Tag: Judgment

  • ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ವಿಪ್ ನೀಡಬಾರದು ಎಂದು ಎಲ್ಲೂ ಹೇಳಿಲ್ಲ – ಶಿವಲಿಂಗೇಗೌಡ

    ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟಿನ ತೀರ್ಪು ಯಾರ ಪರವೂ ಇಲ್ಲ ಯಾರ ವಿರುದ್ಧವೂ ಅಲ್ಲ. ನ್ಯಾಯಾಲಯ ಸ್ಪೀಕರ್ ಅವರ ಪರಮೋಚ್ಛ ಅಧಿಕಾರವನ್ನು ಎತ್ತಿ ಹಿಡಿದಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿಶ್ಲೇಷಿಸಿದ್ದಾರೆ.

    ದೇವನಹಳ್ಳಿ ಬಳಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಸುಪ್ರೀಂ ಕೋರ್ಟ್ ಕಾಲ ಮಿತಿಯೊಳಗೆ ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಿ ಎಂದು ಹೇಳಿದೆ ಹೊರತು ಇಂತಿಷ್ಟೇ ದಿನದಲ್ಲಿ ಮಾಡಿ ಎಂದು ಹೇಳಿಲ್ಲ. ಇನ್ನೂ ಅತೃಪ್ತ ಶಾಸಕರ ಮೇಲೆ ಸದನಕ್ಕೆ ಹಾಜರಾಗುವಂತೆ ಒತ್ತಡ ಹೇರುವಂತಿಲ್ಲ ಎಂದು ಹೇಳಿದೆ. ಆದರೆ ವಿಪ್ ನೀಡಬಾರದು ಎಂದೂ ಎಲ್ಲೂ ಹೇಳಿಲ್ಲ ಎಂದರು.

    ಸಂವಿಧಾನ ದತ್ತವಾಗಿ ಶಾಸಕರಿಗೆ ವಿಪ್ ಜಾರಿ ಮಾಡಲಾಗುವುದು. ವಿಪ್ ಜಾರಿ ಮಾಡಿದ ನಂತರ ಸದನಕ್ಕೆ ಹಾಜರಾಗದಿದ್ದರೆ ಅನರ್ಹತೆ ಪ್ರಶ್ನೆ ಎದುರಾಗುತ್ತದೆ. ಆಗ ಸಹಜವಾಗಿ ಪಕ್ಷದಿಂದ ಅನರ್ಹತೆ ಮಾಡಿ ಅಂತ ಸ್ಪೀಕರ್ ಅವರಿಗೆ ದೂರು ನೀಡುತ್ತೇವೆ. ಆಗ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಅನರ್ಹತೆಯನ್ನು ಮಾಡಲೇಬೇಕಾಗುತ್ತೆ. ಹೀಗಾಗಿ ಇದು ಅತೃಪ್ತ ಶಾಸಕರ ಪರದ ತೀರ್ಪು ಅಲ್ಲ. ನ್ಯಾಯಾಲಯ ಸ್ಪೀಕರ್ ಅವರಿಗೆ ಎಲ್ಲಾ ಅಧಿಕಾರವನ್ನು ಅವರ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದರು.

    ಸ್ಪೀಕರ್ ಯಾವಾಗ ಬೇಕಾದರೂ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬಹುದು. ಈ ಹಿಂದೆ ಈ ರೀತಿ ಆದಂತಹ ಹಲವು ಉದಾಹರಣೆಗಳೂ ಇವೆ. ನಾಳೆ ವಿಶ್ವಾಸ ಮತಯಾಚನೆ ಮಾಡಲಿದ್ದೇವೆ. ಅದರ ಮೇಲೆ ಚರ್ಚೆ ನಡೆಯಲಿದ್ದು ನಾಳೆ ಅಥವಾ ನಾಡಿದ್ದು ಬೇಕಾದರೂ ನಾವು ಬಹುಮತ ಸಾಬೀತುಪಡಿಸುತ್ತೇವೆ. ಸದನದಲ್ಲಿ ಸಮ್ಮಿಶ್ರ ಸರ್ಕಾರ ಕೆಡವಲು ಯತ್ನಿಸಿದವರ ಎಲ್ಲಾ ಮಾಹಿತಿಗಳನ್ನು ಬಿಚ್ಚಡಲಿದ್ದೇವೆ ಎಂದು ಗರಂ ಆದರು.

  • ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯ

    ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯ

    ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಕನ್ನಡದಲ್ಲಿ ಲಭ್ಯವಾಗಲಿದೆ. ಕನ್ನಡ ತೆಲುಗು, ಹಿಂದಿ, ಅಸ್ಸಾಮಿ, ಮರಾಠಿ, ಓಡಿಯಾ ಭಾಷೆ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗಯ್ ಈ ಮಹತ್ವದ ನಿರ್ಧಾರ ತೆಗದುಕೊಂಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಸಾಮಾನ್ಯ ಜನರಿಗೂ ಅರ್ಥೈಸುವ ಹಿನ್ನೆಲೆ ಈ ಮಹತ್ವದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮುಂದಾಗಿದೆ.

    ಈ ಸಂಬಂಧ ಈಗಾಗಲೇ ತಂತ್ರಜ್ಞಾನ ರೂಪಿಸಿಕೊಂಡಿದ್ದು, ಈ ತಿಂಗಳ ಅಂತ್ಯದಿಂದ ಈ ನಿಯಮ ಜಾರಿ ಆಗುವ ಸಾಧ್ಯತೆ ಇದೆ. 2017ರಲ್ಲಿ ಕೊಚ್ಚಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯಪಟ್ಟಿದ್ದರು.

    ಕೇವಲ ಇಂಗ್ಲಿಷ್‍ನಲ್ಲಿ ತೀರ್ಪು ಹೊರ ಬರುವ ಹಿನ್ನೆಲೆ ಅದು ಎಲ್ಲ ವರ್ಗದ ಜನರನ್ನು ತಲುಪುವುದಿಲ್ಲ. ಹೀಗಾಗಿ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪು ಪ್ರಕಟವಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ರಾಷ್ಟ್ರಪತಿಗಳ ಸಲಹೆ ಪರಿಗಣಿಸಿದ್ದ ಮುಖ್ಯ ನಾಯಮೂರ್ತಿ ರಂಜನ್ ಗೊಗಯ್ ಅದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದಾರೆ.

  • ಗಮನಿಸಿ,  ಮೂಲ ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವಂತಿಲ್ಲ – ಸುಪ್ರೀಂನಿಂದ ಮಹತ್ವದ ತೀರ್ಪು

    ಗಮನಿಸಿ, ಮೂಲ ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವಂತಿಲ್ಲ – ಸುಪ್ರೀಂನಿಂದ ಮಹತ್ವದ ತೀರ್ಪು

    ನವದೆಹಲಿ: ವಾಹನಗಳನ್ನು ಮನಬಂದಂತೆ ಬದಲಾವಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳಲ್ಲಿನ ಯಾವುದೇ ಅಂಶವೂ ಬದಲಾವಣೆ ಆಗಬಾರದು ಎಂದು ಆದೇಶಿಸಿದೆ.

    ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಶರಣ್ ಅವರನ್ನೊಳಗೊಂಡ ದ್ವಿಸದಸ್ಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಕೇರಳ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ ಮೋಟಾರು ವಾಹನ ಕಾಯ್ದೆ ಸೆಕ್ಷನ್ 52(1) ಅಡಿ ವಾಹನ ತಯಾರಿಕಾ ಸಂಸ್ಥೆ ನೋಂದಣಿಯಲ್ಲಿ ನಮೂದಿಸಿದ ಮೂಲ ಸೌಲಭ್ಯಗಳು ಕಡ್ಡಾಯ ಎಂದು ತಿಳಿದಿದೆ.

    ನ್ಯಾಯಪೀಠ ತಿಳಿಸಿರುವಂತೆ ವಾಹನಕ್ಕೆ ಸಾಮಾನ್ಯವಾಗಿ ಮಾಲೀಕರ ನೆಚ್ಚಿನ ಬಣ್ಣ ಹಾಗೂ ಸಣ್ಣ ಪ್ರಮಾಣದ ಬದಲಾವಣೆಗಳನ್ನು ಮೋಟಾರು ವಾಹನ ಕಾಯ್ದೆ ಅಡಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಆದರೆ ವಾಹನದ ಬದಲಾವಣೆ ಮೂಲ ವಿನ್ಯಾಸಕ್ಕೆ ದಕ್ಕೆ ಉಂಟು ಮಾಡುತ್ತಿದ್ದರೆ, ಈ ವಾಹನ ನೋಂದಣಿಗೆ ಅರ್ಹವಲ್ಲ ಎಂದು ತಿಳಿಸಿದೆ.

    ಅಲ್ಲದೇ ವಾಹನ ಉತ್ಪಾದನೆಯ ಮೂಲ ಮಾದರಿಯು ರಸ್ತೆಯ ಯೋಗ್ಯತೆ ಮತ್ತು ಸುರಕ್ಷತೆ ವೈಶಿಷ್ಟ್ಯಗಳಿಗೆ ಮಾತ್ರ ಪರೀಕ್ಷಿಸಲ್ಪಡುತ್ತದೆ ಎಂಬ ಆಧಾರದ ಅನ್ವಯ ತೀರ್ಪು ನೀಡಿದೆ. ಆದ್ದರಿಂದ ತಯಾರಕರ ಮೂಲ ನಿರ್ದಿಷ್ಟ ವಿನ್ಯಾಸಕ್ಕೆ ಧಕ್ಕೆಯಾದರೆ ಯಾವುದೇ ವಾಹನ ನೋಂದಣಿಯಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ತನ್ನ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

    ಸುಪ್ರೀಂ ತೀರ್ಪಿನ ಅನ್ವಯ ವಾಹನಗಳಿಗೆ ದೊಡ್ಡ ಗಾತ್ರದ ಟೈರ್ ಅಳವಡಿಸುವುದು, ವಾಹನದ ಸಾಮಥ್ರ್ಯದಲ್ಲಿ ಬದಲಾವಣೆ ಮಾಡುವುದು ಸೇರಿದಂತೆ ವಾಹನದ ಮೂಲ ರಚನೆಯಲ್ಲಿ ನಮೂದಿಸಲಾಗಿರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಈ ತೀರ್ಪಿನ ಪರಿಣಾಮವಾಗಿ ಕೇರಳ ಸರ್ಕಾರ ಜಾರಿಗೆ ತಂದಿದ್ದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕೂಡ ಅನರ್ಹಗೊಂಡಿದೆ. ಕೇರಳ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲಿ ವಾಹನದಲ್ಲಿನ ಮೂಲ ಬದಲಾವಣೆ ಮಾಡಲು ಅವಕಾಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    ಬೆಳ್ಳಂದೂರು ಕೆರೆ ಮಾಲಿನ್ಯ – ರಾಜ್ಯ ಸರ್ಕಾರಕ್ಕೆ 50 ಕೋಟಿ, ಪಾಲಿಕೆಗೆ 25 ಕೋಟಿ ರೂ. ದಂಡ

    – ಕೆರೆಗಳಿಗಾಗಿ 500 ಕೋಟಿ ಹಣ ಮೀಸಲಿಗೆ ಎನ್‍ಜಿಟಿ ಸೂಚನೆ

    ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ.

    ಇಂದು ಅಂತಿಮ ವಿಚಾರಣೆ ನಡೆಸಿದ ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.

    ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶ ನೀಡಿದೆ.

    ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿದೆ.

    ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್ ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು.

    ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡಿದ್ದ ಎನ್ ಜಿಟಿ ಇಂದು ತೀರ್ಪು ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.

    ಉತ್ತಮ ತೀರ್ಪು:
    ತೀರ್ಪು ಕುರಿತು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಬೆಳ್ಳಂದೂರು ಕೆರೆ ವಿಚಾರದಲ್ಲಿ ತೀರ್ಪು ಸಿಕ್ಕಿದೆ. 50 ಕೋಟಿ, ಪಾಲಿಕೆಗೆ 25 ಕೋಟಿ ದಂಡ ಹಾಕಿರೋದು ಉತ್ತಮ ತೀರ್ಪು ಎಂದು ಹೇಳಿದರು.

    ಎನ್ ಜಿಟಿ ಈ ರೀತಿ ದಂಡ ಹಾಕಿರೋದು ಇದು ಎರಡನೇ ಬಾರಿ. ಇದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದ್ದು, ಸಂತೋಷ್ ಹೆಗ್ಡೆ ಅವ್ರ ಸಮಿತಿ ರಚನೆಗೆ ಸೂಚಿಸಿದ್ದು ಖುಷಿಯಾಗಿದೆ. ಕೆರೆಗಳು ಹಾಳಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಾಗೂ ಅವರ ಸೇವಾ ರಿಜಿಸ್ಟರ್ ನಲ್ಲಿ ಉಲ್ಲೇಖೀಸಬೇಕೆಂದು ಸೂಚನೆ ಕೊಟ್ಟಿರೋದು ಒಪ್ಪಬೇಕಿದೆ. ಕೆರೆಗಳ ಅಭಿವೃದ್ದಿ ವಿಚಾರದಲ್ಲಿ ಉಲ್ಲೇಖಿಸಿರೋ ವೆಬ್ ಸೈಟ್ ಆರಂಭಿಸೋದು ಉತ್ತಮವಾಗಿದೆ. ಕೆರೆ ಸಂರಕ್ಷಣಾ ಮೀಸಲು ನಿಧಿ 500 ಕೋಟಿ ಇಡಲು ಸೂಚಿಸಿದೆ. ಈ ತೀರ್ಪು ನೋಡಿದ್ರೆ ರಾಜ್ಯ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿರೋದು ಗೊತ್ತಾಗಿದೆ. ರಾಜ್ಯದಲ್ಲಿ ಹಾಗೂ ಪಾಲಿಕೆಯಲ್ಲಿ ಆಡಳಿತ ಇಲ್ಲ ಅನ್ನೋದು ಗೊತ್ತಾಗುತ್ತೆ. ಕೂಡಲೇ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು. ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಅಂತ ಅವರು ಆಗ್ರಹಿಸಿದರು.

    https://www.youtube.com/watch?v=syYAEeLN9wc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    – ಉತ್ತರ ಪ್ರದೇಶ ಪಂಚಾಯತ್ ನಿಂದ ವಿಚಿತ್ರ ಆದೇಶ

    ಲಕ್ನೋ: 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ತೀರ್ಪನ್ನ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಂಚಾಯತ್ ನೀಡಿದೆ.

    2012 ರಲ್ಲಿ ಮಹಿಳೆಯೊಬ್ಬರು ಲಾಯಕ್ ಎಂಬುವ ವ್ಯಕ್ತಿಯನ್ನ ಮದುವೆಯಾಗಿ, ಒಂದು ಮಗುವನ್ನ ಪಡೆದಿದ್ದರು. ಮಗು ಜನಿಸಿದ ಕೆಲವು ತಿಂಗಳಿನಲ್ಲಿ ವರದಕ್ಷಿಣೆಯ ಕಾರಣದಿಂದ ಲಾಯಕ್ ತನ್ನ ಪತ್ನಿಗೆ 2015ರಲ್ಲಿ ವಿಚ್ಛೇದನ ನೀಡಿದ್ದ.

    ಗಂಡನಿಂದ ಬೇರೆಯಾದ ಮಹಿಳೆ ಮಗುವಿನೊಂದಿಗೆ ತನ್ನ ತವರು ಮನೆಗೆ ಹಿಂದಿರುಗಿದ್ದಳು. 2017 ರಲ್ಲಿ ಮನೆಯವರು ಆಕೆಗೆ ಅದೇ ಊರಿನ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿದ್ದರು. ಆದರೆ ಮೊದಲನೆಯ ಪತಿಯಾದ ಲಾಯಕ್ ಮಗುವನ್ನ ತನ್ನಿಂದ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

    ಈ ವಿಚಾರವಾಗಿ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಸಹಾಯ ದೊರಕದ ಕಾರಣ, ಸ್ಥಳೀಯ ಪಂಚಾಯತ್ ನ ಮೊರೆ ಹೋಗಿದ್ದರು. ಈಕೆಯ ದೂರನ್ನು ಪರಿಗಣಿಸಿ ಕಾಪ್ ಪಂಚಾಯತ್ 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿಯ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ಆದೇಶವನ್ನು ನೀಡಿದೆ.

    ಈ ಆದೇಶದ ಬಳಿಕ ಮಹಿಳೆ ಸಾಮಾಜಿಕ ಕಾರ್ಯಕರ್ತರ ಮೊರೆ ಹೋಗಿದ್ದು, ಅವರು ಪೊಲೀಸರಿಂದ ಸಹಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶಾದ್ಯಂತ ಪಟಾಕಿ ಆಗುತ್ತಾ ಬ್ಯಾನ್?

    ದೇಶಾದ್ಯಂತ ಪಟಾಕಿ ಆಗುತ್ತಾ ಬ್ಯಾನ್?

    ಬೆಂಗಳೂರು: ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಆದರೆ ಈ ಬಾರಿಯ ದೀಪಾವಳಿಯನ್ನು ಪಟಾಕಿ ಸಿಡಿಸದೇ ಆಚರಿಸಬೇಕಾಗಬಹುದು. ಯಾಕಂದರೆ ದೇಶದಲ್ಲಿ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರುವ ಕುರಿತು ಇವತ್ತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ.

    ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಇಡೀ ದೇಶಾದ್ಯಂತ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.

    ದೇಶಾದ್ಯಂತ ಸಂಪೂರ್ಣ ಪಟಾಕಿ ನಿಷೇಧಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕೆಂದು ಸಲಹೆ ನೀಡಿದೆ.

    ಮತ್ತೊಂದು ಕಡೆ ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗುತ್ತದೆ ಅನ್ನೋ ಕಾರಣಕ್ಕೆ ಪಟಾಕಿ ಉತ್ಪಾದನೆ ಮೇಲೆಯೇ ನಿಷೇಧ ಹೇರಿದ್ರೆ, ಈ ಉದ್ಯಮವನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲಿವೆ ಅನ್ನೋದು ಪಟಾಕಿ ಉತ್ಪಾದಕರ ವಾದವಾಗಿದೆ. ಹೀಗಾಗಿ ಇವತ್ತು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ರೆ ಸಾಮೂಹಿಕ ಆತ್ಮಹತ್ಯೆ- ಶಿವಸೇನಾ ಕಾರ್ಯಕರ್ತೆಯರಿಂದ ಬೆದರಿಕೆ

    ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಿದರೆ ನಮ್ಮ ಮಹಿಳಾ ಕಾರ್ಯಕರ್ತೆಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳದ ಶಿವಸೇನೆ ಹೇಳಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶಿವಸೇನಾ ಸದಸ್ಯರಾದ ಪೆರಿಂಗಂಮ್ಮಾಲಾ ಅಜಿ, ಸುಪ್ರಿಂ ಕೋರ್ಟ್ ಆದೇಶವನ್ನ ಖಂಡಿಸಿ, ಇದೇ ಅಕ್ಟೋಬರ್ 17 ಮತ್ತು 18 ರಂದು ಪಂಪಾ ನದಿಯ ತೀರದಲ್ಲಿ ನಮ್ಮ ಮಹಿಳಾ ಕಾರ್ಯಕರ್ತರೆಲ್ಲಾ ಸೇರಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲಿರುವ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಒಂದು ವೇಳೆ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಲಿದ್ದಾರೆ ಎಂದು ಪೆರಿಂಗಂಮ್ಮಾಲಾ ಅಜಿ ಹೇಳಿದ್ದಾರೆ.

    ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವಾಗಿ ದೇಶದೆಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇರಳದ ಸರ್ಕಾರ ಮತ್ತು ಇನ್ನಿತರ ಭಕ್ತರು ಈ ಆದೇಶದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರಿಂದ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

    ಕಳೆದ ಸೆಪ್ಟಂಬರ್ 28 ರಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರಿಂ ಕೋರ್ಟ್‌ನ  ಮಹತ್ವದ ತೀರ್ಪನ್ನು ನೀಡಿತ್ತು. ಭಕ್ತಿಯನ್ನು ಲಿಂಗದ ಆಧಾರದಲ್ಲಿ ವಿವರಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕಿಗೂ-ದೈಹಿಕ ಸ್ಥಿತಿಗತಿಗೂ ಸಂಬಂಧವೇ ಇಲ್ಲ. ಅಯ್ಯಪ್ಪನ ಭಕ್ತರು ಅನ್ಯಧರ್ಮದವರಂತೆ ಪ್ರತ್ಯೇಕ ಸ್ಥಾನಮಾನ ಹೊಂದಿಲ್ಲ. ಒಂದೆಡೆ ಮಹಿಳೆಯರನ್ನು ದೇವರಂತೆ ಪೂಜಿಸುತ್ತೇವೆ. ಮತ್ತೊಂದೆಡೆ ನಿಷೇಧ ಹೇರಲಾಗಿದೆ. ಮಹಿಳೆ ದೇವರಿಗೆ ಸಮಾನವಾಗಿದ್ದು ಮಹಿಳೆಯರಿಗೆ ಶಬರಿಮಲೆಗೆ ಬಹಿಷ್ಕಾರ ಸರಿಯಲ್ಲ. ಮಹಿಳೆಯರ ಬಗೆಗಿನ ಇಬ್ಬಗೆ ನೀತಿಯಿಂದ ಆಕೆಯ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂದು ಕೋರ್ಟ್ ಹೇಳಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ದೇಶ ಬಿಡುವ ಮುನ್ನ ಅರುಣ್ ಜೇಟ್ಲಿ ಜೊತೆ ಮಾತನಾಡಿದ್ದೆ: ವಿಜಯ್ ಮಲ್ಯ

    ಲಂಡನ್: ದೇಶದ ಬ್ಯಾಂಕ್‍ಗಳಿಂದ ಸಾಲಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ತಾನು ಭಾರತವನ್ನು ತೊರೆಯುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.

    ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಇಂದು ವಿಜಯ್ ಮಲ್ಯ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಮಲ್ಯ, ಕೋರ್ಟ್ ಪ್ರವೇಶಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಈ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಹೊರಾಂಗಣದಲ್ಲಿ ಮಾತನಾಡುವ ವೇಳೆ ಮಲ್ಯ ಈ ಕುರಿತು ಮಾತನಾಡಿದ್ದು, ನನಗೆ ಜಿನಿವಾದಲ್ಲಿ ಪೂರ್ವ ನಿರ್ಧರಿತ ಸಭೆ ಇತ್ತು. ಅದ್ದರಿಂದ ಅಲ್ಲಿಗೆ ಭೇಟಿ ನೀಡಿದ್ದೆ. ಅದಕ್ಕೂ ಮುನ್ನ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಬ್ಯಾಂಕ್‍ಗಳಿಗೆ ನೀಡಬೇಕಿದ್ದ ಹಣ ಮರುಪಾವತಿ ಬಗ್ಗೆ ಮಾತುಕತೆ ನಡೆಸಿದ್ದೆ. ಇದು ಸತ್ಯ ಎಂದು ಹೇಳಿದ್ದಾರೆ.

    ವಿಜಯ್ ಮಲ್ಯರ ಹೇಳಿಕೆ ಹೊರ ಬೀಳುತ್ತಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2014ರ ವರೆಗೂ ವಿಜಯ್ ಮಲ್ಯರಿಗೆ ನನ್ನ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದಾದರೇ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ಮಲ್ಯ ಸಂಸತ್ ಭವನಕ್ಕೆ ಹಾಜರಾಗಿದ್ದರು. ಈ ವೇಳೆ ನಿಯಮಗಳನ್ನು ಮೀರಿ ನಡೆದ ಮಲ್ಯ ನಾನು ನನ್ನ ಕೊಠಡಿಗೆ ತೆರಳುತ್ತಿದ್ದ ವೇಳೆ ಎದುರು ಬಂದು ನಡೆದುಕೊಂಡು ಹೋಗುತ್ತಾ ಕೆಲ ಸಮಯ ಮಾತನಾಡಲು ಯತ್ನಿಸಿದ್ದರು. ಆದರೆ ನಾನು ಅವರ ಮಾತನ್ನು ಮುಂದುವರಿಸಲು ಅವಕಾಶ ನೀಡದೇ ನನ್ನ ಜೊತೆ ಮಾತನಾಡುವ ಅಗತ್ಯವಿಲ್ಲ. ಏನಿದ್ದರೂ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ ಎಂದು ಸೂಚಿಸಿದ್ದೆ ಎಂದು ಹೇಳಿದರು.

    https://www.facebook.com/notes/arun-jaitley/the-factual-situation/878476325674250/

    ಮಲ್ಯ ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಾತುಕತೆ ನಡೆಸಲು ಯತ್ನಿಸಿದ್ದರು. ಆದರೆ ಅವರಿಗೆ ನಾನು ಭೇಟಿ ಮಾಡಲು ಯಾವುದೇ ಅವಕಾಶವನ್ನೇ ನೀಡಿಲ್ಲ ಎಂದಾದರೆ ಇನ್ನು ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ಮಲ್ಯರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ವಿಜಯ್ ಮಲ್ಯ ದೇಶ ಬಿಡುವ ಮುನ್ನ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. ಮಲ್ಯ ದೇಶಬಿಟ್ಟು ತೆರಳಲು ಬೇಕಾದ ದಾಖಲೆಗಳನ್ನು ನೀಡಲು ಜೇಟ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ.

    ಇನ್ನು 62 ವರ್ಷದ ವಿಜಯ್ ಮಲ್ಯ ಭಾರತಕ್ಕೆ ಗಡಿಪಾರು ಮಾಡುವ ಮೂಲಕ ಭಾರತದಲ್ಲಿ ವಿಚಾರಣೆ ಎದುರಿಸಲು ಅವಕಾಶ ನೀಡುವ ಕುರಿತು ವಿಚಾರಣೆ ನಡೆಸಿದ ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಖ್ಯ ನ್ಯಾ. ಎಮ್ಮಾ ಅರ್ಬುತ್ನೋಟ್, ಡಿಸೆಂಬರ್ 10ಕ್ಕೆ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಕೋರ್ಟ್ ನಿಯಮ ಜಾರಿ ವೇಳೆ ಕೆಲ ನಿರ್ಣಯಗಳನ್ನು ತಿರುಚಲಾಗಿದೆ. ಅದನ್ನು ಸರಿಪಡಿಸಲು ಈಗಾಗಲೇ ಕೇಂದ್ರಕ್ಕಾಗಿ ಈ ಕುರಿತು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

    ಕಾವೇರಿ ಸ್ಕೀಂ ರಚನೆ ಎಂಬುವುದು ನ್ಯಾಯಾಲಯದ ತೀರ್ಮಾನವಾಗಿದ್ದು ಇದಕ್ಕೆ ಕರ್ನಾಟಕ ಸಂಪೂರ್ಣ ಬೆಂಬಲ ನೀಡಿದೆ. ಆದರೆ ನ್ಯಾಯಾಲಯದ ನಿಯಮಗಳನ್ನು ಜಾರಿಗೆ ತರುವ ವೇಳೆ ಸ್ಕೀಂ ಕರಡು ಪ್ರತಿಯಲ್ಲಿ ಕೆಲ ಲೋಪದೋಷಗಳು ಉಂಟಾಗಿದೆ. ಈ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇನೆ. ಆದರೆ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ. ಈಗ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

    ಕೇಂದ್ರದ ಪ್ರಾಧಿಕಾರ ರಚನೆ ನಿರ್ಧಾರ ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯತ್ತೇವೆ. ಈ ಕುರಿತು ಸಲಹೆ ನೀಡಲು ತಜ್ಞರನ್ನು ನೇಮಕ ಮಾಡಿಕೊಂಡಿದ್ದೇವೆ. ಆದರೆ ಕಾನೂನಾತ್ಮಾಕವಾಗಿ ಇದು ಮುಗಿದ ಅಧ್ಯಯವಾದರೂ ಸ್ಕೀಂ ರಚನೆಯಲ್ಲಿ ಈ ಸಂಬಂಧ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನಮ್ಮ ರಾಜ್ಯದ ಅಹವಾಲು ತಲುಪಿಸುತ್ತೇನೆ. ಪ್ರಾಧಿಕಾರ ರಚನೆ ವಿಚಾರದಲ್ಲಿ ನಾವು ಕೆಲವು ಸಲಹೆ ಕೊಟ್ಟಿದ್ದೆವು ಆದರೆ ಕೇಂದ್ರ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ ಎಂದು ಗುಡುಗಿದರು.

    https://www.youtube.com/watch?v=L1fxbS09L8Y

  • ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಟಾಲಿವುಡ್ ಯುವ ನಟನ ತಂದೆಗೆ 3 ವರ್ಷ ಜೈಲು!

    ಹೈದರಾಬಾದ್: ಟಾಲಿವುಡ್ ಯುವ ನಾಯಕ ನಟರಾಗಿ ಹೆಸರು ಪಡೆದಿರುವ ನಟ ರಾಜ್ ತರುಣ್ ಅವರ ತಂದೆಗೆ ವಿಶಾಖಪಟ್ಟಣ ಸ್ಥಳೀಯ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ನಟ ರಾಜ್ ತರುಣ್ ಅವರ ತಂದೆ ನಿಡಮರ್ತಿ ಬಸವರಾಜು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ ಆರೋಪದ ಮೇಲೆ ಅವರಿಗೆ ನ್ಯಾಯಾಲಯ 3 ವರ್ಷ ಜೈಲು ಹಾಗೂ 20 ಸಾವಿರ ರೂ. ದಂಡವನ್ನು ವಿಧಿಸಿದೆ.

    ಏನಿದು ಪ್ರಕರಣ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಡಮರ್ತಿ ಬಸವರಾಜು 2013 ರಲ್ಲಿ ತಮ್ಮ ಪತ್ನಿ ರಾಜ್ಯಲಕ್ಷ್ಮಿ ಸೇರಿದಂತೆ ಹಲವರ ಹೆಸರಿನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿದ್ದಾರೆ.

    ಬ್ಯಾಂಕ್ ಅಧಿಕಾರಿಗಳು ವಾರ್ಷಿಕ ಲೆಕ್ಕ ಪರಿಶೀಲನೆ ನಡೆಸಿದ ವೇಳೆ ಈ ಕುರಿತು ಅನುಮಾನಗೊಂಡು ತನಿಖೆ ನಡೆಸಿದ್ದು, ಬಳಿಕ ಬಸವರಾಜು ನಡೆಸಿದ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 9.85 ಲಕ್ಷ ರೂ. ಹಣವನ್ನು ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಘಟನೆ ಕುರಿತು ದೂರು ನೀಡಿದ್ದರಿಂದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಿಡಮರ್ತಿ ಬಸವರಾಜುಗೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.