Tag: Jim Corbett

  • ಪುಲ್ವಾಮಾ ದಾಳಿಯಂದು ಶೂಟಿಂಗ್‍ನಲ್ಲಿ ಪ್ರಧಾನಿ ಮೋದಿ ಬ್ಯುಸಿ: ಸುರ್ಜೆವಾಲಾ ಕಿಡಿ

    ಪುಲ್ವಾಮಾ ದಾಳಿಯಂದು ಶೂಟಿಂಗ್‍ನಲ್ಲಿ ಪ್ರಧಾನಿ ಮೋದಿ ಬ್ಯುಸಿ: ಸುರ್ಜೆವಾಲಾ ಕಿಡಿ

    ನವದೆಹಲಿ: ಪುಲ್ವಾಮಾ ಉಗ್ರರ ದಾಳಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೃದು ಧೋರಣೆ ತೋರುಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ವಾಗ್ದಾಳಿ ನಡೆಸಿದೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ ಭಾರತದ ಅನೇಕ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಿಂದಾಗಿ ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಮ್ ಕಾರ್ಬೆಟ್ ಪಾರ್ಕ್ ನಲ್ಲಿ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದರು. ಇಂತಹ ಪ್ರಧಾನಿ ವಿಶ್ವದಲ್ಲಿ ಮತ್ತೊಬ್ಬರಿಲ್ಲ ಎಂದು ಕಿಡಿಕಾರಿದ್ದಾರೆ.

    ಪುಲ್ವಾಮಾ ದಾಳಿಯು ಸಮಗ್ರತೆಯ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಮಾಡದೇ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದೆ. ಉಗ್ರರ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸಿದೆ ಎಂದರು. ಇದನ್ನು ಓದಿ: ಕಾನ್ವಾಯ್ ರೂಲ್ಸ್ ಚೇಂಜ್ – ಇನ್ನು ಮುಂದೆ ವಾಯುಮಾರ್ಗದಲ್ಲಿ ತೆರಳಲಿದ್ದಾರೆ ಸೈನಿಕರು

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿದ್ದಾಗ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ್ದೇವು. 1971ರಲ್ಲಿ ನಾವು ಪಾಕಿಸ್ತಾನವನ್ನು ಸೋಲಿಸಿದ್ದೇವೆ. ಈ ವೇಳೆ ಪ್ರಧಾನಿಯಗಿದ್ದ ಇಂದಿರಾ ಗಾಂಧಿ ಅವರು ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ್ದಷ್ಟೇ ಅಲ್ಲದೆ 91,000 ಪಾಕಿಸ್ತಾನಿ ಸೈನಿಕರು ಬಂಧಿಸಿದ್ದರು ಎಂದು ಇತಿಹಾಸ ನೆನಪಿಸಿಕೊಂಡು ಮೋದಿ ಅವರಿಗೆ ಟಾಂಗ್ ಕೊಟ್ಟರು.

    ಪಾಕಿಸ್ತಾನದ ವಿರುದ್ಧ ಹೋರಾಡಲು ವಿಶ್ವವ್ಯಾಪಿ ನಮಗೆ ಬೆಂಬಲ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ ಅವರು ರಾಜಧರ್ಮವನ್ನು ಮರೆತು ರಾಜನ ಸ್ಥಾನ (ಸರ್ಕಾರ) ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹುತಾತ್ಮರಿಗೆ ಗೌರವ ಸಲ್ಲಿಸುವುದಕ್ಕಿಂತ ಹೆಚ್ಚಾಗಿ ಅಧಿಕಾರಕ್ಕೆ ಮೋದಿ ಹಾತೊರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ಮೋದಿ ಅವರು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆ ಬೆಳೆಸಿದ ಪಾಕಿಸ್ತಾನದ ಹೆಸರನ್ನು ಬರೆಯುವುದನ್ನೇ ಮರೆತಿದ್ದಾರೆ ಎಂದು ದೂರಿದರು.

    ಪುಲ್ವಾಮಾ ದಾಳಿ ದೇಶದ ಐಕ್ಯತೆ, ಸಮಗ್ರತೆ ಮೇಲೆ ಬಿದ್ದ ಪೆಟ್ಟಾಗಿದೆ. ನರೇಂದ್ರ ಮೋದಿ ಅವರು ದೇಶದ ಭದ್ರತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಗುರುವಾರ ಮೋದಿ ವೇಳಾಪಟ್ಟಿ ಏನಿತ್ತು?
    ಫೆ.14 ರಂದು ಪ್ರಧಾನಿ ಮೋದಿ ಪೂರ್ವ ನಿಗದಿಯಾದ ಕಾರ್ಯಕ್ರಮದಂತೆ ಬೆಳಗ್ಗೆ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ಉತ್ತಾರಖಂಡ್‍ಗೆ ಆಗಮಿಸಿದ್ದರು. ಬೆಳಗ್ಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ 7:05ಕ್ಕೆ ರುದ್ರಪುರಕ್ಕೆ ಹೋಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮಿಗ್-17 ಸೇನಾ ಹೆಲಿಕಾಪ್ಟರ್ ಟೇಕಾಫ್ ಆಗಿರಲಿಲ್ಲ. 11 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿ ಮಧ್ಯಾಹ್ನ 12.30ಕ್ಕೆ ಬಿಜ್ನೋರ್ ಜಿಲ್ಲೆಯ ಬಿಕ್ಕವಾಲಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿ `ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಕ್ಕೆ ಆಗಮಿಸಿದ್ದರು.

    ಉತ್ತರಾಖಂಡ್‍ನ ರಾಮಗಂಗಾ ನದಿ ತಟದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ ಹುಲಿಗಳಿಗೆ ಪ್ರಸಿದ್ಧವಾಗಿದ್ದು ಡಿಸ್ಕವರಿ ವಾಹಿನಿಯ ಸಾಕ್ಷ್ಯಚಿತ್ರದಲ್ಲಿ ಮೋದಿ ಪಾಲ್ಗೊಂಡಿದ್ದರು. ಒಟ್ಟು 4 ಗಂಟೆಗಳ ಕಾಲ ಈ ಉದ್ಯಾನವನದಲ್ಲಿದ್ದರು. ಸಮಾವೇಶಕ್ಕೆ ಈ ಉದ್ಯಾನವನದಿಂದಲೇ ಮೋದಿ ಭಾಷಣ ಮಾಡಿದ್ದರು. ಡಿಸ್ಕವರಿ ಚಾನೆಲ್‍ನ ಸಾಕ್ಷ್ಯಚಿತ್ರದಲ್ಲಿ 20 ನಿಮಿಷ ಮೋದಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಜಿಮ್ ಕಾರ್ಬೆಟ್ ಪಾರ್ಕ್‍ಗೆ ಪ್ರಧಾನಿ ನರೇಂದ್ರ ಮೋದಿ ನೀಡಲಿರುವ ಭೇಟಿಯನ್ನು ಗೌಪ್ಯವಾಗಿ ಇಡಲಾಗಿತ್ತು. ಅದೇ ದಿನ ಮಧ್ಯಾಹ್ನ 3.15ಕ್ಕೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv