Tag: Judgment

  • ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ನವದೆಹಲಿ: ದಯಾಮರಣ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠದ ನ್ಯಾಯಾಧೀಶರಾದ ಎಕೆ ಸಿಕ್ರಿ, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದ ಪೀಠ ಕೆಲ ಮಾರ್ಗಸೂಚಿಗಳನ್ನು ತಿಳಿಸಿ ದಯಾಮರಣಕ್ಕೆ ಅನುಮತಿ ನೀಡಿದೆ.

    ಯಾವುದೇ ಒಬ್ಬ ವ್ಯಕ್ತಿ ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರ ದಯಾಮರಣ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆ ವ್ಯಕ್ತಿಗೆ ತನ್ನ ಜೀವ ರಕ್ಷಿಸಲು ಬೇಕಾದ ಮದ್ದು ಮತ್ತು ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕಿದೆ ಎಂದು ತಿಳಿಸಿದೆ. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ದಯಾಮರಣ ಎಂದರೇನು?
    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬ ಮುಂದೆ ಈ ಸಮಸ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಮೂಲಕ ಕೇಳಿಕೊಳ್ಳುವುದೆ ದಯಾಮರಣ. ಹಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇದೆ.

    ಯುಥೆನೇಸಿಯಾ ಎಂದು ಕರೆಯುವುದು ಯಾಕೆ?
    ಯುಥೆನೇಸಿಯಾ ಮತ್ತು ದಯಾಮರಣ ಎರಡೂ ಒಂದೇ. ಗ್ರೀಕ್ ಭಾಷೆಯಲ್ಲಿ ಒಳ್ಳೆಯ ಸಾವು ಎನ್ನುವುದಕ್ಕೆ ಯುಥೆನೇಸಿಯಾ ಎಂದು ಕರೆಯಲಾಗುತ್ತದೆ.

    ಸುಪ್ರೀಂ ಹೇಳಿದ್ದು ಏನು?
    ವ್ಯಕ್ತಿಯ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ಇದೇ ವೇಳೆ ವೈದ್ಯಕೀಯ ಮಂಡಳಿ ವ್ಯಕ್ತಿಯ ಗುಣಪಡಿಸದ ಕಾಯಿಲೆ ಕುರಿತು ದೃಢಪಡಿಸಿದರೆ ವ್ಯಕ್ತಿಯ ಜೀವ ರಕ್ಷಿಸುವ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಹೇಳಿದೆ.

    ಅರ್ಜಿ ಸಲ್ಲಿಸಿದವರು ಯಾರು?
    2005 ರಲ್ಲಿ ‘ಕಾಮನ್ ಕಾಸ್’ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು `ಲಿವಿಂಗ್ ವಿಲ್’ ಮೂಲಕ ದಯಾಮರಣ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬಹು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು. 2011ರಲ್ಲಿ ಭಾರತದ ಸುಪ್ರೀಂಕೋರ್ಟ್ 37 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ನರಳಿದ್ದ ನರ್ಸ್ ಅರುಣಾ ಶಾನ್‍ಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ `ಪರೋಕ್ಷ ದಯಾಮರಣ’ಕ್ಕೆ ಅನುಮತಿ ನೀಡಿರಲಿಲ್ಲ. ಈ ತೀರ್ಪು ಪ್ರಕಟವಾದ ಬಳಿಕ ದಯಾಮರಣವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಐದು ಮಂದಿ ನ್ಯಾಯಧೀಶರ ಪಂಚಪೀಠವನ್ನು ರಚಿಸಿತ್ತು.

    ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣ ಎಂದರೇನು?
    ಅಂಗಾಂಗಗಳು ನಿಷ್ಕ್ರೀಯಗೊಂಡಿರುವ ರೋಗಿಗೆ ನೀಡಿರುವ ವೆಂಟಿಲೇಟರ್ ಸಹಿತ ಜೀವಾಧಾರ ವ್ಯವಸ್ಥೆಯನ್ನು ತೆಗೆಯುವುದು ಪರೋಕ್ಷ ದಯಾಮರಣ. ಒಬ್ಬ ವ್ಯಕ್ತಿಗೆ ಮಾರಣಾಂತಿಕ ರಾಸಾಯನಿಕವನ್ನು ನೀಡಿ ಹತ್ಯೆ ಮಾಡುವುದು ಪ್ರತ್ಯಕ್ಷ ದಯಾಮರಣ. ಪ್ರತ್ಯಕ್ಷ ದಯಾಮರಣ ಕಾನೂನುಬಾಹಿರ.

    ಏನಿದು ಲಿವಿಂಗ್ ವಿಲ್?
    ವ್ಯಕ್ತಿಯೊಬ್ಬ ನಾನು ಮೃತಪಟ್ಟ ನಂತರ ನನ್ನ ಆಸ್ತಿಯನ್ನು ಯಾರಿಗೆ ಹಂಚಬೇಕು ಇತ್ಯಾದಿ ವಿಚಾರಗಳನ್ನು ಲಿಖಿತವಾಗಿ ಬರೆಯುವುದಕ್ಕೆ ವಿಲ್ ಎಂದು ಕರೆಯುತ್ತಾರೆ. ಈ ವಿಲ್ ಎಲ್ಲರಿಗೂ ತಿಳಿದಿದ್ದರೂ ಲಿವಿಂಗ್ ವಿಲ್ ಸ್ವಲ್ಪ ಅದೇ ರೀತಿಯಾಗಿ ಬರುತ್ತದೆ. ಗಂಭೀರ ಚಿಕಿತ್ಸೆಗೆ ದಾಖಲಾಗುವ ಮೊದಲು ಅಥವಾ ಅನುಮತಿಯನ್ನು ನೀಡಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ತನಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಬೇಕು ಎನ್ನುವ ನಿರ್ಧಾರಗಳನ್ನು ಮುಂದೆ ಯಾರು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಲಿಖಿತ ದಾಖಲೆಯೇ ಲಿವಿಂಗ್ ವಿಲ್. ಶುಕ್ರವಾರ ಕೋರ್ಟ್ ರೋಗಿ ಲಿವಿಂಗ್ ವಿಲ್ ನೀಡಿದ್ದರೆ ದಯಾಮರಣ ಕಲ್ಪಿಸಬಹುದು ಎಂದು ಹೇಳಿದೆ. ಲಿವಿಂಗ್ ವಿಲ್ ಮೂಲಕ ದಯಾಮರಣ ಕಲ್ಪಿಸಿದ್ದರೆ ರೋಗಿ, ವೈದ್ಯರು ಹಾಗೂ ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.

    ದಯಾಮರಣ ವಿರೋಧಿಗಳ ವಾದ ಏನಿತ್ತು?
    ಒತ್ತಡ ಹೇರಿ ಲಿವಿಂಗ್ ವಿಲ್ ಬರೆದುಕೊಂಡು ರೋಗಿಯ ದೇಹದ ಅಂಗಾಂಗವನ್ನು ದುರುಪಯೋಗ ಮಾಡಬಹುದು. ಒಂದು ವೇಳೆ ಅವಕಾಶ ನೀಡಿದರೆ ಇದು ಹಣ ಮಾಡುವ ದಂಧೆಯಾಗಬಹುದು. ಹೀಗಾಗಿ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

    ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
    ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ದಯಾಮರಣ ನೀಡುವ ಸಂಬಂಧ, ಕಳೆದ ವರ್ಷ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿತ್ತು. ಈ ಮಸೂದೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ರಚಿಸಿ ಗುಣಮುಖವಾಗದ ಕಾಯಿಲೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಬೇಕು. ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಿ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು ಎನ್ನುವ ಅಂಶವಿತ್ತು.

    ಅಷ್ಟೇ ಅಲ್ಲದೇ ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ. ರೋಗಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಆಪ್ತ ಸಂಬಂಧಿಕರ ಮನವಿ ಅಗತ್ಯ. ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿ ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿ ರಚಿಸಬೇಕು. ಬದುಕುವ ಸಾಧ್ಯತೆ ಇಲ್ಲ, ಆಯಸ್ಸು ಮುಂದೂಡಲು ಇಷ್ಟವಿಲ್ಲ ಎನ್ನುವ `ಲಿವಿಂಗ್‍ವಿಲ್’ ಅರ್ಜಿಯನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5-10 ವರ್ಷ ಜೈಲು ಶಿಕ್ಷೆಯ ಜೊತೆ 20 ಲಕ್ಷದಿಂದ 1 ಕೋಟಿ ರೂ. ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶವಿದೆ.

  • ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‍ಗೆ 3.5 ವರ್ಷ ಜೈಲು, 5 ಲಕ್ಷ ರೂ. ದಂಡ

    ಮೇವು ಹಗರಣ: ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್‍ಗೆ 3.5 ವರ್ಷ ಜೈಲು, 5 ಲಕ್ಷ ರೂ. ದಂಡ

    ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಸಿಬಿಐ ವಿಶೇಷ ಕೋರ್ಟ್ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ 3.5 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

    ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವಪಾಲ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. 3.5 ವರ್ಷದ ಜೈಲು, 5 ಲಕ್ಷ ರೂ. ದಂಡ ವಿಧಿಸಿದ್ದು, ಮೊತ್ತವನ್ನು ಪಾವತಿಸಲು ವಿಫಲವಾದ ಸಂದರ್ಭದಲ್ಲಿ 6 ತಿಂಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ನೀಡುವ ಕುರಿತು ತೀರ್ಪಿನಲ್ಲಿ ತಿಳಿಸಿದ್ದಾರೆ. ಇನ್ನು ಪ್ರಕರಣದ ಇತರೇ ಅಪರಾಧಿಗಳಾದ ಫೂಲ್ ಚಂದ್, ಮಹೇಶ್ ಪ್ರಸಾದ್, ಬೇಕ್ ಜೂಲಿಯಸ್, ಸುನೀಲ್ ಕುಮಾರ್, ಸುಧೀರ್ ಕುಮಾರ್ ಮತ್ತು ರಾಜ ರಾಮ್ರಿಗೂ 3.5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಶುಕ್ರವಾರ ಲಾಲು ಪರ ವಕೀಲರ ಮೂಲಕ ಕೋರ್ಟ್ ಗೆ ಮನವಿಯನ್ನು ಸಲ್ಲಿಸಿ ಲಾಲು ಪ್ರಸಾದ್ ಆರೋಗ್ಯದ ಹದಗೆಟ್ಟಿದ್ದು, ಮಧುಮೇಹ, ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೋಟ್ ಗಮನಕ್ಕೆ ತಂದಿದ್ದರು. ಅಲ್ಲದೇ ಲಾಲು ತಮ್ಮ ಮನವಿಯಲ್ಲಿ ಈ ಪಕ್ರರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಂತಾ ಹೇಳಿದ್ದರು.

    ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದ 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿಸೆಂಬರ್ 23ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜನವರಿ 3ಕ್ಕೆ ಕಾಯ್ದಿರಿಸಿತ್ತು. ಆದರೆ ಶುಕ್ರವಾರ ಮೂರನೇ ಬಾರಿಗೆ ತೀರ್ಪನ್ನು ಮುಂದೂಡಿ ತೀರ್ಪನ್ನು ಕಾಯ್ದಿರಿಸಿದ್ದರು.

    ಇದೇ ಪ್ರಕರಣ ಸಂಬಂಧ ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಇತರೆ ಏಳು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಖುಲಾಸೆಗೊಳಿಸಿದ್ದರು. ಈ ಹಿಂದೆ ಲಾಲು ವಿರುದ್ಧದ ಆರೋಪಗಳನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು.

    ಏನಿದು ಪ್ರಕರಣ?
    20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. 2013ರ ಸೆಪ್ಟೆಂಬರ್ 3ರಂದು ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಎರಡೂವರೆ ತಿಂಗಳ ಕಾಲ ಬಿರ್ಸಾ ಮುಂಡಾ ಜೈಲಿನಲಿದ್ದ ಲಾಲೂ ಬಳಿಕ ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

     

  • 17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

    ಬೆಂಗಳೂರು: ಹೈಕೋರ್ಟ್ ಆದೇಶದಂತೆ ದಂಡುಪಾಳ್ಯ ಗ್ಯಾಂಗ್ ನ ಅಪರಾಧ ಕೃತ್ಯಗಳ ಕುರಿತು ಮರುವಿಚಾರಣೆಯನ್ನು ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 34ನೇ ವಿಶೇಷ ಸತ್ರನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.

    ಈ ಪ್ರಕರಣದಲ್ಲಿ ಈ ಹಿಂದೆಯೇ ಕೆಳಹಂತದ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶದ ವಿರುದ್ಧ ದಂಡುಪಾಳ್ಯ ಗ್ಯಾಂಗ್ ಶಿಕ್ಷೆ ರದ್ದುಪಡಿಸಿ ಮರುವಿಚಾರಣೆ ನಡೆಸುವಂತೆ ಹೈಕೋರ್ಟ್ ಮೊರೆಹೋಗಿದ್ದರು. ಕಳೆದ 17 ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದೇವೆ. ಮಕ್ಕಳು ದೊಡ್ಡವರಾಗಿದ್ದಾರೆ. ನಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ಕೆಳ ನ್ಯಾಯಾಲಯದ ಶಿಕ್ಷೆ ರದ್ದುಪಡಿಸಿ, 3 ತಿಂಗಳ ಒಳಗೆ ಮರುವಿಚಾರಣೆ ನಡೆಸಿ ತೀರ್ಪು ನೀಡುವಂತೆ ಆದೇಶಿಸಿತ್ತು.

    ಅದರಂತೆ ಕಳೆದ ಮೂರು ತಿಂಗಳಿಂದ ಮರುವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವನಗೌಡರು, ಸರ್ಕಾರದ ಪರ ವಕೀಲರಾದ ಬಿ.ಎಸ್.ಪಾಟೀಲ ಅವರು ಸಲ್ಲಿಸಿದ 15 ಜನರ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

    ದಂಡು ಪಾಳ್ಯ ಗ್ಯಾಂಗ್‍ನ ದೊಡ್ಡಹನುಮ, ಮುನಿಕೃಷ್ಣ, ವೆಂಕಟೇಶ, ನಲ್ಲ ತಿಮ್ಮ ಮತ್ತು ಲಕ್ಷ್ಮೀ ತಂಡ ಬೆಂಗಳೂರು ನಗರ ಹೊರವಲಯದ ಅಗ್ರಹಾರ ದಾಸರಹಳ್ಳಿಯ ಗೀತಾ ಎಂಬ ಒಂಟಿ ಮಹಿಳೆಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ ನಗ-ನಾಣ್ಯ ದೋಚಿ ಪರಾರಿಯಾಗಿತ್ತು. ಅಲ್ಲದೇ ಈ ಗ್ಯಾಂಗ್ 2000 ದಶಕದಲ್ಲಿ ರಾಜ್ಯಾದ್ಯಂತ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಮತ್ತು ಸುಲಿಗೆಯಂತಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಅಲ್ಲದೆ ಅಪರಾಧಿಗಳ ತಂಡ ಒಟ್ಟು 88 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿರುವುದರಿಂದ ಇವರಿಗೆ ಮರಣದಂಡನೆ ನೀಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಸತತ ಮೂರು ದಶಕಗಳ ಕಾಲ ಇಡೀ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಈ ತಂಡ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿತ್ತು. ಅಲ್ಲದೇ ಬರೋಬ್ಬರಿ 88 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆ ಪಾತಕಿಗಳ ಭಾವಚಿತ್ರಗಳು ಸಹ ಇದೇ ಮೊದಲ ಬಾರಿಗೆ ನೀಡಲಾಗಿದೆ.


    ಯಾವ ಪ್ರಕರಣಕ್ಕೆ ತೀರ್ಪು: 2000 ಇಸವಿಯ ನವೆಂಬರ್ 02 ರಂದು ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ಕುಡಿಯುವ ನೀರಿನ ನೆಪದಲ್ಲಿ ಗೀತಾ ಎಂಬವರ ಮನೆಗೆ ಹೋಗುವ ಪಾತಕಿ ಲಕ್ಷ್ಮೀ, ಮನೆಯಲ್ಲಿ ಒಂಟಿ ಮಹಿಳೆಯಿರುವುದನ್ನು ಖಾತ್ರಿಪಡಿಸಿಕೊಂಡಿದ್ದಳು. ಲಕ್ಷ್ಮೀ ಹಿಂದೆಯೇ ದೊಡ್ಡ ಹನುಮ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮ ಬಂದು ಪ್ರಾಣಿಗಳಂತೆ ಗೀತಾರನ್ನು ಚಾಕುವಿನಿಂದ ಕ್ರೂರವಾಗಿ ಕುತ್ತಿಗೆ ಕುಯ್ದು ಹೊಟ್ಟೆಗೆ ತಿವಿದು ಮೈ ಮೇಲಿದ್ದ ಮಾಂಗಲ್ಯಸರ, ಜುಮುಕಿ, ಮಾಟಿ ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸೀರೆ ಮತ್ತು ಇನ್ನಷ್ಟು ಒಡವೆಗಳನ್ನು ದೊಚಿ ಪರಾರಿಯಾಗಿದ್ದರು.

    ಸೆರೆಯಾಗಿದ್ದು ಹೇಗೆ: ಅಪರಾಧಿಗಳು ತಾವು ದೋಚಿದ್ದ ವಸ್ತುಗಳನ್ನು ನಗರದ ಅವೆನ್ಯೂ ರಸ್ತೆಯ ರಾಜಮಾರುಕಟ್ಟೆಯ ಸತ್ಯನಾರಾಯಣ ಜ್ಯುವೆಲರಿ ಶಾಪ್ ನಲ್ಲಿ ಮಾರಾಟ ಮಾಡಿದ್ದರು. ಪೊಲೀಸರ ವಿಚಾರಣೆ ವೇಳೆ ಈ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೇ ಪೊಲೀಸರು ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯನ್ನು ಕೋರ್ಟ್‍ಗೆ ಸಲ್ಲಿಸಿದ್ದರು. ಬಂಗಾರದ ಅಂಗಡಿಯ ಮಾಲೀಕನ ಸಾಕ್ಷಿಯೇ ಈ ಪ್ರಕರಣಕ್ಕೆ ದೊಡ್ಡ ಅಡಿಪಾಯವಾಯಿತು. ಇನ್ನುಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 15 ಜನರ ಸಾಕ್ಷಿಗಳನ್ನು ಕೋರ್ಟ್ ಮುಂದೆ ಪ್ರಸ್ತುತ ಪಡಿಸಲಾಗಿತ್ತು.

    ರಾಜ್ಯದಲ್ಲಿನ ಒಂಟಿ ಮಹಿಳೆಯರ ಪಾಲಿಗೆ ಯಮಕಿಂಕರರಾಗಿದ್ದ ಈ ಪಾತಕಿಗಳ ಬಗ್ಗೆ ಚಲನಚಿತ್ರ ನಿರ್ಮಾಣವಾದಾಗ ರಾಜ್ಯದ ಜನತೆ ಈ ದೊಡ್ಡ ಹನುಮ ಹಾಗೂ ಇವನ ಎಲ್ಲಾ ಕೃತ್ಯಗಳಲ್ಲೂ ಭಾಗಿಯಾಗಿದ್ದ ಲಕ್ಷ್ಮೀ, ವೆಂಕಟೇಶ, ಮುನಿಕೃಷ್ಣ ಮತ್ತು ನಲ್ಲತಿಮ್ಮನ ಪಾತ್ರಗಳನ್ನು ನಿರ್ವಹಿಸಿದ್ದ ಚಿತ್ರ ನಟರನ್ನು ನೋಡಿ, ಅಸಲೀ ದಂಡುಪಾಳ್ಯದ ಗ್ಯಾಂಗ್ ನೋಡಲು ಇಡೀ ರಾಜ್ಯದ ಜನತೆ ಕಾದು ಕುಳಿತಿದ್ದರು. ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ಬೆಳಗಾವಿಯ ಹಿಂಡಲಗಾದಿಂದ ಬಂದಿದ್ದ ಈ ಪಾತಕಿಗಳನ್ನು ನೋಡಿ ಬೆಂಗಳೂರಿನ ಸಜಾ ಬಂಧಿಗಳು ಬೆಚ್ಚಿದ್ದರು.

     

     

  • ಅಮೆರಿಕದ ಮಹಿಳೆಗೆ ಮೈಸೂರಿನಲ್ಲಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ

    ಅಮೆರಿಕದ ಮಹಿಳೆಗೆ ಮೈಸೂರಿನಲ್ಲಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ

    ಮೈಸೂರು: ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದ್ದು, ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಿದೆ.

    2015ರಲ್ಲಿ ಆದಿವಾಸಿಗಳ ಮಹಿಳಾ ಅಧ್ಯಯಕ್ಕಾಗಿ ಅಮೆರಿಕದಿಂದ ಬಂದಿದ್ದ ಸಂತ್ರಸ್ತೆ ಅನಾರೋಗ್ಯಕ್ಕೆ ಒಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲ್ ನರ್ಸ್ ಆಗಿದ್ದ ಆರೋಪಿ ಸುಮೀತ್ ಚಿಕಿತ್ಸೆ ನೀಡುವ ನೆಪದಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

    ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರು 7ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಚಂದ್ರಶೇಖರ್ ಅವರು ಇಂದು ಮಹತ್ವದ ತೀರ್ಪು ನೀಡಿದ್ದಾರೆ. 376/2ಇ ಸೆಕ್ಷನ್ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ಭಾರತ ದೇಶದ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೂ ಶಿಕ್ಷೆ ವಿಧಿಸಲಾಗಿದೆ.

    ಸಂತ್ರಸ್ಥೆ ಅಮೇರಿಕಾ ರಾಯಭಾರಿ ಕಚೇರಿಯಿಂದ ಅನುಮತಿ ಪಡೆದು ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತಮ್ಮ ದೇಶಕ್ಕೆ ವಾಪಸ್ಸಾಗಿದ್ದರು. ಸಂತ್ರಸ್ತೆ ಸ್ಕೈಪ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಕುರಿತು ಮೈಸೂರಿನ ಎನ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • ಗರ್ಭಪಾತ ಮಾಡಿಸಿಕೊಳ್ಳಲು ಪತಿಯ ಅನುಮತಿ ಬೇಕಾಗಿಲ್ಲ: ಸುಪ್ರೀಂನಿಂದ ಮಹತ್ವದ ತೀರ್ಪು

    ಗರ್ಭಪಾತ ಮಾಡಿಸಿಕೊಳ್ಳಲು ಪತಿಯ ಅನುಮತಿ ಬೇಕಾಗಿಲ್ಲ: ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಲು ಆಕೆಯ ಪತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪ ನೀಡಿದೆ.

    ವ್ಯಕ್ತಿಯೊಬ್ಬರು ತನ್ನ ಪತ್ನಿ ತನಗೆ ಮಾಹಿತಿಯನ್ನು ನೀಡದೆ ಗರ್ಭಪಾತವನ್ನು ಮಾಡಿಸಿಕೊಂಡಿದ್ದಾರೆ ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಮಹಿಳೆಯೊಬ್ಬರು ತನ್ನ ಗರ್ಭವನ್ನು ಉಳಿಸಿಕೊಳ್ಳುವ ಅಥವಾ ಅದನ್ನು ಅಂತ್ಯಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ತಿಳಿಸಿದೆ.

    ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಹಾಗೂ ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ ಚಂದ್ರಚೂದ್ ತ್ರಿಸದಸ್ಯ ನ್ಯಾಯ ಪೀಠ ಈ ತೀರ್ಪು ನೀಡಿದೆ. ನ್ಯಾಯಪೀಠ ತಿಳಿಸಿರುವಂತೆ ದಂಪತಿಯ ನಡುವಿನ ಸಂಬಂಧಗಳನ್ನು ಆಧರಿಸಿ ಪತ್ನಿಯು ತನ್ನ ಗರ್ಭವನ್ನು ಉಳಿಸಿಕೊಂಡು ಮಗುವಿಗೆ ಜನ್ಮ ನೀಡುವ ಅಥವಾ ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ.

    ತೀರ್ಪಿನ ವೇಳೆ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನನ್ಸಿ ಕಾಯ್ದೆಯನ್ನು ಉಲ್ಲೇಖಿಸಿರುವ ಕೋರ್ಟ್, ಪತಿ-ಪತ್ನಿ ನಡುವೆ ಸಂಬಂಧ ಮುರಿದು ಬಿದ್ದಿರುವುದರಿಂದ ಗರ್ಭಪಾತ ಮಾಡಿಸಲು ಪತಿಯ ಅನುಮತಿ ಪಡೆಯಬೇಕಿಲ್ಲ. ಅದ್ದರಿಂದ ಮಹಿಳೆಗೆ ಗರ್ಭಪಾತ ಮಾಡಿಸಲು ಯಾವುದೇ ವ್ಯಕ್ತಿಯ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ. ಮಹಿಳೆಯೊಬ್ಬರು ತನಗೆ ಗರ್ಭ ಬೇಡ ಎಂದು ನಿರ್ಣಯವನ್ನು ತೆಗೆದುಕೊಂಡರೆ, ಅದನ್ನು ಯಾರ ಹೊಣೆ ಮಾಡಬೇಕುತ್ತದೆ ಎಂದು ಕೋರ್ಟ್ ಪ್ರಶ್ನಿಸಿದೆ. ಮಹಿಳೆ ಗರ್ಭ ಧರಿಸಿದ್ದ ವೇಳೆ ಚಿಕಿತ್ಸೆ ಪಡೆಯುವ ಅಧಿಕಾರವಿದೆ. ಇದನ್ನು ಪೋಷಕರು ಅಥವಾ ಡಾಕ್ಟರ್‍ಗಳು ನಿರಾಕರಿಸುವಂತಿಲ್ಲ ಎಂದು ಹೇಳಿದೆ.

    ಕೋರ್ಟ್‍ನಲ್ಲಿ ದೂರು ಸಲ್ಲಿಸಿದ್ದ ದಂಪತಿಗೆ 1994 ರಲ್ಲಿ ಮದುವೆಯಾಗಿದ್ದು, ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಚೇಧನವನ್ನು ಪಡೆಯಲು ಕೋರ್ಟ್‍ಗೆ ಅರ್ಜಿಯನ್ನು ಸಲ್ಲಿಸಿದ್ದರು. 1999ರ ನಂತರ ಮಹಿಳೆ ತನ್ನ ಪೋಷಕರೊಂದಿಗೆ ವಾಸಮಾಡುತ್ತಿದ್ದಳು. 2002ರಲ್ಲಿ ಚತ್ತೀಸ್‍ಗಢ್ ಕೋರ್ಟ್ ದಂಪತಿ ಒಟ್ಟಿಗೆ ವಾಸಿಸುವಂತೆ ತೀರ್ಪು ನೀಡಿತ್ತು. ನಂತರ ಅಂದ್ರೆ 2003 ರಲ್ಲಿ ಆಕೆ ಗರ್ಭಿಣಿಯಾದಳು.

    ಆದ್ರೆ ಇಬ್ಬರ ನಡುವಿನ ವೈವಾಹಿಕ ಸಂಬಂಧ ಸುಧಾರಣೆಯಾಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಮಹಿಳೆ ಗರ್ಭಪಾತ ಮಾಡಿಸಿಕೊಂಡಿದ್ದರು. ಈ ಕುರಿತು ತನ್ನ ಅನುಮತಿ ಇಲ್ಲದೆಯೇ ಪತ್ನಿ ಗರ್ಭಪಾತ ಮಾಡಿಸಿಕೊಂಡಿರುವುದನ್ನು ತಿಳಿದ ಪತಿ ಆಕೆಯ ಪೋಷಕರು, ಸಹೋದರ ಹಾಗೂ ಗರ್ಭಪಾತ ಮಾಡಿದ ಡಾಕ್ಟರ್ ವಿರುದ್ಧ ದೂರು ದಾಖಲಿಸಿದ್ದರು. ತನಗೆ ಉಂಟಾಗಿರುವ ಮಾನಸಿಕ ನೋವು ಹಾಗೂ ಸಮಾಜದೆದುರು ಅವಮಾನವಾಗಿದ್ದಕ್ಕಾಗಿ 30 ಲಕ್ಷ ಪರಿಹಾರವನ್ನು ನೀಡಲು ಸೂಚಿಸುವಂತೆ ಅರ್ಜಿ ಸಲ್ಲಿಸಿದ್ದರು. ಎಂಟಿಪಿ ಕಾಯ್ದೆಯ ಪ್ರಕಾರ ಗರ್ಭವಸ್ಥೆಯಲ್ಲಿರುವ ಮಗುವಿನ ಚಿಕಿತ್ಸೆಯನ್ನು ನೀಡಲು ತಂದೆಯ ಅನುಮತಿ ಕಡ್ಡಾಯ ಎಂದು ವಾದ ಮಂಡಿಸಿದ್ದರು.

  • ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?

    ಆರುಷಿ ಕೊಲೆ ಮಾಡಿದವರು ಯಾರು: ದೇಶಾದ್ಯಂತ ಕೇಳೋ ಪ್ರಶ್ನೆಗೆ ಉತ್ತರ ಸಿಗುತ್ತಾ?

    ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಆರುಷಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೋಷಕರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿತ್ತು. ಆದರೆ ಈಗ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.

    ಏನಿದು ಪ್ರಕರಣ? 9 ವರ್ಷಗಳ ಹಿಂದೆ ಉತ್ತರ ಪ್ರದೇಶದ ನೊಯಿಡಾದಲ್ಲಿ ಆರಿಷಿ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಮೃತ ಯುವತಿಯ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅವರು ಈ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು. ಅಲ್ಲದೇ ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಲಯ ಪೋಷಕರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

    ಆದರೆ ಈ ಕುರಿತು ಮೇಲ್ಮನವಿ ಸಲ್ಲಿಸಿದ್ದ ತಲ್ವಾರ್ ದಂಪತಿಯನ್ನು ಗುರುವಾರ ಅಲಹಾಬಾದ್ ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ. ಅಲ್ಲದೇ ಸಿಬಿಐ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಗೊಳಿಸಿ, ಗಾಜಿಯಾಬಾದ್‍ನ ದಾಸ್ನಾ ಕಾರಾಗೃಹದಲ್ಲಿರುವ ತಲ್ವಾರ್ ದಂಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

    ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಗಳನ್ನು ಕೇವಲ ಅನುಮಾನದ ಆಧಾರದಲ್ಲಿ ಅಪರಾಧಿಗಳು ಎಂದು ಘೋಷಿಸಲು ಸಾಧ್ಯವಿಲ್ಲ. ಮೃತ ಆರುಷಿ ಪೋಷಕರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ, ಲಭ್ಯವಿರುವ ಸಾಕ್ಷ್ಯಗಳು ಆರೋಪವನ್ನು ಸಾಬೀತು ಮಾಡುವಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯ ಪಟ್ಟಿತ್ತು.

    ಪ್ರಸ್ತುತ ನ್ಯಾಯಾಲಯ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ಬುಲ್ಲಾ, ನನಗೆ ಆರುಷಿ ಕೊಲೆ ಮಾಡಿದ್ದ ಯಾರು ಎಂದು ತಿಳಿದಿಲ್ಲ, ಆದರೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಬಾಲಿವುಡ್ ನಟ ಕಬೀರ್ ಬೇಡಿ, ಮೃತ ಅರುಷಿ ಪೋಷಕರು ಬಿಡುಗಡೆಯಾಗಿದ್ದು, ನ್ಯಾಯ ದೊರೆತಿದೆ. ದುಸ್ವಪ್ನ ದೂರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪೋಷಕರು ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಹಲವು ವರ್ಷಗಳು ಜೈಲುಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ನಮಗೇ ಆಕೆಯನ್ನು ಕೊಲೆ ಮಾಡಿದ್ದು ಯಾರು ಎಂಬುವುದು ತಿಳಿದಿಲ್ಲ. ಎಲ್ಲಿದೆ ನ್ಯಾಯ? ಎಂದು ಕೀರ್ತನ ಕರ್ಮ ಎಂಬವರು ಟ್ವೀಟ್ ಮಾಡಿದ್ದಾರೆ.

    ಹೈಕೋರ್ಟ್‍ನ ತೀರ್ಪಿನ ಅನ್ವಯ ಶುಕ್ರವಾರ ಪೊಲೀಸರು ಅರುಷಿ ಪೋಷಕರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಸಿಬಿಐ ವಕೀಲರು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.