Tag: jc madhuswamy

  • ಪೌರತ್ವ ತಿದ್ದುಪಡಿ ಕಾಯ್ದೆ ಗೊಂದಲ ನಿವಾರಣೆಗೆ ಮುಂದಾದ ಬಿಜೆಪಿ

    ಪೌರತ್ವ ತಿದ್ದುಪಡಿ ಕಾಯ್ದೆ ಗೊಂದಲ ನಿವಾರಣೆಗೆ ಮುಂದಾದ ಬಿಜೆಪಿ

    -ಬಿಜೆಪಿಯಿಂದ ಕಾರ್ಯಾಗಾರಗಳ ಆಯೋಜನೆ

    ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಂಡಿದೆ. ಹಲವೆಡೆ ಹಿಂಸಾಚಾರ ಭುಗಿಲೆದ್ದು, ಕರ್ಪ್ಯೂ, ನಿಷೇಧಾಜ್ಞೆ ಜಾರಿಯಲ್ಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣದಿಂದಲೇ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸುವ, ಗೊಂದಲ ನಿವಾರಿಸುವ ಕಾರ್ಯಕ್ಕೆ ಬಿಜೆಪಿ ಕೈಹಾಕಿದೆ.

    ಈ ಕಾರ್ಯವನ್ನು ಹಂತಹಂತವಾಗಿ ಕೈಗೊಳ್ಳಲು ಮುಂದಾಗಿರುವ ರಾಜ್ಯ ಬಿಜೆಪಿ ಮೊದಲ ಭಾಗವಾಗಿ ಪಕ್ಷದ ಕಾರ್ಯಕರ್ತರಲ್ಲಿ ಅರಿವು ಮೂಡಿಸಲು ಮುಂದಾಯ್ತು. ಇವತ್ತು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪೌರತ್ವ ಕಾಯ್ದೆ ಕುರಿತು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿವರಣೆ ನೀಡಿದರು. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳ ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಾಗಾರಾದಲ್ಲಿ ಭಾಗವಹಿಸಿದ್ದರು.

    ಕಾರ್ಯಾಗಾರ ಉದ್ದೇಶಿಸಿ ಮೊದಲಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾತಾಡಿ ಪೌರತ್ವ ಕಾಯ್ದೆ ಎಂದರೇನು, ಅದರ ಉದ್ದೇಶ, ಕಾರಣ, ಯಾಕೆ ವಿರೋಧ ಎಂಬ ವಿಚಾರಗಳ ಕುರಿತು ಅರ್ಥವತ್ತಾಗಿ ವಿವರಿಸಿದರು. ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆ ಸಂಬಂಧ ಅಲ್ಪಸಂಖ್ಯಾತರಿಗೆ ಕುಮ್ಮಕ್ಕು ಕೊಟ್ಟು, ಷಡ್ಯಂತ್ರ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಭಾರತೀಯ ಜನತಾ ಪಕ್ಷದವರು ಯಾವುದೇ ತಪ್ಪು ಮಾಡಿಲ್ಲ. ಸಂವಿಧಾನ ಬದ್ಧವಾದ ಕೆಲಸವನ್ನೇ ಮಾಡಿದ್ದೇವೆ. ನಾವು ಯಾವುದೇ ಧರ್ಮವನ್ನು ಇಬ್ಭಾಗ ಮಾಡಿಲ್ಲ. ಕಿರುಕುಳ ಅನುಭವಿಸಿ ಬಂದವರಿಗೆ ಸಹಾಯ ಹಸ್ತ ಚಾಚುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

    ಪೌರತ್ವ ಕೊಡಲು ಕಾಯ್ದೆಯಲ್ಲಿ ಮುಸ್ಲಿಮರನ್ನು ಯಾಕೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸುತ್ತಿರುವವರು ಅಂದು ಆ ಮೂರು ರಾಷ್ಟ್ರಗಳಲ್ಲಿ ಆರು ಧರ್ಮೀಯರು ಕಿರುಕುಳ ಅನುಭವಿಸುತ್ತಿದ್ದಾಗ ಯಾಕೆ ಪ್ರಶ್ನಿಸಿಲ್ಲ ಎಂದರು. ಆಗಿಲ್ಲದ ಮಾನವ ಹಕ್ಕುಗಳ ಉಲ್ಲಂಘನೆ ಈಗ ಹೇಗೆ ಆಗುತ್ತದೆ ಎಂದು ವಿಶ್ವಸಂಸ್ಥೆ ವಿರುದ್ಧ ಸಚಿವ ಮಾಧುಸ್ವಾಮಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

    ಪಶ್ಚಿಮ ಬಂಗಾಳದಲ್ಲಿ ಗಡಿಯೇ ಇಲ್ಲ, ಒಂದೊಂದು ಎಲೆಕ್ಷನ್ ಗೆ 10 ಲಕ್ಷ ಜನ ಬಂದು ವೋಟ್ ಹಾಕಿ ಹೋಗುತ್ತಾರೆ. ಹಾಗಾಗಿ ಅವರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಪ್ರಮುಖವಾಗಿ ಆರು ಧರ್ಮಗಳ ಜನ ಅಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ತಮ್ಮ ಮೂಲಮನೆಯನ್ನು ಹುಡುಕಿಕೊಂಡು ಬಂದಾಗ ಅವರಿಗೆ ಸ್ಟೇಟ್ ಲೆಸ್ ಪರಿಸ್ಥಿತಿ ನೀಡಬೇಕಾ? ಸರಿಯಾದ ದಾಖಲೆ ಇಲ್ಲದೇ ಈ ರೀತಿ ಬಂದಿರುವವರು ಸುಮಾರು 30,000 ಜನ ಇದ್ದಾರೆ. ಇವರಿಗೆ ಪೌರತ್ವ ಕೊಡಬೇಕು ಎಂಬುದಷ್ಟೇ ನಮ್ಮ ಇಚ್ಛೆ ಎಂದು ಇದೇ ವೇಳೆ ಸಚಿವ ಮಾಧುಸ್ವಾಮಿ ತಿಳಿಸಿದರು.

    ಡಾ.ಸಿ.ಎನ್.ಅಶ್ವಥ ನಾರಾಯಣ:
    ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರದಲ್ಲಿ ಗೊಂದಲ ಮೂಡಿಸುವ ಯತ್ನಗಳು ನಡೆಯುತ್ತಿವೆ ಎಂದು ಕಾರ್ಯಾಗಾರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು. ಗೊಂದಲ ಹುಟ್ಟಿಸೋರಲ್ಲಿ ಕಾಯ್ದೆ ಕುರಿತು ಸ್ಪಷ್ಟತೆ ಮೂಡಿಸಬೇಕಿದೆ. 2014ಕ್ಕೂ ಮುಂಚೆ ವಲಸೆ ಬಂದವರಿಗಾಗಿ ಪೌರತ್ವ ಕೊಡಲು ಸಿಎಎ ಕಾಯ್ದೆ ತರಲಾಯಿತು. ಅಮೆರಿಕದ ಕಾಯ್ದೆಯಲ್ಲೂ ವಲಸಿಗ ಕ್ರೈಸ್ತರಿಗೆ ಪೌರತ್ವ ಕೊಡಲು ಆದ್ಯತೆ ಕೊಡಲಾಗಿದೆ. ಆದರೆ ನಮ್ಮಲ್ಲಿ ಆ ರೀತಿ ಮಾಡಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಗಳಲ್ಲಿ ನಡೆದ ದೌರ್ಜನ್ಯಕ್ಕೆ ಇಲ್ಲಿ ನ್ಯಾಯ ಕೊಡಲಾಗಿದೆ ಎಂದು ತಿಳಿಸಿದರು. ಈ ಕಾಯ್ದೆ ಮೂಲಕ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಲಾಗಿದೆ. ಆದರೆ ಆ ದೇಶಗಳ ಮುಸ್ಲಿಮರಿಗೂ ಪೌರತ್ವ ಕೊಡಿ ಅನ್ನುವ ಆಗ್ರಹ ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನ್ಯಾಯ? ರೋಹಿಂಗ್ಯ ಮುಸ್ಲಿಮರಿಗೆ ಚೀನಾ ಗಡಿ 400 ಕಿ.ಮೀ.ದೂರದಲ್ಲಿದೆ. ನಮ್ಮ ದೇಶದ ಗಡಿ 2,700 ಕಿ.ಮೀ ಇದೆ. ಅವರು ಚೀನಾಕ್ಕೆ ಹೋಗದೇ ನಮ್ಮ ದೇಶಕ್ಕೆ ಯಾಕೆ ಬಂದರು ಎಂದು ಪ್ರಶ್ನಿಸಿದರು.

    ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬಿಜೆಪಿಯಿಂದ ಎಲ್ಲ ಜಿಲ್ಲಾ ಮಟ್ಟದಲ್ಲೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸಲು ಸದ್ಯದಲ್ಲೇ ಕಾರ್ಯಾಗಾರಗಳನ್ನೂ ನಡೆಸಲು ನಿರ್ಧರಿಸಲಾಗಿದೆ.

  • ಅಮಿತ್ ಶಾ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗಿಲ್ಲ- ಮಾಧುಸ್ವಾಮಿ

    ಅಮಿತ್ ಶಾ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗಿಲ್ಲ- ಮಾಧುಸ್ವಾಮಿ

    ಮಂಡ್ಯ: ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಮೇಲಿನವರು ಏನೋ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರೆ, ಅವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ನೀಡುರುವುದು ವೈಯಕ್ತಿಕ ಅಭಿಪ್ರಾಯವಾಗಿದೆ. ಒಬ್ಬೊಬ್ಬರ ಅಭಿಪ್ರಾಯಗಳು ಒಂದು ರೀತಿ ಇರುತ್ತವೆ. ಮೇಲೆ ಇರುವವರು ತೀರ್ಮಾನ ತೆಗೆದುಕೊಂಡಾಗ ನಮಗಿಂತ ಜಾಸ್ತಿ ತಿಳುವಳಿಕೆ ಇದೆ ಎಂದು ಭಾವಿಸುತ್ತೇನೆ ಎಂದರು.

    ನಾವು ಅಮಿತ್ ಶಾ ಅವರ ತಿಳುವಳಿಕೆಯನ್ನು ಪ್ರಶ್ನಿಸುವ ಹಾಗೆ ಇಲ್ಲ. ಮೇಲಿನವರು ಯಾವ ಯಾವ ಕಾರಣಕ್ಕೆ ಮಾಡುತ್ತಾರೆ ಎಂದು ಗೊತ್ತಿಲ್ಲ. ಅವರು ತೀರ್ಮಾನ ತೆಗೆದುಕೊಂಡಿರುವುದು ಪಕ್ಷಕ್ಕೆ ಒಳ್ಳೆಯಾದಾಗುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದೇ ವೇಳೆ ಮೂವರು ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಭಿನ್ನಮತ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಚಾಯ್ತಿ ಸದಸ್ಯ ಆದಾಗ ಅಧ್ಯಕ್ಷ ಆಗಬೇಕು ಎಂದು ಇರುತ್ತದೆ. ಹಾಗೆಯೇ ಶಾಸಕನಾದಾಗ ಮಂತ್ರಿ ಆಗಬೇಕು ಅನ್ನೋದು ಸಹಜ ಎಂದು ಹೇಳಿದರು.

    ಕೇಂದ್ರದಿಂದ ಪ್ರವಾಹದ ಪರಿಹಾರ ಕುರಿತು ಇದೇ ವೇಳೆ ಮಾತನಾಡಿದ ಅವರು, ಪ್ರವಾಹ ಪೀಡಿತರಿಗೆ ನೆರವು ನೀಡಲು ಕಮಿಟಿ ಮಾಡಿ ತೀರ್ಮಾನ ಮಾಡಲಾಗಿದೆ. ತುರ್ತಾಗಿ ಮಾಡಬೇಕಾದದ್ದನ್ನು ರಾಜ್ಯ ಸರ್ಕಾರ ಮಾಡಿದೆ. 32 ಸಾವಿರ ಕೋಟಿ ನಷ್ಟ ಆಗಿದೆ ಎಂದು ಸಮೀಕ್ಷೆ ಮಾಡಿದ್ದೇವೆ. 7 ರಂದು ಮೋದಿ ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ನಾವು ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

  • ಪ್ರಮಾಣವಚನದ ವೇಳೆ ಮುಖ್ಯಮಂತ್ರಿ ಎಂದ ಮಾಧುಸ್ವಾಮಿ

    ಪ್ರಮಾಣವಚನದ ವೇಳೆ ಮುಖ್ಯಮಂತ್ರಿ ಎಂದ ಮಾಧುಸ್ವಾಮಿ

    ಬೆಂಗಳೂರು: ಜೆ.ಸಿ ಮಾಧುಸ್ವಾಮಿ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

    ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಮಾಧು ಸ್ವಾಮಿ ಅವರು ಮಂತ್ರಿಯಾಗಿ ಎನ್ನುವ ಬದಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವುದಾಗಿ ಹೇಳಿದರು. ಕೂಡಲೇ ತನ್ನ ತಪ್ಪಿನ ಅರಿವಾಗಿ ಮಂತ್ರಿಯಾಗಿ ಎಂದು ಹೇಳುತ್ತಾ ನಸುನಕ್ಕರು.

    ಚಿಕ್ಕನಾಯಕನ ಹಳ್ಳಿಯ ಮಾಧುಸ್ವಾಮಿ ಅವರಿಗೆ ಲಿಂಗಾಯತ ಕೋಟಾದಿಂದ ಮಂತ್ರಿ ಸ್ಥಾನ ದೊರಕಿದೆ. ಇವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

    ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?
    ತುಮಕೂರಿನ ಚಿಕ್ಕನಾಯಕನಹಳ್ಳಿಯ ಶಾಸಕರಾಗಿರುವ ಮಾಧುಸ್ವಾಮಿ ಹೆಚ್‍ಡಿಕೆ ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ್ದಾಗ ಬಿ.ಎಸ್.ವೈ ಬೆನ್ನಿಗೆ ನಿಂತಿದ್ದರು. ಸದನದ ಹೊರಗಡೆ ಮತ್ತು ಸದನದ ಒಳಗಡೆ ಬಿಎಸ್‍ವೈ ಪಾಲಿನ ಆಪತ್ಭಾಂಧವ ಎಂದೇ ಗುರುತಿಸಿಕೊಂಡಿದ್ದಾರೆ.

    ಯಾವುದೇ ವಿಚಾರಗಳನ್ನು ನೇರ ನೇರವಾಗಿ ಹೇಳು ಮಾಧುಸ್ವಾಮಿ ಕಾನೂನು, ಆಡಳಿತ, ಕೃಷಿ, ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ. ಉತ್ತಮ ಸಂಸದೀಯ ಪಟು ಆಗಿರುವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಉತ್ತಮ ಮಾತುಗಾರನಾಗಿ ಗುರುತಿಸಿಕೊಂಡಿದ್ದಾರೆ. ಬಂಡಾಯ ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಲ್ಲಿ ನಡೆದ ಹೈಡ್ರಾಮದ ವೇಳೆ ಬಿಜೆಪಿ ಪರವಾಗಿ ಮಾಧುಸ್ವಾಮಿ ಒಬ್ಬರೇ ಎದ್ದು ನಿಂತು ಪ್ರಬಲವಾಗಿ ವಾದ ಮಂಡಿಸುತ್ತಿದ್ದರು. ಹೀಗಾಗಿ ಮಾಧುಸ್ವಾಮಿ ಸಚಿವರಾಗಿ ತಮ್ಮ ಜೊತೆಗಿದ್ದರೆ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೈಕಮಾಂಡ್‍ಗೆ ಬಿಎಸ್ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟಿದ್ದರು.

    ಜನತಾ ಪಕ್ಷ ಒಟ್ಟಿಗೆ ಇದ್ದಾಗ ಅದರಲ್ಲಿ ಮಾಧುಸ್ವಾಮಿ ಗುರುತಿಸಿಕೊಂಡಿದ್ದರು. ಆ ನಂತರ ರಾಮಕೃಷ್ಣ ಹೆಗ್ಗಡೆ ಜತೆ ಗುರುತಿಸಿಕೊಂಡರು. ಆ ನಂತರ ಯಡಿಯೂರಪ್ಪ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಕಟ್ಟಿದಾಗ ಕೆಜೆಪಿಗೆ ಬಂದರು. ಬಳಿಕ ಯಡಿಯೂರಪ್ಪನವರು ಮುನಿಸು ಮರೆತು ಬಿಜೆಪಿಗೆ ಬಂದಾಗ ಅವರ ಜೊತೆ ಮರಳಿ ಕಮಲದ ಕಡೆ ಹೆಜ್ಜೆ ಹಾಕಿದ ನಾಯಕರ ಪೈಕಿ ಇವರು ಒಬ್ಬರಾಗಿದ್ದಾರೆ.

    ಸಚಿವ ಸ್ಥಾನ ಸಿಕ್ಕ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಧು ಸ್ವಾಮಿ, ಯಾವ ಖಾತೆ ಕೊಟ್ಟರು ಉತ್ತಮ ಕೆಲಸ ಮಾಡುತ್ತೇನೆ. ನಾನು ಹಳ್ಳಿಯಿಂದ ಬಂದವನು, ಹೀಗಾಗಿ ರೈತರಿಗೆ ಸಂಬಂಧಪಟ್ಟ ಖಾತೆ ಕೊಟ್ಟರೆ ಅನುಭವವಿರುವುದರಿಂದ ಸ್ವಲ್ಪ ಚೆನ್ನಾಗಿ ಕೆಲಸ ಮಾಡುತ್ತೆನೆ. ರೈತರಿಗೆ ಸಂಬಂಧಪಟ್ಟ ಖಾತೆಯಲ್ಲಿ ಕೆಲಸ ಮಾಡುವ ಆಸೆ ಇದೆ. ಆದರೆ ಖಾತೆ ಹಂಚಿಕೆ ಮಾಡುವವರು ನಾಯಕರು, ಅವರಿಗೆ ಏನು ಆಸೆ ಇದೆಯೋ ಗೊತ್ತಿಲ್ಲ. ಅವರ ನಿರೀಕ್ಷೆಯನ್ನು ಪೂರ್ತಿಗೊಳಿಸುವುದು ಕೂಡ ನಮ್ಮ ಕರ್ತವ್ಯ ಎಂದರು.