Tag: jcb

  • ನೀರು ಕುಡಿಯಲು ಬಂದು ಕೆರೆಯಲ್ಲೇ ರಾತ್ರಿ ಕಳೆದ ತಾಯಿ-ಮರಿಯಾನೆಗಳು

    ನೀರು ಕುಡಿಯಲು ಬಂದು ಕೆರೆಯಲ್ಲೇ ರಾತ್ರಿ ಕಳೆದ ತಾಯಿ-ಮರಿಯಾನೆಗಳು

    ಮಡಿಕೇರಿ: ಕಾಡಲ್ಲಿ ನೀರು ಸಿಗದೆ ಮೂರು ಆನೆಗಳು ನಾಡಿನತ್ತ ಬಂದಿವೆ. ಕೆರೆಯಲ್ಲಿದ್ದ ನೀರು ನೋಡಿ ಕುಡಿಯಲು ಹೋಗಿ ಅಲ್ಲೇ ಒಂದು ರಾತ್ರಿ ಕಳೆದಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವರ ಸಮೀಪದ ಚೆಯ್ಯಂಡಾನೆ ಗ್ರಾಮದಲ್ಲಿ ನಡೆದಿದೆ.

    ಬಿಸಿಲಿನ ಬೇಗೆ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಕಾಡುಗಳಲ್ಲಿ ನೀರಿಲ್ಲದೆ ಕಾಡು ಪ್ರಾಣಿಗಳು ಅನುಭವಿಸುತ್ತಿರುವ ಯಾತನೆ ಹೇಳತೀರದಾಗಿದೆ. ಮೂರು ಆನೆಗಳು ಬಾಯಾರಿಕೆ ತಡೆದುಕೊಳ್ಳಲಾಗದೇ ನೀರನ್ನ ಹುಡುಕಿಕೊಂಡು ನಾಡಿಗೆ ಬಂದಿವೆ. ಈ ವೇಳೆ ಅವುಗಳು ಕೆರೆಯಲ್ಲಿ ನೀರು ಕಂಡು ಕುಡಿಯಲು ಕೆಳಗೆ ಇಳಿದಿವೆ. ಆದರೆ ನೀರು ಕುಡಿದ ಮೇಲೆ ಬರಲಾದರೆ ಅಲ್ಲೇ ಸಿಲುಕಿಕೊಂಡಿವೆ. ಬುಧವಾರ ರಾತ್ರಿ ಕೆರೆಯಲ್ಲಿ ಬಿದ್ದ ಮೂರು ಕಾಡಾನೆಗಳು ಎಷ್ಟೇ ಪ್ರಯತ್ನಪಟ್ಟರೂ ಮೇಲೆ ಬರಲಾರದೇ ಇದೇ ಕೆರೆಯಲ್ಲಿ ಸೆರೆಯಾಗಿದ್ದವು ಎಂದು ಗ್ರಾಮಸ್ಥ ಲೋಕೆಶ್ ಹೇಳಿದ್ದಾರೆ.

    ಚೇಲಾವರ ಸುತ್ತಮುತ್ತ ಆರು ಕಾಡಾನೆಗಳು ಬೀಡುಬಿಟ್ಟಿದ್ದು, ಅದರಲ್ಲಿ ತಾಯಿ ಜೊತೆ ಬಂದಿದ್ದ ಎರಡು ಮರಿಯಾನೆಗಳು ಕೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದವು. ರಾತ್ರಿಯೇ ವಿಚಾರ ತಿಳಿದು ಕಾಡಾನೆಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಲು ಹರಸಾಹಸ ಪಡುವಂತಾಯಿತು. ಕೊನೆಗೆ ಜೆಸಿಬಿ ತರಿಸಿ ಕೆರೆಯ ದಡದಲ್ಲಿ ದಾರಿಯನ್ನ ಮಾಡಿ ಕಾಡಾನೆಗಳು ಮರಳಿ ಕಾಡಿಗೆ ಹೋಗಲು ಅನುವು ಮಾಡಿಕೊಡಲಾಯಿತು ಎಂದು ಅರಣ್ಯಾಧಿಕಾರಿ ರೋಷಣಿ ತಿಳಿಸಿದ್ದಾರೆ.

    ರಾತ್ರಿಯಿಡೀ ಕಾಡಿನ ಆನೆಗಳು ಊರಲ್ಲಿ ವಾಸ್ತವ್ಯ ಹೂಡಿದ್ದರಿಂದ ಗ್ರಾಮಸ್ಥರು ಆತಂಕದಲ್ಲೇ ರಾತ್ರಿ ಕಳೆಯುವಂತಾಗಿತ್ತು. ಕೆರೆಯಲ್ಲಿ ಸಿಲುಕಿಕೊಂಡಿದ್ದ ಕಾಡಾನೆಗಳ ರಕ್ಷಣೆಗೆ ಉಳಿದ ಆನೆಗಳು ಕಾಡಿನಂಚಿನಲ್ಲಿ ಬಂದು ಘೀಳಿಡುತ್ತಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

    ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

    ಬೆಂಗಳೂರು: ರಾಜಕಾಲುವೆ ಕಾಮಗಾರಿಯ ವೇಳೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟ ಘಟನೆ ಇಂದು ನಡೆದಿದೆ.

    ಮೃತ ದುರ್ದೈವಿ ಕಾರ್ಮಿಕನನ್ನು 27 ವರ್ಷದ ಮಡಿವಾಳಪ್ಪ ಗೌಡ ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲಗಡಲಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಡಿವಾಳಪ್ಪ ಇಲ್ಲಿ ಕೆಲಸ ಮಾಡುತ್ತಿದ್ದು, ಇಂದು ಈ ಅವಘಡಕ್ಕೆ ಬಲಿಯಾಗಿದ್ದಾರೆ.

    ಅವಘಡವೇನು..?
    ರಾಜರಾಜೇಶ್ವರಿ ನಗರದ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ಬಿಡಬ್ಲ್ಯುಎಸ್‍ಎಸ್‍ಬಿ ಛೇಂಬರ್ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ಮೂವರು ಕಾರ್ಮಿಕರು ರಾಜಕಾಲುವೆಗೆ ಇಳಿದಿದ್ದಾರೆ. ಈ ವೇಳೆ ಮೂವರ ಮೇಲೆಯೂ ಮಣ್ಣು ಕುಸಿದಿದೆ. ಕೂಡಲೇ ಇಬ್ಬರನ್ನು ಸ್ಥಳೀಯರು ಮೇಲೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಆದ್ರೆ ಒಬ್ಬರು ಮಣ್ಣಿನಡಿ ಸಿಲುಕಿದ್ದಾರೆ.

    ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಕಾರ್ಯಾಚರಣೆ ನಡೆಸಿದೆ. ಜೆಸಿಬಿ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಕೈ ಕಾಣಿಸಿದ ಹಿನ್ನೆಲೆಯಲ್ಲಿ ದೇಹವನ್ನು ಹೊರಗೆಳೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ

    ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ

    ಚಿಕ್ಕಬಳ್ಳಾಪುರ: ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತರೊಬ್ಬರು ಗೋಳಾಡಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆಯಿತು.

    ತೌಡನಹಳ್ಳಿ ಗ್ರಾಮದ ಹಲವು ಮಂದಿ ರೈತರು ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಕೃಷಿಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದ್ರೆ ಇಂದು ಸರಿ ಸುಮಾರು 38 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಬಿಗಿ ಪೊಲೀಸ್ ಬಂದೋಬಸ್ತ್‍ನೊಂದಿಗೆ ಅರಣ್ಯಾಧಿಕಾರಿಗಳು ಆಗಮಿಸಿದ್ದರು.

    ಈ ವೇಳೆ ತಮ್ಮ ಜಮೀನು ತಮಗೆ ಬಿಡಿ, ಒತ್ತುವರಿ ತೆರವು ಮಾಡಬೇಡಿ ಅಂತ ಅಂಗಲಾಚಿ ಬೇಡಿಕೊಂಡ ರೈತರು ಜೆಸಿಬಿ ಕೆಳಗೆ ಕುಳಿತು ಒತ್ತುವರಿ ತೆರವಿಗೆ ಅಡ್ಡಿಪಡಿಸಿದರು. ಆದರೆ ಇದ್ಯಾವುದನ್ನು ಲೆಕ್ಕಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ತೆರವಿಗೆ ಮುಂದಾದರು. ಆಗ ಏಕಾಏಕಿ ಜೆಸಿಬಿ ಕೆಳಗೆ ಬಿದ್ದ ರೈತ ಮುನಿರಾಜು ಒತ್ತುವರಿ ತೆರವು ಮಾಡದಂತೆ ಗೋಳಾಡಿದ್ದಾರೆ. ಕೂಡಲೇ ರೈತನನ್ನ ಗುಂಡಿಯಿಂದ ಮೇಲೆಳೆದ ಪೊಲೀಸರು, ರೈತರ ಅಡ್ಡಿ ನಡುವೆಯೂ ಒತ್ತುವರಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರ ಬಂದೋಬಸ್ತ್‍ನಲ್ಲಿ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

    ದಾವಣಗೆರೆ: ದಾಯಾದಿಗಳ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬಲಿಯಾದ ಅಮಾನವೀಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.

    ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಚಿಕ್ಕರಾಜು ಹಾಗೂ ಆತನ ತಮ್ಮನ ನಡುವೆ ಆಸ್ತಿ ವಿವಾದವಿತ್ತು. ಆಸ್ತಿ ವಿವಾದ ಕೋರ್ಟ್ ಮೆಟ್ಟಲೇರಿತ್ತು.

    ಕೆಲ ದಿನಗಳ ಹಿಂದೆ ಚನ್ನಗಿರಿ ಕೋರ್ಟ್ ನಲ್ಲಿ ಚಿಕ್ಕರಾಜು ಸಹೋದರನಿಗೆ ಜಮೀನು ಉಳುಮೆ ಮಾಡುವಂತೆ ಆದೇಶವಾಗಿತ್ತು. ಇದರಿಂದ ಚಿಕ್ಕರಾಜು ಜಿಲ್ಲಾ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದರು. ಅದನ್ನು ಲೆಕ್ಕಿಸದೆ ಚಿಕ್ಕರಾಜು ಸಹೋದರ 17 ವರ್ಷದ ಫಲಕ್ಕೆ ಬಂದಿರುವ 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಜೆಸಿಬಿಯಿಂದ ನಾಶ ಮಾಡಿದ್ದಾರೆ.

    ದಾಯಾದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಬೆಂಗಳೂರಿನಲ್ಲಿ ಸದ್ದು ಮಾಡಲಿವೆ ಜೆಸಿಬಿ!

    ಶೀಘ್ರವೇ ಬೆಂಗಳೂರಿನಲ್ಲಿ ಸದ್ದು ಮಾಡಲಿವೆ ಜೆಸಿಬಿ!

    ಬೆಂಗಳೂರು: ಒಂದು ತಿಂಗಳ ಹಿಂದೆಯೇ ನಗರದಲ್ಲಿ ಆರಂಭವಾಗಬೇಕಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸದ್ಯದಲ್ಲೇ ಚಾಲನೆ ಸಿಗಲಿದ್ದು ಮತ್ತೆ ಜೆಸಿಬಿ ಸದ್ದು ಮಾಡಲಿದೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಸಂಪತ್ ರಾಜ್, ಬಹುತೇಕ ಮುಂದಿನ ವಾರದಿಂದ ಒತ್ತುವರಿ ತೆರವು ಆರಂಭ ಸಾಧ್ಯತೆಗಳಿದ್ದು, ಅದರ ಸಂಪೂರ್ಣ ಸರ್ವೆಯ ವರದಿ ಮೂರು ದಿನಗಳಲ್ಲಿ ಕೈಸೇರಲಿದೆ. ವರದಿ ಕೈಸೇರಿದ ಬಳಿಕ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಜೊತೆ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ಕಾರ್ಯಾಚರಣೆಗೆ ದಿನಾಂಕ ಗೊತ್ತು ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

    ದೋಸ್ತಿ ಸರ್ಕಾರ ರಚನೆಯಾಗುತ್ತಿದ್ದ ಹಾಗೆ ಕಾರ್ಯಾಚರಣೆ ಬಗ್ಗೆ ಡಿಸಿಎಂ ಪರಮೇಶ್ವರ್ ಅವರು ಸುಳಿವು ನೀಡಿದ್ದರು. ಆದರೆ ಇನ್ನೂ ಕಾರ್ಯಾಚರಣೆ ಆರಂಭವಾಗದ ಬಗ್ಗೆ ಜನರಿಂದ ಟೀಕೆ ವ್ಯಕ್ತವಾಗಿತ್ತು.

    ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಿಜ್ಞಾನಿಗಳು ಕೊಡಗಿನಲ್ಲಿ ಬಿದ್ದ ಮಳೆಯ 10% ಮಳೆ ಬೆಂಗಳೂರಿನಲ್ಲಿ ಬಿದ್ದರೆ ಹಲವು ಪ್ರದೇಶಗಳು ಜಲಾವೃತವಾಗಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕೊಡಗು ಮಳೆ ಅನಾಹುತದಿಂದ ಎಚ್ಚೆತ್ತ ಬಿಬಿಎಂಪಿ ಶೀಘ್ರವೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಘರ್ಜನೆ

    ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿಗಳ ಘರ್ಜನೆ

    ದಾವಣಗೆರೆ: ನಗರದ ಜಗಳೂರು ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆಯೇ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ದು, ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಹಲವು ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

    ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ರಮ ತೆರವು ಕಾರ್ಯಾಚರಣೆ ನಡೆದಿದ್ದು, ನಿಲ್ದಾಣದಲ್ಲಿದ್ದ ಹೋಟೆಲ್, ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವುಗೊಳಿಸಿದ್ದಾರೆ. ಹಲವು ವರ್ಷಗಳಿಂದ ಬಸ್ ನಿಲ್ದಾಣವನ್ನು ನಂಬಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ತೆರವು ಕಾರ್ಯದಿಂದ ಬೀದಿಗೆ ಬಿದ್ದಿದ್ದಾರೆ.

    ತೆರವು ಕಾರ್ಯಾಚರಣೆಗೆ ವ್ಯಾಪಾರಸ್ಥರು ಆಕ್ರೋಶವ್ಯಕ್ತಪಡಿಸಿದ್ದು, ನಮಗೆ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ತೆರವು ಮಾಡುತ್ತಿದ್ದಾರೆ. ನಮ್ಮ ಮುಂದಿನ ಗತಿ ಏನು, ನಾವು ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇವು. ಆದರೆ ಈಗ ನಮ್ಮ ಜೀವನ ಬೀದಿಪಾಲಾಗಿದೆ ಎಂದು ಹೇಳಿದ್ದಾರೆ.

    ನ್ಯಾಯಾಲಯ ಆದೇಶದ ಮೇರೆಗೆ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ. ಜಿಟಿ ಜಿಟಿ ಮಳೆಯ ನಡುವೆಯೂ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಅಕ್ರಮ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರಸ್ಥರಿಗೆ ಈ ಮೊದಲು ನೋಟಿಸ್ ನೀಡಿದ್ದೆವು. ಆದರೆ ನೋಟಿಸ್ ಗೆ ಕ್ಯಾರೆ ಎನ್ನದೆ ವ್ಯಾಪಾರ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಖುದ್ದು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಪಾಲಿಕೆ ಆಯುಕ್ತರಾದ ಮಂಜುನಾಥ್ ಬಳ್ಳಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಸಿಬಿಯಿಂದ ನೆಟ್ಟು 80ಕ್ಕೂ ಮರಗಳಿಗೆ ಪುನರ್ಜನ್ಮ

    ಜೆಸಿಬಿಯಿಂದ ನೆಟ್ಟು 80ಕ್ಕೂ ಮರಗಳಿಗೆ ಪುನರ್ಜನ್ಮ

    ಶಿವಮೊಗ್ಗ: ಕಡಿದು ಹಾಕಲು ಉದ್ದೇಶಿಸಿದ್ದ 80ಕ್ಕೂ ಹೆಚ್ಚು ಮರಗಳನ್ನು ಮರು ನೆಡುವ ಮೂಲಕ ಅವುಗಳಿಗೆ ಪುನರ್ಜನ್ಮ ನೀಡಿದ ಅಪರೂಪದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗುತ್ತಿದೆ. ಸ್ಮಾರ್ಟ್ ಸಿಟಿಗೆ 24 ಗಂಟೆಯೂ ನೀರು ಸರಬರಾಜು ಮಾಡಲು ನೂತನ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಬಸ್ ನಿಲ್ದಾಣದಿಂದ ಐಬಿ ಸರ್ಕಲ್ ವರೆಗೆ ನೆಟ್ಟಿದ್ದ ನಾಲ್ಕೈದು ವರ್ಷದ 10-15 ಅಡಿ ಎತ್ತರ ಬೆಳೆದು ನಿಂತಿದ್ದ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಶಿವಮೊಗ್ಗದ ಅರಣ್ಯ ಇಲಾಖೆ ಹಾಗೂ ಪರಿಸರ ಸಂಘಟನೆಗಳು ಒಟ್ಟಾಗಿ ಮರಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿ ಈ ಕಾರ್ಯ ಮಾಡಿದ್ದಾರೆ.

    ರಾಜ್ಯದಲ್ಲಿ ಜೆಸಿಬಿ ಮೂಲಕ 80 ಮರಗಳನ್ನು ನೆಟ್ಟ ಉದಾಹರಣೆಯೇ ಎಲ್ಲೂ ಇಲ್ಲ. ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಉತ್ತಿಷ್ಠ ಭಾರತ, ಸ್ವಾಭಿಮಾನ ಆಂದೋಲನ ಮತ್ತು ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಿದ್ದಾರೆ.

    ರಸ್ತೆ ಪಕ್ಕ ಕೊಡಲಿ ಏಟಿಗೆ ಸಿಗಬೇಕಿದ್ದ ಮರಗಳನ್ನು ಮೆಗ್ಗಾನ್ ಆಸ್ಪತ್ರೆ ಆವರಣ ಮತ್ತು ಪೊಲೀಸ್ ಠಾಣೆ ಆವರಣದಲ್ಲಿ ಮರುನೆಡಲಾಗುತ್ತಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ಮಾಡುವಾಗ ಬೃಹತ್ ಯಂತ್ರಗಳನ್ನು ಬಳಸಿ ಮರಗಳನ್ನು ಮರು ನೆಡಲಾಗಿತ್ತು. ಎರಡು ಜೆಸಿಬಿ ಬಳಸಿ 80ಕ್ಕೂ ಹೆಚ್ಚು ಮರಗಳನ್ನು ಮರುನೆಡಲಾಗಿದೆ. ಹಳೆಯ ಮರಗಳನ್ನು ಜೆಸಿಬಿ ಮೂಲಕ ಎತ್ತಿ ಹೇಗೆ ನೆಡುತ್ತಾರೆ ಎಂಬುದರ ವಿಡಿಯೋ ಇಲ್ಲಿದೆ.

    https://www.youtube.com/watch?v=163MAqTn6BM

    https://www.youtube.com/watch?v=zHk7PvLvx48

  • ಕೃಷಿ ಹೊಂಡಕ್ಕೆ ಬಿದ್ದ ಆನೆಗಳನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ!

    ಕೃಷಿ ಹೊಂಡಕ್ಕೆ ಬಿದ್ದ ಆನೆಗಳನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ!

    ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದಿದ್ದ ಮೂರು ಆನೆಗಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ ಘಟನೆ ಸತ್ಯಮಂಗಲದ ಬಳಿ ನಡೆದಿದೆ.

    ಚಾಮರಾಜನಗರ ಮತ್ತು ತಮಿಳುನಾಡಿನ ಗಡಿ ಪ್ರದೇಶದಲ್ಲಿರುವ ಸತ್ಯಮಂಗದ ಕಾಡಂಚಿನ ಗ್ರಾಮವಾದ ಕನಕುಂದೂರು ಗ್ರಾಮದ ಕೃಷಿ ಹೊಂಡಕ್ಕೆ ಮೂರು ಕಾಡಾನೆಗಳು ಬಿದ್ದಿವೆ. ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾಗ, ಮಣ್ಣು ಕುಸಿದು ಆಳವಾದ ಕೃಷಿ ಹೊಂಡಕ್ಕೆ ಬಿದ್ದಿವೆ. ಕೃಷಿ ಹೊಂಡ ಆಳವಾಗಿದ್ದ ಕಾರಣ ಆನೆಗಳು ಮೇಲೆ ಬರಲು ಸಾಧ್ಯವಾಗದೇ ಗಾಬರಿಗೊಂಡು ಚೀರಾಟ ನಡೆಸಿವೆ.

    ಆನೆಗಳ ಧ್ವನಿ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಆನೆಗಳು ಕೃಷಿ ಹೊಂಡದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಆನೆಗಳನ್ನು ಮೇಲೆ ತರಲು ಜೆಸಿಬಿ ಯಂತ್ರದ ಸಹಾಯದಿಂದ ಕೃಷಿ ಹೊಂಡದ ಬಳಿ ದಾರಿ ಮಾಡಿಕೊಟ್ಟಿದ್ದಾರೆ.

    ಕಾಡಾನೆಗಳು ಒಂದರ ಸಹಾಯದೊಂದಿಗೆ ಮತ್ತೊಂದು ಆನೆ ಕೃಷಿ ಹೊಂಡದಿಂದ ಮೇಲೆ ಬಂದು ಮರಳಿ ಕಾಡಿಗೆ ಸೇರಿವೆ.

  • ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಮಂಗಳೂರು: ಮದುವೆಯನ್ನು ಅಪರೂಪ ಎನ್ನುವಂತೆ ಮಾಡಿಕೊಳ್ಳುವುದು ಕೆಲವರಿಗೆ ಇಷ್ಟ. ಹಾಗೆಯೇ ನೀರಿನಲ್ಲಿ, ವಿಮಾನದಲ್ಲಿ, ಮತ್ತು ರೋಪ್ ವೇನಲ್ಲಿ ಮದುವೆಯಾಗೋದನ್ನು ಕೇಳಿದ್ದೇವೆ. ಅದೇ ರೀತಿ ಮದುವೆ ನಂತರ ಕಾರಿನಲ್ಲಿ, ಕುದುರೆ ಮೇಲೆ ದಿಬ್ಬಣ ಹೋಗುತ್ತಾರೆ. ಆದರೆ ಇಲ್ಲೊಬ್ಬ ವರ ಜೆಸಿಬಿಯಲ್ಲೇ ದಿಬ್ಬಣ ಹೊರಟಿದ್ದಾರೆ.

    ಜೆಸಿಬಿ ಆಪರೇಟರ್ ತನ್ನ ಮದುವೆಯ ದಿಬ್ಬಣವನ್ನು ಜೆಸಿಬಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರ್ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಕಿಮೀ ಉದ್ದಕ್ಕೂ ಜೆಸಿಬಿ ಮುಂದೆ ಕುಳಿತುಕೊಂಡು ಮೆರವಣಿಗೆ ನಡೆಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಚೇತನ್ ಮತ್ತು ಮಮತಾ ದಂಪತಿಯ ಮದುವೆ ಸೋಮವಾರ ನಡೆದಿದ್ದು, ಮದುವೆ ಬಳಿಕ ಮೆರವಣಿಗೆ ಜೆಸಿಬಿ ಮತ್ತು ವಾಲಗದ ಜೊತೆಗೆ ನಡೆದಿದೆ. ಚೇತನ್ ಹಲವು ವರ್ಷಗಳಿಂದ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸ್ಥಳೀಯವಾಗಿ ಹೆಸರು ಮಾಡಿದ್ದರು. ಆದ್ದರಿಂದ ತಮ್ಮ ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದಿದ್ದಾರೆ.

  • ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

    ದಾವಣಗೆರೆ, ಕೊಪ್ಪಳದಲ್ಲಿ ವರುಣನ ಆರ್ಭಟ – ಜೋಳಿಗೆಯಲ್ಲಿದ್ದ ಮಗು 20 ಮೀಟರ್ ಹಾರಿ ಬದುಕುಳೀತು

    ದಾವಣಗೆರೆ/ಕೊಪ್ಪಳ: ಜಿಲ್ಲೆಯ ಎರಡು ಕಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಗೆ ಜೋಳಿಗೆಯಲ್ಲಿ ಹಾಕಿದ್ದ ಮಗುವೊಂದು ಮನೆಯಿಂದ 20 ಮೀಟರ್ ಹಾರಿ ಹೋಗಿ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ತಾಲೂಕಿನ ಆಚಲಾಪೂರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಏಕಾಏಕಿ ಭಾರೀ ಬಿರುಗಾಳಿ ಬಿಸಿದೆ. ಈ ವೇಳೆಯಲ್ಲಿ ಶಿವಪ್ಪ ಅನ್ನೋರ ಮಗ ಒಂದೂವರೆ ವರ್ಷದ ಸಾಗರ್ ಮನೆಯಲ್ಲಿ ಕಬ್ಬಿಣದ ಪಟ್ಟಿಗೆ ಜೋಳಿಗೆ ಕಟ್ಟಿ ಅದರಲ್ಲಿ ಮಲಗಿಸಲಾಗಿತ್ತು. ಬೀಸಿದ ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ಮನೆಯಿಂದ 20 ಮೀಟರ್ ದೂರದ ಕಲ್ಲಿನ ಪೊದೆಯಲ್ಲಿ ಸಾಗರ್ ಬಿದ್ದಿದ್ದಾನೆ.

    ಆಗ ಮನೆಯವರು ಕತ್ತಲಿನಲ್ಲಿ ಹುಡುಕಾಡಿದಾಗ ಸಾಗರ್ ಪ್ರಜ್ಞೆ ತಪ್ಪಿ ಬಿದ್ದಿದ್ದ. ಎಲ್ಲರೂ ಸಾಗರ್ ಸಾವನ್ನಪ್ಪಿದ್ದ ಎಂದು ತಿಳಿದಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷೆ ಮಾಡಿ ಮಗುವಿಗೆ ಏನು ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿ ಎಲ್ಲರಿಗೂ ಅಚ್ಚರಿಗೊಂಡಿದ್ದಾರೆ.

    ಇತ್ತ ಬಿರುಗಾಳಿ ಸಹಿತ ಮಳೆಗೆ ತಾಂಡಾದ ಬಹುತೇಕ ಮನೆಗಳ ಮೇಲ್ಛಾವಣಿಗಳು ಎಲ್ಲೆಂದರಲ್ಲಿ ಹಾರಿ ಹೋಗಿವೆ. ಇದರಿಂದಾಗಿ ಮನೆಯಲ್ಲಿನ ದವಸ ಧಾನ್ಯಗಳು ನೀರಿಗಾಹುತಿ ಆಗಿದ್ದು, ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ತಾಂಡಾದಲ್ಲಿ ವಿದ್ಯುತ್ ಕೈಕೊಟ್ಟಿದೆ. ತಾಂಡಾದ ಜನರು ಮನೆಗಳ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಮಕ್ಕಳು, ವೃದ್ಧರಿಗೆ ವಾಸ ಮಾಡಲು ಮನೆಯಿಲ್ಲದೆ ಬಯಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಕೂಡಲೇ ಜಿಲ್ಲಾ ಆಡಳಿತ ಸೂರು ಕಲ್ಪಿಸಬೇಕೆಂದು ಸಂತ್ರಸ್ಥರು ಒತ್ತಾಯಿಸಿದ್ದಾರೆ.

    ಇನ್ನು ದಾವಣಗೆರೆಯ ಹರಪನಹಳ್ಳಿ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಗೆ ಮನೆಗಳ ಮೇಲೆ ಮರಗಳು ಬಿದ್ದಿವೆ. ಉಪ್ಪಾರಗೇರೆ, ಕೊಟ್ಟೂರು ರಸ್ತೆ, ಹುಲಿಕಟ್ಟೆ ರಸ್ತೆಯಲ್ಲಿ ಬಿದ್ದಿರುವ ಮನೆಗಳ ಮೇಲೆ ಬಿದ್ದಿವೆ. ಉಪ್ಪಾರಗೆರೆಯಲ್ಲಿ ಮಾಡ್ಲಗೇರೆ ಉಮೇಶ, ಕೆ.ಲಕ್ಕಪ್ಪ, ಕೆ. ಪರಸಪ್ಪ ಅವರ ಮನೆಗಳು ಜಖಂ ಆಗಿವೆ. ಆದರೆ ಈ ಮಳೆಯ ಅವಘಡದಿಂದ ಜನರು ಮತ್ತು ದನದ ಕೊಟ್ಟಿಗೆಯಲ್ಲಿದ್ದ ಕರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮಳೆಯಿಂದ ಚರ್ಚ್ ಆವರಣದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ಹರಪನಹಳ್ಳಿಗೆ ಬುಧವಾರ ರಾತ್ರಿ ಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾಹಿತಿ ತಿಳಿದ ಬೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಜೆಸಿಬಿ ಬಳಸಿ ಮರಗಳನ್ನು ತೆರವುಗೊಳಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ.