Tag: jhanvi

  • ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

    ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

    ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’. ಈ ವಾರ ಅಂದರೆ, ಫೆಬ್ರವರಿ 7ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಮೂಲಕ ಖ್ಯಾತ ಸುದ್ದಿವಾಚಕಿ, ನಿರೂಪಕಿ ಜಾನ್ವಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿದ್ದ ಅವರು ಆ ಹಂತದಲ್ಲಿಯೇ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವರು. ನಾಯಕಿಯಾಗೋ ಗುಣ ಲಕ್ಷಣಗಳನ್ನು ಹೊಂದಿದ್ದ ಜಾನ್ವಿ (Jhanvi) ಹೀರೋಯಿನ್ ಆಗುತ್ತಾರೆ ಎಂಬಂಥಾ ಸುದ್ದಿಗಳು ಆಗಾಗ ಹಬ್ಬಿಕೊಳ್ಳುತ್ತಿದ್ದವು. ಕಡೆಗೂ ಅಧಿಪತ್ರದ ಮೂಲಕ ಅದು ನಿಜವಾಗಿದೆ. ಖುದ್ದು ಜಾನ್ವಿ ಬಹುವಾಗಿ ಮೆಚ್ಚಿಕೊಂಡು ಈ ಸಿನಿಮಾದ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ. ಸದರಿ ಪಾತ್ರ ನಟಿಯಾಗಿ ಹೊಸಾ ದಿಕ್ಕು ತೋರುತ್ತದೆಂಬ ಗಾಢ ನಂಬಿಕೆ ಜಾನ್ವಿಯದ್ದಾಗಿದೆ.

    ‘ಅಧಿಪತ್ರ’ ಚಯನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ. ಸಿದ್ಧಸೂತ್ರ ಮೀರಿದ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದ ಚಯನ್, ಆಯಾ ಪಾತ್ರಗಳಿಗೆ ಸೂಟ್ ಆಗುವಂಥಾ ಕಲಾವಿದರನ್ನು ಆರಂಭದ ಹಂತದಲ್ಲಿಯೇ ನಿಕ್ಕಿಯಾಗಿಸಿಕೊಂಡಿದ್ದರು. ಹಾಗೆ ಈ ಚಿತ್ರದ ನಾಯಕಿ ಪಾತ್ರಕ್ಕೆ ಒಪ್ಪುವಂತೆ ಕಂಡಿದ್ದು ಆ್ಯಂಕರ್ ಜಾನ್ವಿ. ಹೀಗೆ ನಿರ್ದೇಶಕರ ಇಂಗಿತ ಜಾನ್ವಿಗೆ ತಲುಪಿಕೊಂಡಿದ್ದದ್ದು ಖಾಸಗಿ ವಾಹಿನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಮೂಲಕ. ಅದಕ್ಕೆ ಒಪ್ಪಿಗೆ ಸೂಚಿಸಿದ ಜಾನ್ವಿಯವರನ್ನು ನಿರ್ದೇಶಕ ಚಯನ್ ಶೆಟ್ಟಿ ಸ್ಕ್ರಿಫ್ಟ್ ಸಮೇತ ಭೇಟಿಯಾಗಿದ್ದರು.

    ಕೆಲ ಮಂದಿ ಆಯಾ ಕಲಾವಿದರನ್ನು ಅಪ್ರೋಚ್ ಮಾಡುವಾಗ ಅವರ ಪಾತ್ರವನ್ನ ಮಾತ್ರವೇ ವಿವರಿಸೋದಿದೆ. ಆದರೆ, ಚಯನ್ ಜಾನ್ವಿ ಮುಂದೆ ಒಂದಿಡೀ ಸ್ಕ್ರಿಫ್ಟ್ ಅನ್ನು ಇಂಚಿಂಚಾಗಿ ಹರವಿದ್ದರು. ಹಾಗೆ ಕಥೆ ಕೇಳಿದ ಜಾನ್ವಿಗೆ ತನ್ನ ಪಾತ್ರ ಸೇರಿದಂತೆ ಒಂದಿಡೀ ಕಥೆಯೇ ಇಷ್ಟವಾಗಿ ಒಪ್ಪಿಗೆ ಸೂಚಿಸಿದ್ದರಂತೆ. ಈ ಮೂಲಕ ಅವರು ನಾಯಕಿಯಾಗಲು ಮುಹೂರ್ತ ಕೂಡಿ ಬಂದಿತ್ತು. ವಿಶೇಷವೆಂದರೆ, ಜಾನ್ವಿ ಪಾಲಿಗೆ ಇಲ್ಲಿ ಪತ್ರಕರ್ತೆಯ ಪಾತ್ರವೇ ಒಲಿದು ಬಂದಿದೆ. ಈ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಅಖಾಡಕ್ಕಿಳಿಯೋ ಆ ಪಾತ್ರ ಎಂಬತ್ತರ ದಶಕದ ನೆರಳಿನಲ್ಲಿ ಚಲಿಸುತ್ತದೆಯಂತೆ. ಅಂದಹಾಗೆ, ಅವರಿಲ್ಲಿ ಬೃಹತಿ ಎಂಬ ಚೆಂದದ ಪಾತ್ರಕ್ಕೆ ಜೀವ ತುಂಬಿದ್ದಾರೆ.


    ಆ ನಂತರ ಕುಂದಾಪುರ, ಹೆಬ್ರಿ ಮುಂತಾದೆಡೆಗಳಲ್ಲಿ ಬಲು ಖುಷಿಯಿಂದಲೇ ಜಾನ್ವಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಒಂದು ಅಪ್ಪಟ ಸಿನಿಮಾ ವ್ಯಾಮೋಹಿಗಳ ತಂಡದ ಭಾಗವಾದ, ನಟಿಯಾಗಿ ತಮ್ಮನ್ನು ತಾವೇ ಹೊಳಪುಗಟ್ಟಿಸಿಕೊಂಡ ಬಗ್ಗೆ ಜಾನ್ವಿಗೊಂದು ತೃಪ್ತ ಭಾವವಿದೆ. ಒಂದು ಪ್ರತಿಭಾನ್ವಿತರ ತಂಡದ ಭಾಗವಾಗುವ ಅವಕಾಶ ಸಿಕ್ಕುವುದೇ ಅಪರೂಪ. ಅದು ಮೊದಲ ಹೆಜ್ಜೆಯಲ್ಲಿಯೇ ಸಾಧ್ಯವಾದ ಖುಷಿ ಜಾನ್ವಿಗಿದೆ. ಅಧಿಪತ್ರ ಎಂಬ ಟೈಟಲ್ಲಿನಲ್ಲಿಯೇ ಒಂದಿಡೀ ಕಥೆಯ ಸಾರವಿದೆ. ಅದರ ಒಂದೊಂದು ಅಕ್ಷರಕ್ಕೂ ಒಂದೊಂದು ಅರ್ಥವಿದೆ. ಅದು ಪ್ರೇಕ್ಷಕರನ್ನೆಲ್ಲ ಬೆರಗುಗೊಳಿಸೋದು ಪಕ್ಕಾ. ಒಂದು ಟೈಟಲ್ ಮೇಲೆ ಚಿತ್ರತಂಡ ವರ್ಕ್ ಮಾಡಿದ ರೀತಿಯೇ ಜಾನ್ವಿ ಅವರೊಳಗೊಂದು ಬೆರಗು ಮೂಡಿಸಿದೆಯಂತೆ.

    ಸಾಮಾನ್ಯವಾಗಿ ನಾಯಕಿ ಪಾತ್ರವೆಂದಾಕ್ಷಣ ಅದೇ ತಥಾಕಥಿತ ಲವ್ವು, ಮರ ಸುತ್ತೋದು, ಡ್ಯುಯೆಟ್‌ ಅಂತೆಲ್ಲ ಒಂದಷ್ಟು ಕಲ್ಪನೆಯಿದೆ. ಅಧಿಪತ್ರದಲ್ಲಿ ಜಾನ್ವಿಯ ಪಾತ್ರವನ್ನು ನಿರ್ದೇಶಕ ಚಯನ್ ಶೆಟ್ಟಿ ಸಿದ್ಧಸೂತ್ರದಾಚೆ ರೂಪಿಸಿದ್ದಾರಂತೆ. ಅದರ ಅಸಲಿ ಚಹರೆ ಪ್ರೇಕ್ಷಕರೆದುರು ಅನಾವರಣಗೊಳ್ಳಲು ಇದೀಗ ದಿನಗಣನೆ ಶುರುವಾಗಿದೆ. ಅಷ್ಟಕ್ಕೂ ಜಾನ್ವಿ ಸುದ್ದಿ ವಾಚಕಿಯಾಗಿದ್ದ ಕಾಲದಲ್ಲಿಯೇ ನಾಯಕಿಯಾಗೋದಕ್ಕೆ ಹಲವಾರು ಅವಕಾಶಗಳು ಬಂದಿದ್ದವಂತೆ. ಆದರೆ, ಆ ದಿನಗಳಲ್ಲಿನ ಖಾಸಗೀ ಬದುಕಿನ ಹಳವಂಡಗಳಿಂದ ಅದರತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಖುದ್ದು ಜಾನ್ವಿ ಅವರಿಗೇ ನಟಿಯಾಗಬೇಕೆಂಬ ಆಕಾಂಕ್ಷೆ ಇದ್ದದ್ದು ನಿಜ. ಆ ನಂತರ ಅದಕ್ಕಾಗಿ ತಯಾರಾದಾಗಲೂ ಕಥೆ ಮತ್ತು ಪಾತ್ರದ ಆಯ್ಕೆಯ ಬಗ್ಗೆ ಅವರೊಳಗೊಂದು ನಿಖರವಾದ ಪರಿಕಲ್ಪನೆ ಇತ್ತು. ಹಾಗೆ ಒಪ್ಪಿಗೆಯಾಗೋ ಪಾತ್ರ ಬಂದರೆ ಮಾತ್ರ ಒಪ್ಪಿಕೊಳ್ಳುವ ಗಟ್ಟಿ ನಿರ್ಧಾರ ಅವರದ್ದಾಗಿತ್ತು.

     

    View this post on Instagram

     

    A post shared by PUBLiC TV (@publictv)

    ಅಂತೂ ‘ಅಧಿಪತ್ರ’ ಚಿತ್ರದ ಮೂಲಕ ಅದು ಕೈಗೂಡಿದೆ. ಸಿನಿಮಾವನ್ನು ಧ್ಯಾನದಂತೆ ಹಚ್ಚಿಕೊಂಡಿರೋ ರೂಪೇಶ್ ಶೆಟ್ಟಿ ಜೊತೆ ನಟಿಸೋ ಅವಕಾಶ ಸಿಕ್ಕಿರೋದರ ಬಗ್ಗೆಯೂ ಜಾನ್ವಿಗೆ ಖುಷಿಯಿದೆ. ಹಿರಿಯ ಕಲಾವಿದರೊಂದಿಗೆ ನಟಿಸೋ ಅವಕಾಶ ಸಿಕ್ಕಿ, ಅದನ್ನೆ ಚೆಂದಗೆ ಬಳಸಿಕೊಂಡ ಆತ್ಮತೃಪ್ತಿಯೂ ಅವರಲ್ಲಿದೆ. ಒಟ್ಟಾರೆಯಾಗಿ ಇದುವರೆಗೂ ಸುದ್ದಿ ವಾಚಕಿಯಾಗಿ, ನಿರೂಪಕಿಯಾಗಿ, ಗಿಚ್ಚಿಗಿಲಿಗಿಲಿ ಶೋ ಮೂಲಕ ನಟಿಯಾಗಿಯೂ ಗಮನ ಸೆಳೆದಿದ್ದ ಜಾನ್ವಿ ಇದೀಗ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮುಂದಿನ ಹೆಜ್ಜೆಗಳ ಬಗ್ಗೆ ನಿಖರ ನಿರ್ಧಾರ ಹೊಂದಿರುವ ಅವರ ಪಾಲಿಗೆ ಒಳ್ಳೊಳ್ಳೆಯ ಪಾತ್ರಗಳ ಮೂಲಕ ಗುರುತಿಸಿಕೊಳ್ಳುವ ಬಯಕೆ ಇದೆ. ಅಧಿಪತ್ರದ ಪಾತ್ರ ಅದೆಲ್ಲವನ್ನು ಸಾಧ್ಯವಾಗಿಸುವಷ್ಟು ಶಕ್ತವಾಗಿದೆ ಎಂಬ ನಂಬಿಕೆಯೂ ಅವರಲ್ಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ‘ಅಧಿಪತ್ರ’ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

  • ಮಲೆನಾಡ ಹೆಬ್ಬಾಗಿಲಲ್ಲಿ ಲಾಂಚ್ ಆಯ್ತು ಅಧಿಪತ್ರ ಟ್ರೈಲರ್!

    ಮಲೆನಾಡ ಹೆಬ್ಬಾಗಿಲಲ್ಲಿ ಲಾಂಚ್ ಆಯ್ತು ಅಧಿಪತ್ರ ಟ್ರೈಲರ್!

    ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಅಧಿಪತ್ರ (Adhipatra) ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಶುಭಂ ಹೊಟೇಲಿನಲ್ಲಿ ನಡೆದ ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯಲ್ಲಿ ಈ ಬಹುನಿರೀಕ್ಷಿತ ಟ್ರೈಲರ್ ಲೋಕಾರ್ಪಣೆಗೊಂಡಿದೆ.

    ಆರಂಭದಿಂದ ಇಲ್ಲಿಯವರೆಗೂ ಟೈಟಲ್ಲು, ಭಿನ್ನ ಕಥೆಯ ಸುಳಿವಿನೊಂದಿಗೆ ಸದ್ದು ಮಾಡುತ್ತಾ ಬಂದಿದ್ದ ಈ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಒಂದು ಪತ್ರಿಕಾಗೋಷ್ಠಿಯ ಪರಿಧಿಯಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸೇರಿದ್ದ ಜನ ಮತ್ತು ಈ ಟ್ರೈಲರ್‌ಗೆ ಸಿಗುತ್ತಿರುವ ವ್ಯಾಪಕ ಮೆಚ್ಚುಗೆ ಕಂಡು ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ಮೂಡಿಕೊಂಡಿದೆ.

     

    ಶುಭಂ ಹೊಟೇಲಿನ ಸಭಾಂಗಣದಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ದಿವಾಕರ್ ಶೆಟ್ಟಿ, ರಾಜೇಶ್ ಕೀಳಂಬಿ ಅತಿಥಿಗಳಾಗಿ ಹಾಜರಿದ್ದರು. ರೂಪೇಶ್ ಶೆಟ್ಟಿ, ನಿರ್ದೇಶಕ ಚಯನ್ ಶೆಟ್ಟಿ, ನಾಯಕಿ ಜಾನ್ಹವಿ (Jhanvi) ಈ ಸಂದರ್ಭದಲ್ಲಿ ಶಿವಮೊಗ್ಗದ ಜನತೆಗೆ ಕೃತಜ್ಞತೆ ಸಲ್ಲಿಸುತ್ತಲೇ ಈ ಸಿನಿಮಾ ಕುರಿತಾದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಕಾರ್ಯಕ್ರಮಕ್ಕೆ ಇನ್ನೂರಕ್ಕೂ ಹೆಚ್ಚು ಸಿನಿಮಾ ಪ್ರೇಮಿಗಳು ಆಗಮಿಸಿ ಸಂಭ್ರಮಿಸಿದ್ದಾರೆ.

    ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಸಿನಿಮಾ ಎಂಬ ವಿಚಾರವನ್ನು ಈ ಹಿಂದೆಯೇ ಚಿತ್ರತಂಡ ಹೇಳಿಕೊಂಡಿತ್ತು. ಈ ಟ್ರೈಲರ್ ಮೂಲಕ ಒಟ್ಟಾರೆ ಕಥಾನಕದ ಓಘ ಅದೆಂಥಾದ್ದಿದೆ ಅನ್ನೋದರ ಸ್ಪಷ್ಟ ಸುಳಿವು ಸಿಕ್ಕಿದೆ. ಕಿನಾರೆ, ಅಲ್ಲಿನ ಜನಜೀವನ, ಸಂಸ್ಕೃತಿಯೊಂದಿಗೆ ಬೆರೆತುಕೊಂಡಂತಿರೋ ಥ್ರಿಲ್ಲರ್ ಕಥೆ ನೋಡುಗರನ್ನೆಲ್ಲ ಅಕ್ಷರಶಃ ಆವರಿಸಿಕೊಂಡಿದೆ. ಈ ಮೂಲಕ ಚಯನ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಮಹತ್ವದ ಕಥೆಯೊಂದಕ್ಕೆ ದೃಷ್ಯರೂಪ ನೀಡಿರೋ ಲಕ್ಷಣ ದಟ್ಟವಾಗಿದೆ. ರೂಪೇಶ್ ಶೆಟ್ಟಿ ಅವರ್ ಪಾತ್ರ, ಅದರ ಖದರ್ ಕೂಡಾ ಈ ಟ್ರೈಲರಿನ ಹೈಲೈಟುಗಳಲ್ಲೊಂದಾಗಿ ದಾಖಲಾಗುವಂತಿದೆ.

    ಇದು ಚಯನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ. ಈಗ ಬಿಡುಗಡೆಗೊಂಡಿರೋ ಟ್ರೈಲರಿನಲ್ಲಿ ಈ ಮೊದಲ ಹೆಜ್ಜೆ ಭರ್ಜರಿಯಾಗಿರೋ ಸುಳಿವು ಸಿಕ್ಕಿದೆ. ವರ್ಷಗಟ್ಟಲೆ ಶ್ರಮ ವಹಿಸಿ, ಗ್ರೌಂಡ್ ವರ್ಕ್ ಮಾಡಿಯೇ ಚಯನ್ ಈ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಬಿಗ್ ಬಾಸ್ ಶೋ ಗೆದ್ದುಕೊಂಡಿದ್ದ ರೂಪೇಶ್ ಶೆಟ್ಟಿ, ಆ ಬಳಖಿಕ ನಟಿಸಿರುವ ಮೊದಲ ಕನ್ನಡ ಚಿತ್ರ ಅಧಿಪಪತ್ರ. ಈ ಮೂಲಕ ನಿರೂಪಕಿಯಾಗಿದ್ದ ಜಾನ್ಹವಿ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಇಂಥಾದ್ದೊಂದು ಪ್ರತಿಭಾನ್ವಿತರ ತಂಡದೊಂದಿಗಿನ ಮೊದಲ ಹೆಜ್ಜೆಗಳ ಕುರಿತು ಅವರೂ ಕೂಡಾ ಭರವಸೆಯ ಮನಾತುಗಳನ್ನಾಡಿದ್ದಾರೆ.

    ಇನ್ನುಳಿದಂತೆ ಕಾಂತಾರ ಚಿತ್ರದಲ್ಲಿ ಹೆಸರುವಾಸಿಯಾಗಿದ್ದ ಕಲಾವಿದರ ದಂಡು ಅಧಿಪತ್ರದಲ್ಲಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಇದೀಗ ಟ್ರೈಲರ್ ಮೂಲಕ ಸಂಚಲನ ಸೃಷ್ಟಿಸಿರುವ ಅಧಿಪತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

     

  • ‘ಅಧಿಪತ್ರ’ ಸಿನಿಮಾದಲ್ಲಿ ರೂಪೇಶ್‌ ಶೆಟ್ಟಿಗೆ ಜಾಹ್ನವಿ ನಾಯಕಿ

    ‘ಅಧಿಪತ್ರ’ ಸಿನಿಮಾದಲ್ಲಿ ರೂಪೇಶ್‌ ಶೆಟ್ಟಿಗೆ ಜಾಹ್ನವಿ ನಾಯಕಿ

    ಬಿಗ್ ಬಾಸ್ (Bigg Boss Kannada) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಹೊಸ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಇಡಲಾಗಿದೆ.ರೂಪೇಶ್ ಜನ್ಮದಿನದ ಅಂಗವಾಗಿ ಟೈಟಲ್ ರಿವೀಲ್ ಮಾಡಲಾಗಿತ್ತು. ಟೈಟಲ್ ಮೂಲಕವೇ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಚಿತ್ರ ತಂಡ,ಇದೀಗ ಅಧಿಪತ್ರ ಅಂಗಳದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಈ ಸಿನಿಮಾ ಮೂಲಕ ಜಾಹ್ನವಿ (Jhanvi) ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ಅಧಿಪತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿ ನಟಿಸಲಿದ್ದಾರೆ.

    ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಅಧಿಪತ್ರ (Adipatra) ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಇದೇ ಆಗಸ್ಟ್ 23ರಂದು ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ.

    ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಅಧಿಪತ್ರ ಕನ್ನಡ ಸಿನಿಮಾದಲ್ಲಿ ರೂಪೇಶ್- ಜಾಹ್ನವಿ ಜೋಡಿಯಾಗಿ ನಟಿಸಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]