Tag: Jayant Kaikini

  • ಯೋಗರಾಜ್ ಭಟ್ ಗೀತ ಗುಚ್ಛಕ್ಕೆ ಕಾಯ್ಕಿಣಿ ಸಾಥ್

    ಯೋಗರಾಜ್ ಭಟ್ ಗೀತ ಗುಚ್ಛಕ್ಕೆ ಕಾಯ್ಕಿಣಿ ಸಾಥ್

    ಮತ್ತೆ ಮೊದಲಿಂದ ʻಗೀತ ಗುಚ್ಛದʼ 4ನೇ ಹಾಗೂ ಕೊನೆಯ ಹಾಡು ‘ನೀ ಹೋದ ಮೇಲೆ…’ (ನೆನಪಿನ ಬಣ್ಣ ಹಸಿರು) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ (Jayant Kaikini) ಈ ಹಾಡನ್ನು ಅನಾವರಣ ಮಾಡಿದರು. ಯೋಗರಾಜ್ ಭಟ್ (Yogaraj Bhat) ಗೀತರಚನೆ ಮಾಡಿರುವ ವಿ.ಹರಿಕೃಷ್ಣ ಸಂಗೀತ ನೀಡಿರುವ ಹಾಗೂ ವಾಸುಕಿ ವೈಭವ್ ಹಾಡಿರುವ ಈ ಹಾಡಿನಲ್ಲಿ ಸಂಜನ್ ಕಜೆ ಹಾಗೂ ಅಂಜಲಿ ಗೌಡ ಅಭಿನಯಿಸಿದ್ದಾರೆ.

    ʻಮತ್ತೆ ಮೊದಲಿಂದʼ ಗೀತಗುಚ್ಛದ (GEETHA GUCCHA) 4ನೇ ಹಾಗೂ ಕೊನೆಯ ಹಾಡು “ನೀ ಹೋದ ಮೇಲೆ” (ನೆನಪಿನ ಬಣ್ಣ ಹಸಿರು) ಎಂಬ ಹಾಡನ್ನು ಬಿಡುಗಡೆ ಮಾಡಿಕೊಟ್ಟ ಜಯಂತ ಕಾಯ್ಕಿಣಿ ಅವರಿಗೆ ಧನ್ಯವಾದ. “ಮತ್ತೆ ಮೊದಲಿಂದ” ಗೀತಗುಚ್ಛದಲ್ಲಿ ನಾಲ್ಕು ಪ್ರೇಮಗೀತೆಗಳಿದ್ದು, ನಾಲ್ಕು ಹಾಡುಗಳನ್ನು ಬಿಳುಪು, ನೀಲಿ, ಕೆಂಪು ಹಾಗೂ ಹಸಿರು ನಾಲ್ಕು ಬಣ್ಣಗಳು ಪ್ರತಿನಿಧಿಸುತ್ತದೆ. ಎಲ್ಲಾ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನೇ ನಾಲ್ಕು ಹಾಡುಗಳನ್ನು ಬರೆದಿದ್ದೇನೆ. ನಾಲ್ಕು ಹಾಡುಗಳಿಗೂ ನಾಲ್ಕು ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜಿಸಿದ್ದಾರೆ. ಜನಪ್ರಿಯ ಗಾಯಕ – ಗಾಯಕಿಯರು ಹಾಡಿದ್ದಾರೆ. ಇಂದು ಬಿಡುಗಡೆಯಾಗಿರುವ “ನೀ ಹೋದ ಮೇಲೆ” ಹಾಡನ್ನು ವಾಸುಕಿ ವೈಭವ್ ಸುಮಧುರವಾಗಿ ಹಾಡಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹೆಸರಾಂತ ಆಯುರ್ವೇದ ವೈದ್ಯ ಗಿರಿಧರ ಕಜೆ ಅವರ ಕುಟುಂಬದ ಸದಸ್ಯ ಸಂಜನ್ ಕಜೆ ಹಾಗೂ ಅಂಜಲಿ ಗೌಡ ಅಭಿನಯಿಸಿದ್ದಾರೆ.  ಇದನ್ನೂ ಓದಿ: ಜಾಲಿಡೇಸ್ ಹುಡುಗನ ಚಿತ್ರಕ್ಕೆ ಮನೋಹರ್ ಸಂಗೀತ : ಇದು 150ನೇ ಸಿನಿಮಾ

    ಹಾಡು ಬಿಡುಗಡೆ ಮಾಡಿ ಮಾತನಾಡಿದ ಜಯಂತ ಕಾಯ್ಕಿಣಿ ಅವರು, ಪ್ರೇಮಗೀತೆಗಳಲ್ಲಿ ಜನಪ್ರಿಯವಾಗಿರುವುದು ಹೆಚ್ಚಾಗಿ ಪ್ರೀತಿ ಕೈ ಕೊಟ್ಟಾಗ ಬಂದಿರುವ ಗೀತೆಗಳು. ಅಂತಹ ಗೀತೆಗಳನ್ನು ಯೋಗರಾಜ್ ಭಟ್ ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಅಂತಹ ಸಾಲಿಗೆ ಈ ಹಾಡು ಕೂಡ ಸೇರಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಗಾಯಕ ಹಾಡಿಗೆ ಪೂರಕವಾಗಿದೆ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾಲ್ಕು ಹಾಡುಗಳನ್ನು ನಾಲ್ಕು ಬಣ್ಣಗಳು ಪ್ರತಿನಿಧಿಸಿರುವುದು ವಿಶೇಷ ಎಂದರು.

    ಯೋಗರಾಜ್ ಭಟ್ ಅವರು ಬರೆದ ಹಾಡನ್ನು ಹಾಡುವುದಕ್ಕೆ ನನಗೆ ಬಹಳ ಖುಷಿಯಾಗುತ್ತದೆ. ಈ ಹಾಡು ಕೂಡ ಮಧುರವಾಗಿದೆ ಎಂದು ಗಾಯಕ ವಾಸುಕಿ ವೈಭವ್ ತಿಳಿಸಿದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಸರೋಜಾದೇವಿ ಅಂತ್ಯಸಂಸ್ಕಾರ

    ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ, ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಹಾಗೂ ವಾಸುಕಿ ವೈಭವ್ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಅಭಿನಯಿಸಿದ್ದು ಬಹಳ ಸಂತೋಷವಾಗಿದೆ ಎಂದರು ನಟ ಸಂಜನ್ ಕಜೆ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಡಿನ ಕುರಿತು ಮಾತನಾಡಿದರು. ಗಡ್ಡ ವಿಜಿ, “ಬೆಂಗಳೂರು ಕೆಫೆ” ಶಿವಾನಂದ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪ ಪ್ರಸನ್ನ ಅವರು “ಮತ್ತೆ ಮೊದಲಿಂದ” ಗೀತಗುಚ್ಛವನ್ನು ನಿರ್ಮಾಣ ಮಾಡಿದ್ದಾರೆ.

  • ಜಯಂತ್ ಕಾಯ್ಕಿಣಿ ವಿರಚಿತ ಕೊರೊನಾ ಜಾಗೃತಿ ಗೀತೆಗೆ ಎಸ್‍ಪಿಬಿ ಧ್ವನಿ

    ಜಯಂತ್ ಕಾಯ್ಕಿಣಿ ವಿರಚಿತ ಕೊರೊನಾ ಜಾಗೃತಿ ಗೀತೆಗೆ ಎಸ್‍ಪಿಬಿ ಧ್ವನಿ

    ಬೆಂಗಳೂರು: ಮಹಾಮಾರಿ ಕೊರೊನಾ ಓಡಿಸಲು ದೇಶಾದ್ಯಂತ ಶತ ಪ್ರಯತ್ನ ನಡೆಯುತ್ತಿದ್ದು, ಚಿತ್ರರಂಗದ ಹಲವರು ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸಿನಿಮಾ ಕಾರ್ಮಿಕರಿಗೆ ಹಾಗೂ ಸರ್ಕಾರಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಸಿನಿಮಾ ಗೀತೆ ರಚನೆಕಾರರು ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರು ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.

