Tag: JP Nadda

  • ದೆಹಲಿ ಭೇಟಿಗೂ ಮುನ್ನ ಬಿಎಸ್‍ವೈಗೆ ಶಾಕ್-ಇಂದು ಹೈಕಮಾಂಡ್ ಭೇಟಿ ಅನುಮಾನ

    ದೆಹಲಿ ಭೇಟಿಗೂ ಮುನ್ನ ಬಿಎಸ್‍ವೈಗೆ ಶಾಕ್-ಇಂದು ಹೈಕಮಾಂಡ್ ಭೇಟಿ ಅನುಮಾನ

    ನವದೆಹಲಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಹೈಕಮಾಂಡ್ ಬುಲಾವ್ ಮೇರೆಗೆ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಬೆಳಗ್ಗೆ 11-45 ಕ್ಕೆ ಬೆಂಗಳೂರಿನಿಂದ ಹೊರಡಲಿದ್ದು ಮಧ್ಯಾಹ್ನ 2-40ಕ್ಕೆ ದೆಹಲಿ ತಲುಪಲಿದ್ದಾರೆ.

    ದೆಹಲಿ ತಲುಪಲು ಮುನ್ನವೇ ಸಿಎಂ ಯಡಿಯೂರಪ್ಪಗೆ ಶಾಕಿಂಗ್ ನ್ಯೂಸ್ ಕಾದಿದ್ದು ಇಂದು ಹೈಕಮಾಂಡ್ ಭೇಟಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ರಾತ್ರಿ ಒಂಬತ್ತು ಗಂಟೆಗೆವರೆಗೂ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

    ಮಧ್ಯಾಹ್ನ ಮೂರು ಗಂಟೆಯಿಂದ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿರುವ ಗೃಹ ಸಚಿವ ಅಮಿತ್ ಶಾ, 3:30 ರಿಂದ ರಾತ್ರಿ 8:30 ವರೆಗೂ ನಾಲ್ಕು ಕಡೆ ಪ್ರಚಾರ ಮತ್ತು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಯಿಂದ ರಾತ್ರಿ 7:30ವರೆಗೂ ಜೆ.ಪಿ ನಡ್ಡಾ ಮೂರು ಕಡೆ ಪ್ರತ್ಯೇಕ ಪ್ರಚಾರ ಮಾಡಲಿದ್ದು ಬಹಿರಂಗ ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ.

    ಹೀಗಾಗಿ ಹೈಕಮಾಂಡ್ ಬಹುತೇಕ ರಾತ್ರಿ ಒಂಬತ್ತು ಗಂಟೆಯವರೆಗೂ ಚುನಾವಣಾ ಕಾರ್ಯಗಳಲ್ಲಿ ನಿರತವಾಗಿರುವುದರಿಂದ ಇಂದು ಭೇಟಿ ಅನುಮಾನ ಎನ್ನಲಾಗುತ್ತಿದೆ. ಹೈಕಮಾಂಡ್ ಮನಸ್ಸು ಮಾಡದಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಮಾತುಕತೆ ನಡೆಸಬಹುದು ಆದರೆ ಈ ಸಾಧ್ಯತೆ ವಿರಳ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಹೀಗಾಗಿ ಸಂಪುಟ ವಿಸ್ತರಣೆ ಮಾತುಕತೆ ಇಂದೇ ಫೈನಲ್ ಆಗುತ್ತಾ ಅಥವಾ ನಾಳೆ ಮುಂದೂಡುತ್ತಾ ಅನ್ನೋ ಕುತೂಹಲ ಮೂಡಿಸಿದೆ.

  • ಹೈಕಮಾಂಡ್ ಮೆಸೇಜ್‍ಗಾಗಿ ತುದಿಗಾಲಲ್ಲಿ ಕಾಯ್ತಿರೋ ಸಿಎಂ

    ಹೈಕಮಾಂಡ್ ಮೆಸೇಜ್‍ಗಾಗಿ ತುದಿಗಾಲಲ್ಲಿ ಕಾಯ್ತಿರೋ ಸಿಎಂ

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಈ ತಿಂಗಳಾಂತ್ಯಕ್ಕೆ ಆಗುತ್ತಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ. ಇಂದು ದೆಹಲಿಯಲ್ಲಿ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾರು ಯಾರು ಮಂತ್ರಿಗಳಾಗುತ್ತಾರೆ ಎಂಬ ಸ್ಪಷ್ಟತೆ ಸಿಗುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲ ದೆಹಲಿಗೆ ಮುಖ್ಯಮಂತ್ರಿಗಳು ಹೋಗಬೇಕಾ, ಬೇಡವಾ ಅನ್ನೋ ಬಗ್ಗೆಯೂ ಇಂದೇ ತಿಳಿಯಲಿದೆ ಎನ್ನಲಾಗಿದೆ.

    ಮೊನ್ನೆಯಷ್ಟೇ ಬಿ.ಎಲ್ ಸಂತೋಷ್ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಈ ಮಾತುಕತೆಯಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಕುರಿತು ತಮ್ಮ ಪ್ರಸ್ತಾವನೆಯನ್ನು ಇಟ್ಟಿದ್ರು. ಇಂದು ಜೆ.ಪಿ ನಡ್ಡಾರವರ ಜೊತೆ ಸಂತೋಷ್ ನಡೆಸುವ ಮಾತುಕತೆಯಲ್ಲಿ ಯಡಿಯೂರಪ್ಪ ಅವರ ಪ್ರಸ್ತಾವನೆ, ಸಂಭಾವ್ಯರ ಪಟ್ಟಿ ಕುರಿತು ಚರ್ಚೆ ನಡೆಯಲಿದ್ದು, ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎನ್ನಲಾಗಿದೆ.

    ಮಾತುಕತೆ ಬಳಿಕ ಸಿಎಂ ಯಡಿಯೂರಪ್ಪ ಅವರಿಗೆ ಜೆ.ಪಿ ನಡ್ಡಾ ಅವರೇ ಸಂದೇಶ ಕಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಜೆ.ಪಿ ನಡ್ಡಾ ಅವರಿಂದ ಯಾವ ರೀತಿಯ ಸಂದೇಶ ಬರಬಹುದೆಂಬ ನಿರೀಕ್ಷೆ, ಕಾತರ, ಆತಂಕ ಯಡಿಯೂರಪ್ಪ ಅವರಲ್ಲಿ ಸದ್ಯ ಮನೆ ಮಾಡಿದೆ. ದೆಹಲಿಗೆ ಬುಲಾವ್ ಬಂದರೆ ಒಂದು ಕ್ಷಣವೂ ತಡಮಾಡದೇ ಯಡಿಯೂರಪ್ಪ ಹೊರಡಲಿದ್ದಾರೆ. ಈ ನಿರೀಕ್ಷೆಯಲ್ಲೇ ಇವತ್ತು ಕೆ.ಆರ್ ನಗರ ಮತ್ತು ಮಡಿಕೇರಿಗಳಲ್ಲಿ ನಿಗದಿಯಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

  • ಜೆಪಿ ನಡ್ಡಾಗೆ ಬಿಜೆಪಿಯ ಅಧ್ಯಕ್ಷ ಪಟ್ಟ – ಈ ಹುದ್ದೆ ಸಿಗಲು ಪ್ರಮುಖ ಕಾರಣ ಏನು?

    ಜೆಪಿ ನಡ್ಡಾಗೆ ಬಿಜೆಪಿಯ ಅಧ್ಯಕ್ಷ ಪಟ್ಟ – ಈ ಹುದ್ದೆ ಸಿಗಲು ಪ್ರಮುಖ ಕಾರಣ ಏನು?

    ನವದೆಹಲಿ: ಕಾರ್ಯಾಧ್ಯಕ್ಷರಾಗಿದ್ದ ಜಗತ್ ಪ್ರಕಾಶ್ ನಡ್ಡಾ(ಜೆಪಿ ನಡ್ಡಾ) ಅವಿರೋಧವಾಗಿ ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ದೆಹಲಿಯಲ್ಲಿ ನಡೆದ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಡ್ಡಾ ಅವರು ಪಕ್ಷದ ಅಧಿಕಾರ ಸ್ವೀಕರಿಸಿದರು. ದೆಹಲಿ ಚುನಾವಣೆಗೂ ಕೆಲವೇ ದಿನಗಳ ಮುನ್ನ ಜೆಪಿ ನಡ್ಡಾ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತು ಬಿಜೆಪಿಯನ್ನು ಗೆಲ್ಲಿಸಿದ ಬಳಿಕ ಅಮಿತ್ ಶಾ ಜುಲೈ 9 ರಿಂದ ಇಲ್ಲಿಯವರೆಗೆ ಐದುವರೆ ವರ್ಷಗಳ ಕಾಲ ಬಿಜೆಪಿ ಅಧ್ಯಕ್ಷರಾಗಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಗೆದ್ದ ಬಳಿಕ ಅಮಿತ್ ಶಾ ಗೃಹ ಖಾತೆಯನ್ನು ವಹಿಸಿಕೊಂಡರು. ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಮತ್ತು ಅಧ್ಯಕ್ಷ ಸ್ಥಾನ ಎರಡು ಹುದ್ದೆಯನ್ನು ಒಬ್ಬರೇ ಹೊಂದುವಂತಿಲ್ಲ ಎನ್ನುವ ನಿಯಮ ಇರುವ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಜೆಪಿ ನಡ್ಡಾ ಹೆಸರು ಅಧ್ಯಕ್ಷ ಸ್ಥಾನದ ಮುನ್ನೆಲೆಗೆ ಬಂದಿತ್ತು. ಈಗ ಅಧಿಕೃತವಾಗಿ ನಡ್ಡಾ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದರು.

    ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಂಬುಗೆಯ ವ್ಯಕ್ತಿ ಆಗಿರುವ ಜೆಪಿ ನಡ್ಡಾ ಎಬಿವಿಪಿ, ಆರ್‌ಎಸ್‌ಎಸ್‌ ಮೂಲಕ ಮೇಲೆ ಬಂದಿದ್ದಾರೆ. ನಿತಿನ್ ಗಡ್ಕರಿ ಅವರ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬಂದ ನಡ್ಡಾ ಅವರು 2010ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು.

    1960ರ ಡಿಸೆಂಬರ್ 2 ರಂದು ಜನಿಸಿದ ನಡ್ಡಾ ಪಾಟ್ನಾ ವಿಶ್ವವಿದ್ಯಾಲಯದಿಂದಲೇ ಬಿ.ಎ ಪದವಿ ಪಡೆದಿದ್ದು ಹಿಮಾಚಲಪ್ರದೇಶದ ಶಿಮ್ಲಾ ವಿವಿಯಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಓದಿದ್ದಾರೆ. ಉತ್ತಮ ಈಜುಪಟು ಆಗಿರುವ ನಡ್ಡಾ ಅವರು ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ್ದರು. 1991ರ ಡಿ. 11 ರಂದು ಮಲ್ಲಿಕಾ ಅವರನ್ನು ವರಿಸಿರುವ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಡ್ಡಾ ಅವರ ತಂದೆ ನಾರಾಯಣ್ ಲಾಲ್ ನಡ್ಡಾ ಪಟ್ನಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಉಸ್ತುವಾರಿಯನ್ನು ಜೆಪಿ ನಡ್ಡಾ ಅವರಿಗೆ ಅಮಿತ್ ಶಾ ನೀಡಿದ್ದರು. 2014ರ ಯಾವುದೇ ಮೈತ್ರಿ ಇಲ್ಲದೇ 71 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ 2019ರಲ್ಲಿ ಮಹಾಮೈತ್ರಿ ಏರ್ಪಟ್ಟಿದ್ದರಿಂದ ಬಿಜೆಪಿ ಇಷ್ಟು ಸ್ಥಾನ ಗೆಲ್ಲುವುದು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಅಂತಿಮ ಫಲಿತಾಂಶ ಬಂದಾಗ ಬಿಜೆಪಿ 62 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಈ ಗೆಲುವಿನ ಹಿಂದೆ ನಡ್ಡಾ ಅವರ ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿತ್ತು. ಸಂಘಟನಾ ಚಾತುರ್ಯ, ಮಾತುಗಾರಿಕೆ, ರಾಜಕೀಯ ಅನುಭವ, ದೆಹಲಿಯ ಹಿರಿಯ ನಾಯಕರ ಜೊತೆಗಿನ ಉತ್ತಮ ಸಂಬಂಧ ಇವುಗಳಿಂದಾಗಿ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಡ್ಡಾ ಆಯ್ಕೆ ಆಗಿದ್ದಾರೆ.

    2012ದಿಂದಲೂ ರಾಜ್ಯಸಭೆ ಸದಸ್ಯರಾಗಿರುವ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

  • ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ 10 ಸಾಲುಗಳನ್ನು ಮಾತನಾಡ್ಲಿ: ಜೆ.ಪಿ.ನಡ್ಡಾ ಸವಾಲು

    ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ 10 ಸಾಲುಗಳನ್ನು ಮಾತನಾಡ್ಲಿ: ಜೆ.ಪಿ.ನಡ್ಡಾ ಸವಾಲು

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 10 ಸಾಲುಗಳನ್ನು ಮಾತನಾಡಲಿ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸವಾಲು ಹಾಕಿದ್ದಾರೆ.

    ಇಂದೋರ್ ನಲ್ಲಿ ನಡೆದ ಕಾರ್ಯಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಯುವಕರಿಗೆ ಪ್ರಚೋದನೆ ನೀಡುವ ಮೂಲಕ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ. ಇಷ್ಟೆಲ್ಲ ಮಾತನಾಡುವ ರಾಹುಲ್ ಗಾಂಧಿಯವರು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 10 ಸಾಲುಗಳನ್ನು ಮಾತನಾಡಲಿ, ಇದರಲ್ಲಿ ದೇಶದ ಜನರಿಗೆ ನೋವುಂಟು ಮಾಡುವ ಎರಡು ಸಾಲಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

    ದೇಶವನ್ನು ಮುನ್ನಡೆಸಲು ಬಂದ ಜನ ಕನಿಷ್ಠ ಅಂಶಗಳ ಕುರಿತು ಸಹ ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವರು ನೀಡುವ ಪ್ರಚೋದನೆಯಿಂದಾಗಿ ದೇಶವೇ ಹೊತ್ತಿ ಉರಿಯುತ್ತಿದೆ. ಆದರೆ ಈ ಕಾಯ್ದೆ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಕುರಿತು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಸಿಎಎ ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಸಲಾಗುತ್ತಿದ್ದು, ಹಿಂಸಾತ್ಮಕ ರೂಪ ಪಡೆದಿದೆ. ಪ್ರತಿಭಟನೆಯಲ್ಲಿ ಹತ್ತಾರು ಜನ ಸಾವನ್ನಪ್ಪಿದ್ದಾರೆ. ಈ ನಡುವೆ ವಿರೋಧ ಪಕ್ಷಗಳು ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಅಲ್ಲದೆ ಆಡಳಿತ ಪಕ್ಷ ಸಹ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದೆ. ಈ ಕುರಿತು ರ್ಯಾಲಿ ನಡೆಸುವ ಮೂಲಕ ಜಾಗೃತಿ ಮೂಡಿಸಲು ಸಹ ಮುಂದಾಗಿದೆ.

  • ಪೌರತ್ವ ಕಾಯ್ದೆ – 3 ಕೋಟಿ ಕುಟುಂಬಗಳಿಗೆ ಜಾಗೃತಿ ಮೂಡಿಸಲು ಮುಂದಾದ ಬಿಜೆಪಿ

    ಪೌರತ್ವ ಕಾಯ್ದೆ – 3 ಕೋಟಿ ಕುಟುಂಬಗಳಿಗೆ ಜಾಗೃತಿ ಮೂಡಿಸಲು ಮುಂದಾದ ಬಿಜೆಪಿ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ್ಯಾಂತ ಪ್ರತಿಭಟನೆ ಕಾವು ಜೋರಾಗಿದೆ. ಉತ್ತರ ಪ್ರದೇಶದಲ್ಲಿ 15 ಮಂದಿ ಸಾವನ್ನಪ್ಪಿದ್ರೆ ರಾಜ್ಯದಲ್ಲಿ ಇಬ್ಬರು ಉಸಿರು ಚೆಲ್ಲಿದ್ದಾರೆ. ಪ್ರತಿಭಟನೆಗಳು ಇನ್ನು ಮುಕ್ತಾಯವಾಗಿಲ್ಲ ದೇಶದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿದೆ.

    ಈಗ ಪರಿಸ್ಥಿತಿ ತಣ್ಣಾಗಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ದೇಶದ್ಯಾಂತ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮುಂದಿನ ಹತ್ತು ದಿನಗಳ ಕಾಲ ರಾಜ್ಯವಾರು ಪ್ರಮುಖ ಜಿಲ್ಲೆಗಳಲ್ಲಿ ವಿಶೇಷ ಕ್ಯಾಂಪೇನ್ ಮಾಡಲು ನಿರ್ಧರಿಸಿಲಾಗಿದೆ. ಈ ಬಗ್ಗೆ ಇಂದು ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ ನಡ್ಡಾ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಚರ್ಚೆ ಬಳಿಕ ದೇಶದ್ಯಾಂತ ಜಾಗೃತಿ ಮೂಡಿಸುವ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ.

    ಈಗಾಗಲೇ ರಾಜ್ಯ ಬಿಜೆಪಿ ಘಟಕಗಳು ಕಾರ್ಯಕರ್ತರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರ ಆರಂಭಿಸಿದೆ. ಬಳಿಕ ಕಾರ್ಯಕರ್ತರ ಮೂಲಕ ದೇಶದ ಜನರ ಮನೆ ಬಾಗಿಲಿಗೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

    ದೇಶದ ಪ್ರಮುಖ 250 ಪ್ರದೇಶಗಳಲ್ಲಿ ರ‍್ಯಾಲಿಗಳು, ಸುದ್ದಿಗೋಷ್ಠಿ ನಡೆಸುವ ಮೂಲಕ ಪೌರತ್ವ ಕಾಯ್ದೆ ಬಗ್ಗೆ ತಿಳುವಳಿಕೆ ಮೂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಮೂಲಕ ಮೂರು ಕೋಟಿ ಕುಟುಂಬಗಳನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೋಪೇಂದ್ರ ಯಾದವ್ ನವದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

  • ಉಪ ಚುನಾವಣೆ ರಣತಂತ್ರ: ದ್ರಾವಿಡ್‍ರನ್ನ ಭೇಟಿಯಾದ ಬಿಜೆಪಿ ನಾಯಕರು

    ಉಪ ಚುನಾವಣೆ ರಣತಂತ್ರ: ದ್ರಾವಿಡ್‍ರನ್ನ ಭೇಟಿಯಾದ ಬಿಜೆಪಿ ನಾಯಕರು

    ಬೆಂಗಳೂರು: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿದ್ದಾರೆ.

    ಡಾಲರ್ಸ್ ಕಾಲೋನಿಯಲ್ಲಿರುವ ರಾಹುಲ್ ದ್ರಾವಿಡ್ ನಿವಾಸಕ್ಕೆ ಭೇಟಿ ನೀಡಿದ ನಡ್ಡಾ ಅವರಿಗೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅರುಣ್ ಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದರು. ಈ ವೇಳೆ ಬಿಜೆಪಿ ನಾಯಕರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ರದ್ದು ಮಾಡಿರುವ ಕುರಿತಾದ ಪುಸ್ತಕವನ್ನು ನೀಡಿದ್ದಾರೆ.

    ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸದಾನಂದಗೌಡ ಅವರು, 70 ವರ್ಷದ ನಂತರ ಐತಿಹಾಸಿಕ ನಿರ್ಣಯವನ್ನು ಪ್ರಧಾನಿ ಮೋದಿ ಸರ್ಕಾರ ತೆಗೆದುಕೊಂಡಿದೆ. ದೇಶದ ಐಕ್ಯತೆ ಧಕ್ಕೆಯಾಗಿದ್ದ ನಿಯಮಾವಳಿಗಳನ್ನು ತೆಗೆದುಹಾಕಲಾಗಿದೆ. ಆದರೆ ಇದು ಯಾಕಾಯ್ತು, ಏನಾಯ್ತು ಎನ್ನುವುದು ಸಣ್ಣಪುಟ್ಟ ಕೊಂದಲಗಳಿವೆ. ಈ ನಿರ್ಣಯದ ಕುರಿತು ಜನರಿಗೆ ತಿಳಿಸಬೇಕಿ ಎಂದು ಹೇಳಿದರು.

    ರಾಹುಲ್ ದ್ರಾವಿಡ್ ಪಾಕಿಸ್ತಾನ ಸೇರಿದಂತೆ ದೇಶ, ವಿದೇಶಗಳಲ್ಲಿ ಕ್ರಿಕೆಟ್ ಆಡಿದವರು. ಕಾಶ್ಮೀರದ ಮೈದಾನದಲ್ಲೂ ಕ್ರಿಕೆಟ್ ಆಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಮಂಡಳಿಗಳಿವೆ. ಆದರೆ ಕಾಶ್ಮೀರದಲ್ಲಿ ಕ್ರಿಕೆಟ್ ಮಂಡಳಿ ಮಾಡುವುದಕ್ಕೆ ಬಿಡಲಿಲ್ಲ ಅಂತ ದ್ರಾವಿಡ್ ತಿಳಿಸಿದ್ದಾರೆ ಎಂದರು.

    ದೇಶದಲ್ಲಿ ಪ್ರಮುಖರನ್ನು ಭೇಟಿ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಬನ್ನಂಜೆ ಗೋವಿಂದ ಆಚಾರ್ಯ ಸೇರಿದಂತೆ ಹಲವರನ್ನು ಭೇಟಿಯಾಗಿದ್ದೇವೆ. ದೇಶದ ಏಕತೆಗೆ ಒತ್ತು ನೀಡಲು ಹಾಗೂ ಒಂದು ದೇಶ ಒಂದು ಸಂವಿಧಾನ ಇರಬೇಕು ಎನ್ನವುದು ಉದ್ದೇಶದಿಂದ ಶ್ರಮಿಸುತ್ತಿದ್ದೇವೆ ಎಂದು ಸದಾನಂದ ಗೌಡ ತಿಳಿಸಿದರು.

    ಪ್ರವಾಹ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ರಾಜ್ಯಕ್ಕೆ ಅಲೌಟ್ ಆದ ಹಣ ಡಿಸೆಂಬರ್ ನಲ್ಲಿ ಬರಬೇಕಿತ್ತು. ಆದರೆ ಈಗಾಗಲೇ 380 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕರ್ನಾಟಕ ಮಾತ್ರವಲ್ಲ ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಅಲ್ಲಿಗೂ ಕೂಡ ಪರಿಹಾರ ನೀಡಬೇಕಿದೆ ಎಂದು ಹೇಳಿದರು.

    ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತೆರವು ಆದ ಸ್ಥಾನಕ್ಕೆ ಆರು ತಿಂಗಳೊಳಗೆ ಚುನಾವಣೆ ಆಗಬೇಕು. ಯಾವತ್ತೂ ಸರ್ಕಾರ ರಚನೆ ಮಾಡಿದ್ವೋ, ಅಂದಿನಿಂದಲೇ ಉಪ ಚುನಾವಣೆಗೆ ಸಿದ್ಧರಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ 25+1 ಗೆದ್ದಂತೆ, 15ಕ್ಕೆ 15 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

  • ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ ಎಂದು ಹೇಳುವ ಮೂಲಕ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.

    ಭಾನುವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಡ್ಡಾ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಬೆಂಬಲಿಸದ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರು ಒಂದು ದೇಶದ ಪರಿಕಲ್ಪನೆಯನ್ನು ಅರಿತುಕೊಂಡಿದ್ದಾರೆ. ಒಂದು ದೇಶಕ್ಕೆ ಒಂದೇ ಸಂವಿಧಾನ, ಒಂದೇ ಚಿಹ್ನೆ ಎಂಬುದನ್ನು ಕಾಂಗ್ರೆಸ್‍ನವರು ಏಕೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ 370 ನೇ ವಿಧಿಯನ್ನು ತಾತ್ಕಾಲಿಕ ಎಂದು ಹೇಳುತ್ತದೆ. ಹಾಗಾದರೆ 370 ವಿಧಿ ಒಳ್ಳೆಯದೇ ಆಗಿದ್ದರೆ ಅದನ್ನು ಅವರು ಏಕೆ ಶಾಶ್ವತಗೊಳಿಸಲಿಲ್ಲ? ಕಾಂಗ್ರೆಸ್‍ನವರು ಒಂದು ಸಮಯದಲ್ಲಿ 400 ಜನ ಸಂಸದರನ್ನು ಹೊಂದಿದ್ದರು. ಅ ಸಮಯದಲ್ಲಿ ಅದನ್ನು ಏಕೆ ಶಾಶ್ವತಗೊಳಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

    370 ನೇ ವಿಧಿ ದೇಶಕ್ಕೆ ಮಾರಕ. ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಆದರೆ ಅದನ್ನು ಅವರು ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದರು. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಮುಖ್ಯ ಎಂದು ಜೆಪಿ ನಡ್ಡಾ ಕಿಡಿಕಾರಿದರು.

    ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ನಂತರದಲ್ಲಿ, ಪಾಕಿನಿಂದ ಹೈದರಾಬಾದ್‍ನಂತಹ ನಗರಗಳಿಗೆ ಬಂದ ಜನರು ಅಲ್ಲಿ ರಾಜಕೀಯ ನಾಯಕರಾದರು, ಉತ್ತಮ ಭವಿಷ್ಯ ಕಟ್ಟಿಕೊಂಡರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲೇ ಇದ್ದ ಮೂಲ ನಿವಾಸಿಗಳು ಕೌನ್ಸಿಲರ್ ಆಗಲು ಕೂಡ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ 370 ನೇ ವಿಧಿ ಎಂದು ನಡ್ಡಾ ಬೇಸರ ವ್ಯಕ್ತಪಡಿಸಿದರು.

    ಈಗ ಈ ಕೆಟ್ಟ ಪದ್ಧತಿ ರದ್ದಾಗಿದೆ ಈಗ ಯಾರು ಬೇಕಾದರೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೂ ಅಲ್ಲಿ ಚುನಾವಣೆಗೆ ನಿಲ್ಲಲು ಸ್ಥಾನ ಸಿಕ್ಕಿದೆ. ಭಾರತ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ 500 ರಾಜ್ಯಗಳನ್ನು ಒಂದು ಮಾಡಿದರು. ಆದರೆ ಕಾಶ್ಮೀರ ಒಂದನ್ನು ನೆಹರೂ ಅವರಿಗೆ ಬಿಟ್ಟುಕೊಟ್ಟು ತಪ್ಪು ಮಾಡಿದರು. ಅದೂ ಈಗ ಸಮಸ್ಯೆಯಾಗಿದೆ ಎಂದರು.

    ಇದೇ ವೇಳೆ ಕೆಲವು ಟಿಡಿಪಿ ನಾಯಕರು ಬಿಜೆಪಿಗೆ ಸೇರ್ಪಡೆಯಾದ ವಿಚಾರದ ಬಗ್ಗೆ ಮಾತನಾಡಿದ ನಡ್ಡಾ, ಟಿಆರ್‍ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸರ್ವಾಧಿಕಾರಿ ಶೈಲಿಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ರಾವ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾತ್ರ ಗಮನ ಕೊಡುತ್ತಾರೆ ಎಂದು ಆರೋಪಿಸಿದ ಅವರು, ಟಿಆರ್‍ಎಸ್ ಸರ್ಕಾರವು ಎನ್‍ಡಿಎ ಸರ್ಕಾರದ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ, ಇದರಿಂದ ಜನರು ಅದರ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

  • ವಿದೇಶಾಂಗ ಸಚಿವ ಜೈಶಂಕರ್ ಬಿಜೆಪಿಗೆ ಸೇರ್ಪಡೆ

    ವಿದೇಶಾಂಗ ಸಚಿವ ಜೈಶಂಕರ್ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಔಪಚಾರಿಕವಾಗಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಡಾ.ಜೈಶಂಕರ್ ಅವರು ರಾಜತಾಂತ್ರಿಕ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡನೇ ಅವಧಿಯಲ್ಲಿ ಅಚ್ಚರಿ ಎಂಬಂತೆ ಮೋದಿ ಅವರು ಜೈ ಶಂಕರ್ ಅವರಿಗೆ ಮಹತ್ವದ ವಿದೇಶಾಂಗ ಇಲಾಖೆಯನ್ನು ನೀಡಿದ್ದರು. ಮೇ 30ರಂದು ಕೇಂದ್ರ ಸಚಿವರೊಂದಿಗೆ ಜೈಶಂಕರ್ ಅವರೂ ಸಹ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

    ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳ ಒಳಗಡೆ ಜೈಶಂಕರ್ ಸಂಸತ್ ಸದಸ್ಯರಾಗಬೇಕಿದೆ. ಜೈಶಂಕರ್ ಅವರನ್ನು ಗುಜರಾತ್‍ನಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.