Tag: Jutamas Jitpang

  • ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ – ಚಿನ್ನದ ಪದಕ ಗೆದ್ದ ಭಾರತದ ಬಾಕ್ಸರ್ ನಿಖತ್ ಜರೀನ್

    ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ – ಚಿನ್ನದ ಪದಕ ಗೆದ್ದ ಭಾರತದ ಬಾಕ್ಸರ್ ನಿಖತ್ ಜರೀನ್

    ಅಂಕಾರಾ: ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಭಾರತದ ನಿಖತ್ ಜರೀನ್ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‍ನ ಜಿಟ್‍ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

    ಚಿನ್ನದ ಪದಕಕ್ಕಾಗಿ ನಡೆದ ಈ ಹೋರಾಟದಲ್ಲಿ ಎದುರಾಳಿ ಜುಟಮಾಸ್ ಜಿಟ್‍ಪಾಂಗ್ ಅವರನ್ನು ಜರೀನ್ 5-0 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

    ಈ ಮೂಲಕ ಹೈದರಾಬಾದ್ ಮೂಲದ ಜರೀನ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್‌ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ.

    ನಿಖತ್ ಜರೀನ್ ಅವರಿಗಿಂತ ಮುನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ ಭಾರತೀಯರ ಪೈಕಿ ಮೇರಿ ಕೋಮ್ ಅಗ್ರಸ್ಥಾನದಲ್ಲಿದ್ದು, ಆರು ಬಾರಿ ಚಿನ್ನದ ಪದಕ ಗೆದ್ದಿದ್ದರು. ಸರಿತಾ ದೇವಿ, ಜೆನ್ನಿ ಆರ್‌ಎಲ್‌ ಮತ್ತು ಲೇಖಾ ಕೆಸಿ ಕೂಡ ಚಿನ್ನದ ಪದಕ ಗೆದ್ದಿರುವ ಭಾರತೀಯ ಮಹಿಳಾ ಬಾಕ್ಸರ್‌ಗಳಾಗಿದ್ದಾರೆ.

    ನಿಖತ್ ಜರೀನ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಈ ಚಾಂಪಿಯನ್‍ಶಿಪ್‍ನಲ್ಲಿ 1 ಚಿನ್ನದ ಪದಕದೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದ್ದಾರೆ. ಮನೀಶಾ ಮೌನ್ 57 ಕೆಜಿಯಲ್ಲಿ ಕಂಚು ಗೆದ್ದಿದ್ದರೆ, ಪರ್ವೀನ್ ಹೂಡಾ ಕೂಡ 63 ಕೆಜಿಯಲ್ಲಿ ಭಾರತಕ್ಕೆ ಎರಡನೇ ಕಂಚಿನ ಪದಕವನ್ನು ಗೆದ್ದಿದ್ದಾರೆ.