Tag: jollyride

  • ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    – ಸ್ಪೀಡ್ ಬ್ರೇಕರ್ ನೋಡದೆ ಬೈಕ್ ಹಾರಿಸಿದ ಸ್ನೇಹಿತೆ

    ಚಂಡೀಗಢ: ಯುವತಿಯೊಬ್ಬಳು ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಸ್ನೇಹಿತೆ ನೊಂದಿಗೆ ಜಾಲಿರೈಡ್‍ಗೆ ಹೋಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.

    ಮೃತಳನ್ನು ಅನು ಎಂದು ಗುರುತಿಸಲಾಗಿದೆ. ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಜಾಲಿ ರೈಡ್‍ಗೆ ಹೋಗಿದ್ದಾಗ ಬೈಕ್‍ನಿಂದ ಬಿದ್ದು ಅನು ಮೃತಪಟ್ಟಿದ್ದಾಳೆ.

    ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ನನ್ನ ಮಗಳ ಸಾವಿಗೆ ಕಾರಣ ಎಂದು ಹೇಳಿ ಮೃತಳ ತಾಯಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಚಂಡೀಗಢದ ಮೌಲಿ ಜಾಗ್ರಾನ್‍ನಲ್ಲಿ ನೆಲೆಸಿರುವ ಅನು ಸ್ನೇಹಿತೆ ಉಸ್ಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದ ಡೇರಾ ಬಸ್ಸಿಯ ಖೇರಿ ಗ್ರಾಮದ ಮೂಲದ ಅನು ಸೆಕ್ಟರ್ 15ರ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದಳು.

    ಭಾನುವಾರ ಅನು ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿ ನಂತರ ಜಾಲಿ ರೈಡ್‍ಗೆ ಅಂತ ಬೈಕಿನಲ್ಲಿ ಉಸ್ಮಾನ್ ಕರೆದುಕೊಂಡು ಹೋಗಿದ್ದಾಳೆ. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ. ಆಗ ಆಯ ತಪ್ಪಿ ಅನು ಕೆಳಗೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಅನು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಪಾರ್ಟಿಗೆ ಆಹ್ವಾನಿಸಲ್ಪಟ್ಟ ಉಸ್ಮಾನ್ ರಾತ್ರಿ 9.30ಕ್ಕೆ ಮಗಳನ್ನು ಬೈಕಿನಲ್ಲಿ ಜಾಲಿ ಡೈಡ್‍ಗೆ ಕರೆದುಕೊಂಡು ಹೋಗಿದ್ದಳು. ಆದರೆ ರಾತ್ರಿ 10.15ಕ್ಕೆ ನನ್ನ ಮಗಳ ಸ್ನೇಹಿತೆ ಆರತಿ ಫೋನ್ ಮಾಡಿ, ಅನುಗೆ ಅಪಘಾತವಾಗಿದೆ, ಆಕೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಳು ಎಂದು ತಾಯಿ ಉರ್ಮಿಲಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ.

    ಅನು ಸಹೋದರಿ ಪ್ರಿಯಾಂಕಾ ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಅನು ಮೃತಪಟ್ಟಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸದ್ಯಕ್ಕೆ ಪಂಚಕುಲ ಪೊಲೀಸರು ಐಪಿಸಿಯ ಸೆಕ್ಷನ್ ಅಡಿಯಲ್ಲಿ ಅನು ಸ್ನೇಹಿತೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದು ಬಸ್ಕಿ ಹೊಡೆದ ಉದ್ಯಮಿ ಪುತ್ರ

    ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದು ಬಸ್ಕಿ ಹೊಡೆದ ಉದ್ಯಮಿ ಪುತ್ರ

    ಇಂದೋರ್: ಲಾಕ್‍ಡೌನ್ ಇದ್ದರೂ ದುಬಾರಿ ಕಾರಿನಲ್ಲಿ ಜಾಲಿರೈಡ್ ಬಂದ ಉದ್ಯಮಿ ಮಗನಿಗೆ ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

    ಕೊರೊನಾ ಹೆಚ್ಚಾಗದಿರಲಿ ಎಂದು ಕೇಂದ್ರ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಆದರೆ ಕೆಲ ಕಡೆ ನಕಲಿ ಪಾಸ್ ಪಡೆದು ಅನಾವಶ್ಯಕವಾಗಿ ಮನೆಯಿಂದ ಹೊರಬರುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಕೆಲ ಶ್ರೀಮಂತರ ಮಕ್ಕಳು ಲಾಕ್‍ಡೌನ್ ನಡುವೆಯೂ ಜಾಲಿರೈಡ್ ಮಾಡುತ್ತಿದ್ದಾರೆ.

    ಹಾಗೆಯೇ ಇಂದೋರ್ ನಗರದಲ್ಲಿ ಜಾಲಿರೈಡ್ ಮಾಡುತ್ತಿದ್ದ ಉದ್ಯಮಿ ದೀಪಕ್ ದರ್ಯಾನಿ ಅವರ ಮಗನನ್ನು ಪೊಲೀಸರು ಅಡ್ಡಗಟ್ಟಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ದರ್ಯಾನಿ ಅವರ 20 ವರ್ಷದ ಪುತ್ರ ಹಳದಿ ಬಣ್ಣದ ಓಪನ್ ಪೋರ್ಷೆ ಕಾರಿನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದ. ಇದನ್ನು ಕಂಡ ಅಧಿಕಾರಿಗಳು ಆತನನ್ನು ಅಡ್ಡಗಟ್ಟಿದ್ದಾರೆ. ನಂತರ ಕಿವಿಯನ್ನು ಕೈಯಲ್ಲಿ ಹಿಡಿದು ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ.

    ಅಧಿಕಾರಿ ಹೇಳಿದಂತೆ ಬಸ್ಕಿ ಹೊಡೆಯುತ್ತಿರುವ ದರ್ಯಾನಿ ಮಗನನ್ನು ಸ್ಥಳದಲ್ಲಿ ಇದ್ದವು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇದನ್ನು ಒಪ್ಪಿಕೊಳ್ಳದ ದರ್ಯಾನಿ ಕುಟುಂಬ ನಮ್ಮ ಮಗನ ಬಳಿ ಕಾರಿನ ದಾಖಲೆಯಿತ್ತು. ಜೊತೆಗೆ ಅವನ ಬಳಿ ಲಾಕ್‍ಡೌನ್ ನಡುವೆಯೂ ಹೊರಗೆ ಹೋಗಲು ಪಾಸ್ ಕೂಡ ಇತ್ತು. ಆದರೂ ಪೊಲೀಸರು ಕರ್ತವ್ಯದ ನೆಪದಲ್ಲಿ ದರ್ಪ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

    ದೀಪಕ್ ದರ್ಯಾನಿ ಅವರು ಇಂದೋರ್ ನಲ್ಲಿ ಇರುವ ಆಶಾ ಮಿಠಾಯಿ ಕಂಪನಿಯ ಮಾಲೀಕರಾಗಿದ್ದಾರೆ. ಆದರೆ ಮಗನ ತಪ್ಪನ್ನು ಒಪ್ಪಿಕೊಳ್ಳದ ದೀಪಕ್ ದರ್ಯಾನಿ ನನ್ನ ಮಗನ ಬಳಿ ಸೂಕ್ತ ದಾಖಲೆಗಳು ಇದ್ದರೂ ಅಲ್ಲಿ ಅಧಿಕಾರಿಗಳು ಅವನ ಜೊತೆ ತಪ್ಪಾಗಿ ನಡೆದುಕೊಂಡಿದ್ದಾರೆ. ಆ ಕಾರಣದಿಂದ ಅವರ ಅಧಿಕಾರಿಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

  • ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಯುವಕರ ಜಾಲಿ ರೈಡ್ ಬೈಕ್ ಕ್ರೇಜ್‍ನಿಂದ ಪಾದಚಾರಿ ಜೀವಕ್ಕೆ ಕುತ್ತು

    ಬೆಂಗಳೂರು: ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಡಲು ಬೆಂಗಳೂರು ನಗರದಿಂದ ಬರುವ ಯುವಕರ ಜಾಲಿ ರೈಡ್ ಬೈಕ್ ಕ್ರೇಜ್ ನಿಂದ ಪಾದಚಾರಿ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿ ನೆಲಮಂಗಲ-ಮಂಗಳೂರು 48ರ ಕುಡ್ಲೂರು ಬಳಿ ಈ ಘಟನೆ ನಡೆದಿದೆ. ಪಾದಚಾರಿ ಸಿದ್ದಪ್ಪಗೆ ಕೆ.ಟಿ.ಎಂ ಐಶರಾಮಿ ಹಾಗೂ ಹೈ ಸ್ಪೀಡ್ ಬೈಕ್ ಡಿಕ್ಕಿ ಹೊಡೆದಿದೆ.

    ಸದ್ಯ ಸಿದ್ದಪ್ಪ ಚಿಂತಾಜನಕ ಸ್ಥಿತಿಯಲ್ಲಿದ್ದು, ಸ್ಥಳಿಯ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಂಗಳೂರು ನಗರದಿಂದ ಸುಮಾರು 30 ಯುವಕರ ತಂಡ ಐಶಾರಾಮಿ ಬೈಕ್ ಗಳಲ್ಲಿ ಕುಣಿಗಲ್ ಮಾರ್ಗವಾಗಿ ಮೋಜು ಮಸ್ತಿನಲ್ಲಿ ಸುತ್ತಾಡುತ್ತಾರೆ ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂವರು ವಿದ್ಯಾರ್ಥಿನಿಯರು ಸೇರಿ ಐವರಿಂದ ಜಾಲಿರೈಡ್- ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ಅಪ್ಪಚ್ಚಿ!

    ಮೂವರು ವಿದ್ಯಾರ್ಥಿನಿಯರು ಸೇರಿ ಐವರಿಂದ ಜಾಲಿರೈಡ್- ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ಅಪ್ಪಚ್ಚಿ!

    ನವದೆಹಲಿ: ಮೂವರು ವಿದ್ಯಾರ್ಥಿನಿಯರು ಸೇರಿ ಒಟ್ಟು 5 ಮಂದಿ ಜಾಲಿ ರೈಡಿಗೆ ತರಳಿದ್ದ ಸಂದರ್ಭದಲ್ಲಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಉತ್ತರ ದೆಹಲಿಯ ಮುಖರ್ಜಿ ನಗರದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಮೂವರು ಮಹಿಳೆಯರಿಗೂ ಗಾಯಗಳಾಗಿದ್ದು, ಕುಡಿದು ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಅಂತ ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ನಸುಕಿನ ಜಾವ ಸುಮಾರು 2.45ರ ಸುಮಾರಿಗೆ ಬೇರೆ ಬೇರೆ ವಿಶ್ವವಿದ್ಯಾಲಯದ 5 ಮಂದಿ ವಿದ್ಯಾರ್ಥಿಗಳು ತಮ್ಮ ಐ20 ಕಾರಿನಲ್ಲಿ ಜಾಲಿರೈಡ್ ಹೋಗಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಗುದ್ದಿದೆ. ಪರಿಣಾಮ ಜನಕ್ ಪುರಿಯ ಮಹರಾಜ ಸೂರಜ್ ಮಾಲ್ ಶಿಕ್ಷ ಸಂಸ್ಥಾನ ವಿದ್ಯಾರ್ಥಿ 20 ವರ್ಷದ ಸಿದ್ಧಾರ್ಥ್ ಹಾಗೂ ಹರಿಯಾಣದ ಸೋನಿಪತ್ ನಿವಾಸಿ 21 ವರ್ಷದ ರಿತೇಶ್ ದಾಹಿಯಾ ಮೃತಪಟ್ಟಿದ್ದಾರೆ. ರಿತೇಶ್ ದೆಹಲಿ ವಿಶ್ವವಿದ್ಯಾಲಯದ ವೆಂಕಟೇಶ್ವರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್‍ಸಿ ಅಧ್ಯಯನ ಮಾಡುತ್ತಿದ್ದರು ಎಂಬುದಾಗಿ ವರದಿಯಾಗಿದೆ.

    ಘಟನೆಯಲ್ಲಿ ಗಾಯಗೊಂಡವರನ್ನು ದೆಹಲಿ ಮೂಲದ ದೀಕ್ಷಾ, ಮುಂಬೈಯ ಜೋಷಿತಾ ಮೊಹಾಂತಿ ಹಾಗೂ ಮೀರತ್ ನ ರಾಶಿ ಶರ್ಮಾ ಎಂದು ಗುರುತಿಸಲಾಗಿದ್ದು, ಈ ಮೂವರೂ ನೊಯ್ಡಾದ ಅಮಿತಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಲ್ ಎಲ್ ಬಿ ಓದುತ್ತಿದ್ದಾರೆ ಎನ್ನಲಾಗಿದೆ.

    ಮುಖರ್ಜಿ ನಗರದ ಹಡ್ಸನ್ ಕೇಂದ್ರದಲ್ಲಿ ಕಾರ್ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಟಿವೈಡರ್ ಗೆ ಗುದ್ದಿದೆ. ಪರಿಣಾಮ ಕಾರು ಪಲ್ಟಿಯಾಗಿ ಕೆಲ ಮೀಟರ್ ಗಳಷ್ಟು ದೂರ ಉರುಳಿ ಬಿದ್ದಿದೆ ಅಂತ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಅಪಘಾತವಾಗುವ ಸಂದರ್ಭದಲ್ಲಿ ದೀಕ್ಷಾ ಎಂಬಾಕೆ ಕಾರು ಚಲಾಯಿಸುತ್ತಿದ್ದರು. ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ ಅಂತ ಅಲ್ಲಿನ ಡಿಸಿಪಿ ಅಸ್ಲಾಮ್ ಖಾನ್ ಮಾಹಿತಿ ನೀಡಿದ್ದಾರೆ.

    ವಿದ್ಯಾರ್ಥಿನಿಯರಾದ ದೀಕ್ಷಾ ಹಾಗೂ ರಾಶಿ ಶರ್ಮಾ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅಪಘಾತದ ರಭಸಕ್ಕೆ ಕಾರೊಳಗಡೆ ಯುವಕರ ಮೃತದೇಹ ಅಪ್ಪಚ್ಚಿಯಾಗಿದ್ದು, ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ರಾಶಿ ಶರ್ಮಾ ಅವರ ಕುತ್ತಿಗೆಯ ಎಲುಬು ಮುರಿತಗೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ದೀಕ್ಷಾ ಹಾಗೂ ಮೊಹಾಂತಿ ಅಪಾಯದಿಂದ ಪಾರಾಗಿದ್ದು, ಇವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ದೀಕ್ಷಾರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಸಂಬಂಧ ಅಜಾಗರೂಕತೆ ಹಾಗೂ ಅತಿವೇಗ ಚಾಲನೆ ಮಾಡಿದ್ದಾರೆಂದು ಮುಖರ್ಜಿ ನಗರ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ.