Tag: k c venugopal

  • ಗಾಯಬ್ ಪೋಸ್ಟ್‌ನಿಂದ `ಕೈ’ಗೆ ಗಾಯ – ಅನಗತ್ಯ ಹೇಳಿಕೆ ನೀಡದಂತೆ ಎಐಸಿಸಿ ಖಡಕ್ ಸೂಚನೆ

    ಗಾಯಬ್ ಪೋಸ್ಟ್‌ನಿಂದ `ಕೈ’ಗೆ ಗಾಯ – ಅನಗತ್ಯ ಹೇಳಿಕೆ ನೀಡದಂತೆ ಎಐಸಿಸಿ ಖಡಕ್ ಸೂಚನೆ

    – ವಿವಾದ ಬೆನ್ನಲ್ಲೇ `ಗಾಯಬ್’ ಪೋಸ್ಟ್ ಡಿಲೀಟ್

    ನವದೆಹಲಿ: ಕಾಂಗ್ರೆಸ್‌ನಲ್ಲಿ ಈಗ ಮಾಯ ಮಂತ್ರದೇ ಚರ್ಚೆ. ಗಾಯಬ್ ಪೋಸ್ಟ್ ಪಾಕಿಸ್ತಾನದಲ್ಲಿ (Pakistan) ಫೇಮಸ್ ಆಗ್ತಿದ್ದಂತೆ ಇತ್ತ ಕಾಂಗ್ರೆಸ್ ವಿಲವಿಲ ಒದ್ದಾಡಿದೆ. ಇದೀಗ ಪೋಸ್ಟ್ ಡಿಲೀಟ್ ಮಾಡಿ, ಎಲ್ಲಾ ಬಾಯಿ ಮುಚ್ಕೊಂಡು ಇರಿ ಅಂತಾ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಖಡಕ್ ಎಚ್ಚರಿಕೆ ಕೊಟ್ಟಿದೆ.

    ಪೆಹಲ್ಗಾಮ್ ದಾಳಿ (Pahalgam Terror Attck) ವಿಚಾರದಲ್ಲಿ ಮೋದಿ ಟೀಕಿಸುವ ಶರವೇಗದಲ್ಲಿ ಕಾಂಗ್ರೆಸ್ ಗಾಯಬ್ ಪೋಸ್ಟ್ ಹಾಕಿ ಈಗ ಗಾಯಬ್ ಗಾಯಬ್ ಅನ್ನುತ್ತಿದೆ. ಗಾಯಬ್ ಪೋಸ್ಟ್ ಬಳಸಿಕೊಂಡು ರಂಗಿನಾಟ ಆಡಿದ ಪಾಕಿಸ್ತಾನದ (Pakistan) ಕೇಕೆ ಕಾಂಗ್ರೆಸ್‌ಗೆ (Congress) ಹಿಂಬೆಂಕಿಯಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ನ ಕೆಲ ನಾಯಕರ ಆಕ್ಷೇಪದಿಂದ ಗಾಯಬ್ ಪೋಸ್ಟ್ ಡಿಲೀಟ್ ಮಾಡಲಾಗಿದ್ದು, ಎಲ್ಲಾ ನಾಯಕರು ಸಹ ಗಾಯಬ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್‌ ಗಾಯಬ್ ಪೋಸ್ಟರ್‌ ಡಿಲೀಟ್‌ – ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಗಳು, ಪೋಸ್ಟ್‌ನಿಂದ ಎಐಸಿಸಿ ಹೈರಾಣಾಗಿದ್ದು, ಯಾವುದನ್ನ, ಯಾರನ್ನ ಸಮರ್ಥನೆ ಮಾಡ್ಕೋಬೇಕು ಅನ್ನೋದೇ ಅರ್ಥವಾಗದೇ ಹೋಗಿದೆ. ಪೆಹಲ್ಗಾಮ್ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿ ಮಾತನಾಡಿದ್ರೂ ಕಾಂಗ್ರೆಸ್‌ಗೆ ಕುತ್ತು ಎಂಬುದು ಗೊತ್ತಿದೆ. ಹಾಗಾಗಿ ಎಲ್ಲಾ ನಾಯಕರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (K C Venugopal) ಬಹಿರಂಗ ಪತ್ರ ಬರೆದು ಎಚ್ಚರಿಕೆ ಕೊಟ್ಟಿದ್ದಾರೆ. ಪೆಹಲ್ಗಾಮ್ ವಿಚಾರದಲ್ಲಿ ಯಾರೂ ಅನಗತ್ಯ ಹೇಳಿಕೆ ಕೊಡಬಾರದು, ಕೊಟ್ಟರೆ ಶಿಸ್ತು ಕ್ರಮ ಎಂದು ವಾರ್ನಿಂಗ್ ನೀಡಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಬಾಯಿ ಬಂದ್‌!

    ಈ ನಡುವೆ ಎಐಸಿಸಿ ಸೂಚನೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸಹ ಎಚ್ಚೆತ್ತುಕೊಂಡಿದ್ದು, ಮಾಯ ಪೋಸ್ಟ್ ಡಿಲೀಟ್ ಮಾಡಿದೆ. ಅಲ್ಲದೇ ಕಾಂಗ್ರೆಸ್ ನಾಯಕರು ಸದ್ಯಕ್ಕೆ ಗಪ್ ಚುಪ್ ಆಗಿದ್ದಾರೆ. ಒಟ್ನಲ್ಲಿ ರಾಜಕೀಯ ರಣಮೇಳದಲ್ಲಿ ಮೋದಿ ಟಾರ್ಗೆಟ್ ಮಾಡಲು ಹೋದ ಗಾಯಬ್ ಪೋಸ್ಟ್ ಕಾಂಗ್ರೆಸ್‌ಗೆ ತಿರುಗುಬಾಣ ಆಗಿದ್ದು, ಇದೆಲ್ಲಾ ಬೇಕಿತ್ತಾ ಎಂಬ ಪ್ರಶ್ನೆಗಳಿಗೆ `ಕೈ’ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

  • ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗುವುದಿಲ್ಲ, ಜನರ ಬಳಿಗೆ ತೆರಳಿ ವಾಸ್ತವದ ಅರಿವು ಮೂಡಿಸಲು ಸಂಕಲ್ಪ: ಕೆ.ಸಿ.ವೇಣುಗೋಪಾಲ್

    ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗುವುದಿಲ್ಲ, ಜನರ ಬಳಿಗೆ ತೆರಳಿ ವಾಸ್ತವದ ಅರಿವು ಮೂಡಿಸಲು ಸಂಕಲ್ಪ: ಕೆ.ಸಿ.ವೇಣುಗೋಪಾಲ್

    ಬೆಂಗಳೂರು: ಬಿಜೆಪಿ–ಜೆಡಿಎಸ್‌ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ (K.C.Venugopal) ಸ್ಪಷ್ಟಪಡಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಗಂಭೀರ ಬೆಳವಣಿಗೆಗಳ ಕುರಿತು ರಾಜ್ಯದ ಸಚಿವರೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಬಿಜೆಪಿಯು ಸರ್ಕಾರಗಳನ್ನು ಉರುಳಿಸುವ ಇತಿಹಾಸವನ್ನು ಹೊಂದಿದೆ. ಇದನ್ನೂ ಓದಿ: ಹೆಚ್‍ಡಿಕೆ ಅವರದ್ದು ಅವಕಾಶವಾದಿ ಮೈತ್ರಿ: ಎಂ.ಬಿ ಪಾಟೀಲ್

    2018ರಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ರೀತಿಯ ಸ್ಪಷ್ಟ ಉದ್ದೇಶದಿಂದ ಈಗಲೂ ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತಮ್ಮ ಪಕ್ಷವನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರಜ್ವಲ್‌ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗಲೇ ಇಡೀ ದೇಶ ಕಾಂಗ್ರೆಸ್‌ ಸರ್ಕಾರದ ವಿರುದ್ಧದ ಪಿತೂರಿಯನ್ನು ಗಮನಿಸಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಮ್ಮ ಚುನಾಯಿತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದರು.

    ಸಿದ್ದರಾಮಯ್ಯ ಅವರು ಬೆಳೆದು ಬಂದ ಹಾದಿ ಎಲ್ಲರಿಗೂ ತಿಳಿದಿದೆ. ಎಲ್ಲರಿಗೂ ಸಿದ್ದರಾಮಯ್ಯನವರ ಪ್ರಾಮಾಣಿಕತೆಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ ಅವರು ಹಿಂದೆ ಹೇಗಿದ್ದರು. ಈಗ ಹೇಗಿದ್ದಾರೆ ಎಂಬುದು ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ. ಇದನ್ನೂ ಓದಿ: ವಿಜಯೇಂದ್ರ, ನಿಖಿಲ್‌ ನೇತೃತ್ವದಲ್ಲಿ ಅಶ್ವಮೇಧ ಯಾಗ: ಹೆಚ್‌ಡಿಕೆ

    ಜನಪ್ರಿಯತೆ ಸಹಿಸದೆ ಸರ್ಕಾರ ಅಸ್ತಿರಗೊಳಿಸುವ ಹುನ್ನಾರ
    ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಇದು ರಾಜಕೀಯವಾಗಿ ನಷ್ಟ ಉಂಟು ಮಾಡುವುದು ಹಾಗೂ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ ಅವರಿಗೆ ತೊಂದರೆಯಾಗಲಿದೆ ಎಂಬುದು ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಕೆಲವು ಆರೋಪಗಳನ್ನು ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ.

    ರಾಜ್ಯಪಾಲರ ಬಳಕೆ ದುರದೃಷ್ಟಕರ
    ದುರದೃಷ್ಟವಶಾತ್‌ ರಾಜ್ಯದ ರಾಜ್ಯಪಾಲರು ಬಿಜೆಪಿ ಪಿತೂರಿಯ ಸಾಧನವಾಗಿದ್ದಾರೆ. ಮುಖ್ಯಮಂತ್ರಿಯವರಿಗೆ ಕಾರಣ ಕೇಳಿ ನೋಟಿಸ್‌ ನೀಡುವ ಮೂಲಕ ಸರ್ಕಾರ ಅಸ್ಥಿರಗೊಳ್ಳಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷವು ಈ ಪಿತೂರಿ ವಿರುದ್ಧ ಹೋರಾಡಲು ತೀರ್ಮಾನಿಸಿದ್ದು, ಕರ್ನಾಟಕದ ಜನತೆಗೆ ವಾಸ್ತವಾಂಶದ ಅರಿವು ಮೂಡಿಸಲು ನಿರ್ಧರಿಸಿದೆ. ಸಚಿವರು, ಶಾಸಕರು ಜಿಲ್ಲೆಗಳು, ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ವಿವರಿಸಿ, ಗ್ಯಾರಂಟಿ ಯೋಜನೆಗಳನ್ನು ಮುಗಿಸುವ ಬಿಜೆಪಿ-ಜೆಡಿಎಸ್‌ನ ಹುನ್ನಾರವನ್ನು ಬಯಲಿಗೆಳೆಯಲಾಗುವುದು. ಇದಕ್ಕಾಗಿ ಇಂದು ಸಭೆ ನಡೆಸಿದ್ದು, ರಾಜ್ಯದ ಬಡ ಜನರ ಕುರಿತು ಕಾಂಗ್ರೆಸ್‌ ಸರ್ಕಾರಕ್ಕೆ ಅತೀವ ಕಾಳಜಿ ಇದ್ದು, ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಾಗುವುದು. ಈ ಯೋಜನೆಗಳ ಕುರಿತು ನಮಗೆ ಹೆಮ್ಮೆ ಇದೆ ಎಂದರು.

    ಭ್ರಷ್ಟಾಚಾರ ಕುರಿತು ಬಿಜೆಪಿ ಮಾತಾಡುವುದು ಹಾಸ್ಯಾಸ್ಪದ
    ಬಿಜೆಪಿ ಭ್ರಷ್ಟಾಚಾರದ ಕುರಿತು ಮಾತನಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ. ವಿಜಯೇಂದ್ರ ಅವರ ಮೇಲೆ ಎಷ್ಟು ಆರೋಪಗಳಿವೆ? ಪ್ರಜ್ವಲ್‌ ರೇವಣ್ಣ ವಿರುದ್ಧ ಎಷ್ಟು ಆರೋಪಗಳಿವೆ? ಅಂಥವರು ತಾವೇ ಅತ್ಯಂತ ಸಭ್ಯರೆಂಬ ಸೋಗಿನಲ್ಲಿ ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಪರ ಕಾಳಜಿ ಹೊಂದಿದ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಬಡ ಜನರ ಜೊತೆ ನಿಂತ ಮುಖ್ಯಮಂತ್ರಿಯವರನ್ನು ಮುಗಿಸಲು ಮುಂದಾಗಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಟೆಂಡರ್ ರೀತಿ ಅಧಿಕಾರಿಗಳ ವರ್ಗಾವಣೆ ದಂಧೆ – ಪ್ರಹ್ಲಾದ್‌ ಜೋಶಿ ಆರೋಪ

    ಸಮಸ್ಯೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಿ
    ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಈ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲಾಗಿ ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಪದೇ ಪದೇ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ಅವರು ಗ್ಯಾರಂಟಿ ಯೋಜನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಬಡವರ ಪರವಾಗಿದೆ ಎಂದು ಅವರಿಗೂ ಗೊತ್ತಿದೆ. ಹಿಂದಿನ ಚುನಾವಣೆ ಕರ್ನಾಟಕದಲ್ಲಿ ಬಡವರು-ಶ್ರೀಮಂತರ ನಡುವೆ ಇತ್ತು. ಆದ್ದರಿಂದಲೇ 135 ಸೀಟುಗಳೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದ್ದೇವೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಕುರಿತು ಯಾರೂ ಮಾತನಾಡುತ್ತಿಲ್ಲ. ನಿರ್ಮಲಾ ಸೀತಾರಾಮನ್‌ ಅವರು ಇಲ್ಲಿಂದಲೇ ಆಯ್ಕೆಯಾಗಿದ್ದರೂ ಯಾವುದೇ ನೆರವು ಒದಗಿಸಿಲ್ಲ. ಸೀಮಿತ ಸಂಪನ್ಮೂಲದೊಂದಿಗೆ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರ ಬೆಂಬಲ ನೀಡುವ ಬದಲಿಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ನಾವು ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಉಪಸ್ಥಿತರಿದ್ದರು.

  • ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

    ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

    ಬೆಂಗಳೂರು:”ರಾಜಸ್ಥಾನದಲ್ಲಿ ಸಚಿನ್ ಪೈಲೆಟ್‌ (Sachin Pilot) ಅವರಿಗೆ ರಾಹುಲ್‌ ಗಾಂಧಿಯೇ (Rahul Gandhi) ಮಾತು ಕೊಟ್ಟಿದ್ದರು. ಆ ನಂತರ ಏನಾಯಿತು” ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕೇಳಿದ ಖಡಕ್‌ ಪ್ರಶ್ನೆ.

    ಬೆಂಗಳೂರಿನಿಂದ ದೆಹಲಿಗೆ ಹೊರಡುವ ಮುನ್ನ ಡಿಕೆ ಶಿವಕುಮಾರ್‌ ಮನವೊಲಿಕೆಗೆ ಮುಂದಾದ ವೇಣುಗೋಪಾಲ್‌ (K. C. Venugopal) 50:50 ಸೂತ್ರಕ್ಕೆ ಒಪ್ಪುವಂತೆ ಮನವಿ ಮಾಡಿದ್ದಾರೆ. ಈ ಸೂತ್ರಕ್ಕೆ ಒಪ್ಪಿಗೆ ನೀಡಿದರೆ ಇಬ್ಬರಿಗೂ ಅನುಕೂಲ, ಪಕ್ಷಕ್ಕೂ ಒಳ್ಳೆದಾಗುತ್ತದೆ. ಹೈಕಮಾಂಡ್‌ ನೀಡಿದ ಈ ಭರವಸೆಯನ್ನು ನೀವು ಒಪ್ಪಿಕೊಳ್ಳಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ  ತಿಳಿದು ಬಂದಿದೆ.

    ವೇಣುಗೋಪಾಲ್‌ ಮಾತಿಗೆ, ರಾಜಸ್ಥಾನದಲ್ಲಿ (Rajasthan) ಓಡಾಡಿ ಪಕ್ಷ ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಸಚಿನ್ ಪೈಲೆಟ್ ಕಾರಣ. ಆದರೆ ಹಿರಿತನ ಬೇರೆ ಬೇರೆ ಕಾರಣ ನೀಡಿ ಅಶೋಕ್‌ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಈಗ ನ್ಯಾಯ ಕೇಳುತ್ತಿರುವ ಸಚಿನ್ ಪೈಲೆಟ್ ಅವರನ್ನು ಪಕ್ಷದಿಂದಲೇ ಹೊರಹಾಕುವ ಸಿದ್ದತೆ ನಡೆದಿದೆ. ನನಗೂ ಆ ರೀತಿ ಆಗುವುದಿಲ್ಲ ಎಂದು ಏನು ಗ್ಯಾರಂಟಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನೇ ಸಿಎಂ ಆಗ್ಬೇಕು: ಕೆಎನ್‌ ರಾಜಣ್ಣ ಆಗ್ರಹ

    ರಾಹುಲ್ ಗಾಂಧಿಯವರೇ ಮಾತು ಕೊಟ್ಟು ಸಚಿನ್ ಪೈಲೆಟ್‌ ಅವರಿಗೆ ಈ ಸ್ಥಿತಿ ಬಂದಿದೆ. ಇನ್ನು ನನಗೆ ಎರಡೂವರೆ ವರ್ಷದ ನಂತರ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೊದಲು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇದಾದ ಬಳಿಕ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ನೇಮಿಸಲಿ ಎಂದು ವೇಣುಗೋಪಾಲ್‌ ಮಾತಿಗೆ ಡಿಕೆಶಿ ಉಲ್ಟಾ ಹೊಡೆದಿದ್ದಾರೆ. ಡಿಕೆಶಿ ವರಸೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿ ವೇಣುಗೋಪಾಲ್‌ ಸುಮ್ಮನಾಗಿದ್ದಾರೆ.

    ರಾಜಸ್ಥಾನದಲ್ಲಿ ಆಗಿದ್ದು ಏನು?
    2018ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಗಳಿಸಿತ್ತು. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲೆಟ್‌ ಇಬ್ಬರೂ ಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಹೈಕಮಾಂಡ್‌ ಅಶೋಕ್‌ ಗೆಹ್ಲೋಟ್‌ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಈ ವಿಚಾರಕ್ಕೆ ಆರಂಭದಲ್ಲೇ ಬಂಡಾಯ ಎದ್ದಿದ್ದ ಸಚಿನ್‌ ಪೈಲೆಟ್‌ ನಂತರ ಅವರ ಆಪ್ತರಿಗೆ ಮಂತ್ರಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ಈಗ ಇಬ್ಬರ ನಡುವಿನ ತಿಕ್ಕಾಟ ಜೋರಾಗಿದ್ದು  ಬಿಜೆಪಿ ಸಿಎಂ ವಸುಂಧರ ರಾಜೇ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ನಡೆಸದ್ದಕ್ಕೆ ಸಿಟ್ಟಾಗಿ ಸಚಿನ್‌ ಪೈಲಟ್‌  5 ದಿನ ಯಾತ್ರೆ ನಡೆಸಿ ಗೆಹ್ಲೋಟ್‌ ಸರ್ಕಾರದ ವಿರುದ್ಧ  ಕಿಡಿ ಕಾರಿದ್ದರು. ಈಗ 5 ದಿನದ ಯಾತ್ರೆ ನಡೆಸಿದ್ದೇನೆ ತನಿಖೆ ನಡೆಸದೇ ಇದ್ದರೆ ಸರ್ಕಾರ ವಿರುದ್ಧ ರಾಜ್ಯಾಂದತ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

  • Hath Se Hath Jodo Yatra – ಭಾರತ್ ಜೋಡೋ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಹೊಸ ಅಭಿಯಾನ

    Hath Se Hath Jodo Yatra – ಭಾರತ್ ಜೋಡೋ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಹೊಸ ಅಭಿಯಾನ

    ನವದೆಹಲಿ: ಮುಂಬರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ (Bharat Jodo Yatra)  ಬೆನ್ನಲ್ಲೇ ಹೊಸ ಅಭಿಯಾನ ಆರಂಭಿಸಿದೆ.

    ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಐಸಿಸಿ (AICC) ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (K C Venugopal) ‘ಹಾತ್ ಸೇ ಹಾತ್ ಜೋಡೋ’ (ಕೈಯಿಂದ ಕೈ ಜೋಡಿಸಿ) (Hath Se Hath Jodo Yatra) ಅಭಿಯಾನದ ಲೋಗೋ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಯಾತ್ರೆಯ ಉದ್ದೇಶವನ್ನು ಜನರಿಗೆ ತಿಳಿಸಬೇಕಿದೆ. ಈ ಹಿನ್ನೆಲೆ ಜನರ ಮನೆಗಳನ್ನು ತಲುಪಲು ‘ಹಾತ್ ಸೇ ಹಾತ್ ಜೋಡೋ’ ಅಭಿಯಾನ ಆರಂಭಿಸಿದ್ದು ಜನವರಿ 26 ರಿಂದ ಇದು ಆರಂಭವಾಗಲಿದೆ ಎಂದರು. ಇದನ್ನೂ ಓದಿ: ಚುನಾವಣೆ ಸಂದರ್ಭದಲ್ಲಿ ED ನನ್ನನ್ನು ಬಂಧಿಸಲುಬಹುದು – ದೇವರನ್ನು ನಂಬಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ: ಕೆಜಿಎಫ್ ಬಾಬು

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ‘ಹಾತ್ ಸೇ ಹಾತ್ ಜೋಡೋ’ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮೊದಲ ಹಂತದಲ್ಲಿ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ, ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ಮೂರನೇ ಹಂತದಲ್ಲಿ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದೇ ವೇಳೆ ಬಿಜೆಪಿ (BJP) ಆಡಳಿತ ವೈಫಲ್ಯಗಳ ಬಗ್ಗೆ ಜಾರ್ಜ್‍ಶೀಟ್ ಸಿದ್ಧಪಡಿಸಿದ್ದು ಅವುಗಳನ್ನು ಜನರಿಗೆ ತಲುಪಿಸುತ್ತೇವೆ ಮತ್ತು ಕಾಂಗ್ರೆಸ್ ಉದ್ದೇಶಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕೆ ಭಾರತ್ ಜೋಡೋದಂತೆ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೇ ದಲಿತ ಸಿಎಂ ಕೂಗು – ಸಿದ್ದು ಸೋಲಿಸಿ, ದಲಿತ CM ಹಾದಿ ಸುಗಮಗೊಳಿಸಿ ಅಭಿಯಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿದ ರಾಹುಲ್ ಗಾಂಧಿ

    ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿದ ರಾಹುಲ್ ಗಾಂಧಿ

    ತಿರುವನಂತಪುರಂ: ಕಾಂಗ್ರಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿ ಸಂಭ್ರಮ ಪಟ್ಟರು.

