Tag: Jayanth Kaikini

  • ವೆಡ್ಡಿಂಗ್ ಗಿಫ್ಟ್‌ನಿಂದ ಸಿಕ್ಕೇ ಬಿಡ್ತು ‘ರೋಮಾಂಚಕ’ ಡ್ಯುಯೆಟ್ ಸಾಂಗ್

    ವೆಡ್ಡಿಂಗ್ ಗಿಫ್ಟ್‌ನಿಂದ ಸಿಕ್ಕೇ ಬಿಡ್ತು ‘ರೋಮಾಂಚಕ’ ಡ್ಯುಯೆಟ್ ಸಾಂಗ್

    ವಿಕ್ರಮ್ ಪ್ರಭು ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿರುವ ‘ವೆಡ್ಡಿಂಗ್ ಗಿಫ್ಟ್’ ಚಿತ್ರ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಅದರಂತೆ ಚಿತ್ರದ ಪ್ರಚಾರ ಕಾರ್ಯಕ್ಕೂ ಚಾಲನೆ ನೀಡಿದ್ದು ಅದರ ಮೊದಲ ಭಾಗವಾಗಿ ಡ್ಯುಯೆಟ್ ಸಾಂಗ್ ಒಂದನ್ನು ನೀಡಿ ಚಿತ್ರತಂಡ ಸಿನಿಮಾಗೆ ಆಮಂತ್ರಣ ನೀಡಿದೆ.

    ‘ರೋಮಾಂಚಕ’ ವಿಡೀಯೋ ಸಾಂಗ್ ಇಂದು ಬಿಡುಗಡೆಯಾಗಿದ್ದು ಕೇಳಲು ಹಿತವಾದ ಡ್ಯುಯೆಟ್ ಸಾಂಗ್ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಡ್ಯುಯೆಟ್, ರೋಮ್ಯಾಂಟಿಕ್, ಲವ್ ಸಾಂಗ್ ಯಾವ್ದೆ ಜಾನರ್ ಇರಲಿ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ ಅಂದ್ರೆ ಹಾಡು ಗೆದ್ದಂಗೆ ಲೆಕ್ಕ. ‘ವೆಡ್ಡಿಂಗ್ ಗಿಫ್ಟ್’ ಬಿಡುಗಡೆ ಮಾಡಿರುವ ‘ರೋಮಾಂಚಕ’ ವೀಡಿಯೋ ಸಾಂಗ್‍ಗೆ ಜಯಂತ್ ಕಾಯ್ಕಿಣಿ ಪದಗಳ ಮೋಡಿಯಿದ್ದು, ಸಂಗೀತ ನಿರ್ದೇಶಕ ಬಾಲಚಂದ್ರ ಪ್ರಭು ಹಿತವಾದ ಸಂಗೀತ ಸಂಯೋಜನೆ ಮಾಡೋದ್ರ ಜೊತೆಗೆ ಹಾಡಿಗೆ ದನಿ ನೀಡಿ ಹಾಡನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಪರಶ್ರಮಕ್ಕೆ ಹೈಟ್ ಮಂಜು ಅಷ್ಟೇ ಚೆಂದವಾಗಿ ಕೋರಿಯೋಗ್ರಫಿ ಮಾಡಿ ಗಮನ ಸೆಳೆದಿದ್ದಾರೆ. ಸದ್ಯಕ್ಕಂತೂ ಕೇಳುಗರಿಗೆ ಈ ಹಾಡು ಮೋಡಿ ಮಾಡಿದೆ. ಇದನ್ನೂ ಓದಿ: ಸಿನಿ ಶುಕ್ರವಾರ ‘ವೆಡ್ಡಿಂಗ್ ಗಿಫ್ಟ್’ ಚಿತ್ರದಿಂದ ಪ್ರೇಕ್ಷಕರಿಗೆ ಡ್ಯುಯೆಟ್ ಸಾಂಗ್ ಗಿಫ್ಟ್

    ಚಿತ್ರದಲ್ಲಿ ನಿಶಾನ್ ನಾಣಯ್ಯ, ಸೋನು ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ನಟಿ ಪ್ರೇಮ ಲಾಯರ್ ಅವತಾರದಲ್ಲಿ ನಾಲ್ಕು ವರ್ಷಗಳ ಬಳಿಕ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಡಾರ್ಕ್ ಥ್ರಿಲ್ಲರ್ ಕಥಾಹಂದರ ಚಿತ್ರದಲ್ಲಿದೆ. ನಾನು ಎಂಬುದು ಸಂಸಾರದಲ್ಲಿ ಬಂದಾಗ ಅದು ಯಾವೆಲ್ಲ ರೀತಿ ಬದುಕಿಗೆ ತಿರುವನ್ನು ನೀಡುತ್ತದೆ ಅನ್ನೋದು ಚಿತ್ರದ ಒನ್ ಲೈನ್ ಸ್ಟೋರಿ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಉದಯ್ ಲೀಲಾ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆಯಾಗಿದೆ.

    ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕರ ಜೊತೆಗೆ ಪಳಗಿ ಸಿನಿಮಾ ನಿರ್ದೇಶನದ ಕುಶಲ ಕಲೆಗಳನ್ನು ಕಲಿತು ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ವಿಕ್ರಮ್ ಪ್ರಭು. ಕೇವಲ ನಿರ್ದೇಶನ ಮಾತ್ರವಲ್ಲ ವಿಕ್ರಂ ಪ್ರಭು ಫಿಲಂಸ್ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ಕೂಡ ನಿರ್ಮಿಸಿದ್ದಾರೆ.

  • ಬದ್ರಿ ವರ್ಸಸ್ ಮಧುಮತಿ: ಮ್ಯೂಸಿಕಲ್ ಹಿಟ್ ಆಗಲಿದೆಯಾ ರೊಮ್ಯಾಂಟಿಕ್ ಆ್ಯಕ್ಷನ್ ಮೂವಿ?

    ಬದ್ರಿ ವರ್ಸಸ್ ಮಧುಮತಿ: ಮ್ಯೂಸಿಕಲ್ ಹಿಟ್ ಆಗಲಿದೆಯಾ ರೊಮ್ಯಾಂಟಿಕ್ ಆ್ಯಕ್ಷನ್ ಮೂವಿ?

    ಬೆಂಗಳೂರು: ಹಾಡುಗಳು ಗೆದ್ದರೆ ಸಿನಿಮಾ ಕೂಡಾ ಗೆದ್ದೇ ಗೆಲ್ಲುತ್ತದೆ ಅನ್ನೋದು ಗಾಂಧಿನಗರದಲ್ಲಿ ಬೇರು ಬಿಟ್ಟಿರೋ ಹಳೇ ನಂಬಿಕೆ. ಅದರ ಬೇರುಗಳು ಗಟ್ಟಿಯಾಗಿವೆ. ಯಾಕೆಂದರೆ ಈ ನಂಬಿಕೆಗೆ ಪುಷ್ಠಿ ನೀಡುವಂಥಾ ಹತ್ತಾರು ಉದಾಹರಣೆಗಳಿದ್ದಾವೆ. ಆ ನಿಟ್ಟಿನಲ್ಲಿ ನೋಡ ಹೋದರೆ ಬದ್ರಿ ವರ್ಸಸ್ ಮಧುಮತಿ ಎಂಬ ರೊಮ್ಯಾಂಟಿಕ್ ಆಕ್ಷನ್ ಚಿತ್ರ ಮ್ಯೂಸಿಕಲ್ ಹಿಟ್ ಆಗೋ ಸ್ಪಷ್ಟ ಲಕ್ಷಣಗಳೇ ಕಾಣಿಸುತ್ತಿವೆ.

    ಈ ಸಿನಿಮಾಗೆ ಎಲ್ವಿನ್ ಜೋಶ್ವಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿಯವರು ಆ ಮೂರೂ ಹಾಡುಗಳನ್ನು ಬರೆದಿದ್ದಾರೆ. ಅವರು ಮೂರು ಹಾಡು ಬರೆದಿದ್ದಾರೆಂಬುದರಲ್ಲಿಯೂ ಒಂದು ಗೆಲುವಿನ ಲಿಂಕ್ ಇದೆ!

    ಸಾಮಾನ್ಯವಾಗಿ ಇಷ್ಟವಾಗದಿದ್ದರೆ ಕಾಯ್ಕಿಣಿಯವರು ಒಂದಕ್ಕಿಂತ ಹೆಚ್ಚು ಹಾಡು ಬರೆಯೋದಿಲ್ಲ. ಒಂದು ಸಿನಿಮಾಗೆ ಒಂದೇ ಹಾಡೆಂಬುದು ಅವರೇ ಕಾಯ್ದುಕೊಂಡು ಬಂದಿರೋ ಸೂತ್ರ. ಆದರೆ ಅವರು ಈ ಹಿಂದೆ ಮುಂಗಾರು ಮಳೆ ಚಿತ್ರಕ್ಕೆ ಮಾತ್ರವೇ ಮೂರು ಹಾಡುಗಳನ್ನು ಬರೆದಿದ್ದರು. ಅದಾದ ನಂತರ ಅವರು ಮೂರು ಹಾಡುಗಳನ್ನು ಬರೆದಿರೋದು ಬದ್ರಿ ವರ್ಸಸ್ ಮಧುಮತಿ ಚಿತ್ರಕ್ಕೆ ಮಾತ್ರ!

    ಜಯಂತ್ ಕಾಯ್ಕಿಣಿಯವರು ಮೂರು ಹಾಡು ಬರೆದಿದ್ದಲ್ಲದೆ ಚಿತ್ರವನ್ನೂ ಮೆಚ್ಚಿಕೊಂಡಿದ್ದಾರಂತೆ. ಈಗ ಈ ಮೂರೂ ಹಾಡುಗಳೂ ಹಿಟ್ ಆಗಿವೆ. ಅರ್ಮಾನ್ ಮಲಿಕ್, ವಿಜಯ್ ಜೇಸುದಾಸ್ ಹಾಡಿರೋ ಹಾಡುಗಳಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯುತ್ತಾ ಮುನ್ನುಗ್ಗುತ್ತಿವೆ. ಇದೆಲ್ಲವೂ ಮುಂಗಾರು ಮಳೆ ಚಿತ್ರದ ಅಗಾಧ ಗೆಲುವಿನ ಇತಿಹಾಸ ಮತ್ತೆ ಪುನರಾವರ್ತನೆಯಾಗೋ ಸೂಚನೆಯಂತೆಯೇ ಭಾಸವಾಗುತ್ತಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬದ್ರಿ ವರ್ಸಸ್ ಮಧುಮತಿ: ನಾಯಕ ಪ್ರತಾಪವನ್ ಸಾಗಿಬಂದ ದಾರಿ ಸಲೀಸಾದುದಲ್ಲ!

    ಬದ್ರಿ ವರ್ಸಸ್ ಮಧುಮತಿ: ನಾಯಕ ಪ್ರತಾಪವನ್ ಸಾಗಿಬಂದ ದಾರಿ ಸಲೀಸಾದುದಲ್ಲ!

    ದಶಕಗಳ ಹಿಂದೆ ಮುಂಗಾರುಮಳೆ ಚಿತ್ರ ಹಾಡಿನ ಮೂಲಕ ಹೊಸಾ ತರಂಗವೆಬ್ಬಿಸಿ ಸೂಪರ್ ಹಿಟ್ ಆಗಿತ್ತಲ್ಲಾ? ಅಂಥಾದ್ದೇ ಆವೇಗದೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿರೋ ಸಿನಿಮಾ ಬದ್ರಿ ವರ್ಸಸ್ ಮಧುಮತಿ. ಈ ಚಿತ್ರದ ಮೂಲಕ ಪ್ರತಾಪವನ್ ಎಂಬ ಪ್ರತಿಭಾವಂತ ನಾಯಕ ನಟನ ಆಗಮನವಾಗಲು ಇದೀಗ ಕ್ಷಣಗಣನೆ ಆರಂಭವಾಗಿದೆ.

    ಬದ್ರಿ ವರ್ಸಸ್ ಮಧುಮತಿ ಚಿತ್ರವೀಗ ಜನರ ಗಮನ ಸೆಳೆದಿರೋದೇ ಚೆಂದದ ಹಾಡುಗಳ ಕಾರಣದಿಂದಾಗಿ. ಜಯಂತ್ ಕಾಯ್ಕಿಣಿಯವರು ಬರೆದ ನವಿರಾದ ಹಾಡುಗಳು ಮುಂಗಾರು ಮಳೆಯ ಇತಿಹಾಸ ಪುನರಾವರ್ತನೆಯಾಗೋ ಲಕ್ಷಣಗಳನ್ನೇ ಧ್ವನಿಸುತ್ತಿದೆ. ಇದರಲ್ಲಿನ ಒಟ್ಟು ಮೂರು ಹಾಡುಗಳನ್ನು ಕಾಯ್ಕಿಣಿ ಬರೆದಿದ್ದಾರೆ. ಆ ಮೂರೂ ಹಾಡುಗಳು ಸೃಷ್ಟಿಸುತ್ತಿರೋ ಕ್ರೇಜ್ ನೋಡಿದರೇನೇ ಈ ಹೊಸಬರ ತಂಡ ಹೊಸಾ ಕಮಾಲನ್ನೇ ಸೃಷ್ಟಿಸೋ ಲಕ್ಷಣಗಳು ನಿಚ್ಚಳವಾಗುತ್ತದೆ.

    ಇದು ಪ್ಯೂರ್ ಲವ್ ಸ್ಟೋರಿ ಹೊಂದಿರೋ ಚಿತ್ರ. ಆದರೆ ಪ್ರೇಕ್ಷಕರನ್ನು ಮುದಗೊಳಿಸುವಂಥಾ ನಾನಾ ಅಂಶಗಳನ್ನು ಬದ್ರಿ ವರ್ಸಸ್ ಮಧುಮತಿ ಹೊಂದಿದೆ ಅನ್ನೋದು ಚಿತ್ರತಂಡದ ಮಾತು. ಭಿನ್ನ ಪಥದ ಚಿತ್ರವಾಗಿ ದಾಖಲಾಗುವ ಸೂಚನೆ ರವಾನಿಸುತ್ತಿರೋ ಈ ಚಿತ್ರ, ನಾಯಕ ಕಂ ನಿರ್ಮಾಪಕ ಪ್ರತಾಪವನ್ ಅವರ ಅದೆಷ್ಟೋ ವರ್ಷಗಳ ಸಿನಿಮಾ ಧ್ಯಾನದ ಫಲ. ಈ ಹಾದಿಯಲ್ಲಿ ಅವರು ಅನೇಕ ನಿರಾಸೆಗಳನ್ನು ಕಂಡಿದ್ದಾರೆ. ಆದರೂ ಭರಪೂರವಾದ ತಯಾರಿ ಅವರ ಬೆನ್ನಿಗಿದ್ದಿದ್ದರಿಂದಾಗಿ ಈ ಸಿನಿಮಾ ಆರಂಭಿಸಿ ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾರೆ. ಇದು ಈ ತಿಂಗಳಲ್ಲಿಯೇ ತೆರೆ ಕಾಣೋದು ಬಹುತೇಕ ಖಚಿತವಾಗಿದೆ.

    ಯಾವುದೇ ಕನಸಾಗಿದ್ದರೂ ಅದೆಷ್ಟೋ ಗಾವುದ ದೂರ ನಡೆಯದೆ, ನೋವು ನಿರಾಸೆಗಳನ್ನು ಅನುಭವಿಸದೇ ಕೈಗೆಟುಕೋದಿಲ್ಲ. ಪ್ರತಾಪವನ್ ವಿಚಾರದಲ್ಲಿಯೂ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ ಈ ಸಿನಿಮಾ ಮೂಲಕ ನಾಯಕನಾಗಿ ಹೊರಹೊಮ್ಮಿರುವ ಅವರು ಸಾಗಿ ಬಂದ ದಾರಿಯೇ ಅಂಥಾದ್ದಿದೆ. ಚಿಕ್ಕಬಳ್ಳಾಪುರ ಮೂಲದ ಪ್ರತಾಪವನ್ ಶಾಲಾ ದಿನಗಳಲ್ಲಿಯೇ ಕಲೆಯತ್ತ ಆಸಕ್ತಿ ಹೊಂದಿದ್ದವರು. ಶಿಕ್ಷಕರೂ ಸೇರಿದಂತೆ ಎಲ್ಲರನ್ನೂ ಡಿಟ್ಟೋ ಅನುಕರಣೆ ಮಾಡಿ ತೋರಿಸೋ ಮೂಲಕ ಎಲ್ಲರಿಗಿಂತಲೂ ಭಿನ್ನ ಅನ್ನಿಸಿಕೊಂಡಿದ್ದರು. ಹೀಗೆ ಅವರೊಳಗಿನ ಕಲೆ ಸಿನಿಮಾ ದಿಕ್ಕಿನತ್ತ ದಾರಿ ತೋರಿದ್ದೂ ಕೂಡಾ ಅಚ್ಚರಿದಾಯಕವೇ.

    ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಯೋಟೆಕ್ ಬಿಎಸ್ ಸಿ ಪದವಿ ಪೂರೈಸಿದ್ದ ಪ್ರತಾಪವನ್, ಅನಿವಾರ್ಯತೆಗೆ ಬಿದ್ದು ಆಸಕ್ತಿಗೆ ವಿರುದ್ಧವಾದ ಕೆಲಸವನ್ನೇ ಆರಂಭಿಸಿದ್ದರು. ಸಹೋದರನ ಜೊತೆ ಸೇರಿಕೊಂಡು ಇಂಡಿಯಾ ಇನ್ಫೋಲೈನ್ ಎಂಬ ಕಂಪೆನಿ ಹುಟ್ಟು ಹಾಕಿ ಅದರಲ್ಲಿ ಒಂದು ವರ್ಷಗಳ ಕಾಲ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದರು. ಇದರಲ್ಲಿಯೇ ಕಳೆದು ಹೋಗುತ್ತಿದ್ದ ಅವರನ್ನು ಮತ್ತೆ ಕಲೆಯ ತೆಕ್ಕೆಗೆ ಬೀಳಿಸಿದ್ದು ಅವರ ಅಮ್ಮ. ಮಗನೊಳಗಿನ ಕಲಾಸಕ್ತಿಯನ್ನು ನೋಡಿಕೊಂಡೇ ಬಂದಿದ್ದ ಆ ತಾಯಿಗೆ ತನ್ನ ಮಗ ಸಿನಿಮಾ ತಾರೆಯಾಗಬೇಕೆಂಬ ಆಸೆ. ಆದ್ದರಿಂದ ಅವರೇ ಹೀರೋ ಆಗುವಂತೆ ಮಗನನ್ನು ಪ್ರೇರೇಪಿಸಲಾರಂಭಿಸಿದ್ದರು. ಆದರೆ ಸರಿಯಾದ ನೆರಳಿಲ್ಲದೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದು ಕಷ್ಟ ಅಂತ ಪ್ರತಾಪವನ್ ಹೇಳಿದಾಗೆಲ್ಲ, ಸ್ಫೂರ್ತಿದಾಯಕ ಕಥೆಗಳನ್ನು ಹೇಳಿ ಉತ್ತೇಜಿಸಲಾರಂಭಿಸಿದ್ದರು. ಇದರಿಂದ ತಮ್ಮ ಬದುಕಿನ ದಾರಿಯನ್ನು ಸ್ಪಷ್ಟಪಡಿಸಿಕೊಂಡ ಪ್ರತಾಪವನ್ ಕಂಪೆನಿಯನ್ನು ಅಣ್ಣನ ಸುಪರ್ದಿಗೊಪ್ಪಿಸಿ ನಾಯಕನಾಗೋ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದ್ದರು.

    ಏನೇ ಮಾಡಿದರೂ ಸಂಪೂರ್ಣ ತಯಾರಿಯ ಜೊತೆಗೇ ಅಖಾಡಕ್ಕಿಳಿಯಬೇಕನ್ನೋದು ಪ್ರತಾಪವನ್ ಅವರ ಅಭಿಲಾಷೆ. ಅದರಂತೆಯೇ ಇಂಡಿಯಾದ ಖ್ಯಾತ ನಟನಾ ತರಬೇತಿ ಸಂಸ್ಥೆಯಾದ ಸತ್ಯಾನಂದ ಆಕ್ಟಿಂಗ್ ಇನ್‍ಸ್ಟಿಟ್ಯೂಟ್ ಗೆ ಸೇರಲು ನಿರ್ಧರಿಸಿದ್ದರು. ವಿಶಾಖಪಟ್ಟಣಂನಲ್ಲಿರೋ ಈ ಸಂಸ್ಥೆಗೆ ಹೇಗೋ ಸೇರಿಕೊಂಡು ಅದರ ಸಂಸ್ಥಾಪಕರಾದ ಸತ್ಯಾನಂದ ಅವರಿಗೂ ಹತ್ತಿರಾಗಿದ್ದರು. ಈ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದ ಬಹುತೇಕರು ಸ್ಟಾರ್ ಗಳಾಗಿದ್ದಾರೆ. ತೆಲುಗಿನ ಪವನ್ ಕಲ್ಯಾಣ್, ಪ್ರಭಾಸ್ ಸೇರಿದಂತೆ ಅನೇಕರು ಇಲ್ಲಿಂದಲೇ ಬೆಳಕು ಕಂಡವರು. ಅಂಥಾ ತರಬೇತಿ ಸಂಸ್ಥೆಯಲ್ಲಿ ನಿಷ್ಠೆಯಿಂದ ಕಲಿತ ಇವರನ್ನು ಸತ್ಯಾನಂದ ಅವರೇ ಮೆಚ್ಚಿಕೊಂಡಿದ್ದರು. ಪವನ್ ಕಲ್ಯಾಣ್ ನಂತರ ನೀನೇ ಇಷ್ಟ ಅನ್ನುತ್ತಾ ಪ್ರೀತಿ ತೋರಿಸುತ್ತಲೇ ನೀನು ಕನ್ನಡದ ಪವನ್ ಕಲ್ಯಾಣ್ ಆಗ್ತೀಯ ಎಂಬ ಆಶೀರ್ವಾದದೊಂದಿಗೇ ಬೀಳ್ಕೊಟ್ಟಿದ್ದರು.

    ಹಾಗೆ ಭರವಸೆ ತುಂಬಿಕೊಂಡು ನಟನಾಗಿ ಹೊರ ಬಂದ ಪ್ರತಾಪವನ್ ಮುಂದೆ ಹೊಸಾ ಜಗತ್ತೊಂದು ಅನಾವರಣಗೊಂಡಿತ್ತು. ಆ ಬಳಿಕ ಅದೆಷ್ಟೋ ಆಡಿಷನ್ನುಗಳನ್ನು ಅವರು ಪಾಸ್ ಮಾಡಿದ್ದರು. ಆದರೆ ಬಹುತೇಕರು ಹಣ ಕಾಸಿನ ಬೇಡಿಕೆ ಇಡೋ ಮೂಲಕ ರೇಜಿಗೆ ಹುಟ್ಟಿಸಿದ್ದರಂತೆ. ಹಾಗೆ ಕಂಗಾಲಾಗಿ ಕೂತಿದ್ದಾಗಲೇ ಶಂಕರನಾರಾಯಣ ರೆಡ್ಡಿಯವರು ಸಿಕ್ಕಿದ್ದರು. ಅವರು ಅದಾಗಲೇ ಚಿತ್ರರಂಗದಲ್ಲಿ ರೈಟರ್ ಆಗಿ ಹೆಸರು ಮಾಡಿದ್ದವರು. ಅವರು ಹೇಳಿದ ಕಥೆಯ ಸೊಗಸು ಕೇಳಿ ಅಣ್ಣ ಪ್ರದೀಪ್ ಮತ್ತು ಗೆಳೆಯ ಧ್ರುವಜಿತ್ ರೆಡ್ಡಿ ಜೊತೆ ಸೇರಿ ತಾವೇ ನಿರ್ಮಾಣ ಮಾಡುವ ಮನಸು ಮಾಡಿದ್ದರು. ಈ ನಿರ್ಧಾರದಿಂದಲೇ ಬದ್ರಿ ವರ್ಸಸ್ ಮಧುಮತಿ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು.

    ಇಂಥಾ ನಾನಾ ಸವಾಲುಗಳಿಗೆ ಎದೆ ಕೊಟ್ಟರೂ ಸಿನಿಮಾ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿ ನಾಯಕರಾಗಿ ಪ್ರತಾಪವನ್ ನಟಿಸಿದ್ದಾರೆ. ಇದಕ್ಕಾಗಿ ಅವರು ಬಹಳಷ್ಟು ಪರಿಶ್ರಮ ವಹಿಸಿದ್ದಾರೆ. ಅದೆಲ್ಲವೂ ಮಹಾ ಗೆಲುವೊಂದರ ಮೂಲಕ ಸಾರ್ಥಕಗೊಳ್ಳೋ ಕ್ಷಣಗಳು ಹತ್ತಿರದಲ್ಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂತೆ ನೋಡಲು ಬಂದ ದಾರಿಹೋಕ ‘ಕಳೆದೇ ಹೋದ’- ಭಾವನಾ ಲೋಕಕ್ಕೆ ಕರೆದೊಯ್ಯುತ್ತೆ ಚಂಬಲ್ ಹಾಡು

    ಸಂತೆ ನೋಡಲು ಬಂದ ದಾರಿಹೋಕ ‘ಕಳೆದೇ ಹೋದ’- ಭಾವನಾ ಲೋಕಕ್ಕೆ ಕರೆದೊಯ್ಯುತ್ತೆ ಚಂಬಲ್ ಹಾಡು

    – ಬದುಕನ್ನ ಅರಿಸುತ್ತ ಬಂದವ ತನ್ನಲ್ಲಿಯೇ ಕಳೆದು ಹೋದ

    ಬೆಂಗಳೂರು: ಚಂಬಲ್ ನಟ ನೀನಾಸಂ ಸತೀಶ್ ಚಂದನವನದ ಬಹುನಿರೀಕ್ಷಿತ ಚಿತ್ರ. ಇಂದು ಚಂಬಲ್ ಸಿನಿಮಾದ ಕಳೆದೇ ಹೋದೆ ನಾನು’ ಲಿರಿಕಲ್ ಹಾಡು ಸಂಜೆ ಬಿಡುಗಡೆಯಾಗಿದ್ದು, ಭಾವನಾ ಜೀವಿಗಳನ್ನು ಮಾಯಾ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ.

    ‘ಕಳೆದೇ ಹೋದೇ ನಾನು’ ಹಾಡಿನ ಸಾಹಿತ್ಯದ ಪ್ರತಿ ಸಾಲು ವಿಶೇಷ ಅರ್ಥವನ್ನು ಒಳಗೊಂಡಿದೆ. ದಕ್ಷ ಅಧಿಕಾರಿಯಾಗಿ ನೀನಾಸಂ ಸತೀಶ್ ಕಾಣಿಸಿಕೊಂಡಿದ್ದು, ಪ್ರಾಮಾಣಿಕತೆಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತದೆ. ತನಗೆ ಎದುರಾದ ತೊಂದರೆಗಳನ್ನು ನಾಯಕ ನಟ ಹೇಗೆ ಎದುರಿಸುತ್ತಾನೆ ಎನ್ನುವುದು ಚಿತ್ರ ಬಿಡುಗಡೆಯಾದಾಗ ಉತ್ತರ ಸಿಗುತ್ತದೆ. ಈ ವೇಳೆ ನಾಯಕನ ಮನಸ್ಥಿತಿ ಹೇಗಿರುತ್ತೆ ಎಂಬುದನ್ನು ಪದಪುಂಜಗಳಲ್ಲಿ ಹೇಳುವಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಯಶಸ್ವಿಯಾಗಿದ್ದಾರೆ. ತಮ್ಮ ಹಾಡುಗಳ ಮೂಲಕ ಭಾವನಾರಹಿತ ಜೀವಿಯನ್ನು ಭಾವನಾ ಲೋಕಕ್ಕೆ ಕರೆದೊಯ್ಯುವಲ್ಲಿ ಕಾಯ್ಕಿಣಿ ಅವರ ಲೇಖನಿ ಏಣಿಯಾಗಿ ಬದಲಾಗಿದೆ.

    ಜಯಂತ್ ಕಾಯ್ಕಿಣಿ ಅವರ ಪದಪುಂಜಗಳಿಗೆ ಪೂರ್ಣಚಂದ್ರ ತೇಜಸ್ವಿ ಅವರ ಕೋಮಲ ಸಂಗೀತದಲ್ಲಿ ಉದಿತ್ ಹರಿತಾಸ್ ತಮ್ಮ ಕಂಠದ ಮೂಲಕ ಜೀವವನ್ನು ನೀಡಿದ್ದಾರೆ. ನೀನಾಸಂ ಸತೀಶ್ ಗೆ ಜೊತೆಯಾಗಿ ಸೋನುಗೌಡ ಕಾಣಿಸಿಕೊಂಡಿದ್ದು, ಸಾಮಾಜಿಕ ಕಥೆಯೊಂದನ್ನು ನಿರ್ದೇಶಕರು ಥ್ರಿಲ್ಲರ್ ವಿಧಾನದಲ್ಲಿ ಹೇಳಲು ಹೊರಟಿರುವ ಸುಳಿವು ಸಿಕ್ಕಿದೆ.

    ನೈಜ ಘಟನೆಯ ಆಧಾರಿತ ಸಿನಿಮಾ ಎಂದು ಚಿತ್ರದ ಟ್ರೇಲರ್ ಹೇಳಿತ್ತು. ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೀನಾಸಂ ಸತೀಶ್ ತಾನು ಕೇವಲ ಹಾಸ್ಯ ಪಾತ್ರಗಳಿಗೆ ಸೀಮಿತ ಅಲ್ಲ ಎಂಬುದನ್ನು ಚಂಬಲ್ ಟ್ರೇಲರ್ ಮೂಲಕ ಹೇಳಿದ್ದಾರೆ. ವಿಭಿನ್ನ ಅನ್ನೋದಕ್ಕಿಂತ ಸಿನಿಮಾ ಯಾರ ಜೀವನಾಧರಿತ ಕಥೆ ಎಂಬುದನ್ನು ಚಿತ್ರ ಸ್ಪಷ್ಟಪಡಿಸಿಲ್ಲ. ಕೇವಲ ಓರ್ವ ಐಎಎಸ್ ಅಧಿಕಾರಿಯ ಜೀವನದ ಎಳೆಯ ಮೇಲೆ ಸಿನಿಮಾ ಮಾಡಲಾಗಿದೆ ಎಂಬುದನ್ನ ಹೇಳಿಕೊಂಡಿದೆ. ಇನ್ನು ಟ್ರೇಲರ್ ನೋಡಿದ ಜನರು ಮಾತ್ರ ಇದು ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಕಥೆ ಅಂತಾನೇ ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv