Tag: jayanagar

  • ಲೈಬ್ರರಿ ಆವರಣದಲ್ಲಿ ಕಚೇರಿ- ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

    ಲೈಬ್ರರಿ ಆವರಣದಲ್ಲಿ ಕಚೇರಿ- ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

    ಬೆಂಗಳೂರು: ಜಯನಗರ ಸಾರ್ವಜನಿಕ ಲೈಬ್ರರಿ ಆವರಣದಲ್ಲಿ ಕಚೇರಿ ತೆರೆಯುತ್ತಿದ್ದಾರೆ ಎಂಬ ಆರೋಪಕ್ಕೆ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಜಯನಗರ ಶೈಕ್ಷಣಿಕ ಸಮಿತಿಯವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯನ್ನು ಟ್ವೀಟ್ ಮಾಡಿ ನಿನ್ನೆಯಿಂದ ಸಂಸದರ ಕಚೇಯಿಂದಾಗಿ ಬಡ ಮಕ್ಕಳ ಟ್ಯೂಷನ್ ಸೆಂಟರ್ ಬಂದಾಗುತ್ತಿದೆ ಎಂದು ಕಾಂಗ್ರೆಸ್‍ನ ಸುಳ್ಳು ಸುದ್ದಿ ಕಾರ್ಖಾನೆ ಅಪಪ್ರಚಾರ ಮಾಡುತ್ತಿದೆ. ಇದರ ಬಗ್ಗೆ ಟ್ಯೂಷನ್ ಸೆಂಟರ್ ನಡೆಸುವ ಶೈಕ್ಷಣಿಕ ಸಮಿತಿಯವರೇ ಸತ್ಯವನ್ನು ಜನರ ಮುಂದಿಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
    ಜಯನಗರ ಶೈಕ್ಷಣಿಕ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ ಕಚೇರಿಯನ್ನು ಈ ಕಟ್ಟಡದಲ್ಲಿ ಮಾಡುವುದರಿಂದ ಟ್ಯೂಷನ್ ತರಗತಿಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಸುದ್ದಿ ಪ್ರಕಟವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಸಂಸದರ ಕಚೇರಿಯಿಂದ ಟ್ಯೂಷನ್ ತರಗತಿಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

    ಸಂಸದ ಕಚೇರಿ ಇಲ್ಲಿ ನಿರ್ಮಾಣವಾಗುವುದರಿಂದ ಶೈಕ್ಷಣಿಕ ಸಮಿತಿಯ ಕಾರ್ಯಚಟುವಟಿಕೆಗೆ ಮತ್ತಷ್ಟು ಪೂರಕವಾಗುತ್ತದೆ. ಆಧಾರ ರಹಿತ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ಕಿವಿಕೊಡಬಾರದು ಎಂದು ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

    ಆರೋಪ ಏನು?:
    ಸಿಎ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಜಯನಗರ ಶೈಕ್ಷಣಿಕ ಸಮಿತಿಯ ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ನಿತ್ಯ ಓದುತ್ತಾರೆ. ಸಂಸದರ ಕಚೇರಿ ಇಲ್ಲಿ ತೆರೆದರೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಸಂಸದರನ್ನು ನೋಡಲು ನಿತ್ಯ ಬರುತ್ತಾರೆ. ಈ ವೇಳೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಮುಖ್ಯ ರಸ್ತೆ ಆಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗಲಿದೆ. ಇದರಿಂದ ಲೈಬ್ರರಿಗೆ ಬರುವ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತದೆ. ಈ ವಿಚಾರ ತಿಳಿದಿದ್ದರೂ ತೇಜಸ್ವಿ ಸೂರ್ಯ ಅವರು ಇಲ್ಲೇ ಕಚೇರಿ ಮಾಡುತ್ತಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದರು.

