ಬೆಂಗಳೂರು: ಕೋವಿಡ್ (Covid-19) ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರಿನ (Bengaluru) ವಿಧಾನಸೌಧದಲ್ಲಿ ಇಂದು (ಬುಧವಾರ) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ನೇತೃತ್ವದಲ್ಲಿ ಎರಡನೇ ಬಾರಿ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿತ್ತು. ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ರಾಜ್ಯದ 3 ಕೋಟಿ ಜನರಿಗೆ ಗ್ಯಾರಂಟಿ ಯೋಜನೆ.. ಲೋಕಸಭೆ ಚುನಾವಣೆ ಗೆಲ್ಲಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು: ಡಿಕೆಶಿ
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್‌ಗಳನ್ನ ನಡೆಸಲಾಗ್ತಿದೆ. ಕೋವಿಡ್ ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸಲಾಗುವುದು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ ಕೆಲಸವನ್ನ ಸರ್ಕಾರ ಮಾಡುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿಯೇ ಟೆಸ್ಟಿಂಗ್ ನಡೆಸಿ, ಅಗತ್ಯ ಚಿಕಿತ್ಸೆ ಕೊಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪ್ರಸ್ತುತ ಐಸಿಯುನಲ್ಲಿ 19 ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವರ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಅಲ್ಲದೇ ಕೋವಿಡ್ ಪಾಸಿಟಿವ್ ಬಂದವರ ಸಂಪರ್ಕದಲ್ಲಿದ್ದವರಲ್ಲಿ ಹೈ ರಿಸ್ಕ್ ರೋಗಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಮಾಡುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸ್ತಬ್ಧಚಿತ್ರ ವಿಷಯದಲ್ಲಿ ಕೇಂದ್ರಕ್ಕೆ ದುರುದ್ದೇಶ ಇಲ್ಲ: ವಿಜಯೇಂದ್ರ
ಕೋವಿಡ್ ಪಾಸಿಟಿವ್ ಬಂದವರಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಡೆತ್ ಆಡಿಟ್ ಮಾಡಲು ಸೂಚಿಸಲಾಗಿತ್ತು. 26 ಪ್ರಕರಣಗಳಲ್ಲಿ 21 ಜನರ ಡೆತ್ ಆಡಿಟ್ ನಡೆಸಲಾಗಿದ್ದು, ನೈಜವಾಗಿ ಕೋವಿಡ್ ಕಾರಣದಿಂದ 2 ಮಾತ್ರ ಸಾವಿಗೀಡಾಗಿದ್ದಾರೆ. ಉಳಿದವರು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಆದರೆ ಇವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಜನರು ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ. ಎಲ್ಲ ರೀತಿಯ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
– ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆ ಮೀಸಲಿಡುವಂತೆ ಸೂಚನೆ
– ವೈದ್ಯಕೀಯ ಇಲಾಖಾ ಅಧಿಕಾರಿಗಳ ಜೊತೆ ಮಹತ್ವದ ಸಭೆ
– 60 ವರ್ಷ ಮೇಲ್ಪಟ್ಟವರು ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಲಸಿಕೆ ಪಡೆಯುವಂತೆ ಸಲಹೆ
– ಕೋವಿಡ್ ನಿಂದ ಸಾವಾಗಿಲ್ಲ – ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ JN.1 (JN.1) ಸೋಂಕು ಕಾಣಿಸಿಕೊಂಡಿದ್ದರೂ ಜನ ಆತಂಕಕ್ಕೆ ಒಳಗಾಗದೇ, ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ (Sharanprakash Patil) ಸಲಹೆ ನೀಡಿದರು.
ಮಂಗಳವಾರ ಬೆಂಗಳೂರಿನ (Bengaluru) ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಸ್ಪತ್ರೆಗಳ ಮುಖ್ಯಸ್ಥರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು, ಸದಸ್ಯರ ಜೊತೆ ಸಭೆ ನಡೆಸಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಹಾಗೂ ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್ ಸಚಿವ
ರೂಪಾಂತರಿ ಜೆಎನ್.1 ಸೋಂಕು ಕಾಣಿಸಿಕೊಂಡಿದ್ದರೂ ಇದು ಮನುಷ್ಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಹೇಳಿದ್ದಾರೆ. ಆದರೂ ಇದರ ಬಗ್ಗೆ ಮೈ ಮರೆಯದೇ, ಕೆಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯಿರಿ:
ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೆ ಕೋವಿಡ್ ಲಸಿಕೆ ನೀಡುವ ಅಗತ್ಯವಿಲ್ಲ 60 ವರ್ಷ ಹಾಗೂ ದೀರ್ಘವ್ಯಾಧಿಯಿಂದ ಬಳಲುತ್ತಿರುವವರು ಬುಧವಾರದಿಂದಲೇ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ವಾಕ್ಸಿನ್ ತೆಗೆದುಕೊಳ್ಳಬಹುದು. ಕೋವಿಡ್ ಮೊದಲ ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಲಸಿಕೆಯನ್ನು (ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್) ನೀಡಲಾಗಿತ್ತೋ ಅದೇ ಲಸಿಕೆ ನೀಡಲಿದ್ದೇವೆ. ಹೊಸ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
JN.1 ಬಹುಬೇಗ ಹರಡುತ್ತದೆ:
ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಜೆಎನ್.1 ರೂಪಾಂತರ ಸೋಂಕು ಬಹುಬೇಗನೆ ಹರಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹರಡಬಹುದೆಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಹಬ್ಬಿದರೂ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡಬಾರದು. ಜನದಟ್ಟಣೆ ಮತ್ತಿತರ ಕಡೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಉತ್ತಮ. ಆದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂಬ ಆದೇಶ ಹೊರಡಿಸುವುದಿಲ್ಲ. ಹಾಗಂತ ಜನರು ಮೈ ಮರೆಬಾರದೆಂದು ಸಲಹೆ ನೀಡಿದರು.
ಇದೇ ವೇಳೆ ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಔಷಧಗಳು, ಸೇರಿದಂತೆ ಲಭ್ಯವಿರುವ ಉಪಕರಣಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕ, ಉಪಕರಣಗಳ ಖರೀದಿಸುವ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಸಧ್ಯಕ್ಕೆ ಕೋವಿಡ್ ಸಂಬಂಧ ಔಷಧಗಳನ್ನು ಖರೀದಿಸಲು ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ICUಗೆ ದಾಖಲಿಸುವಂತಿಲ್ಲ- ಕೇಂದ್ರದಿಂದ ಆಸ್ಪತ್ರೆಗಳಿಗೆ ಹೊಸ ರೂಲ್ಸ್
ಕೋವಿಡ್‍ನಿಂದ ಸಾವಾಗಿಲ್ಲ:
ರಾಜ್ಯದಲ್ಲಿ ಇತ್ತೀಚೆಗೆ 10 ಮಂದಿ ಸಾವನ್ನಪ್ಪಿದ್ದರು. ಇದು ಕೋವಿಡ್ ಕಾರಣದಿಂದಾಗಿ ಮೃತಪಟ್ಟಿಲ್ಲ. ಅವರು ವಿವಿಧ ಆರೋಗ್ಯಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ 10 ಮಂದಿಯಲ್ಲಿ 9 ಮಂದಿ ಬೇರೆ ಬೇರೆ ಅಂದರೆ ಹೃದಯ ಸಂಬಂಧಿ, ಕಿಡ್ನಿ ಹೀಗೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದರು. ಇವರ ಸಾವಿಗೂ ಕೋವಿಡ್‍ಗೂ ಸಂಬಂಧವೇ ಇಲ್ಲ. ಅವರಿಗೆ ಸೋಂಕಿನ ಜೊತೆಗೆ ಇತರ ಬೇರೆ-ಬೇರೆ ಆರೋಗ್ಯದ ಸಮಸ್ಯೆಗಳಿದ್ದವು. ಮೃತಪಟ್ಟವರಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲ. ಮದ್ಯಪಾನದ ವ್ಯಸನಕ್ಕೆ ತುತ್ತಾಗಿದ್ದರು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ, ಶ್ರೀರಾಮನ ಗುಣ ಇದೆಯಾ? – ಸಿ.ಟಿ ರವಿ ವ್ಯಂಗ್ಯ
ಮುಖ್ಯಾಂಶಗಳು
ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ 50 ಹಾಸಿಗೆಗಳನ್ನ ಮೀಸಲಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವೈದ್ಯಕೀಯ ಕಾಲೇಜಿನಲ್ಲಿ 18,141 ಹಾಸಿಗೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 10 ಸಾವಿರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬರುವ ಆಸ್ಪತ್ರಗಳಲ್ಲಿ 11,500 ಹಾಸಿಗೆಗಳು ಲಭ್ಯವಿವೆ.
ಕೇರಳದಲ್ಲಿ ಕಾಣಿಸಿಕೊಂಡ ರೂಪಾಂತರಿ ಜೆಎನ್-1 ಸೋಂಕು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲೂ ಒಂದು ವೇಳೆ ಹಬ್ಬಿದರೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಂಡಿದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದ್ದಾರೆ. ಅದರಂತೆ ಇಲಾಖೆಯಲ್ಲಿರುವ ಕೋವಿಡ್ ವಾರಿಯರ್ಸ್ ಫ್ಲೂ-ಲಸಿಕೆಯನ್ನು ಪಡೆಯಬೇಕು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಸೌಲಭ್ಯಗಳ ಕಾರ್ಯ ಸಿದ್ಧತೆ ನಡೆಸಲಾಗಿದೆ.
ಸಭೆಯಲ್ಲಿ 99 ಮೆಡಿಕಲ್ ಕಾಲೇಜುಗಳು, 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರ ಜೊತೆ ಚರ್ಚೆ ನಡೆಸಲಾಗಿದೆ.
ಎಲ್ಲಾ ಸರ್ಕಾರಿ ಕಾಲೇಜುಗಳಲ್ಲೂ ಪ್ರತ್ಯೇಕ ಆಕ್ಸಿಜನ್ ಬೆಡ್ ಮತ್ತು ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮಾನವ ಸಂಪನ್ಮೂಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
30 ಸಾವಿರ ಲಸಿಕೆಗಳು ಲಭ್ಯವಿದ್ದು, ಈವರೆಗೂ ಲಸಿಕೆ ಪಡೆಯದೇ ಇದ್ದವರು, ಮುಂಜಾಗ್ರತಾ ಲಸಿಕೆಯನ್ನಾಗಿ ತೆಗೆದುಕೊಳ್ಳುವವರು ಈ ಸೌಲಭ್ಯ ಪಡೆದುಕೊಳ್ಳಬಹುದು.
ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಸದ್ಯ ಓಮಿಕ್ರಾನ್ ಉಪತಳಿ ಜೆಎನ್.1 (JN.1) ಸದ್ದು ಜೋರಾಗಿದೆ. ಈ ನಡುವೆ ಮತ್ತೊಂದು ಅಚ್ಚರಿ ವಿಚಾರ ಹೊರಬಿದ್ದಿದ್ದು, ಹೊಸ ಉಪತಳಿ ಸೋಂಕು ಪತ್ತೆಗೂ ಮುನ್ನ ಓಮಿಕ್ರಾನ್‌ನ 6 ಉಪತಳಿಗಳು ಸದ್ದಿಲ್ಲದೆ ಬಂದು ಹೋಗಿವೆ.
ಹೌದು, ದೇಶದಲ್ಲಿ ಸದ್ಯ ಕೊರೊನಾ (Corona Virus) ರೂಪಾಂತರಿ ತಳಿ ಜೆಎನ್.1 ತಲ್ಲಣಗೊಳಿಸುತ್ತಿದೆ. ಆದರೆ ಕಳೆದೊಂದು ವರ್ಷದಲ್ಲಿ ಎರಡು ತಿಂಗಳಿಗೆ ಒಂದರಂತೆ ಕೊರೊನಾ ರೂಪಾಂತರಿ ಓಮಿಕ್ರಾನ್‌ನ 6 ಉಪತಳಿಗಳು ಬಂದು ಹೋಗಿರುವುದು ಜನರಿಗೆ ಗೊತ್ತೇ ಇಲ್ಲ. ಇದೀಗ ಅದೇ ಸಾಲಿಗೆ ಜೆಎನ್.1 ರೂಪಾಂತರಿ ಸಹ ಸೇರಿಕೊಂಡಿದೆ. ಆದರೆ ಕೊಂಚ ಹೆಚ್ಚು ಸದ್ದು ಮಾಡುವ ಮೂಲಕ ಆತಂಕಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು
ಕೊರೊನಾ ಮೊದಲ ಅಲೆಯ ಬಳಿಕ ಆರೋಗ್ಯ ಇಲಾಖೆ ರಾಜ್ಯ ಕಣ್ಗಾವಲು ಪಡೆಯನ್ನು ತೀವ್ರಗೊಳಿಸಿದೆ. ಸೋಂಕು ದೃಢವಾದ ಯಾವ ವ್ಯಕ್ತಿಯ ಮಾದರಿಗಳಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುತ್ತದೆಯೋ ಆ ಮಾದರಿಗಳನ್ನು ನಿರಂತರವಾಗಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ಮೂರು ಅಲೆಯಲ್ಲಿ ಅತ್ಯಧಿಕ ರೂಪಾಂತರಿ ವೈರಸ್‌ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪತಳಿಗಳು ವರದಿಯಾಗಿರುವುದು ಓಮಿಕ್ರಾನ್‌ನಲ್ಲಿ ಮಾತ್ರ.
ಇಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ಸಾವು ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ತುಂಬಾ ಕಡಿಮೆ ಇತ್ತು. ರಾಜ್ಯದಲ್ಲಿ ಇದುವರೆ ಜೆಎನ್.1 ಸೇರಿದಂತೆ 6 ರೂಪಾಂತರಿ ಹಾಗೂ 6 ಉಪತಳಿಗಳು ವರದಿಯಾಗಿವೆ. ಮೊದಲ ಎರಡು ಅಲೆಯಲ್ಲಿ ಕೊರೊನಾ ರೂಪಾಂತರಿ ಆಲ್ಫಾ, ಬೇಟಾ, ಡೆಲ್ಟಾ, ಇತರೆ ಇಟಿಎ, ಕಪ್ಪಾ, ಪಂಗೋ ವರದಿಯಾಗಿದ್ದರೂ ತಕ್ಷಣವೇ ಅಂತ್ಯ ಕಂಡಿವೆ. ಆದರೆ 2023 ರಲ್ಲಿ ಓಮಿಕ್ರಾನ್ ರೂಪಾಂತರಿ ತಳಿ ವರದಿಯಾಗಿದ್ದು, ತದನಂತರದ ದಿನದಲ್ಲಿ ಓಮಿಕ್ರಾನ್ ಸಬ್-ವೇರಿಯಂಟ್‌ಗಳಾದ ಬಿಎ 1.1.5, ಬಿ.ಎ.1, ಬಿ.ಎ2, ಬಿ.ಎ.3, ಬಿ.ಎ.4, ಬಿ.ಎ.5 ಹಾಗೂ ಬಿ.ಎ.5 ಎಕ್ಸ್ಬಿಬಿ ವರದಿಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಗೈಡ್‌ಲೈನ್ಸ್ ಬಿಡುಗಡೆ – ಪೊಲೀಸ್ ಇಲಾಖೆಯಿಂದ ಭರ್ಜರಿ ಸಿದ್ಧತೆ
ಓಮಿಕ್ರಾನ್‌ನ ಉಪತಳಿಗಳು ಬೇರೆ ಬೇರೆ ವೇಷಗಳಲ್ಲಿ ಪತ್ತೆಯಾದರೂ ಆರೋಗ್ಯದ ಮೇಲೆ ಯಾವುದೇ ರೀತಿಯಾದ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಅನ್ನೋದು ಸದ್ಯ ನಿಟ್ಟುಸಿರಿನ ವಿಚಾರ. ಇಲ್ಲಿತನಕ 20 ಸಾವಿರ ಮಂದಿಗೆ ರೂಪಾಂತರಿ ಸಂಬಂಧ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾದ ಕೋವಿಡ್ ಸೋಂಕಿತರ ಮಾದರಿಗಳಲ್ಲಿ 20,304 ಮಂದಿಯಲ್ಲಿ ರೂಪಾಂತರಿ ಹಾಗೂ ಉಪತಳಿಗಳು ವರದಿಯಾಗಿವೆ. 14,199 ಮಂದಿಯಲ್ಲಿ ಓಮಿಕ್ರಾನ್, 9928 ಮಂದಿಯಲ್ಲಿ ಒಮಿಕ್ರಾನ್ ಉಪತಳಿ ಬಿಎ 2, 1873 ಮಂದಿಯಲ್ಲಿ ಬಿಎ1, 1007 ಮಂದಿಯಲ್ಲಿ ಎಕ್ಸ್ಬಿಬಿ ಉಪತಳಿ ವರದಿಯಾಗಿದ್ದು, ಉಳಿದ ಉಪತಳಿ ಹೆಚ್ಚಾಗಿ ಪತ್ತೆಯಾಗಿಲ್ಲ. ಒಟ್ಟಾರೆ ಸದ್ದಿಲ್ಲದೇ 6 ಉಪತಳಿಗಳು ಬಂದು ಹೋಗಿವೆ. ಆದರೂ ಯಾವುದೇ ಸಮಸ್ಯೆ ಆಗದಿರೋದು ನೆಮ್ಮದಿ ವಿಚಾರ.
– ರಾಜ್ಯಕ್ಕೂ ಕಾಲಿಟ್ಟ ಜೆಎನ್.1 ಉಪತಳಿ – ಕರ್ನಾಟಕದಲ್ಲಿ 34 ಮಂದಿಯಲ್ಲಿ ಹೊಸ ತಳಿ ಸೋಂಕು ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಇಂದು (ಸೋಮವಾರ) ಒಂದೇ ದಿನ ಕೊರೊನಾ ಹೊಸ ಉಪತಳಿ 34 ಜೆಎನ್.1 ಕೇಸ್‌ಗಳು ಪತ್ತೆಯಾಗಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ. ಕೊರೊನಾ ಸೋಂಕಿನಿAದಾಗಿ ಇಂದು ರಾಜ್ಯದಲ್ಲಿ ಮೂವರು ಬಲಿಯಾಗಿದ್ದಾರೆ.
ರಾಜ್ಯದಲ್ಲಿಂದು 34 ಜೆಎನ್.1 ಹೊಸ ಉಪತಳಿ ಸೇರಿದಂತೆ 125 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೇ ಕೋವಿಡ್‌ನಿಂದಾಗಿ ಬೆಂಗಳೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ತಲಾ ಒಂದು ಸಾವಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 125 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲೇ ಹೆಚ್ಚು ಅಂದರೆ 94 ಕೊರೊನಾ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಜೆಎನ್.1 ಸೋಂಕು 20 ಕೇಸ್ ದೃಢಪಟ್ಟಿದೆ. ಮೈಸೂರಿನಲ್ಲಿ 4, ಮಂಡ್ಯದಲ್ಲಿ 3, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿ ತಲಾ 1 ಹೊಸ ಉಪತಳಿ ಕೇಸ್ ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 3.96% ತಲುಪಿದೆ. ಕೊರೊನಾದಿಂದ ಮೃತಪಟ್ಟ ಮೂವರಿಗೂ ಸಾರಿ ಸಮಸ್ಯೆ ಇತ್ತು. ಸಾವನ್ನಪ್ಪಿದವರಲ್ಲಿ ಉಸಿರಾಟದ ತೊಂದರೆಯೇ ಪ್ರಮುಖ ಗುಣಲಕ್ಷಣವಾಗಿತ್ತು. ಇದರ ಜೊತೆಗೆ ಹೈಪರ್ ಟೆನ್ಶನ್, ಶ್ವಾಸಕೋಶದ ಸೋಂಕು, ಹೃದಯ ಸಂಬAಧಿ ಕಾಯಿಲೆ ಸೇರಿದಂತೆ ಅನ್ಯಕಾಯಿಲೆಯಿಂದ ಬಳಲುತ್ತಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಏರಿಕೆ ಕಂಡಿದೆ. 36 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 36 ರಲ್ಲಿ 7 ಜನರು ಐಸಿಯುವಿನಲ್ಲಿದ್ದಾರೆ. 400 ಜನ ಹೋಮ್ ಐಸೊಲೇಷನ್‌ನಲ್ಲಿದ್ದಾರೆ.
– ಖಾಸಗಿ ಆಸ್ಪತ್ರೆ ಮಾಲೀಕನಿಗೆ ಕೊರೊನಾ ಪಾಸಿಟಿವ್ – ಸಿಂಗಾಪುರದಿಂದ ವಾಪಸ್ ಆಗಿದ್ದ ವ್ಯಕ್ತಿಗೆ ಕೋವಿಡ್
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 (Covid-19) ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಇಂದು (ಶನಿವಾರ) ಒಂದೇ ದಿನ 104 ಪಾಸಿಟಿವ್ ಕೇಸ್ ವರದಿಯಾಗಿವೆ. ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ.
ಸಿಲಿಕಾನ್ ಸಿಟಿ ಬೆಂಗಳೂರು ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ನಗರದಲ್ಲಿ ಕೋವಿಡ್ ಪ್ರಕರಣ ದಿನೇ ದಿನೇ ಏರಿಕೆ ಕಂಡಿದ್ದು, ಭೀತಿ ಮೂಡಿಸಿದೆ. ಇಂದು ಬೆಂಗಳೂರಿನಲ್ಲಿ 85 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1, ಮಂಡ್ಯ 1, ಮೈಸೂರು 7, ಶಿವಮೊಗ್ಗ 6, ತುಮಕೂರಿನಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.
ಸಿಂಗಾಪುರಕ್ಕೆ ತೆರಳಿದ ವ್ಯಕ್ತಿಗೆ ಕೊರೊನಾ
ಪ್ರವಾಸಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಸಿಂಗಾಪುರ ಪ್ರವಾಸ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಮಂಡ್ಯಗೆ ವ್ಯಕ್ತಿ ವಾಪಸಾಗಿದ್ದ. ಆತನಿಗೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತೆರಳಿ ವ್ಯಕ್ತಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ. ಇದೀಗ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ. ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್ ಮರೆತ ಜನ
ಸೋಂಕಿತ ವ್ಯಕ್ತಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, JN1 ದೃಢತೆಗಾಗಿ ಸೋಮವಾರ ಸೋಂಕಿತನ ಸ್ಯಾಂಪಲ್‌ನ್ನು ಲ್ಯಾಬ್‌ಗೆ ರವಾನೆ ಮಾಡಲಾಗುವುದು. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಇದ್ದ ಕುಟುಂಬಸ್ಥರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಅವರನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇಂದು (ಶುಕ್ರವಾರ) ಒಂದೇ ದಿನ 78 ಕೊರೊನಾ (Covid-19) ಸೋಂಕು ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ ಇಂದು 68 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ರಾಜಧಾನಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 156 ಕ್ಕೆ ತಲುಪಿದೆ.
ಶುಕ್ರವಾರ ಬೆಂಗಳೂರು ಗ್ರಾಮಾಂತರದಲ್ಲಿ 1, ಚಿಕ್ಕಮಗಳೂರಿನಲ್ಲಿ 4, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಮೈಸೂರಿನಲ್ಲಿ 1, ರಾಮನಗರದಲ್ಲಿ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್
– ಕೊರೊನಾ ವೈರಸ್ ಉಪತಳಿ ವೇಗವಾಗಿ ಹರಡುತ್ತೆ ಎಚ್ಚರ! – ನ್ಯೂ ಇಯರ್‌ಗೆ ಇಲ್ವಾ ಯಾವುದೇ ರೂಲ್ಸ್? – ಜೆಎನ್.1 ಲಕ್ಷಣಗಳೇನು? ಹೇಗೆ ಹರಡುತ್ತೆ? ನಿಯಂತ್ರಣ ಹೇಗೆ?
ಚಳಿಗಾಲ ಮತ್ತೆ ಬಂದಿದೆ. ಹೊಸ ವರ್ಷವೂ ಬರುತ್ತಿದೆ. ಈ ಹೊತ್ತಿನಲ್ಲೇ ಕೆಲಕಾಲ ವಿರಾಮದ ಬಳಿಕ ಕೊರೊನಾ ವೈರಸ್‌ನ (Corona Virus) ಹೊಸ ಉಪತಳಿ ಜೆಎನ್.1 ವಕ್ಕರಿಸಿದ್ದು, ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಲು ಕಾಯುತ್ತಿದ್ದವರಲ್ಲಿ ನಿರಾಸೆ ಮಡುಗಟ್ಟಿದೆ. ಮತ್ತೆ ಕೊರೊನಾ ಆತಂಕದಲ್ಲೇ ದಿನ ದೂಡುವಂತಹ ಸ್ಥಿತಿ ನಿರ್ಮಾಣವಾಗಿದೆ.
2019 ರಲ್ಲಿ ಕಾಣಿಸಿಕೊಂಡ ಕೋವಿಡ್-19 (Covid-19) ರೂಪಾಂತರಗೊಳ್ಳುತ್ತಲೇ ಇದೆ. ಡೆಲ್ಟಾ, ಓಮಿಕ್ರಾನ್ ಕೊರೊನಾ ವೈರಸ್‌ನ ತಳಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಉಪತಳಿಗಳು ಹುಟ್ಟಿಕೊಂಡಿವೆ. ಬಿಎ.2.86 ಓಮಿಕ್ರಾನ್‌ನ ಉಪತಳಿ. ಇದರ ಉಪತಳಿಯೇ ಜೆಎನ್.1. ಇದು ದೇಶ, ವಿದೇಶಗಳಲ್ಲಿ ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಭೀತಿ ಹುಟ್ಟಿಸಿದೆ. ಕೋವಿಡ್ ಕಾರಣಕ್ಕೆ ಆರ್ಥಿಕ ಸಂಕಷ್ಟದಿಂದ ಬಳಲಿ ಬೆಂಡಾಗಿದ್ದ ದೇಶಗಳು ಮತ್ತೆ ಚಿಂತೆಯಲ್ಲಿ ಮುಳುಗಿವೆ. ಭಾರತದಲ್ಲಿ ಹೊಸ ತಳಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ರಾಜ್ಯಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ. ಹಾಗಾದರೆ, ಏನಿದು ಜೆಎನ್.1? ಇದು ಎಷ್ಟರ ಮಟ್ಟಿಗೆ ಅಪಾಯಕಾರಿ? ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮಗಳೇನು? ಇದನ್ನೂ ಓದಿ: ರಾಜ್ಯದಲ್ಲಿಂದು 24 ಮಂದಿಗೆ ಕೊರೊನಾ ಪಾಸಿಟಿವ್; ಶತಕ ಗಡಿ ದಾಟಿದ ಸೋಂಕಿತರ ಸಂಖ್ಯೆ
ಏನಿದು ಜೆಎನ್.1?
ಬಿಎ.2.86 ಓಮಿಕ್ರಾನ್‌ನ ಒಂದು ಉಪತಳಿ. ಇದರ ಉಪತಳಿಯೇ ಜೆಎನ್.1 ಆಗಿದೆ. ಬಿಎ.2.86 ಹಾಗೂ ಜೆಎನ್.1 ಉಪತಳಿಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಸೋಂಕಿನ ಮುಳ್ಳು ಚಾಚಿಕೆಗಳಲ್ಲಿ ಸಣ್ಣದೊಂದು ಬದಲಾವಣೆ ಇದೆಯಷ್ಟೇ. ಹೊಸ ಉಪತಳಿ ಜೆಎನ್.1 ಬಹು ವೇಗವಾಗಿ ಹರಡುತ್ತದೆ. ಹೆಚ್ಚೇನು ಅಪಾಯಕಾರಿ ಅಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಮೊದಲು ಕಾಣಿಸಿಕೊಂಡಿದ್ದೆಲ್ಲಿ?
ಅಮೆರಿಕದಲ್ಲಿ ಸೆಪ್ಟೆಂಬರ್ ಹೊತ್ತಿಗೆ ಮೊದಲ ಬಾರಿಗೆ ಜೆಎನ್.1 ಉಪತಳಿ ಕಾಣಿಸಿಕೊಂಡಿತು. ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಸೋಂಕಿತರ ಸಂಖ್ಯೆಯಲ್ಲಿ 15ರಿಂದ 29% ರಷ್ಟು ಏರಿಕೆಯಾಯಿತು ಎಂದು ಅಮೆರಿಕ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾ, ಸಿಂಗಾಪುರದಲ್ಲೂ ತೀವ್ರಗತಿಯಲ್ಲಿ ಹರಡುತ್ತಿದೆ. ಈ ದೇಶಗಳ ಆರೋಗ್ಯ ಸಚಿವಾಲಯಗಳು ಜನರಿಗೆ ಎಚ್ಚರಿಕೆಯ ಸೂಚನೆ ನೀಡಿವೆ. ಯುಕೆ, ಐಸ್‌ಲ್ಯಾಂಡ್, ಪೋರ್ಚುಗಲ್, ಸ್ಪೇನ್, ನೆದರ್ಲೆಂಡ್ಸ್ ದೇಶಗಳಲ್ಲೂ ಹೊಸ ಉಪತಳಿ ಹರಡುತ್ತಿರುವುದು ವರದಿಯಾಗಿದೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ
ಭಾರತಕ್ಕೂ ಕಾಲಿಟ್ಟ ಹೊಸ ಉಪತಳಿ!
ಜೆಎನ್.1 ಉಪತಳಿ ಭಾರತಕ್ಕೂ ಕಾಲಿಟ್ಟಿದೆ. ಡಿಸೆಂಬರ್ 6 ರಂದು ಕೇರಳದಲ್ಲಿ 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ಪತ್ತೆಯಾಯಿತು. ಜೆಎನ್.1 ಸೋಂಕಿಗೆ ಭಾರತದಲ್ಲಿ ಮೊದಲ ಬಲಿಯೂ ಆಗಿದೆ. ಈಗ ನೆರೆರಾಜ್ಯ ಕರ್ನಾಟಕದಲ್ಲೂ ಹೊಸ ಉಪತಳಿಯ ಸೋಂಕು ಕೆಲವರಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಇದುವರೆಗೆ ಹೊಸ ಸೋಂಕಿನ 21 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ 19, ಕೇರಳ ಹಾಗೂ ಮಹಾರಾಷ್ಟ್ರದಲ್ಲೂ ತಲಾ 1 ಪ್ರಕರಣ ದೃಢಪಟ್ಟಿದೆ.
ಕರ್ನಾಟಕದಲ್ಲಿ ಕೋವಿಡ್ ಸ್ಥಿತಿಗತಿ ಹೇಗಿದೆ?
ರಾಜ್ಯದ ತುಮಕೂರಿನ ಹನುಮಂತಪುರ ಬಡಾವಣೆಯ 66 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ರೂಪಾಂತರಿ ತಳಿ ಜೆಎನ್.1 ದೃಢಪಟ್ಟಿದೆ. ಕರ್ನಾಟಕದಲ್ಲಿ ಬುಧವಾರ 3 ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಹೊಸ ಸಬ್‌ವೇರಿಯಂಟ್ ಜೆಎನ್.1 ನಿಂದ ಸಾವು ಸಂಭವಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಗಮನಿಸಿದರೆ, ಗುರುವಾರ 24 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 105 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ
ರಾಜ್ಯದಲ್ಲಿ ಕೋವಿಡ್‌ನಿಂದ 2 ಸಾವು
ರಾಜ್ಯದಲ್ಲಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 44 ವರ್ಷದ ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹೊಂದಿದ್ದ 76 ವರ್ಷದ ಹಿರಿಯರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ಇವರು ಸೋಂಕಿತರು ಎಂಬುದು ದೃಢಪಟ್ಟಿತ್ತು. ಇಬ್ಬರೂ ಕೋವಿಡ್ ಲಸಿಕೆ ಪಡೆದವರಾಗಿದ್ದರು.
60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ
ಕೋವಿಡ್ ಹೊಸ ತಳಿ ಜೆಎನ್.1 ವೇಗವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. 60 ವರ್ಷ ಮೇಲ್ಪಟ್ಟವರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ. ಸ್ವಚ್ಛತೆ, ಸಾಮಾಜಿಕ ಅಂತರದ ಬಗ್ಗೆಯೂ ಸಲಹೆ ನೀಡಲಾಗಿದೆ. ಕೊರೊನಾ ಪರೀಕ್ಷೆಗಳ ಸಂಖ್ಯೆ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಆದೇಶಿಸಿದೆ. ಅಲರ್ಟ್ ಆಗಿರುವಂತೆ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಕೋವಿಡ್ ಸಂಬಂಧ ಅಧಿಕಾರಿಗಳೊಂದಿಗೆ ಸಭೆಗಳನ್ನು ಸರ್ಕಾರ ನಡೆಸುತ್ತಿದೆ.
ಇರಲಿ ಎಚ್ಚರ!
ಕೊರೊನಾ ವೈರಸ್‌ನ ಹೊಸ ಉಪತಳಿ ಮೊದಲು ಕಾಣಿಸಿಕೊಂಡಿದ್ದು ಅಮೆರಿಕದಲ್ಲಿ. ನಂತರ ಚೀನಾದಲ್ಲೂ ಹರಡಿದೆ. ಅಲ್ಲಿಂದ ಸಿಂಗಾಪುರದಲ್ಲೂ ಸಹ ಕಾಣಿಸಿಕೊಂಡಿದೆ. ಅಲ್ಲಿಂದ ಭಾರತಕ್ಕೆ ಮರಳಿದವರ ಪೈಕಿ ದೇಶದ ವಿವಿಧ ಭಾಗಗಳ ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ದೇಶದಲ್ಲೂ ಸೋಂಕು ಹರಡುತ್ತಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಈ ಸಂದರ್ಭದಲ್ಲಿ ಸೋಂಕು ಹರಡುವ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಚಳಿಗಾಲದ ವಾತಾವರಣ ಸಹ ಸೋಂಕಿಗೆ ಇನ್ನಷ್ಟು ಬಲ ತುಂಬಬಹುದು. ಇದನ್ನು ನಿಯಂತ್ರಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಸಹ ಎಚ್ಚರಿಕೆ ವಹಿಸಬೇಕು. ಹೊಸ ಸೋಂಕಿನ ಬಗ್ಗೆ ಯಾವುದೇ ಆತಂಕ ಬೇಡ.
ರೋಗ ಲಕ್ಷಣಗಳೇನು?
ತೀವ್ರ ಜ್ವರ
ಒಣ ಕೆಮ್ಮು
ಗಂಟಲು ಕೆರೆತ
ಉಸಿರಾಟಕ್ಕೆ ತೊಂದರೆ
ಹೇಗೆ ಹರಡುತ್ತದೆ?
ಸೀನಿದಾಗ
ವ್ಯಕ್ತಿ-ವ್ಯಕ್ತಿ ಸಂಪರ್ಕ
ಸೋಂಕಿತ ವ್ಯಕ್ತಿಗೆ ತಗುಲಿದ ವಸ್ತು
ಗುಂಪಾಗಿ ಸೇರುವುದು
ತಡೆಯುವುದು ಹೇಗೆ?
ಪದೇ ಪದೇ ಕೈ ತೊಳೆಯುವುದು
ಮಾಸ್ಕ್ ಧರಿಸುವುದು
ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು
ಸೀನುವಾಗ ಕೈಯನ್ನು ಅಡ್ಡಲಾಗಿ ಹಿಡಿಯುವುದು
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ (Covid-19) ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 24 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಸೋಂಕಿತರ ಸಂಖ್ಯೆ ಶತಕ ದಾಟಿದೆ.
ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 105 ಕ್ಕೆ ಏರಿದೆ. ಇದುವರೆಗೆ 11 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ
ಇಂದು ಇಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ 23 ಹಾಗೂ ದಕ್ಷಿಣ ಕನ್ನಡ ಜಿಲ್ಲೆ 1 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ರಾಜ್ಯದಲ್ಲಿ ಜೆಎನ್.1 ಉಪತಳಿ ಹರಡುವ ಭೀತಿಯಿದ್ದು, 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ರಾಜ್ಯ ಸರ್ಕಾರ ಸೂಚಿಸಿದೆ.
– ಇನ್ಫ್ಲುಯೆನ್ಸ ತರಹದ ಕಾಯಿಲೆಗಳ ಬಗ್ಗೆ ಎಚ್ಚರವಹಿಸಲು ಸೂಚನೆ
ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್-19 (Covid-19) ಹೊಸ ತಳಿ (JN.1) ಆರ್ಭಟ ಶುರುವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ.
ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು. ನಿಯಮಿತವಾಗಿ ಇನ್ಫ್ಲುಯೆನ್ಸ ತರಹದ ಕಾಯಿಲೆಗಳ ಬಗ್ಗೆ ಎಚ್ಚರವಹಿಸಬೇಕು. ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದೆ.
ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್‌ಟಿಪಿಸಿಆರ್, ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಬೇಕು. ಆರ್‌ಟಿಪಿಸಿಆರ್ ಪಾಸಿಟಿವ್ ಆದರೆ ಜೆನೆಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳಿಸಬೇಕು. ಕೊವಿಡ್ ರೂಲ್ಸ್‌ಗಳನ್ನ ಸ್ಥಳೀಯವಾಗಿ ಜಾರಿ ಮಾಡಲು ರಾಜ್ಯಗಳಿಗೆ ಜವಾಬ್ದಾರಿ ನೀಡಲಾಗಿದೆ.
ಭಾರತದ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಒಂದು ಸಾವು ವರದಿಯಾಗಿದೆ. ಈ ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ವೈರಸ್‌ನ ಜೆಎನ್.1 ಉಪತಳಿ ಪತ್ತೆಯಾಗಿದೆ. ಇದನ್ನೂ ಓದಿ: ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ದಿನೇಶ್ ಗುಂಡೂರಾವ್
ಬೆಂಗಳೂರು: ಭಾರತ ಸೇರಿ ಜಗತ್ತಿನೆಲ್ಲೆಡೆ ಮತ್ತೊಮ್ಮೆ ಕೊರೊನಾ (Covid-19) ವಕ್ಕರಿಸುವಂತಿದೆ. ಮತ್ತೆ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಅಮೆರಿಕಾ, ಬ್ರಿಟನ್, ಚೀನಾ, ಫ್ರಾನ್ಸ್ ದೇಶಗಳಲ್ಲಿ ಕಂಡುಬಂದಿದ್ದ ಕೊರೊನಾದ ಉಪತಳಿ ಜೆಎನ್.1 ಭಾರತದಲ್ಲೂ ಇದೀಗ ಕಂಡುಬಂದಿದೆ.
ನೆರೆಯ ಕೇರಳದಲ್ಲಿ (Kerala) ಮೊದಲ ಕೇಸ್ ಪತ್ತೆಯಾಗಿದೆ. ಜೆಎನ್.1 (JN.1) ಒಮಿಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗುತ್ತದೆ. ಇದು ಅಪಾಯಕಾರಿಯೇ, ಇಲ್ಲವೇ ಎನ್ನುವುದು ಇನ್ನೂ ನಿರ್ಧಾರಿತವಾಗಿಲ್ಲ. ಆದರೆ ಶರವೇಗದಲ್ಲಿ ಹಬ್ಬುತ್ತಿದೆ. ಕೇರಳದ ಕಣ್ಣೂರಿನಲ್ಲಿ 80 ವರ್ಷದ ವೃದ್ಧರೊಬ್ಬರು ಕೋವಿಡ್‌ಗೆ ಬಲಿ ಆಗಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಸಾವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಹೊಸ ತಳಿಗೆ ಇಬ್ಬರು ಸಾವು- ರಾಜ್ಯದಲ್ಲಿ ಆರೋಗ್ಯ ಸಚಿವರ ತುರ್ತುಸಭೆ
ಕಣ್ಣೂರಿನ ಪಾನೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಲರ್ಟ್ ಆಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ 58 ಕೇಸ್ ಅಷ್ಟೇ ಇವೆ. ಆತಂಕ ಬೇಡ ಎಂದಿದ್ದಾರೆ.
ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಮಂಗಳವಾರ ಸಭೆ ಬಳಿಕ ಸರ್ಕಾರಕ್ಕೆ ಸಲಹೆಗಳನ್ನ ನೀಡಲಾಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಾಹುತ ಆಗುವುದಕ್ಕೆ ಬಿಡಬಾರದು ಎಂದಿದ್ದಾರೆ. ಗಡಿ ಭಾಗಗಳನ್ನು ಸೀಲ್ ಮಾಡೋದು, ರೈಲ್ವೇ ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ ತಪಾಸಣೆ ಮಾಡೋದು ಸರಿಯಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನ ಹೆಚ್ಚು ಮಾಡುತ್ತೇವೆ. ರಾಜ್ಯ, ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಭೀತಿ ಮತ್ತೆ ಶುರು; ಕೇರಳದ ಮಹಿಳೆಯಲ್ಲಿ ಕೋವಿಡ್ ಉಪತಳಿ ಜೆಎನ್.1 ಪತ್ತೆ
ಏನು ಮಾಡಬೇಕು?
* ಮಾಸ್ಕ್ ಧರಿಸಬೇಕು
* ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು
* ರೋಗ ಲಕ್ಷಣ ಇದ್ದರೆ ವೈದ್ಯರನ್ನ ಭೇಟಿಯಾಗಿ
* ಗುಂಪುಗೂಡಬಾರದು
* ಆರೋಗ್ಯಕರ ಆಹಾರ ಸೇವಿಸಬೇಕು
ಏನು ಮಾಡಬಾರದು?
* ಸೋಂಕಿತ ವ್ಯಕ್ತಿ ಇದ್ದರೆ ಆಲಂಗಿಸಬಾರದು
* ಕೈ ಕುಲುಕಬಾರದು
* ನೀರಿನ ಬಾಟಲಿ, ಆಹಾರ, ಕರವಸ್ತ್ರ, ಟವೆಲ್ ಹಂಚಿಕೊಳ್ಳಬಾರದು
* ಸೋಪಿನಿಂದ ಕೈತೊಳೆದುಕೊಳ್ಳುತ್ತಿರಬೇಕು
* ಪದೇ ಪದೇ ಕಣ್ಣು, ಬಾಯಿ ಮುಟ್ಟಿಕೊಳ್ಳಬಾರದು
* ಪದೇ ಪದೇ ಉಗುಳಬಾರದು
ಜೆಎನ್.1 ಉಪತಳಿಯ ಗುಣಲಕ್ಷಣಗಳು
* ಮೂಗು ಕಟ್ಟುವಿಕೆ
* ಜ್ವರ
* ಕೆಮ್ಮು
* ಸುಸ್ತು
* ಅತಿಸಾರ
* ತಲೆನೋವು
* ಸದಾ ಸ್ರವಿಸುವ ಮೂಗು