Tag: Jumbo savari

  • ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್‌ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್‌ʼ

    ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್‌ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್‌ʼ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysuru Dasara 2024) ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ (Jumbo Savari) ಪಾಲ್ಗೊಳ್ಳುವ ಅನೆಗಳ ಪಟ್ಟಿಯನ್ನು ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Eshwara Khandre) ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ.

    ಗಾಂಧಿಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ 2024ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಚಿತ್ರ ಹಾಗೂ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಬಾರಿಯೂ ಮೈಸೂರು ದಸರಾ ಅಂಬಾರಿಯನ್ನು ಕ್ಯಾಪ್ಟನ್‌ ಅಭಿಮನ್ಯು ಹೊರಲಿದ್ದು, ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ, ಏಕಲವ್ಯ, ಕಂಜನ್, ಲಕ್ಷ್ಮಿ, ವರಲಕ್ಷ್ಮಿ ಮತ್ತು ದೊಡ್ಡಹರವೆ ಲಕ್ಷ್ಮಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.

    ಸಂಪ್ರದಾಯದಂತೆ ಜಿಲ್ಲಾಡಳಿತದ ಸಹಯೋಗದಲ್ಲಿ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಆ.21ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ, ಮಾವುತರು ಮತ್ತು ಕಾವಾಡಿಗರಿಗೆ ಸತ್ಕರಿಸಿ ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸುವ ಗಜಪಯಣ ನಡೆಯಲಿದೆ. ಮೊದಲ ತಂಡದಲ್ಲಿ 9 ಆನೆಗಳು ಹಾಗೂ 2ನೇ ಹಂತದಲ್ಲಿ 5 ಆನೆಗಳು ನಾಡಿಗೆ ಬರಲಿವೆ ಎಂದು ತಿಳಿಸಿದ್ದಾರೆ.

    ಕಾರ್ಯಕ್ರಮದಲ್ಲಿ ತಮಿಳುನಾಡು ಅರಣ್ಯ ಸಚಿವ ಎಮ್.ಮಥಿವೆಂಥನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಪಾಲ್ಗೊಂಡಿದ್ದರು

  • ಕೇವಲ 23 ನಿಮಿಷದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮುಕ್ತಾಯ

    ಕೇವಲ 23 ನಿಮಿಷದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮುಕ್ತಾಯ

    – 500 ಮೀ. ಮಾತ್ರ ಸಾಗಿದ ಜಂಬೂ ಸವಾರಿ

    ಮೈಸೂರು: ಕೊರೊನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಕೇವಲ 23 ನಿಮಿಷಗಳಲ್ಲಿ ಜಂಬೂ ಸವಾರಿ ಮುಕ್ತಾಯಗೊಂಡಿದೆ.

    ಪ್ರತಿ ವರ್ಷ ವಿಜೃಂಭಣೆಯಿಂದ ಗಂಟೆಗಟ್ಟಲೇ ನಡೆಯುತ್ತಿದ್ದ ಮೈಸೂರು ದಸರಾದ ಜಂಬೂ ಸವಾರಿ ಈ ಬಾರಿ ಕೇವಲ 23 ನಿಮಿಷಕ್ಕೆ ಮುಕ್ತಾಯವಾಯಿತು. ಮಧ್ಯಾಹ್ನ 3.21ಕ್ಕೆ ಕುಂಬ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಅರಮನೆ ಆವರಣದಲ್ಲೇ ಜಂಬೂ ಸವಾರಿ ನೆರವೇರಿಸಲಾಗಿದ್ದು, ಕೇವಲ 500 ಮೀಟರ್ ಮಾತ್ರ ನಡೆಸಲಾಗಿದೆ.

    750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡಲಾಯಿತು. ಕೇವಲ 500 ಮೀಟರ್ ಸಾಗಿದ ಜಂಬೂ ಸವಾರಿ, ಬಲರಾಮ ದ್ವಾರದ ಬಳಿ ಮುಕ್ತಾಯಗೊಂಡಿತು.

    ಪ್ರತಿ ವರ್ಷ ಸಂಭ್ರಮದಿಂದ ದಸರಾ ಆಚರಿಸಲಾಗುತ್ತಿತ್ತು. ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳ ಕಲಾವಿದರು ಆಗಮಿಸಿ ವಿವಿಧ ಕಲೆ ಪ್ರದರ್ಶಿಸುತ್ತಿದ್ದರು. ಆದರೆ ಈ ಬಾರಿ ಕೇವಲ ಕೊರೊನಾ ಜಾಗೃತಿ, ಅರಮನೆ ವಾದ್ಯಗೋಷ್ಠಿ, 2 ಟ್ಯಾಬ್ಲೋ, ಚಂಡೆಮೇಳ, ವೀರಗಾಸೆ, ಮರಗೋಲು ಸೇರಿದಂತೆ ಇತರ ಕೆಲವು ಕಲಾ ಮೇಳಗಳಷ್ಟೇ ಭಾಗವಹಿಸಿದ್ದವು.

    ಜಂಬೂ ಸವಾರಿ ಹೆಚ್ಚು ಹೊತ್ತು ನಡೆಯದ ಕಾರಣ ಅರಮನೆ ಸುತ್ತಲಿನ ಸಂಚಾರ ಸಹಜ ಸ್ಥಿತಿಯತ್ತ ಮರಳಿದೆ. ಜಂಬೂ ಸವಾರಿ ಕಾರಣದಿಂದಾಗಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಪೊಲೀಸರು ಸಂಚಾರ ನಿರ್ಬಂಧಿಸಿದ್ದರು. ಇದೀಗ ಎಲ್ಲ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

  • ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    – ಅರಮನೆ ಅಂಗಳದಲ್ಲಿ ಮಾತ್ರ ಜಂಬೂ ಸವಾರಿ
    – ಚಾಮುಂಡಿ ಬೆಟ್ಟದಲ್ಲಿ ಐವರಿಂದ ದಸರಾ ಉದ್ಘಾಟನೆ
    – ಈ ಬಾರಿ ಅಭಿಮನ್ಯು ಹೊರಲಿದ್ದಾನೆ ಅಂಬಾರಿ
    – ಜಂಬೂ ಸವಾರಿಗೆ ಐದು ಆನೆ ಮಾತ್ರ ಬಳಕೆ

    ಮೈಸೂರು: ಕೊರೊನಾ ನಿಯಮಗಳಿಗೆ ಅನುಗುಣವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಾಧಾರಣ ದಸರಾ ಆಚರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಮೈಸೂರು ದಸರಾ-2020 ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಗರದ ಅರಮನೆ ಮಂಡಳಿಯ ಕಚೇರಿಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದಸರಾ ಸಿದ್ಧತೆ, ರೂಪುರೇಷೆ ಸೇರಿದಂತೆ ವಿವಿಧ ವಿಚಾಗಳ ಕುರಿತು ಚರ್ಚೆ ನಡೆಸಲಾಯಿತು.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಕೊರೊನಾ ವಾರಿಯರ್ಸ್ ಗಳ ಆಯ್ಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಒಂದು ದಿನಕ್ಕೆ ಒಂದೇ ಕಾರ್ಯಕ್ರಮ ಇರಲಿದೆ ಎಂದರು.

