Tag: JR Lobo

  • ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಕ್ರಿಸ್ಮಸ್, ಹೊಸವರ್ಷದ ನೆಪದಲ್ಲಿ ಬಾಡೂಟ- ಮತದಾರರ ಓಲೈಕೆಗೆ ಶಾಸಕ ಜೆ.ಆರ್ ಲೋಬೊ ಯತ್ನ?

    ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಎಚ್ಚೆತ್ತುಕೊಂಡಿದ್ದು, ಮತದಾರರ ಓಲೈಕೆಗೆ ಕಸರತ್ತು ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಶಾಸಕ ಜೆ.ಆರ್ ಲೋಬೊ ಕ್ರಿಸ್ಮಸ್ ಹಾಗೂ ಹೊಸವರ್ಷದ ಆಚರಣೆ ನೆಪದಲ್ಲಿ ಮತದಾರರಿಗೆ ಬಾಡೂಟ ಆಯೋಜಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಡಿ.30 ರಂದು ಮಂಗಳೂರಿನ ಆಗ್ನೆಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಬಿರಿಯಾನಿ, ಕಬಾಬ್ ಜೊತೆಗೆ ಬಾಡೂಟ ಸವಿದ ಮತದಾರರಿಗೆ ಸ್ವತಃ ಶಾಸಕ ಲೋಬೊ ಅಭಿನಂದನೆ ಸಲ್ಲಿಸುತ್ತಿದ್ದರು. ಶಾಸಕ ಲೋಬೊ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಬಾಡೂಟ ಆಯೋಜನೆ ಮಾಡಿದ್ದರು.

    ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಳೆದ ಮೂರು ವರ್ಷದಿಂದ ಕ್ರಿಸ್ಮಸ್ ಮತ್ತು ದೀಪಾವಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಐವನ್ ಡಿಸೋಜ ಕ್ರಿಸ್ಮಸ್ ಆಚರಣೆ ಮಾಡಿದ್ದರು. ಆದರೆ ಈ ಸಲ ಚುನಾವಣಾ ವರ್ಷವಾಗಿದ್ದು ಮತ್ತೊಂದು ಕಡೆ ಐವನ್ ಡಿಸೋಜ ವಿಧಾನಸಭೆಗೆ ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ.

    ಈ ಕಾರಣದಿಂದಲೋ ಏನೋ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಭರ್ಜರಿ ಊಟ, ಆರ್ಕೆಸ್ಟ್ರಾ ಮೂಲಕ ಮನರಂಜನೆ ನೀಡಿ ಮಂಗಳೂರಿನಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಕ್ರಿಶ್ಚಿಯನ್ ಮತದಾರರ ಓಲೈಕೆ ಮಾಡಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.