    ಮೀನುಗಾರರು ಸಮುದ್ರಕ್ಕೆ ಇಳಿದು ಮೀನುಗಾರಿಕೆ ತೆರಳಿದ ವೇಳೆ ಜೊತೆಯಾದ ರಾಹುಲ್ ಗಾಂಧಿ ಮೀನುಗಾರರ ಸಮುದ್ರಕ್ಕೆ ಹಾರಿ ಮೀನಿನ ಬಲೆ ಬಿಡಿಸುತ್ತಿದ್ದಂತೆ ತಾವು ನೀರಿಗೆ ಧುಮುಕಿ ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ಈಜಾಡಿದರು.

    ನಮ್ಮೊಂದಿಗೆ ಹೇಳದೆ ಸಮುದ್ರಕ್ಕೆ ಧುಮುಕಿದ ರಾಹುಲ್ ಅವರನ್ನು ಕಂಡು ನಾವೂ ಭಯಭೀತರಾದೆವು. ಆದರೆ ಅವರು ಮಾತ್ರ ಕೂಲ್ ಆಗಿ ನೀರಿನಲ್ಲಿ 10 ನಿಮಿಷ ಕಾಲಕಳೆದರು. ರಾಹುಲ್ ಒಬ್ಬ ಉತ್ತಮ ಈಜುಗಾರ ಎಂದು ಜೊತೆಗಿದ್ದ ಮುಖಂಡರು ವಿವರಿಸಿದರು.

    ರಾಹುಲ್ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಟಿ. ಎನ್ ಪ್ರತಾಪನ್ ಸೇರಿದಂತೆ ಇತರ ನಾಲ್ಕು ಜನ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. ರಾಹುಲ್ ಅವರೊಂದಿಗೆ ಒಟ್ಟು 25 ಜನ ಮೀನುಗಾರರೂ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಮೀನುಗಾರರು ತಯಾರಿಸಿದ ಮೀನಿನ ಖಾದ್ಯವನ್ನು ಸವಿದು, ಸುಮಾರು 2.30 ಗಂಟೆಗಳ ಕಾಲ ಸಮುದ್ರದಲ್ಲಿ ಕಾಲಕಳೆದರು.

    ಸಮುದ್ರಕ್ಕೆ ತೆರಳಿದ ದೋಣಿ ಮಾಲಿಕ ಬಿಜು ಅವರು ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿ ಕಾಂಗ್ರಸ್ ನಾಯಕರಾದ ರಾಹುಲ್ ಗಾಂಧಿ ನಮ್ಮೊಂದಿಗೆ ನಮ್ಮ ಕುಟುಂಬ ವರ್ಗ ಮತ್ತು ಆದಾಯದ ಮೂಲಗಳ ಕುರಿತು ಚರ್ಚಿಸಿದರು ಎಂದರು.

  • ಬಂಡಾಯ ಎದ್ದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕರಿಗೆ ಎಚ್ಚರಿಕೆ ರವಾನಿಸಿದ ‘ಕೈ’ ಹೈಕಮಾಂಡ್

    ಬಂಡಾಯ ಎದ್ದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕರಿಗೆ ಎಚ್ಚರಿಕೆ ರವಾನಿಸಿದ ‘ಕೈ’ ಹೈಕಮಾಂಡ್

    – ಬಿಜೆಪಿಯವರ ಆಟ ಇದೇ ಮೊದಲೇನಲ್ಲ

    ನವದೆಹಲಿ: ಬಹಿರಂಗವಾಗಿ ಅಸಮಾಧಾನ ಹೊರಹಾಕಿದರೆ ಹಾಗೂ ಬಂಡಾಯ ಎದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶಾಸಕರಿಗೆ ಎಚ್ಚರಿಕೆ ರವಾನಿಸಿದ್ದಾರೆ.

    ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಬಳಿಕ ಮಾತನಾಡಿದ ವೇಣುಗೋಪಾಲ್ ಅವರು, ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಕೂಲ್ ಆಗಿದೆ. ಬಿಜೆಪಿ ಮೊದಲ ದಿನದಿಂದಲೂ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದೆ. ಯಾವ ಶಾಸಕರೂ ರಾಜೀನಾಮೆ ಕೊಡುವುದಿಲ್ಲ. ಶಾಸಕರು ರಾಜೀನಾಮೆ ಕೊಟ್ಟಿದಾರೆ ಅಂತ ಹೇಳಿದ್ದು ಯಾರು ಎಂದು ಪ್ರಶ್ನಿಸಿದರು.

    ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಇಲ್ಲದೇ ಇರುವುದರಿಂದಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶಕ್ಕೆ ಹೋಗಿದ್ದಾರೆ. ನಾನು ರಾಜ್ಯ ನಾಯಕರೊಂದಿಗೆ ಮಾತನಾಡಿದ್ದೇನೆ. ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಬೆಂಗಳೂರಿಗೆ ಹೋಗುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.

    ಬಿಜೆಪಿಯವರ ಆಟ ಇದೇ ಮೊದಲೇನಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಅವರು ಸರ್ಕಾರ ಬೀಳಿಸುವ ಪ್ರಯತ್ನ ನಡೆಸಿದ್ದಾರೆ. ನಮ್ಮ ಬಳಿ 20 ಜನ ಶಾಸಕರು ಇದ್ದಾರೆ, 25 ಶಾಸಕರಿದ್ದಾರೆ ಎಂದು ಹೇಳುತ್ತಾ ಬಂದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ ಎಂದರು.

  • ಕೈ ವಿರುದ್ಧ ‘ರೋಷ ‘ನ್ ಬೇಗ್ – ಬೆಂಗ್ಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

    ಕೈ ವಿರುದ್ಧ ‘ರೋಷ ‘ನ್ ಬೇಗ್ – ಬೆಂಗ್ಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

    ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರು ಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.

    ರೋಷನ್ ಬೇಗ್ ಹೇಳಿಕೆಗೆ ಕೆಸಿ ವೇಣುಗೋಪಾಲ್ ಅವರು ತೀವ್ರ ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಇಂದು ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸಕ್ಕೆ ಸಂಜೆ ಭೇಟಿ ನೀಡಿದರು. ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಕೂಡ ಆಗಮಿಸಿದರು. ಈ ಮೂಲಕ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯನವರ ನಿವಾಸದಲ್ಲಿ ಕುಳಿತು ಮುಂದಿನ ರಣ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.

    ಮಾಜಿ ಸಚಿವ ಹೇಳಿಕೆ, ಕಾಂಗ್ರೆಸ್ ನಾಯಕರ ಅಸಮಾಧಾನ, ಎಕ್ಸಿಟ್ ಪೋಲ್ ಸೇರಿದಂತೆ ವಿಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಈ ವೇಳೆ ಆಪರೇಷನ್ ಕಮಲದ ಪ್ರಯತ್ನ ಆರಂಭವಾಗಲಿದೆ ಎಂದು ಸಿದ್ದರಾಮಯ್ಯ ಅವರು ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು, ನಾನೊಬ್ಬನೇ ಎಲ್ಲರನ್ನೂ ಸರಿಪಡಿಸುವುದಕ್ಕೆ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಶಾಸಕರ ಅಸಮಾಧಾನ ಸರಿಪಡಿಸುವುದು ಸಿಎಂ ಕುಮಾರಸ್ವಾಮಿ ಅವರ ಕೆಲಸ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಜೆಡಿಎಸ್ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಇದರಿಂದಾಗಿ ನಮ್ಮ ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಸಿಎಂ ವರ್ತನೆಯೂ ನಮ್ಮ ಶಾಸಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ, ಅದನ್ನು ಸರಿಪಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯನವರ ಮಾತಿನಿಂದ ವಿಚಲಿತರಾದ ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಅವರನ್ನ ಸಿಎಂ ಕುಮಾರಸ್ವಾಮಿ ಅವರ ಭೇಟಿಗೆ ಕರೆದೊಯ್ದಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ದಾವಣಗೆರೆಯಲ್ಲಿ ಅಪ್ಪನ ಬದಲು ಪುತ್ರನನ್ನು ಕಣಕ್ಕಿಳಿಸಲು ಯಶಸ್ವಿಯಾದ ಕಾಂಗ್ರೆಸ್!

    ದಾವಣಗೆರೆಯಲ್ಲಿ ಅಪ್ಪನ ಬದಲು ಪುತ್ರನನ್ನು ಕಣಕ್ಕಿಳಿಸಲು ಯಶಸ್ವಿಯಾದ ಕಾಂಗ್ರೆಸ್!

    ಬೆಂಗಳೂರು: ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೊಂದಲಗಳಿಗೆ ತೆರೆ ಬಿದಿದ್ದು, ಹಿರಿಯ ನಾಯಕ ಹಾಗೂ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅವರನ್ನು ಕಾಂಗ್ರೆಸ್ ಕಣಕ್ಕಿಸಲು ಯಶಸ್ವಿಯಾಗಿದೆ.

    ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದರು ಕೂಡ ಅವರು ಲೋಕ ಕಣದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮಾತುಕತೆ ಫಲಪ್ರದವಾಗಿದ್ದು ಮಲ್ಲಿಕಾರ್ಜುನ್ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ.

    ಮೈತ್ರಿ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಶಾಮನೂರು ಶಿವಶಂಕರಪ್ಪ ಅವರು, ಮಂತ್ರಿಸ್ಥಾನ ನೀಡದ್ದಕ್ಕೆ ನನಗೆ ಬೇಸರವಿದೆ. ಅದಕ್ಕಾಗಿ ನನಗೆ ಬಿ ಫಾರಂ ಬೇಡ ಎಂದು ಹೇಳಿದ್ದೇನೆ. ನಾನು ಯಾರ ಹೆಸರನ್ನು ಸೂಚಿಸಿಲ್ಲ ಹಾಗೂ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

    ಇತ್ತ ಶ್ಯಾಮನೂರು ಅವರು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಸಮಿತಿ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ತುರ್ತು ಬುಲಾವ್ ನೀಡಿತ್ತು. ಎಸ್.ಎಸ್.ಮಲ್ಲಿಕಾರ್ಜುನ್ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಹೀಗಾಗಿ ಅವರು ಈ ಬಾರಿ ಬಿಜೆಪಿ ಎದುರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿಯೂ ಲಭಿಸಿತ್ತು. ಅಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಾಟೀಲ್ ರ ಮಗ ತೇಜಸ್ವಿ ಪಾಟೀಲ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪನ ಹೆಸರು ಕೂಡ ಟಿಕೆಟ್ ರೇಸ್ ನಲ್ಲಿ ಕೇಳಿ ಬಂದಿತ್ತು.

  • ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಬೆಂಗಳೂರು: ಹಳೇ ಮೈಸೂರು ಪ್ರಾಂತ್ಯದ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಇಂದು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಜೆಡಿಎಸ್‍ಗೆ ನಮ್ಮ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬೇಡ ಎಂದು ಐದೂ ಜಿಲ್ಲೆಗಳ ಮುಖಂಡರು ಒತ್ತಾಯಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ವಿಚಾರವನ್ನು ಹೈಕಮಾಂಡ್‍ಗೆ ತಿಳಿಸುವಂತೆ ಐದು ಕ್ಷೇತ್ರಗಳ ಸಂಸದರು ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಐದೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನಿಯೋಗವೊಂದನ್ನು ರಚಿಸಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಗಳಿವೆ.

    ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಜೊತೆ ಕೆ.ಸಿ.ವೇಣುಗೋಪಾಲ್ ಅವರು ಪ್ರತ್ಯೇಕ ಕೊಠಡಿಯಲ್ಲಿ ವಿಧಾನಸಭೆ ಕ್ಷೇತ್ರಗಳ ಮುಖಂಡರನ್ನು ಕರೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಸಭೆಯಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರಿಗೂ ಪ್ರವೇಶ ಇರಲಿಲ್ಲದಿದ್ದುದ್ದು ಅಚ್ಚರಿಗೆ ಕಾರಣವಾಗಿತ್ತು. ಮುಖಂಡರು ಮುಕ್ತವಾಗಿ ತಮ್ಮ ಕ್ಷೇತ್ರಗಳ ಸ್ಥಿತಿ ಗತಿ, ಹಾಲಿ ಮತ್ತು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಹೇಳಿಕೊಳ್ಳಲೆಂದು ಈ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.

    ಕೆ.ಸಿ.ವೇಣುಗೋಪಾಲ್ ಅವರು ನಾಳೆಯೂ ಸಭೆ ನಡೆಸಲಿದ್ದು ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮುಕ್ತ ಚರ್ಚೆಯಾಗಲಿ ಎನ್ನುವ ಉದ್ದೇಶದಿಂದ ಸಭೆಯಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಬೆಂಗಳೂರು: ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯ ಆದೇಶ ಹೊರಡಿಸಿದರೂ ಖಾಸಗಿ ಹೋಟೆಲಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಿಯಾಂಕ್ ಖರ್ಗೆ ಕಾರ್ಯಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲದೇ ಹೋಯ್ತೇ? ಸಿದ್ದಗಂಗಾ ಶ್ರೀಗಳಂತ ಸಾಧಕರು ಅಗಲಿದಾಗ ಈ ಕಾರ್ಯಕ್ರಮ ನಡೆಸಿ ವಿವಾದ ಮಾಡಿಕೊಳ್ಳಬೇಕಾದ ಅವಶ್ಯಕತೆ ಏನಿತ್ತು? ಈ ವಿಚಾರಗಳು ಭಾವನಾತ್ಮಕವಾದ ವಿಷಯಗಳು ಎನ್ನುವುದು ನಿಮಗೆ ಗೊತ್ತಾಗುದಿಲ್ಲವೇ? ಇದರಿಂದ ಆಗುವ ಪರಿಣಾಮಗಳೇನು ಅಂತ ಯೋಚಿಸುವ ಶಕ್ತಿಯು ನಿಮಗಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಈ ವಿಚಾರವಾಗಿ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚನೆಯನ್ನು ಕೂಡ ವೇಣುಗೋಪಾಲ್ ನೀಡಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಆಯೋಜಿಸಿದೆ. ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು.

    https://www.youtube.com/watch?v=kX1PUyGudYg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv