Tag: k.b.koliwad

  • ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ

    ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು: ಕಾಂಗ್ರೆಸ್ ನಾಯಕ ಕೆ.ಬಿ.ಕೋಳಿವಾಡ

    ಬೆಂಗಳೂರು: ಮುಡಾ ಹಗರಣ ಸಂಬಂಧ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಈಗ ಆರೋಪಿ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಕ್ಷದ ಒಳಗಡೆಯೂ ರಾಜೀನಾಮೆಗೆ ಆಗ್ರಹ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ (K.B.Koliwad) ಒತ್ತಾಯಿಸಿದರು.

    ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲೂ ಸಿಎಂ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಮಾತನಾಡುತ್ತಿವೆ. ಆದ್ದರಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddadamaiah), ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಲಹೆ ನೀಡಿದರು.

    ತನಿಖೆ ಎದುರಿಸಿ ಸಿಎಂ ನಿಷ್ಕಳಂಕಿತರು ಎಂಬುದು ಸಾಬೀತಾದ ಮೇಲೆ ಮತ್ತೆ ಅವರೇ ಮುಖ್ಯಮಂತ್ರಿ ಆಗಲಿ. ಸಿಎಂ ರಾಜೀನಾಮೆ ಕೊಡಲ್ಲ ಎನ್ನುತ್ತಿರುವುದು ಅವರ ಅಭಿಪ್ರಾಯ. ಅವರು ರಾಜೀನಾಮೆ ಕೊಡಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ತಿಳಿಸಿದರು.

    ನನಗೂ ಸಿಎಂಗೂ ಹಿಂದೆ ಭಿನ್ನಾಭಿಪ್ರಾಯ ಇದ್ದರೂ ಈಗ ಆತ್ಮೀಯವಾಗಿ ಇದ್ದೇವೆ. ಆದರೂ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಅವರು ರಾಜೀನಾಮೆ ಕೊಡಬೇಕು ಅನ್ನೋದು ನನ್ನ ಅಭಿಪ್ರಾಯ. ನನ್ನ ಜೊತೆ ಬೇರೆ ಯಾವ ನಾಯಕರು ಇಲ್ಲ. ನನ್ನ ವೈಯುಕ್ತಿಕ ಅಭಿಪ್ರಾಯ ನಾನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಸಿದ್ದರಾಮಯ್ಯ ರಾಜೀನಾಮೆ ಕೊಡದಿದ್ದರೆ, ರಾಜೀನಾಮೆ ಕೇಳುವುದು ಹೈಕಮಾಂಡ್‌ಗೆ ಮುಂದೆ ಬಿಟ್ಟಿದ್ದು. ಈಗ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಿ ಆನಂತರ ತಪ್ಪಿಲ್ಲ ಅಂದರೆ ಅವರೆ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಸಲಹೆ ನೀಡಿದರು.

  • ಕೋಳಿವಾಡ ಸಮಿತಿಯಿಂದ್ಲೇ ಬಾಗ್ಮನೆ ಒತ್ತುವರಿ ಬಯಲು

    ಕೋಳಿವಾಡ ಸಮಿತಿಯಿಂದ್ಲೇ ಬಾಗ್ಮನೆ ಒತ್ತುವರಿ ಬಯಲು

    ಬೆಂಗಳೂರು: ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಒತ್ತುವರಿ ತೆರವು ವಿಚಾರದಲ್ಲಿ ಡಬಲ್ ಗೇಮ್ ಆಪರೇಷನ್ ಕೈಗೊಂಡಿದೆ. ಕಾರ್ಯಾಚರಣೆ ವೇಳೆ ದೊಡ್ಡ ದೊಡ್ಡವರ ಲಾಬಿಗೆ ಮಣಿದಿರೋದು ಸ್ಪಷ್ಟವಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೋಳಿವಾಡ ಸಮಿತಿ ಮಂಡಿಸಿದ್ದ ವರದಿಯಲ್ಲಿ ಬಾಗ್ಮನೆ ಟೆಕ್‍ಪಾರ್ಕ್(Bagmane Tech Park) ಒತ್ತುವರಿ ಜಾಗ ಎನ್ನುವುದು ಸ್ಪಷ್ಟವಾಗಿದೆ.

