Tag: Justin Langer

  • ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಮಟ್ಟಿಲೇರಿಸಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ

    ಆಸ್ಟ್ರೇಲಿಯಾ ತಂಡವನ್ನು ಯಶಸ್ಸಿನ ಮಟ್ಟಿಲೇರಿಸಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ

    ಸಿಡ್ನಿ: ಆಸ್ಟ್ರೇಲಿಯಾ ತಂಡವನ್ನು ಮತ್ತೆ ವಿಶ್ವ ಕ್ರಿಕೆಟ್‍ನಲ್ಲಿ ಪುಟಿದೇಳುವಂತೆ ಮಾಡಿದ ಕೋಚ್ ಜಸ್ಟಿನ್ ಲ್ಯಾಂಗರ್ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

    2018ರ ಬಳಿಕ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ನೇಮಕಗೊಂಡರು. ವಿವಾದಗಳ ಸುಳಿಯಲ್ಲಿ ಸಿಲುಕಿ ನಲುಗಿ ಹೋಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಉತ್ಸಾಹ ತುಂಬಿದ ಕೀರ್ತಿ ಲ್ಯಾಂಗರ್‌ಗೆ ಸಲ್ಲುತ್ತದೆ. ಇದನ್ನೂ ಓದಿ: Under-19 World Cup: ಫೈನಲ್‍ನಲ್ಲಿ ಟೀಂ ಇಂಡಿಯಾ ದಾಖಲೆ

    ಲ್ಯಾಂಗರ್ ಕೋಚ್ ಆದ ಬಳಿಕ ಪ್ರತಿಷ್ಠಿತ ಟಿ20 ವಿಶ್ವಕಪ್ ಮತ್ತು ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಿ ಮತ್ತೆ ವಿಶ್ವ ಕ್ರಿಕೆಟ್‍ನಲ್ಲಿ ಆಸ್ಟ್ರೇಲಿಯಾ ಬಲಿಷ್ಠ ತಂಡಗಳಲ್ಲಿ ಒಂದು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು. ಇದನ್ನೂ ಓದಿ: ಕೊನೆಯ ಎಸೆತದಲ್ಲಿ 5 ರನ್ ಗುರಿ – ಸಿಕ್ಸ್, ಫೋರ್ ಬಾರಿಸದೆ ಪಂದ್ಯ ಗೆದ್ದ ತಂಡ, ವೀಡಿಯೋ ವೈರಲ್!

    2019ರ ಏಕದಿನ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ಸೋತ ಆಸ್ಟ್ರೇಲಿಯಾ ತಂಡ. ಬಳಿಕ 2020ರ ಟಿ20 ವಿಶ್ವಕಪ್ ಯಾರು ನಿರೀಕ್ಷೆ ಮಾಡದ ರೀತಿ ಆಡಿ ವಿಶ್ವಕಪ್ ಗೆದ್ದ ಬೀಗಿತ್ತು. ಅಲ್ಲದೇ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 4-0 ಅಂತದಲ್ಲಿ ಗೆದ್ದು ಸಾಧನೆ ಮಾಡಿತು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ಈ ಎಲ್ಲಾ ಸಾಧನೆಗಳ ಹಿಂದೆ ಆಟಗಾರರ ಜೊತೆ ಯಶಸ್ಸಿನ ಮಂತ್ರ ಜಪಿಸಿದ್ದ ಲ್ಯಾಂಗರ್ ಇದೀಗ ದಿಢೀರ್ ಆಗಿ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೋಚ್ ಅಧಿಕಾರವಧಿ ಇನ್ನೂ ಕೆಲ ತಿಂಗಳ ಕಾಲ ಉಳಿದಿದ್ದರೂ ಲ್ಯಾಂಗರ್ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ. ಆದರೆ ಲ್ಯಾಂಗರ್ ರಾಜೀನಾಮೆಗೆ ನಿಖರವಾದ ಕಾರಣವನ್ನು ಬಿಟ್ಟುಕೊಟ್ಟಿಲ್ಲ.

  • ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ‘ಐಪಿಎಲ್ ನಡೆಯಲೇಬೇಕು’: ಟೂರ್ನಿ ನಡೆಸುವ ಬಗ್ಗೆ ಪೀಟರ್ಸನ್ ಸಲಹೆ

    ಮುಂಬೈ: ವಿಶ್ವಾದ್ಯಂತ ಹಾಗೂ ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ತೊಂದರೆಗೆ ಸಿಲುಕಿದೆ. ಆದರೆ ಏನೇ ಆದರೂ ಈ ಬಾರಿಯ ಟೂರ್ನಿ ನಡೆಯಲೇ ಬೇಕು ಅಂತ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಟೂರ್ನಿ ನಡೆಸುವ ಬಗ್ಗೆ ಸಲಹೆ ಕೂಡ ನೀಡಿದ್ದಾರೆ.

    ಖಾಲಿ ಮೈದಾನ, ಕ್ರಿಕೆಟ್ ಅಭಿಮಾನಿಗಳಿಲ್ಲದ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿಯೇ ಟೂರ್ನಿ ನಡೆಸಬೇಕು. ಇದರಿಂದ ಪ್ರೇಕ್ಷಕರ ಜೀವಕ್ಕೆ ಯಾವುದೇ ಅಪಾಯವಿಲ್ಲ ಇರುವುದಿಲ್ಲ ಎಂದು ಪಿಟರ್ಸನ್ ಸಲಹೆ ನೀಡಿದ್ದಾರೆ.

    ಐಪಿಎಲ್ ಟೂರ್ನಿ ಮೂರು ಅಥವಾ ನಾಲ್ಕು ವಾರಗಳಲ್ಲಿ ಕೊನೆಗೊಳ್ಳಬೇಕು. ಹೀಗಾಗಿ ಈ ಬಾರಿ ಐಪಿಎಲ್‍ನ ಸ್ವರೂಪವೂ ಚಿಕ್ಕದಾಗಿರಬೇಕು ಎಂದು ಪೀಟರ್ಸನ್ ಸಲಹೆ ನೀಡಿದ್ದಾರೆ.

    ಕೊರೊನಾ ವೈರಸ್ ಹಾಗೂ ವಿದೇಶಿ ಆಟಗಾರರಿಗೆ ವೀಸಾ ನಿರ್ಬಂಧದಿಂದಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮಾರ್ಚ್ 29ರಿಂದ ಏಪ್ರಿಲ್ 15ರವರೆಗೆ ಮುಂದೂಡಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಬೇಕಿತ್ತು.

    “ಜುಲೈ-ಆಗಸ್ಟ್‍ನಲ್ಲಿ ಕ್ರೀಡಾ ಚಟುವಟಿಕೆ ಆರಂಭವಾಗಬೇಕು. ಐಪಿಎಲ್‍ನ 13ನೇ ಆವೃತ್ತಿಯನ್ನು ಸಹ ನಡೆಸಬೇಕು ಎಂದು ಬಯಸುತ್ತೇನೆ. ವಿಶ್ವದ ಪ್ರತಿಯೊಬ್ಬ ಆಟಗಾರನೂ ಇದನ್ನೇ ಬಯಸುತ್ತಿದ್ದಾರೆ. ಅವರು ಸಹ ಟೂರ್ನಿಯಲ್ಲಿ ಆಡಲೇಬೇಕು ಎನ್ನುವ ಇಚ್ಛೆಯನ್ನು ಹೊಂದಿದ್ದಾರೆ. ಆಟಗಾರರು ಮತ್ತು ಫ್ರಾಂಚೈಸಿಗಳ ಜೊತೆಗೆ ತೆರೆಮರೆಯಲ್ಲಿ ಕೆಲಸ ಮಾಡುವವರಿಗೆ ಐಪಿಎಲ್ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಫ್ರ್ಯಾಂಚೈಸಿ ಸ್ವಲ್ಪ ಹಣವನ್ನು ಉಳಿಸುವ ಮಾರ್ಗವನ್ನು ಸಹ ಕಂಡುಕೊಳ್ಳಬೇಕು. ಉದಾಹರಣೆಗೆ ಎಲ್ಲಾ ಪಂದ್ಯಗಳನ್ನು ಪ್ರೇಕ್ಷಕರು ಇಲ್ಲದೆ ಮೂರು ಸುರಕ್ಷಿತ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ. ಹೀಗಾಗಿ ಟೂರ್ನಿಯನ್ನು ಮೂರು ಅಥವಾ ನಾಲ್ಕು ವಾರಗಳಿಗೆ ಕಡಿತಗೊಳಿಸಬಹುದು” ಎಂದು ಸಲಹೆ ನೀಡಿದ್ದಾರೆ.

    ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಕೂಡ ಐಪಿಎಲ್‍ನ ಮಹತ್ವವನ್ನು ವ್ಯಕ್ತಪಡಿಸಿದ್ದಾರೆ. ಪೀಟರ್ಸನ್ ಅವರ ಸಲಹೆಗೆ ಸಹಮತ ನೀಡಿರುವ ಮಂಜ್ರೇಕರ್, ಸರ್ಕಾರ, ಮಂಡಳಿ ಮತ್ತು ಫ್ರಾಂಚೈಸಿಗಳು ಸೇರಿದಂತೆ ಇತರ ಎಲ್ಲಾ ಸಂಬಂಧಿತ ಸಂಸ್ಥೆಗಳಿಂದ ಒಪ್ಪಿಗೆ ಪಡೆದು ಐಪಿಎಲ್ ನಡೆಸಬೇಕು. ಇದು ವಿಶೇಷ ಆರ್ಥಿಕತೆಯನ್ನು ಸಹ ಪ್ರಾರಂಭಿಸುತ್ತದೆ. ಏಕೆಂದರೆ ಈ ಟೂರ್ನಿ ನಡೆಬೇಕಾಗಿರುವುದು ಮುಂಬೈ ಇಂಡಿಯನ್ಸ್, ಎಂ.ಎಸ್.ಧೋನಿ ಅಥವಾ ವಿರಾಟ್ ಕೊಹ್ಲಿ ಅವರಿಗಾಗಿ ಅಷ್ಟೇ ಅಲ್ಲ. ಐಪಿಎಲ್‍ನಿಂದ ಉದ್ಯೋಗ ಪಡೆಯುವವರಿಗೆ ಟೂರ್ನಿ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಜಸ್ಟಿನ್ ಲ್ಯಾಂಗರ್, ನೀವು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ನಿಮ್ಮ ಮುಂದೆ ಜನಸಂದಣಿ ಇರುತ್ತಿರಲಿಲ್ಲ. ಆಗಲೇ ಕ್ರಿಕೆಟ್ ಆಡಿದ್ದೀರಿ. ಏಕೆಂದರೆ ನೀವು ಆಟವನ್ನು ಇಷ್ಟಪಡುತ್ತೀರಿ. ನಿಮ್ಮ ತಂಡದ ಆಟಗಾರರೊಂದಿಗೆ ಆಡಲು ಇಷ್ಟಪಡುತ್ತೀರಿ. ಈ ಆಟದ ಪ್ರೀತಿಯಿಂದಾಗಿ ಇಂದು ಹೆಚ್ಚಿನ ಜನರು ಟಿವಿ ಮಾಧ್ಯಮ ಮತ್ತು ರೇಡಿಯೋ ಮೂಲಕ ಜನರನ್ನು ರಂಜಿಸಲು ಸಮರ್ಥರಾಗಿದ್ದೀರಿ. ಇದಕ್ಕಾಗಿಯೇ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸುವುದು ಮುಖ್ಯವಾಗಿದೆ. ಇದು ಸ್ವಲ್ಪ ವಿಭಿನ್ನವಾಗಿರುತ್ತದೆ. ಆದರೆ ನಾವೆಲ್ಲರೂ ಎಷ್ಟು ಅದೃಷ್ಟವಂತರು ಎಂಬುದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಸಲಹೆ ನೀಡಿದ್ದಾರೆ.

  • ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಟೆಸ್ಟ್ ಓಪನರ್ ಜಸ್ಟಿನ್ ಲ್ಯಾಂಗರ್ ನೇಮಕಗೊಂಡಿದ್ದಾರೆ.

    ಸದ್ಯ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಪರ್ತ್ ಸ್ಕಾಚರ್ಸ್ ತಂಡದ ಕೋಚ್ ಕಾರ್ಯನಿರ್ವಹಿಸುತ್ತಿರುವ 47 ವರ್ಷದ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮುಂದಿನ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ 22ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಕೋಚ್ ಡ್ಯಾರೆನ್ ಲೆಹ್ಮನ್ ಜಾಗಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆಮಾಡಿದೆ. ಲ್ಯಾಂಗರ್ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿದಂತೆ ಮೂರು ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿಂದೆ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಕೋಚ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಲ್ಯಾಂಗರ್, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 1993ರಿಂದ 2007 ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಲ್ಯಾಂಗರ್ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 23 ಶತಕಗಳು ಸೇರಿದಂತೆ 45.27 ಸರಾಸರಿಯಲ್ಲಿ 7,696 ರನ್‍ಗಳಿಸಿದ್ದಾರೆ. ಲ್ಯಾಂಗರ್ ಅವರ ಈ ನಾಲ್ಕು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಮುಖವಾಗಿ ಎರಡು ಆಶಸ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್, ಜಸ್ಟಿನ್ ಲ್ಯಾಂಗರ್ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    2013ರಲ್ಲಿ ಕೋಚ್ ಆಗಿ ನೇಮಗೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಲೆಹ್ಮನ್ 2019ರ ಆಶಸ್ ಸರಣಿಯವರೆಗೂ ಕೋಚ್ ಆಗಿ ಮುಂದುವರೆಯಬೇಕಿತ್ತು. ಆದರೆ ಮಾರ್ಚ್‍ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್‍ನಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್ ಕಣ್ಣೀರ ವಿದಾಯ ಹೇಳಿದ್ದರು. ಇದೇ ವೇಳೆ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಐಪಿಲ್‍ನಿಂದಲೂ ಹೊರಗುಳಿದಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‍ಮನ್ ಕ್ಯಾಮರೂನ್ ಬ್ಯಾನ್ ಕ್ರಿಫ್ಟ್ ರನ್ನು 9 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.