    ಅಷ್ಟೇ ಅಲ್ಲದೇ ಈ ಸ್ಥಳವನ್ನು ಕೆಲ ಸಂಘ ಸಂಸ್ಥೆಗಳು ಬಡ ಮಕ್ಕಳಿಗೆ ಟ್ಯೂಷನ್ ನೀಡಲು ಬಳಸುತ್ತಿದ್ದವು. ಈ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದರು.

    ಈ ಕುರಿತು ಶುಕ್ರವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಅವರು, ಸಂಸದರ ಕಚೇರಿ ನಿರ್ಮಾಣವಾಗುತ್ತಿರುವುದು ಜಯನಗರದ ಸಾರ್ವಜನಿಕ ಲೈಬ್ರರಿ ಇರುವ ಕಟ್ಟದ ಗ್ರೌಂಡ್ ಫ್ಲೋರಿನಲ್ಲಿ. ಈ ಕಟ್ಟಡ ಮೊದಲ ಫ್ಲೋರಿನಲ್ಲಿ ಲೈಬ್ರರಿ ಇದೆ. ಅದರ ಕೆಳಗೆ ಇರುವ ಟ್ರಸ್ಟ್ ಕಚೇರಿಯನ್ನು ಸಂಸದರ ಕಚೇರಿಯಾಗಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ನನ್ನ ಪರವಿದ್ದಾರೆ. ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ಕೆಲವರು ಮೊದಲು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಟ್ರಸ್ಟನ್ನು ಅಲ್ಲಿಂದ ಖಾಲಿ ಮಾಡಿಸಿ ಬೇರೆಯವರಿಗೆ ನೀಡಲು ತೀರ್ಮಾನ ಮಾಡಿದ್ದರು. ಸದ್ಯ ಬಿಬಿಎಂಪಿ ಸಂಸದರ ಕಚೇರಿಗೆ ನೀಡಿದೆ ಎಂದು ಹೇಳಿದ್ದರು.

  • ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸುಲಿಗೆ ಮಾಡಿದ್ದ ಖದೀಮರ ಬಂಧನ

    ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸುಲಿಗೆ ಮಾಡಿದ್ದ ಖದೀಮರ ಬಂಧನ

    ಬೆಂಗಳೂರು: ಅಪಘಾತದ ನೆಪ ಮಾಡಿಕೊಂಡು ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನನ್ನು ಸುಲಿಗೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ತಂಡವೊಂದನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜಯನಗರದ ಬಿಆರ್ ರಾಹುಲ್ ಗೌಡ ಎಂಬ ವಿದ್ಯಾರ್ಥಿಯನ್ನು ಏಳು ಜನರ ಗ್ಯಾಂಗ್ ವೊಂದು ರಾತ್ರಿ ವೇಳೆಯಲ್ಲಿ ಅಪಹರಣ ಮಾಡಿತ್ತು. ಅಲ್ಲದೇ ರಾತ್ರಿಯಿಡೀ ತಮ್ಮ ಕಾರಿನಲ್ಲಿ ರೌಂಡ್ ಹಾಕಿಸಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಅವರ ಬಳಿಯಿದ್ದ ಮೊಬೈಲ್, ಪರ್ಸ್ ಹಾಗೂ ಚಿನ್ನದ ಸರವನ್ನು ಕಸಿದುಕೊಂಡಿದ್ದ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

    ಈ ಕುರಿತಂತೆ ರಾಹುಲ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಏಳು ಜನರ ತಂಡವನ್ನು ಬಂಧಿಸಿದ್ದಾರೆ. ಮತ್ತು ಪ್ರಕರಣ ಕುರಿತಂತೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

  • ಜಯನಗರ ಸೋಲಿನ ಬಳಿಕ ಅನಂತ್‍ಕುಮಾರ್ ಗೆ  ‘ಶಾ’ ಫುಲ್ ಕ್ಲಾಸ್!

    ಜಯನಗರ ಸೋಲಿನ ಬಳಿಕ ಅನಂತ್‍ಕುಮಾರ್ ಗೆ ‘ಶಾ’ ಫುಲ್ ಕ್ಲಾಸ್!

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರಿಗೆ ದೂರವಾಣಿಯಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ರಾಜರಾಜೇಶ್ವರಿ ನಗರದ ಬಳಿಕ ಇಂದು ಜಯನಗಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸೋಲು ಬಿಜೆಪಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ. ಆದರೂ ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಕೇಂದ್ರ ಸಚಿವರು ಅಲ್ಪ ಮತಗಳಿಂದ ಸೋಲು ಕಂಡಿದೆ ಅಂತಾ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ನೇರವಾಗಿ ದೂರವಾಣಿ ಮೂಲಕ ಅನಂತಕುಮಾರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ದೂರವಾಣಿಯಲ್ಲಿ ಅಮಿತ್ ಶಾ ಹೇಳಿದ್ದೇನು?:
    1. ಸ್ಥಳೀಯ ಕಾರ್ಪೋರೇಟರ್‍ಗಳನ್ನು ನಿಭಾಯಿಸುವಲ್ಲಿ ವಿಫಲ.
    2. ಟಿಕೆಟ್ ಸಿಗದೇ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದ ಕಾರ್ಪೋರೇಟರ್‍ಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ.
    3. ಈ ಹಿಂದೆ ನಡೆಸಿದ್ದ ಚುನಾವಣಾ ರಣತಂತ್ರಗಳನ್ನು ಈ ಚುನಾವಣೆಯಲ್ಲಿ ಯಾಕೆ ಅಳವಡಿಸಿಲ್ಲ.
    4. ಶಾಸಕರಾಗಿದ್ದ ವಿಜಯ್ ಕುಮಾರ್ ಸಾವಿನ ಅನುಕಂಪದ ಅಲೆಯಲ್ಲಿ ಸುಲಭವಾಗಿ ಗೆಲ್ಲಬಹುದಿತ್ತು.
    5. ಆದರೆ ವೈಯಕ್ತಿಕ ಪ್ರತಿಷ್ಠೆ, ಪ್ರಾದೇಶಿಕ ನಾಯಕರ ಹೊಂದಾಣಿಕೆ ಕೊರೆತೆಯಿಂದ ನಮಗೆ ಸೋಲಾಗಿದೆ.
    6. ರಾಜರಾಜೇಶ್ವರಿ ಬಳಿಕ ಜಯನಗರ ಕ್ಷೇತ್ರದ ಸೋಲಿನಿಂದಲೂ ಪಕ್ಷಕ್ಕೆ ಮುಜುಗರ ಆಗಿದೆ.

    ಜಯನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಡಿಯಲ್ಲಿಯೇ ಬರುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅನಂತಕುಮಾರ್ ಜಯನಗರದಲ್ಲಿ ಬಿಜೆಪಿ ಸೋಲಿನ ಬಳಿಕ ಫೇಸ್‍ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಜಯನಗರ ಸೋಲನ್ನು ನಾವು ಸ್ವೀಕರಿಸುತ್ತೇವೆ. ಆದರೂ ನಮ್ಮ ಅಭರ್ಥಿ ಪ್ರಹ್ಲಾದ್ ಬಾಬು ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಕೊನೆ ಕ್ಷಣದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರಿಂದ ನಮ್ಮ ಸೋಲು ಆಗಿದೆ. ಚುನಾವಣೆಗಾಗಿ ಕೆಲಸ ಮಾಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ ಅಂತಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

  • ಆಗೋದೆಲ್ಲ ಒಳ್ಳೇದಕ್ಕೆ, ಸಚಿವ ಸ್ಥಾನ ತಪ್ಪಿದ್ದೂ ಒಳ್ಳೆಯದಕ್ಕೆ ಅನ್ನಿಸುತ್ತೆ – ರಾಮಲಿಂಗಾ ರೆಡ್ಡಿ

