Tag: Jio Cinema

  • ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಮುಂಬೈ: ಇನ್ನು ಮುಂದೆ ಐಪಿಎಲ್‌ (IPL) ಸೇರಿದಂತೆ ಜಿಯೋ ಸಿನಿಮಾದಲ್ಲಿ (Jio Cinema) ಪ್ರಸಾರವಾಗುತ್ತಿದ್ದ ಎಲ್ಲಾ ಕ್ರೀಡೆಗಳ ನೇರ ಪ್ರಸಾರ ಹಾಟ್‌ಸ್ಟಾರ್‌ನಲ್ಲಿ (Disney+ Hotstar) ಮಾತ್ರ ಪ್ರಸಾರವಾಗಲಿದೆ.

    ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲಾ ಲೈವ್‌ಸ್ಟ್ರೀಮ್‌ಗಳು (Stream Live Sports) ಹಾಟ್‌ಸ್ಟಾರ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ ಎಂದು ಮೂಲಗಳನ್ನುಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರದ ಬಗ್ಗೆ ಎರಡೂ ಕಂಪನಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

    ಮುಂದಿನ ಜನವರಿಯಲ್ಲಿ ವಿಲೀನ ಪ್ರಕ್ರಿಯೆ ಪೂರ್ಣವಾಗಲಿದೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಿಯೋ ಸಿನಿಮಾದಲ್ಲಿರುವ ಕ್ರೀಡೆಗಳ ವಿಡಿಯೋಗಳು ಹಾಟ್‌ಸ್ಟಾರ್‌ನಲ್ಲಿ ಇರುತ್ತಾ ಅಥವಾ ಜಿಯೋ ಸಿನಿಮಾದಲ್ಲೇ ಇರುತ್ತಾ ಎನ್ನುವುದು ದೃಢಪಟ್ಟಿಲ್ಲ.

    ಕಳೆದ ಫೆಬ್ರವರಿಯಲ್ಲಿ ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ 70 ಸಾವಿರ ಕೋಟಿ ರೂ. ಮೊತ್ತದ ಜಂಟಿ ಉದ್ಯಮಕ್ಕೆ ಸಹಿ ಹಾಕಿದ್ದವು. ಈ ವಹಿವಾಟಿನ ಭಾಗವಾಗಿ ವಯಾಕಾಮ್ 18ಕ್ಕೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆ ಮೂಲಕ ಸ್ಟಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಅನುಮತಿ ಸಿಕ್ಕಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್‌, ವಯಾಕಾಮ್ 18 ಮೀಡಿಯಾ ಪ್ರೈವೆಟ್‌ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ವಿಲೀನದ ಭಾಗವಾಗಿ ಪರವಾನಗಿಯನ್ನು ಸ್ಟಾರ್ ಇಂಡಿಯಾಗೆ ವರ್ಗಾಯಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್‌ 27 ರಂದು ಅನುಮೋದನೆ ನೀಡಿತ್ತು. ಪರವಾನಗಿ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದು ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ವಿಧಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿತ್ತು. ಇದನ್ನೂ ಓದಿ: ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ – ನೂತನ ಮುಖ್ಯಕೋಚ್‌ ಆಗಿ ಹೇಮಂಗ್‌ ಬದಾನಿ ನೇಮಕ

    ಡಿಸ್ನಿ ಮತ್ತು ರಿಲಯನ್ಸ್ ನಡುವಿನ ವಿಲೀನ ಒಪ್ಪಂದದಿಂದಾಗಿ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ.

    ರಿಲಯನ್ಸ್‌ ಜಿಯೋ ಸಿನಿಮಾ ಐಪಿಎಲ್‌ ಕ್ರಿಕೆಟ್‌, ಚಳಿಗಾಲದ ಒಲಿಂಪಿಕ್ಸ್‌, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಹಕ್ಕು ಹೊಂದಿದೆ. ಡಿಸ್ನಿ ಹಾಟ್‌ಸ್ಟಾರ್‌ ಐಸಿಸಿ ಆಯೋಜಿಸುವ ಕ್ರಿಕೆಟ್‌ ಪಂದ್ಯಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್, ದೇಶೀಯ ಪ್ರೊ ಕಬಡ್ಡಿ ಲೀಗ್‌ನ ಹಕ್ಕುಗಳನ್ನು ಹೊಂದಿದೆ.

    2017-22ರ ಅವಧಿಯ ಐಪಿಎಲ್‌ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ಅನ್ನು ಡಿಸ್ನಿ ಹಾಟ್‌ಸ್ಟಾರ್‌ 16,347 ಕೋಟಿ ರೂ. ನೀಡಿ ಪಡೆದುಕೊಂಡಿತ್ತು. 2023ರಲ್ಲಿ ಟಿವಿ ಮತ್ತು ಡಿಜಿಟಲ್‌ ರೈಟ್ಸ್‌ ವಿಂಗಡನೆ ಮಾಡಲಾಗಿತ್ತು. 2023-27ರ 410 ಪಂದ್ಯಗಳಿಗೆ ಡಿಜಿಟಲ್‌ ಹಕ್ಕುಗಳನ್ನು ವಯಾಕಾಮ್ 18 23,758 ಕೋಟಿ ರೂ.ಗೆ ಪಡೆದುಕೊಂಡಿದ್ದರೆ, ಟಿವಿ ಹಕ್ಕುಗಳನ್ನು ವಾಲ್ಟ್ ಡಿಸ್ನಿ ಕಂಪನಿ 23,575 ಕೋಟಿ ರೂ. ನೀಡಿ ಖರೀದಿಸಿತ್ತು.

    ಹಾಟ್‌ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಸಬೇಕಾದರೆ ಸಬ್‌ಸ್ಕ್ರೈಬ್‌ ಆಗಬೇಕಿತ್ತು. ಆದರೆ 2023 ರಲ್ಲಿ ಜಿಯೋ ರೈಟ್ಸ್‌ ಪಡೆದ ನಂತರ ಐಪಿಎಲ್‌ ಲೈವ್‌ ಸ್ಟ್ರೀಮಿಂಗ್‌ ಉಚಿತವಾಗಿ ನೀಡಿತ್ತು. ಇದರಿಂದಾಗಿ ಐಪಿಎಲ್‌ ವೀಕ್ಷಕರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು.

     

  • Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

    Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

    ಮುಂಬೈ: ಫ್ರಾನ್ಸಿನ (France) ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ (Paris Olympics) ನೇರ ಪ್ರಸಾರವನ್ನು ಭಾರತದ ವೀಕ್ಷಕರು ಜಿಯೋ ಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಿಸಬಹುದು.

    ಭಾರತದಲ್ಲಿ ಮೊದಲ ಬಾರಿಗೆ ಜಿಯೋ ಸಿನಿಮಾ ಒಲಿಂಪಿಕ್ಸ್‌ಗಾಗಿ 20 ಏಕಕಾಲಿಕ ಫೀಡ್‌ಗಳನ್ನು ಉಚಿತವಾಗಿ ನೀಡಲಿದೆ. ಎಲ್ಲವೂ 4K ವಿಡಿಯೋ ಆಗಿದ್ದು, ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಪ್ರಸಾರವಾಗಲಿದೆ. Sports18 ಸ್ಯಾಟಲೈಟ್‌ ವಾಹಿನಿಯ ಮೂಲಕ ಟಿವಿಯಲ್ಲೂ ಒಲಿಂಪಿಕ್ಸ್‌ ವೀಕ್ಷಣೆ ಮಾಡಬಹುದು. ಇದನ್ನೂ ಓದಿ: ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    ಒಲಿಂಪಿಕ್ಸ್‌ ಕುಸ್ತಿಯಲ್ಲಿ ಚಿನ್ನದ ಪದಕ ಗೆದ ಸಾಕ್ಷಿ ಮಲಿಕ್, ಬಾಕ್ಸರ್ ವಿಜೇಂದರ್ ಸಿಂಗ್, ಖ್ಯಾತ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾಪಟುಗಳು ತಜ್ಞರ ಕ್ರೀಡಾ ಪ್ಯಾನಲ್‌ನಲ್ಲಿದ್ದಾರೆ.

    ಜುಲೈ 26 ರಿಂದ ಪ್ಯಾರಿಸ್‌ ಒಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆಗಸ್ಟ್‌ 11 ರಂದು ಮುಕ್ತಾಯವಾಗಲಿದೆ.

  • IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    IPL 2024 Retention: ಭಾರೀ ಹೈಡ್ರಾಮಾ ಬಳಿಕ ಪಾಂಡ್ಯ ಮುಂಬೈಗೆ

    ಮುಂಬೈ: ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅಧಿಕೃತವಾಗಿ ಮುಂಬೈ ಇಂಡಿಯನ್ಸ್‌ (Mumbai Indians) ಬಳಗ ಸೇರಿದ್ದಾರೆ. ನಾಯಕನಾಗಿ 2 ವರ್ಷಗಳ ಕಾಲ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ತಂಡ ಪ್ರವೇಶಿಸಿದ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಸ್ಥಾನ ತಂದುಕೊಟ್ಟಿದ್ದರು.

    ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ (GujaratTaitans) ತಂಡ ಐಪಿಎಲ್ 2024 ಟೂರ್ನಿಗೆ ಪ್ರಕಟ ಮಾಡಿದ ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಸೇರಿಸಿತ್ತು. ಆದ್ರೆ, ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ಟ್ರೇಡಿಂಗ್ ವಿಂಡೋ ಮೂಲಕ ಮುಂಬೈ ಇಂಡಿಯನ್ಸ್‌ ಸೇರಿದ್ದಾರೆ. ಹಾರ್ದಿಕ್ ಸಲುವಾಗಿ ಟೈಟಾನ್ಸ್‌ ತಂಡಕ್ಕೆ ಮುಂಬೈ ಇಂಡಿಯನ್ಸ್‌ 15 ಕೋಟಿ ರೂ. ನೀಡಲಿದೆ ಎಂದು ವರದಿಯಾಗಿದೆ.

    ಗುಜರಾತ್‌ ಟೈಟಾನ್ಸ್‌ ತಂಡದಿಂದ ಹಾರ್ದಿಕ್ ಪಾಂಡ್ಯ ಹೊರಬಂದಿರುವ ಕಾರಣ ಯುವ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್‌ (Shubhman Gill) ತಂಡದ ಕ್ಯಾಪ್ಟನ್‌ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ ತಾನು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಿದ ಬಳಿಕ ತನ್ನ ಖಾತೆಯಲ್ಲಿ 15.25 ಕೋಟಿ ರೂ. ಮಾತ್ರವೇ ಹೊಂದಿತ್ತು. ಈಗ ಹಾರ್ದಿಕ್‌ ಪಾಂಡ್ಯ ಖರೀದಿ ಸಲುವಾಗಿ ತನ್ನ ಸ್ಟಾರ್‌ ಆಲ್‌ರೌಂಡರ್‌ ಕ್ಯಾಮರೂನ್‌ ಅವರನ್ನು ಆರ್‌ಸಿಬಿಗೆ (RCB) ಬಿಟ್ಟುಕೊಡುವ ಮೂಲಕ ಪರ್ಸ್‌ ಮೊತ್ತ ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿದೆ. ಈ ಸಲುವಾಗಿ ಉಳಸಿಕೊಂಡ ಆಟಗಾರರ ಪಟ್ಟಿ ಪ್ರಕಟ ಮಾಡಲು ನವೆಂಬರ್‌ 26 ಅಂತಿಮ ದಿನವಾಗಿತ್ತು. ಆದರೂ, ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಇರುವ ಟ್ರೇಡಿಂಗ್‌ ವಿಂಡೋ ಡಿಸೆಂಬರ್‌ 12ರ ವರೆಗೆ ತೆರೆದಿರಲಿದೆ. ಹೀಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸುವ ಡೀಲ್‌ ಮುಗಿಸಲಾಗಿದೆ.

    ಐಪಿಎಲ್‌ 2014 ಟೂರ್ನಿಯಿಂದ 2021ರ ಆವೃತ್ತಿವರಗೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿ 5 ಬಾರಿ ಟ್ರೋಫಿ ಗೆದ್ದಿದ್ದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಬಳಿಕ ಹೊಸ ಫ್ರಾಂಚೈಸಿ ಗುಜರಾತ್‌ ಟೈಟಾನ್ಸ್‌ ಸೇರಿದ್ದರು. ಐಪಿಎಲ್ 2022 ಟೂರ್ನಿಯಲ್ಲಿ ಮೊದಲ ಪ್ರಯತ್ನದಲ್ಲೇ ಟೈಟಾನ್ಸ್‌ಗೆ ಟ್ರೋಫಿ ಗೆದ್ದುಕೊಟ್ಟರು. ಐಪಿಎಲ್ 2023 ಟೂರ್ನಿಯಲ್ಲೂ ಫೈನಲ್‌ಗೆ ಮುನ್ನಡೆಸಿದರಾದರೂ, ಸಿಎಸ್‌ಕೆ ಎದುರು ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು.

    ಹಾರ್ದಿಕ್ ಪಾಂಡ್ಯ ಈ ಮೂಲಕ ಐಪಿಎಲ್‌ ಟ್ರೇಡಿಂಗ್ ವಿಂಡೋ ಮೂಲಕ ಬೇರೆ ತಂಡ ಸೇರಿದ 3ನೇ ಕ್ಯಾಪ್ಟನ್‌ ಆಗಿದ್ದಾರೆ. ಐಪಿಎಲ್ 2020 ಟೂರ್ನಿ ವೇಳೆ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಬೇರೆ ತಂಡಗಳನ್ನು ಸೇರಿದ ಕ್ಯಾಪ್ಟನ್‌ಗಳಾಗಿದ್ದರು.

    ಏನಿದು ಟ್ರೇಡ್‌ ವಿಂಡೋ ನಿಯಮ?
    ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳಬಹುದು ಅಥವಾ ನಗದು ವ್ಯವಹಾರಗಳಲ್ಲಿ ಆಟಗಾರರನ್ನು ಖರೀದಿಸಬಹುದು. ಈ ಸಂಪೂರ್ಣ ವಿಷಯದಲ್ಲಿ ಐಪಿಎಲ್ ಆಡಳಿತ ಮಂಡಳಿಯು ಅಂತಿಮ ಅಧಿಕಾರ ನೀಡಿದೆ. ಹೆಚ್ಚಿನ ಫ್ರಾಂಚೈಸಿಗಳು ಒಂದೇ ಆಟಗಾರನನ್ನು ಖರೀದಿಸಲು ಬಯಸಿದರೆ. ಈ ಸಂದರ್ಭದಲ್ಲಿ ಫ್ರಾಂಚೈಸಿ ತನ್ನ ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಆಟಗಾರನ ವ್ಯಾಪಾರ ಅಥವಾ ವರ್ಗಾವಣೆಯ ಮೊದಲು ಆಟಗಾರನ ಒಪ್ಪಿಗೆ ಕೂಡ ಅಗತ್ಯ. ಆಟಗಾರನು ನಿರಾಕರಿಸಿದರೆ, ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.

  • IPL 2024 Retention: ರೋಹಿತ್‌ ಕ್ಯಾಪ್ಟನ್‌ – ಮುಂಬೈನಲ್ಲಿ ಯಾರಿಗೆ ಲಕ್‌, ಯಾರಿಗೆ ಕೊಕ್‌?

    IPL 2024 Retention: ರೋಹಿತ್‌ ಕ್ಯಾಪ್ಟನ್‌ – ಮುಂಬೈನಲ್ಲಿ ಯಾರಿಗೆ ಲಕ್‌, ಯಾರಿಗೆ ಕೊಕ್‌?

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜಿಗೆ ಕೆಲವೇ ದಿನಗಳು ಬಾಕಿಯಿದ್ದು, ನವೆಂಬರ್‌ 26ರಂದು 10 ಫ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಭಾನುವಾರ ಅಧಿಕೃತಗೊಳಿಸಿವೆ. ಈ ನಡುವೆ ಮುಂಬೈ ಇಂಡಿಯನ್ಸ್‌ ಕೂಡ ತನ್ನ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    11 ಆಟಗಾರರಿಗೆ ಗೇಟ್‌ ಪಾಸ್‌ ಕೊಟ್ಟಿರುವ ಮುಂಬೈ ಇಂಡಿಯನ್ಸ್‌, 17 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ. ರೋಹಿತ್‌ ಶರ್ಮಾ ನಾಯಕನಾಗಿ ಮುಂದುವರಿದಿದ್ದಾರೆ. ಇದನ್ನೂ ಓದಿ: IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    ಮುಂಬೈ ಇಂಡಿಯನ್ಸ್‌ 2013, 2015, 2017, 2019 ಹಾಗೂ 2020ರ ಆವೃತ್ತಿಯಲ್ಲಿ 5 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2022ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದ್ದ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವನ್ನೇ ಕಳೆದುಕೊಂಡಿತ್ತು. 2023ರ ಐಪಿಎಲ್‌ನಲ್ಲಿ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಪ್ಲೇ ಆಫ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೋತು ಫೈನಲ್‌ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು.

    ಮುಂಬೈ ತಂಡದ ರಿಟೇನ್‌ ಪ್ಲೇಯರ್ಸ್‌: ರೋಹಿತ್‌ ಶರ್ಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌, ತಿಲಕ್‌ ವರ್ಮಾ, ಟಿಮ್‌ ಡೇವಿಡ್‌, ವಿಷ್ಣು ವಿನೋದ್‌, ಅರ್ಜುನ್‌ ತೆಂಡೂಲ್ಕರ್‌, ಕ್ಯಾಮರೂನ್‌ ಗ್ರೀನ್‌, ಶಾಮ್ಸ್‌ ಮಲಾನಿ, ನೆಹಾಲ್‌ ವಧೇರಾ, ಜಸ್ಪ್ರೀತ್‌ ಬುಮ್ರಾ, ಕುಮಾರ್‌ ಕಾರ್ತಿಕೇಯ, ಪಿಯೂಷ್‌ ಚಾವ್ಲಾ, ಆಕಾಶ್‌ ಮಧ್ವಾಲ್‌, ಜೇಸನ್ ಬೆಹ್ರೆನ್ಡಾರ್ಫ್, ರೊಮಾರಿಯೋ ಶೆಫರ್ಡ್ (ಲಕ್ನೋ ತಂಡದಿಂದ).

    ಬಿಡುಗಡೆ ಮಾಡಿದ ಆಟಗಾರರು: ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್, ಝೈ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್, ಸಂದೀಪ್ ವಾರಿಯರ್. ಇದನ್ನೂ ಓದಿ: IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

  • IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    IPL 2024 Retention: ‌ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್‌ ಮಾರ್ಷ್‌ ಉಳಿಸಿಕೊಂಡ ಕ್ಯಾಪಿಟಲ್ಸ್‌

    ಮುಂಬೈ: ಡಿಸೆಂಬರ್‌ನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 11 ಆಟಗಾರರನ್ನ ಬಿಡುಗಡೆ ಮಾಡಿದ್ದು, 16 ಆಟಗಾರರನ್ನ ಉಳಿಸಿಕೊಂಡಿದೆ.

    ವಿಶೇಷವೆಂದರೆ ಕಳೆದ ಡಿಸೆಂಬರ್‌ 30 ರಂದು ಕಾರು ಅಪಘಾತದಲ್ಲಿ ಗಾಯಗೊಂಡು 2022ರ ಐಪಿಎಲ್‌ನಿಂದ (IPL 2022) ಹೊರಗುಳಿದಿದ್ದ ರಿಷಬ್‌ ಪಂತ್‌ 2024ರ ಐಪಿಎಲ್‌ನಲ್ಲಿ (IPL 2024) ಮತ್ತೆ ಪ್ಯಾಡ್‌ ಕಟ್ಟಲಿದ್ದಾರೆ. ರಿಷಬ್‌ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಕ್ಯಾಂಪನ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, 17ನೇ ಆವೃತ್ತಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

    ಇನ್ನೂ ಕನ್ನಡಿಗ ಮನಿಷ್‌ ಪಾಂಡೆ ಅವರನ್ನು ತಂಡದಿಂದ ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ವಿವಾದಕ್ಕೆ ಗುರಿಯಾಗಿದ್ದ ಮಿಚೆಲ್‌ ಮಾರ್ಷ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದನ್ನೂ ಓದಿ: IPL 2024 Retention: ಮುಂಬೈ ಫ್ಯಾನ್ಸ್‌ಗೆ ಬಿಗ್ ಶಾಕ್ – ಟೈಟಾನ್ಸ್‌ನಲ್ಲೇ ಉಳಿದ ಪಾಂಡ್ಯ

    2023ರ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 14ರಲ್ಲಿ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿತ್ತು. -0.808 ರನ್‌ರೇಟ್‌ ಹಾಗೂ 10 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಉಳಿದುಕೊಂಡಿತ್ತು.

    ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ ಆಟಗಾರರು:
    ರಿಷಬ್ ಪಂತ್, ಡೇವಿಡ್ ವಾರ್ನರ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್‌ ಪೊರೆಲ್‌, ಅಕ್ಷರ್‌ ಪಟೇಲ್‌, ಲಲಿತ್‌ ಯಾದವ್‌, ಯಶ್‌ ಧುಲ್‌, ಪ್ರವೀಣ್ ದುಬೆ, ವಿಕ್ಕಿ, ಅನ್ರಿಚ್ ನಾರ್ಟ್ಜೆ, ಕುಲ್ದೀಪ್‌ ಯಾದವ್‌, ಲುಂಗಿ ಎನ್‌ಗಿಡಿ, ಖಲೀಲ್ ಅಹಮದ್, ಇಶಾತ್‌ ಶರ್ಮಾ, ಮುಕೇಶ್‌ ಕುಮಾರ್‌. ಇದನ್ನೂ ಓದಿ: IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

    ಡೆಲ್ಲಿ ಕ್ಯಾಪಿಟಲ್ಸ್‌ ಬಿಡುಗಡೆ ಮಾಡಿದ ಆಟಗಾರರು:
    ರಿಲೀ ರೊಸ್ಸೌ, ಚೇತನ್ ಸಕರಿಯಾ, ರೋವ್ಮನ್ ಪೊವೆಲ್, ಮನೀಷ್ ಪಾಂಡೆ, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಸರ್ಫರಾಜ್ ಖಾನ್, ಅಮನ್ ಖಾನ್, ಪ್ರಿಯಮ್ ಗಾರ್ಗ್.

    ಪಂತ್‌ಗೆ ಏನಾಗಿತ್ತು?
    2022ರ ಡಿಸೆಂಬರ್ 30ರಂದು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಉತ್ತರಾಖಂಡದಲ್ಲಿರುವ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಹೊಸ ವರ್ಷಕ್ಕೆ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್‌ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಇದರಿಂದ ಪಂತ್ ಅವರ ತಲೆ (ಹಣೆಯ ಭಾಗ), ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

  • IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್‌ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ

    IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್‌ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ

    ಮುಂಬೈ: ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯು 8 ಆಟಗಾರರಿಗೆ ಗೇಟ್‌ಪಾಸ್‌ ಕೊಟ್ಟಿದೆ. ಅಲ್ಲದೇ ಈ ಬಾರಿಯೂ ಎಂ.ಎಸ್‌ ಧೋನಿ (MS Dhoni) ಅವರ ನಾಯಕತ್ವದಲ್ಲೇ ಸಿಎಸ್‌ಕೆ ತಂಡ ಮುನ್ನಡೆಯಲಿದೆ. ವಿಶೇಷವೆಂದರೆ ಹೊಸ ಮುಖಗಳಿಗೆ ಅದರಲ್ಲೂ ಯುವಕರಿಗೆ ಹೆಚ್ಚಾಗಿ ಮಣೆಹಾಕಿದೆ.

    ಇನ್ನೂ ಕಳೆದಬಾರಿಯಂತೆ ಬಲಿಷ್ಠ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿರುವ ರಾಜಸ್ತಾನ ರಾಯಲ್ಸ್‌ 9 ಆಟಗಾರರನ್ನು ಬಿಡುಗಡೆ ಮಾಡಿದೆ. ಸಂಜು ಸ್ಯಾಮ್ಸನ್‌ (Sanju Samson) ನಾಯಕನ ಹೊಣೆ ಹೊತ್ತಿದ್ದಾರೆ. ಕಳೆಪೆ ಫಾರ್ಮ್‌ನಲ್ಲಿ ಗುರುತಿಸಿಕೊಂಡ ಆಟಗಾರರನ್ನ ಹೊರದಬ್ಬಿದೆ. ಇನ್ನೂ ಈ ಬಾರಿ ದೇವದತ್‌ ಪಡಿಕಲ್‌ ಅವರನ್ನು ಲಕ್ನೋ ತಂಡಕ್ಕೆ ಕಳುಹಿಸಿಕೊಟ್ಟಿದ್ದು, ಲಕ್ನೋ ಸೂಪರ್‌ ಜೈಂಟ್ಸ್‌ನಲ್ಲಿದ್ದ ವೇಗಿ ಅವೇಶ್‌ ಖಾನ್‌ ಅವರನ್ನು ರಾಜಸ್ಥಾನ್‌ ತಂಡಕ್ಕೆ ಕರೆಸಿಕೊಂಡಿದೆ.

    ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ರಾಜಸ್ತಾನ್‌ ರಾಯಲ್ಸ್‌ ಆ ನಂತರ ಫೈನಲ್‌ ಪ್ರವೇಶಿಸಿದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. 2022ರ ಆವೃತ್ತಿಯಲ್ಲೂ ಪ್ಲೇ ಆಫ್‌ನಿಂದ ಹೊರಗುಳಿದಿತ್ತು. ಆದ್ದರಿಂದ ಈ ಬಾರಿ ಟ್ರೋಫಿ ಗೆಲ್ಲುವತ್ತ ಕಣ್ಣು ಹಾಯಿಸಿದೆ. ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಇನ್ನಷ್ಟು ಆಟಗಾರರನ್ನು ಖರೀದಿಸುವ ಉತ್ಸಾಹ ಹೊಂದಿದೆ.

    ಚೆನ್ನೈನಲ್ಲಿ ರಿಟೇನ್‌ ಪ್ಲೇಯರ್ಸ್‌: ಎಂ.ಎಸ್‌ ಧೋನಿ (ನಾಯಕ), ಡಿವೋನ್‌ ಕಾನ್ವೆ, ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಶಿವಂ ದುಬೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ಮೊಯಿನ್‌ ಅಲಿ, ನಿಶಾಂತ್‌ ಸಿಂಧು, ಅಜಯ್‌ ಮಂಡಲ್‌, ರಾಜವರ್ಧನ್ ಹಂಗರಗೇಕರ್, ದೀಪ್‌ ಚಹಾರ್‌, ಮಹೀಶ್‌ ತೀಕ್ಷಣ, ಮುಕೇಶ್‌ ಚೌಧರಿ, ಪ್ರಶಾಂತ್‌ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್‌ ದೇಶ್‌ಪಾಂಡೆ, ಮತೀಶ ಪಥಿರಣ.

    ಬಿಡುಗಡೆಗೊಳಿಸಿದ ಪ್ಲೇಯರ್ಸ್‌: ಬೆನ್‌ ಸ್ಟೋಕ್ಸ್, ಅಂಬಟಿ ರಾಯುಡು (ನಿವೃತ್ತಿ), ಡ್ವೈನ್‌ ಪ್ರಿಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಕೈಲ್‌ ಜೇಮಿಸನ್, ಆಕಾಶ್ ಸಿಂಗ್, ಸಿಸಂದಾ ಮಗಲಾ.

    ರಾಜಸ್ಥಾನ್‌ ರಾಯಲ್ಸ್‌ ರಿಟೇನ್‌ ಪ್ಲೇಯರ್ಸ್‌: ಸಂಜು ಸ್ಯಾಮ್ಸನ್‌ (ನಾಯಕ), ಜೋಸ್‌ ಬಟ್ಲರ್‌, ಶಿಮ್ರನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ಧ್ರುವ್‌ ಜುರೆಲ್‌, ರಿಯಾನ್‌ ಪರಾಗ್‌, ಡೊನೊವನ್ ಫೆರೆರಾ, ಕುನಾಲ್ ಸಿಂಗ್ ರಾಥೋಡ್, ರವಿಚಂದ್ರನ್‌ ಅಶ್ವಿನ್‌, ಕುಲ್ದೀಪ್‌ ದೇನ್‌, ನವದೀಪ್‌ ಸೈನಿ, ಪ್ರಸಿದ್ಧ್‌ ಕೃಷ್ಣ, ಸಂದೀಪ್‌ ಶರ್ಮಾ, ಟ್ರೆಂಟ್‌ ಬೌಲ್ಟ್‌, ಯಜುವೇಂದ್ರ ಚಾಹಲ್‌, ಆಡಂ ಝಂಪಾ, ಅವೇಶ್‌ ಖಾನ್‌.

    ಬಿಡುಗಡೆಗೊಳಿಸಿದ ಪ್ಲೇಯರ್ಸ್‌: ಜೋ ರೂಟ್‌, ಅಬ್ದುಲ್ ಬಸಿತ್, ಜೇಸನ್‌ ಹೋಲ್ಡರ್‌, ಆಕಾಶ್ ವಸಿಷ್ಠ, ಕುಲ್ದೀಪ್‌ ಯಾದವ್‌, ಒಬೆಡ್ ಮೆಕಾಯ್, ಮುರುಗನ್‌ ಅಶ್ವಿನ್‌, ಕೆ.ಸಿ ಕಾರಿಯಪ್ಪ, ಕೆಂ.ಎಂ ಆಸಿಫ್‌.

  • IPL 2024 Auction: ಮಹಿ ಮತ್ತೆ ಕಣಕ್ಕಿಳಿಯೋದು ಫಿಕ್ಸ್‌ – ಅಧಿಕೃತ ಪಟ್ಟಿ ರಿಲೀಸ್‌

    IPL 2024 Auction: ಮಹಿ ಮತ್ತೆ ಕಣಕ್ಕಿಳಿಯೋದು ಫಿಕ್ಸ್‌ – ಅಧಿಕೃತ ಪಟ್ಟಿ ರಿಲೀಸ್‌

    ಚೆನ್ನೈ: 2024ರ ಐಪಿಎಲ್‌ ಟೂರ್ನಿಯಲ್ಲೂ ಲೆಜೆಂಡ್‌ ಖ್ಯಾತಿಯ ಎಂ.ಎಸ್‌ ಧೋನಿ (MS Dhoni) ಕಣಕ್ಕಿಳಿಯೋದು ಫಿಕ್ಸ್‌ ಆಗಿದೆ. ಮಹಿ ಮುಂದಿನ ಐಪಿಎಲ್‌ನಲ್ಲಿ (IPL 2024) ಪಾಲ್ಗೊಳ್ಳುವುದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಅಧಿಕೃತಗೊಳಿಸಿದೆ.

    ಭಾನುವಾರ ಜಿಯೋಸಿನಿಮಾದಲ್ಲಿ (Jio Cinema) ನಡೆದ ಕಾರ್ಯಕ್ರಮದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರಿಟೇನ್‌, ರಿಲೀಸ್‌ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪೈಕಿ ಅಗ್ರ ಕ್ರಮಾಂಕದಲ್ಲಿ ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಶಿವಂ ದುಬೆ, ಮಧ್ಯಮ ಕ್ರಮಾಂಕದಲ್ಲಿ ಮೊಯಿನ್‌ ಅಲಿ, ರವೀಂದ್ರ ಜಡೇಜ, ಎಂ.ಎಸ್‌ ಧೋನಿ, ದೀಪಕ್‌ ಚಹಾರ್‌, ಕೆಳ ಕ್ರಮಾಂಕದಲ್ಲಿ ಮಹೀಶ್‌ ತೀಕ್ಷಣ, ಮತೀಶ ಪಥಿರಣ, ಮುಕೇಶ್‌ ವರುಣ್‌ ತಂಡಕ್ಕೆ ರಿಟೇನ್‌ ಆಗಿದ್ದಾರೆ.

    ಸಿಎಸ್‌ಕೆ ಬಳಿ ಇನ್ನೆಷ್ಟು ದುಡ್ಡಿದೆ: ಒಟ್ಟು 8 ಆಟಗಾರರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಗೇಟ್‌ಪಾಸ್‌ ಕೊಟ್ಟಿದೆ. ಇದರಿಂದ ಫ್ರಾಂಚೈಸಿ ಪರ್ಸ್‌ನಲ್ಲಿ (ಉಳಿತಾಯ ಖಾತೆ) 32.2 ಕೋಟಿ ಉಳಿದಿದೆ. ಡಿಸೆಂಬರ್‌ 19ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಇನ್ನಷ್ಟು ಆಟಗಾರರನ್ನು ಬಿಕರಿ ಮಾಡುವ ಉತ್ಸಾಹ ಹೊಂದಿದೆ. ಇದನ್ನೂ ಓದಿ: IPL 2024 Auction: ಮತ್ತೆ ಮುಂಬೈ ಸೇರಲಿದ್ದಾರೆ ಪಾಂಡ್ಯ?

    16ನೇ ಆವೃತ್ತಿಯ ಐಪಿಎಲ್‌ (IPL 2023) ಫೈನಲ್‌ ಪಂದ್ಯದಲ್ಲಿ ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 5ನೇ ಬಾರಿಗೆ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿತು. ಆರಂಭದಿಂದಲೂ ಸಹ ಸಿಎಸ್​ಕೆ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ 2023ರ ಐಪಿಎಲ್‌ ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಗ್ಗೆ ಧೋನಿ ಬಳಿ ಕೇಳಿದಾಗ ಸ್ಪಷ್ಟ ಉತ್ತರ ಬಂದಿರಲಿಲ್ಲ. ಫೈನಲ್ ಪಂದ್ಯ ಮುಗಿದ ಬಳಿಕ ಎಲ್ಲ ಗೊಂದಲಗಳಿಗೆ ಧೋನಿ ತೆರೆ ಎಳೆದು, ಮುಂದಿನ ಐಪಿಎಲ್‌ನಲ್ಲೂ ಆಡುವ ಸುಳಿವು ಕೊಟ್ಟಿದ್ದರು.

    ಅಂದು ಮಹಿ ಹೇಳಿದ್ದೇನು?
    ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ್ದ ಮಹಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯವಾಗಿದೆ. ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ. ಆದ್ರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೈಹಿಕ ಸಾಮರ್ಥ್ಯಕ್ಕೆ ಸುಲಭವಲ್ಲ. ಆದ್ರೆ ಅಭಿಮಾನಿಗಳಿಗೆ ಉಡುಗೊರೆಯಾಗಲಿದೆ. ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕರಾಗಿದ್ದರು.

    2023ರ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 215 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 3 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಬಳಿಕ ತಡರಾತ್ರಿ 12:10ಕ್ಕೆ ಆರಂಭಗೊಂಡಿತು. ಮಳೆ ಅಡ್ಡಿಯಾಗಿದ್ದರಿಂದ ಡಕ್ವರ್ತ್‌ ಲೂಯಿಸ್‌ (DSL) ನಿಯಮ ಅನ್ವಯಿಸಲಾಯಿತು. ಈ ನಿಯಮದ ಪ್ರಕಾರ ಸಿಎಸ್‌ಕೆ 15 ಓವರ್‌ಗಳಲ್ಲಿ 171 ರನ್‌ ಗಳ ಬೃಹತ್‌ ಮೊತ್ತದ ಟಾರ್ಗೆಟ್‌ ಪಡೆಯಿತು. ಆದರೆ ಸಂಘಟಿತ ಬ್ಯಾಟಿಂಗ್‌ ಪ್ರದರ್ಶನದಿಂದ ನಿಗದಿತ ಓವರ್‌ಗಳಲ್ಲಿ ರನ್‌ ಪೂರೈಸುವಲ್ಲಿ ಯಶಸ್ವಿಯಾಯಿತು. ಮಧ್ಯ ರಾತ್ರಿಯಲ್ಲಿ ಆರಂಭಗೊಂಡ ಪಂದ್ಯ ಕೊನೇ ಕ್ಷಣದ ವರೆಗೂ ರೋಚಕತೆಯಿಂದ ಕೂಡಿತ್ತು. ಇದನ್ನೂ ಓದಿ: IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್‌ ಪಾಸ್‌ – ರಿಲೀಸ್‌ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ

  • T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

    ವಿಶಾಖಪಟ್ಟಣಂ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಬಳಿಕ‌ ಭಾರತದಲ್ಲಿ ಕ್ರಿಕೆಟ್‌ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದೆ. ಜಿಯೋಸಿನಿಮಾದಲ್ಲಿ (Jiocinema) ಅತ್ಯಧಿಕ ವೀಕ್ಷಕರ (Viewership) ಸಂಖ್ಯೆ ತಲುಪಿ ದಾಖಲೆ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ಗುರುವಾರ ನಡೆದ ಭಾರತ-ಆಸ್ಟ್ರೇಲಿಯಾ (Ind vs Aus) ನಡುವಿನ ಮೊದಲ ಟಿ20 ಪಂದ್ಯವನ್ನು ಏಕಕಾಲಕ್ಕೆ 8.6 ಕೋಟಿಗಿಂತಲೂ ಅಧಿಕ ಕ್ರಿಕೆಟ್‌ ಅಭಿಮಾನಿಗಳು ವೀಕ್ಷಣೆ ಮಾಡಿದ್ದು, ಕ್ರಿಕೆಟ್‌ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಇತ್ತೀಚೆಗೆ ಭಾರತ ಮತ್ತು ಆಸೀಸ್‌ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು 5.9 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದ್ರೆ ಜಿಯೋಸಿನಿಮಾ ಏಕಕಾಲಕ್ಕೆ 8.6 ಕೋಟಿಗೂ ಅಧಿಕ ವೀಕ್ಷಕರನ್ನ ಕಂಡಿದ್ದು, ಹೊಸ ದಾಖಲೆ ನಿರ್ಮಿಸಿದೆ.

    ಭಾರತ ಮತ್ತು ಆಸೀಸ್‌ (Ind vs Aus) ಟಿ20 ಆರಂಭದಿಂದಲೇ ಪ್ರೇಕ್ಷಕರು ಓಟಿಟಿ ವೇದಿಕೆಗೆ ಲಗ್ಗೆಯಿಡಲು ಶುರು ಮಾಡಿದರು. ಆಸೀಸ್‌ ಬ್ಯಾಟಿಂಗ್‌ ಮುಗಿದು, ಟೀಂ ಇಂಡಿಯಾ ತನ್ನ ಇನ್ನಿಂಗ್ಸ್‌ ಆರಂಭಿಸುತ್ತಿದ್ದಂತೆ ವೀಕ್ಷಕರ ಸಂಖ್ಯೆ 8 ಕೋಟಿ ಮೀರಿತ್ತು. ಭಾರತ ತನ್ನ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ 1 ವಿಕೆಟ್‌ ಕಳೆದುಕೊಂಡು 11 ರನ್‌ ಗಳಿಸಿತ್ತು. ಇಶಾನ್‌ ಕಿಶನ್‌ ಕ್ರೀಸ್‌ನಲ್ಲಿದ್ದರು, ಈ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ 8.6 ಕೋಟಿ ತಲುಪಿತ್ತು, ಅಲ್ಲದೇ ಜಿಯೋಸಿನಿಮಾ ಆ್ಯಪ್‌ ಕೂಡ ಕ್ರ್ಯಾಶ್‌ ಆಗಿತ್ತು.

    ಈ ಹಿಂದೆ ವಿಶ್ವಕಪ್‌ನಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಕಿವೀಸ್‌ ಪಂದ್ಯವನ್ನು 4.3 ಕೋಟಿ ಮಂದಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆ ಮಾಡಿದ್ದರು. ಅದಕ್ಕೂ ಮುನ್ನ 2023ರ IPL ಆವೃತ್ತಿಯಲ್ಲಿ ಜಿಯೋಸಿನಿಮಾ 2.53 ಕೋಟಿ ವೀಕ್ಷಣೆ ಕಾಣುವ ಮೂಲಕ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಆದ್ರೆ ಇಂಡೋ-ಆಸೀಸ್‌ ಟಿ20 ಕದನ ಹಿಂದಿನ ಎಲ್ಲಾ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

    ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಟಿ20ರಲ್ಲಿ ಭಾರತ ಅಮೋಘ ಜಯ ಸಾಧಿಸಿದೆ. ಗುರುವಾರ ನಡೆದ ಪಂದ್ಯವು ಕೊನೇ ಕ್ಷಣದವರೆಗೂ ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 3 ವಿಕೆಟ್‌ಗೆ 208 ರನ್‌ ಗಳಿಸಿದ್ರೆ, ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ಗಳ ಜಯ ಸಾಧಿಸಿತು. ಕೊನೇ ಎಸೆತದಲ್ಲಿ ರಿಂಕು ಸಿಂಗ್‌ ಸಿಕ್ಸರ್‌ ಸಿಡಿಸಿದರೂ, ನೋಬಾಲ್‌ ಆದ ಕಾರಣ ಕೇವಲ 1 ರನ್‌ ಮಾತ್ರವೇ ಸೇರ್ಪಡೆಯಾಯಿತು.

  • ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಧೋನಿ ಸಿಕ್ಸ್‌ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್‌

    ಚೆನ್ನೈ: ರಾಜಸ್ಥಾನ ರಾಯಲ್ಸ್‌ (Rajasthan Royals) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಮಧ್ಯೆ ನಡೆದ ಐಪಿಎಲ್‌ (IPL) ಪಂದ್ಯ ಜಿಯೋ ಸಿನಿಮಾ (Jio Cinema) ಆಪ್‌ನಲ್ಲಿ ದಾಖಲೆ ಬರೆದಿದೆ.

    ನಾಯಕ ಧೋನಿ (MS Dhoni) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರು 20ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಜಿಯೋ ಸಿನಿಮಾದಲ್ಲಿ 2.2 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದರು. ಇದು ಈವರೆಗೆ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಐಪಿಎಲ್‌ ಪಂದ್ಯವಾಗಿದೆ.

    ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್‌ ಮಾಡುತ್ತಿದ್ದಾಗ 1.7 ಕೋಟಿ ಮಂದಿ ಜಿಯೋ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಇದು ಮೂರನೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವಾಗಿದೆ. ಈ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ಕ್ರೀಸ್‌ಗೆ ಆಗಮಿಸಿದ ಧೋನಿ 3 ಎಸೆತದಲ್ಲಿ 2 ಸಿಕ್ಸರ್‌ ಸಿಡಿಸಿ ಔಟಾಗಿದ್ದರು.

    ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳು
    1. ಚೆನ್ನೈ ಸೂಪರ್‌ ಕಿಂಗ್ಸ್‌ Vs ರಾಜಸ್ಥಾನ ರಾಯಲ್ಸ್‌ – 2.2 ಕೋಟಿ
    2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು Vs ಲಕ್ನೋ ಸೂಪರ್‌ ಜೈಂಟ್ಸ್‌ – 1.8 ಕೋಟಿ
    3. ಮುಂಬೈ ಇಂಡಿಯನ್ಸ್‌ Vs ಡೆಲ್ಲಿ ಕ್ಯಾಪಿಟಲ್ಸ್‌ – 1.7 ಕೋಟಿ
    4. ಚೆನ್ನೈ ಸೂಪರ್‌ ಕಿಂಗ್ಸ್‌ Vs ಲಕ್ನೋ ಸೂಪರ್‌ ಜೈಂಟ್ಸ್‌ – 1.7 ಕೋಟಿ
    5. ಚೆನ್ನೈ ಸೂಪರ್‌ ಕಿಂಗ್ಸ್‌ Vs ಗುಜರಾತ್‌ ಟೈಟಾನ್ಸ್‌ – 1.6 ಕೋಟಿ  ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ಇಷ್ಟೊಂದು ವೀಕ್ಷಣೆ ಯಾಕಾಯ್ತು?
    ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 8 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆದಿತ್ತು. ನಂತರ ಬ್ಯಾಟ್‌ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್‌ ಬೇಕಿತ್ತು. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದರು. 18ನೇ ಓವರ್‌ನಲ್ಲಿ 14 ರನ್‌ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್‌ ಬಂದಿತ್ತು. ಈ ಓವರ್‌ನಲ್ಲಿ ಜಡೇಜಾ 2 ಸಿಕ್ಸ್‌ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್‌ ನೀಡಿದರು.

    ಕೊನೆಯ ಓವರ್‌ನಲ್ಲಿ 21 ರನ್‌ ಬೇಕಿತ್ತು. ಸಂದೀಪ್‌ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್‌ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್‌ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್‌ ರನ್‌ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು.

    ಈ ಹಿಂದೆ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್‌ ಲಭ್ಯವಿರಲಿಲ್ಲ. ಆದರೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್‌ ವೀಕ್ಷಣೆ ಮಾಡಲು ಅವಕಾಶವಿರುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.

    ಏಪ್ರಿಲ್‌ 17 ರಂದು ಬೆಂಗಳೂರು ಮತ್ತು ಚೆನ್ನೈ ನಡುವಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಎಷ್ಟು ವೀಕ್ಷಣೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.