    ಪ್ರತಿ ವರ್ಷ ಮೈಸೂರು ದಸರಾದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆದರೆ ಈ ಬಾರಿ ಎಷ್ಟು ಜನ ಭಾಗವಹಿಸಲು ಅವಕಾಶ ನೀಡಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಜನ ಸೇರಲು ಅವಕಾಶ ನೀಡಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡುತ್ತದೆಯೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ ಮುಖ್ಯ ಕಾರ್ಯದರ್ಶಿಗೆ ಬಂದ ಕೇಂದ್ರದ ಸೂಚನೆಯಂತೆ ಸಿಮೀತ ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯನ್ನು ಐದು ಜನ ನೆರವೇರಿಸಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಅಂತಿಮ ನಿರ್ಧಾರ ಮಾಡುತ್ತಾರೆ. ಡಾ.ರವಿ ಅಥವಾ ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಇದನ್ನು ಸಿಎಂ ಅಂತಿಮ ಮಾಡಲಿದ್ದಾರೆ. ಐದು ಜನ ಕೊರೊನಾ ವಾರಿಯರ್ಸ್ ಗಳಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಜಂಬೂ ಸವಾರಿಯನ್ನು ಸಹ ಅರಮನೆಯಂಗಳದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಐದು ಆನೆಗಳನ್ನು ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ದಸರಾ ಗಜಪಡೆಗೆ ನೂತನ ಕ್ಯಾಪ್ಟನ್‍ನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ 2ರಂದು 12:18 ನಿಮಿಷಕ್ಕೆ ಗಜಪಯಣ ಆರಂಭವಾಗಲಿದೆ. ಈ ಬಾರಿ ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ – ಇಂದು ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ

    ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ – ಇಂದು ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬಂದು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿ ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.

    ಮಧ್ಯಾಹ್ನ 2.30 ರಿಂದ 3.16 ರೊಳಗೆ ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ನಂದಿ ಪೂಜೆ ಮಾಡಿ ಬಳಿಕ ಮಧ್ಯಾಹ್ನ 3.40 ರಿಂದ 4.10 ರೊಳಗೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

    ಜಂಬೂ ಸವಾರಿಯಲ್ಲಿ ಸತತ 5ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಲಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆಣೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಜಂಬೂ ಸವಾರಿಗೂ ಮೊದಲು ವಜ್ರಮುಷ್ಠಿ ಜಟ್ಟಿ ಕಾಳಗ ನಡೆಯಲಿದೆ.

    ದಸರಾ ಮೆರವಣಿಗೆಯಲ್ಲಿ ಏನೆಲ್ಲಾ ಇರಲಿದೆ?
    * 42 ಸ್ತಬ್ಧ ಚಿತ್ರಗಳು, 40 ವಿವಿಧ ಜಾನಪದ ಕಲಾತಂಡಗಳು
    * 10 ವಿಶೇಷ ಕಲಾ ತಂಡ, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ
    * 1, 675 ಕಲಾವಿದರು ಸೇರಿದಂತೆ ಜಂಬೂಸವಾರಿಯಲ್ಲಿ ಒಟ್ಟು 2 ಸಾವಿರ ಮಂದಿ ಭಾಗಿಯಾಗಲಿದ್ದಾರೆ.

    ಜಂಬೂಸವಾರಿಗೆ ನಗರದ ಎಲ್ಲೆಡೆ ಖಾಕಿ ಕಣ್ಣು:
    * ಅರಮನೆ ಹಾಗೂ ಜಂಬೂ ಸವಾರಿ ಮೆರವಣಿಗೆ 70 ಮಂದಿ ಕಮಾಂಡೋಗಳ ನಿಯೋಜನೆ
    * ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ 86 ಸಿಸಿ ಕ್ಯಾಮೆರಾ ಅಳವಡಿಕೆ
    * 11 ಎಸ್‍ಪಿ, ಡಿಸಿಪಿ, 43 ಎಸಿಪಿ, 131 ಪೊಲೀಸ್ ಇನ್ಸ್ ಪೆಕ್ಟರ್
    * 328 ಸಬ್ ಇನ್ಸ್ ಪೆಕ್ಟರ್, 521 ಸಹಾಯಕ ಸಬ್ ಇನ್ಸ್ ಪೆಕ್ಟರ್
    * 304 ಮಹಿಳಾ ಪೊಲೀಸರು, 1600 ಹೋಂ ಗಾರ್ಡ್
    * 3944 ಮಂದಿ ಪೊಲೀಸ್ ಪೇದೆಗಳ ನಿಯೋಜನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv