ಶ್ರೀನಗರ: ಸೇನೆಯ ಜೀಪಿನಲ್ಲಿ ಮಾನವ ಗುರಾಣಿಯಾಗಿ ಬಳಕೆಯಾಗಿದ್ದ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಆಯೋಗ ಸಂತ್ರಸ್ತ ಯುವಕ ಫಾರೂಖ್ ಅಹ್ಮದ್ ದಾರ್‍ಗೆ ಮುಂದಿನ 6 ವಾರದ ಒಳಗಡೆ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಪ್ರಕರಣದ ನಡೆದ ಬಳಿಕ ಭಾರತೀಯ ಸೇನೆ ಮಾನವ ಗುರಾಣಿಯಾಗಿ ಯುವಕನನ್ನು ಬಳಸಿದ್ದಕ್ಕೆ, ಲೀತುಲ್ ಗೊಗೋಯ್ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿತ್ತು. ಈ ಸುದ್ದಿ ಚರ್ಚೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗರಿಕರ ಜೀವ ರಕ್ಷಿಸಲು ನಾನು ಈ ಕೆಲಸ ಮಾಡಬೇಕಾಯಿತು ಎಂದು ಹೇಳಿದ್ದರು.
ಏನಿದು ಪ್ರಕರಣ?
ಬದ್ಗಾಂ ಜಿಲ್ಲೆಯ ಉಟಿಗಾಮ್ ಗ್ರಾಮದಲ್ಲಿ ಏಪ್ರಿಲ್ 19ರಂದು ಶ್ರೀನಗರ ಲೋಕಸಭೆಯ ಉಪಚುನಾವಣೆ ನಡೆಯುತಿತ್ತು. ಈ ಚುನಾವಣೆಯನ್ನು ಕಾಶ್ಮೀರ ಪ್ರತ್ಯೇಕವಾದಿಗಳು ವಿರೋಧಿಸಿದ್ದರು. ಚುನಾವಣೆಗೆ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಸುತ್ತುವರೆದು ದಾಳಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನು ರಕ್ಷಿಸಲು ಲೀತುಲ್ ಗೊಗೋಯ್ ಅವರು ಫಾರೂಖ್ ಅಹ್ಮದ್ ದಾರ್‍ನನ್ನು ಸೇನಾ ಜೀಪಿಗೆ ಕಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಸೇನಾ ಲೀತುಲ್ ಅವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ಕೋರ್ಟ್ ಕ್ಲೀನ್ ಚಿಟ್ ನೀಡಿ ಲೀತುಲ್ ಗೊಗೋಯ್ ಅವರನ್ನು ಶ್ಲಾಘಿಸಿತ್ತು.
ಕಲ್ಲು ತೂರಾಟಗಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಮಕ್ಕಳು, ಮಹಿಳೆಯರೂ ಇದ್ದರು. ನಾನು ಧ್ವನಿವರ್ಧಕದಲ್ಲಿ ಎಚ್ಚರಿಕೆ ಕೊಟ್ಟಿದ್ದರೂ ಪ್ರತಿಭಟನೆಕಾರರು ಮಣಿಯಲಿಲ್ಲ. ಹೀಗಾಗಿ ಅಲ್ಲಿದ್ದ ಚುನಾವಣಾ ಅಧಿಕಾರಿಗಳನ್ನು, ಜನರನ್ನು, ಪೊಲೀಸರನ್ನು ರಕ್ಷಿಸಲು ನಾನು ಆತನನ್ನು ಸೇನಾ ಜೀಪಿಗೆ ಕಟ್ಟಿದ್ದೆ. ಒಂದು ವೇಳೆ ನಾನು ಗೋಲಿಬಾರ್ ನಡೆಸಲು ಆದೇಶಿಸಿದ್ದರೆ 12ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಲೀತುಲ್ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
https://www.youtube.com/watch?v=IoFRCMH6Z4E