    ಹಲವು ನಟ, ನಟಿಯರು ವಿವಿಧ ಬಗೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಜಯಂತ್ ಕಾಯ್ಕಿಣಿ ಸಹ ಗೀತೆ ರಚಿಸುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಗೀತೆಯನ್ನು ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಜಯಂತ್ ಕಾಯ್ಕಿಣಿಯವರು ಕೇವಲ ಸಾಹಿತ್ಯ, ಸಿನಿಮಾ ಗೀತೆ ರಚಿಸುವುದು ಮಾತ್ರವಲ್ಲ, ಸಮಾಜದ ಆಗುಹೋಗಗಳ ಕುರಿತು ಸಹ ಆಗಾಗ ಪ್ರತಿಕ್ರಿಯಸುತ್ತಿರುತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ಸಲಹೆಗಳನ್ನು ಸಹ ನೀಡುತ್ತಾರೆ. ಇನ್ನೂ ಹಲವು ಬಾರಿ ಅವರ ಗೀತೆಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸುತ್ತಾರೆ. ಅದರಂತೆ ಇದೀಗ ಕೊರೊನಾ ಬಗ್ಗೆ ಜಾಗೃತಿ ಗೀತೆಯನ್ನು ರಚಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದಾರೆ. ಹೀಗಾಗಿ ಈ ಹಾಡಿಗೆ ಮಹತ್ವ ಇನ್ನೂ ಹೆಚ್ಚಾಗಿದೆ.

    ಸಾಮಾಜಿಕ ಜಾಲತಾಣ ಫೆಸ್ಬುಕ್‍ನಲ್ಲಿ ಹಲವರು ಈ ಕುರಿತು ಕಮೆಂಟ್ ಮಾಡಿದ್ದು, ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಜಯಂತ್ ಕಾಯ್ಕಿಣಿಯವರು ಅರ್ಥಗರ್ಭಿತವಾಗಿ ಸಾಹಿತ್ಯ ಬರೆದಿದ್ದಾರೆ. ನೀವೂ ಅದಕ್ಕೆ ನ್ಯಾಯ ಒದಗಿಸಿದ್ದೀರಿ. ಕೇಳಲು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೊಬ್ಬರು ಕಮೆಂಟ್ ಮಾಡಿ ಜಯಂತ್ ಕಾಯ್ಕಿಣಿಯವರು ತುಂಬಾ ಚೆನ್ನಾಗಿ ಹಾಡು ಬರೆದಿದ್ದಾರೆ. ನೀವು ಸಹ ಅಚ್ಚುಕಟ್ಟಾಗಿ ಹಾಡಿದ್ದೀರಿ. ನೀವು ಹಾಡಿದ ಪವನಿಸು ಪರಮಾತ್ಮ ಶ್ರೀ ವೆಂಕಟೇಶ ನನ್ನ ನೆಚ್ಚಿನ ಗೀತೆ ಎಂದಿದ್ದಾರೆ.

    ಇನ್ನೊಬ್ಬರು ಕಮೆಂಟ್ ಮಾಡಿ, ಅರ್ಥಗರ್ಭಿತ ಸಾಹಿತ್ಯ, ನೀವೂ ತುಂಬಾ ಚೆನ್ನಾಗಿ ಹಾಡಿದ್ದೀರಿ. ಒಳ್ಳೆಯ ಸಂದೇಶವಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಎಸ್‍ಪಿಬಿ ಸರ್ ಎಂದು ಕಮೆಂಟ್ ಮಾಡಿದ್ದಾರೆ.