Tag: jcb

  • ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    – ಅಮಾನವೀಯವಾಗಿ ನಡೆದುಕೊಂಡ ಪುರಸಭೆ ಅಧಿಕಾರಿಗಳು

    ಹೈದರಾಬಾದ್: ಕೊರೊನಾಗೆ ಬಲಿಯಾದ ಸೋಂಕಿತನ ಮೃತದೇಹವನ್ನು ಜೆಸಿಬಿ ಯಂತ್ರದ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಪಾಲಾಸ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊರೊನಾದ ಸಮಯದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಿದ್ದ ಮಾಜಿ ಪುರಸಭೆಯ ಉದ್ಯೋಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ತಮ್ಮ ಪಾಲಾಸ ಪಟ್ಟಣದಲ್ಲಿನ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಜೆಸಿಬಿ ವಾಹನದಲ್ಲಿ ಎತ್ತಿಕೊಂಡು ಹೋಗಿ ಗುಂಡಿ ಒಳಗೆ ಹಾಕಿ ಮುಚ್ಚಿ ಅಂತ್ಯಕ್ರಿಯೆ ಮಾಡಲಾಗಿದೆ.

    ಮನೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆಗ ನೆರೆಹೊರೆಯವರು ಮೃತದೇಹ ಇಲ್ಲೇ ಇದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಆಗ ಮೃತನ ಮೊಮ್ಮಗಳು ಮತ್ತು ಸರ್ಕಾರಿ ಸ್ವಯಂ ಸೇವಕರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿದ್ದರು, ಮೃತದೇಹವನ್ನು ಮಟ್ಟದೇ ಜೆಸಿಬಿ ಯಂತ್ರದಲ್ಲಿ ಮೃತದೇಹವನ್ನು ಸಾಗಿಸಿ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ.

    ಈ ವಿಚಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಇದು ಅಮಾನವೀಯ ಘಟನೆ. ಈ ರೀತಿಯ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸರ್ಕಾರವೇ ಪ್ರೋಟೋಕಾಲ್ ಅನ್ನು ಹೊರಡಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

    ಈ ಘಟನೆ ಕುರಿತು ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಲಾಸ ಪುರಸಭೆ ಆಯುಕ್ತ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕ ಎನ್ ರಾಜೀವ್ ಅವರನ್ನು ಅಮಾನತುಗೊಳಿ ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ.ನಿವಾಸ್ ಆದೇಶಿಸಿದ್ದಾರೆ.

  • ಕೊರೊನಾ ಭೀತಿಗೆ 21 ಸಾವಿರ ಕೋಳಿಗಳ ಜೀವಂತ ಸಮಾಧಿ

    ಕೊರೊನಾ ಭೀತಿಗೆ 21 ಸಾವಿರ ಕೋಳಿಗಳ ಜೀವಂತ ಸಮಾಧಿ

    ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಒಂದು ವಾರ ಸ್ತಬ್ಧವಾಗಿದೆ. ಆದರೆ ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರಿಬ್ಬರು ಭಯಗೊಂಡು ಸಾಮೂಹಿಕವಾಗಿ ಕೋಳಿಗಳ ಮಾರಣಹೋಮ ಮಾಡಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುಪ್ಪೇಮಳ ಹಾಗೂ ಎಣ್ಣೆಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು 21,000 ಕೋಳಿಗಳ ಜೀವಂತ ಸಮಾಧಿ ಆಗಿವೆ. ರೈತ ವೆಂಕಟರಾಮಯ್ಯ ಹಾಗೂ ರಘು ಅವರಿಗೆ ಈ ಕೋಳಿಗಳು ಸೇರಿದ್ದು, ಕೊರೊನಾ ಭೀತಿಯಿಂದ ಮೂಟೆಕಟ್ಟಿ ಗುಂಡಿಯಲ್ಲಿ ಮುಚ್ಚಿದ್ದಾರೆ.

