ನವದೆಹಲಿ: ಕೇಂದ್ರ ಸರ್ಕಾರ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಎರಡೇ ದಿನದಲ್ಲಿ 20 ಲಕ್ಷ ರೂ. ದೋಚಿದ್ದ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
27 ವರ್ಷದ ಸುಮಿತ್ ಕುಮಾರ್ ಬಂಧಿತ ವಿದ್ಯಾರ್ಥಿ. ಸುಮಿತ್ ಕಾನೂನು ಪದವಿಯನ್ನು ಓದುತ್ತಿದ್ದು, ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ. ಹೀಗಾಗಿ ಪರೀಕ್ಷೆ ಉತ್ತೀರ್ಣನಾಗಲು ಸರ್ಕಾರದ ನಕಲಿ ವೆಬ್‍ಸೈಟ್ ತೆರೆದಿರುವುದು ಬೆಳಕಿಗೆ ಬಂದಿದೆ. ಮತ್ತೊಂದು ವೆಬ್‍ಸೈಟ್ ಮೂಲಕ ಹುದ್ದೆಗಳು ಖಾಲಿ ಇದೆ ಎಂದು ಹೇಳಿ ಅರ್ಜಿ ಕರೆಯುವ ಮೂಲಕ 4000ಕ್ಕೂ ಅಧಿಕ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಎಂದು 20 ಲಕ್ಷ ರೂ. ಸಂಗ್ರಹಿಸಿದ್ದಾನೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದ ಕಚೇರಿ ನಕಲಿ ವೆಬ್ ಸೈಟ್ ಬಗ್ಗೆ ದೂರನ್ನು ದಾಖಲಿಸಿತ್ತು. ದೂರಿನ ಅನ್ವಯ ತನಿಖೆ ಆರಂಭಿಸಿದ ದೆಹಲಿ ಪೊಲೀಸರು ಆರೋಪಿ ಸುಮಿತ್ ನನ್ನ ಬಂಧಿಸಿದ್ದಾರೆ ಎಂದು ನವ ದೆಹಲಿಯ ಡಿಸಿಪಿ ಬಿ.ಕೆ.ಸಿಂಗ್ ತಿಳಿಸಿದ್ದಾರೆ.
ಏನು ವ್ಯತ್ಯಾಸ?: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ “wcd.nic.in” ಈ ವೆಬ್‍ಸೈಟ್ ತೆರದಿದ್ದರೆ, ಸುಮಿತ್ ಕುಮಾರ್ “wcdo.org.in” ಹೆಸರಿನ ವೆಬ್‍ಸೈಟ್ ಆರಂಭಿಸಿದ್ದ. ಅಷ್ಟೇ ಅಲ್ಲದೇ ಸುಮಿತ್ ತನ್ನ ವೆಬ್‍ಸೈಟ್ ನಲ್ಲಿ ಯಾರ ಅನುಮತಿಯನ್ನು ಪಡೆಯದೇ ಸಚಿವಾಲಯದ ಅಧಿಕೃತ ಲೋಗೋವನ್ನು ಬಳಸಿದ್ದಾನೆ. ಸಾರ್ವಜನಿಕರಿಗೆ ನೀಡುವ ಹೆಲ್ಪ್ ಲೈನ್ ಗಾಗಿ ನೀಡುವ ದೂರವಾಣಿ ಸಂಖ್ಯೆಯನ್ನು ಸಚಿವಾಲಯದ ಕಚೇರಿ ನಂಬರ್ ನೀಡಿದ್ದಾನೆ. ಹೀಗಾಗಿ ಜನರು ಇದೇ ಸರ್ಕಾರದ ಅಧಿಕೃತ ವೆಬ್‍ಸೈಟ್ ಎಂದು ತಿಳಿದು ಹಣವನ್ನು ಪಾವತಿ ಮಾಡಿದ್ದಾರೆ.

ಪತ್ತೆಯಾಗಿದ್ದು ಹೇಗೆ?
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಪೊಲೀಸರು ವೆಬ್‍ಸೈಟ್ ನ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಶುಲ್ಕವನ್ನು ಐಸಿಐಸಿಐ ಬ್ಯಾಂಕ್ ನ ಖಾತೆಗೆ ಕಟ್ಟುತ್ತಿರುವುದು ಪತ್ತೆಯಾಗಿದೆ. ನಂತರ ಖಾತೆಯ ಮಾಹಿತಿಯನ್ನು ಪಡೆದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ವಿಚಾರಣೆ ಆರಂಭದಲ್ಲಿ ತನಿಖೆಯ ದಿಕ್ಕನ್ನು ತಪ್ಪಿಸುವ ಎಲ್ಲ ಪ್ರಯತ್ನವನ್ನು ಮಾಡಿದ್ದಾನೆ. ಪೊಲೀಸರು ಅನುಮಾನಗೊಂಡು ವಿಚಾರಣೆಯನ್ನು ತೀವ್ರಗೊಳಿಸಿದಾಗ ಒಪ್ಪಿಕೊಂಡಿದ್ದಾನೆ.
ಎನ್‍ಜಿಓ ಆರಂಭಿಸಿದ್ದನು: ಸುಮಿತ್ ಎನ್‍ಜಿಓ ಒಂದನ್ನು ಆರಂಭಿಸಿದ್ದನು. ದೆಹಲಿ ಕೇಂದ್ರದ ಉಪ-ನೊಂದಣಿ ಕಚೇರಿಯಲ್ಲಿ ಎನ್‍ಜಿಓ ಆರಂಭಿಸಿದರ ಬಗ್ಗೆ ಮಾರ್ಚ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದನು. ನೋಂದಣಿ ಬಳಿಕೆ ವೆಬ್ ಡಿಸೈನರ್ ಬಳಿ ತೆರಳಿ ತನಗೆ ಬೇಕಾದ ಹಾಗೆ ತನ್ನ ಸೈಟ್ ನ್ನು ರೂಪಿಸಿಕೊಂಡಿದ್ದನು. ಈ ವೇಳೆ ಸಚಿವಾಲಯದ ಔಟರ್ ಲುಕ್ ಮತ್ತು ಲೋಗೋವನ್ನು ನಕಲು ಮಾಡಿಸಿಕೊಂಡಿದ್ದಾನೆ.

ಕೆಲವು ದಿನಗಳ ಹಿಂದೆ 6715 ಶಿಕ್ಷಕ/ಕಿ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದಾನೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಾನೆ. ಒಬ್ಬ ಅಭ್ಯರ್ಥಿಗೆ 800 ರೂ. ಪರೀಕ್ಷಾ ಶುಲ್ಕವನ್ನು ನಿಗಿದಿ ಮಾಡಿದ್ದಾನೆ. ನಿರ್ದಿಷ್ಟ ಕೆಲವು ಜಾತಿ ಮತ್ತು ಪಂಗಡಗಳಿಗೆ ಶುಲ್ಕವನ್ನು ಅರ್ಧದಷ್ಟು ಕಡಿತಗೊಳಿಸಿದ್ದನು ಎಂದು ಡಿಸಿಪಿ ಹೇಳಿದ್ದಾರೆ.
ಶ್ರೀಮಂತನಾಗಲು ಪ್ಲ್ಯಾನ್ ಮಾಡಿದ್ದ: ಸುಮಿತ್ ಕಡಿಮೆ ಅವಧಿಯಲ್ಲಿ ಶ್ರೀಮಂತ ವ್ಯಕ್ತಿಯಾಗಲು ಪ್ಲ್ಯಾನ್ ಮಾಡಿದ್ದನು. ಸುಮಿತ್ ತನ್ನ ಎನ್‍ಜಿಓ ಮುಖಾಂತರ ಯಾವುದೇ ಶಾಲೆಗಳನ್ನು ಆರಂಭಿಸಿರಲಿಲ್ಲ. ಅತಿ ಹೆಚ್ಚು ಹಣವನ್ನು ಗಳಿಸುವ ಉದ್ದೇಶವನ್ನು ಮಾತ್ರ ಸುಮಿತ್ ಹೊಂದಿದ್ದನು.
ಪೊಲೀಸರು ಪ್ರಕರಣ ಸಂಬಂಧಿಸಿದಂತೆ ಸುಮಿತ್ ನಿಗೆ ಈ ಕೆಲಸದಲ್ಲಿ ಸಹಾಯ ಮಾಡಿದ್ದ ಮೂವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ. ವೆಬ್‍ಸೈಟ್ ಡಿಸೈನರ್, ಎನ್‍ಜಿಓ ಸ್ಥಾಪನೆಗೆ ಸಹಾಯ ಮಾಡಿದವರ ಬಂಧನವಾಗಬೇಕಿದೆ.

ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರೆಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.
https://www.youtube.com/watch?v=zwBR_pwfAnI
https://www.youtube.com/watch?v=aDskLSZhDR0

