯೋಗದ ಸಭೆಗೆ ಗೈರಾಗುತ್ತಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯೊಂದಿಗೆ ತಮ್ಮ ಅಸಮಾಧಾನವನ್ನು ಮುಂದುವರಿಸಿದ್ದು, ನೀತಿ ಆಯೋಗದ ಸಭೆಯಿಂದ ಏನೂ ಫಲಪ್ರದವಿಲ್ಲ. ರಾಜ್ಯದ ಯೋಜನೆಗಳಿಗೆ ಹಣ ನೀಡುವ ಅಧಿಕಾರ ನೀತಿ ಆಯೋಗಕ್ಕಿಲ್ಲ ಎಂದು ದೂರಿದ್ದಾರೆ.

  • ಮೋದಿ ಬೆಂಬಲಿಸುವ ನಾಯಕರಿಗೆ ಸಿಬಿಐ ಭಯವಿಲ್ಲ- ಚಂದ್ರಬಾಬು ನಾಯ್ಡು

    ಮೋದಿ ಬೆಂಬಲಿಸುವ ನಾಯಕರಿಗೆ ಸಿಬಿಐ ಭಯವಿಲ್ಲ- ಚಂದ್ರಬಾಬು ನಾಯ್ಡು

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಬೆಂಬಲಿಸುವ ಪಕ್ಷದ ನಾಯಕರನ್ನು ರಕ್ಷಿಸುತ್ತಾರೆ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

    ಆಂಧ್ರ ಪ್ರದೇಶದ ಅಮರಾವತಿಯಲ್ಲಿ ಮಾತನಾಡಿ ಅವರು, ಕೆ.ಚಂದ್ರಶೇಖರ್ ರಾವ್ ನಿವಾಸದ ಮೇಲೆ ದಾಳಿ ಮಾಡಲು ಸಿಬಿಐ ತಂಡವು ಹೈದ್ರಾಬಾದ್‍ಗೆ ಬಂದಿತ್ತು. ಆಗ ಕೆ.ಚಂದ್ರಶೇಖರ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತಿದ್ದಂತೆ ಸಿಬಿಐ ತಂಡವು ವಾಪಾಸ್ ಆಗಿದೆ. ಜೊತೆಗೆ ಕೆ.ಚಂದ್ರಶೇಖರ್ ರಾವ್ ಅವರ ಮೇಲಿರುವ ಇಎಸ್‍ಐ ಆಸ್ಪತ್ರೆಯ ಹಗರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

    ರಾಜಕೀಯ ಪಕ್ಷಗಳನ್ನು ತಮ್ಮ ಮುಂದೆ ಶರಣಾಗುವಂತೆ ಪ್ರಧಾನಿ ಮೋದಿ ಅವರು ಪ್ಲಾನ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ನಿಲ್ಲುವ ರಾಜಕೀಯ ನಾಯಕರ ವಿರುದ್ಧ ಸಿಬಿಐ ಅಸ್ತ್ರವನ್ನು ಪ್ರಯೋಗಿಸುತ್ತಾರೆ. ಹೀಗಾಗಿ ತಮ್ಮ ಮುಂದೆ ಶರಣಾಗುವ ನಾಯಕರನ್ನು ರಕ್ಷಿಸುತ್ತಾರೆ ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾದಲ್ಲಿ ಕೆ.ಚಂದ್ರಶೇಖರ್ ರಾವ್ ಅವರು 2004ರಿಂದ 2006ರವರೆಗೆ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾಗಿದ್ದರು. ಈ ವೇಳೆ ಅವರ ವಿರುದ್ಧ ಇಎಸ್‍ಐ ಆಸ್ಪತ್ರೆಯ ಬಹುಕೋಟಿ ಹಗರಣ ದಾಖಲಾಗಿತ್ತು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv