Tag: Jollywood Studios

  • ಬಿಗ್‌ ಬಾಸ್‌ ಶೂಟಿಂಗ್‌ನಲ್ಲಿ ಸುದೀಪ್‌ ಭಾಗಿ

    ಬಿಗ್‌ ಬಾಸ್‌ ಶೂಟಿಂಗ್‌ನಲ್ಲಿ ಸುದೀಪ್‌ ಭಾಗಿ

    ರಾಮನಗರ: ಬಿಗ್‌ ಬಾಸ್‌ (Bigg Boss) ಮನೆಯಲ್ಲಿ ಮತ್ತೆ ಶೂಟಿಂಗ್‌ ಆರಂಭವಾಗಿದ್ದು ನಟ ಸುದೀಪ್‌ (Sudeep) ಭಾಗಿಯಾಗಿದ್ದಾರೆ.

    ಪ್ರತಿ ಶನಿವಾರ ಮತ್ತು ಭಾನುವಾರ ಸುದೀಪ್‌ ಅವರು ಸ್ಪರ್ಧಿಗಳ ಜೊತೆ ಮಾತನಾಡುತ್ತಾರೆ. ಈ ಕಾರ್ಯಕ್ರಮದ ಶೂಟಿಂಗ್‌ಗಾಗಿ ಸುದೀಪ್‌ ಇಂದು ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದಾರೆ.

    ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಸದ್ಯಕ್ಕೆ ಸಂಪೂರ್ಣವಾಗಿ ಜಾಲಿವುಡ್‌ ಸ್ಟುಡಿಯೋ (Jollywood Studios) ತೆರೆಯಲು ಅನುಮತಿ ನೀಡಿಲ್ಲ. ಆದರೆ ಬಿಗ್‌ ಬಾಸ್‌ ನಡೆಯುವ ಜಾಗ ತೆರೆಯಲು ಮಾತ್ರ ಅನುಮತಿ ನೀಡಿದೆ.  ಇದನ್ನೂ ಓದಿ:  ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

     

    ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಜಾಲಿವುಡ್‌ ಸ್ಟುಡಿಯೋದ ಆಡಳಿತ ಮಂಡಳಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮನವಿ ಮಾಡಿದೆ.

    ಡಿಸಿಎಂ ಡಿಕೆ ಶಿವಕುಮಾರ್‌ ಮಧ್ಯಪ್ರವೇಶದಿಂದ ಮತ್ತೆ ಬಿಗ್‌ ಬಾಸ್‌ ಮನೆಯಲ್ಲಿ ಶೂಟಿಂಗ್‌ ಆರಂಭವಾಗಿದೆ. ಗುರುವಾರ ಮುಂಜಾನೆ ಬಿಡದಿ ರೆಸಾರ್ಟ್‌ನಲ್ಲಿದ್ದ ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ್ದಾರೆ.

  • ಜಾಲಿವುಡ್ ಸ್ಟುಡಿಯೋಗೆ ಅನುಮತಿ – ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

    ಜಾಲಿವುಡ್ ಸ್ಟುಡಿಯೋಗೆ ಅನುಮತಿ – ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

    ರಾಮನಗರ: ಜಾಲಿವುಡ್ ಸ್ಟುಡಿಯೋಗೆ (Jollywood Studio) ರಾತ್ರೋರಾತ್ರಿ ಅನುಮತಿ ನೀಡಿ ಗೇಟ್ ಓಪನ್ ಮಾಡಿದ ಹಿನ್ನೆಲೆ ಜಿಲ್ಲಾಡಳಿತದ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳು (Pro Kannada Organizations) ಜಾಲಿವುಡ್ ಎದುರು ಪ್ರತಿಭಟನೆ ನಡೆಸಿದೆ.

    ಸರ್ಕಾರ ನಿಯಮ ಬಾಹಿರವಾಗಿ ಅನುಮತಿ ನೀಡಿದೆ. ಡಿಸಿಎಂ ಡಿಕೆಶಿ ಜಾಲಿವುಡ್ ಜೊತೆ ಡೀಲ್ ಮಾಡಿಕೊಂಡು ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಹೋರಾಟಗಾರರು, ಗೇಟ್ ಮೇಲೆ ಹತ್ತಿ ಹೈಡ್ರಾಮ ಸೃಷ್ಟಿಸಿದರು. ಕಾಂಪೌಂಡ್ ಹಾರಿ ಒಳನುಗ್ಗಲು ಯತ್ನಿಸಿದರು. ಇದನ್ನೂ ಓದಿ: ದಾವಣಗೆರೆ | ರಾಮಜ್ಯೋತಿ ರಥಯಾತ್ರೆ ದುರಂತಕ್ಕೆ 35 ವರ್ಷ – ಫೈರಿಂಗ್‌ನಲ್ಲಿ ಮೃತಪಟ್ಟವರ ಬ್ಯಾನರ್‌ ತೆರವಿಗೆ ಭಾರೀ ವಿರೋಧ

    ಈ ವೇಳೆ ಜಾಲಿವುಡ್ ಸೆಕ್ಯುರಿಟಿ ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆದಿದ್ದು, ಕೂಡಲೇ ಜಾಲಿವುಡ್ ಸಂಪೂರ್ಣ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು. ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಜೀಪ್‌ನಲ್ಲಿ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ `ನಟ್ಟು ಬೋಲ್ಟ್’ ಹೇಳಿಕೆಗೂ ಸಂಬಂಧವಿಲ್ಲ: ಶಿವರಾಜ್ ತಂಗಡಗಿ

  • ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

    ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ

    ಬೆಂಗಳೂರು: ಒಂದು ಬಾರಿ ಬಿಗ್‌ಬಾಸ್ (Bigg Boss Kannada 12) ಶೋಗೆ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ (Ramalingareddy) ಬಿಗ್‌ಬಾಸ್ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

    ಬಿಗ್‌ಬಾಸ್‌ಗೆ ಬೀಗ ಹಾಕಿ ಮತ್ತೆ ತೆಗೆದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ವಿಷಯವನ್ನು ಮಾಧ್ಯಮಗಳ ಮೂಲಕ ನೋಡಿದೆ. ಮಾಲಿನ್ಯ ನಿಯಂತ್ರಣ ಬೋರ್ಡ್ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಬಿಗ್‌ಬಾಸ್ ನಿಯಮ ಮೀರಿದ್ದಾರೆ ಅಂತ ನೋಟಿಸ್ ಕೊಟ್ಟಿದ್ದರು. ಅವರು ನೋಟಿಸ್‌ಗೂ ಕ್ಯಾರೆ ಎನ್ನಲಿಲ್ಲ ಅಂತ ಬೀಗ ಹಾಕಿದ್ರು. ಈಗ ನಿನ್ನೆ ಡಿಕೆ ಶಿವಕುಮಾರ್ (D.K.Shivakumar) ಅನುಮತಿ ಕೊಡಿ ಅಂತ ಹೇಳಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದೆ. ನನಗೆ ಇಷ್ಟೇ ಮಾಹಿತಿ ಗೊತ್ತಿರೋದು. ನಾನು ಊರಲ್ಲಿ ಇರಲಿಲ್ಲ. ಇಷ್ಟೇ ಗೊತ್ತಿರೋದು ಅಂತ ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಒಂದು ಸಾರಿ ನೋಟಿಸ್ ಕೊಟ್ಟ ಮೇಲೆ, ಮುಚ್ಚಿದ ಮೇಲೆ ಅದು ಸರಿ ಆಗೋವರೆಗೂ ತೆಗೆಯೋಕೆ ಅವಕಾಶ ಕೊಡಬಾರದು. ನನಗೆ ಡಿಸಿ ಮಾಹಿತಿ ಕೊಡೋಕೆ ನಾನು ಊರಲ್ಲಿ ಇರಲಿಲ್ಲ. ಮಾಲಿನ್ಯ ‌ಬೋರ್ಡ್ ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡಿದೆ. ಏನಾಗಿದೆ ತಿಳಿದುಕೊಳ್ಳುತ್ತೇನೆ. ಈಗ ಏನ್ ಆಯ್ತು ಅಂತ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು.

    ಪರಿಸರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಿಡದಿಯಲ್ಲಿರುವ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಅಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ರಾತ್ರೋರಾತ್ರಿ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಲಾಗಿತ್ತು. ಒಂದು ದಿನದ ನಾಟಕೀಯ ಬೆಳವಣಿಗೆ ಬೆನ್ನಲ್ಲೇ, ಜಾಲಿವುಡ್‌ ಸ್ಟುಡಿಯೋಸ್‌ ಗೇಟ್‌ಗೆ ಹಾಕಿರುವ ಸೀಲ್‌ ತೆಗೆಯುವಂತೆ ಡಿಸಿಎಂ ಸೂಚನೆ ನೀಡಿದರು. ಈಗ ಜಾಲಿವುಡ್‌ ಓಪನ್‌ ಆಗಿದ್ದು, ಸ್ಪರ್ಧಿಗಳು ಕೂಡ ಬಿಗ್‌ಬಾಸ್‌ ಮನೆಗೆ ವಾಪಸ್‌ ಆಗಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

  • ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ಜಾಲಿವುಡ್ ಸ್ಟುಡಿಯೋಸ್‌ (Jollywood Studios) ಬೀಗ ಓಪನ್ ಆಗಿದೆ. ಒಂದು ಕಡೆ ಜಾಲಿವುಡ್ ಹಾಗೂ ಬಿಗ್‌ಬಾಸ್‌ಗೆ (Bigg Boss Kannada 12) ಗುಡ್ ನ್ಯೂಸ್ ಸಿಕ್ಕಿದೆ. ರಾತ್ರೋರಾತ್ರಿ ಬಿಗ್‌ಬಾಸ್ ಸ್ಪರ್ಧಿಗಳು ವಾಪಸ್ ಬಿಗ್‌ಹೌಸ್ ಸೇರಿದ್ದಾರೆ. ಆದರೆ, ಬಿಗ್‌ಬಾಸ್ ಮನೆಯೊಳಗೆ ಹೋದರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ.

    ಬಿಗ್‌ಬಾಸ್ ಆಡಳಿತ ಮಂಡಳಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ಕಾಪಿ ಬರೋವರೆಗೂ ಶೂಟಿಂಗ್ ಶುರು ಮಾಡಲು ಹಿಂದೇಟು ಹಾಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಜಾಲಿವುಡ್ ಸ್ಟುಡಿಯೋಸ್‌ ಓಪನ್ ಮಾಡಿಸಿದರೂ ಶುರುವಾಗಿಲ್ಲ ಬಿಗ್‌ಬಾಸ್ ಶೂಟಿಂಗ್. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಸಿಗುವ ತನಕ ಬಿಗ್‌ಬಾಸ್ ಆಯೋಜಕರ ತಂಡ ಶೂಟಿಂಗ್ ಶುರು ಮಾಡುತ್ತಿಲ್ಲ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಅಂದಹಾಗೆ ಇನ್ನು ಎರಡು ದಿನಗಳ ಕಾಲ ಆಗುವಷ್ಟು ಎಪಿಸೋಡ್ ಬ್ಯಾಂಕಿಂಗ್ ಇರುವ ಧೈರ್ಯ ಬಿಗ್‌ಬಾಸ್ ಆಡಳಿತ ಮಂಡಳಿಗಿದೆ. ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಗುವವರೆಗೂ ಕಾಯುತ್ತಿದೆ. ಬಿಗ್‌ಬಾಸ್ ಆಡಳಿತ ಮಂಡಳಿ. ‘ಪಬ್ಲಿಕ್ ಟಿವಿ’ಗೆ ಬಿಗ್‌ಬಾಸ್ ಆಡಳಿತ ಮಂಡಳಿಯ ಉನ್ನತ ಮೂಲಗಳ ಮಾಹಿತಿ ಸಿಕ್ಕಿದೆ.

  • ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಬೆಂಗಳೂರು/ರಾಮನಗರ: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮಾಲಿನ್ಯ ನಿಯಂತ್ರಣ ಮಂಡಳಿಗೆ ಠಕ್ಕರ್‌ ನೀಡಿ ಬಿಗ್‌ ಬಾಸ್‌ (Bigg Boss) ಮನೆಯನ್ನು ಓಪನ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜಾಲಿವುಡ್‌ ಸ್ಟುಡಿಯೋದ (Jollywood Studios) ಆವರಣದಲ್ಲಿ ಬಿಗ್‌ಬಾಸ್‌ ಶೋ ನಡೆಯುತ್ತಿತ್ತು. ಮಾಲಿನ್ಯ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ರಾಮನಗರ ಜಿಲ್ಲಾಡಳಿತ ಜಾಲಿವುಡ್‌ ಸ್ಟುಡಿಯೋಗೆ ಅ.7 ರಂದು ಬೀಗ ಹಾಕಿತ್ತು. ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಿದ್ದರಿಂದ ಬಿಗ್‌ಬಾಸ್‌ ಮನೆಗೂ ಬೀಗ ಬಿದ್ದಿತ್ತು.

    ಬಿಗ್‌ ಬಾಸ್‌ ಮನೆಗೆ ಬೀಗ ಬಿದ್ದ ವಿಚಾರದ ಬಗ್ಗೆ ಬುಧವಾರ ಬೆಳಗ್ಗೆಯೇ ಡಿಕೆಶಿ ಸಾಫ್ಟ್‌ ಕಾರ್ನರ್‌ ವ್ಯಕ್ತಪಡಿಸಿದ್ದರು. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್‌ ನಡೆಯುವ ಜಾಲಿವುಡ್‌ ಸ್ಟುಡಿಯೋ ಬಂದ್‌ ಮಾಡಲಾಗಿದೆ. ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.  ಇದನ್ನೂ ಓದಿ: ಬಿಗ್‌ ಬಾಸ್‌ ಓಪನ್‌ ಬೆನ್ನಲ್ಲೇ ಮುಂಜಾನೆ ಮನೆ ಪ್ರವೇಶಿಸಿದ ಸ್ಪರ್ಧಿಗಳು

    ಡಿಕೆಶಿ ಪ್ರತಿಕ್ರಿಯೆ ನೀಡಿದ್ದರೂ ಇನ್ನೊಂದು ಕಡೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯಸ್ಥ ನರೇಂದ್ರ ಸ್ವಾಮಿ (Narendraswamy) ಮಧ್ಯಾಹ್ನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಜಾಲಿವುಡ್‌ ಸ್ಟುಡಿಯೋ ನಿಯಮಗಳನ್ನೇ ಪಾಲನೆ ಮಾಡಿಲ್ಲ. ಒಂದು ಅರ್ಜಿಯನ್ನೇ ಹಾಕಿಲ್ಲ ಎಂದು ಹೇಳಿ ಕಿಡಿಕಾರಿದ್ದರು. ಅಷ್ಟೇ ಅಲ್ಲದೇ ರಾಮನಗರ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕಾರವಿಲ್ಲ. ನಾವು ಅನುಮತಿ ನೀಡಿದರೆ ಮಾತ್ರ ಜಾಲಿವುಡ್‌ ಸ್ಟುಡಿಯೋವನ್ನು ತೆರೆಯಬಹುದು ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

    ನರೇಂದ್ರ ಸ್ವಾಮಿ ಹೇಳಿಕೆಯಿಂದ ಬಿಗ್‌ ಬಾಸ್‌ ಭವಿಷ್ಯ ಅತಂತ್ರವಾಗಿತ್ತು. ಪತ್ರಿಕಾಗೋಷ್ಠಿಬಳಿಕ ಖಾಸಗಿ ಹೋಟೆಲಿನಲ್ಲೇ ನರೇಂದ್ರಸ್ವಾಮಿ ಭೇಟಿ ಮಾಡಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಮನವೊಲಿಕೆಗೆ ಯತ್ನಿಸಿದ್ದರು. ಈ ಮನವೊಲಿಕೆಗೆ ಬಗ್ಗದ ನರೇಂದ್ರಸ್ವಾಮಿ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಇದನ್ನೂ ಓದಿ:  ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    ರಾತ್ರಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಡಿಕೆಶಿಯನ್ನು ಭೇಟಿಯಾಗಿದ್ದಾರೆ. ಆ ನಂತರ ಬೆಂಗಳೂರು ದಕ್ಣಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಡಿಕೆಶಿ ಸ್ಟೇಟಸ್ ರಿಪೋರ್ಟ್‌ ಪಡೆದಿದ್ದಾರೆ. ಈ ವೇಳೆ ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋರ್ಟ್ ವಿಚಾರ ಕೋರ್ಟ್‌ನಲ್ಲೇ ನಡೆಯಲಿ. ಆದರೆ ಜಾಲಿವುಡ್ ಸಿಬ್ಬಂದಿಗೆ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಕೊಡದಷ್ಟು ಉದ್ದಟತನ ತೋರಿದ್ದಾರೆ ಎಂದು ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತಾರೆ. ಬಿಗ್‌ಬಾಸ್‌ನಂತಹ ದೊಡ್ಡ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಬೇಡ ಎಂದು ಡಿಕೆಶಿ ಮನವೊಲಿಕೆ ಮಾಡಿದ್ದಾರೆ. ಮನವೊಲಿಕೆಯ ಬೆನ್ನಲ್ಲೇ ನೀವೇ ತೀರ್ಮಾನ ಮಾಡಿ ಎಂದು ಡಿಕೆಶಿಗೆ ನರೇಂದ್ರ ಸ್ವಾಮಿ ಹೇಳಿದ್ದಾರೆ. ಕೊನೆಗೆ ಡಿಕೆಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಾಲಿವುಡ್‌ ಸ್ಟುಡಿಯೋದಲ್ಲಿರುವ ಬಿಗ್‌ ಬಾಸ್‌ ಜಾಗವನ್ನು ಓಪನ್ ಮಾಡಲು ಸೂಚನೆ ನೀಡಿದ್ದಾರೆ. ಈ ಸೂಚನೆಯಂತೆ ಬಂದ್‌ ಆಗಿದ್ದ ಬಿಗ್‌ಬಾಸ್‌ ಮನೆಯನ್ನು ತೆರೆಯಲಾಗಿದ್ದು ಸ್ಪರ್ಧಿಗಳು ಮುಂಜಾನೆ ದೊಡ್ಮನೆ ಪ್ರವೇಶಿಸಿದ್ದಾರೆ.

  • ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

    ಬಿಗ್‌ಬಾಸ್‌ಗೆ ರಿಲೀಫ್‌| ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ – ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

    ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೂಚನೆ ನೀಡಿದ್ದು, ಬಿಗ್‌ಬಾಸ್‌ಗೆ ರಿಲೀಫ್‌ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

    ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಸಕಾಲಿಕ ಸ್ಪಂದನೆಗಾಗಿ ಡಿ.ಕೆ.ಶಿವಕುಮಾರ್ ಸರ್‌ಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್‌ಬಾಸ್‌ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಲಪಾಡ್‌ ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು. ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇಲ್ಲಿಯೇ ಇರುತ್ತದೆ ಎಂದು ಸುದೀಪ್‌ ಸಂದೇಶ ಹಂಚಿಕೊಂಡಿದ್ದಾರೆ.

    ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ ಮಾಡಲಾಗಿತ್ತು. ಸ್ಟುಡಿಯೋಸ್‌ನಲ್ಲೇ ಇರುವ ಬಿಗ್‌ಬಾಸ್‌ ಮನೆಗೂ ಇದರ ಬಿಸಿ ತಟ್ಟಿತ್ತು. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಹಾಕಲಾಗಿತ್ತು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

    ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಟ್ಟು ಬೋಲ್ಟು ಹೇಳಿಕೆ ಇದೇ ಹೊತ್ತಲ್ಲಿ ಚರ್ಚೆಗೆ ಬಂದಿತು. ಸುದೀಪ್ ಟಾರ್ಗೆಟ್ ಬಗ್ಗೆಯೇ ಬಿಸಿಬಿಸಿ ಚರ್ಚೆಯಾಗಿತ್ತು. ಕನ್ನಡ ಇಂಡಸ್ಟ್ರಿ ಟಾರ್ಗೆಟ್ ಮಾಡಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳ ಸುರಿಮಳೆ ಬಂದಿತ್ತು.

    ಈಗ ಸ್ಟುಡಿಯೋಸ್‌ ಓಪನ್‌ಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ, Thank U sir ಅಂತಾ ಸ್ವತಃ ಕಿಚ್ಚ ಸುದೀಪ್ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ದಾರೆ.

  • ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    – ಈಗಲ್‌ಟನ್‌ ರೆಸಾರ್ಟ್‌ನಿಂದ ಬಿಗ್‌ಬಾಸ್‌ ಮನೆಗೆ 17 ಸ್ಪರ್ಧಿಗಳು ಇಂದೇ ಶಿಫ್ಟ್‌

    ಜಾಲಿವುಡ್‌ ಬಂದ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್‌ಬಾಸ್‌ಗೆ ಕೊನೆಗೂ ಗುಡ್‌ನ್ಯೂಸ್‌ ಸಿಕ್ಕಿದೆ. ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯುವಂತೆ ಬೆಂಗಳೂರು ದಕ್ಷಿಣ ಡಿಸಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನಿರ್ದೇಶನ ನೀಡಿದ್ದಾರೆ.

    ಡಿಸಿಎಂ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಕೆಶಿ, ಬಿಗ್‌ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ.

    ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು.

    ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

  • ಬಿಗ್ ಬಾಸ್ ಮನೆಗೆ ಬೀಗ; ಮಾಜಿ ಸ್ಪರ್ಧಿಗಳು ತೀವ್ರ ಬೇಸರ

    ಬಿಗ್ ಬಾಸ್ ಮನೆಗೆ ಬೀಗ; ಮಾಜಿ ಸ್ಪರ್ಧಿಗಳು ತೀವ್ರ ಬೇಸರ

    – ರಾಜಕೀಯ ದುರುದ್ದೇಶ ಎಂದ ಪ್ರಶಾಂತ್ ಸಂಬರಗಿ

    ರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್‌ಬಾಸ್ (Bigg Boss) ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಬಿದ್ದಿತ್ತು. ಈ ಹಿನ್ನೆಲೆ ಜಾಲಿವುಡ್ ಸ್ಟುಡಿಯೋದಿಂದ ಬಿಗ್‌ಬಾಸ್ 12ರ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಶೋ ಸ್ಥಗಿತಗೊಂಡ ಬಗ್ಗೆ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳು ಬೇಸರ ಹೊರಹಾಕಿದ್ದಾರೆ.

    ರಾಜಕೀಯ ದುರುದ್ದೇಶ: ಪ್ರಶಾಂತ್ ಸಂಬರಗಿ
    ಜಾಲಿವುಡ್‌ಗೆ ಬೀಗ ಬಿದ್ದ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashanth Sambargi) ಮಾತನಾಡಿ, ರಾಜಕೀಯ ದುರುದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಕಳೆದ ಬಾರಿ ಹುಲಿ ಉಗುರಿನ ಕಥೆ ಹೇಳಿ ವರ್ತೂರ್ ಸಂತೋಷ್‌ರನ್ನ ಬಂಧನ ಮಾಡಲಾಗಿತ್ತು. ನಾವು ಸ್ಪರ್ಧಿಯಾಗಿದ್ದಾಗಲು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿ ರೋಲ್ ಕಾಲ್ ಮಾಡಿಕೊಂಡಿದ್ದನ್ನ ನೋಡಿದ್ದೇವೆ. ಈ ಬಾರಿಯೂ ಕಾಂಗ್ರೆಸ್ ಏಜೆಂಟ್‌ಗಳಾಗಿರುವ ನಕಲಿ, ಡೋಂಗಿ ಕನ್ನಡ ಹೋರಾಟಗಾರರ ದೂರಿನ ಮೇಲೆ ಕ್ರಮ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಸ್ಪರ್ಧಿಗಳು ನೂರಾರು ಕನಸು ಕಟ್ಟಿಕೊಂಡು ಬಂದಿರ್ತಾರೆ: ಶಿಶಿರ್ ಶಾಸ್ತ್ರಿ
    ಬಿಗ್‌ಬಾಸ್ 11ರ ಸ್ಪರ್ಧಿ ಶಿಶಿರ್ ಶಾಸ್ತ್ರಿ (Shishir Shastry) ಮಾತನಾಡಿ, ಶೋ ಹೀಗೆ ಸಡನ್ ಆಗಿ ನಿಂತಿರೋದು ತುಂಬಾ ಬೇಸರ ತಂದಿದೆ. 3 ತಿಂಗಳು ನಡೆಯುವ ಶೋ ಆಗಿರುವ ಬಿಗ್‌ಬಾಸ್‌ನಲ್ಲಿ ನೂರಾರು ಕಾರ್ಮಿಕರ ಶ್ರಮ ಇದೆ. ಶೋ ನಿಂತಿರೋದ್ರಿಂದ ಅವ್ರ ಜೀವನವೂ ಸಹ ಕಷ್ಟಕರವಾಗಲಿದೆ. ಸ್ಪರ್ಧಿಗಳು ಸಹ ನೂರಾರು ಕನಸು ಕಟ್ಟಿಕೊಂಡು ಶೋಗೆ ಹೋಗಿದ್ದಾರೆ. ಸಹಜವಾಗಿಯೇ ಅವರಿಗೆ ಶಾಕ್ ಆಗಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ತಾತ್ಕಾಲಿಕವಾಗಿ ಶೋಗೆ ಹಿನ್ನೆಡೆ: ರಜತ್
    ಬಿಗ್‌ಬಾಸ್ 11ರ ಸ್ಪರ್ಧಿ ರಜತ್ (Rajath) ಮಾತನಾಡಿ, ಕಾನೂನಿನ ಮೇಲೆ ನನಗೆ ಅಪಾರವಾದ ಗೌರವ ಇದೆ. ಕೆಲವು ಸಂಘಟನೆಗಳು ಯಾಕೆ ಹೀಗೆ ಮಾಡುತ್ತಿವೆ ಅನ್ನೋದು ಗೊತ್ತಾಗುತ್ತಿಲ್ಲ. ಸ್ಪರ್ಧಿಗಳು ಬಿಗ್‌ಬಾಸ್‌ಗೆ ಸಾವಿರಾರು ಕನಸುಗಳನ್ನ ಕಟ್ಟಿಕೊಂಡು ಬಂದಿರುತ್ತಾರೆ. ತಾತ್ಕಾಲಿಕವಾಗಿ ಸ್ವಲ್ಪ ಹಿನ್ನೆಡೆ ಆಗಿ ಶೋ ನಿಂತಿರಬಹುದು. ಆದರೆ ಸುದೀಪ್ ಅವ್ರಿಗೆ ದೊಡ್ಡ ಶಕ್ತಿಯಿದೆ. ಮತ್ತೆ ಬಿಗ್‌ಬಾಸ್ ಪ್ರಾರಂಭವಾಗುತ್ತದೆ ಎಂದಿದ್ದಾರೆ.

    ಸ್ಪರ್ಧಿಗಳ ಕನಸಿಗೆ ಬರೆ: ಬಸ್ ಕಂಡೆಕ್ಟರ್ ಆನಂದ್
    ಬಿಗ್‌ಬಾಸ್ 6ರ ಸ್ಪರ್ಧಿ ಬಸ್ ಕಂಡೆಕ್ಟರ್ ಆನಂದ್ (Bus conductor Anand) ಪ್ರತಿಕ್ರಿಯಿಸಿ, ಇದು ಬಿಗ್‌ಬಾಸ್ ಮೇಲೆ ಬಂದ ಆರೋಪವಲ್ಲ. ಇದು ಕನ್ನಡ ರಿಯಾಲಿಟಿ ಶೋಗೆ ಆದ ಅವಮಾನ. ಶೋನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸ್ಪರ್ಧಿಗಳ ಕನಸುಗಳಿಗೆ ಬರೆ ಎಳೆದ ಹಾಗೆ ಆಗಿದೆ. ಜಾಲಿವುಡ್‌ನಲ್ಲಿ ಬಿಗ್‌ಬಾಸ್ ಸೆಟ್ ಹಾಕುವಾಗ ಗಮನಹರಿಸಬೇಕಿತ್ತು. ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸೂರ್ಯ ಚಂದ್ರರೂ ಇರೋದು ಎಷ್ಟು ಸತ್ಯವೋ, ಇನ್ನೆರಡು ದಿನದ ಒಳಗೆ ಬಿಗ್‌ಬಾಸ್ ಆರಂಭವಾಗೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

    ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆ ಒಳಗೆ: ರಕ್ಷಕ್ ಬುಲೆಟ್
    ಬಿಗ್‌ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್ (Rakshak Bullet) ಪ್ರತಿಕ್ರಿಯಿಸಿ, ಸಡನ್ನಾಗಿ ಎಲ್ಲಾ ಸ್ಪರ್ಧಿಗಳನ್ನು ಹೊರಗೆ ಕಳುಹಿಸಿದಾಗ ಸಹಜವಾಗಿಯೇ ಅವರಿಗೆ ಬೇಜಾರಾಗಿರುತ್ತದೆ. ಇಡೀ ಮನೆ ಲಾಕ್ ಆಗಿದೆ. ಈ ಸಲ ಮಾತ್ರ ಹೀಗೆ ಆಗಿದೆ. ಬಿಗ್‌ಬಾಸ್ ಶೋಗೆ ಸ್ಪರ್ಧಿಗಳು ಕನಸು ಕಟ್ಕೊಂಡು ಬಂದಿರುತ್ತಾರೆ. ಏಕಾಏಕಿ ಶೋ ಬಂದ್ ಆದಾಗ ಭಯ ಇರುತ್ತದೆ. ಆದರೆ ಈಗ ಮತ್ತೆ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಹೋಗ್ತಿದ್ದಾರೆ ಎಂದಿದ್ದಾರೆ.

  • ಬಿಗ್ ಬಾಸ್ ಮನೆಗೆ ಬೀಗ; ಸರ್ಕಾರದಿಂದ ಸುದೀಪ್ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

    ಬಿಗ್ ಬಾಸ್ ಮನೆಗೆ ಬೀಗ; ಸರ್ಕಾರದಿಂದ ಸುದೀಪ್ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಬಿಗ್ ಬಾಸ್ (Bigg Boss) ಕಾರ್ಯಕ್ರಮದ ಮನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಕಿಸಿದ ಪ್ರಕರಣ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮಂಡಳಿಯ ನಡೆಗೆ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಛಲವಾದಿ ನಾರಾಯಣ ಸ್ವಾಮಿ, ಬೀಗ ಹಾಕಲು ಅದೇನು ಫ್ಯಾಕ್ಟರಿಯೇ? ಮಾಲಿನ್ಯ ನಿಯಂತ್ರಣ ಮಂಡಳಿಗೂ ಇದಕ್ಕೂ ಏನು ಸಂಬಂಧ? ಇಲ್ಲಿ ಅನಾರೋಗ್ಯಕರ ಹೊಗೆ ಸೂಸುವ ಕೆಲಸ ನಡೆದಿದೆಯೇ? ಅಂಥ ಫ್ಯಾಕ್ಟರಿಗಳನ್ನು ಇವರು ಮುಚ್ಚಿಲ್ಲ, ಅಲ್ಲಿ ಮಾತ್ರ ಹೊಂದಾಣಿಕೆ. ಇಲ್ಲೇನಿದೆ? ಇದು ಒಂದು ಮನೆಯ ಚಟುವಟಿಕೆ. ಇನ್ನು ಮುಂದೆ ಮನೆ ಮನೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಟಿಫಿಕೇಟ್ ಬೇಕೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರದಂತೆ ನೋಡಿಕೊಳ್ಳಿ- ಛಲವಾದಿ ನಾರಾಯಣಸ್ವಾಮಿ

    ಈ ಮೂಲಕ ಸರ್ಕಾರವು ಸುದೀಪ್ ಅವರನ್ನು ಟಾರ್ಗೆಟ್ ಮಾಡಿದೆ. ರಾಜಣ್ಣ, ನಾಗೇಂದ್ರ ಅವರನ್ನು ಟಾರ್ಗೆಟ್ ಮಾಡಿ ಆಗಿದೆ. ಈಗ ಸುದೀಪ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದರೆ ಯಾರನ್ನು ಗುರಿ ಮಾಡಿದ್ದಾರೆಂದು ತಿಳಿದುಕೊಳ್ಳಿ. ಇದು ಜನಾಂಗೀಯ ಟಾರ್ಗೆಟ್ ಆಗುತ್ತದೆ. ಎಚ್ಚರದಿಂದ ಇರುವುದು ಒಳ್ಳೆಯದು. ಜನ ಇದನ್ನು ಸಹಿಸುವುದಿಲ್ಲ. ನಟ್ ಬೋಲ್ಟ್ ನೀವು ಯಾರಿಗೆ ಟೈಟ್ ಮಾಡಲು ಹೊರಟಿದ್ದೀರೋ ಅವರೆಲ್ಲ ಸೇರಿ ಸರ್ಕಾರದ ನಟ್ ಮತ್ತು ಬೋಲ್ಟ್ ಟೈಟ್ ಮಾಡುವ ಕಾಲ ಹತ್ತಿರ ಬಂದಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

  • ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    – ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ

    ಬೆಂಗಳೂರು: ಬಿಗ್ ಬಾಸ್‌ಗೆ (Bigg Boss) 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ (PM Narendraswamy) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ (Jollywood) ಸಂಸ್ಥೆಗೆ ನೋಟಿಸ್ ಕೊಟ್ಟಿರೋದು. ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ. ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: `ನಟ್ಟು ಬೋಲ್ಟು’ ಹೇಳಿಕೆಗೂ ಬಿಗ್‌ಬಾಸ್ ಬಂದ್‌ಗೂ ಸಂಬಂಧವಿಲ್ಲ – ಈಶ್ವರ್ ಖಂಡ್ರೆ 

    ಜಾಲಿವುಡ್ ಮೂವತ್ತು ಎಕ್ರೆ ಪ್ರದೇಶದಲ್ಲಿದೆ. ಬಿಗ್ ಬಾಸ್ ನಡೆಯುತ್ತಿರೋದು ಒಂದು ಎಕ್ರೆ. ಅಮ್ಯೂಸ್‌ಮೆಂಟ್ ಪಾರ್ಕ್ ದೂರನ್ನು ಆಧರಿಸಿ ನೋಟಿಸ್ ಕೊಟ್ಟಿರೋದು. ಅವರು ಕನಿಷ್ಟ ಅರ್ಜಿ ಸಲ್ಲಿಕೆ ಮಾಡಿಲ್ಲ. ಇಷ್ಟು ದಿನ ಮುಚ್ಚಲು ಸಮಯಾವಕಾಶ ಯಾಕೆ? ಏಕಾಏಕಿ ಮುಚ್ಚಲು ಆಗಲ್ಲ. ಕೋರ್ಟ್ ತಪರಾಕಿ ಹಾಕಬಹುದು. ಈ ಫೈಲ್ ಪೆಂಡಿಂಗ್ ಇರೋದು ಆಗಸ್ಟ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇನೆ. ಮೂರು ನೋಟಿಸ್ ಕೊಟ್ಟಿದ್ದೇವೆ. ಸ್ಪಾಟ್ ಮಹಜರು ಆಗಿದೆ. ಹತ್ತು ದಿನಗಳ ಕಾಲವಕಾಶವನ್ನು ಕೊಡಬಹುದು. ಅಫಿಡವಿಟ್ ಜೊತೆಗೆ ಮನವಿ ಪತ್ರ ಕೊಟ್ಟರೆ ಕಾಲಾವಕಾಶವನ್ನು ಕೊಡಬಹುದು. ಅಂದರೆ ಕಾನೂನಿನಲ್ಲಿ ಅವಕಾಶ ಇದೆ ಆದರೆ ಇದುವರೆಗೆ ತೀರ್ಮಾನ ಆಗಿಲ್ಲ. ರೆಡ್ ಕೆಟಗರಿ ಆಗಿರೋದ್ರಿಂದ 90 ದಿನ ಅವಕಾಶ ನೀಡಬಹುದು. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ನಾನು ರಾಜಕೀಯ ಪಕ್ಷಕ್ಕೆ ಈಗ ಸೇರಿದವನು ಅಲ್ಲ. ನಾನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ. ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಕಾಯ್ದೆಯಡಿ ಕ್ಲೋಸರ್ ಆದೇಶ ಕೊಟ್ಟಿದ್ದೇವೆ. ದಂಡವನ್ನು ಕಟ್ಟಬೇಕಾಗುತ್ತೆ. ಈ ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ. ಅವರು ದಂಡವನ್ನು ಕಟ್ಟಬೇಕಾಗುತ್ತದೆ. ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಏಕಕಾಲಕ್ಕೆ ಮನವಿ ಕೊಟ್ಟರೆ ಕಷ್ಟ. ಜಾಲಿವುಡ್‌ನವರು ಕೂಡ ಕರೆ ಮಾಡಿದ್ದಾರೆ. ಅವರಿಗೂ ಅದನ್ನೇ ಹೇಳಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಏನಾದರೂ ಮಾಡಬಹುದು, ನೋಡೋಣ ಎಂದರು. ಇದನ್ನೂ ಓದಿ: ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