    ಆಗೋದೆಲ್ಲ ಒಳ್ಳೇದಕ್ಕೆ, ಸಚಿವ ಸ್ಥಾನ ತಪ್ಪಿದ್ದೂ ಒಳ್ಳೆಯದಕ್ಕೆ ಅನ್ನಿಸುತ್ತೆ – ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಾನು ಸಚಿವ ಸ್ಥಾನಬೇಕು ಎಂದು ಯಾರನ್ನು ಕೇಳಿಲ್ಲ. ಅರ್ಹತೆ ಇದ್ರೆ ಕೊಡಲಿ. ನಾವು ಅಧಿಕಾರದ ಹಿಂದೆ ಹೋಗಬಾರದು. ಅಧಿಕಾರ ನಮ್ಮನ್ನ ಹುಡುಕಿಕೊಂಡು ಬರಬೇಕು. ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಹಾಗೇ ಸಚಿವ ಸ್ಥಾನ ತಪ್ಪಿದ್ದು ಒಳ್ಳೆಯದಕ್ಕೆ ಎಂದನಿಸುತ್ತಿದೆ ಅಂತ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

    ಜಯನಗರದ ವಿಧಾನಸಭಾ ಫಲಿತಾಂಶದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಗೆಲ್ಲಲು ಅಭ್ಯರ್ಥಿ ಕಣ್ಣಕ್ಕೆ ಇಳಿಸುತ್ತಾರೆ. ನಮ್ಮ ಪಕ್ಷ, ಪುತ್ರಿ ಸೌಮ್ಯರಿಗೆ ಸ್ಥಾನ ನೀಡಿತ್ತು. ಎಲ್ಲರ ಶ್ರಮದಿಂದ ಗೆಲುವು ಸಿಕ್ಕಿದೆ. ಗೆಲುವಿಗೆ ಸಹಕಾರ ನೀಡಿದ ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಧನ್ಯವಾದ ಅಂದ್ರು.

    ಸದ್ಯ ಪಕ್ಷಕ್ಕೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದೇನೆ. ನಮ್ಮದೆ ಸಮ್ಮಿಶ್ರ ಸರ್ಕಾರ ಇದೆ. ಬೆಂಗಳೂರು ಅಭಿವೃದ್ಧಿ ಮಾಡುವ ಕುರಿತು ಮುಂದಿನ ಗುರಿ ಇದೆ. ಹಿಂದೆ ನಾನು ಈ ಕ್ಷೇತ್ರದಲ್ಲಿ ಜಯಿಸಿದ್ದೆ. ಎಲ್ಲರ ಸಂಪರ್ಕ ಇತ್ತು. ಅನೇಕರು ಪಕ್ಷಕ್ಕೆ ಬಂದು ಗೆಲುವಿಗಾಗಿ ಶ್ರಮವಹಿಸಿದ್ದಾರೆ. ಜನ ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

    ತಮ್ಮ ಪುತ್ರಿ ರಾಜಕೀಯಕ್ಕೆ ಬರುವುದು ಬೇಡ ಎಂದು ಹೇಳಿದ್ದೆ. ಆದರೆ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇತ್ತು. ರಾಜಕೀಯಕ್ಕೆ ಬಂದರೆ ಹೆಚ್ಚು ಕೆಲಸ ಮಾಡಬಹುದು ಎಂದು ಬಂದಿದ್ದಾರೆ. ತಂದೆಯಾಗಿ ಎಲ್ಲರಂತೆ ತಮಗೂ ಖುಷಿಯಾಗಿದೆ ಎಂದರು.

