Tag: jds

  • ಜಂತಕಲ್ ಮೈನಿಂಗ್ ಅಕ್ರಮ: ಎಚ್‍ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್

    ಜಂತಕಲ್ ಮೈನಿಂಗ್ ಅಕ್ರಮ: ಎಚ್‍ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್

    ಬೆಂಗಳೂರು: ಜಂತಕಲ್ ಎಂಟರ್‍ಪ್ರೈಸಸ್‍ಗೆ ಮೈನಿಂಗ್ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಂಧನ ಭೀತಿಯಲ್ಲಿದ್ದ  ಎಚ್ಡಿಕೆಗೆ ಸಿವಿಲ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

    ಸಿಸಿಎಚ್ 53 ಸೆಷನ್ಸ್ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತು.

    5 ಲಕ್ಷ ರೂ. ಬಾಂಡ್ ಶ್ಯೂರಿಟಿ ಇಡಬೇಕು. ದೇಶ ಬಿಟ್ಟು ಹೋಗಬಾರದು, ಸಾಕ್ಷ್ಯ ನಾಶ ಮಾಡಬಾರದು. ತನಿಖಾಧಿಕಾರಿ ತನಿಖೆಗೆ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಕೋರ್ಟ್ ಎಚ್‍ಡಿಕೆಗೆ ಷರತ್ತು ವಿಧಿಸಿದೆ.

    ಈಗಾಗಲೇ ಒಂದು ವರ್ಷದ ಹಿಂದೆ ನಿರೀಕ್ಷಣಾ ಜಾಮೀನಿನನ್ನು ಪಡೆದು ಎಸ್‍ಐಟಿ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದರು.

    ಇದೇ ಜಂತಕಲ್ ಮೈನಿಂಗ್ಸ್ ವಿಚಾರವಾಗಿ ಎರಡು ದಿನದ ಹಿಂದೆಯಷ್ಟೇ ಎಸ್‍ಐಟಿ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದ್ದು, ಒಂಭತ್ತು ಐಎಎಸ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

    ಹೆಚ್‍ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಜಂತಕಲ್ ಮೈನಿಂಗ್‍ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಸಿಎಂ ಕಚೇರಿಯಿಂದ ಒತ್ತಡ ಬಂದಿತ್ತು ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಎಸ್‍ಐಟಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಬಡೇರಿಯಾ ಹೇಳಿಕೆ ಹಿನ್ನೆಲೆಯಲ್ಲಿ ಹೆಚ್‍ಡಿ ಕುಮಾರಸ್ವಾಮಿಗೆ ನೋಟಿಸ್ ನೀಡಲು ಎಸ್‍ಐಟಿ ಸಜ್ಜಾಗಿತ್ತು.

    ಈ ಬಗ್ಗೆ ಯಾದಗಿರಿಯಲ್ಲಿ ಮಾತಾಡಿದ ಕುಮಾರಸ್ವಾಮಿ, ಜಂತಕಲ್ ಮೈನಿಂಗ್ ವಿಚಾರವಾಗಿ ಯಾವುದೇ ತಪ್ಪು ಮಾಡಿಲ್ಲ ಅಂದ್ರು. ಮಾಡದ ತಪ್ಪಿಗೆ ಹೆದರುವ ಅವಶ್ಯಕತೆ ಇಲ್ಲ. ಇದು ಕೆಲವರ ಹುನ್ನಾರ ಅಷ್ಟೇ. ಇದಕ್ಕೆಲ್ಲ ನಾನು ಬಗ್ಗಲ್ಲ ಅಂದ್ರು. ಇದೇ ವೇಳೆ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂತಾ ಹೇಳಿದ್ರು.

    ಏನಿದು ಜಂತಕಲ್ ಮೈನಿಂಗ್ ಪ್ರಕರಣ?
    ಚಿತ್ರದುರ್ಗ ಜಿಲ್ಲೆಯ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಲು ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್‍ಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ಸಾಗಿಸಿ ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಗಣಿ ಗುತ್ತಿಗೆ ಮಾಡಿದ ಪರಿಣಾಮ ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು. ಜಂತಕಲ್ ಮೈನಿಂಗ್ ಪರವನಾಗಿ ನೀಡುವ ವಿಚಾರದಲ್ಲಿ ಬಡೇರಿಯಾ ಅವರು ವಿನೋದ್ ಗೋಯಲ್ ಸಹಾಯ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ವೇಳೆ ಬಡೇರಿಯಾ ಮಗನ ಖಾತೆಗೆ ವಿನೋದ್ ಗೋಯಲ್ 10 ಲಕ್ಷ ರೂ. ಹಣ ಹಾಕಿದ್ದ ವಿಚಾರ ಬೆಳಕಿಗೆ ಬಂದಿತ್ತು. ಮಗನ ಅಕೌಂಟ್ ಪರಿಶೀಲನೆ ಮಾಡಿದಾಗ ಬಡೇರಿಯಾ ರೆಡ್‍ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಈ ಹಿಂದೆ ಮೂರು ಬಾರಿ ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದ ಬಡೇರಿಯಾ ನಾಲ್ಕನೇಯ ಬಾರಿಯ ವಿಚಾರಣೆ ವೇಳೆ ಅರೆಸ್ಟ್ ಆಗಿದ್ದಾರೆ.

    ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‍ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ಸುಪ್ರೀಂ ತಡೆಯಾಜ್ಞೆ ನೀಡಿದೆ.

    ಇದನ್ನೂ ಓದಿ: ಜಂತಕಲ್ ಮೈನಿಂಗ್ ಪ್ರಕರಣ ರಾಜಕೀಯ ಪ್ರೇರಿತ: ಹೆಚ್‍ಡಿಕೆ

     

  • ಮುಸ್ಲಿಮ್ ಆಯ್ತು, ಈಗ ಬ್ರಾಹ್ಮಣರ ವೋಟ್‍ಬ್ಯಾಂಕಿಗೆ ಕೈ ಹಾಕಿದ ಜೆಡಿಎಸ್

    ಮುಸ್ಲಿಮ್ ಆಯ್ತು, ಈಗ ಬ್ರಾಹ್ಮಣರ ವೋಟ್‍ಬ್ಯಾಂಕಿಗೆ ಕೈ ಹಾಕಿದ ಜೆಡಿಎಸ್

    ಬೆಂಗಳೂರು: ಎಲೆಕ್ಷನ್‍ಗೆ ಭರ್ಜರಿಯಾಗಿ ರೆಡಿಯಾಗ್ತಿರೋ ಜೆಡಿಎಸ್, ಮುಸ್ಲಿಮರ ಬಳಿಕ ಈಗ ಬ್ರಾಹ್ಮಣರ ವೋಟ್‍ಬ್ಯಾಂಕ್‍ಗೆ ಕೈ ಹಾಕಿದೆ. ಈ ಹಿನ್ನಲೆಯಲ್ಲಿ ಇಂದು ಎಚ್‍ಡಿ ಕುಮಾರಸ್ವಾಮಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಅಯ್ಯಂಗಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ರು.

    ಮಲ್ಲೇಶ್ವರಂ ವೈಯಾಲಿಕಾವಲ್ ನಲ್ಲಿರುವ ಪ್ರಕಾಶ್ ಅಯ್ಯಂಗಾರ್ ನಿವಾಸದಲ್ಲಿ ಸುಮಾರು 45 ನಿಮಿಷಕ್ಕೂ ಹೆಚ್ಚಿನ ಕಾಲ ಮಾತುಕತೆ ನಡೆಸಿದ್ರು. ಭೇಟಿ ಬಳಿಕ ಮಾತನಾಡಿದ ಎಚ್‍ಡಿಕೆ ಇದೊಂದು ಸೌಹಾರ್ದಯುತ ಭೇಟಿ. ಪ್ರಕಾಶ್ ಅಯ್ಯಂಗಾರ್ ನನ್ನ ಹಳೆಯ ಸ್ನೇಹಿತರು. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪಕ್ಷಕ್ಕೆ ಸಹಕಾರವನ್ನೂ ಕೇಳಿದ್ದೇನೆ. ಪಕ್ಷಕ್ಕೆ ಸೇರ್ಪಡೆ ವಿಚಾರ ಸಮಾಜದವರ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು ಎಂದರು.

    ಕೈ, ಬಿಜೆಪಿ ವಿರುದ್ಧ ವಾಗ್ದಾಳಿ: ಬಿಜೆಪಿಯಂತೆ ಚಾರ್ಜ್ ಶೀಟ್ ಬಿಡುಗಡೆ ಮಾಡುವ ಹವ್ಯಾಸ ನಮ್ಮಲ್ಲಿ ಇಲ್ಲ. ಚಾರ್ಜ್ ಶೀಟ್ ಪದ ಬಿಜೆಪಿಯವರಿಗೆ ಬಹಳ ಪ್ರಿಯ. ರಾಜ್ಯದಲ್ಲಿ ಭ್ರಷ್ಟಾಚಾರದ ನಿರ್ಮಾತೃ ಯಡಿಯೂರಪ್ಪ. ಈ ಮಾತನ್ನು 2013 ರಲ್ಲಿ ಸದಾನಂದ ಗೌಡರೇ ಬೆಳಗಾವಿಯಲ್ಲಿ ಹೇಳಿದ್ರು. ಈಗ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ನೈತಿಕತೆ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ಶನಿವಾರ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಸಿಎಂ ಸಿದ್ದರಾಮಯ್ಯನವರಿಗಿಲ್ಲ. ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು? ಇವಾಗ ಟನಲ್ ರೋಡ್ ಮಾರ್ಗದ ಬಗ್ಗೆ ಸರ್ಕಾರ ಮಾತ್ನಾಡುತ್ತಿದೆ. ಟನಲ್ ರೋಡ್ ನನ್ನ ಅವಧಿಯಲ್ಲಿ 800 ಕೋಟಿಗೆ ಎಂಓಯು ಆಗಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಇದೀಗ ಅದೇ ರೋಡ್ ಯೋಜನೆಗೆ 3500 ಕೋಟಿ ಒಪ್ಪಂದ ಮಾಡಿಕೊಂಡಿದೆ. ಇದು ಭ್ರಷ್ಟರ ಹಿತ ಸರ್ಕಾರ ಮಾಡುತ್ತಿರುವ ಕೆಲಸ ಎಂದು ಆರೋಪಿಸಿದರು.

    ಪೊಲೀಸ್ ಇಲಾಖೆ ದರೋಡೆಕೋರ ಇಲಾಖೆ ಆಗಿದೆ. ಲಾಟರಿ ಮತ್ತು ಬೆಟ್ಟಿಂಗ್ ದಂಧೆಯಿಂದಾಗಿ ಅದೆಷ್ಟೋ ಮನೆಗಳು ಹಾಳಾಗಿವೆ. ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ರಂತವರು ಬೆಟ್ಟಿಂಗ್ ದಂಧೆಗೆ ಬಲಿಯಾದ್ರು ಇದೆಲ್ಲ ಸಿದ್ದರಾಮಯ್ಯ ಸರ್ಕಾರದ ನಾಲ್ಕು ವರ್ಷ ಸಾಧನೆ ಎಂದು ಆರೋಪಿಸಿದರು.

  • ನಾನು ಯಾವ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿಲ್ಲ: ಎಚ್‍ಡಿಕೆ ಸ್ಪಷ್ಟನೆ

    ನಾನು ಯಾವ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿಲ್ಲ: ಎಚ್‍ಡಿಕೆ ಸ್ಪಷ್ಟನೆ

    ಮೈಸೂರು: ನಾನು ಯಾವ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಕಾರ್ಯಕರ್ತನ ಮೇಲೆ ಕಪಾಳ ಮೋಕ್ಷ ಮಾಡಿಲ್ಲ. ಬದಲಿಗೆ ಕಾರ್ಯಕರ್ತನನ್ನ ಮೇಲೆತ್ತಿ ಬುದ್ಧಿ ಹೇಳಿದೆ ಅಷ್ಟೇ. ನಾನು ಎಂದಿಗೂ ಕಾರ್ಯಕರ್ತರ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು.

    ಪ್ರೇಮ್ ಕುಮಾರ್ ಅವರು ಅವರು ಕಾಲಿಗೆ ಬಿದ್ದು ಟಿಕೆಟ್ ಕೇಳಿದರು. ನಾನೇನು ಬಿ.ಫಾರಂ ನೀಡಲು ಬಂದಿಲ್ಲ ಅಂತ ಬುದ್ಧಿ ಹೇಳಿದ್ದೇನೆ. ಅವರೆಲ್ಲರೂ ನನ್ನ ಪರಿಚಿತ ಕಾರ್ಯಕರ್ತರು. ಗಲಾಟೆ ಗೊಂದಲ ಏನೂ ಆಗಿಲ್ಲ. ಟಿಕೆಟ್ ಕೇಳುವ ಉತ್ಸಹದಿಂದ ಈ ಘಟನೆ ಆಗಿದೆ. ಕಪಾಳಮೋಕ್ಷ ಮಾಡುವಂತ ಯಾವ ಘಟನೆಯೂ ಅಲ್ಲಿ ಆಗಿಲ್ಲ. ಇಂತಹ ಘಟನೆಯಿಂದ ಪಕ್ಷ ಸಂಘಟನೆಗೆ ಸಮಸ್ಯೆ ಆಗುವುದಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.

    ನಡೆದಿದ್ದು ಏನು? ಸಾರಾ ಕನ್ವೆನ್ಷನ್ ಹಾಲ್ ನಲ್ಲಿ ಇಂದು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಹೆಚ್‍ಡಿಕೆ ಸಮ್ಮುಖದಲ್ಲಿ ಹುಣಸೂರು ಕ್ಷೇತ್ರದಿಂದ ಜಿ.ಟಿ.ದೇವೆಗೌಡ ಪುತ್ರ ಹರೀಶ್‍ಗೌಡಗೆ ಟಿಕೆಟ್ ನೀಡುವಂತೆ ಏರುಧ್ವನಿಯಲ್ಲಿ ಕಾರ್ಯಕರ್ತರು ಕೂಗಾಡಿದ್ದರು. ಈ ಕೂಗಾಟದಿಂದಾಗಿ ಕೆಲ ಕಾಲ ಅಲ್ಲಿ ಗೊಂದಲ ಉಂಟಾಗಿತ್ತು.

    ನಾನು ಉದ್ವೇಗದಲ್ಲಿದ್ದೆ:
    ಈ ಘಟನೆಯ ಬಳಿಕ ಮೈಸೂರಿನ ಜಯನಗರದಲ್ಲಿ ಕುಮಾರಸ್ವಾಮಿ ಅವರನ್ನು ಪ್ರೇಮ್ ಕುಮಾರ್ ಭೇಟಿಯಾಗಿದ್ದರು. ಪ್ರೇಮ್ ಕುಮಾರ್ ರನ್ನ ಪಕ್ಕದಲ್ಲೇ ಕುರಿಸಿಕೊಂಡು ಹೆಚ್‍ಡಿಕೆ ಮಾತನಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್ ಕುಮಾರ್, ಹೆಚ್‍ಡಿಕೆ ನನ್ನ ಮೇಲೆ ಕಪಾಳ ಮೋಕ್ಷ ಮಾಡಿಲ್ಲ. ನಾನು ಜಿಟಿಡಿ ಪುತ್ರನಿಗೆ ಟಿಕೆಟ್ ಕೇಳಿದ್ದು ನಿಜ. ನಂತರ ಟಿಕೆಟ್ ಬಗ್ಗೆ ಈಗಲೇ ಚರ್ಚಿಸಿಲ್ಲ ಅಂತ ಹೇಳಿ ಮನವರಿಕೆ ಮಾಡಿಕೊಟ್ಟರು. ಉದ್ವೇಗದಲ್ಲಿದ್ದ ನನ್ನನ್ನು ಕುಮಾರಣ್ಣ ಸಮಾಧಾನ ಮಾಡಿದರು.ಅವರು ಯಾವುದೇ ಕಾರಣಕ್ಕೂ ನನಗೆ ಕಪಾಳ ಮೋಕ್ಷ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

    https://www.youtube.com/watch?v=KRK00gFekaM

  • ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ತಾಯಿ-ಮಗುವಿನ ಆರೈಕೆಗೆ ಇಷ್ಟು ಹಣ- ಹೆಚ್‍ಡಿಕೆಯಿಂದ ಬಂಪರ್ ಆಫರ್

    ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ತಾಯಿ-ಮಗುವಿನ ಆರೈಕೆಗೆ ಇಷ್ಟು ಹಣ- ಹೆಚ್‍ಡಿಕೆಯಿಂದ ಬಂಪರ್ ಆಫರ್

    ರಾಯಚೂರು: ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಾಯಿ ಮಗುವಿನ ಆರೈಕೆಗೆ ಪ್ರತಿ ತಿಂಗಳು ಆರು ಸಾವಿರದಂತೆ ಆರು ತಿಂಗಳಿಗೆ 36 ಸಾವಿರ ರೂಪಾಯಿ ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ರಾಯಚೂರಿನ ದೇವದುರ್ಗದ ಅರಕೇರಾದಲ್ಲಿ ಬಿಜೆಪಿ ಜಿ.ಪಂ ಸದಸ್ಯ ವೆಂಕಟೇಶ್ ಪೂಜಾರಿ ಕುಟುಂಬದಿಂದ ಏರ್ಪಡಿಸಿದ್ದ 125 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸುಳ್ಳು, ಸಿಎಂ ಕಚೇರಿಯಿಂದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್, ಬಿಜೆಪಿ ಜೊತೆ ಮೈತ್ರಿ ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಅಂದ್ರು.

    ಬರಗಾಲ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣ ಸೋತಿದೆ. ಅವೈಜ್ಞಾನಿಕ ಮಾರ್ಗದರ್ಶಿ ಸೂಚನೆಗಳಿಂದ ಸರ್ಕಾರ ಹಗಲುದರೋಡೆ ನಡೆಸಿದೆ. ಕೃಷ್ಣ ಬಿ ಸ್ಕೀಮ್ ನ 170 ಟಿಎಂಸಿ ನೀರು ಸದ್ಬಳಕೆಯಾಗುತ್ತಿಲ್ಲ. ಕೃಷ್ಣಾ ಕಣಿವೆ ಯೋಜನೆಯ 40 ಸಾವಿರ ಕೋಟಿ ರೂಪಾಯಿ ಗುಣಾತ್ಮಕವಾಗಿ ಬಳಕೆಯಾಗದೇ ಹಣ ಪೋಲಾಗಿದೆ ಅಂತ ಹೆಚ್‍ಡಿಕೆ ಆರೋಪಿಸಿದ್ರು.

     

  • ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

    ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

    ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡೋ ವಿಚಾರವಾಗಿ ಹೆಚ್‍ಡಿ ದೇವೇಗೌಡ ಹಾಗೂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ರೇವಣ್ಣ, ನಾವೇನು ನಾಮನಿರ್ದೇಶನ ಮಾಡಿ, ಹಿಂಬಾಗಿಲ ರಾಜಕಾರಣಕ್ಕೆ ಪ್ರವೇಶ ಬಯಸಿಲ್ಲ. ಪ್ರಜ್ವಲ್ ಜೆಡಿಎಸ್ ಕಾರ್ಯಕರ್ತ. ಕ್ಷೇತ್ರದಲ್ಲಿ ದುಡಿತಾ ಇದ್ದಾನೆ, ದುಡಿಯಲಿ. ಪ್ರಜ್ವಲ್‍ಗೆ ದೇವೇಗೌಡ, ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ. ಟಿಕೆಟ್ ಕೊಡ್ಬೇಕಾ, ಬೇಡ್ವಾ ಅಂತಾ ಕೋರ್ ಕಮಿಟಿ ತೀರ್ಮಾನ ಮಾಡುತ್ತೆ ಅಂತ ಹೇಳಿದ್ರು.

    ಇನ್ನು ಮಾಜಿ ಪ್ರಧಾನಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ದೇವೇಗೌಡ ಮಾತನಾಡಿ, ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ನಿಲ್ತಾರೆ ಅನ್ನೋದೆ ದೊಡ್ಡ ಚರ್ಚೆ ಆಗಿದೆ. ಅದನ್ನ ಮನೆಯ ಯಜಮಾನನಾಗಿ ತೀರ್ಮಾನ ಮಾಡೋನು ನಾನು. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಅಂದ್ರು.

    ರೇವಣ್ಣ ತಂದೆ ವಿರುದ್ಧ ಹೋಗಲ್ಲ. ಕುಮಾರಸ್ವಾಮಿ ನನ್ನ ಮಾತು ಮೀರಲ್ಲ. ರೇವಣ್ಣ ಕುಮಾರಸ್ವಾಮಿ ವಿರುದ್ಧ ಹೋಗ್ತಿದ್ದಾರೆ ಅನ್ನೋದು ಸುಳ್ಳು. ಕುಟುಂಬದ ಯಜಮಾನನಾಗಿ ಅಂತಿಮವಾಗಿ ತೀರ್ಮಾನ ಮಾಡುವುದು ನಾನೇ. ಕಾಂಗ್ರೆಸ್-ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಾಜ್ಯ ಅಭಿವೃದ್ಧಿಯಾಗಬೇಕಾದ್ರೆ ಜೆಡಿಎಸ್‍ಗೆ ಪೂರ್ಣ ಬಹುಮತ ನೀಡಬೇಕು ಅಂತ ಹೇಳಿದ್ರು.

  • ರಾಷ್ಟ್ರಪತಿ ರೇಸಲ್ಲಿ ಮಣ್ಣಿನ ಮಗ ದೇವೇಗೌಡ್ರ ಹೆಸರು- ಗೌಡ್ರಿಗೆ ಒಲಿಯುತ್ತಾ ಪ್ರಥಮ ಪ್ರಜೆ ಪಟ್ಟ?

    ರಾಷ್ಟ್ರಪತಿ ರೇಸಲ್ಲಿ ಮಣ್ಣಿನ ಮಗ ದೇವೇಗೌಡ್ರ ಹೆಸರು- ಗೌಡ್ರಿಗೆ ಒಲಿಯುತ್ತಾ ಪ್ರಥಮ ಪ್ರಜೆ ಪಟ್ಟ?

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರಿಗೆ ರಾಷ್ಟ್ರಪತಿ ಹುದ್ದೆ ಒಲಿದು ಬರುತ್ತಾ? ಇಂತಹ ಒಂದು ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಎನ್‍ಡಿಎ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರನ್ನ ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂಬ ಸುದ್ದಿ ದೆಹಲಿ ಮಟ್ಟದಲ್ಲಿ ವ್ಯಾಪಕವಾಗಿದೆ.

    ಇಂತಹ ಒಂದು ಸುದ್ದಿ ಹಿಂದೊಮ್ಮೆ ಬಂದಾಗ ದೇವೇಗೌಡರು ರಾಷ್ಟ್ರಪತಿ ಅಭ್ಯರ್ಥಿ ಆಗುವ ಸಾಧ್ಯತೆಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ರು. ಹಾಗಿದ್ದರೂ ಕೂಡ ದೇವೇಗೌಡರನ್ನ ಎನ್‍ಡಿಎ ವಿರುದ್ಧ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಶಯವನ್ನ ಬಿಜೆಪಿ ವಿರೋಧಿ ಗುಂಪು ರಾಷ್ಟ್ರಮಟ್ಟದಲ್ಲಿ ವ್ಯಕ್ತಪಡಿಸುತ್ತಿದೆ. ದೇವೇಗೌಡರು ಒಪ್ಪದಿದ್ದರೆ ಜೆಡಿಯು ಮುಖಂಡ ಶರದ್ ಯಾದವ್‍ರನ್ನ ಕಣಕ್ಕಿಳಿಸುವ ಸಾಧ್ಯತೆಯಿದೆ.

    ಈ ಬಗ್ಗೆ ಈಗಾಗಲೇ ಎಡರಂಗ ಹಾಗೂ ಜನತಾ ಪರಿವಾರದ ಮುಖಂಡರು ಸೋನಿಯಾ ಗಾಂಧಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಒಪ್ಪಿದ್ರೆ ಅವರನ್ನೇ ಅಭ್ಯರ್ಥಿಯಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

  • ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30ಕ್ಕೇರಲಿ ಸಮಸ್ಯೆಯಿಲ್ಲ: ಎಚ್‍ಡಿಕೆ

    ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30ಕ್ಕೇರಲಿ ಸಮಸ್ಯೆಯಿಲ್ಲ: ಎಚ್‍ಡಿಕೆ

    ತುಮಕೂರು: ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30 ಕ್ಕೆ ಏರಲಿ ಸಮಸ್ಯೆಯಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟಾಂಗ್ ಜಮೀರ್ ಅಹಮದ್‍ಗೆ ಟಾಂಗ್ ನೀಡಿದ್ದಾರೆ.

    ಇಂದು ಸಿ.ಎಸ್ ಪುರದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರಮುಖ ನಾಯಕರು ಜೆಡಿಎಸ್ ಸೇರಲಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಎಚ್. ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕಾಂಗ್ರೆಸ್ ನಲ್ಲಿ ವಿಶ್ವನಾಥ್ ಸೇರಿದ್ದಂತೆ ಹಿರಿಯ ಮುಖಂಡರು ಮೂಲೆ ಗುಂಪಾಗುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

    ಮೈಸೂರಿನ ಮಾಜಿ ಸಂಸದ ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ಸೇರ್ಪಡೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅವರು ಈವರೆಗೂ ನನ್ನನ್ನು ಭೇಟಿ ಮಾಡಿಲ್ಲ, ಈ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

    ಶಾಸಕ ಎಂ.ಟಿ ಕೃಷ್ಣಪ್ಪ ಅವರು ಆಯೋಜಿಸಿದ ಈ ಕಾರ್ಯಕ್ರಮ 11.30 ಪ್ರಾರಂಭವಾಗಬೇಕಿತ್ತು. ಆದರೆ 3 ಗಂಟೆ ತಡವಾಗಿ ಆರಂಭವಾಗಿತ್ತು. ಇದರಿಂದ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದ ಜನ ಮಜ್ಜಿಗೆಗೆ ಮುಗಿಬಿದ್ದಿದ್ದರು. ಬಿಸಿಲ ಬೇಗೆ ತಡೆಯಲಾರದೆ ಕಿತ್ತಾಡಿಕೊಂಡು ಜನ ಮಜ್ಜಿಗೆ ಪಡೆದರು.

    ಜಮೀರ್ ಅಹ್ಮದ್ ಏನ್ ಹೇಳಿದ್ರು?: ನಾವು ಇರುವುದು ಏಳು ಜನರಲ್ಲ 15 ಜನರಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಶಾಸಕರು ನಾವು 15 ಜನ ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ 120 ಸ್ಥಾನಗಳನ್ನು ಗೆದ್ದರೆ ತಾವು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳುವುದಲ್ಲದೇ ರಾಜ್ಯವನ್ನೇ ತೊರೆಯುತ್ತೇವೆ. ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಂಡ್ರೂ ನಾವು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲವೆಂದು ಜಮೀರ್ ಅಹಮದ್ ಹೇಳಿದ್ದರು.

  • ‘ಕೈ’ ನಿಂದ ನಮ್ಗೆ ಟಿಕೆಟ್, ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ: ಜಮೀರ್ ಅಹಮದ್

    ‘ಕೈ’ ನಿಂದ ನಮ್ಗೆ ಟಿಕೆಟ್, ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ: ಜಮೀರ್ ಅಹಮದ್

    ರಾಮನಗರ: ನಾವು ಇರುವುದು ಏಳು ಜನರಲ್ಲ 14 ಜನರಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ ಎಂದು ಜೆಡಿಎಸ್‍ನ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.

    ಜಿಲ್ಲೆಯ ಮಾಗಡಿಯಲ್ಲಿ ಇಂದು ನಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರ 110ನೇ ಗುರುವಂದನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು ನಾವು 15 ಜನ ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ 120 ಸ್ಥಾನಗಳನ್ನು ಗೆದ್ದರೆ ತಾವು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳುವುದಲ್ಲದೇ ರಾಜ್ಯವನ್ನೇ ತೊರೆಯುವುದಾಗಿ ಅವರು ತಿಳಿಸಿದರು.

    ಇನ್ನೂ ತಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಂಡ್ರೂ ನಾವು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲವೆಂದು ಜಮೀರ್ ಅಹಮದ್ ಹೇಳಿದರು.

     

  • ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

    ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

    ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತದ ಗುರಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಪ್ರಾದೇಶಿಕ ಪಕ್ಷ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ.

    ಪ್ರಾದೇಶಿಕ ಪಕ್ಷ ಮುಕ್ತ ಭಾರತದ ಮೊದಲ ಹೆಜ್ಜೆಯಾಗಿ ಒಡಿಶಾದಲ್ಲಿ ಭುವನೇಶ್ವರದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿಯನ್ನು ಆಯೋಜನೆ ಮಾಡಲಾಗಿತ್ತು ಎನ್ನುವ ವಿಚಾರ ಈಗ ತಿಳಿದು ಬಂದಿದೆ.

    ‘ನರೇಂದ್ರ ಮೋದಿ, ದಿ ಮ್ಯಾನ್ ದಿ ಟೈಮ್ಸ್’ ಪುಸ್ತಕ ಬರೆದ ನೀಲಾಂಜನ್ ಮುಖ್ಯೋಪಾಧ್ಯಯ್ ಈ ಎಕಾನಮಿಕ್ ಟೈಮ್ಸ್ ನಲ್ಲಿ ಈ ವಿಚಾರದ ಬಗ್ಗೆ ಬರೆದಿದ್ದಾರೆ. ಭುವನೇಶ್ವರದಲ್ಲಿ ಬಿಜೆಪಿ ತಳಮಟ್ಟದಲ್ಲಿ ಹೇಗೆ ಸಂಘಟನೆಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದೆ ಎಂದು ಅವರು ಬರಹದಲ್ಲಿ ತಿಳಿಸಿದ್ದಾರೆ.

    ಪಿ2ಪಿ ಟಾರ್ಗೆಟ್: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸುವರ್ಣಯುಗ ಆಗುವುದಿಲ್ಲ. ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕಾದರೆ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಪಿ2ಪಿ (ಪಂಚಾಯತ್ ಟು ಪಾರ್ಲಿಮೆಂಟ್) ಗುರಿಯನ್ನು ಹಾಕಿ ಯಶಸ್ವಿಯಾದಾಗ ಮಾತ್ರ ಬಿಜೆಪಿಯ ಸುವರ್ಣಯುಗವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಗಳ ನಾಯಕರ ಗಮನಹರಿಸಬೇಕೆಂದು ಅಮಿತ್ ಶಾ ಕಾರ್ಯಕಾರಣಿಯಲ್ಲಿ ಹೇಳಿದ್ದಾರೆ.

    ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಈಗ ಬಿಜೆಪಿ ಪಿ2ಪಿ ಗುರಿಯನ್ನು ಹಾಕಿಕೊಂಡಿದೆ.

    ಒಡಿಶಾ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಈಶಾನ್ಯದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆ ನಿಂತಿರುವ ಪರಿಣಾಮ ಸರ್ಕಾರದ ಮಸೂದೆಗಳಿಗೆ ಈ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಯಲ್ಲಿ ಮುಂದೆ ಅಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲೂ ಹೆಚ್ಚಿನ ಸ್ಥಾನವನ್ನು ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಸಂಘಟನೆಯ ವೇಳೆ ಈ ಹಿಂದಿನ ಹಿಂದುತ್ವ ಪ್ರಚಾರ ತಂತ್ರ ಮತ್ತು ಕೇಂದ್ರದ ಅಭಿವೃದ್ಧಿ ವಿಚಾರ, ಬಡವರ ಪರ ಪಕ್ಷ ಇದೆ ಎನ್ನುವುದನ್ನು ಬಿಂಬಿಸಿ ಈ ಎರಡು ವಿಚಾರಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕೆಂದು ನಾಯಕರಿಗೆ ತಿಳಿಸಲಾಗಿದೆ ಎಂದು ನೀಲಾಂಜನ್ ಮುಖ್ಯೋಪಾಧ್ಯಯ್ ತಮ್ಮ ಬರಹದಲ್ಲಿ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಆಗುತ್ತಾ?
    ನರೇಂದ್ರ ಮೋದಿ, ಅಮಿತ್ ಶಾ ಅವರ ಅಶ್ವಮೇಧದ ವಿಜಯದ ಕುದುರೆಯ ಆಟ ಕರ್ನಾಟಕದಲ್ಲಿ ನಡೆಯಲ್ಲ. ಈ ಕುದುರೆಯನ್ನು ಕರ್ನಾಟಕದಲ್ಲಿ ಜೆಡಿಎಸ್ ಕಟ್ಟಿಹಾಕುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ? ಸರ್ಕಾರ ರಚನೆ ಮಾಡುತ್ತಾ? ಅಥವಾ ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೋಡಿಸುತ್ತಾ? ಬಿಜೆಪಿ ಪ್ರಾದೇಶಿಕ ಪಕ್ಷ ಮುಕ್ತ ಭಾರತ ಕರ್ನಾಟಕದಲ್ಲಿ ಆಗುತ್ತಾ ಎನ್ನುವ ಪ್ರಶ್ನೆಗಳಿಗೆ 2018ರ ವಿಧಾನಸಭೆ ಚುನಾವಣೆಯ ಫಲಿತಾಂಶ ಉತ್ತರ ನೀಡಲಿದೆ.

    ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

  • ನಮ್ಮಪ್ಪನ ಬಗ್ಗೆ ನಿಮ್ಮ ತಂದೆ ಬಳಿ ಕೇಳಿ- ಓಮರ್ ಅಬ್ದುಲ್ಲಾಗೆ ಹೆಚ್‍ಡಿಕೆ ಟಾಂಗ್

    ನಮ್ಮಪ್ಪನ ಬಗ್ಗೆ ನಿಮ್ಮ ತಂದೆ ಬಳಿ ಕೇಳಿ- ಓಮರ್ ಅಬ್ದುಲ್ಲಾಗೆ ಹೆಚ್‍ಡಿಕೆ ಟಾಂಗ್

    ಉಡುಪಿ: ನನ್ನ ತಂದೆ ಪ್ರಧಾನಿಯಾಗಿದ್ದಾಗ ಏನು ಮಾಡಿದ್ದಾರೆ ಅಂತ ನಿಮ್ಮ ಅಪ್ಪನ ಬಳಿ ಕೇಳು ಅಂತ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾಗೆ ಟಾಂಗ್ ನೀಡಿದ್ದಾರೆ.

    ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸೋಮವಾರದಂದು ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು, ದೇವೇಗೌಡರು 10 ತಿಂಗಳು ಪ್ರಧಾನಿಯಾಗಿದ್ದಾಗ ಏನು ಕೆಲಸ ಮಾಡಿದ್ದಾರೆ ಎಂದು ಫರೂಕ್ ಅಬ್ದುಲ್ಲಾ ಅವರಲ್ಲಿ ಕೇಳಿ ಎಂದು ಪ್ರತ್ಯುತ್ತರ ನೀಡಿದರು.

    ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅಂದಿನ ಪ್ರಧಾನಿ ದೇವೇಗೌಡರೇ ಕಾರಣ. ಗೌಡ್ರು ಅಧಿಕಾರದಲ್ಲಿದ್ದಾಗ ಅಬ್ದುಲ್ಲಾ ವಿದೇಶಕ್ಕೆ ಹೋಗಿದ್ದರು. ಏನೇನೂ ಗೊತ್ತಿಲ್ಲದವರು ಮಾತನಾಡಿದ್ರೆ ಹೀಗೇ ಆಗೋದು ಎಂದು ಹೇಳಿದರು.

    ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಯೋಗೇಶ್ , ಮಹಿಳಾ ವಿಭಾಗದ ಅಧ್ಯಕ್ಷರಾದ ಶಾಲಿನಿ ಶೆಟ್ಟಿ ಕೆಂಚನೂರು ಸೇರಿದಂತೆ ಹತ್ತಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಆಂಗ್ಲ ಮಾಧ್ಯಮವೊಂದು ಕುಲಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನಿಂದ ಪರ್ವೇಜ್ ಮುಷರಫ್ ಅವರನ್ನ ಸಂದರ್ಶನ ಮಾಡಿತ್ತು. ಇದಕ್ಕೆ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಈ ವಿಚಾರದ ಬಗ್ಗೆ ಮಾತನಾಡಲು ಪರ್ವೇಜ್ ಮುಷರಫ್ ಅವರನ್ನ ಕೂರಿಸಿಕೊಳ್ಳಬೇಕಿತ್ತಾ? ಕುಲಭೂಷಣ್ ಬಗ್ಗೆ ಮುಷರಫ್ ಮಾತನಾಡೋದೂ ಒಂದೇ, ಅಭಿವೃದ್ಧಿ ಬಗ್ಗೆ ದೇವೇಗೌಡರನ್ನ ಕೇಳೋದೂ ಒಂದೇ ಅಂತಾ ಅವಹೇಳನ ಮಾಡಿದ್ದರು.