ಶಿವಮೊಗ್ಗ: ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಕ್ರಷರ್ ದುರಂತಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಜೆಡಿಎಸ್ ಮುಖಂಡ ನರಸಿಂಹರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿನ್ನೆ ರಾತ್ರಿ ಹುಣಸೋಡು ಗ್ರಾಮದಲ್ಲಿ ಒಂದು ಲಾರಿಯಲ್ಲಿ ತಂದಿಟ್ಟುಕೊಂಡಿದ್ದ ಸುಮಾರು 50 ಡಬ್ಬಗಳಲ್ಲಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಇದೀಗ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಜೆಡಿಎಸ್ ಮುಖಂಡ ನರಸಿಂಹ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಗಣಿಗಾರಿಕೆಯಲ್ಲಿ ನರಸಿಂಹರವರ ಪಾಲುದಾರಕೆ ಇದೆಯಾ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಶಿವಮೊಗ್ಗ ಕ್ರಷರ್ ದುರಂತಕ್ಕೂ ರಾಜಕೀಯಕ್ಕೂ ನಂಟು ಇದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಅಲ್ಲದೆ ದುರಂತಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಣಿಗಾರಿಕೆಗೆ ಭೂಮಿ ಕೊಟ್ಟಿರುವ ಅನಿಲ್ ಕುಲಕರ್ಣಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗುರುವಾರ ರಾತ್ರಿ ನಡೆದ ಸುಮಾರು 15 ಮಂದಿ ಮೃತ ಪಟ್ಟಿದ್ದು, ದುರಂತದಲ್ಲಿ ಕಾರ್ಮಿಕರ ದೇಹಗಳು ಛಿದ್ರಛಿದ್ರವಾಗಿದೆ. ಅವರಲ್ಲಿ ಬೆಳಗ್ಗೆ 7 ಮಂದಿಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಕಾರ್ಯನಿರತರಾಗಿದ್ದಾರೆ.
























