Tag: JJP chief

  • ಪಕ್ಷೇತರರ ಜತೆ ಸೇರಿ ಸರ್ಕಾರ ರಚನೆಯ ಬಿಜೆಪಿ ಪ್ಲಾನ್‍ಗೆ ಎಚ್ಚೆತ್ತ ದುಶ್ಯಂತ್

    ಪಕ್ಷೇತರರ ಜತೆ ಸೇರಿ ಸರ್ಕಾರ ರಚನೆಯ ಬಿಜೆಪಿ ಪ್ಲಾನ್‍ಗೆ ಎಚ್ಚೆತ್ತ ದುಶ್ಯಂತ್

    – ಯಾವುದೇ ಪಕ್ಷವಾದರೂ ಸರಿ ಸರ್ಕಾರ ರಚನೆಗೆ ಸಿದ್ಧ
    – ಸ್ಥಿರ ಸರ್ಕಾರಕ್ಕೆ ‘ಕೀ’ ಚಿಹ್ನೆ ಬೇಕೆಬೇಕು: ಚೌಟಾಲಾ

    ಚಂಡೀಗಢ: ಪಕ್ಷೇತರರ ಜತೆ ಸೇರಿ ಬಿಜೆಪಿ ಸರ್ಕಾರ ರಚನೆಗೆ ಮುಂದಾಗುತ್ತಿದ್ದಂತೆ ಜನನಾಯಕ್ ಜನತಾ ಪಕ್ಷದ ಮುಖ್ಯಸ್ಥ ದುಶ್ಯಂತ್ ಚೌಟಾಲಾ ಎಚ್ಚೆತ್ತುಕೊಂಡಿದ್ದಾರೆ.

    ದುಶ್ಯಂತ್ ಚೌಟಾಲಾ ಇಂದು ಸುದ್ದಿಗೋಷ್ಠಿ ನಡೆಸಿ, ನಮ್ಮ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವ ಭರವಸೆ ನೀಡುತ್ತಾರೋ ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ. ಅದು ಯಾವುದೇ ಪಕ್ಷವಾದರೂ ಸರಿ ಎಂದು ಹೇಳಿದ್ದಾರೆ.

    ರಾಜ್ಯದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಹೀಗಾಗಿ ನಮ್ಮ ಪಕ್ಷದ ಕೆಲವರು ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ಕೆಲವರು ಬಿಜೆಪಿಗೆ ಬೆಂಬಲ ನೀಡಿ ಎಂದು ಹೇಳುತ್ತಿದ್ದಾರೆ. ಆದರೆ ಜೆಜೆಪಿಯು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಮುಕ್ತವಾಗಿದೆ. ಯಾರು ನಮ್ಮ ಪ್ರಣಾಳಿಕೆಯ ಬೇಡಿಕೆಗಳಿಗೆ ಒಪ್ಪಿಕೊಳ್ಳುತ್ತಾರೋ ಅವರಿಗೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದ್ದಾರೆ.

    ಹರ್ಯಾಣದ ಸ್ಥಳೀಯ ಯುವ ಸಮುದಾಯಕ್ಕೆ ಶೇ. 75ರಷ್ಟು ಉದ್ಯೋಗ ಒದಗಿಸಬೇಕು. ವಯಸ್ಕರ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಒಪ್ಪಿಗೆ ನೀಡಬೇಕು. ಇದಕ್ಕೆ ಒಪ್ಪಿಗೆ ಸೂಚಿಸುವ ಪಕ್ಷಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸ್ಥಿರ ಸರ್ಕಾರ ಭಯಸುವವರು ನಮ್ಮದೊಂದಿಗೆ ಜೆಜೆಪಿ ಚಿಹ್ನೆ ‘ಕೀ’ ಇಟ್ಟುಕೊಳ್ಳಬೇಕು ಎಂದು ತಿಳಿಸುವ ಮೂಲಕ ಸರ್ಕಾರ ರಚನೆಗೆ ಜೆಜೆಪಿ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

    ಗುರುವಾರ ಪ್ರಕಟವಾದ ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವು ಅಂತಂತ್ರ ಸ್ಥಿತಿಯನ್ನು ತಂದೊಡ್ಡಿದೆ. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿದೆ. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪೈಪೋಟಿ ಉಂಟಾಗಿತ್ತು.

    ಈ ನಡುವೆ ಬಿಜೆಪಿ ಪಕ್ಷೇತರರ ಬೆಂಬಲ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಇದರಿಂದಾಗಿ ದುಶ್ಯಂತ್ ಚೌಟಾಲಾ ಸುದ್ದಿಗೋಷ್ಠಿ ನಡೆಸಿ, ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರದ ವಿವರಿಸಿದ್ದಾರೆ.