    ಮಹದೇವಪುರದ ಬಾಗ್ಮನೆ ಟೆಕ್‍ಪಾರ್ಕ್ ಒತ್ತುವರಿ ಸಂಬಂಧ ಪಬ್ಲಿಕ್ ಟಿವಿ(Public TV) ಇನ್ನಷ್ಟು ದಾಖಲೆಗಳನ್ನು ಹೊರತೆಗೆದಿದೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡ(K. B. Koliwad) ನೇತೃತ್ವದ ಸಮಿತಿ 2017ರಲ್ಲಿ ಸದನದಲ್ಲಿ ಮಂಡಿಸಿದ ವರದಿಯಲ್ಲಿ ಬಾಗ್ಮನೆ ಟೆಕ್‍ಪಾರ್ಕ್ ಅಕ್ರಮದ ಬಗ್ಗೆ ಉಲ್ಲೇಖವಾಗಿದೆ.

    ವರದಿಯಲ್ಲಿ ಏನಿದೆ?: ಬಾಗ್ಮನೆಯಿಂದ ಎರಡು ಕಡೆ 13.03 ಗುಂಟೆ ಭೂಮಿ ಒತ್ತುವರಿ ಮಾಡಲಾಗಿದೆ. ಕೆ.ಆರ್.ಪುರಂನ ಬೈರಸಂದ್ರದ ಸರ್ವೇ ನಂ.5ರಲ್ಲಿ ಒತ್ತುವರಿ ಆಗಿದೆ. ಭೈರಸಂದ್ರ ಕೆರೆಯ 14.24 ಎಕರೆಯಲ್ಲಿ 9.14 ಗುಂಟೆ ಹಾಗೂ ಕಗ್ಗದಾಸಪುರದ ಸರ್ವೇ ನಂ. 141ರಲ್ಲಿ 3.89 ಗುಂಟೆ ಒತ್ತುವರಿ ಆಗಿದೆ. ಒತ್ತುವರಿ ಜಾಗದಲ್ಲಿ ಟೆಕ್‍ಪಾರ್ಕ್ ಕಚೇರಿ, ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಕೋಳಿವಾಡ ಸಮಿತಿಯ ವರದಿಯು ತಿಳಿಸಿದೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಡಿತ – ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ಮೂವರು ಒಂದೇ ಸಮಯದಲ್ಲಿ ಸಾವು

    ಈ ವರದಿಯನ್ನು ಬಾಗ್ಮನೆ ಟೆಕ್‍ಪಾರ್ಕ್ ಒಪ್ಪಿಕೊಳ್ಳಲು ಸಿದ್ಧವಿಲ್ಲ. 2002ರಲ್ಲೇ ವಿಲ್ಲಾ, ಲೇಔಟ್ ಡೆವಲಪ್ ಆಗಿದೆ. ಗರುಡಾಚಾರ್ ಪಾಳ್ಯದ ಕೆರೆಯಿಂದಲೇ ಸಮಸ್ಯೆ ಆಗಿದೆ. ಕೆರೆ ಅಭಿವೃದ್ಧಿಯ ವೇಳೆ ಹೈಫ್ಲಡ್ ಲೆವೆಲ್ ಚೆಕ್ ಮಾಡಿಲ್ಲ. 2.4 ಮೀಟರ್ ರಾಜ ನಾಲೆ ಇದೆ. ನಾವು ಬ್ಲಾಕ್ ಮಾಡಿದ್ದೇವೆ. ಈ ರಾಜನಾಲೆ ಓಪನ್ ಮಾಡಿದರೆ ಟೆಕ್‍ಪಾರ್ಕ್‍ಗೆ ಕೆರೆ ನೀರು ನುಗ್ಗುತ್ತದೆ. ಕಂದಾಯ ಇಲಾಖೆ ಸರಿಯಾಗಿ ಸರ್ವೇ ಮಾಡಿಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದಲೇ ತಪ್ಪಾಗಿದೆ ಎಂದು ವಾದಿಸಿದೆ.

    ಈ ಹಿನ್ನೆಲೆಯಲ್ಲಿ ಲೋಕಾಯುಕ್ತದ ಮೊರೆ ಹೋಗಿದೆ. ಈ ಸಂದರ್ಭದಲ್ಲಿ ಬಾಗ್ಮನೆ ಟೆಕ್‍ಪಾರ್ಕ್ ಕಾನೂನು ಪಾಲನೆ ಮಾಡಬೇಕು. ನೀವೇ ಸರಿಯಾದ ಕ್ರಮದಲ್ಲಿ ತೆರವು ಮಾಡಿಕೊಡಿ. ಬಿಬಿಎಂಪಿ ಕಾರ್ಯಾಚರಣೆಗೆ ಅನುವು ಮಾಡಿಕೊಡಿ. ಮೂರು ವಾರಗಳ ನಂತರ ಮತ್ತೊಮ್ಮೆ ವಿಚಾರಣೆ ಮಾಡಿ ಎಂದು ಸೆ.12ರ ಲೋಕಾಯುಕ್ತ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ

    ಬಿಬಿಎಂಪಿ ಮೇಲೆಯೂ ಪ್ರಭಾವ ಬೀರಲು ಯತ್ನಿಸಿದೆ. ಮರುಸರ್ವೇಗೆ ಒತ್ತಾಯಿಸುತ್ತಿದೆ. ಇಷ್ಟಕ್ಕೂ ಲೋಕಾಯುಕ್ತರ ಆದೇಶವನ್ನೇ ಬಿಬಿಎಂಪಿ ತಪ್ಪಾಗಿ ಅರ್ಥೈಸಿಕೊಂಡಿದೆ. ಲೋಕಾಯುಕ್ತ ಎಲ್ಲೂ ಕೂಡ 3 ವಾರ ಒತ್ತುವರಿ ತೆರವನ್ನು ಮುಂದೂಡುವಂತೆ ಸೂಚಿಸಿಯೇ ಇಲ್ಲ. ಇನ್ನು, ಬಾಗ್ಮನೆಗೆ ರಿಯಾಯಿತಿ ವಿಚಾರ ಸದನದಲ್ಲಿಯೂ ಪ್ರತಿಧ್ವನಿಸಿದೆ. ಆದರೆ, ಸಿಎಂ ಮಾತ್ರ ಎಂದಿನಂತೆ, ಯಾರು ಎಷ್ಟೇ ದೊಡ್ಡವರಿದರೂ ಮುಲಾಜಿಲ್ದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಮಾತನ್ನೇ ಪುನರುಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಡಿ: ಸಿದ್ದರಾಮಯ್ಯಗೆ ಕೋಳಿವಾಡ ಟಾಂಗ್

    ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಡಿ: ಸಿದ್ದರಾಮಯ್ಯಗೆ ಕೋಳಿವಾಡ ಟಾಂಗ್

    – ಸಿಎಂ ಕುಮಾರಸ್ವಾಮಿ ಅಳುವುದನ್ನು ಬಿಡಲಿ
    – ಸಚಿವ ರೇವಣ್ಣನ ಹೇಳಿಕೆಗೆ ಕೋಳಿವಾಡ ಆಕ್ಷೇಪ

    ಬೆಂಗಳೂರು: ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಟ್ಟು, ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಹೋಗಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಮ್ಮ ಸೊಕ್ಕು ಹಾಗೂ ಭಾವನೆಗಳೇ ನಮಗೆ ಸಮಸ್ಯೆಯಾಗುತ್ತವೆ. ಜೆಡಿಎಸ್ ವಿರುದ್ಧ ಮಾತನಾಡುವುದು ಸರಿಯಲ್ಲ. ಸರ್ಕಾರದ ವಿರುದ್ಧ ತಪ್ಪು ಕಲ್ಪನೆ ಬಂದರೆ ಅದರ ಬಿಸಿ ಕಾಂಗ್ರೆಸ್‍ಗೂ ತಟ್ಟುತ್ತದೆ ಹಾಗೂ ಅನ್ವಯವಾಗುತ್ತದೆ. ಇದರಿಂದಾಗಿ ಮೈತ್ರಿ ಸರ್ಕಾರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಬೇಕು ಎಂದು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.

    ಸಿಎಂ ಕುಮಾರಸ್ವಾಮಿ ಭಿಕ್ಷುಕರ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್, ಕುಮಾರಸ್ವಾಮಿ ಅವರು ಪದೇ ಪದೇ ಭಿಕ್ಷುಕ ಪದ ಬಳಸುವುದು ತಪ್ಪು. ಅಷ್ಟೇ ಅಲ್ಲದೆ ಅಳುವುದನ್ನು ಬಿಡಬೇಕು. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ಭಾವೋದ್ವೇಗಕ್ಕೊಳಗಾಗಿ ಅಳುವುದು ಯಾಕೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಕೆರೆ ಒತ್ತುವರಿ ಸದನ ಸಮಿತಿ ವರದಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವೇ ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಿದ್ದೇವೆ. ಕುಮಾರಸ್ವಾಮಿ ಅವರು ಕೂಡ ಸಮಿತಿ ಸದಸ್ಯರಾಗಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ. ಯಾಕೆ ಕೆರೆ ಒತ್ತುವರಿ ವರದಿಯನ್ನು ಸದನ ಸಮಿತಿ ಯಾಕೆ ಒಪ್ಪಿಕೊಳ್ಳಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ವರದಿಯನ್ನು ಮೂಲೆಗೆ ಸೇರಿಸುವುದು ಸರಿಯಲ್ಲ ಎಂದು ದೂರಿದರು.

    ಕುಮಾರಸ್ವಾಮಿ ಅವರ ಸಲಹೆಯ ಮೇರೆಗೆ ಕೆರೆ ಒತ್ತುವರಿ ಸದನ ಸಮಿತಿ ರಚನೆಯಾಗಿತ್ತು. ಈಗ ಅವರೆ ವರದಿ ಮೂಲೆಗೆ ಇಟ್ಟರೆ ಹೇಗೆ? ಲಕ್ಷಾಂತರ ರೂ. ಖರ್ಚು ಮಾಡಿ ವರದಿ ಮಾಡಿದ್ದು ಯಾಕೆ? ನೈಸ್ ವರದಿಯನ್ನು ನಾವು ಕೊಟ್ಟಿದ್ದೇವೆ. ಅದನ್ನು ಮೂಲೆಗೆ ಇಟ್ಟಿದ್ದಾರೆ. ಹೀಗೆ ಮಾಡಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

    ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಬೇಕೆಂದು ನಾನು ಲಾಬಿ ಮಾಡಲ್ಲ, ಬೇಡುವುದಿಲ್ಲ. ಅವರಾಗಿಯೇ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ ಎಂದು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆ ಹೊರಹಾಕಿದರು.

    ಜಾತಿವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದರು. ಇದನ್ನು ಖಂಡಿಸಿದ ಕೋಳಿವಾಡ ಅವರು, ಕೊಡುವುದು ತೆಗೆದುಕೊಳ್ಳುವುದು ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಚಿವ ಎಚ್.ಡಿ.ರೇವಣ್ಣ ಅವರು ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಬೆರೆಸಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಕಟ್ಟಿಕೊಂಡಿರುವ ಮೋದಿ ಅವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವವರು ಅಯೋಗ್ಯರೆಂದು ಕರೆಸಿಕೊಳ್ಳುತ್ತಾರೆ ಎಂದು ಗುಡುಗಿದರು.

    ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಹೀಗಾಗಿ ಸೂಸೈಡ್ ಬಾಂಬ್ ದಾಳಿ ನಡೆಯಿತು. ಅಷ್ಟೊಂದು ಭದ್ರತೆ ನಡುವೆಯೂ ಘಟನೆ ನಡೆಯಿತು ಎಂದ ಅವರು, ಶಾಲಾ ಮಕ್ಕಳ ಕೈಯಲ್ಲಿ ಮೋದಿ, ಮೋದಿ ಅಂತ ಬರೆಸುತ್ತರುವುದು ಖಂಡನೀಯ. ಉಗ್ರರನ್ನು ಸೆದೆಬಡಿದೆರ ಪ್ರಧಾನಿ ಮೋದಿ ಅವರಿಗೆ ಗೌರವ ಸಿಗಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv