Tag: Jos Buttler

  • ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಬಟ್ಲರ್‌ ಬೆಂಕಿಯಾಟಕ್ಕೆ ಗುಜರಾತ್‌ನಲ್ಲಿ ಡೆಲ್ಲಿ ಬರ್ನ್‌!

    ಅಹಮದಾಬಾದ್‌: ಜೋಸ್‌ ಬಟ್ಲರ್‌ (Jos Buttler) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Gujarat Titans) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಹೊಡೆಯಿತು. ಕಠಿಣ ಮೊತ್ತವಾದರೂ ಇನ್ನೂ 4 ಎಸೆತ ಬಾಕಿ ಇರುವಂತೆ ಗುಜರಾತ್‌ 3 ವಿಕೆಟ್‌ ಕಳೆದುಕೊಂಡು 204 ರನ್‌ ಹೊಡೆದು ಜಯಗಳಿಸಿತು.

    ನಾಯಕ ಶುಭಮನ್‌ ಗಿಲ್‌ 7 ರನ್‌ ಗಳಿಸಿ ಔಟಾದಾಗ ಗುಜರಾತ್‌ಗೆ ಆರಂಭದಲ್ಲೇ ಹಿನ್ನಡೆಯಾಗಿತ್ತು. ಎರಡನೇ ವಿಕೆಟಿಗೆ ಸಾಯಿ ಸುದರ್ಶನ್‌ ಮತ್ತು ಬಟ್ಲರ್‌ 35 ಎಸೆತಗಳಲ್ಲಿ 60 ರನ್‌ ಹೊಡೆಯುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಸಾಯಿ ಸುದರ್ಶನ್‌ 36 ರನ್‌ (21 ಎಸೆತ, 5 ಬೌಂಡರಿ, 1 ಸಿಕ್ಸ್‌ )ಸಿಡಿಸಿ ಔಟಾದರು.

    ಮೂರನೇ ವಿಕೆಟಿಗೆ ಬಟ್ಲರ್‌ ಮತ್ತು ರುದರ್‌ರ್ಫೋರ್ಡ್‌ 69 ಎಸೆತಗಳಲ್ಲಿ 119 ರನ್‌ ಚಚ್ಚುವಾಗಲೇ ಗುಜರಾತ್‌ ಗೆಲುವು ಖಚಿತವಾಯಿತು.

    ಕೊನೆಯಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ರುದರ್‌ಫೋರ್ಡ್‌ 43 ರನ್‌(34 ಎಸೆತ, 1 ಬೌಂಡರಿ, 3 ಸಿಕ್ಸ್‌) ಹೊಡೆದು ಔಟಾದರು. ನಂತರ ಬಂದ ತವಾಟಿಯಾ ಔಟಾಗದೇ 11 ರನ್‌ (3 ಎಸೆತ, 1 ಬೌಂಡರಿ, 1 ಸಿಕ್ಸ್‌) ಸಿಡಿಸಿ ಜಯವನ್ನು ತಂದುಕೊಟ್ಟರು. ಬಟ್ಲರ್‌ಗೆ ಶತಕ ಕೈ ತಪ್ಪಿದರೂ ಅಜೇಯ 97 ರನ್‌(54 ಎಸೆತ, 11 ಬೌಂಡರಿ, 4 ಸಿಕ್ಸ್‌) ಹೊಡೆಯುವ ಮೂಲಕ ತಂಡದ ಜಯದಲ್ಲಿ ಪ್ರದಾನ ಪಾತ್ರ ವಹಿಸಿದರು.


    ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪರ ನಾಯಕ ಅಕ್ಷರ್‌ ಪಟೇಲ್‌ 39 ರನ್‌ (22 ಎಸೆತ, 1 ಬೌಂಡರಿ, 2 ಸಿಕ್ಸ್‌), ಅಶುತೋಶ್‌ ಶರ್ಮಾ 37 ರನ್‌ (19 ಎಸೆತ, 2 ಬೌಂಡರಿ, 3 ಸಿಕ್ಸ್)‌ ಕೆಎಲ್‌ ರಾಹುಲ್‌ 28 ರನ್‌(14 ಎಸೆತ, 4 ಬೌಂಡರಿ, 1 ಸಿಕ್ಸ್‌) ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುಜರಾತ್‌ ಪರ ಪ್ರಸಿದ್ಧ್‌ ಕೃಷ್ಣ 4 ವಿಕೆಟ್‌ ಕಿತ್ತರು.

  • ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಅರ್ಧಶತಕ, ಮೊಹಮ್ಮದ್‌ ಸಿರಾಜ್‌ (Mohammed Siraj) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ ಗಳಿಸಿತ್ತು. 170 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ 17.5 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿ ಗೆಲುವು ಸಾಧಿಸಿತು.

    ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ 4.4 ಓವರ್‌ಗಳಲ್ಲಿ 32 ರನ್‌ ಗಳಿಸಿದ್ದಾಲೇ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಈ ವೇಳೆ 2ನೇ ವಿಕೆಟ್‌ಗೆ ಜೊತೆಗೂಡಿದ ಸಾಯಿ ಸುದರ್ಶನ್‌ (Sai Sudharsan) ಹಾಗೂ ಜೋಸ್‌ ಬಟ್ಲರ್‌ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 2ನೇ ವಿಕೆಟಿಗೆ ಈ ಜೋಡಿ 47 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿತು. ಇದಾದ ಬಳಿಕ ಮುರಿಯದ 3ನೇ ವಿಕೆಟಿಗೆ ಬಟ್ಲರ್‌ – ರುದರ್ಫೋರ್ಡ್ 36 ರನ್‌ (32 ಎಸೆತ) ಜೊತೆಯಾಟದಿಂದ ಟೈಟಾನ್ಸ್‌ ಪಡೆ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌:
    ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಜೋಸ್‌ ಬಟ್ಲರ್‌ 3ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿ ಬೊಬ್ಬರಿದರು. 31 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದ್ದ ಬಟ್ಲರ್‌ ಒಟ್ಟು 39 ಎಸೆತಗಳಲ್ಲಿ 73 ರನ್‌ (6 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ 49 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್‌), ಸ್ಫೋಟಕ ಪ್ರದರ್ಶನ ನೀಡಿದ ಶೆರ್ಫೇನ್ ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್‌ (3 ಸಿಕ್ಸರ್, 1 ಬೌಂಡರಿ), ನಾಯಕ ಶುಭಮನ್‌ ಗಿಲ್‌ 14 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್‌ಗೆ 170 ಸಾಧಾರಣ ರನ್‌ಗಳ ಗುರಿ ನೀಡಿತು. ಆರಂಭಿಕರಾಗಿ ಕಣಕ್ಕಿಳಿಸಿದ್ದ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನ ನೀಡಲು ಮುಂದಾಗಿದ್ದರು. ಆದ್ರೆ ಒಂದೆಡೆ ರನ್‌ ಕಲೆ ಹಾಕುತ್ತಿದ್ದಂತೆ ಮತ್ತೊಂದೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಪವರ್‌ ಪ್ಲೇನಲ್ಲೇ ವೇಗಿ ಮೊಹಮ್ಮದ್‌ ಸಿರಾಜ್‌ ಫಿಲ್‌ ಸಾಲ್ಟ್‌ ಹಾಗೂ ದೇವದತ್‌ ಪಡಿಕಲ್‌ ವಿಕೆಟ್‌ ಕಿತ್ತಿದ್ದು, ಆರ್‌ಸಿಬಿಗೆ ಬಹುದೊಡ್ಡ ಹೊಡೆತ ನೀಡಿತು.

    ಲಿವಿಂಗ್‌ಸ್ಟೋನ್‌ ಅಮೋಘ ಅರ್ಧಶತಕ:
    ಬಳಿಕ ಕಣಕ್ಕಿಳಿದು ತಾಳ್ಮೆಯ ಆಟ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕ ಸಿಡಿಸಿದರು. 40 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಜಿತೇಶ್‌ ಶರ್ಮಾ 33 ರನ್‌ (21 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಔಟಾಗಿ ಪೆವಿಲಿಯನ್‌ನತ್ತ ತೆರಳಿದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಿಂ ಡೇವಿಡ್‌ 16 ರನ್‌ ಚಚ್ಚಿ 170 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾದರು.

    ಮತ್ತೊಂದೆಡೆ ಗುಜರಾತ್‌ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌ ಪಡೆದರೆ, ಸಾಯಿ ಕಿಶೋರ್‌ 2 ವಿಕೆಟ್‌, ಪ್ರಸಿದ್‌ ಕೃಷ್ಣ, ಅರ್ಷದ್‌ ಖಾನ್‌ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • 214 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌ – ತವರಲ್ಲೇ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

    214 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್‌ – ತವರಲ್ಲೇ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

    – ಕೊನೆಯ ಪಂದ್ಯದಲ್ಲಿ ಭಾರತಕ್ಕೆ 142 ರನ್‌ಗಳ ಭರ್ಜರಿ ಗೆಲುವು

    ಅಹಮದಾಬಾದ್‌: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲೇ 3-0ನಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ.

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 356 ರನ್‌ ಪೇರಿಸಿತ್ತು. 357 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿತು. 34.2 ಓವರ್‌ಗಳಲ್ಲೇ 214 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಫೆ.8 ರಂದು ಭಾರತ- ಶ್ರೀಲಂಕಾ ಕ್ರಿಕೆಟ್‌ ಮ್ಯಾಚ್‌

    ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 356 ರನ್‌ ಪೇರಿಸಿತ್ತು. 357 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿತು. 34.2 ಓವರ್‌ಗಳಲ್ಲೇ 214 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.

    ಬೃಹತ್‌ ರನ್‌ ಟಾರ್ಗೆಟ್‌ ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಇದರ ಹೊರತಾಗಿಯೂ ಇಂಗ್ಲೆಂಡ್‌ ಒಂದೆಡೆ ರನ್‌ ಗಳಿಸುತ್ತಿದ್ದರೆ, ಮತ್ತೊಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಬಟ್ಲರ್‌, ಲಿವಿಂಗ್‌ಸ್ಟೋನ್‌, ರೂಟ್‌ ಹಾಗೂ ಹ್ಯಾರಿ ಬ್ರೂಕ್‌ ಅವರ ಬ್ಯಾಟಿಂಗ್‌ ವೈಫಲ್ಯ ಇಂಗ್ಲೆಂಡ್‌ಗೆ ದೊಡ್ಡ ಪೆಟ್ಟು ನೀಡಿತು. ಪರಿಣಾಮ 214 ರನ್‌ಗಳಿಗೆ ಆಲೌಟ್‌ ಆಯಿತು.

    ಇಂಗ್ಲೆಂಡ್‌ ಪರ ಟಾಮ್‌ ಬ್ಯಾನ್‌ಟನ್‌, ಗಸ್‌ ಅಟ್ಕಿನ್‌ಸನ್‌ ತಲಾ 38 ರನ್‌ ಗಳಿಸಿದ್ರೆ, ಬೆನ್‌ ಡಕೆಟ್‌ 34 ರನ್‌, ಜೋ ರೂಟ್‌ 24 ರನ್‌, ಫಿಲ್‌ ಸಾಲ್ಟ್‌ 23 ರನ್‌, ಬ್ರೂಕ್‌ 19 ರನ್‌ ಗಳಿಸಿದ್ರೆ ಉಳಿದವರು ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್‌

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಭರ್ಜರಿ ಮೊತ್ತವನ್ನೇ ಪೇರಿಸಿತು. ಉಪನಾಯಕ ಶುಭಮನ್ ಗಿಲ್ ಅಮೋಘ ಶತಕ ಸಿಡಿಸುವ ಮೂಲಕ ತಂಡಕ್ಕೆ ಅಡಿಪಾಯ ಹಾಕಿದರು. ಇನ್ನೂ ಆರಂಭಿಕ ರೋಹಿತ್‌ ಒಂದೇ ರನ್ನಿಗೆ ಔಟಾಗುತ್ತಿದ್ದಂತೆ ಅಖಾಡಕ್ಕಿಳಿದ ಕೊಹ್ಲಿ ಬಹುದಿನಗಳ ಬಳಿಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇದರೊಂದಿಗೆ ಶ್ರೇಯಸ್‌ ಅಯ್ಯರ್‌ ಅವರ ಭರ್ಜರಿ ಬ್ಯಾಟಿಂಗ್‌ ಟೀಂ ಇಂಡಿಯಾ ಬೃಹತ್‌ ಮೊತ್ತ ಪೇರಿಸಲು ಕಾರಣವಾಯಿತು.

    ಟೀಂ ಇಂಡಿಯಾ ಪರ ಶುಭಮನ್‌ ಗಿಲ್‌ 112 ರನ್‌ (102 ಎಸೆತ, 14 ಬೌಂಡರಿ, 3 ಸಿಕ್ಸರ್)‌, ಶ್ರೇಯಸ್‌ ಅಯ್ಯರ್‌ 78 ರನ್‌ (64 ಎಸೆತ, 8 ಬೌಂಡರಿ, 2 ಸಿಕ್ಸರ್)‌, ವಿರಾಟ್‌ ಕೊಹ್ಲಿ 52 ರನ್‌ (55 ಎಸೆತ, 7 ಬೌಂಡರಿ, 1 ಸಿಕ್ಸರ್)‌, ಕೆ.ಎಲ್‌ ರಾಹುಲ್‌ 40 ರನ್‌ (29 ಎಸೆತ, 3 ಬೌಂಡರಿ, 1 ಸಿಕ್ಸರ್)‌, ಹಾರ್ದಿಕ್‌ ಪಾಂಡ್ಯ 17 ರನ್‌, ಅಕ್ಷರ್‌ ಪಟೇಲ್‌ 13 ರನ್‌, ವಾಷಿಂಗ್ಟನ್‌ ಸುಂದರ್‌ 14 ರನ್‌, ಹರ್ಷಿತ್‌ ರಾಣಾ 13 ರನ್‌, ಅರ್ಷ್‌ದೀಪ್‌ ಸಿಂಗ್‌ 2 ರನ್‌ ಹಾಗೂ ರೋಹಿತ್‌ ಶರ್ಮಾ 1 ರನ್‌ ಗಳಿಸಿದ್ರು,

    ಇಂಗ್ಲೆಂಡ್‌ ಪರ ಆದಿಲ್ ರಶೀದ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಮಾರ್ಕ್‌ ವುಡ್ 2 ವಿಕೆಟ್ ಪಡೆದರು. ಉಳಿದಂತೆ ಶಕೀಬ್‌ ಮಸೂದ್, ಜೋ ರೂಟ್, ಗಸ್ ಅಟ್ಕಿನ್‌ಸನ್‌ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ ಫಿಫ್ಟಿ – ಕೊಹ್ಲಿ ಬ್ಯಾಟಿಂಗ್‌ ಮೋಡಿಗೆ ಸಚಿನ್‌, ಸಂಗಕ್ಕಾರ ದಾಖಲೆ ಉಡೀಸ್‌

  • ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

    ಪುಣೆ: ಶಿವಂ ದುಬೆ, ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಪರಾಕ್ರಮ, ರವಿ ಬಿಷ್ಣೋಯಿ, ಹರ್ಷಿತ್‌ ರಾಣಾ ಉರಿ ಚೆಂಡಿನ ದಾಳಿ ನೆರವಿನಿಂದ ಭಾರತ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 15 ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-1 ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿತು.

    19ನೇ ಓವರ್‌ ರೋಚಕ:
    ಕೊನೇ 12 ಎಸೆತಗಳಲ್ಲಿ ಇಂಗ್ಲೆಂಡ್‌ ಗೆಲುವಿಗೆ 25 ರನ್‌ ಅಗತ್ಯವಿತ್ತು. ಹರ್ಷಿತ್‌ ರಾಣಾ ಬೌಲಿಂಗ್‌ನಲ್ಲಿದ್ದರೆ, ಕೊನೆಯ ಬ್ಯಾಟಿಂಗ್‌ ಭರವಸೆಯಾಗಿದ್ದ ಜೇಮೀ ಓವರ್ಟನ್ ಕ್ರೀಸ್‌ನಲ್ಲಿದ್ದರು. ಹರ್ಷಿತ್‌ ರಾಣಾ ಮೊದಲ ಎಸೆತವನ್ನೇ ಓವರ್ಟನ್‌ ಬೌಂಡರಿಗಟ್ಟಿದರು. ಬಳಿಕ 2ನೇ ಬಾಲ್‌ ಡಾಟ್‌ ಆಯಿತು. 3ನೇ ಎಸೆತದಲ್ಲಿ 2 ರನ್‌ ಕದ್ದಾಗ ಪಂದ್ಯ ಕೊಂಚವೇ ಇಂಗ್ಲೆಂಡ್‌ನತ್ತ ವಾಲುತ್ತಿತ್ತು. ಆದ್ರೆ 4, 5ನೇ ಎಸೆತದಲ್ಲಿ ಯಾವುದೇ ರನ್‌ ಬಿಟ್ಟುಕೊಡದ ರಾಣಾ 6ನೇ ಎಸೆತದಲ್ಲಿ ಓವರ್ಟನ್‌ ವಿಕೆಟ್‌ ಉಡೀಸ್‌ ಮಾಡಿದ್ರು. ಇದರೊಂದಿಗೆ ಇಂಗ್ಲೆಂಡ್‌ ತಂಡದ ಗೆಲುವೂ ಕಸಿಯಿತು.

    ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿಂದು ನಡೆದ 4ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 181 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 19.4 ಓವರ್‌ಗಳಲ್ಲಿ 166 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು

    ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಆರಂಭದಲ್ಲೇ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ಬೆನ್‌ ಡಕೆಟ್‌ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಶುರು ಮಾಡಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ ಗಳಿಸಿತ್ತು. ಡಕೆಟ್‌ 19 ಎಸೆತಗಳಲ್ಲಿ 39 ರನ್‌ ಚಚ್ಚಿದ್ರೆ, ಸಾಲ್ಟ್‌ 21 ಎಸೆತಗಳಲ್ಲಿ ಕೇವಲ 23 ರನ್‌ ಸಿಡಿಸಿದ್ರು. ಆದ್ರೆ ಬೆಂಕಿ ಆಟವಾಡುತ್ತಿದ್ದ ಡಕೆಟ್‌ ವೇಗಕ್ಕೆ ರವಿ ಬಿಷ್ಣೋಯಿ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿದರು. ಆರಂಭಿಕ ಜೋಡಿ ಔಟಾಗುತ್ತಿದ್ದಂತೆ ಜೋಸ್‌ ಬಟ್ಲರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಾಕೋಬ್‌ ಬೇಥೆಲ್‌ ಹಾಗೂ ಆಲ್‌ರೌಂಡರ್‌ ಬ್ರೈಡನ್ ಕಾರ್ಸ್ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ಸಂಕಷ್ಟಕ್ಕೀಡಾಯಿತು.

    ಬ್ರೂಕ್‌ ಸ್ಫೋಟಕ ಬ್ಯಾಟಿಂಗ್‌:
    ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಇಂಗ್ಲೆಂಡ್‌ ತಂಡಕ್ಕೆ ಹ್ಯಾರಿ ಬ್ರೂಕ್‌ ಅವರ ಅರ್ಧಶತಕ ಬಲ ತುಂಬಿತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್‌ 26 ಎಸೆತಗಳಲ್ಲಿ ಸ್ಫೋಟಕ 51 ರನ್‌ (5 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದು ಇಂಗ್ಲೆಂಡ್‌ ತಂಡಕ್ಕೆ ಜೀವದಾನ ನೀಡಿತ್ತು. ಹ್ಯಾರಿ ಬ್ರೂಕ್‌ ವಿಕೆಟ್‌ ಬೀಳುತ್ತಿದ್ದಂತೆ ಮತ್ತೆ ಉಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಆದ್ರೆ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ ಜೇಮೀ ಓವರ್ಟನ್ (19 ರನ್‌ ಗಳಿಸಿ) ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಡುವ ನಿರೀಕ್ಷೆ ಹೆಚ್ಚಿಸಿದ್ದರು. ಈ ವೇಳೆ ಟೀಂ ಇಂಡಿಯಾ ವೇಗಿ ಹರ್ಷಿತ್‌ ರಾಣಾ 19ನೇ ಓವರ್‌ನ ಕೊನೇ ಎಸೆತದಲ್ಲಿ ಓವರ್ಟನ್‌ಗೆ ಪೆವಿಲಿಯನ್‌ ದಾರಿ ತೋರಿ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್‌ ಗಳಿಸಿತ್ತು. ಮೊದಲ 12 ರನ್‌ಗಳಿಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ ತಂಡಕ್ಕೆ ಒಂದೆಡೆ ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು.

    ಪಾಂಡ್ಯ, ದುಬೆ ಅರ್ಧಶತಕಗಳ ಬ್ಯಾಟಿಂಗ್‌:
    ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಾಂಡ್ಯ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 27 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ ಸ್ಫೋಟಕ ಅರ್ಧಶತಕ ಸಿಡಿಸಿದ್ರು. ಒಟ್ಟು 30 ಎಸೆತಗಳಲ್ಲಿ 53 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ತಾಳ್ಮೆಯ ಬ್ಯಾಟಿಂಗ್‌ ಮಾಡಿದ ಶಿವಂ ದುಬೆ 34 ಎಸೆತಗಳಲ್ಲಿ 53 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ಅಭಿಷೇಕ್‌ ಶರ್ಮಾ 29 ರನ್‌, ರಿಂಕು ಸಿಂಗ್‌ 30 ರನ್‌ಗಳ ಕೊಡುಗೆ ನೀಡಿದರು.

  • ಚಕ್ರವರ್ತಿ ಸ್ಪಿನ್‌ ಕೈಚಳಕ, ಪಾಂಡ್ಯ ಹೋರಾಟ ವ್ಯರ್ಥ – ಇಂಗ್ಲೆಂಡ್‌ಗೆ 26 ರನ್‌ಗಳ ಜಯ

    ಚಕ್ರವರ್ತಿ ಸ್ಪಿನ್‌ ಕೈಚಳಕ, ಪಾಂಡ್ಯ ಹೋರಾಟ ವ್ಯರ್ಥ – ಇಂಗ್ಲೆಂಡ್‌ಗೆ 26 ರನ್‌ಗಳ ಜಯ

    ಪುಣೆ: ವರುಣ್‌ ಚಕ್ರವರ್ತಿ (Varun Chakravarthy) ಸ್ಪಿನ್‌ ಕೈಚಳಕ ಹಾಗೂ ಹಾರ್ದಿಕ್‌ ಪಾಂಡ್ಯ (Hardik Pandya) ಹೊಡಿ ಬಡಿ ಹೋರಾಟದ ಹೊರತಾಗಿಯೂ ಇಂಗ್ಲೆಂಡ್‌ ತಂಡವು ಟೀಂ ಇಂಡಿಯಾ ವಿರುದ್ಧ 26 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-2 ಹಿನ್ನಡೆ ಕಾಯ್ದುಕೊಂಡಿದ್ದು, ಸರಣಿ ಹೋರಾಟ ಜೀವಂತವಾಗಿರಿಸಿದೆ.

    ಇಲ್ಲಿನ ಸೌರಾಷ್ಟ್ರ ಕ್ರೀಡಾಂಗಣದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ (England Team) 9 ವಿಕೆಟ್‌ ನಷ್ಟಕ್ಕೆ 171 ರನ್‌ ಕಲೆಹಾಕಿತ್ತು. ಗೆಲುವಿಗೆ 172 ರನ್‌ಗಳ ಸವಾಲಿನ ಗುರಿ ಪಡೆದ ಭಾರತ (Team India) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಪಾಂಡ್ಯ ಹೋರಾಟ ವ್ಯರ್ಥ:
    ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಭಾರತ ಅಲ್ಪ ಮೊತ್ತಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ಕ್ರೀಸ್‌ಗಿಳಿದ ಪಾಂಡ್ಯ ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುತ್ತಿದ್ದರು. ಒಂದೆಡೆ ಪಾಂಡ್ಯ ಕೊನೆಯವರೆಗೂ ನಿಂತರೆ ಸೋಲು ಖಚಿತ ಎಂದು ಇಂಗ್ಲೆಂಡ್‌ ಆಟಗಾರರಲ್ಲಿ ನಡುಕ ಹುಟ್ಟಿತ್ತು. ಆದ್ರೆ ಕೊನೇ 2 ಓವರ್‌ಗಳಲ್ಲಿ 41 ರನ್‌ ಬೇಕಿದ್ದಾಗ ಸಿಕ್ಸರ್‌ ಸಿಡಿಸಲು ಮುಂದಾದ ಪಾಂಡ್ಯ ಲಾಂಗ್‌ಆಫ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಕನಸು ಕಸಿಯಿತು.

    ಹಾರ್ದಿಕ್‌ ಪಾಂಡ್ಯ 35 ಎಸೆತಗಳಲ್ಲಿ 40 ರನ್‌ (2 ಸಿಕ್ಸರ್‌, 1 ಬೌಂಡರಿ) ಗಳಿಸಿದ್ರೆ, ಅಭಿಷೇಕ್‌ ಶರ್ಮಾ 24 ರನ್‌, ಅಕ್ಷರ್‌ ಪಟೇಲ್‌ 15 ರನ್‌, ತಿಲಕ್‌ ವರ್ಮಾ 18 ರನ್‌, ಸೂರ್ಯಕುಮಾರ್‌ ಯಾದವ್‌ 14 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 9 ವಿಕೆಟ್‌ ನಷ್ಟಕ್ಕೆ 171 ರನ್‌ ಕಲೆಹಾಕಿತ್ತು. ಆರಂಭಿಕನಾಗಿ ಕಣಕ್ಕಿಳಿದ ಫಿಲ್‌ ಸಾಲ್ಟ್‌ ಸತತ 3ನೇ ಪಂದ್ಯದಲ್ಲೂ ಅಬ್ಬರಿಸಲು ವಿಫಲರಾದರು. ಇನ್ನೂ 2ನೇ ವಿಕೆಟ್‌ಗೆ ಜೊತೆಯಾದ ನಾಯಕ ಜೋಸ್‌ ಬಟ್ಲರ್‌ ಹಾಗೂ ಬೆನ್‌ ಡಕೆಟ್‌ ಜೋಡಿ ಆರಂಭದಲ್ಲೇ ಟೀಂ ಇಂಡಿಯಾ ಬೌಲರ್‌ಗಳ ಎದುರು ಅಬ್ಬರಿಸಿತು. 2ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ 76 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಇದರೊಂದಿಗೆ ಕೊನೆಯಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಸ್ಫೋಟಕ ಬ್ಯಾಟಿಂಗ್‌ ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಯಿತು.

    16ನೇ ಓವರ್‌ವರೆಗೂ ಇಂಗ್ಲೆಂಡ್ ತಂಡವು 8 ವಿಕೆಟ್‌ಗಳನ್ನು ಕಳೆದುಕೊಂಡು 127 ರನ್‌ಗಳನ್ನಷ್ಟೇ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಲಿವಿಂಗ್‌ಸ್ಟೋನ್‌ ಅಬ್ಬರಿಸಿದರು. ಕೊನೆಯ 4 ಓವರ್‌ಗಳಲ್ಲಿ 44 ರನ್ ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಸ್ಕೋರ್ ತಂದುಕೊಟ್ಟರು. ಆರಂಭಿಕ ಬೆನ್‌ ಡಕೆಟ್‌ 51 ರನ್‌ (28 ಎಸೆತ, 2 ಸಿಕ್ಸರ್‌, 7 ಬೌಂಡರಿ) ಚಚ್ಚಿದರೆ, ಲಿಯಾಮ್‌ ಲಿವಿಂಗ್‌ಸ್ಟನ್‌ 24 ಎಸೆತಗಳಲ್ಲಿ ಸ್ಫೋಟಕ 43 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿದರು. ಇದರೊಂದಿಗೆ ನಾಯಕ ಜೋಸ್‌ ಬಟ್ಲರ್‌ 24 ರನ್‌ ಗಳ ಕೊಡುಗೆ ನೀಡಿದ್ರೆ, ಉಳಿದವರು ಅಲ್ಪಮೊತ್ತಕ್ಕೆ ಔಟಾದರು.

    ಮಿಂಚಿದ ಚಕ್ರವರ್ತಿ:
    ಇಂಗ್ಲೆಂಡ್‌ ಬ್ಯಾಟರ್‌ಗಳ ವಿರುದ್ಧ ಸತತ ಪಾರಮ್ಯ ಮೆರೆಯುತ್ತಿರುವ ವರುಣ್‌ ಚಕ್ರವರ್ತಿ 3ನೇ ಪಂದ್ಯದಲ್ಲೂ ಸ್ಪಿನ್‌ ಕೈಚಳಕ ತೋರಿದರು. 4 ಓವರ್‌ಗಳಲ್ಲಿ ಕೇವಲ 24 ರನ್‌ ಬಿಟ್ಟುಕೊಟ್ಟು ಜೋಸ್‌ ಬಟ್ಲರ್‌ ಸೇರಿದಂತೆ ಪ್ರಮುಖ 5 ವಿಕೆಟ್‌ ಕಿತ್ತರು. ಇದರೊಂದಿಗೆ ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಹಾಗೂ ರವಿ ಬಿಷ್ಣೋಯಿ, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    2023ರ ಏಕದಿನ ವಿಶ್ವಕಪ್ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಮೊಹಮ್ಮದ್ ಶಮಿ ಅವರು ಈ ಪಂದ್ಯದ ಮೂಲಕ ವಾಪಾಸ್ ಆಗಿದ್ದಾರೆ. ಮೂರು ಓವರ್‌ ಮಾಡಿದ ಅವರು ಯಾವುದೇ ವಿಕೆಟ್ ಪಡೆಯದೇ 25 ರನ್ ಬಿಟ್ಟುಕೊಟ್ಟರು.

  • ಇಂದಿನಿಂದ ಭಾರತ VS ಇಂಗ್ಲೆಂಡ್‌ ಟಿ20 ಕದನ – ಶುಭಾರಂಭದ ನಿರೀಕ್ಷೆಯಲ್ಲಿ ಸೂರ್ಯನ ಸೈನ್ಯ

    ಇಂದಿನಿಂದ ಭಾರತ VS ಇಂಗ್ಲೆಂಡ್‌ ಟಿ20 ಕದನ – ಶುಭಾರಂಭದ ನಿರೀಕ್ಷೆಯಲ್ಲಿ ಸೂರ್ಯನ ಸೈನ್ಯ

    ಮುಂಬೈ: ಇಂದಿನಿಂದ (ಜ.22) ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಬಳಿಕ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿದ್ದು, ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಂ ಇಂಡಿಯಾ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

    ಜ.22ರಿಂದ ಫೆಬ್ರವರಿ 2ರ ವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಬಳಿಕ ಫೆಬ್ರವರಿ 6 ರಿಂದ 12ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಟಿ20 ಸರಣಿಗೆ ಮಿಸ್ಟರ್-360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಿದೆ.

    ಭಾರತ ಮತ್ತು ಇಂಗ್ಲೆಂಡ್‌ ಈವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಭಾರತ ಹಾಗೂ 11 ಪಂದ್ಯಗಳಲ್ಲಿ ಇಂಗ್ಲೆಂಡ್‌ ಗೆಲುವು ಸಾಧಿಸಿದೆ.

    2019ರ ಬಳಿಕ ತವರಲ್ಲಿ ಸೋಲೇ ಕಂಡಿಲ್ಲ:
    2019ರಿಂದ ಈವರೆಗೆ ತವರಿನಲ್ಲಿ 16 ಸರಣಿಗಳನ್ನಾಡಿರುವ ಟೀಂ ಇಂಡಿಯಾ 14 ಸರಣಿಗಳಲ್ಲಿ ಗೆಲುವು ಸಾಧಿಸಿದ್ದು, 2 ಸರಣಿಗಳನ್ನು ಡ್ರಾ ಮಾಡಿಕೊಂಡಿದೆ. 2019ರಲ್ಲಿ ಕೊನೆಯಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಸೋತಿತ್ತು.

    ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಂ.1:
    2023ರ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ನಂ.1 ಪಟ್ಟಕ್ಕೇರಿದ ಭಾರತ, ದೀರ್ಘಕಾಲದಿಂದಲೂ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಕಳೆದ 1 ವರ್ಷದಲ್ಲಿ 70 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ 18,747 ಅಂಕಗಳು ಹಾಗೂ 268 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ (259 ರೇಟಿಂಗ್ಸ್), ಇಂಗ್ಲೆಂಡ್ (255 ರೇಟಿಂಗ್ಸ್), ವೆಸ್ಟ್ ಇಂಡೀಸ್ (247 ರೇಟಿಂಗ್ಸ್), ನ್ಯೂಜಿಲೆಂಡ್ (247 ರೇಟಿಂಗ್ಸ್) ಕ್ರಮವಾಗಿ 2, 3, 4, 5ನೇ ಸ್ಥಾನಗಳಲ್ಲಿವೆ.

    ಟಿ20 ಪಂದ್ಯಗಳು ಎಲ್ಲಿ – ಯಾವಾಗ?
    ಪ್ರತಿ ಪಂದ್ಯ ಸಂಜೆ 7:00 ಗಂಟೆಗೆ ಶುರುವಾಗಲಿದೆ

    • ಜ.22 – ಮೊದಲ ಪಂದ್ಯ – ಕೋಲ್ಕತ್ತಾ (ಈಡನ್ ಗಾರ್ಡನ್)
    • ಜ.25 – 2ನೇ ಪಂದ್ಯ – ಚೆನ್ನೈ (ಚೆಪಾಕ್)
    • ಜ.28 – 3ನೇ ಪಂದ್ಯ – ರಾಜ್‌ಕೋಟ್ (ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)
    • ಜ.31 – 4ನೇ ಪಂದ್ಯ – ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್)
    • ಫೆ.02 – 5ನೇ ಪಂದ್ಯ – ಮುಂಬೈ (ವಾಂಖೆಡೆ)

    ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ:
    ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

  • ಜ.22ರಿಂದ ಭಾರತ Vs ಇಂಗ್ಲೆಂಡ್‌ ಹೈವೋಲ್ಟೇಜ್‌ ಸರಣಿ – ಇಲ್ಲಿದೆ ಡಿಟೇಲ್ಸ್

    ಜ.22ರಿಂದ ಭಾರತ Vs ಇಂಗ್ಲೆಂಡ್‌ ಹೈವೋಲ್ಟೇಜ್‌ ಸರಣಿ – ಇಲ್ಲಿದೆ ಡಿಟೇಲ್ಸ್

    ಮುಂಬೈ: ಇದೇ ಜನವರಿ 22 ರಿಂದ ಭಾರತ ಮತ್ತು ಇಂಗ್ಲೆಂಡ್‌ (Ind vs Eng) ನಡುವೆ ಐದು ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಾಗಿದೆ.

    ಜ.22ರಿಂದ ಫೆಬ್ರವರಿ 2ರ ವರೆಗೆ 5 ಪಂದ್ಯಗಳ ಟಿ20 ಸರಣಿ (T20 Series) ನಡೆಯಲಿದ್ದು, ಬಳಿಕ ಫೆಬ್ರವರಿ 6 ರಿಂದ 12ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಟಿ20 ಸರಣಿಗೆ ಮಿಸ್ಟರ್‌-360 ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದಲ್ಲಿ ಭಾರತ ತಂಡವನ್ನು ಪ್ರಕಟಿಸಿರುವ ಬಿಸಿಸಿಐ (BCCI), ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಿದೆ.

    ತವರಿನಲ್ಲಿ ಅತ್ಯಧಿಕ ಸರಣಿ ಗೆಲುವು:
    2019ರಿಂದ ಈವರೆಗೆ ತವರಿನಲ್ಲಿ 16 ಸರಣಿಗಳನ್ನಾಡಿರುವ ಟೀಂ ಇಂಡಿಯಾ (Team India) 14 ಸರಣಿಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಅತಿಹೆಚ್ಚು ಸರಣಿ ಗೆದ್ದ ತಂಡವಾಗಿಯೂ ಟೀಂ ಇಂಡಿಯಾ ಹೊರಹೊಮ್ಮಿದೆ.

    ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಂ.1:
    2023ರ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ನಂ.1 ಪಟ್ಟಕ್ಕೇರಿದ ಭಾರತ, ದೀರ್ಘಕಾಲದಿಂದಲೂ ಅಗ್ರಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಕಳೆದ 1 ವರ್ಷದಲ್ಲಿ 70 ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ 18,747 ಅಂಕಗಳು ಹಾಗೂ 268 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನುಳಿದಂತೆ ಆಸ್ಟ್ರೇಲಿಯಾ (259 ರೇಟಿಂಗ್ಸ್‌), ಇಂಗ್ಲೆಂಡ್‌ (255 ರೇಟಿಂಗ್ಸ್‌), ವೆಸ್ಟ್‌ ಇಂಡೀಸ್‌ (247 ರೇಟಿಂಗ್ಸ್‌), ನ್ಯೂಜಿಲೆಂಡ್‌ (247 ರೇಟಿಂಗ್ಸ್‌) ಕ್ರಮವಾಗಿ 2, 3, 4, 5ನೇ ಸ್ಥಾನಗಳಲ್ಲಿವೆ.

    ಟಿ20 ಪಂದ್ಯಗಳು ಎಲ್ಲಿ – ಯಾವಾಗ?
    ಪ್ರತಿ ಪಂದ್ಯ ಸಂಜೆ 7:00 ಗಂಟೆಗೆ ಶುರುವಾಗಲಿದೆ

    • ಜ.22 – ಮೊದಲ ಪಂದ್ಯ – ಕೋಲ್ಕತ್ತಾ (ಈಡನ್‌ ಗಾರ್ಡನ್‌)
    • ಜ.25 – 2ನೇ ಪಂದ್ಯ – ಚೆನ್ನೈ (ಚೆಪಾಕ್‌)
    • ಜ.28 – 3ನೇ ಪಂದ್ಯ – ರಾಜ್‌ಕೋಟ್‌ (ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌)
    • ಜ.31 – 4ನೇ ಪಂದ್ಯ – ಪುಣೆ (ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌)
    • ಫೆ.02 – 5ನೇ ಪಂದ್ಯ – ಮುಂಬೈ (ವಾಂಖೆಡೆ)

    ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ:
    ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ನಿತೀಶ್‌ ಕುಮಾರ್‌ ರೆಡ್ಡಿ, ಅಕ್ಷರ್‌ ಪಟೇಲ್‌, ಹರ್ಷಿತ್‌ ರಾಣಾ, ಅರ್ಷ್‌ದೀಪ್‌ ಸಿಂಗ್‌, ಮೊಹಮ್ಮದ್‌ ಶಮಿ, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್‌ ಸುಂದರ್‌, ಧ್ರುವ್‌ ಜುರೆಲ್‌ (ವಿಕೆಟ್‌ ಕೀಪರ್‌).

  • ಬಟ್ಲರ್‌ ಬೊಂಬಾಟ್‌ ಶತಕ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ; ಆರ್‌ಸಿಬಿಗೆ ಹೀನಾಯ ಸೋಲು!

    ಬಟ್ಲರ್‌ ಬೊಂಬಾಟ್‌ ಶತಕ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ; ಆರ್‌ಸಿಬಿಗೆ ಹೀನಾಯ ಸೋಲು!

    – ಕೊಹ್ಲಿ-ಡುಪ್ಲೆಸಿಸ್‌ ಶತಕದ ಜೊತೆಯಾಟ ವ್ಯರ್ಥ
    – ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್‌ ರಾಯಲ್ಸ್‌

    ಜೈಪುರ: ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಶತಕ ಹಾಗೂ ಸಂಜು ಸ್ಯಾಮ್ಸನ್‌ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

    ಇಲ್ಲಿನ ಸವಾಯ್‌ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 183 ರನ್‌ ಗಳಿಸಿತ್ತು. 184 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌ 19.1 ಓವರ್‌ಗಳಲ್ಲೇ 189 ರನ್‌ ಚಚ್ಚಿ ಗೆಲುವು ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಮೊದಲ ಓವರ್‌ನ 2ನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್‌ ಅವರ ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಜೋಸ್‌ ಬಟ್ಲರ್‌ ಹಾಗೂ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. 86 ಎಸೆತಗಳಲ್ಲಿ ಈ ಜೋಡಿ 148 ರನ್‌ಗಳ ಜೊತೆಯಾಟ ನೀಡಿತು. ಈ ವೇಳೆ ಸಂಜು ಸ್ಯಾಮ್ಸನ್‌ ಔಟಾದರೂ ಬಟ್ಲರ್‌ ತಮ್ಮ ಅಬ್ಬರ ಮುಂದುವರಿಸಿದರು.

    ರಾಜಸ್ಥಾನ್‌ ಪರ ಜೋಸ್‌ ಬಟ್ಲರ್‌ 58 ಎಸೆತಗಳಲ್ಲಿ 100 ರನ್‌ (4 ಸಿಕ್ಸರ್‌, 9 ಬೌಂಡರಿ), ಸಂಜು ಸ್ಯಾಮ್ಸನ್‌ 69 ರನ್‌ (42 ಎಸೆತ, 2 ಸಿಕ್ಸರ್‌, 8 ಬೌಂಡರಿ), ರಿಯಾನ್‌ ಪರಾಗ್‌ 4 ರನ್‌, ಧ್ರುವ್‌ ಜುರೆಲ್‌ 2 ರನ್‌, ಶಿಮ್ರಾನ್‌ ಹೆಟ್ಮೇಯರ್‌ 11 ರನ್‌ ಬಾರಿಸಿದರು. ಆರ್‌ಸಿಬಿ ಪರ ರೇಸಿ ಟಾಪ್ಲಿ 2 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು

    ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ (Faf du Plessis) ಹಾಗೂ ವಿರಾಟ್‌ ಕೊಹ್ಲಿ ಪವರ್‌ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಇದು ರನ್‌ ವೇಗದ ಗತಿಯನ್ನೂ ಕಳೆದುಕೊಂಡಿತು. ‌

    20 ಓವರ್‌ ಪಂದ್ಯದಲ್ಲಿ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಒಬ್ಬರೇ 12 ಓವರ್‌ ಎದುರಿಸಿದರೂ ಕೇವಲ 113 ರನ್‌ (6 ಸಿಕ್ಸರ್‌, 12 ಬೌಂಡರಿ) ಮಾತ್ರವೇ ಗಳಿಸಿದರು. ಇದರೊಂದಿಗೆ ಫಾಫ್‌ ಡು ಪ್ಲೆಸಿಸ್‌ 44 ರನ್‌ಗಳಿಸಿದರೆ, ಉಳಿದ ಯಾವೊಬ್ಬ ಆಟಗಾರನೂ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸ್ಪೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 1 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ಸೌರವ್‌ ಚೌಹಾಣ್‌ 9 ರನ್‌, ಕ್ಯಾಮರೂನ್‌ ಗ್ರೀನ್‌ 5 ರನ್‌ ಗಳಿಸಿದರು.

    ರಾಯಸ್ಥಾನ್‌ ರಾಯಲ್ಸ್‌ ಪರ ಯಜುವೇಂದ್ರ ಚಾಹಲ್‌ 2 ವಿಕೆಟ್‌ ಕಿತ್ತರೆ, ನಾಂದ್ರೆ ಬರ್ಗರ್ ಒಂದು ವಿಕೆಟ್‌ ಪಡೆದರು.

  • World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್‌, ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್‌ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್‌ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್‌ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ.

    ಇಲ್ಲಿನ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕ್‌ (Pakistan) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 43.3 ಓವರ್‌ಗಳಲ್ಲಿ 244 ರನ್‌ಗಳಿಸಿ ಸರ್ವಪತನ ಕಂಡಿತು.

    2021ರ ವಿಶ್ವಕಪ್‌ ಟೂರ್ನಿ ಹಾಗೂ 2023ರ ಏಷ್ಯಾಕಪ್‌ ಟೂರ್ನಿಯಲ್ಲೂ ಪಾಕ್‌ ತಂಡ ನಾಕೌಟ್‌ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು. ಆದ್ರೆ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವುದು ಪಾಕ್‌ಗೆ ತೀವ್ರ ಮುಖಬಂಗವಾಗಿದೆ.

    ಸೆಮಿಸ್‌ ಕನಸು ಕಂಡಿದ್ದ ಪಾಕ್‌ ಆರಂಭದಲ್ಲೇ ಆಘಾತ ಅನುಭವಿಸಿತು. 10 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಬಾಬರ್‌ ಆಜಂ (Babar Azam) ಮತ್ತು ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಜೋಡಿ 68 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ ಔಟಾಗುತ್ತಿದ್ದಂತೆ ತಂಡದ ಪತನ ಆರಂಭವಾಯಿತು. ಕಳಪೆ ಬೌಲಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದ ಪಾಕ್‌ ಹೀನಾಯ ಸೋಲನುಭವಿಸಿತು.

    ಪಾಕ್‌ ಪರ ಅಬ್ದುಲ್ಲಾ ಶಫೀಕ್‌ ಶೂನ್ಯ ಸುತ್ತಿದ್ದರೆ, ಆಘಾ ಸಲ್ಮಾನ್ 51 ರನ್‌ (45 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಫಖರ್‌ ಝಮಾನ್‌ 1 ರನ್‌, ಬಾಬರ್‌ ಆಜಂ 38 ರನ್‌ (45 ಎಸೆತ, 6 ಬೌಂಡರಿ), ಮೊಹಮ್ಮದ್‌ ರಿಜ್ವಾನ್‌ 36 (51 ರನ್‌, 2 ಬೌಂಡರಿ), ಸೌದ್‌ ಶಕೀಲ್‌ 29 ರನ್‌, ಇಫ್ತಿಕಾರ್‌ ಅಹ್ಮದ್‌ 3 ರನ್‌, ಶಾದಾಬ್‌ ಖಾನ್‌ 3 ರನ್‌, ಶಾಹೀನ್‌ ಶಾ ಅಫ್ರಿದಿ 25 ರನ್‌ ಗಳಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಹ್ಯಾರಿಸ್‌ ರೌಫ್‌ 23 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದ್ರೆ, ಮೊಹಮ್ಮದ್‌ ವಸೀಮ್‌ 16 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಕೊನೆಯ ಪಂದ್ಯದಲ್ಲಿ ಸ್ಪೋಟಕ ಇನ್ನಿಂಗ್ಸ್‌ ಆರಂಭಿಸಿತ್ತು. ಮೊದಲ ವಿಕೆಟ್‌ಗೆ ಡೇವಿಡ್‌ ಮಲಾನ್‌ ಹಾಗೂ ಜಾನಿ ಬೈರ್ಸ್ಟೋವ್‌ ಜೋಡಿ 13.3 ಓವರ್‌ಗಳಲ್ಲಿ 82 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ 3ನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್‌ ಮತ್ತು ಜೋ ರೂಟ್‌ 131 ಎಸೆತಗಳಲ್ಲಿ 132 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದರು. ಇದರಿಂದ ತಂಡದ ಮೊತ್ತ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತು.

    ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ 31 ರನ್‌, ಜಾನಿ ಬೈರ್ಸ್ಟೋವ್ 59 ರನ್‌ (61 ಎಸೆತ, 81 ರನ್‌, 7 ಬೌಂಡರಿ, 1 ಸಿಕ್ಸರ್‌), ಜೋ ರೂಟ್‌ 60 ರನ್‌ (72 ಎಸೆತ, 4 ಬೌಂಡರಿ), ಬೆನ್‌ ಸ್ಟೋಕ್ಸ್‌ (Ben Stokes) 84 ರನ್‌ (76 ರನ್‌, 11 ಬೌಂಡರಿ, 2 ಸಿಕ್ಸರ್‌), ಜೋಸ್‌ ಬಟ್ಲರ್‌ (Jos Buttler) 27 ರನ್‌, ಹ್ಯಾರಿ ಬ್ರೂಕ್‌ 30 ರನ್‌ (17 ಎಸೆತ, 2 ಸಿಕ್ಸರ್‌, 2 ಬೌಂಡರಿ, ಮೊಯಿನ್‌ ಅಲಿ 8 ರನ್‌, ಡೇವಿಡ್‌ ವಿಲ್ಲಿ 15 ರನ್‌ ಬಾರಿಸಿದ್ರೆ, ಗಸ್ ಅಟ್ಕಿನ್ಸನ್ ಶೂನ್ಯ ಸುತ್ತಿದ್ದರು. ಕ್ರಿಸ್‌ವೋಕ್ಸ್‌ 4 ರನ್‌ ಮತ್ತು ಆದಿಕ್‌ ರಶೀದ್‌ ಯಾವುದೇ ರನ್‌ ಗಳಿಸಿದೇ ಅಜೇಯಾಗುಳಿದರು.

    ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 3 ವಿಕೆಟ್‌, ಶಾಹೀನ್‌ ಶಾ ಅಫ್ರಿದಿ ಮತ್ತು ಮೊಹಮ್ಮದ್‌ ವಸೀಮ್‌ ತಲಾ 2 ವಿಕೆಟ್‌, ಇಫ್ತಿಕಾರ್‌ ಅಹ್ಮದ್‌ 1 ವಿಕೆಟ್‌ ಪಡೆದರು.

  • ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    – 10 ರನ್‌ಗಳ ಅಂತರದಲ್ಲೇ 4 ವಿಕೆಟ್‌ ಉಡೀಸ್‌

    ಲಕ್ನೋ: ಮೊಹಮ್ಮದ್‌ ಶಮಿ (Mohammed Shami), ಜಸ್ಪ್ರೀತ್‌ ಬುಮ್ರಾ (Jasprit Bumrah) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಟೀಂ ಇಂಡಿಯಾ‌, ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ನಂತ್ರ ವಿಶ್ವಕಪ್‌ ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಹಾಕಿಕೊಂಡಿದೆ. ಜೊತೆಗೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್‌ (England) ಎದುರು ವಿರೋಚಿತ ಸೋಲನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ (India) ಗೆಲುವು ಸಿಕ್ಕಿರಲಿಲ್ಲ. ಇಂದು 100 ರನ್‌ಗಳ ಭರ್ಜರಿ ಜಯದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.

    ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಮೊದಲ ನಾಲ್ಕು ಓವರ್‌ಗಳಲ್ಲೇ 26 ರನ್‌ ಬಾರಿಸಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 5ನೇ ಓವರ್‌ನಲ್ಲಿ ಬುಮ್ರಾ ಮಾರಕ ದಾಳಿಯಿಂದ ಎರಡು ವಿಕೆಟ್‌ ಕಿತ್ತರು. ಈ ಬೆನ್ನಲ್ಲೇ ಶಮಿ ಕೂಡ ಮಾರಕದಾಳಿ ಮುಂದುವರಿಸಿದ್ದರಿಂದ ಇಂಗ್ಲೆಂಡ್‌ 10 ರನ್‌ಗಳ ಅಂತರದಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದು ತಂಡಕ್ಕೆ ಸೋಲಿನ ಮುನ್ಸೂಚನೆ ನೀಡಿತು. ಸತತ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್‌ 25 ಓವರ್‌ಗಳಲ್ಲಿ 6 ವಿಕೆಟ್‌ಗೆ ಕೇವಲ 84 ರನ್‌ ಗಳಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಇಂಗ್ಲೆಂಡ್‌ ಅಂತಿಮವಾಗಿ 129 ರನ್‌ಗಳಿಗೆ ಸರ್ವಪತನ ಕಂಡಿತು.

    ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 14 ರನ್‌, ಡೇವಿಡ್‌ ಮಲಾನ್‌ 16 ರನ್‌ ಗಳಿಸಿದ್ರೆ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೋಸ್‌ ಬಟ್ಲರ್‌ (Jos Buttler) 10 ರನ್‌, ಮೊಯಿನ್‌ ಅಲಿ 15 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 27 ರನ್‌, ಕ್ರಿಸ್‌ವೋಕ್ಸ್‌ 10 ರನ್‌ ಗಳಿಸಿದ್ರೆ, ಕೊನೆಯಲ್ಲಿ ಆದಿಲ್‌ ರಶೀದ್‌ 13 ರನ್‌ ಗಳಿಸಿದ್ರೆ, ಮಾರ್ಕ್‌ವುಡ್‌ ಶೂನ್ಯಕ್ಕೆ ಔಟಾದರು. ಡೇವಿಡ್‌ ವಿಲ್ಲಿ (David Willey) 13 ರನ್‌ ಗಳಿಸಿ ಅಜೇಯರಾಗುಳಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ (Team India), ಇಂಗ್ಲೆಂಡ್‌ ತಂಡಕ್ಕೆ 230 ರನ್‌ಗಳ ಗುರಿ ನೀಡಿತ್ತು. ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿದ್ದ ಭಾರತಕ್ಕೆ ಆರಂಭದಲ್ಲೇ ನಿರಾಸೆಯಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

    ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]