Tag: jk krishna reddy

  • ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ

    ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ರಾಜೀನಾಮೆ

    -ಆನಂದ್ ಸಿ.ಮಾಮನಿ ಹೊಸ ಡೆಪ್ಯೂಟಿ ಸ್ಪೀಕರ್?

    ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಜೆ.ಕೆ. ಕೃಷ್ಣಾರೆಡ್ಡಿ, ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

    ಇವತ್ತು ಸದನದಲ್ಲಿ ಬಿಜೆಪಿಯು ಕೃಷ್ಣಾರೆಡ್ಡಿ ವಿರುದ್ಧ ನಿಯಮ 169ರಡಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾವ ಮಂಡಿಸಲಿತ್ತು. ಆದರೆ ಮುಜುಗರದಿಂದ ಪಾರಾಗಲು ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನವೇ ಕೃಷ್ಣಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆ ಮೂಲಕ ಡೆಪ್ಯೂಟಿ ಸ್ಪೀಕರ್ ಸ್ಥಾನದ ಮೇಲೆ ಕಣ್ಣೀಟ್ಟಿರುವ ಸವದತ್ತಿಯ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಅವರ ಹಾದಿ ಸುಗಮವಾದಂತಾಗಿದೆ. ಸದ್ಯದಲ್ಲೇ ಉಪಸಭಾಧ್ಯಕ್ಷರಾಗಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆಯಾಗುವ ಸಾಧ್ಯತೆಗಳಿವೆ.

    ಮೈತ್ರಿ ಸರ್ಕಾರದ ಅವಧಿಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಯ್ಕೆ ಆಗಿದ್ದರು. ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಿತು. ಬಜೆಟ್ ಅಧಿವೇಶನದ ಮೊದಲ ದಿನವೇ ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿಯ 25 ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಕಾಗೇರಿ ಅವರಿಗೆ ಅವಿಶ್ವಾಸ ನಿರ್ಣಯ ನೊಟೀಸ್ ನೀಡಿದ್ದರು. ಬಿಜೆಪಿಯುಂದ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸವದತ್ತಿ ಆನಂದ್ ಸಿ. ಮಾಮನಿ ಪ್ರಬಲ ಬೇಡಿಕೆ ಇಟ್ಟಿದ್ದು, ಬಹುತೇಕ ಬಿಜೆಪಿ ಶಾಸಕರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಹೊಸ ಡೆಪ್ಯೂಟಿ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆನಂದ್ ಸಿ. ಮಾಮನಿ ಆಯ್ಕೆ ನಿಶ್ಚಿತ ಎನ್ನಲಾಗಿದೆ.

  • ಜೆ.ಕೆ.ಕೃಷ್ಣಾರೆಡ್ಡಿಗೆ ಒಲಿದ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ

    ಜೆ.ಕೆ.ಕೃಷ್ಣಾರೆಡ್ಡಿಗೆ ಒಲಿದ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನ

    ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

    ವಿಧಾನಸಭೆಯಲ್ಲಿ ಶಾಸಕ ಕೃಷ್ಣಾರೆಡ್ಡಿ ಅವಿರೋಧ ಆಯ್ಕೆ ಆಗಿರುವ ಕುರಿತು ಸ್ಪೀಕರ್ ರಮೇಶ್ ಕುಮಾರ್ ಘೋಷಣೆ ಮಾಡಿದ್ದಾರೆ. ಅಂದಹಾಗೇ ಶುಕ್ರವಾರ ನಿಗದಿಯಾಗಿದ್ದ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ಗುರುವಾರ ನಾಮಪತ್ರ ಸಲ್ಲಿಸಿದರು. ಸದ್ಯ ಸ್ಪೀಕರ್ ಸ್ಥಾನ ಕಾಂಗ್ರೆಸ್ ಗೆ ಲಭಿಸಿದ್ದರೆ, ಉಪಸಭಾಧ್ಯಕ್ಷ ಸ್ಥಾನ ಜೆಡಿಎಸ್ ಗೆ ನೀಡಲಾಗಿದೆ.

    ವಿಧಾನಸಭೆಯಲ್ಲಿ ನೂತನ ಉಪಾಸಭಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಇದು ಸಾಂವಿಧಾನಿಕ ಹುದ್ದೆ. ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮಾಜಿ ಪ್ರಧಾನಿ ದೇವೇಗೌಡರು, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವರು ಆಶೀರ್ವಾದಿಸಿದ್ದಾರೆ. ಇದು ನನ್ನ ಸೌಭಾಗ್ಯ. ಸದನ ಕಾರ್ಯಕಲಾಪವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟದಿಂದ ಜೆಕೆ ಕೃಷ್ಣಾರೆಡ್ಡಿ ಸ್ಪರ್ಧಿಸಿದ್ದರೆ ಪ್ರತಿಪಕ್ಷ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ವಿಧಾನಸಭಾ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಎರಡೂ ಹುದ್ದೆಗಳು ಅವಿಭಜಿತ ಕೋಲಾರ ಜಿಲ್ಲೆಗೆ ದೊರೆತಿದೆ.

    ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳಲ್ಲಿ ಪೈಪೋಟಿ ನಡೆದಿದೆ ಎನ್ನಲಾಗಿದ್ದು, ಆದರೆ ಸದ್ಯ ಶಾಸಕ ಜೆಕೆ ಕೃಷ್ಣಾರೆಡ್ಡಿ ಅವರಿಗೆ ಸ್ಥಾನ ಲಭಿಸಿದೆ. ಸಮ್ಮಿಶ್ರ ಸರ್ಕಾರದ ವೇಳೆ ಶಾಸಕ ಜೆಕೆ ಕೃಷ್ಣಾರೆಡ್ಡಿ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಅವರಿಗೆ ಸಚಿವ ಸ್ಥಾನ ಲಭಿಸಿರಲಿಲ್ಲ.

  • ಚಿಕ್ಕಬಳ್ಳಾಪುರದ ಕೈ ಶಾಸಕನಿಗೆ ಸಚಿವ ಸ್ಥಾನ-ಜೆಡಿಎಸ್ ಶಾಸಕನಿಗೆ ಸಿಗಲಿಲ್ಲ ಮಂತ್ರಿಗಿರಿ..!

    ಚಿಕ್ಕಬಳ್ಳಾಪುರದ ಕೈ ಶಾಸಕನಿಗೆ ಸಚಿವ ಸ್ಥಾನ-ಜೆಡಿಎಸ್ ಶಾಸಕನಿಗೆ ಸಿಗಲಿಲ್ಲ ಮಂತ್ರಿಗಿರಿ..!

    ವಿಶೇಷ ವರದಿ
    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಜಿಲ್ಲಾ ಮಹಿಳಾಧ್ಯಕ್ಷೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನ, ಹೀಗೆ ಎಲ್ಲವನ್ನು ತನ್ನೊಡಲಿನಲ್ಲಿ ಇರಿಸಿಕೊಂಡುಡಿರುವ ಗೌರಿಬಿದನೂರು ಕಾಂಗ್ರೆಸ್ ಶಕ್ತಿಯಾಗಿರುಗ ಶಾಸಕ ಎನ್.ಎಚ್.ಶಿವಶಂಕರ್ ರೆಡ್ಡಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನವೂ ಈ ಕ್ಷೇತ್ರಕ್ಕೆ ದಕ್ಕಿದೆ. ಜಿಲ್ಲೆಯಲ್ಲಿ ಸಂತಸ ಮೂಡಿಸಿದ್ದರೆ, ಎಲ್ಲ ಹುದ್ದೆಗಳು ಗೌರಿಬಿದನೂರು ಪಾಲಾಗುತ್ತಿದೆ ಎಂಬ ಅಸಮಾಧಾನದ ಮಾತುಗಳು ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರಿಂದ ಕೇಳಿಬರುತ್ತಿದೆ.

    ಶಿವಶಂಕರ್ ರೆಡ್ಡಿ ಯಾರು?
    ಗೌರಿಬಿದನೂರು ಸಮೀಪದ ಎಚ್.ನಾಗಸಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್.ಎಸ್.ಹನುಮಂತರೆಡ್ಡಿ ಹಾಗೂ ಸುಭಾಷಿಣಮ್ಮ ಅವರ ದಂಪತಿಯ ಹಿರಿಯ ಪುತ್ರರಾಗಿ 1954ರಲ್ಲಿ ಎನ್.ಎಚ್.ಶಿವಶಂಕರ್ ರೆಡ್ಡಿ ಜನಿಸಿದರು. 1973ರಲ್ಲಿ ಬಿಎಸ್‍ಸಿ ಅಗ್ರಿ ವಿದ್ಯಾಭ್ಯಾಸ ಮುಗಿಸಿ, 1978ರಲ್ಲಿ ನಾಗಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. 1981ರಿಂದ 1986ರ ವರೆಗೆ ಚಿಕ್ಕಕುರುಗೊಡು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1985 ರಿಂದ 1990 ರ ವರೆಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಾಗಸಂದ್ರದಲ್ಲಿ ಸೇವೆ ಸಲ್ಲಿಸಿದ್ದರು. 1987ರಿಂದ 1992 ರವರಗೆ ದೊಡ್ಡಕುರುಗೊಡು ಮಂಡಲ ಪಂಚಾಯತಿ ಅಧ್ಯಕ್ಷರಾಗಿದ್ದರು. 1995 ರಲ್ಲಿ ತಾಲೂಕು ಪಂಚಾಯತಿ ಸದಸ್ಯರಾಗಿದ್ದ ಇವರು, 1997ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

    1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತದನಂತರ ಸತತ 4 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿ, ಒಟ್ಟು 5 ಬಾರಿ ಶಾಸಕರಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದಾರೆ. ಕಳೆದ ಬಾರಿಯ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಸಚಿವ ಸ್ಥಾನದ ಬದಲು ವಿಧಾನಭೆಯ ಉಪಸಭಾಧ್ಯಕ್ಷ ಸ್ಥಾನ ದೊರೆತಿತ್ತು. ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಅವರಿಗೆ ದಕ್ಕಿದೆ.

    ಜಿಲ್ಲೆಯ ಸಚಿವ ಸ್ಥಾನದ ಇತಿಹಾಸ:
    ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಅಯ್ಕೆಯಾಗಿದ್ದರು. ಆದರೆ ಯಾರೊಬ್ಬರಿಗೂ ಸಚಿವ ಸ್ಥಾನ ದೊರೆತಿರಲಿಲ್ಲ. ಈ ಬಾರಿ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಒಲಿದಿರುವುದು ವಿಶೇಷ. ಇನ್ನು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ನಿರಾಸೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಬಹುದಾದ ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.

    ಗೌರಿಬಿದನೂರು ಕ್ಷೇತ್ರದ 2ನೇ ಸಚಿವರು:
    ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಜೈನ ಸಮುದಾಯದ ಆರ್.ಎನ್.ಲಕ್ಷ್ಮೀಪತಿ ಅವರು ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದರು. ಅಂದಿನಿಂದ ಇಲ್ಲಿಯವರೆಗೂ ಗೌರಿಬಿದನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ದಕ್ಕಿರಲಿಲ್ಲ. ಇದೀಗ ಶಾಸಕ ಶಿವಶಂಕರ್ ರೆಡ್ಡಿ ಅವರು ಸಚಿವರಾಗಿರುವುದು ಕ್ಷೇತ್ರದ ವಿಶೇಷಗಳಲ್ಲಿ ಒಂದು. ಈ ಮೊದಲು ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದ ಶಿವಶಂಕರ್ ರೆಡ್ಡಿ ಸಚಿವ ಸ್ಥಾನಕ್ಕೆ ಪಕ್ಷದ ವರಿಷ್ಠರ ಮೊರೆಹೋಗಿದ್ದರು.

    ಶಿವಶಂಕರ್ ರೆಡ್ಡಿಗೆ ವೀರಪ್ಪ ಮೊಯ್ಲಿ ಕೃಪಾಕಟಾಕ್ಷ:
    ಶಿವಶಂಕರ್ ರೆಡ್ಡಿ ಪರವಾಗಿ ಸಂಸದ ವೀರಪ್ಪ ಮೊಯ್ಲಿ ಅವರು ಬ್ಯಾಂಟಿಗ್ ಮಾಡಿ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಸಫಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ಮುಖಂಡರಿಂದಲೇ ಕೇಳಿಬಂದಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನಿಗಯಾಗಿದೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಹೀಗಾಗಿ ಹಿರಿಯ ಶಾಸಕರಿಗೆ ಸುಧಾಕರ್ ಅವರ ಮೇಲೆ ಮುನಿಸು ಶುರುವಾಗಿತ್ತು. ಆದರೆ, ಇದೀಗ ಲೆಕ್ಕಚಾರಗಳೆಲ್ಲವು ಉಲ್ಟಾ ಹೊಡೆದಿದ್ದು, ಗೌರಿಬಿದನೂರು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿರುವ ಮಾದರಿಯಲ್ಲಿಯೇ ಜಿಲ್ಲೆಯ ಉಸ್ತುವಾರಿ ಹೊಣೆ ಹೊರುವ ನಿರೀಕ್ಷೆ ದಟ್ಟವಾಗಿದೆ.

    14 ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಈ ಬಾರಿಯು ಜಯಗಳಿಸಿದ್ದಾರೆ. ಇವರ ಗೆಲುವಿನ ಬೆನ್ನಲ್ಲೇ ಸಚಿವ ಸ್ಥಾನದ ಲಾಬಿಯೂ ಹೆಚ್ಚಾಗಿತ್ತು. ವಿ.ಮುನಿಯಪ್ಪ ಅವರು ತಮ್ಮ ಹಿರಿತನ, ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಎದುರು ನೋಡುತ್ತಿದ್ದರೆ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸುಧಾಕರ್ ಹೆಸರು ನಮೂದಿಗೊಂಡಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಜಿಲ್ಲೆಯಲ್ಲಿ ಕಾವೇರಿತ್ತು. ಇದಲ್ಲದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಹ ಸುಧಾಕರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇನ್ನು ಸಚಿವ ಸ್ಥಾನಕ್ಕಾಗಿ ಶಿವಶಂಕರ್ ರೆಡ್ಡಿ ಅವರ ಹಿಂಬಾಲಕರು ಇತ್ತೀಚೆಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೋಡಲು ದೆಹಲಿಗೆ ತೆರಳಿದ್ದರು. ರೆಸಾರ್ಟ್ ವಾಸ ಮುಗಿದ ಕೂಡಲೇ ಶಿವಶಂಕರ್ ರೆಡ್ಡಿ ಸಹ ದೆಹಲಿ ಬಾಗಿಲು ತಟ್ಟಿದ್ದರು. ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗದೇ ಸಂಸದ ವೀರಪ್ಲ ಮೊಯ್ಲಿ ಅವರಲ್ಲಿ ಬೇಡಿಕೆ ಇಟ್ಟಿದ್ದರು. ಅಂತು-ಇಂತು ಕೊನೆಗೆ ಶಿವಶಂಕರ್ ರೆಡ್ಡಿ ಅವರೇ ಸಚಿವರಾಗಿ ಆಯ್ಕೆಯಾಗಿರುವುದು ಕೆಲವರಿಗೆ ಹುಳಿ-ಸಿಹಿ ಅನುಭವ ನೀಡಿದೆ.

    ಜೆಡಿಎಸ್ ಶಾಸಕನಿಗಿಲ್ಲ ಸಚಿವ ಸ್ಥಾನ:
    ಮತ್ತೊಂದೆಡೆ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ, ರೆಡ್ಡಿ ಸಮುದಾಯ, ಹಾಗೂ ಜಿಲ್ಲೆಯ ಜೆಡಿಎಸ್ ನ ಏಕೈಕ ಶಾಸಕರಾಗಿರೋ ಜೆ.ಕೆ.ಕೃಷ್ಣಾರೆಡ್ಡಿಗೂ ಸಚಿವ ಸ್ಥಾನ ಕೈ ತಪ್ಪಿದೆ. ಜಿಲ್ಲೆ, ಜಾತಿ, ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜೆ.ಕೆ.ಕೃಷ್ಣಾರೆಡಿಗೂ ನಿರಾಸೆಯಾಗಿದೆ. ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅಸಮಾಧಾನಗೊಂಡಿದ್ದಾರೆ.

    ಬಾಗೇಪಲ್ಲಿಗೂ ಇಲ್ಲ ಸ್ಥಾನ..!
    ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಾಗೇಪಲ್ಲಿ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೂ ಕನಿಷ್ಟ ಒಂದು ಬಾರಿಯಾದರೂ, ಸಚಿವ ಸ್ಥಾನ ಲಭಿಸಿದೆ. ಆದರೆ, ಸ್ವಾತಂತ್ರ್ಯ ನಂತರದಿಂದ ಈ ವರೆಗೂ ಬಾಗೇಪಲ್ಲಿ ಕ್ಷೇತ್ರಕ್ಕೆ ಮಂತ್ರಿ ಸೌಭಾಗ್ಯವೇ ದಕ್ಕಿಲ್ಲ. ಗುಂಡಿಬಂಡೆ, ಬಾಗೇಪಲ್ಲಿ 2 ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರೂ, ಕ್ಷೇತ್ರವನ್ನು ಬಲ ಪಡಿಸುವ ಕಾರ್ಯಕ್ಕೆ ಯಾರೊಬ್ಬರು ಮುಂದಾಗಿಲ್ಲ.

    ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪೇಪರ್ ಮಿನುಯಪ್ಪ, ರೇಣುಕಾ ರಾಜೇಂದ್ರನ್ ಅವರುಗಳು ಮಂತ್ರಿಗಿರಿ ಪಡೆದುಕೊಂಡಿದ್ದರು. ಚಿಂತಾಮಣಿ ಕ್ಷೇತ್ರದಲ್ಲಿ ಗೃಹ ಖಾತೆಯಿಂದ ಹಿಡಿದು ಸಮಾಜ ಕಲ್ಯಾಣ ಇಲಾಖೆ ವರೆಗೂ ಸಚಿವರು ಆಯ್ಕೆಗೊಂಡಿದ್ದರು. ಗೃಹ ಸಚಿವರಾಗಿದ್ದ ಚೌಡರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆ.ಎನ್.ಕೃಷ್ಣಾರೆಡ್ಡಿ ಅಧಿಕಾರ ಅನುಭವಿಸಿದ್ದರು.

  • ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ

    ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ

    ಪಬ್ಲಿಕ್ ಟಿವಿ
    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಖಾರದ ಸಂಪುಟ ರಚನೆ ಫೈನಲ್ ಆಗುತ್ತಿದಂತೆ ಜೆಡಿಎಸ್ ಪಕ್ಷದ ಶಾಸಕರಲ್ಲಿ ಅಸಮಾಧಾನದ ಸ್ಫೋಟಗೊಂಡಿದ್ದು, ಅಧಿಕಾರ ಇಲ್ಲದಿದ್ದಾಗ ಬಾಚಿ ತಬ್ಬಿಕೊಳ್ಳುವ ಅಪ್ಪ-ಮಕ್ಕಳು, ಅಧಿಕಾರ ಬಂದಾಗ ಕನಿಷ್ಠ ಕಣ್ಣೆತ್ತು ನೋಡ್ತಾಯಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

    ಜೆಡಿಎಸ್ ಪಕ್ಷದ ಜಿಲ್ಲೆಯ ಏಕೈಕ ಶಾಸಕ ಹಾಗೂ ರೆಡ್ಡಿ ಸಮುದಾಯ ಏಕೈಕ ಶಾಸಕರಾಗಿದ್ದ ಜೆ ಕೆ ಕೃಷ್ಣಾರೆಡ್ಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಇಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕೇವಲ ಕೆಲವೇ ಗಂಟೆಗಳು ಬಾಕಿ ಉಳಿದಿದ್ದರೂ ಇದುವರೆಗೂ ಜೆಡಿಎಸ್ ವರಿಷ್ಠರು ಯಾವುದೇ ಮಾಹಿತಿ ನೀಡಿಲ್ಲ. ಕನಿಷ್ಠ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಗೆ ಒಂದು ಹಾಗೂ ಸಮುದಾಯ ಒಬ್ಬ ಶಾಸಕರಂತೆ ಸಚಿವ ಸ್ಥಾನದ ಭರವಸೆ ನೀಡಿದ್ದ ವರಿಷ್ಠರು ಸಾಮಾಜಿಕ ನ್ಯಾಯವನ್ನು ಮರೆತ್ತಿದ್ದಾರೆ. ಹಣವಂತರಿಗೆ ಮಣೆ ಹಾಕಿರುವ ವರಿಷ್ಠರು, ರೆಡ್ಡಿ ಸಮುದಾಯವನ್ನ ಕಡೆಗಣಿಸಿದ್ದಾರೆ, ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕನಾಗಿದ್ದು, ಸರಿ ಸುಮಾರು ಜಿಲ್ಲೆಯ 3 ಲಕ್ಷಕ್ಕೂ ಹೆಚ್ಚು ಜೆಡಿಎಸ್ ಮತ ಹಾಕಿದ ಮತದಾರರಿಗೆ ಅನ್ಯಾಯ ಮಾಡಿದ್ದಾರೆ. ಪಕ್ಷ ಸಂಘಟನೆಗೆ ಅವಕಾಶವಿಲ್ಲದಂತೆ ಮಾಡಿದ್ದಾರೆ. ಎಲ್ಲರೂ ಅಪ್ಪ-ಮಕ್ಕಳ ಪಕ್ಷ ಅಂತಿದ್ದರು. ಆದರೆ ಅದು ಈಗ ಅರಿವಿಗೆ ಬರುತ್ತಿದೆ. ಮುಂದೆ ಕ್ಷೇತ್ರದಲ್ಲಿ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೆನೆ ಎಂದು ಪಬ್ಲಿಕ್ ಟಿವಿ ಬಳಿ ದೂರವಾಣಿ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ರೆಡ್ಡಿ ಸಮುದಾಯದಿಂದ ಗೆದ್ದು ಬಂದಿರೋ ಏಕೈಕ ಶಾಸಕ ನಾನು: ಸಚಿವ ಸ್ಥಾನ ಬೇಕೆಂದ ಚಿಂತಾಮಣಿ ಶಾಸಕ

    ರೆಡ್ಡಿ ಸಮುದಾಯದಿಂದ ಗೆದ್ದು ಬಂದಿರೋ ಏಕೈಕ ಶಾಸಕ ನಾನು: ಸಚಿವ ಸ್ಥಾನ ಬೇಕೆಂದ ಚಿಂತಾಮಣಿ ಶಾಸಕ

    ಚಿಕ್ಕಬಳ್ಳಾಪುರ: ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಜೆಡಿಎಸ್ ಶಾಸಕ ಜೆ ಕೆ ಕೃಷ್ಣಾರೆಡ್ಡಿ ಹೇಳಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಎಚ್ ಡಿ ಕುಮಾರಸ್ವಾಮಿ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತಾರೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಸಂಪುಟ ರಚನೆ ಕಸರತ್ತು- ಸಚಿವ ಸ್ಥಾನಕ್ಕೆ ಮುಂದುವರಿದ ಲಾಬಿ

    ಕಳೆದ 10 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಸಮುದಾಯದಿಂದ ನಾನು ಒಬ್ಬನೇ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೇ ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ಒಂದು ಸ್ಥಾನ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೊಡುವ ವಿಶ್ವಾಸ ನನಗಿದೆ ಅಂದ್ರು.

    ಜೆಡಿಎಸ್ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆಗಳು ನಡೆಯುತ್ತಿದ್ದು ಅಂತಿಮವಾಗಿಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದು ವಿಶ್ವಾಸ ಮತಯಾಚನೆಯ ಬಳಿಕ ಯಾರಿಗೆ ಯಾವ ಖಾತೆ ಎನ್ನುವುದು ನಿರ್ಧಾರವಾಗಲಿದೆ.