Tag: #JemimahRodrigues #HarmanpreetKaur #IndiaWomens #AustraliaWomens #ICCWomensWorldCup

  • ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    -‌ ಪಂದ್ಯ ಗೆಲ್ಲಿಸಿ ಮೈದಾನದಲ್ಲೇ ಕಣ್ಣೀರಿಟ್ಟ ರೋಡ್ರಿಗ್ಸ್‌

    ಮುಂಬೈ: ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನ 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ 3ನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್‌ ಫೈನಲ್ ಪ್ರವೇಶಿಸಿದೆ. 2008ರಲ್ಲಿ ಭಾರತ ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಇದೀಗ ಸೆಮಿಸ್‌ನಲ್ಲಿ ಸೋಲಿಸಿ ಆಸೀಸ್‌ ತಂಡವನ್ನ ಮನೆಗೆ ಕಳುಹಿಸಿದೆ.

    ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಇದೇ ಟೂರ್ನಿಯಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ನವೆಂಬರ್ 2ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.

    ವಿಶ್ವದಾಖಲೆಯ ಜಯ
    ಗುರುವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ ಗಳಲ್ಲಿ 338 ರನ್ ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಇನ್ನೂ 48.3 ಓವರ್‌ಗಳಲ್ಲೇ 341 ರನ್‌ ಗಳಿಸಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಚೇಸಿಂಗ್‌ ಮಾಡಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇದೀಗ ಭಾರತದ ವನಿತೆಯರ ಪಾಲಾಗಿದೆ.

    ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಆದರೆ, ಜೆಮಿಮಾ ರೊಡ್ರಿಗಸ್‌ (127*) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (89 ರನ್‌) ಅವರ 167 ರನ್‌ಗಳ ದೊಡ್ಡ ಜೊತೆಯಾಟದ ತಂಡಕ್ಕೆ ಬಲ ನೀಡಿತು.

    ಜೆಮಿಮಾ ರೋರಿಂಗ್‌ ಶತಕ
    ಭಾರತ ತಂಡ, 13 ರನ್‌ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಜೆಮಿಮಾ ರೊಡ್ರಿಗ್ಸ್‌ 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127* ರನ್‌ ಗಳಿಸಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದರು. ಅಲ್ಲದೇ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆಗೂಡಿ 167 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಇದರೊಂದಿಗೆ ದೀಪ್ತಿ ಶರ್ಮಾ 24 ರನ್‌, ರಿಚಾ ಘೋಷ್‌ 26 ರನ್‌, ಅಮನ್‌ ಜೋತ್‌ ಕೌರ್‌ 15 ರನ್‌ ಕೊಡುಗೆ ನೀಡಿದರು.

    338 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ
    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನೇ ಕಲೆ ಹಾಕಿತ್ತು. ಫೋಬೆ ಲಿಚ್‌ಫೀಲ್ಡ್‌ 119 ರನ್‌, ಎಲಿಸ್‌ ಪೆರ್ರಿ 77 ರನ್‌ ಹಾಗೂ ಆಶ್ಲೆ ಗಾರ್ಡ್ನರ್ ಸ್ಫೋಟಕ 63 ರನ್‌ಗಳ ನೆರವಿನಿಂದ ಆಸೀಸ್‌ ವನಿತಾ ತಂಡ 49.5 ಓವರ್‌ಗಳಿಗೆ 338 ರನ್‌ ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ಮಹಿಳಾ ತಂಡಕ್ಕೆ 339 ರನ್‌ಗಳ ಕಠಿಣ ಗುರಿ ನೀಡಿತ್ತು.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ
    49.5 ಓವರ್ ಗಳಲ್ಲಿ 338/10, ಲಿಚ್ ಫೀಲ್ಡ್ 119(93), ಎಸಿಸ್ ಪೆರ್ರಿ 77(88), ಆ್ಯಶ್ಲೆ ಗಾರ್ಡನರ್ 63 (45), ಶ್ರೀಚರಣಿ 49ಕ್ಕೆ 2, ದೀಪ್ತಿ ಶರ್ಮಾ 73ಕ್ಕೆ 2

    ಭಾರತ ತಂಡ
    48.3 ಓವರ್ ಗಳಲ್ಲಿ 341/1, ಜೆಮಿಮಾ ರೋಡ್ರಿಗಸ್ ಅಜೇಯ 127 (134), ಹರ್ಮನ್ ಪ್ರೀತ್ ಕೌರ್ 89(88), ಕಿಮ್ ಗರ್ಥ್ 46ಕ್ಕೆ 2, ಅನಾಬೆಲ್ ಸದರ್ ಲ್ಯಾಂಡ್ 69ಕ್ಕೆ 2