    ಭಯದಿಂದ ಜೆಸಿಬಿ ಯಂತ್ರದ ಮೂಲಕ ಗುಂಡಿ ತಗೆದು ಕೋಳಿಗಳ ಜೀವಂತ ಸಮಾಧಿ ಮಾಡಿದ್ದಾರೆ. ಲಕ್ಷ ಲಕ್ಷ ಹಣ ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತ ಕಂಗಾಲಾಗಿದ್ದು, ಕೊರೊನಾ ಭೀತಿಯಿಂದ ಹಾಗೂ ಕೋಳಿ ಬೆಲೆ ಸಹ ಕಡಿಮೆಯಾಗಿರುವ ಶಂಕೆ ಸಹ ವ್ಯಕ್ತವಾಗುತ್ತಿದೆ.

    ಕೋಳಿಯನ್ನು ತಿನ್ನಲು ಜನರು ಹೆದರುತ್ತಿದ್ದಾರೆ. ಹೀಗಾಗಿ ನೆಲಮಂಗಲ ತಾಲೂಕಿನಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗುವ ನಿಟ್ಟಿನಲ್ಲಿ ಇತ್ತ ಅಂಗಡಿಗಳ ಕಡೆ ಜನರು ಬಾರದ ಹಿನ್ನೆಲೆ ಮುಂದಾಗುವ ಬೆಲೆ ಕುಸಿತವನ್ನು ತಡೆಗಟ್ಟಲು ಹೀಗೆ ಮಾಡುತ್ತಿರುವುದಾಗಿ ಕೋಳಿ ಸಾಕಾಣಿಕೆ ಮಾಡಿದ ರೈತರು ಆತಂಕ ವ್ಯಕ್ತಪಡಿಸಿದರು.

  • ಟಿವಿಎಸ್‍ಗೆ ಜೆಸಿಬಿ ಡಿಕ್ಕಿ – ಡೈರಿಗೆ ಹಾಲು ಹಾಕಲು ಹೋಗ್ತಿದ್ದ ಯುವತಿ ಸಾವು

    ಟಿವಿಎಸ್‍ಗೆ ಜೆಸಿಬಿ ಡಿಕ್ಕಿ – ಡೈರಿಗೆ ಹಾಲು ಹಾಕಲು ಹೋಗ್ತಿದ್ದ ಯುವತಿ ಸಾವು

    ರಾಮನಗರ: ಡೈರಿಗೆ ಹಾಲು ಹಾಕಲು ಟಿವಿಎಸ್ ಗಾಡಿಯಲ್ಲಿ ತೆರಳುತ್ತಿದ್ದ ಯುವತಿಗೆ ಜೆಸಿಬಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಾಗಡಿ ತಾಲೂಕಿನ ನಂಜಯ್ಯನ ಪಾಳ್ಯದ ಪ್ರಕಾಶ್ ಎಂಬವರ ಪುತ್ರಿ ಚೈತ್ರಾ (18) ಮೃತ ಯುವತಿ. ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಚೈತ್ರಾ ಬೆಳಗ್ಗೆ ಕರಲಮಂಗಲ ಗ್ರಾಮದಲ್ಲಿನ ಹಾಲಿನ ಡೈರಿಗೆ ಹಾಲು ಹಾಕಲು ಟಿವಿಎಸ್ ಗಾಡಿಯಲ್ಲಿ ಹೋಗಿದ್ದಳು. ಈ ವೇಳೆ ಜೆಸಿಬಿ ಡಿಕ್ಕಿ ಹೊಡೆದಿದೆ.

    ಹೆಲ್ಮೆಟ್ ಹಾಕಿಕೊಳ್ಳದೆ ಗಾಡಿ ಓಡಿಸುತ್ತಿದ್ದ ಯುವತಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯ ಪಿಎಸ್‍ಐ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ.

  • ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    – ಪೂರ್ವಾಶ್ರಮದ ಸಹೋದರರ ಆಕ್ರೋಶ

    ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಒಳಪಟ್ಟ ಜಮೀನಿಗೆ ಸೋದೆ ಮಠದವರು ಜೆಸಿಬಿ ನುಗ್ಗಿಸಿದ್ದಾರೆ. ಏಕಾಏಕಿ ಜೆಸಿಬಿ ನುಗ್ಗಿಸಿ ಮರಗಳನ್ನು ಉರುಳಿಸಿರುವ ವಿರುದ್ಧ ಶೀರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎರಡು ಎಕರೆ ಜಮೀನಿನಲ್ಲಿ ಸೋದೆ ಮಠ ಲೇಔಟ್ ಮಾಡಲು ಮುಂದಾಗಿದೆ ಎಂಬೂದು ಅವರು ಆರೋಪ. ಶೀರೂರು ಸ್ವಾಮೀಜಿ ಮೃತರಾಗಿ ಎರಡು ವರ್ಷ ಕಳೆದಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕವಾಗದೇ ಸೋದೆ ಮಠ ಶಿರೂರು ಮಠದ ಆಸ್ತಿಯಲ್ಲಿ ಕೈಯಾಡಿಸಬಾರದು. ಶಿರೂರು ಮಠದ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಸ್ವಚ್ಛತಾ ಕಾರ್ಯ ನಡೆಸಬಾರದು ಎಂದು ಪೂರ್ವಾಶ್ರಮದವರು ತಾಕೀತು ಮಾಡಿದ್ದಾರೆ.

    ಇಷ್ಟಾಗುತ್ತಲೇ ಮಾಧ್ಯಮಗಳ ಕ್ಯಾಮೆರಾಗಳು ಸ್ಥಳಕ್ಕಾಗಮಿಸಿದ್ದನ್ನು ಕಂಡು ಜೆಸಿಬಿ ತನ್ನ ಕೆಲಸ ನಿಲ್ಲಿಸಿದೆ. ಗಿಡಗಂಟಿಗಳ ಸ್ಚಚ್ಛತಾ ಕಾರ್ಯ ಮಾಡಲು ಜೆಸಿಬಿ ಕರೆಸಿರುವುದಾಗಿ ಸೋದೆ ಮಠ ಸ್ಪಷ್ಟಪಡಿಸಿದೆ. ಶಿರೂರು ಮಠದ ಲಕ್ಷ್ಮೀವರತೀರ್ಥರು ಸಂಶಯಾಸ್ಪದ ಸಾವನ್ನಪ್ಪಿ ಒಂದು ಮುಕ್ಕಾಲು ವರ್ಷ ಕಳೆಯಿತು. ಇನ್ನು ಕೂಡ ಶೀರೂರು ಮಠದ ಉತ್ತರಾಧಿಕಾರಿ ಆಯ್ಕೆ ನಡೆದಿಲ್ಲ. ದ್ವಂದ್ವ ಸೋದೆ ಮಠದವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರರಿಗೆ ದೂರು ನೀಡಿದ್ದು, ಮಠದ ವಿಚಾರ ಆಗಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಎರಡು ಮಠದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಲಾತವ್ಯ ಆಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

  • ಜೆಸಿಬಿಯಿಂದ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ!

    ಜೆಸಿಬಿಯಿಂದ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ!

    – ಮೊಬೈಲ್ ಅಲರ್ಟ್‍ನಿಂದ ತಪ್ಪಿತು ಕಳ್ಳತನ

    ಬೀದರ್: ಎಸ್‍ಬಿಐ ಬ್ಯಾಂಕ್ ಗೋಡೆಯನ್ನು ಜೆಸಿಬಿಯಿಂದ ಒಡೆದು ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ ಘಟನೆ ಬೀದರ್‍ನಲ್ಲಿ ನಡೆದಿದೆ.

    ಒಳಗೆ ನುಗ್ಗಿದ ಇಬ್ಬರು ದರೋಡೆಕೋರರು ಬ್ಯಾಂಕಿನ ಬಾಗಿಲನ್ನ ರಾಡಿನಿಂದ ಹೊಡೆದು ಮುರಿಯಲು ಯತ್ನ ಮಾಡಿದ್ದಾರೆ. ಆದರೆ ಬಾಗಿಲು ಮುರಿಯಲು ಎಷ್ಟೇ ಯತ್ನಿಸಿದರೂ ಅದು ವಿಫವಾಗಿದೆ.

    ಬ್ಯಾಂಕಿನ ದರೋಡೆ ಯತ್ನ ಮಾಡುತ್ತಿದ್ದಾಗ ಬ್ಯಾಂಕ್ ಮ್ಯಾನೇಜರ್ ಮೊಬೈಲ್‍ಗೆ ಅಲರ್ಟ್ ಸಂದೇಶ ಹೋಗಿದೆ. ಅಲರ್ಟ್ ಬಳಿಕ ಎಚ್ಚರಗೊಂಡ ಬ್ಯಾಂಕ್ ಮ್ಯಾನೇಜರ್ ಪೋಲಿಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸಂತಪೂರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಪೊಲೀಸರು ಆಗಮನದ ಮಾಹಿತಿ ಅರಿತ ದರೋಡೆಕೋರರು, ತಕ್ಷಣ ಪರಾರಿಯಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್‍ನ ಎಸ್‍ಬಿಐ ಬ್ಯಾಂಕಿನಲ್ಲಿ ಈ ದರೋಡೆ ಯತ್ನ ನಡೆದಿದ್ದು ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಎಕ್ಸ್ ಕ್ಲೂಸಿವ್ ಸಿಸಿಟಿವಿ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಸಂಬಂಧ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಶಿವಮೊಗ್ಗ: ವಿಶೇಷ ಯಂತ್ರಗಳನ್ನು ಬಳಸಿ ಮರಗಳನ್ನು ಒಂದೆಡೆಯಿಂದ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನು ನೋಡಿರುತ್ತೀರ. ಆದರೆ ಕ್ರೇನ್, ಜೆಸಿಬಿ ಮೂಲಕ ಕೂಡ ಮರಗಳನ್ನು ಸ್ಥಳಾಂತರ ಮಾಡಬಹುದು ಎಂದು ಶಿವಮೊಗ್ಗದ ಕೃಷಿ ವಿವಿ ತೋರಿಸಿಕೊಟ್ಟಿದೆ.

    ಹೌದು ಜಿಲ್ಲೆಯ ಸಾಗರ ತಾಲೂಕು ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿರುವ ಕೃಷಿ ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಇದೇ ಮಾದರಿಯಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ವಿದೇಶಗಳಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಳ ಮಾರಣ ಹೋಮ ಮಾಡದೇ, ದೊಡ್ಡ ದೊಡ್ಡ ಮರಗಳನ್ನೇ ವಿಶೇಷ ಯಂತ್ರಗಳನ್ನು ಬಳಸಿ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನ ಆಗಾಗ ವಿಡಿಯೋಗಳಲ್ಲಿ ನೋಡಿದ್ದೀವಿ. ಇದಕ್ಕಾಗಿಯೇ ವಿಶೇಷ ಯಂತ್ರಗಳನ್ನು ಅಲ್ಲಿ ಅಲ್ಲಿ ಬಳಸಲಾಗುತ್ತದೆ. ಆದರೆ ಮಲೆನಾಡಿನಲ್ಲಿ ಅಂತಹ ಯಂತ್ರಗಳು ಇಲ್ಲದೆಯೂ, ಮರಗಳನ್ನು ಶಿಫ್ಟ್ ಮಾಡಬಹುದು ಎಂದು ತೋರಿಸಿಕೊಡಲಾಗಿದೆ.

    ಅರಣ್ಯ ಇಲಾಖೆ ಅನುಮತಿ ಪಡೆದು ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ವಿಶೇಷ ಯಂತ್ರವೇನು ಬಳಸಲಾಗಿಲ್ಲ. ಬದಲಾಗಿ ಕ್ರೇನ್ ಮತ್ತು ಜೆಸಿಬಿ ಮೂಲಕ ಇದ್ದ ಮರಗಳನ್ನ ಹಾಗೆಯೇ ಕಿತ್ತು ಬೇರೆಡೆಗೆ ನೆಡಲಾಗಿದೆ.

    ಕೃಷಿ ವಿವಿಗಾಗಿ ಜಾಗದ ಅವಶ್ಯಕತೆ ಈ ಬೀಟೆ ಮರಗಳನ್ನು ಕಟಾವು ಮಾಡಲೇ ಬೇಕಿತ್ತು. ಸುಮಾರು 50 ಮರಗಳ ಕಟಾವು ಮಾಡಬೇಕಾಗಿತ್ತು. ಇವೆಲ್ಲವೂ ಇದೀಗ ಕಟಾವಿನ ಬದಲಾಗಿ ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬೆರೆಡೆಗೆ ಮರಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಕೃಷಿ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಉರುಳಿಸುವ ಬದಲಾಗಿ ಅವುಗಳನ್ನು ಉಳಿಸಿ ಬದಲಾವಣೆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

  • ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಸಿಲುಕಿತು ಮನೆಮುಂದಿದ್ದ ಟ್ರ್ಯಾಕ್ಟರ್

    ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಸಿಲುಕಿತು ಮನೆಮುಂದಿದ್ದ ಟ್ರ್ಯಾಕ್ಟರ್

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಮನೆಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಭೂಕುಸಿತದಲ್ಲಿ ಸಿಲುಕಿದ ಘಟನೆ ನಡೆದಿದೆ.

    ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಭೂಕುಸಿತ ಸಂಭವಿಸಿದೆ. ಕಸಬಾ ಓಣಿಯ ನಿವಾಸಿ ಮಹಾಂತೇಶಗೌಡ, ಪ್ರಭುಗೌಡ ಅವರ ಮನೆ ಮುಂಭಾಗದಲ್ಲಿ ಭೂಮಿ ಕುಸಿದಿದೆ. ಪರಿಣಾಮ ಆ ಸ್ಥಳದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮಣ್ಣಿನಡಿ ಸಿಲುಕಿಕೊಂಡಿತ್ತು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಆಳಕ್ಕೆ ಇಳಿಯುತ್ತಿದ್ದ ಟ್ರ್ಯಾಕ್ಟರ್‌ನನ್ನು ಜೆಸಿಬಿ ಸಹಾಯದಿಂದ ಮೇಲಕ್ಕೆ ಎತ್ತಿದ್ದಾರೆ. ಇದನ್ನೂ ಓದಿ:ದಿಢೀರ್ ಭೂಕುಸಿತ – 10 ಅಡಿ ಗುಂಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ

    2 ವಾರದ ಹಿಂದೆ ಕೂಡ ನರಗುಂದ ಕಸಬಾ ಓಣಿಯಲ್ಲಿ ಭೂಕುಸಿತವಾಗಿತ್ತು. ಈ ವೇಳೆ ರತ್ನಾಕರ ದೇಶಪಾಂಡೆ ಎಂಬವರು ಗುಂಡಿಯಲ್ಲಿ ಸಿಲುಕಿಕೊಂಡಿದ್ದರು. ರತ್ನಾಕರ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಹೂ ಕಿತ್ತು ತರುವ ವೇಳೆ ದಿಢೀರ್ ಭೂ ಕುಸಿತವಾಗಿತ್ತು. ಪರಿಣಾಮ ರತ್ನಾಕರ ಅವರು ಸುಮಾರು 10 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ಅವರ ನರಳಾಟ, ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ರಕ್ಷಣೆ ಮಾಡಿದ್ದರು.

    ದೇಶಪಾಂಡೆ ಅವರನ್ನು ಏಣಿ ಹಾಗೂ ಹಗ್ಗದ ಮೂಲಕ ಮೇಲೆ ಎತ್ತಿದ್ದರು. ನರಗುಂದ ಪಟ್ಟಣದಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 15 ಕಡೆಗಳಲ್ಲಿ ಭೂಕುಸಿತವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

  • ಬೇಸಾಯ ಸ್ಥಳದಲ್ಲೇ ಎಂಜಿನಿಯರ್ ಸೃಷ್ಟಿ- ದೇಸಿ ಜೆಸಿಬಿ ತಯಾರಿಸಿದ್ದಾರೆ ಅಶ್ವಿನ್ ಕುಮಾರ್

    ಬೇಸಾಯ ಸ್ಥಳದಲ್ಲೇ ಎಂಜಿನಿಯರ್ ಸೃಷ್ಟಿ- ದೇಸಿ ಜೆಸಿಬಿ ತಯಾರಿಸಿದ್ದಾರೆ ಅಶ್ವಿನ್ ಕುಮಾರ್

    ಮಡಿಕೇರಿ: ಬೇರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಕೃಷಿ ರಂಗದಲ್ಲಿ ಪ್ರಯೋಗಗಳು ಅಷ್ಟಾಗಿ ಹೆಚ್ಚೇನೂ ಆಗೋದಿಲ್ಲ. ಹೀಗಾಗಿ ನಮ್ಮ ದೇಶ ಕೃಷಿ ಪ್ರದಾನ ರಾಷ್ಟ್ರವಾದರೂ ಬಹಳ ಹಿಂದೆನೇ ಉಳಿದಿದೆ. ಆದರೆ ಪ್ರತಿ ಹಳ್ಳಿಗೆ ಅಲ್ಲ, ಪ್ರತಿ ಜಿಲ್ಲೆಗೊಬ್ಬ ಇಂತಹ ಅಸಾಧಾರಣ ರೈತನಿದ್ದರೆ ಖಂಡಿತವಾಗಿಯೂ ಕೃಷಿ ಕ್ಷೇತ್ರದಲ್ಲೂ ನಮ್ಮ ದೇಶ ಕೂಡ ಪ್ರಗತಿ ಸಾಧಿಸಬಹುದು.

    ಹೌದು. ಮಡಿಕೇರಿಯ ಹುಲಿತಾಳದ ರೈತ ಅಶ್ವಿನ್ ಕುಮಾರ್ ಅವರು ದೇಸಿ ಜೆಸಿಬಿಯ ರೂವಾರಿಯಾಗಿದ್ದಾರೆ. ಬಿಎಸ್ಸಿ ಪದವಿಧರರಾದ ಅಶ್ವಿನ್‍ಗೆ ಹೊಸ ಹೊಸ ಆವಿಷ್ಕಾರಗಳನ್ನ ಮಾಡೋದಂದರೆ ಎಲ್ಲಿಲ್ಲದ ಆಸಕ್ತಿ. ತಮ್ಮ ಕೃಷಿಯ ಅನುಕೂಲಕ್ಕೆ ಜೆಸಿಬಿ ಯಂತ್ರವನ್ನು ಹೋಲುವ ಮಿನಿ ಮಷಿನ್ ತಯಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.

    ಸಾಮಾನ್ಯವಾಗಿ ಎಲ್ಲ ಕೃಷಿಕರು ಎದುರಿಸೋ ಕಾರ್ಮಿಕರ ಕೊರತೆಯನ್ನ ಅಶ್ವಿನ್ ಕೂಡ ಎದುರಿಸಿದ್ದರು. ಈ ವೇಳೆ ಅಶ್ವಿನ್ ತಲೆಯಲ್ಲಿ ಹೊಳೆದಿದ್ದೇ ಮಿನಿ ಜೆಸಿಬಿ ತಯಾರಿ. ಮೊದಲ ಪ್ರಯತ್ನದಲ್ಲಿ ಸ್ವಲ್ಪ ಎಡವಿದರೂ ನಂತರ ಯಶಸ್ಸನ್ನು ಕಂಡರು. ದೇಸಿ ಜೆಸಿಬಿಗೆ ಬಳಸಿರೋದು ಆಟೋ ರಿಕ್ಷಾದ 8 ಹೆಚ್‍ಪಿ ಸಾಮಥ್ರ್ಯದ ಎಂಜಿನ್. ಜೊತೆಗೆ ಹೈಡ್ರಾಲಿಕ್ ಟ್ಯಾಂಕ್, ಹೈಡ್ರಾಲಿಕ್ ಪಂಪ್, ಹೈಡ್ರಾಲಿಕ್ ಫಿಲ್ಟರ್, ಪ್ರೆಶರ್ ರೆಗ್ಯುಲೇಟರ್ ಬಳಸಲಾಗಿದೆ.

    ಮಣ್ಣು ಅಗೆಯುವ ಬಕೆಟ್ ಹಾಗೂ ಸಮತಟ್ಟು ಮಾಡುವ ಬ್ಲೇಡ್‍ನ ಚಲನೆಗಾಗಿ ಬೂಮ್ ಸಿಲಿಂಡರ್ ಕೂಡ ಅಳವಡಿಸಲಾಗಿದೆ. ಜೆಸಿಬಿಯಂತೆ ಗೇರ್‍ಗಳ ನೆರವಿನಿಂದ ಅವುಗಳನ್ನು ಚಲಿಸುವಂತೆ ಮಾಡಲಾಗಿದೆ. ಯಂತ್ರ ತಯಾರಿಸಲು ಖರ್ಚಾಗಿದ್ದು ಕೇವಲ ಎರಡೂವರೆ ಲಕ್ಷ. ಅರ್ಧ ಲೀಟರ್ ಡೀಸೆಲ್ ಇದ್ದರೆ ಒಂದು ಗಂಟೆ ಕೆಲಸ ಮಾಡಬಹುದಾಗಿದೆ ಎಂದು ಅಶ್ವಿನ್ ಹೇಳುತ್ತಾರೆ.

    ಸದ್ಯ ಈ ದೇಸಿ ಜೆಸಿಬಿಯನ್ನ ತೋಟದಲ್ಲಿ ಚರಂಡಿ ತೆಗೆಯಲು, ಮಣ್ಣು ಸಮತಟ್ಟು ಮಾಡಲು ಬಳಸುತ್ತಿದ್ದಾರೆ. ಹೊಸದಾಗಿ ಬಾಳೆ ಕೃಷಿ ಮಾಡುತ್ತಿದ್ದು, ಬಾಳೆ ತೋಟದಲ್ಲಿ ಸಣ್ಣ ಸಣ್ಣ ಗುಂಡಿ ತೆಗೆಯಲು ಇದನ್ನು ಪ್ರಾಯೋಗಿಕವಾಗಿ ಬಳಸಿ ಯಶಸ್ಸು ಕಂಡಿದ್ದಾರೆ. ಈ ದೇಸಿ ಜೆಸಿಬಿ ನೋಡಲು ಪ್ರತಿನಿತ್ಯ ಅನೇಕರು ಬರುತ್ತಾರೆ.

  • ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

    ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.

    ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

    ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.

  • ಸಿರಿಂಜಿಯಿಂದ ಕೆಲಸ ಮಾಡುತ್ತೆ ಜೆಸಿಬಿ – ಬಾಲಕನ ವಿಡಿಯೋ ವೈರಲ್

    ಸಿರಿಂಜಿಯಿಂದ ಕೆಲಸ ಮಾಡುತ್ತೆ ಜೆಸಿಬಿ – ಬಾಲಕನ ವಿಡಿಯೋ ವೈರಲ್

    ನವದೆಹಲಿ: ಸಿರಿಂಜಿ ಮೂಲಕ ಜೆಸಿಬಿ ಕಾರ್ಯನಿರ್ವಹಿಸುವುದನ್ನು ಪರಿಚಯಿಸಿದ ಬಾಲಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇಂಧನ ಇಲ್ಲದೆ ಗಾಳಿಯ ಸಹಾಯದಿಂದ ಜೆಸಿಬಿ ಕಾರ್ಯನಿರ್ವಹಿಸುವುದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬಾಲಕನ ಸುತ್ತ ನಿಂತಿದ್ದ ಮಕ್ಕಳು ಕುತೂಹಲದಿಂದ ಈ ದೃಶ್ಯವನ್ನು ನೋಡುತ್ತಿರವುದು ವಿಡಿಯೋದಲ್ಲಿ ಸೆರೆಯಾಗಿದೆ.

    ರಾಜೇಸಾಬ್ ಕೇಜ್ರಿವಾಲ್ ಎಂಬವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಒಂದು ಕ್ಷಣ ನಿಮ್ಮ ಎಂಜಿನಿಯರಿಂಗ್ ಪದವಿಯನ್ನು ಪಕ್ಕಕ್ಕೆ ಇಟ್ಟು ಪುಟ್ಟ ಬಾಲಕನ ಯಂತ್ರಜ್ಞಾನದ ಕೌಶಲ್ಯವನ್ನು ನೋಡಿ ಎಂದು ಬರೆದುಕೊಂಡಿದ್ದಾರೆ.

    ಈ ವಿಡಿಯೋವನ್ನು ರಾಜೇಸಾಬ್ ಕೇಜ್ರಿವಾಲ್ ಅವರು ಮೇ 28ರಂದು ಟ್ವೀಟ್ ಮಾಡಿದ್ದಾರೆ. ಮೇ 30 ಮಧ್ಯಾಹ್ನ 3 ಗಂಟೆಯ ವೇಳೆ ಬಾಲಕನ ವಿಡಿಯೋವನ್ನು 1.39 ಲಕ್ಷ ಜನರು ನೋಡಿದರೆ, 1,200 ಕ್ಕೂ ಹೆಚ್ಚು ಜನರು ರೀ ಟ್ವೀಟ್ ಮಾಡಿದ್ದಾರೆ. 5,800ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

    ಬಾಲಕನ ಕಾರ್ಯ ಪ್ರಶಂಸನೀಯವಾಗಿದೆ. ಕೌಶಲ್ಯ ಹಾಗೂ ಪ್ರತಿಭೆ ಒಟ್ಟಿಗೆ ಅನಾವರಣಗೊಂಡಿವೆ ಎಂದು ಇಮ್ರಾನ್ ಖಾನ್ ಎಂಬವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://twitter.com/imran_khan206/status/1133670776089894912

    2035ರ ವೇಳೆ ಬಾಲಕ ಜೆಸಿಬಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಆಗುತ್ತಾನೆ ಎಂಬ ಭರವಸೆ ನನಗಿದೆ ಎಂದು ನೆಟ್ಟಿಗರೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಬಾಲಕ ಎಲ್ಲಿಯವನು ಎಂದು ವಿಚಾರಣೆ ಮಾಡಿ, ಆತನ ವ್ಯಾಸಂಗಕ್ಕೆ ಸಹಾಯ ಮಾಡಬೇಕು. ಬಾಲಕ ಸಾಮರ್ಥ್ಯವನ್ನು ಹೊರತರಲು ಶ್ರಮಿಸಬೇಕಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.