  • ಸೋತಿದ್ದಕ್ಕೆ ಕಾರಣ ಕೊಟ್ಟ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು

    ಸೋತಿದ್ದಕ್ಕೆ ಕಾರಣ ಕೊಟ್ಟ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು

    ಬೆಂಗಳೂರು: ನಾನು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಜೊತೆಗೆ ಹೊಸ ಮುಖ ನನ್ನ ಸೋಲಿಗೆ ಕಾರಣವಾಗಿರಬಹುದು ಎಂದು ಜಯನಗರ ಪರಾಜಿತ ಬಿಜೆಪಿ ಅಭ್ಯರ್ಥಿ ಬಿಎನ್ ಪ್ರಹ್ಲಾದ್ ಬಾಬು ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಹೆಚ್ಚು ಶ್ರಮವಹಿಸಿದ್ದರು. 51 ಸಾವಿರದಷ್ಟು ಮತಗಳನ್ನು ಪಡೆದಿದ್ದೇನೆ ಹಾಗಾಗಿ ಇದನ್ನು ಸೋಲು ಎಂದು ಪರಿಗಣಿಸುವುದಿಲ್ಲ ಎಂದರು.

    ಭಾರತೀಯ ಜನತಾ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟಿತು. ಪ್ರಜಾಪ್ರಭುತ್ವದಲ್ಲಿ ಜನರ ಆದೇಶವೇ ಅಂತಿಮ. ಇದು ನನ್ನ ಮೊದಲು ಪ್ರಯತ್ನ ಮುಂದೆ ಕ್ಷೇತ್ರದಲ್ಲಿ ಇನ್ನು ಹೆಚ್ಚು ಕೆಲಸ ಮಾಡಿ ಮುಂದಿನ ಬಾರಿ ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು.

    ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ 53,441 ಮತಗಳನ್ನು ಗಳಿಸಿ ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‍ಬಾಬು ವಿರುದ್ಧ ಗೆಲುವು ಸಾಧಿಸಿದ್ದಾರೆ.

    2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.

  • ಮೌನಕ್ಕೆ ಶರಣಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ

    ಮೌನಕ್ಕೆ ಶರಣಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ

    ಬೆಂಗಳೂರು: ಜಯನಗರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಜಯಗಳಿಸಿದೆ. ಸೋಲಿನಿಂದ ಬಿಜೆಪಿಗೆ ಆಘಾತವಾಗಿದ್ದು, ಪರಿಣಾಮ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.

    ವಿಧಾನಪರಿಷತ್ ಚುನಾವಣೆಯಲ್ಲಿದ್ದ ಒಂದು ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ. ಹೀಗಾಗಿ ಸೋಲಿನಿಂದ ಕಂಗೆಟ್ಟಿರುವ ಯಡಿಯೂರಪ್ಪ ಅವರು ನಿನ್ನೆಯಿಂದಲೂ ಮನೆಯಿಂದ ಹೊರಬಂದಿಲ್ಲ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆಪ್ತ ಸಹಾಯಕರ ಮೂಲಕ ಅವರು ಹೇಳಿ ಕಳುಹಿಸಿದ್ದಾರೆ. ಆಪ್ತರು ಹಾಗೂ ಪಕ್ಷದ ಪ್ರಮುಖರನ್ನೂ ಸಹ ಭೇಟಿ ಮಾಡಲು ಯಡಿಯೂರಪ್ಪ ಅವರು ನಿರಾಕರಿಸಿದ್ದಾರೆ.

    ಜಯನಗರ ಸೋಲಿಗೆ ಸಂಬಂಧಿಸಿದಂತೆ ಬೆಂಗಳೂರು ಬಿಜೆಪಿ ನಾಯಕರ ವಿರುದ್ಧ ಬಿಎಸ್‍ವೈ ಇದೀಗ ಗರಂ ಆಗಿದ್ದು, ಈ ಸೋಲನ್ನು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಪದ್ಮಾನಗರ ಕ್ಷೇತ್ರದ ಶಾಸಕ ಅಶೋಕ್ ತಲೆಗೆ ಕಟ್ಟಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

