Tag: Jindal Factory

  • ಜಿಂದಾಲ್ ಕಾರ್ಖಾನೆಯಲ್ಲಿ ಅವಘಡ – ನೀರಿನ ಹೊಂಡದಲ್ಲಿ ಬಿದ್ದು ಮೂವರ ದುರ್ಮರಣ!

    ಜಿಂದಾಲ್ ಕಾರ್ಖಾನೆಯಲ್ಲಿ ಅವಘಡ – ನೀರಿನ ಹೊಂಡದಲ್ಲಿ ಬಿದ್ದು ಮೂವರ ದುರ್ಮರಣ!

    ಬಳ್ಳಾರಿ: ಪೈಪ್ ಲೈನ್ ಪರಿಶೀಲನೆ ಮಾಡುತ್ತಿದ್ದ ವೇಳೆ ನೀರಿನ ಹೊಂಡದಲ್ಲಿ (Water Tanker) ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ (Jindal Factory) ನಡೆದಿದೆ.

    ಘಟನೆಯಲ್ಲಿ ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್‌ ಪಡೆ ಲ್ಯಾವೆಂಡರ್‌ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?

    ಪೈಪ್‌ಲೈನ್ ಪರಿಶೀಲನೆ ಮಾಡುತ್ತಿದ್ದ ವೇಳೆ ನೀರು ರಭಸವಾಗಿ ಹರಿದಿದೆ. ನೀರಿನ ರಭಸಕ್ಕೆ ಸಿಕ್ಕಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ತೋರಣಗಲ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸಾವು:
    ಕೊಪ್ಪಳ (Koppal) ಜಿಲ್ಲೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಂಡ್‌ಪವರ್ ಕಂಪನಿ ನಿರ್ಲಕ್ಷ್ಯದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈರಪ್ಪ ಕುರಿ (55) ಮೃತ ವ್ಯಕ್ತಿ. ಮೇಕೆಗಳನ್ನು ಮೇಯಿಸಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಗರದ ಹೆಸರು ಹೇಳಿದಾಗ ಬಾಯಿಗೆ ಕೆಟ್ಟ ರುಚಿ ಬರುತ್ತೆ: ‘ಅಕ್ಬರ್‌ಪುರ’ ಹೆಸರು ಬದಲಾವಣೆ ಸುಳಿವು ಕೊಟ್ಟ ಯೋಗಿ

    ಕುಕನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೇ ವೇಳೆ ಸ್ಥಳೀಯರನ್ನು ವಿಚಾರಿಸಿದಾಗ ವಿಂಡ್ ಪವರ್ ಕಂಪನಿ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ದೂರಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿ ಪರಿಹಾರ ನೀಡಬೇಕು ಒತ್ತಾಯಿಸಿದ್ದಾರೆ.

  • ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ಟೆನ್ಷನ್- ಉದ್ಯೋಗಿಗಳಿಬ್ಬರಿಗೆ ಪಾಸಿಟಿವ್

    ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ಟೆನ್ಷನ್- ಉದ್ಯೋಗಿಗಳಿಬ್ಬರಿಗೆ ಪಾಸಿಟಿವ್

    ಬಳ್ಳಾರಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಖಾತೆ ತೆರೆಯುತ್ತಿವೆ. ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಪ್ರಕರಣಗಳು (Corona Virus) ಮತ್ತೆ ಕಾಣಿಸಿಕೊಂಡಿದ್ದು, ಜಿಂದಾಲ್ ಉಕ್ಕಿನ ಕಾರ್ಖಾನೆಯು (Jindal Factory) ಗಣಿ ನಾಡಿನ ಜನರ ನಿದ್ದೆ ಕೆಡಿಸಿದೆ.

    ಹೊರ ರಾಜ್ಯದಿಂದ ಬಂದ ಇಬ್ಬರು ಜಿಂದಾಲ್‍ನ ಉದ್ಯೋಗಿಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಜಿಂದಾಲ್ ನ ಇಬ್ಬರು ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ (COVID Positive) ಬಂದಿದ್ದು, ಇಬ್ಬರನ್ನೂ ಹೋಂ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಅವರಿಗೆ ಯಾವ ರೀತಿ ಕೊರೊನಾ ಬಂತು ಅನ್ನೋದರ ಬಗ್ಗೆ ಅವರ ಟ್ರಾವಲ್ ಹಿಸ್ಟರಿ ಸಂಗ್ರಹ ಮಾಡಲು ಮುಂದಾಗಿದೆ.

    ಅವರ ಕಾಂಟ್ಯಾಕ್ಟ್ ಅಲ್ಲಿರೋರಿಗೂ ಟೆಸ್ಟ್ ಗೆ ಸೂಚನೆ ನೀಡಲಾಗಿದ್ದು, ಸದ್ಯ ಅಜಿಂತ್ರೋ ಮೈಸಿನ್ , ವಿಟಮಿನ್ ಸಿ, ಮಲ್ಟಿವಿಟಮಿನ್ಸ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಬ್ಲಿಕ್ ಟಿವಿಗೆ ಜಿಲ್ಲಾ ಸರ್ಜನ್ ಡಾ. ಬಸಾರೆಡ್ಡಿ ಎಕ್ಸ್ ಕ್ಲೂಸೀವ್ ಮಾಹಿತಿ ನೀಡಿದ್ದಾರೆ. ಹೊರ ರಾಜ್ಯದಿಂದ ಬಂದ ಇಬ್ಬರು ಜಿಂದಾಲ್ ನೌಕರರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್

  • ಸೋಂಕು ನಿಯಂತ್ರಣ ಆಗದಿದ್ರೆ ಜಿಂದಾಲ್ ಲಾಕ್‍ಡೌನ್: ಸಚಿವ ಆನಂದ್ ಸಿಂಗ್

    ಸೋಂಕು ನಿಯಂತ್ರಣ ಆಗದಿದ್ರೆ ಜಿಂದಾಲ್ ಲಾಕ್‍ಡೌನ್: ಸಚಿವ ಆನಂದ್ ಸಿಂಗ್

    -ಇತ್ತ ಅನಗತ್ಯ ತೊಂದ್ರೆ ಕೊಡ್ಬೇಡಿ ಎಂದು ಸಿಎಂಗೆ ಪತ್ರ

    ಬಳ್ಳಾರಿ: ಕೊರೊನಾ ಸೋಂಕು ನಿಯಂತ್ರಣ ಆಗದಿದ್ದರೆ ಜಿಂದಾಲ್ ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲಾಗುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ರಾಜ್ಯದ ಪ್ರತಿಷ್ಠಿತ ಉಕ್ಕು ಕಾರ್ಖಾನೆ ಬಳ್ಳಾರಿಯ ಜಿಂದಾಲ್‍ನಲ್ಲಿ ಸೋಂಕು ತನ್ನ ಅಟ್ಟಹಾಸ ಮುಂದುವರಿಸಿದೆ. ಈ ಬಗ್ಗೆ ಇಂದು ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಬಳಿಕ ಮಾತನಾಡಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಂದಾಲ್ ಹೇಗೆ ಕೆಲಸ ಮಾಡುತ್ತೆ ಎಂಬುದು ಎಲ್ಲರಿಗೂ ಗೊತ್ತು. ನಾನು ವೈಯಕ್ತಿಕವಾಗಿ ಜಿಂದಾಲ್ ಬಗ್ಗೆ ಮೃಧು ಧೋರಣೆ ತೋರಲ್ಲ. ಈ ಹಿಂದೆ ರಾಜೀನಾಮೆ ಯಾಕೇ ನೀಡಿರುವೆ ಎಂಬುದು ಎಲ್ಲರಿಗೂ ಗೊತ್ತು ಎಂದು ಮತ್ತೆ ಜಿಂದಾಲ್ ವಿರುದ್ಧ ಗುಡುಗಿದ್ದಾರೆ.

    ಒಂದು ವೇಳೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಜಿಂದಾಲ್ ಪಾಲನೆ ಮಾಡದಿದ್ರೆ, ಜಿಂದಾಲ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಾನು ಸಿದ್ದ. ನಾನು ಯಾವುದೇ ಸರ್ಕಾರದ ಪರವಾಗಿಲ್ಲ. ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

    ಅನಗತ್ಯ ತೊಂದರೆ ಕೊಡ್ಬೇಡಿ: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜಿಲ್ಲೆಯ ಕೈಗಾರಿಕೆಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ಪತ್ರ ಬರೆದಿದ್ದು, ಈ ಮನವಿ ಪತ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೂ ಸಹ ಕಳುಹಿಸಿಕೊಡಲಾಗಿದೆ. ಈ ಮನವಿ ಪತ್ರದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ರವಿಕುಮಾರ ಅವರು ಜೆಎಸ್ ಡಬ್ಲ್ಯೂ ಸಂಸ್ಥೆಗೆ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆಂದು ವಿವರಿಸಿದ್ದಾರೆ.

    ಜೆಎಸ್ ಡಬ್ಲ್ಯೂ ಕೇವಲ ತನ್ನ ವ್ಯಾಪಾರ ವಹಿವಾಟಿನ ಕಡೆಗೆ ಗಮನ ಹರಿಸದೆ ತನ್ನ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮಯವಾಗಿ ಕಾಯ್ದುಕೊಂಡಿದೆ. ನೆರೆ ಹೊರೆಯ ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ, ಶಾಲಾ ಕಾಲೇಜುಗಳ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಜಿಲ್ಲೆಯ ನಾಗರೀಕರ ಆರೋಗ್ಯಕ್ಕಾಗಿ ಸಂಜೀವಿನಿ ಆಸ್ಪತ್ರೆಯ ಸೇವೆಯನ್ನು ಒದಗಿಸುತ್ತಿದೆ ಎಂದು ಪತ್ರದಲ್ಲಿ ರವಿಕುಮಾರ್ ಹೇಳಿದ್ದಾರೆ.

