Tag: Job Cut

  • 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ವಾಷಿಂಗ್ಟನ್‌: ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ (Microsoft) 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

    2023 ರ ನಂತರದ ಅತಿದೊಡ್ಡ ಉದ್ಯೋಗ ಕಡಿತ (Job Cut) ಮಾಡಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಒಟ್ಟು ಉದ್ಯೋಗಿಗಳ ಪೈಕಿ 4% ಅಥವಾ 9,100 ಜನರನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

    ಜೂನ್ 2024 ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್‌ ಹೊಂದಿತ್ತು. ಮೈಕ್ರೋಸಾಫ್ಟ್ ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ಬಾರಿ ವಿಶೇಷವಾಗಿ ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

    ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮೈಕ್ರೋಸಾಫ್ಟ್‌ ಮುಂದಾಗುತ್ತಿದ್ದು ಅದರಲ್ಲಿ ನೌಕರರ ವಜಾಗೊಳಿಸುವ ಕ್ರಮವೂ ಸೇರಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ ಉದ್ಯೋಗ ಕಡಿತ ಮಾಡಿತ್ತು. ಈ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು.

    ಕೃತಕ ಬುದ್ಧಿಮತ್ತೆಯಲ್ಲಿ (AI) ಭಾರಿ ಹೂಡಿಕೆ ಮಾಡುತ್ತಿರುವ ಬಿಗ್‌ ಟೆಕ್‌ ಕಂಪನಿಗಳು ಈಗ ಉದ್ಯೋಗ ಕಡಿತಕ್ಕೆ ಕೈಹಾಕಿವೆ. ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ 5% ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿತ್ತು. ಗೂಗಲ್‌ ಕಳೆದ ವರ್ಷ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

  • ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ಪ್ರಾರಂಭಿಸಿದ ಮೆಟಾ – 4,000 ನುರಿತ ಉದ್ಯೋಗಿಗಳು ಟಾರ್ಗೆಟ್

    ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿ ಮೆಟಾ (Meta) ಬುಧವಾರದಿಂದ ಮತ್ತೊಂದು ಸುತ್ತು ಉದ್ಯೋಗಿಗಳನ್ನು (Employees) ಸಾಮೂಹಿಕವಾಗಿ ವಜಾಗೊಳಿಸಲು (Layoff) ಸಿದ್ಧವಾಗಿದೆ. ಈ ಬಾರಿಯ ವಜಾ ಪ್ರಕ್ರಿಯೆ ಫೇಸ್‌ಬುಕ್, ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್‌ನ ಸುಮಾರು 4,000ಕ್ಕೂ ಅಧಿಕ ನುರಿತ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

    ಕಳೆದ ತಿಂಗಳು ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಏಪ್ರಿಲ್‌ನಲ್ಲಿ ಕಂಪನಿಯ ಸುಮಾರು 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಮೆಟಾ ವಜಾ ಪ್ರಕ್ರಿಯೆ ಪ್ರಾರಂಭಿಸಲು ಮುಂದಾಗಿದ್ದು, ಈ ವಾರದೊಳಗೆ 4,000 ಕ್ಕೂ ಅಧಿಕ ನುರಿತ ಉದ್ಯೋಗಿಗಳನ್ನೇ ವಜಾಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ಕಂಪನಿ ತನ್ನ ತಾಂತ್ರಿಕ ತಂಡದಲ್ಲಿನ ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಈ ಬಗೆಗಿನ ಮಾಹಿತಿಯನ್ನು ತಿಳಿಸಲು ಪ್ರಾರಂಭಿಸಿದೆ. ನಮ್ಮ ತಂಡದ ಗಾತ್ರವನ್ನು ಸುಮಾರು 10,000 ಉದ್ಯೋಗಿಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಶೇ.13 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಮೆಟಾ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗುತ್ತಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

    ವಾಷಿಂಗ್ಟನ್: ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು (Layoff) ಇತ್ತೀಚೆಗೆ ನಡೆಯುತ್ತಲೇ ಇದೆ. ಇದೀಗ ಪ್ರಸಿದ್ಧ ಮನರಂಜನಾ ಸಂಸ್ಥೆ ಡಿಸ್ನಿ (Disney) ಕೂಡಾ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಮುಂದಾಗಿದೆ.

    ಕಂಪನಿ ಸುಮಾರು 5.5 ಬಿಲಿಯನ್ ಡಾಲರ್ ವೆಚ್ಚ ಕಡಿತ ಮಾಡುವ ಸಲುವಾಗಿ ಮೊದಲ ಸುತ್ತಿನ ವಜಾವನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಇದು ಈ ವಾರದಲ್ಲಿ ಜಾರಿಗೆ ಬರಲಿದ್ದು, ಸುಮಾರು 7,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಮತ್ತೆ ಚೀನಾಗೆ ಮರಳಿದ ಜಾಕ್ ಮಾ

    ವರದಿಗಳ ಪ್ರಕಾರ ಡಿಸ್ನಿ ಎಂಟರ್ಟೈನ್ಮೆಂಟ್, ಡಿಸ್ನಿ ಪಾರ್ಕ್ಸ್, ಅನುಭವ ಹಾಗೂ ಉತ್ಪನ್ನ, ಕಾರ್ಪೊರೇಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖ ವಿಭಾಗಗಳ ಮೇಲೆ ಈ ವಜಾ ಪ್ರಕ್ರಿಯೆ ಪರಿಣಾಮ ಬೀರಲಿದೆ. ಸದ್ಯ ಈ ಬಾರಿ ಇಎಸ್‌ಪಿಎನ್‌ನ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎನ್ನಲಾಗಿದ್ದು, ಮುಂದಿನ ವಜಾ ಪ್ರಕ್ರಿಯೆಗಳಲ್ಲಿ ಅಲ್ಲಿನ ಉದ್ಯೋಗಿಗಳನ್ನೂ ಕಡಿತಗೊಳಿಸಲಾಗುತ್ತದೆ ಎಂದು ಊಹಿಸಲಾಗಿದೆ.

    ಮೊದಲ ಸುತ್ತಿನ ವಜಾ ಪ್ರಕ್ರಿಯೆ ಈ ವಾರದ ಒಳಗಾಗಿ ನಡೆಯಲಿದ್ದು, ಬಳಿಕ ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗುತ್ತದೆ ಎಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಮೆಮೋದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸಂಚಾರ ದಟ್ಟಣೆ ನಿವಾರಣೆಗೆ ಪ್ಲಾನ್- ಇದೇ ವರ್ಷ ತಲೆ ಎತ್ತಲಿವೆ 5 ಫ್ಲೈಓವರ್‌ಗಳು!