Tag: judges

  • 2018 ರಿಂದ ನೇಮಕಗೊಂಡ 698 ಮಂದಿ ನ್ಯಾಯಧೀಶರಲ್ಲಿ 108 ಮಹಿಳೆಯರು – ಮೇಘವಾಲ್

    2018 ರಿಂದ ನೇಮಕಗೊಂಡ 698 ಮಂದಿ ನ್ಯಾಯಧೀಶರಲ್ಲಿ 108 ಮಹಿಳೆಯರು – ಮೇಘವಾಲ್

    ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರಾಗಿ 2018 ರಿಂದ ನೇಮಕಗೊಂಡ 698 ಮಂದಿಯಲ್ಲಿ 108 ಮಹಿಳೆಯರಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

    ಈ ಅವಧಿಯಲ್ಲಿ 22 ಮಂದಿ ಎಸ್‌ಸಿ ಸಮುದಾಯಕ್ಕೆ ಸೇರಿದವರು, 15 ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದವರು, 87 ಮಂದಿ ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯದವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ದೇಶದಾದ್ಯಂತ ನ್ಯಾಯಾಲಯಗಳಲ್ಲಿ ನೇಮಕಗೊಂಡ ಒಟ್ಟು ನ್ಯಾಯಾಧೀಶರಲ್ಲಿ ಎಸ್‌ಸಿ/ಎಸ್‌ಟಿ ನ್ಯಾಯಾಧೀಶರ ಶೇಕಡಾವಾರು ಪ್ರಮಾಣ ಮತ್ತು ಹೈಕೋರ್ಟ್‌ಗಳಲ್ಲಿ ಹೆಚ್ಚಿನ ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ನ್ಯಾಯಾಧೀಶರನ್ನು ನೇಮಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸಂಸದ ನೀರಜ್ ಡಾಂಗಿ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ.

    ಜಿಲ್ಲಾ ನ್ಯಾಯಾಂಗದ ನ್ಯಾಯಾಧೀಶರ ನೇಮಕದ ಬಗ್ಗೆ ಕೇಂದ್ರೀಯವಾಗಿ ನಿರ್ವಹಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಇನ್ನು 2018 ರಿಂದ, ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡಿದವರು ತಮ್ಮ ಸಾಮಾಜಿಕ ಹಿನ್ನೆಲೆಯ ಬಗ್ಗೆ ವಿವರಗಳನ್ನು ನಿಗದಿಪಡಿಸಲಾಗಿದೆ ನಮೂನೆಯಲ್ಲಿ ಒದಗಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

    ಕಾನೂನು ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 20,466 ನ್ಯಾಯಾಧೀಶರಲ್ಲಿ, 3,871 ನ್ಯಾಯಾಧೀಶರು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದರೆ, ಒಟ್ಟು ಬಲದ ಶೇ. 19 ರಷ್ಟಿದ್ದಾರೆ.

  • ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ – ಸಚಿವ ಕಿರಣ್ ರಿಜಿಜು

    ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ – ಸಚಿವ ಕಿರಣ್ ರಿಜಿಜು

    ಮುಂಬೈ: ಸುಪ್ರೀಂ ಕೋರ್ಟ್ (Supreme Court) ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ (High Court Judges) ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiran Rijiju) ಹೇಳಿದ್ದಾರೆ. ನ್ಯಾಯಾಧೀಶರ ನಿವೃತ್ತಿ ವಯಸ್ಸು ಮತ್ತು ನ್ಯಾಯಾಂಗದಲ್ಲಿ ಪ್ರಕರಣಗಳು ಬಾಕಿ ಉಳಿಯಲು ಕಾರಣವಲ್ಲ ಎಂದು ತಿಳಿಸಿದರು.

    ಮುಂಬೈನಲ್ಲಿ ನಡೆದ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನ್ಯಾಯಾಧೀಶರ ಅಧಿಕಾರವಧಿಯನ್ನು ಹೆಚ್ಚಿಸುತ್ತಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ 65 ವರ್ಷ ಮತ್ತು ಹೈಕೋರ್ಟ್‌ಗೆ 62 ವರ್ಷ ನಿವೃತ್ತಿ ವಯಸ್ಸು ಸರಿ ಎಂದು ಭಾವಿಸುತ್ತೇವೆ. ಮುಂದೆ ಇದು ಬದಲಾಗಬಹುದು. ಆದರೆ ಸದ್ಯ ಸರ್ಕಾರದ ಮುಂದೆ ಈ ಬಗ್ಗೆ ಪ್ರಸ್ತಾಪಗಳಿಲ್ಲ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – BJPಗೆ ಗುಡ್ ಬೈ ಹೇಳಿದ ಹಿರಿಯ ನಾಯಕ

    court order law

    ನ್ಯಾಯಾಂಗದಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಪ್ರಕರಣಗಳ ಬಾಕಿ ಹೆಚ್ಚಿದೆ ಎಂಬ ತಪ್ಪು ಕಲ್ಪನೆ ಇದೆ. ಪ್ರಕರಣಗಳ ವಿಲೇವಾರಿಗೆ ನ್ಯಾಯಾಧೀಶರ ವಯಸ್ಸು ಅಥವಾ ಖಾಲಿ ಇರುವ ಹುದ್ದೆಗೆ ಯಾವುದೇ ಸಂಬಂಧವಿಲ್ಲ. ಜನರು ಈ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ದೊಡ್ಡ ಹುದ್ದೆಗಳ ಖಾಲಿ ಕಾರಣ ಪ್ರಕರಣಗಳು ಬಾಕಿ ಉಳಿದಿವೆ ಎನ್ನುವುದು ನಿಜವಲ್ಲ.

    ಈ‌ ನಡುವೆ ಅನರ್ಹ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿವೆ. ಇದು ನ್ಯಾಯಾಂಗದ ಹೊರೆಯನ್ನು ಹೆಚ್ಚಿಸುತ್ತವೆ. ಪ್ರಕರಣಗಳ ಸಂಖ್ಯೆಯನ್ನು ನೋಡಿದರೆ, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ವಾಸ್ತವವಾಗಿ ವಿಚಾರಣೆಗೆ ಪಟ್ಟಿ ಮಾಡಲು ಅರ್ಹವಾಗಿಲ್ಲ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳಲ್ಲಿ ತಮ್ಮನ್ನು ಏಕೆ ತೊಡಗಿಸಿಕೊಳ್ಳಬೇಕು? ಪ್ರತಿ ಜಾಮೀನು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದೆ. ಇದನ್ನೂ ಓದಿ: ಒಂದು ಲಕ್ಷ ಸರ್ಕಾರಿ ಉದ್ಯೋಗ, ಉಚಿತ ವಿದ್ಯುತ್ – ಹಿಮಾಚಲ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ

    ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳ ವಿಚಾರಣೆಗಾಗಿ ಮಾಡಿದೆಯೇ? ಜಾಮೀನು ಅರ್ಜಿಗಳನ್ನು ಕೆಳ ನ್ಯಾಯಾಲಯಗಳು ವ್ಯವಹರಿಸಬೇಕು, ಸೀಮಿತ ಪ್ರಕರಣಗಳು ಹೈಕೋರ್ಟ್‌ಗೆ ಬರಬೇಕು, ಸುಪ್ರೀಂ ಕೋರ್ಟ್‌ನಲ್ಲಿ ಗಂಭೀರ ಪ್ರಕರಣಗಳ ವಿಚಾರಣೆ ನಡೆಯಬೇಕು, ಮರಣದಂಡನೆ ಅಥವಾ ಕೆಲವು ಗಂಭೀರ ಪ್ರಕರಣಗಳ ಹೊರತು ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಗಳನ್ನು ಏಕೆ ನಿಭಾಯಿಸಬೇಕು ಎಂದು ಪ್ರಶ್ನಿಸಿದರು.

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕರ್ನಾಟಕ ಹೈಕೋರ್ಟ್‌ನ ನೂತನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಬೋಧಿಸಿದರು.

    ನ್ಯಾ. ಅನಿಲ್ ಭೀಮಸೇನ ಕಟ್ಟಿ, ನ್ಯಾ. ಗುರುಸಿದ್ದಯ್ಯ ಬಸವರಾಜ, ನ್ಯಾ. ಚಂದ್ರಶೇಖರ ಮೃತ್ಯುಂಜಯ ಜೋಶಿ, ನ್ಯಾ. ಉಮೇಶ್ ಮಂಜುನಾಥ್ ಭಟ್ ಅಡಿಗ ಮತ್ತು ನ್ಯಾ. ತಲಕಾಡ್ ಗಿರಿಗೌಡ ಶಿವಶಂಕರೇಗೌಡ ಅವರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದನ್ನೂ ಓದಿ: ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ: ಮಾಧುಸ್ವಾಮಿ

    ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಾಧೀಶರಾದ ಅಲೋಕ್ ಆರಾಧೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ, ಸಚಿವರಾದ ಡಾ.ಕೆ.ಸುಧಾಕರ್, ನಾಗೇಶ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಟಿ ರವಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದ ಪ್ರಣವಾನಂದ ಸ್ವಾಮೀಜಿ ನಿಧನ

    Live Tv
    [brid partner=56869869 player=32851 video=960834 autoplay=true]

  • ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

    ಬೆಂಗಳೂರು: ಹಿಜಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ʼವೈʼ ಶ್ರೇಣಿಯ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಹಿಜಾಬ್ ತೀರ್ಪು ನೀಡಿದ ಮೂವರೂ ನ್ಯಾಯಮೂರ್ತಿಗಳಿಗೆ ʻವೈʼ ಶ್ರೇಣಿ ಭದ್ರತೆ ನೀಡಲು ನಿರ್ಧರಿಸಿದ್ದೇವೆ. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಐಜಿ ಅವರಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್

    ಮೂವರು ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಕೂಡ ಸೇರಿದ್ದಾರೆ. ಹಿಜಬ್‌ ಬಗ್ಗೆ ತೀರ್ಪು ನೀಡಿದ ತ್ರಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಖಾಝಿ ಎಂ ಜೈಬುನ್ನಿಸಾ ಅವರೂ ಇದ್ದರು.

    ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದರು.

    ಸಮುದಾಯದ ಪರವಾಗಿರುವುದು ಜಾತ್ಯತೀತತೆ ಅಲ್ಲ, ಅದು ಕೋಮುವಾದ. ನಾನು ಇದನ್ನು ಖಂಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕು. ಇದನ್ನು ಸರ್ಕಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು

    ಹಿಜಬ್‌ ತೀರ್ಪು ಪ್ರಕಟಿಸಿದ ಹೈಕೋರ್ಟ್‌ ನ್ಯಾಯಾಧೀಶರಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿದೆ. ತೌಹೀದ್‌ ಜಮಾತ್‌ ಸಂಘಟನೆ ಬೆದರಿಕೆ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಬೆನ್ನಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಾಗಿದೆ.

    ತರಗತಿಗಳಲ್ಲಿ ಹಿಜಬ್‌ ಧರಿಸಿ ಹೋಗುವಂತಿಲ್ಲ. ಸಮವಸ್ತ್ರ ನಿಯಮ ಪಾಲನೆ ಮಾಡಬೇಕು ಎಂದು ಈಚೆಗೆ ತೀರ್ಪು ನೀಡಿದ್ದ ಹೈಕೋರ್ಟ್‌, ಹಿಜಬ್‌ ಪರವಾಗಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

    ವೈ ಶ್ರೇಣಿ ಭದ್ರತೆ ಹೇಗಿರುತ್ತೆ?
    ವೈ ಶ್ರೇಣಿಯಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 8 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು.

  • 400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    400 ವರ್ಷಗಳ ಹಿಂದಿನ ಕಲ್ಯಾಣಿಯ ಸ್ವಚ್ಛತೆಗೆ ಮುಂದಾದ ನ್ಯಾಯಾಧೀಶರು

    ಬೆಂಗಳೂರು: ನಗರಗಳ ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟೋ ಪುರಾತನ ಕಟ್ಟಡಗಳು, ಕೆರೆಗಳು, ಕಲ್ಯಾಣಿಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸಗಳೇ ಮುಚ್ಚಿ ಹೋಗಿವೆ. ಅಳಿವಿನಂಚಿನ ಕಲ್ಯಾಣಿಯನ್ನು ಕಂಡ ನ್ಯಾಯಾಧೀಶರು ತಮ್ಮ ತಂಡವನ್ನು ಕಟ್ಟಿಕೊಂಡು ಸ್ವಚ್ಛತೆಗೆ ಮುಂದಾಗಿ ಮತ್ತೆ ಪುನರ್ಜಿವ ನೀಡಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್‍ನ ಸಿಡಿಹೊಸಕೋಟೆ ರಸ್ತೆಯಲ್ಲಿರುವು ಪುಷ್ಕರಾಣಿ ಕಲ್ಯಾಣಿಯಲ್ಲಿ ಬೆಳೆದಿರುವ ಗಿಡಗಳನ್ನು ಕಿತ್ತು ಸ್ವಚ್ಛತೆಗೆ ಮುಂದಾಗಿದ್ದಾರೆ. ಈ ಪುಷ್ಕರಾಣಿ ಕಲ್ಯಾಣಿಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ಆನೇಕಲ್ ತಾಲೂಕಿಗೆ ಪ್ರಸಿದ್ಧಿಯಾಗಿತ್ತು. ಪಾಳೇಗಾರರು ಆಳ್ವಿಕೆ ಮಾಡುವ ಕಾಲದಲ್ಲಿ ಆನೇಕಲ್ ನ ದೊಡ್ಡಕೆರೆ ಹಾಗೂ ಈ ಕಲ್ಯಾಣಿಯನ್ನು ನಿರ್ಮಿಸಿದ್ದರು. ಕಲ್ಯಾಣಿಯಲ್ಲಿ ಜನ ನೀರು ಕುಡಿಯುವುದು ಬಟ್ಟೆ ತೊಳೆಯುವುದು ಹಾಗೂ ಜನ ಈಜಲು ಬಳಸುತ್ತಿದ್ದರು.

    ಕಳೆದ 20 ವರ್ಷಗಳಿಂದ ಈ ಕಲ್ಯಾಣಿಯಲ್ಲಿ ಮಣ್ಣು ತುಂಬಿಕೊಂಡು ನೀರು ಸಹ ಇಂಗಿ ಹೋಗಿದ್ದು ಆಳಿವಿನಂಚಿಗೆ ತಲುಪಿತ್ತು. ಇದನ್ನು ಕಂಡ ಆನೇಕಲ್ ನ ನ್ಯಾಯಾಧೀಶರು ತಂಡ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಇಂದು ಮಣ್ಣನ್ನು ತೆಗೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಸಂಪೂರ್ಣವಾಗಿ ಸ್ವಚ್ಛಗೊಳ್ಳಲಿದೆ.

    ಆನೇಕಲ್ ನ ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗೋಕುಲ್ ಮತ್ತು ಪ್ರಶಾಂತ್ ಆನೇಕಲ್ ನಿಂದ ಸಿಡಿಹೊಸಕೋಟೆಯ ರಸ್ತೆಯಲ್ಲಿ ವಾಯುವಿಹರಕೆಂದು ಹೋಗುವ ವೇಳೆ ಈ ಕಲ್ಯಾಣಿಯನ್ನು ಕಂಡಿದ್ದಾರೆ. ನಂತರ ಆನೇಕಲ್ ನ ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಈ ಪುಷ್ಕರಾಣಿ ಕಲ್ಯಾಣಿಯ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲು ಮುಂದಾಗಿದ್ದಾರೆ.

    ಕಲ್ಯಾಣಿ ಇನ್ನೊಂದು ವಾರಗಳಲ್ಲಿ ಕೊನೆಯ ಹಂತಕ್ಕೆ ಬರಲಿದೆ. ಈ ಸ್ವಚ್ಛತೆಯ ಕೆಲಸದಲ್ಲಿ ನ್ಯಾಯಾಲಯದಲ್ಲಿನ ಎಲ್ಲ ಸಿಬ್ಬಂದಿ ವಕೀಲರು ಭಾಗವಹಿಸಿದ್ದು, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ನ್ಯಾಯಾಧೀಶರೊಂದಿಗೆ ಯಾವುದೇ ಬೇಧವಿಲ್ಲದೆ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಧೀಶರು ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ರಾಜ್ಯ ಹೈಕೋರ್ಟಿಗೆ ಐವರು ಖಾಯಂ ನ್ಯಾಯಾಧೀಶರ ನೇಮಕ

    ರಾಜ್ಯ ಹೈಕೋರ್ಟಿಗೆ ಐವರು ಖಾಯಂ ನ್ಯಾಯಾಧೀಶರ ನೇಮಕ

    ನವದೆಹಲಿ: ಕರ್ನಾಟಕ ಹೈಕೋರ್ಟಿಗೆ ಖಾಯಂ ನ್ಯಾಯಾಧೀಶರ ನೇಮಕ ಮಾಡಲಾಗಿದೆ. ಹೆಚ್ಚುವರಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ಐದು ಮಂದಿ ನ್ಯಾಯಾಧೀಶರನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

    ನ್ಯಾ. ದೀಕ್ಷಿತ್ ಕೃಷ್ಣ ಶ್ರೀ ಪಾದ, ನ್ಯಾ. ಶಂಕರ್ ಗಣಪತಿ ಪಂಡಿತ್, ನ್ಯಾ.ರಾಮಕೃಷ್ಣ ದೇವದಾಸ್, ನ್ಯಾ. ಸಿದ್ದಪ್ಪ ಸುನೀಲ್ ದತ್ ಯಾದವ್, ನ್ಯಾ.ಬಿ. ಮಲ್ಲಿಕಾರ್ಜುನ ಶ್ಯಾಮ್ ಪ್ರಸಾದ್ ನೇಮಕ ಗೊಂಡಿರುವ ಖಾಯಂ ನ್ಯಾಯಾಧೀಶರು.

    ಖಾಯಂ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಕರ್ನಾಟಕದ ಹೈಕೋರ್ಟಿನಿಂದ ಸುಪ್ರೀಂಕೋರ್ಟ್ ಕೊಲಿಜಿಯಂ ಮನವಿ ಮಾಡಲಾಗಿತ್ತು. ಮನವಿ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ್ದ ಸುಪ್ರೀಂಕೋರ್ಟ್ ಕೊಲಿಜಿಯಂ ಹೆಚ್ಚುವರಿ ನ್ಯಾಯಧಿಶರನ್ನು ಖಾಯಂ ಮಾಡಿ ಆದೇಶ ಹೊರಡಿಸಿದೆ.

  • ನ್ಯಾಯಾಧೀಶ ಪರೀಕ್ಷಾರ್ಥಿಗಳಿಗೆ ನ್ಯಾಯಾಧೀಶರ ಉಚಿತ ತರಬೇತಿ

    ನ್ಯಾಯಾಧೀಶ ಪರೀಕ್ಷಾರ್ಥಿಗಳಿಗೆ ನ್ಯಾಯಾಧೀಶರ ಉಚಿತ ತರಬೇತಿ

    ರಾಮನಗರ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಜಿಲ್ಲಾ ಒಂದನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳ ಸಿದ್ದರಾಮರವರು ಉಚಿತವಾಗಿ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿ ವಕೀಲರಿಗೆ ಭಾನುವಾರ ನ್ಯಾಯಾಲಯದ ಆವರಣದಲ್ಲಿ ವಿಶೇಷ ತರಬೇತಿಯನ್ನು ನಡೆಸುವ ಮೂಲಕ ಭೋಧನೆ ನೀಡಿದ್ರು.

    ಕಳೆದ ಎರಡು ವಾರಗಳಿಂದ ಪ್ರತಿ ಭಾನುವಾರ ಜಿಲ್ಲೆಯ ಆಸಕ್ತ ವಕೀಲರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 10ಕ್ಕೆ ಆರಂಭವಾದ ತರಗತಿಯೂ, ಸಂಜೆ 5ರವರೆಗೂ ನಡೆಯಿತು. ನ್ಯಾಯಾಧೀಶ ಮರುಳ ಸಿದ್ದರಾಮರವರ ಭೋಧನ ತರಗತಿಗೆ ರಾಮನಗರ ಜಿಲ್ಲೆಯ ವಕೀಲರಲ್ಲದೇ ತುಮಕೂರು, ಮೈಸೂರು, ಹಾಸನ ಜಿಲ್ಲೆಯ 40ಕ್ಕೂ ಹೆಚ್ಚು ವಕೀಲರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಭಾನುವಾರ ನಡೆದ ತರಗತಿಯಲ್ಲಿ ದಿವಾಣಿ ಪ್ರಕ್ರಿಯಾ ಸಂಹಿತೆ(ಸಿಪಿಸಿ) ಕುರಿತು ನ್ಯಾಯಾಧೀಶರು ವಕೀಲರಿಗೆ ಮನದಟ್ಟಾಗುವಂತೆ ಬೋಧನೆ ಮಾಡಿದರು. ಸಿಪಿಸಿ ಕಾಯ್ದೆ ಯಾವ ಕೇಸ್‍ಗಳಿಗೆಲ್ಲ ಅನ್ವಯವಾಗಲಿದೆ. ಅದರಿಂದ ಯಾವ ರೀತಿಯ ಕೇಸ್‍ಗಳಿಗೆ ಪರಿಹಾರ ನೀಡಬಹುದು. ಅಲ್ಲದೇ ಕೇಸ್ ಪರಿಗಣಿಸುವ ಸಂದರ್ಭದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನ್ಯಾಯಾಧೀಶರು ಭೋಧನೆ ಮಾಡಿದರು. ಅದರಲ್ಲೂ ಪರೀಕ್ಷಾರ್ಥಿಗಳಿಗೆ ಬಹುಬೇಗನೆ ಅರ್ಥವಾಗಲೆಂದು ದಿವಾಣಿ ಪ್ರಕ್ರಿಯಾ ಸಂಹಿತೆಯ ಕುರಿತು ಸರಳವಾಗಿ ಅರ್ಥವಾಗುವಂತೆ ವಿವರಿಸಿದರು.

    ನ್ಯಾಯಾಧೀಶರ ಈ ಉಚಿತ ತರಬೇತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲರಾದ ಎಸ್.ವೀರಭದ್ರಯ್ಯ, ಜಿಲ್ಲೆಗೆ ನ್ಯಾಯಾಧೀಶರಾಗಿ ಆಗಮಿಸಿರುವ ಮರುಳ ಸಿದ್ದರಾಮ ಅವರು ಯುವ ಹಾಗೂ ನ್ಯಾಯಾಧೀಶರಾಗಬೇಕೆಂದು ಕನಸು ಕಾಣುತ್ತಿರುವ ವಕೀಲರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ತಮ್ಮ ಭಾನುವಾರದ ಬಿಡುವಿನ ವೇಳೆಯಲ್ಲಿ ವಿಶೇಷ ತರಗತಿ ಆಯೋಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

    ಕಳೆದ ಭಾನುವಾರವೂ ನ್ಯಾಯಾಲಯದ ಆವರಣದಲ್ಲಿ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿತ್ತು. ಅದು ಈ ವಾರವೂ ಸಹ ಮುಂದುವರಿದಿದೆ. ನ್ಯಾಯಾಧೀಶರ ಈ ನಿಸ್ವಾರ್ಥ ಹಾಗೂ ಯುವ ಸಮುದಾಯಕ್ಕೆ ಅನುಕೂಲವಾಗಲೆಂದು ನಡೆಸುತ್ತಿರುವ ಉಚಿತ ತರಬೇತಿಯ ಬಗ್ಗೆ ಇದೀಗ ರಾಜ್ಯದ ಹಲವೆಡೆಗಳಿಂದಲೂ ಸಹ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

  • ವಿಡಿಯೋ: ಅಮೆರಿಕದಲ್ಲಿ ಮುಂಬೈ ಡ್ಯಾನ್ಸರ್ ಕಮಾಲ್- ತೀರ್ಪುಗಾರರು ಫಿದಾ

    ವಿಡಿಯೋ: ಅಮೆರಿಕದಲ್ಲಿ ಮುಂಬೈ ಡ್ಯಾನ್ಸರ್ ಕಮಾಲ್- ತೀರ್ಪುಗಾರರು ಫಿದಾ

    ವಾಷಿಂಗ್ಟನ್: ಅಮೆರಿಕದ ವೇದಿಕೆಯಲ್ಲಿ ಮುಂಬೈ ಡ್ಯಾನ್ಸ್ ತಂಡದ ಡ್ಯಾನ್ಸ್ ನೋಡಿ ತೀರ್ಪುಗಾರರು ಫುಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದಾರೆ.

    ಅಮೆರಿಕದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಅಮೆರಿಕ ಗಾಟ್ ಟ್ಯಾಲೆಂಟ್” ನಲ್ಲಿ ಮುಂಬೈ ‘ವಿ. ಅನ್‍ಬೀಟಬಲ್’ ಟೀಂ ಭಾಗವಹಿಸಿತ್ತು. ಈ ಶೋನಲ್ಲಿ ವಿ. ಅನ್‍ಬೀಟಬಲ್ ತಂಡ ನೃತ್ಯ ಪ್ರದರ್ಶಿಸಿದ್ದು, ಈ ತಂಡದ ನೃತ್ಯ ನೋಡಿ ತೀರ್ಪುಗಾರರಾದ ಗೇಬ್ರಿಲ್ ಯೂನಿಯನ್, ಹೌವಿ ಮ್ಯಾಂಡೆಲ್, ಜುಲಿಯನ್ ಹಗ್ ಮತ್ತು ಸೈಮನ್ ಕೋವೆಲ್ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

    ವಿ. ಅನ್‍ಬೀಟಬಲ್ ತಂಡ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೊಣೆ ನಟಿಸಿದ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಚಿತ್ರಕ್ಕೆ ಡ್ಯಾನ್ಸ್ ಮಾಡಿದ್ದಾರೆ. ಈ ತಂಡದಲ್ಲಿ ಒಟ್ಟು 28 ಮಂದಿ ಇದ್ದು, 12ರಿಂದ 27 ವಯಸ್ಸಿನವರು ಇದ್ದಾರೆ. ನೃತ್ಯ ಶುರು ಮಾಡುವ ಮೊದಲು ತಂಡ ‘ಗಣಪತಿ ಬಪ್ಪಾ ಮೋರಿಯಾ’ ಎಂದು ಹೇಳಿದ್ದಾರೆ. ಈ ತಂಡ ಡ್ಯಾನ್ಸ್ ಶುರು ಮಾಡಿದ ನಂತರ ಇವರ ಫ್ಲಿಪ್ಸ್ ಹಾಗೂ ಡ್ಯಾನ್ಸ್ ಮೂವ್ಸ್ ಗೆ ತೀರ್ಪುಗಾರರು ಕ್ಲೀನ್ ಬೋಲ್ಡ್ ಆಗಿದ್ದಾರೆ.

    ಈ ಡ್ಯಾನ್ಸ್ ವಿಡಿಯೋವನ್ನು ಅಮೆರಿಕ ಗಾಟ್ ಟ್ಯಾಲೆಂಟ್ ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ನೋಡಿದ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

  • ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ನಡುರಸ್ತೆಯಲ್ಲಿ ಜಡ್ಜ್ ಪತ್ನಿ, ಮಗನನ್ನು ಗುಂಡಿಕ್ಕಿ ಫೋನ್ ಮಾಡಿ ತಿಳಿಸಿದ!

    ಚಂಡೀಗಢ: ನ್ಯಾಯಾಧೀಶರ ಹೆಂಡತಿ ಮತ್ತು ಮಗನನ್ನು ಕುಟುಂಬದ ಭದ್ರತಾ ಸಿಬ್ಬಂದಿಯೇ ಸಾರ್ವಜನಿಕ ಪ್ರದೇಶದಲ್ಲಿ ಗುಂಡಿಕ್ಕಿದ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆ ನಡೆದ ಬಳಿಕ ಆರೋಪಿ ನ್ಯಾಯಾಧೀಶರಿಗೆ ಫೋನ್ ಮಾಡಿ ನಿಮ್ಮ ಪತ್ನಿ ಹಾಗೂ ಮಗನ ಮೇಲೆ ಗುಂಡು ಹಾರಿಸಿದ್ದೇನೆ ಹೋಗಿ ನೋಡಿ ಎಂದು ಹೇಳಿದ್ದಾನೆ.

    ಶನಿವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೃಷ್ಣ ಕಾಂತ್ ಅವರ ಪತ್ನಿ ರಿತು ಮತ್ತು ಮಗ ಧ್ರುವ್ ಅವರು ಆರ್ಕಾಡಿಯಾ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದರು. ಈ ವೇಳೆ ಸಂಜೆ 3.30ಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ಜಡ್ಜ್ ಪತ್ನಿ ರಿತು ಮತ್ತು ಮಗ ಧ್ರುವ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ಈಸ್ಟ್ ಸುಲೋಚನ ಗಜರಾಜ್ ತಿಳಿಸಿದ್ದಾರೆ.

    ಕಳೆದ ಒಂದೂವರೆ ವರ್ಷಗಳಿಂದಲೂ ಆರೋಪಿ ಹೆಡ್ ಕಾನ್ಸ್‌ಸ್ಟೇಬಲ್ ಮಹೇಂದ್ರಗಢ ನ್ಯಾಯಾಧೀಶರ ಕುಟುಂಬದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದನು.

    ಆರೋಪಿ ಮೊದಲು ಜಡ್ಜ್ ಪತ್ನಿ ರಿತು ಅವರಿಗೆ ಗುಂಡು ಹಾರಿಸಿ ಅನಂತರ ಮಗನಿಗೆ ಎಲ್ಲರ ಎದುರು ಶೂಟ್ ಮಾಡಿದ್ದಾನೆ. ಬಳಿಕ ಮಗ ಧ್ರುವ್ ಅವರ ದೇಹವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಪ್ರಯತ್ನ ವಿಫಲವಾದಾಗ ರಸ್ತೆಯಲ್ಲೇ ಬಿಟ್ಟು ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಪತ್ನಿ ರಿತು ಅವರಿಗೆ ಎದೆಯ ಭಾಗಕ್ಕೆ ಗುಂಡು ತಗಲಿದ್ದರೆ ಧ್ರುವ್ ತಲೆಯ ಭಾಗಕ್ಕೆ ಹೊಡೆಯಲಾಗಿದೆ. ಅವರನ್ನು ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಮಹೇಂದ್ರ ಸಿಂಗ್‍ನನ್ನು ಫರೀದಾಬಾದ್‍ನಲ್ಲಿ ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂಬುದು ತಿಳಿದು ಬಂದಿದೆ ಎಂದು ಗುರುಗ್ರಾಮ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಟೋಲ್‍ನಲ್ಲಿ ನ್ಯಾಯಾಧೀಶರು ಹಾಗೂ ಗಣ್ಯರಿಗೆ ಪ್ರತ್ಯೇಕವಾದ ಲೇನ್ ನಿರ್ಮಿಸಿ: ಮದ್ರಾಸ್ ಹೈಕೋರ್ಟ್

    ಚೆನ್ನೈ: ನ್ಯಾಯಾಧೀಶರು ಸೇರಿದಂತೆ ಗಣ್ಯರು ಹಾಗೂ ಅತೀ ಗಣ್ಯರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತ್ಯೇಕ ಟೋಲ್ ಬೂತ್‍ಗಳನ್ನು ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಟೋಲ್ ಬಳಿ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳು ಗಂಟೆಗಟ್ಟಲೇ ಕಾಯುವುದಲ್ಲದೇ, ತಮ್ಮ ದಾಖಲೆಗಳನ್ನು ತೋರಿಸುವುದರಿಂದ ಮುಜುಗರಕ್ಕಿಡಾಗುತ್ತದೆ. ಆದ್ದರಿಂದ ಎಲ್ಲಾ ನ್ಯಾಯಾಧೀಶರು ಹಾಗೂ ಗಣ್ಯ ವ್ಯಕ್ತಿಗಳಿಗಾಗಿಯೇ ಪ್ರತ್ಯೇಕವಾದ ಟೋಲ್ ಪ್ಲಾಜಾಗಳನ್ನು ನಿರ್ಮಿಸುವಂತೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಹುಲುವಾಡಿ ಜಿ ರಮೇಶ್ ಮತ್ತು ಎಂ.ವಿ.ಮುರಳೀಧರ ಅವರ ದ್ವಿಸದಸ್ಯ ಪೀಠ ಆದೇಶಿಸಿದೆ.

    ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರಕ್ಕೆ ನೋಟಿಸ್ ನೀಡುವುದಾಗಿಯೂ ಪೀಠ ತಿಳಿಸಿದೆ.

    ಈ ಆದೇಶವನ್ನು ದೇಶಾದ್ಯಂತ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪ್ರಾಧಿಕಾರಕ್ಕೆ ಮದ್ರಾಸ್ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.

    ಮದ್ರಾಸ್ ಹೈಕೋರ್ಟ್ ಆದೇಶವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವ ರೀತಿ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv