Tag: JMFC

  • ಕೊರೊನಾ ಪರೀಕ್ಷೆಗೆ ಕಿರಿಕ್ – ಶ್ರೀಕಂಠೇಗೌಡ, ಪುತ್ರನಿಗೆ ಜಾಮೀನು

    ಕೊರೊನಾ ಪರೀಕ್ಷೆಗೆ ಕಿರಿಕ್ – ಶ್ರೀಕಂಠೇಗೌಡ, ಪುತ್ರನಿಗೆ ಜಾಮೀನು

    – ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪರೀಕ್ಷೆಗೆ ವಿರೋಧ
    – ಕೋರ್ಟಿನಿಂದ ಷರತ್ತುಬದ್ಧ ಜಾಮೀನು ಮಂಜೂರು

    ಮಂಡ್ಯ: ಅಂಬೇಡ್ಕರ್ ಭವನದಲ್ಲಿ ಕೊರೊನಾ ಪರೀಕ್ಷೆ ನಡೆಸಲು ಕಿರಿಕ್ ಮಾಡಿದ್ದ ಜೆಡಿಎಸ್ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮತ್ತು ಪುತ್ರನಿಗೆ ಜಾಮೀನು ಸಿಕ್ಕಿದೆ.

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರಿಗೆ ಕೊರೋನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದ್ರೆ ಬೆಂಬಲಿಗರ ಜೊತೆ ಬಂದ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಬೆಳ್ಳಂಬೆಳಗ್ಗೆಯೇ ಕಿರಿಕ್ ತೆಗೆದರು.

    ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಬಂದಿದ್ದ ಪತ್ರಕರ್ತರ ಜೊತೆ ಜಗಳಕ್ಕೆ ಇಳಿದ್ರು. ಇಲ್ಲಿ ಕೊರೋನಾ ಟೆಸ್ಟ್‍ಗೆ ಅವಕಾಶ ಇಲ್ಲ. ಇಲ್ಲಿ ನಮ್ಮ ಮನೆ ಇದೆ. ಇಲ್ಲಿನ ಯಾರಿಗಾದ್ರೂ ಕೊರೋನಾ ಬಂದರೆ ಏನು ಗತಿ ಎಂದು ಶ್ರೀಕಂಠೇಗೌಡರು ಪ್ರಶ್ನಿಸಿ ಏರುಧ್ವನಿಯಲ್ಲಿ ಜಗಳಕ್ಕೆ ಮುಂದಾದರು.

    ಇದು ಸಾಲದು ಅಂತಾ ಶ್ರೀಕಂಠೇಗೌಡರ ಪುತ್ರ ಕೃಷಿಕ್ ಗೌಡ, ಪತ್ರಕರ್ತರ ಮೇಲೆ ದಾಳಿ ನಡೆಸಿದರು. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಗಲಾಟೆ ಆರೋಪದ ಮೇಲೆ ಎಂಎಲ್‍ಸಿ ಶ್ರೀಕಂಠೇಗೌಡ ಸೇರಿ ಐವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆ ಪೊಲೀಸ್ರು ಎಫ್‍ಐಆರ್ ದಾಖಲಿಸಿದರು. ಎಂಎಲ್‍ಸಿ ಶ್ರೀಕಂಠೇಗೌಡ, ಶ್ರೀಕಂಠೇಗೌಡರ ಪುತ್ರ ಕೃಷಿಕ್ ಸೇರಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದ್ರು.

    ಈ ಬೆನ್ನಲ್ಲೇ ಜೆಡಿಎಸ್ ಮುಖಂಡರು ಪೊಲೀಸರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ರು. ವಿಚಾರಣೆ ವೇಳೆ ಠಾಣೆಗೆ ಆಗಮಿಸಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ಸ್ಟೇಷನ್ ಬೇಲ್ ನೀಡುವಂತೆ ಮನವಿ ಮಾಡಿದ್ರು. ಆದ್ರೆ ಇದಕ್ಕೆ ಸೊಪ್ಪು ಹಾಕದ ಪೊಲೀಸರು ಐವರು ಆರೋಪಿಗಳನ್ನು ಜೆಎಂಎಫ್‍ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ತಲಾ 10 ಸಾವಿರ ರೂ.ಗಳ ಬಾಂಡ್ ಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು. ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿದ್ರು.

     

    ಕೊರೋನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ಎಂದು ಕೇವಲ ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ, ಇದು ಗೊತ್ತಿದ್ದರೂ, ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

    ಆರೋಪಿಗಳು ಯಾರು?
    ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
    ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
    ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
    ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
    ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
    ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗ

    ಯಾವ್ಯಾವ ಸೆಕ್ಷನ್ ಮೇಲೆ ಕೇಸ್?
    * 143 – ಅಕ್ರಮವಾಗಿ ಗುಂಪು ಸೇರುವಿಕೆ
    * 149 – ಉದ್ದೇಶಪೂರ್ವಕವಾಗಿ ದೊಂಬಿ
    * 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
    * 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
    * 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
    * 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
    * 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
    * 504 – ಜೀವ ಬೆದರಿಕೆ
    * ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ

     

  • ಮಾಸ್ತಿಗುಡಿ ದುರಂತ: ಜೂ.27ಕ್ಕೆ ವಿಚಾರಣೆ ಮುಂದೂಡಿಕೆ

    ಮಾಸ್ತಿಗುಡಿ ದುರಂತ: ಜೂ.27ಕ್ಕೆ ವಿಚಾರಣೆ ಮುಂದೂಡಿಕೆ

    ರಾಮನಗರ: ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಿಬ್ಬರ ದುರಂತ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಗಡಿಯ ಜೆಎಮ್‍ಎಫ್‍ಸಿ ನ್ಯಾಯಾಲದಲ್ಲಿ ಇಂದು ವಿಚಾರಣೆ ನಡೆಯಿತು.

    ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್‍ಎಫ್‍ಸಿ ನ್ಯಾಯಾಧೀಶ ಆನಂದ್ ಪ್ರಕರಣದ ವಿಚಾರಣೆ ನಡೆಸಿ ಜೂನ್ 27 ಕ್ಕೆ ಮುಂದೂಡಿದ್ರು. ಸಾಹಸ ನಿರ್ದೇಶಕ ರವಿವರ್ಮ, ಸಹ ನಿರ್ದೇಶಕ ಸಿದ್ದಾರ್ಥ್, ಹಾಗೂ ಯೂನಿಟ್ ಮ್ಯಾನೇಜರ್ ಭರತ್ ವಿಚಾರಣೆಗೆ ಹಾಜರಾಗಿದ್ರು.

    ಕಳೆದ ನೆವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 24 ರಂದು ರಾಮನಗರ ಡಿಸಿಐಪಿ ಪೊಲೀಸರು 81 ಸಾಕ್ಷಿಗಳ ಹೇಳಿಕೆ ದಾಖಲಿಸಿರುವ ಒಟ್ಟು 450 ಪುಟಗಳ ಚಾರ್ಜ್ ಶೀಟ್‍ನ್ನು ಮಾಗಡಿ ಜೆಎಮ್‍ಎಫ್‍ಸಿ ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದಾರೆ.

    ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್ ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ವಿಚಾರಣೆಗೆ ಗೈರಾಗಿದ್ದರು. ಗೈರಾಗಿದ್ದ ಆರೋಪಿತರ ಪರವಾಗಿ ವಾದ ಮಂಡಿಸಿದ ವಕೀಲರು ತಮ್ಮ ಕಕ್ಷಿದಾರರ ಅನಾರೋಗ್ಯದ ಸಮಸ್ಯೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ರು.