  • ಜಯನಗರ ಗೆಲುವು ನಿರೀಕ್ಷಿತ, ಕಾಂಗ್ರೆಸ್ ಮೇಲೆ ಅನುಕಂಪ ಇದೆ: ಸಿದ್ದರಾಮಯ್ಯ

    ಜಯನಗರ ಗೆಲುವು ನಿರೀಕ್ಷಿತ, ಕಾಂಗ್ರೆಸ್ ಮೇಲೆ ಅನುಕಂಪ ಇದೆ: ಸಿದ್ದರಾಮಯ್ಯ

    ಮೈಸೂರು: ಜಯನಗರದಲ್ಲಿ ಸೋಮವಾರ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ರವರು ನಮ್ಮ ಗೆಲುವು ನಿರೀಕ್ಷಿತ ಎಂಬ ಹೇಳಿಕೆಯನ್ನ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದೇವು, ಈಗಲೂ ನಾವೇ ಗೆಲ್ಲುತ್ತಿದ್ದೇವೆ ಎಂದು ತಿಳಿಸಿದರು. ಕಾರಣ ಬಿಜೆಪಿ ಅಭ್ಯರ್ಥಿಗಿಂತ ನಮ್ಮ ಅಭ್ಯರ್ಥಿ ತುಂಬಾ ಆಕ್ಟಿವ್ ಆಗಿದ್ದಾರೆ. ಅಲ್ಲದೆ ನಮ್ಮ ಅಭ್ಯರ್ಥಿ ಒಳ್ಳೆಯ ಕೆಲಸ ಮಾಡುತ್ತಾ ಚುರುಕಾಗಿ ಒಡಾಡುತ್ತಾರೆ. ಇದು ನಮ್ಮ ನಿರೀಕ್ಷಿತ ಫಲಿತಾಂಶ ಎಂದು ಹೇಳಿದರು.

    ಜನರು ಬಿಜೆಪಿಯ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಹೊಂದಿಲ್ಲ, ಅನುಕಂಪ ಇರುವುದು ಕಾಂಗ್ರೆಸ್ ಮೇಲೆ. 78 ಸ್ಥಾನ ಬಂದರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯಲಿಲ್ಲ ಎಂಬ ಅನುಕಂಪ ನಮ್ಮ ಮೇಲಿದೆ ಎಂದು ತಿಳಿಸಿದರು.

    ಬಿಜೆಪಿ ಬಹುಮತ ಬರದಿದ್ದರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯಲು ಪ್ರಯತ್ನಿಸಿತು. ನಮ್ಮ ಇಬ್ಬರು ಶಾಸಕರನ್ನು ಬಿಜೆಪಿ ಬುಕ್ ಮಾಡಿತ್ತು, ಆದರೆ ಬಹುಮತ ಬಾರದ ಕಾರಣ ಅವರನ್ನು ವಾಪಸ್ ಕಳಿಸಿತ್ತು. ಇಂಥವರ ಮೇಲೆ ಜನ ಅನುಕಂಪ ತೋರಿಸಲು ಹೇಗೆ ಸಾದ್ಯ, ಹಾಗಾಗಿ ಗೆಲುವು ನಮ್ಮದೇ ಎಂಬ ದೃಢವಿಶ್ವಾಸ ವ್ಯಕ್ತಪಡಿಸಿದರು.

  • ಜಯನಗರ ಎಲೆಕ್ಷನ್- ಸರತಿ ಸಾಲಲ್ಲಿ ನಿಂತು ಸೆಲೆಬ್ರಿಟಿಗಳಿಂದ ಹಕ್ಕು ಚಲಾವಣೆ

    ಜಯನಗರ ಎಲೆಕ್ಷನ್- ಸರತಿ ಸಾಲಲ್ಲಿ ನಿಂತು ಸೆಲೆಬ್ರಿಟಿಗಳಿಂದ ಹಕ್ಕು ಚಲಾವಣೆ

    ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಮುಂದೂಡಿಕೆಯಾಗಿದ್ದ, ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸೆಲೆಬ್ರಿಟಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.

    216 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್, ನಟಿ ಭಾರತಿ ವಿಷ್ಣುವರ್ಧನ್, ತಾರಾ, ಅನುರಾಧ, ಪ್ರಮಿಳಾ ಜೋಷಾಯ್, ಮೇಘನಾ ರಾಜ್, ಸುಂದರ್ ರಾಜ್ ಹಾಸ್ಯ ನಟ ಉಮೇಶ್, ನಿರ್ಮಾಪಕ ಕೆ ಮಂಜು, ಸಾಹಿತಿ ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಚಂದ್ರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿದಂತೆ ಹಲವರು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ರು.

    ಮುಖ್ಯಮಂಂತ್ರಿ ಚಂದ್ರು ಅಸಮಾಧಾನ: ಮತಗಟ್ಟೆಯ ಅವ್ಯವಸ್ಥೆ ಕಂಡು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ನಟ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಲ್ಲದೇ ಈ ಕುರಿತು ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.

    ಮೊದಲು ಒಂದು ತಾಸು ಲೇಟು ಅಂದ್ರು. ಸರತಿ ಸಾಲಿನಲ್ಲಿ ನಿಂತಿದ್ದೆ, ಮತದಾರರು ಇದ್ದಾಗ ಹೇಳಬೇಕಿತ್ತು, ಎಷ್ಟೊತ್ತು ಆಗುತ್ತೆ ಅಂತ. ಅಧಿಕಾರಿಗಳು ಎಲ್ಲಾ ಸರಿ ಮಾಡೋ ನಂಬಿಕೆ ಇದೆ. ವೋಟ್ ಹಾಕುವುದು ನಮ್ಮ ಹಕ್ಕು, ಅದಕ್ಕೆ ಕುಟುಂಬ ಸಮೇತ ಬಂದಿದ್ದೇನೆ. 216 ಮತಕೇಂದ್ರದ ಮಶಿನ್ ಮೇಲೆ ಗುಮಾನಿ ಇದೆ. ಮಶಿನ್ ಬದಲಾವಣೆ ಮಾಡಿಸಬೇಕು. ಹೊಸ ಯಂತ್ರ ಅಳವಡಿಸಿಬೇಕು. ಈ ಕುರಿತು ಚುನಾವಣೆ ಆಯುಕ್ತರಿಗೆ ದೂರು ನೀಡಿರುವುದಾಗಿ ಚಂದ್ರು ಹೇಳಿದ್ರು.

    ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದ ಪ್ರಕ್ರಿಯೆ ಗಮನಿಸಿದ್ರು. ಬೆಳ್ಳಂಬೆಳಗ್ಗೆ ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರು ವ್ಹೀಲ್ ಚೇರ್‍ಗಳಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದು, ವಿಶೇಷವಾಗಿತ್ತು.

    ಜಯನಗರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಇಲ್ಲಿ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದೆ. ಬಿಜೆಪಿಯ ಪ್ರಹ್ಲಾದ್, ರವಿಕೃಷ್ಣಾರೆಡ್ಡಿ ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂನ್ 13ರಂದು ಮತಎಣಿಕೆ ನಡೆಯಲಿದೆ.

    https://www.youtube.com/watch?v=mtQKKYeY1l4

    https://www.youtube.com/watch?v=6CAQxOoMenA

  • ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್- ಯಾರ ಮಡಿಲಿಗೆ ‘ಜಯ’ನಗರ..?

    ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್- ಯಾರ ಮಡಿಲಿಗೆ ‘ಜಯ’ನಗರ..?

    ಬೆಂಗಳೂರು: ಬಿಜೆಪಿಯ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಇಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಜಯನಗರ ಶಾಸಕ ಬಿ.ಎನ್ ವಿಜಯ್ ಕುಮಾರ್ ಅವರಿಗೆ ವಿಧಿ ಕೊನೆಗಳಿಗೆಯಲ್ಲಿ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ಚುನಾವಣೆ ಜೂನ್ 11 ಕ್ಕೆ ಮುಂದೂಡಿಕೆಯಾಗಿತ್ತು. ಈ ಬಾರಿ ವಿಜಯಕುಮಾರ್ ಸಹೋದರ ಚುನಾವಣಾ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದೆ.

    19 ಅಭ್ಯರ್ಥಿಗಳು ಕಣದಲ್ಲಿರುವ ಈ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಪ್ರಕ್ರಿಯೆ ನಡೆಯಲಿದೆ.

    ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಶೇಷತೆಗಳು
    ಒಟ್ಟು ಮತಗಟ್ಟೆಗಳು – 216
    ಪಿಂಕ್ ಮತಗಟ್ಟೆಗಳು – 05
    ಒಟ್ಟು ಮತದಾರರು – 2,03,184
    ಪುರುಷ ಮತದಾರರು – 1.02,668
    ಮಹಿಳಾ ಮತದಾರರು! -1,00,500
    ಇತರೆ – 16
    ಒಟ್ಟು ಅಭ್ಯರ್ಥಿಗಳು – 19
    ಕಾಂಗ್ರೆಸ್ ಅಭ್ಯರ್ಥಿ – ಸೌಮ್ಯ ರೆಡ್ಡಿ
    ಬಿಜೆಪಿ ಅಭ್ಯರ್ಥಿ – ಬಿ.ಎನ್ ಪ್ರಹ್ಲಾದ್

    ಒಟ್ಟಿನಲ್ಲಿ ಜಯನಗರ ಚುನಾವಣೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲ ಹುಟ್ಟಿದ್ದು, ಜೂನ್ 13 ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

  • ನಾಳೆ ಜಯನಗರ ಕ್ಷೇತ್ರದಲ್ಲಿ ಚುನಾವಣೆ- ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ದಾಳಿ

    ನಾಳೆ ಜಯನಗರ ಕ್ಷೇತ್ರದಲ್ಲಿ ಚುನಾವಣೆ- ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ದಾಳಿ

    ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲಿ ಅಕ್ರಮವಾಗಿ ಹಣ, ಮದ್ಯ ಹಂಚಿಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

    ಸಾರಕ್ಕಿ ವಾರ್ಡ್, ಜೆ ಪಿ ನಗರ ಮೊದಲ ಹಂತದ ಬಡಾವಣೆಗಳಲ್ಲಿನ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಮದ್ಯ ಹಾಗೂ ಹಣ ಸಂಗ್ರಹಿಸಿಟ್ಟುರುವ ಕುರಿತು ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಬಿಜೆಪಿ ಕಾರ್ಯಕರ್ತ ನರಸಿಂಹರಾಜ್ ಎಂಬವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    ಮನೆಯಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿ ಪರಿಶೀಲನೆ ನಡೆಸಿದ್ದಾರೆ. ದಾಳಿ ಮಾಡಿದ ಸಂದರ್ಭದಲ್ಲಿ ಮನೆಯಲ್ಲಿ ಯಾವುದೇ ವಸ್ತುಗಳು ದೊರೆತಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದರಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಅಂತ ಹರಿಹಾಯ್ದಿದ್ದಾರೆ.

    ಮಾಜಿ ಮೇಯರ್ ಮಂಜುನಾಥ ರೆಡ್ಡಿ ಅವರು ಸರ್ಕಾರವನ್ನು ಮುಂದಿಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಸರ್ಚ್ ವಾರೆಂಟ್ ಇಲ್ಲದೇ ಚುನಾವಣಾ ಆಯೋಗ ಹಾಗೂ ಪೊಲೀಸರು ಈ ರೀತಿ ಪರಿಶೀಲನೆ ಮಾಡುವುದು ಎಷ್ಟು ಸರಿ ಅಂತ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಯನಗರ ವಿಧಾನಸಭೆ ಚುನಾವಣೆ ನಾಳೆ ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇಂದು ಅಭ್ಯರ್ಥಿಗಳಿಂದ ಮನೆಮನೆ ಪ್ರಚಾರ ನಡೆಯಲಿದೆ.