    ಜೆಎಸ್ ಡಬ್ಲ್ಯು ಸಂಸ್ಥೆಯನ್ನು ಕೋವಿಡ್-19 ರ ಕಾರಣದಿಂದಾಗಿ ಸ್ಥಗಿತಗೊಳಿಸಬೇಕು ಎಂದು ಇತ್ತೀಚೆಗೆ ಕೇಳಿ ಬರುತ್ತಿರುವ ಕೂಗು ತುಂಬಾ ಶೋಚನೀಯವಾಗಿದೆ. ಸಮಾಜಮುಖಿ ಕೆಲಸ, ಆಳ್ವಿಕೆ ಸರ್ಕಾರಗಳಿಗೆ ಆರ್ಥಿಕ ಶಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಹೀಗೆ ಹತ್ತು ಹಲವು ಸೇವೆಯಿಂದ ಗುರುತಿಕೊಂಡಿರುವ ಈ ಬೃಹತ್ ಕೈಗಾರಿಕೆಯನ್ನು ಸ್ಥಗಿತಗೊಳಿಸಿದರೆ ಇದರಿಂದಾಗಿ ಈ ಮೇಲ್ಕಾಣಿಸಿದ ಎಲ್ಲ ಜವಾಬ್ದಾರಿಯುತ ಕೆಲಸಗಳನ್ನು ಮಾಡುವವರು ಯಾರು ಎಂದು ರವಿಕುಮಾರ ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

    ಜೆಎಸ್ ಡಬ್ಲ್ಯು ಕಾರ್ಖಾನೆಯು ಕೊರೆಕ್ಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಯಾಗಿದ್ದು, ಒಂದು ಬಾರಿ ಫರ್ನೇಸ್ ಅನ್ನು ಬಂದ್ ಮಾಡಿದರೆ ಪುನಃ ಪ್ರಾರಂಭಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಜೆಎಸ್ ಡಬ್ಲ್ಯು ಕಾರ್ಖಾನೆಯನ್ನು ಬಂದ್ ಮಾಡುವುದರ ಬದಲಾಗಿ ಇನ್ನು ಹೆಚ್ಚಿನ ಸುರಕ್ಷತಾ ಕ್ರಮದೊಂದಿಗೆ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಜೆಎಸ್ ಡಬ್ಲ್ಯು ಕಾರ್ಖಾನೆಯನ್ನು ಬಂದ್ ಮಾಡುವ ನಿರ್ಧಾರಕ್ಕೆ ನಮ್ಮ ಸಂಸ್ಥೆಯ ತೀವ್ರ ವಿರೋಧ ಇದೆ ಎಂದು ರವಿಕುಮಾರ ಪತ್ರದಲ್ಲಿ ಹೇಳಿದ್ದಾರೆ.

  • ಜಿಂದಾಲ್ ಕಾರ್ಖಾನೆ ಲಾಕ್‍ಡೌನ್ ಮಾಡೋಕೆ ಆಗಲ್ಲ: ಜಿಲ್ಲಾಧಿಕಾರಿ ನಕುಲ್

    ಜಿಂದಾಲ್ ಕಾರ್ಖಾನೆ ಲಾಕ್‍ಡೌನ್ ಮಾಡೋಕೆ ಆಗಲ್ಲ: ಜಿಲ್ಲಾಧಿಕಾರಿ ನಕುಲ್

    – ಜಿಂದಾಲ್ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಣೆ
    – ಗಣಿನಾಡಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

    ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆಗಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲೆಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಅಲ್ಲದೇ ಅದು ಕೇವಲ 1 ಸಾವಿರ ನೌಕರರನ್ನ ಮಾತ್ರ ಹೊಂದಿದೆ. ಹೀಗಾಗಿ, ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು. ಆದರೆ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನು ಹೊಂದಿದೆ. ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಲಾಕ್‍ಡೌನ್ ಮಾಡಲು ಬರುವುದಿಲ್ಲ ಎಂದರು.

    ಕಂಟೈನ್‍ಮೆಂಟ್ ಝೋನ್: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಈಗ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್‍ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ. ಜೊತೆಗೆ ಸುಮಾರು 1086 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 246 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 300 ಮಂದಿಯ ತಪಾಸಣೆ ವರದಿ ಇಂದು ಅಥವಾ ನಾಳೆ ಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

    ಮೂರನೇ ಬಲಿ: ಇತ್ತ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಇಂದು ಮತ್ತೊಂದು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಆಂಧ್ರಪ್ರದೇಶದ ಆದೋನಿ ಮೂಲದ 62 ವರ್ಷದ ವ್ಯಕ್ತಿ ರೋಗಿ-7,732 ಇಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.

    ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದ ಈ ವ್ಯಕ್ತಿ, ಕಳೆದ ಜೂನ್ 17 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ಮಾಡಲಾಗಿತ್ತು. ವರದಿ ಬಂದ ಬಳಿಕ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿತ್ತು. ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಡಿ.ಸಿ ನಕುಲ್ ತಿಳಿಸಿದ್ದಾರೆ.

  • ಜಿಂದಾಲ್‍ನಲ್ಲಿ ಕೊರೊನಾ ಅಟ್ಟಹಾಸ-ಪಕ್ಕದ ಜಿಲ್ಲೆಗಳಿಗೂ ಕಂಟಕ

    ಜಿಂದಾಲ್‍ನಲ್ಲಿ ಕೊರೊನಾ ಅಟ್ಟಹಾಸ-ಪಕ್ಕದ ಜಿಲ್ಲೆಗಳಿಗೂ ಕಂಟಕ

    ಬಳ್ಳಾರಿ: ರಾಜ್ಯದ ನಂಬರ್ 1 ಉಕ್ಕು ಕಾರ್ಖಾನೆ ಜಿಂದಾಲ್ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ದಿನೇ ದಿನೇ ಇಲ್ಲಿನ ನೌಕರರಲ್ಲಿ ಸೋಂಕು ಹೆಚ್ಚಾಗ್ತಾನೆ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 249ಕ್ಕೆ ಏರಿದೆ. ಅದರಲ್ಲೂ ಈಗ ಜಿಂದಾಲ್‍ನಿಂದ ಅಕ್ಕಪಕ್ಕದ ಜಿಲ್ಲೆಗಳಾದ ಕೊಪ್ಪಳ, ಗದಗಗಳಲ್ಲೂ ಆತಂಕ ಶುರುವಾಗಿದೆ. ಹೀಗಾಗಿ ಜಿಂದಾಲ್ ಸಂಪೂರ್ಣ ಬಂದ್‍ಗೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

    ಕಳೆದ 2 ಬಾರಿ ನಡೆದ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಕೂಡ ಜಿಂದಾಲ್ ನಂಜು ಇದೇ ರೀತಿ ಮುಂದುವರಿದರೆ ಸಂಪೂರ್ಣ ಬಂದ್ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಜಿಲ್ಲಾ ಉಸ್ತುವಾರಿಗಳ ತುರ್ತು ಸಭೆ ನಡೆಯಲಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.

    ಇತ್ತ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲು ಆಗಲ್ಲ ಅಂತ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಹೇಳಿದ್ದಾರೆ. ಜಿಂದಾಲ್ ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನ ಹೊಂದಿದೆ. ಮೇಲಾಗಿ, ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್‍ಲೈನ್ಸ್ ಪ್ರಕಾರ ಲಾಕ್‍ಡೌನ್ ಮಾಡಲು ಬರೋದಿಲ್ಲ ಅಂದಿದ್ದಾರೆ. ಇನ್ನು ಜಿಂದಾಲ್ ಕಾರ್ಖಾನೆಯನ್ನ ಈಗ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿನಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್‍ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ.

    ಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಪದೇ ಪದೇ ಜಿಂದಾಲ್ ಬಂದ್ ಮಾಡುವುದಾಗಿ ಹೇಳ್ತಿದ್ದಾರೆ. ಆದ್ರೆ ಜಿಲ್ಲಾಧಿಕಾರಿಗಳು ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದ್ರೆ ಸೋಮವಾರ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಕಾದು ನೋಡಬೇಕಿದೆ

  • ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ರಣಕೇಕೆ – ಸೋಂಕು ತಡೆಗೆ ಸಪ್ತ ಸೂತ್ರ

    ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ರಣಕೇಕೆ – ಸೋಂಕು ತಡೆಗೆ ಸಪ್ತ ಸೂತ್ರ

    ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗ್ತಿದೆ. ಜಿಂದಾಲ್‍ನಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ. ಗ್ರಾಮಗಳಲ್ಲೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಜಿಂದಾಲ್ ಕಾರ್ಖಾನೆ ಹೋದ್ರೆ 5,000 ರೂ. ದಂಡ ವಿಧಿಸೋದಾಗಿ ಡಂಗೂರ ಸಾರಿ ಎಚ್ಚರಿಸಲಾಗುತ್ತಿದೆ. ಆದರೆ ಜಿಂದಾಲ್ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಬರೆದಿದ್ರೆ ಚೆನ್ನಾಗಿ ಇರಲ್ಲಾ ಎಂದು ಆವಾಜ್ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಬುಧವಾರ ಒಂದೇ ದಿನ ಜಿಂದಾಲ್ ವ್ಯಾಪ್ತಿಯಲ್ಲೇ 34 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ಜಿಂದಾಲ್ ಕಾರ್ಖಾನೆ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ. ಬಳ್ಳಾರಿಯಲ್ಲಿ ಒಟ್ಟು 319 ಕೊರೊನಾ ಪಾಸಿಟಿವ್ ಪತ್ತೆಯಾದಂತಾಗಿದೆ. ಸೋಂಕನ್ನ ತಡೆ ನಿಟ್ಟಿನಲ್ಲಿ ಜಿಂದಾಲ್ ಕಂಪನಿಗೆ ಬಳ್ಳಾರಿ ಜಿಲ್ಲಾಡಳಿತ 7 ಸೂಚನೆ ನೀಡಿದ್ದು, ಇವುಗಳನ್ನು ಇಂದಿನಿಂದಲೇ ಜಿಂದಾಲ್ ಪಾಲಿಸಬೇಕಿದೆ. ಜೂನ್ 30ರವರೆಗೂ ಇದು ಅನ್ವಯ ಆಗಲಿದೆ.

    ಸೋಂಕು ತಡೆಗೆ ಸಪ್ತ ಸೂತ್ರ:

    1. ಇಂದಿನಿಂದ ಜೂನ್ 30ರವರೆಗೂ ಜಿಂದಾಲ್ ಟೌನ್‍ಶಿಪ್‍ಗೆ ಕ್ವಾರಂಟೈನ್.
    2. ಜಿಂದಾಲ್‍ನಲ್ಲಿ ಕೆಲಸ ಮಾಡೋ ಸಿಬ್ಬಂದಿ ಯಾರೂ ಗ್ರಾಮಗಳಿಗೆ ತೆರಳುವಂತಿಲ್ಲ.
    3. ಕಾರ್ಖಾನೆಯಲ್ಲಿ ಕೆಲಸ ಮಾಡೋರು ಜಿಂದಾಲ್ ಟೌನ್‍ಶಿಪ್‍ನಲ್ಲಿಯೇ ಉಳಿಯಬೇಕು.
    4. ಕಾರ್ಮಿಕರಿಗೆ ಟೌನ್‍ಶಿಪ್ ಹಾಗೂ ಕಾರ್ಖಾನೆಯ ನಡುವೆ ಮಾತ್ರ ಸಂಚರಿಸಲು ಅವಕಾಶ.
    5. ಇನ್ನುಳಿದ ಉದ್ಯೋಗಿಗಳು ಮನೆಯಲ್ಲೆ ಇರಬೇಕು. ಹೊರಗೆ ಬರುವಂತೆ ಇಲ್ಲ.
    6. ಕಾರ್ಖಾನೆಯಲ್ಲಿ ಉಳಿಯುವ ಕಾರ್ಮಿಕರಿಗೆ ಜಿಂದಾಲ್‍ನಿಂದಲೇ ಊಟ ವಸತಿ ವ್ಯವಸ್ಥೆ.
    8. ಸರಕು ಸಾಗಣೆ ವಾಹನಗಳಿಗೆ ಮಾತ್ರ ಜಿಂದಾಲ್‍ನಿಂದ ಹೊರಗೆ ತೆರಳಲು ಅವಕಾಶ

    ಜಿಲ್ಲಾಡಳಿತವೇನೋ ಜಿಂದಾಲ್‍ಗೆ ಸಪ್ತ ಸೂತ್ರ ಅನುಸರಿಸುವಂತೆ ಆದೇಶ ನೀಡಿದೆ. ಆದರೆ ಜಿಂದಾಲ್ ಮಾತ್ರ ಗುತ್ತಿಗೆ ನೌಕರರನ್ನು ಒತ್ತಾಯ ಪೂರ್ವಕವಾಗಿ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹೇರುತ್ತಿದೆ. ಕೆಲಸ ಬಾರದೇ ಇದ್ದಲ್ಲಿ ಉದ್ಯೋಗದಿಂದ ತೆಗೆಯುವುದಾಗಿ ಬೆದರಿಕೆ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ಮುಂದೆ ಯಾರೂ ಜಿಂದಾಲ್‍ಗೆ ಹೋಗಬಾರದು. ಒಂದು ವೇಳೆ ಹೋದರೆ 5000 ಸಾವಿರ ದಂಡ ವಿಧಿಸಲಾಗುವುದು ಅಂತಾ ಹಳ್ಳಿಗಳಲ್ಲಿ ಡಂಗೂರ ಸಾರಿಸಿ ಎಚ್ಚರಿಕೆ ಕೊಡಲಾಗ್ತಿದೆ.

    ಒಟ್ಟಾರೆ ಜಿಂದಾಲ್‍ನಲ್ಲಿ ಏನೆಲ್ಲಾ ಕ್ರಮ ಕೈಗೊಂಡರೂ ಕೊರೊನಾ ಮಾತ್ರ ಇಳಿಮುಖವಾಗದೇ ಏರುತ್ತಲೇ ಸಾಗುತ್ತಿದೆ. ಗ್ರಾಮೀಣ ಭಾಗದ ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಾ ಇದೆ.

  • ನಂಜನಗೂಡಿನ  ಜ್ಯುಬಿಲಿಯೆಂಟ್ ಕಾರ್ಖಾನೆ ಮೀರಿಸಿದ ಜಿಂದಾಲ್

    ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆ ಮೀರಿಸಿದ ಜಿಂದಾಲ್

    – ಹಾಲು ಹಾಕಿದವನಿಂದಲೂ ಬಳ್ಳಾರಿಗೆ ಟೆನ್ಶನ್

    ಬಳ್ಳಾರಿ: ದಿನದಿಂದ ದಿನಕ್ಕೆ ಜಿಂದಾಲ್‍ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯನ್ನು ಮೀರಿಸಿರುವ ಜಿಂದಾಲ್‍ನಲ್ಲಿ ಕೊರೊನಾ ಶತಕ ಬಾರಿಸಿದೆ.

    ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಂದಾಲ್ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಬಳ್ಳಾರಿ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೊರೊನಾ ಅಟ್ಟಹಾಸ ಮತ್ತೆ ಮುಂದುವರಿದಿದೆ. ಶನಿವಾರ ಬಳ್ಳಾರಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ 8 ಪ್ರಕರಣ ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 181 ಸೋಂಕಿತರಲ್ಲಿ ಸಿಂಹಪಾಲು ಅಂದರೆ 103 ಪ್ರಕರಣ ಜಿಂದಾಲ್‍ಗೆ ಸೇರಿದೆ. ಅಂದರೆ ಜಿಂದಾಲ್ ಒಂದೇ ಶತಕ ಬಾರಿಸಿ ಮುಂದುವರಿಯುತ್ತಿದೆ.

    ಪ್ರತಿದಿನ 120 ಮನೆಗೆ ಹಾಲು ಸರಬರಾಜು ಮಾಡ್ತಿದ್ದ
    ಜಿಂದಾಲ್ ನೌಕರರ ವಸತಿ ಸಮುಚ್ಚಯ ಇರುವ ವಿವಿ ನಗರ, ವಿದ್ಯಾನಗರ, ಶಂಕರಗುಡ್ಡ ಕಾಲೋನಿಗಳಿಗೆ ನಿತ್ಯ ಹಾಲು ಹಾಕುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ. ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ 45 ವರ್ಷದ ವ್ಯಕ್ತಿ ನಿತ್ಯ ಜಿಂದಾಲ್ ನೌಕರರ ಸುಮಾರು 120 ಮನೆಗಳಿಗೆ ಹಾಲು ಹಾಕುತ್ತಿದ್ದ. ಬೈಕ್ ಮೇಲೆ ತಿಮ್ಮಲಾಪುರದಿಂದ ಜಿಂದಾಲ್‍ಗೆ ಹೋಗಿ ಬರುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ರಾತ್ರಿ ಈತನ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಜ್ವರ ಹಾಗೂ ಗಂಟಲುನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ಆರೋಗ್ಯ ತಪಾಸಣೆ ಮಾಡಿಸಿ, ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಬಳಿಕ ಸೋಂಕು ಇರುವುದು ಖಚಿತವಾಗಿದೆ.

    ಹಾಲು ಹಾಕುತ್ತಿದ್ದ ವ್ಯಕ್ತಿಗೆ ಸೋಂಕು ದೃಢವಾಗ್ತಿದ್ದಂತೆ ನಗರದ ಜಿಲ್ಲಾ ಕೊರೊನಾ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿದೆ. ಈತ ವಾಸವಾಗಿರುವ ತಿಮ್ಮಲಾಪುರ ಗ್ರಾಮದ ನಿವಾಸ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗಿದೆ. ಇನ್ನೂ ಜಿಂದಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದ್ದು, ಗ್ರಾಮದ ಕೆಲ ರಸ್ತೆಗಳನ್ನು ಬಂದ್ ಮಾಡಿ, ಗ್ರಾಮದ ಜನರು ಜಿಂದಾಲ್ ನೌಕರರು ಪ್ರವೇಶವನ್ನು ನಿಷೇಧಿಸಿದ್ದಾರೆ.

    ಜಿಂದಾಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಜಿಂದಾಲ್ ಮಾತ್ರ ತಮ್ಮ 10 ಸಾವಿರ ನೌಕರರನ್ನು ಕೇವಲ ನಾಲ್ಕು ದಿನಗಳ ಕಾಲ ಕ್ವಾರೆಂಟೈನ್ ಮಾಡಿ ಮತ್ತೆ ಎಡವಟ್ಟು ಮಾಡಿಕೊಂಡಿದೆ. ಜಿಲ್ಲಾಡಳಿತ ಹಾಗೂ ಜಿಂದಾಲ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವುದು ಎಂದು ಸ್ಥಳೀಯರು ಆತಂಕ ಪಡುತ್ತಿದ್ದಾರೆ.

  • ಜಿಂದಾಲ್ ಉದ್ಯೋಗಿ ನಾಪತ್ತೆ ಪ್ರಕರಣ ಸಾವಿನಲ್ಲಿ ಅಂತ್ಯ

    ಜಿಂದಾಲ್ ಉದ್ಯೋಗಿ ನಾಪತ್ತೆ ಪ್ರಕರಣ ಸಾವಿನಲ್ಲಿ ಅಂತ್ಯ

    – ಉದ್ಯೋಗಿ ಸಾವಿನ ಬಗ್ಗೆ ಮಾಹಿತಿ ನೀಡಲಿಲ್ಲ ಜಿಂದಾಲ್
    – ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಪ್ರತಿಭಟನೆ

    ಬಳ್ಳಾರಿ: ಜಿಂದಾಲ್ ಕಂಪನಿ ಉದ್ಯೋಗಿ ನಿಗೂಢ ನಾಪತ್ತೆ ಪ್ರಕರಣ ಸಾವಿನಲ್ಲಿ ಅಂತ್ಯವಾಗಿದೆ. ಕಂಪನಿಯಲ್ಲಿ ಸುಟ್ಟು ಬೂದಿಯಾಗಿರೋ ಉದ್ಯೋಗಿಯ ಬಗ್ಗೆ ಕಿಂಚಿತ್ತು ಕಾಳಜಿವಹಿಸಿದ ಜಿಂದಾಲ್ ವಿರುದ್ಧ ಇದೀಗ ಹೋರಾಟಗಳು ಪ್ರಾರಂಭವಾಗಿದೆ.

    ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಮೃತ ದುರ್ದೈವಿ. ದುರ್ಗಣ್ಣ ಕಳೆದ ಹದಿನೈದು ವರ್ಷದಿಂದ ಜಿಂದಾಲ್ ಕಂಪನಿ ಆವರಣದ ಐಟಿಪಿಎಸ್ ಕೋಕೋ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಪಾಳಿಯ ಕೆಲಸಕ್ಕೆಂದು ಹೋಗಿದ್ದ ದುರ್ಗಣ್ಣ ಶುಕ್ರವಾರ ಬೆಳಗ್ಗೆ ವಾಪಸ್ ಬಂದಿರಲಿಲ್ಲ. ಇದರಿಂದಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.

    ದುರ್ಗಣ್ಣ ಮೂರು ದಿನಗಳೆದರೂ ಮನೆಗೆ ಬಾರದೆ ಇದಿದ್ದರಿಂದ ಕುಟುಂಬಸ್ಥರು ಮಂಗಳವಾರ ಜಿಂದಾಲ್ ಕಂಪನಿಗೆ ಹೋಗುವ ಬಸ್ ತಡೆದು ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಬಿಸಿಯಿಂದ ಎಚ್ಚೆತ್ತ ಕಂಪನಿ ಸಿಸಿಟಿವಿ ಕ್ಯಾಮೆರಾ ಫುಟೇಜ್ ಪರಿಶೀಲನೆ ಮಾಡಿದಾಗ ಕಂಪನಿಯ ಒಳಗೆ ಹೋಗುವುದು ರೆಕಾರ್ಡ್ ಆಗಿದೆ. ಆದರೆ ವಾಪಸ್ ಬಂದಿರುವ ಬಗ್ಗೆ ದಾಖಲಾಗಿರಲಿಲ್ಲ. ನಂತರ ಪ್ಲ್ಯಾಂಟ್‍ನಲ್ಲಿ ಹುಡುಕಿದಾಗ ಸುಟ್ಟ ಸ್ಥಿತಿಯಲ್ಲಿ ದುರ್ಗಣ್ಣ ಅವರು ಬಳಸುತ್ತಿದ್ದ ಶೂ, ಬೆಲ್ಟ್ ಸಿಕ್ಕಿವೆ. ಈ ಆಧಾರಗಳಿಂದ ದುರ್ಗಣ್ಣ ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ.

    ದುರ್ಗಣ್ಣ ಅವರ ನಾಪತ್ತೆ ಬಗ್ಗೆ ಕುಟುಂಬಸ್ಥರು ತೋರಣಗಲ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕುಟುಂಬಸ್ಥರ ಹೋರಾಟದ ಹಾದಿ ಹಿಡಿದಾಗ ಪೊಲೀಸರು ಮತ್ತು ಕಂಪನಿಯವರು ಎಚ್ಚೆತ್ತುಕೊಂಡು ನಾಪತ್ತೆಯಾಗಿರುವ ದುರ್ಗಣ್ಣ ಅವರ ಬಗ್ಗೆ ಪರಿಶೀಲಿಸಿದಾಗ ಮೃತಪಟ್ಟಿದ್ದು, ಬಯಲಿಗೆ ಬಂದಿದೆ.

    ಕಳೆದೊಂದು ವಾರದಲ್ಲಿ ಇಷ್ಟೆಲ್ಲ ಅವಾಂತರವಾದರೂ ಕಂಪನಿ ಈವರೆಗೂ ಬಿಡಿಗಾಸು ಪರಿಹಾರ ನೀಡಲ್ಲ. ಅಷ್ಟೇ ಅಲ್ಲದೆ ಸೌಜನ್ಯಕ್ಕೂ ಕುಟುಂಬಸ್ಥರನ್ನು ಮಾತನಾಡಿಸಿಲ್ಲ. ಹೀಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಮನೆಯ ಒಬ್ಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ದುರ್ಗಣ್ಣ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

    ದುರ್ಗಣ್ಣ ಅವರ ನಾಪತ್ತೆ ಮತ್ತು ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಜಿಂದಾಲ್ ಕಂಪನಿಯ ಪ್ರತಿಯೊಂದು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ, ಎಚ್ಚರಿಕೆ ಗಂಟೆಗಳಿವೆ. ಇಷ್ಟಿದ್ದರೂ ವಾರದವರೆಗೂ ದುರ್ಗಣ್ಣ ಸಾವನ್ನಪ್ಪಿರುವ ಬಗ್ಗೆ ಕಂಪನಿ ಯಾಕೆ ಖಚಿತ ಪಡಿಸಲಿಲ್ಲ. ಅದೆಷ್ಟೋ ಪ್ರಕರಣಗಳಲ್ಲಿ ಕಂಪನಿ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬ ಬಗ್ಗೆ ಸಮರ್ಪಕ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗಿದೆ.

  • ಯುವತಿಗೆ ಅಶ್ಲೀಲ ಮೇಸೆಜ್ ಮಾಡಿದ್ದಕ್ಕೆ ಬಿತ್ತು ಸಖತ್ ಗೂಸಾ!

    ಯುವತಿಗೆ ಅಶ್ಲೀಲ ಮೇಸೆಜ್ ಮಾಡಿದ್ದಕ್ಕೆ ಬಿತ್ತು ಸಖತ್ ಗೂಸಾ!

    ಬಳ್ಳಾರಿ: ಉದ್ಯೋಗಿಯೊಬ್ಬ ಯುವತಿಗೆ ಅಶ್ಲೀಲವಾಗಿ ಮೇಸೆಜ್ ಮಾಡಿದಕ್ಕೆ ಸಖತ್ ಹಿಗ್ಗಾಮುಗ್ಗಾ ಥಳಿಸಿಕೊಂಡ ಘಟನೆ ಜಿಲ್ಲೆಯ ಜಿಂದಾಲ್ ಕಾರ್ಖಾನೆಯ ಹೊರಗಡೆ ನಡೆದಿದೆ. ಗೂಸಾ ನೀಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಬಳ್ಳಾರಿ ಮೂಲದ ಯುವತಿಯೊಬ್ಬಳಿಗೆ ಜಿಂದಾಲ್ ಕಾರ್ಖಾನೆಯ ಎಚ್‍ಆರ್‍ಡಿ ವಿಭಾಗದ ಪಿಎಫ್ ಆಫೀಸರ್ ಸಂಜೀವ ನಾಯಕ ಎಂಬಾತ ಅಶ್ಲೀಲವಾಗಿ ಮೇಸೆಜ್ ಮಾಡಿದ್ದ. ಹೀಗಾಗಿ ಯುವತಿಯ ಕಡೆಯ ಮೂರು ಮಂದಿ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಹಲ್ಲೆಗೆ ಒಳಗಾದ ಸಂಜೀವ ತಪ್ಪಾಯ್ತು ಕ್ಷಮಿಸಿ ಅಂತಾ ಕೈ ಮುಗಿದರೂ ಯುವತಿಯ ಕಡೆಯವರು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಹಲ್ಲೆಗೆ ಒಳಗಾದ ಸಂಜೀವನ ಬಾಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ.

    ತೋರಣಗಲ್ ಪೊಲೀಸರು ಹಲ್ಲೆ ಮಾಡಿದ ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ. ಆದರೆ ಹಲ್ಲೆಗೆ ಒಳಗಾದ ಸಂಜೀವ್ ಮಾತ್ರ ಈ ಬಗ್ಗೆ ಪೊಲೀಸರಿಗೆ ಇದೂವರೆಗೂ ಸಹ ದೂರು ನೀಡಿಲ್ಲ.