Tag: Jodhpuri Dhuan Maas

  • ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ರಾಜಸ್ಥಾನದ ರಾಯಲ್ ಟೇಸ್ಟ್ – ಜೋಧಪುರಿ ಧುವಾನ್ ಮಾಸ್ ರೆಸಿಪಿ

    ರಾಜಸ್ಥಾನ ಶ್ರೀಮಂತ ಸಾಂಸ್ಕೃತಿಕ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಅಲ್ಲಿನ ಆಹಾರ ಸಂಸ್ಕೃತಿ ಗತಕಾಲದ ಸಂಪತ್ತನ್ನು ಪ್ರತಿಬಿಂಬಿಸುತ್ತದೆ. ಜೋಧಪುರಿ ಧುವಾನ್ ಮಾಸ್ ಹಳ್ಳಿಗಾಡು ಹಾಗೂ ರಾಯಲ್ ಎರಡೂ ಆಹಾರವಾಗಿ ಪ್ರಸಿದ್ಧಿ ಪಡೆದಿದೆ. ಇದ್ದಿಲು ಹಾಗೂ ತುಪ್ಪದಿಂದ ಧುವಾನ್ ನೀಡಲಾಗುವ ರಾಯಲ್ ಟೇಸ್ಟ್‌ನ ಅದ್ಭುತ ಜೋಧಪುರಿ ಧುವಾನ್ ಮಾಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ನಾನ್‌ವೆಜ್‌ನಲ್ಲಿ ಹೊಸ ರುಚಿ ಟ್ರೈ ಮಾಡಲು ಬಯಸುವವರು ಈ ರೆಸಿಪಿಯನ್ನು ಖಂಡಿತಾ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಟನ್ – 2 ಕೆಜಿ
    ಎಣ್ಣೆ – 1 ಕಪ್
    ದಾಲ್ಚಿನ್ನಿ ತುಂಡುಗಳು – 3-4
    ಲವಂಗ – 6-7
    ದಾಲ್ಚಿನ್ನಿ ಎಲೆ – 2-3
    ಕತ್ತರಿಸಿದ ಈರುಳ್ಳಿ – 450 ಗ್ರಾಂ
    ಮೊಸರು – 1.5 ಕೆಜಿ
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಕಪ್
    ಅರಿಶಿನ ಪುಡಿ – 2 ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    ಕೊತ್ತಂಬರಿ ಪುಡಿ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕತ್ತರಿಸಿದ ಟೊಮೆಟೊ – 500 ಗ್ರಾಂ
    ಹಸಿರು ಮೆಣಸಿನಕಾಯಿ – 5-6
    ನಿಂಬೆ ರಸ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – ಕಾಲು ಕಪ್
    ಹೆಚ್ಚಿದ ಪುದೀನ ಎಲೆಗಳು – ಕಾಲು ಕಪ್
    ಧುವಾನ್ ತಯಾರಿಸಲು:
    ಇದ್ದಿಲು – 2-3 ತುಂಡುಗಳು
    ತುಪ್ಪ – 1 ಟೀಸ್ಪೂನ್ ಇದನ್ನೂ ಓದಿ: ವೀಕೆಂಡ್‌ನಲ್ಲಿ ಮಾಡಿ ಕೊಲ್ಹಾಪುರಿ ಪಂದ್ರಾ ರಸ

    ಮಾಡುವ ವಿಧಾನ:
    * ಮೊದಲಿಗೆ ದಪ್ಪ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಎಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಿ ಹುರಿಯಿರಿ.
    * ಸುವಾಸನೆ ಬರುತ್ತಿದ್ದಂತೆ ತೆಳ್ಳಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
    * ಈ ನಡುವೆ ಒಂದು ಬಟ್ಟಲಿನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಎಲ್ಲಾ ಪುಡಿ ಮಸಾಲೆಗಳನ್ನು ಸೇರಿಸಿ, ಮೊಸರನ್ನು ಹಾಕಿ ಬೀಟ್ ಮಾಡಿ.
    * ಈರುಳ್ಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ಬಳಿಕ ಮೊಸರಿನ ಮಿಶ್ರಣವನ್ನು ಸೇರಿಸಿ. ಮಿಶ್ರಣದಿಂದ ಸ್ವಲ್ಪ ಎಣ್ಣೆ ಬಿಡುಗಡೆಯಾಗಲು ಪ್ರಾರಂಭಿಸುವುದನ್ನು ನೀವು ಗಮನಿಸುವವರೆಗೆ ಅದನ್ನು ಬೇಯಲು ಬಿಡಿ.
    * ಇದಕ್ಕೆ ಮಟನ್ ತುಂಡುಗಳನ್ನು ಸೇರಿಸಿ, ಅದನ್ನು ಸುಮಾರು 15-20 ನಿಮಿಷಗಳ ಕಾಲ ಬೇಯಿಸಿ.
    * ಹೆಚ್ಚಿದ ಟೊಮೆಟೋ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಸುಮಾರು 20-25 ನಿಮಿಷಗಳ ಕಾಲ ಬೇಯಿಸಿ.
    * ತಳ ಹಿಡಿಯುವುದನ್ನು ತಡೆಯಲು ಆಗಾಗ ಬೆರೆಸುತ್ತಿರಿ.
    * ಒಂದು ಪೋರ್ಕ್ ಸಹಾಯದಿಂದ ಮಟನ್ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
    * ಮಟನ್ ಬೆಂದಿದೆ ಎಂಬುದು ಖಚಿತವಾದ ಬಳಿಕ ಉರಿಯನ್ನು ಆಫ್ ಮಾಡಿ ನಿಂಬೆ ರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನದಿಂದ ಅಲಂಕರಿಸಿ.
    * ಈಗ ಒಂದು ಲೋಹದ ಬಟ್ಟಲಿನಲ್ಲಿ ಕಾದ ಇದ್ದಿಲನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಹೊಗೆ ಬರುವಂತೆ ಮಾಡಿ. ಅದು ಮುಳುಗದಂತೆ ಎಚ್ಚರಿಕೆಯಿಂದ ಮಟನ್ ಮಿಶ್ರಣದ ಮಧ್ಯದಲ್ಲಿ ಇಡಿ. ಬಳಿಕ ಕಡಾಯಿಯ ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಬಿಡಿ.
    * ನಂತರ ಇದ್ದಿಲ ತಟ್ಟೆಯನ್ನು ತೆಗೆಯಿರಿ.
    * ಇದೀಗ ಜೋಧಪುರಿ ಧುವಾನ್ ಮಾಸ್ ರೆಸಿಪಿ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್