Tag: Jayamala

  • ಡಾಲರ್ಸ್ ಕಾಲೋನಿಯಲ್ಲಿ ರಾಜಕಾಲುವೆಗೆ ಮೇಲ್ಛಾವಣಿ- ಕೊನೆಗೂ ಸತ್ಯ ಬಿಚ್ಚಿಟ್ಟ ಮೇಯರ್

    ಡಾಲರ್ಸ್ ಕಾಲೋನಿಯಲ್ಲಿ ರಾಜಕಾಲುವೆಗೆ ಮೇಲ್ಛಾವಣಿ- ಕೊನೆಗೂ ಸತ್ಯ ಬಿಚ್ಚಿಟ್ಟ ಮೇಯರ್

    ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮನವಿ ಮೇರೆಗೆ ಡಾಲರ್ಸ್ ಕಾಲೋನಿಯ ರಾಜಕಾಲುವೆಗೆ ಮೇಲ್ಛಾವಣಿ ಹಾಕಲಾದ ವಿಚಾರ ಬೆಳಕಿಗೆ ಬಂದಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಾಜಕಾಲುವೆ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯ ಎಂಜಿನಿಯರ್ ಬೆಟ್ಟೆಗೌಡ, ಕೊಳಚೆ ಇರುವುದು, ಕೆಟ್ಟ ವಾಸನೆ ಬರುವುದು. ಇಂತಹ ಲುಕ್ ನೋಡಿದಾಗ ಸುತ್ತಮುತ್ತಾ ಇರುವ ಪರಿಸರವನ್ನು ನೋಡಿ ಚೆನ್ನಾಗಿದ್ದರೂ ಕೂಡ ಅದೊಂದು ಕಡೆ ಬ್ಲಾಕ್ ಮಾರ್ಕ್ ಉಳಿದುಕೊಳ್ಳುತ್ತದೆ. ಆದ್ದರಿಂದ ಮುಂಬೈನಲ್ಲಿ ಈ ರೀತಿಯಾಗಿ ವ್ಯವಸ್ಥಿತವಾಗಿ ರಾಜಕಾಲುವೆಗಳನ್ನು ಮುಖ್ಯರಸ್ತೆಗಳಲ್ಲಿ ಮುಚ್ಚಲಾಗಿದೆ. ಇದನ್ನು ಗಮನಿಸಿ ಇಲ್ಲಿ ಪ್ರಾಯೋಗಿಕವಾಗಿ ಈ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಜಯಮಾಲಾ ಮನವಿ ಮಾಡಿದ್ದರು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿಯಾಗಿ ಬೇರೆಕಡೆ ಮಾಡಿದ್ದಾರೆ. ನಮ್ಮ ನಗರದಲ್ಲೂ ಮಾಡಿದರೆ ಹೇಗಿರುತ್ತದೆ ಎಂದು ಜಯಮಾಲಾ ಅವರು ಈ ಹಿಂದೆ ಹೇಳಿದ್ದರು. ಕೇವಲ ಜಯಮಾಲಾ ಅಲ್ಲ ಅಲ್ಲಿರುವ ಎಲ್ಲಾ ರಾಜಕಾರಣಿಗಳು ಹೇಳಿದ್ದರು. ಅವರು ನಮ್ಮ ಮನೆಯ ಬಳಿ ಮಾಡಿ ಅಂತ ಹೇಳಿಲ್ಲ. ಇದರಿಂದ ದುಂದುವೆಚ್ಚ ಏನು ಹಾಗಿಲ್ಲ. ಈ ಮೇಲ್ಛಾವಣಿ ನಿರ್ಮಾಣ ಮಾಡಲು 2.5 ಕೋಟಿ ರೂ. ವೆಚ್ಚವಾಗಿದೆ ಎಂದು ಬೆಟ್ಟೆಗೌಡ ವಿವರಿಸಿದರು.

    ವಿವಿಐಪಿಗಳಿರುವ ವಾರ್ಡ್ ಅಥವಾ ಮಿನಿಸ್ಟರ್ ಜಯಮಾಲಾ ಇದ್ದರೆ ಅನ್ನೋ ಉದ್ದೇಶಕ್ಕೆ ಕಾಮಾಗಾರಿ ಮಾಡುತ್ತಿಲ್ಲ. ನಾವು ಕೂಡ ಮೇಲ್ಚಾವಣಿ ಹಾಕಿದರೆ ಯಾವ ರೀತಿ ಕಾಣುತ್ತದೆ. ಒಂದು ವೇಳೆ ಈ ಮೇಲ್ಛಾವಣಿ ಹಾಕುವುದರಿಂದ ಉಪಯೋಗವಾದರೆ ಸಾರ್ವಜನಿಕರ ಅಭಿಪ್ರಾಯ ಪಡೆದು ನಗರದ ಪ್ರಮುಖ ರಸ್ತೆಗಳಲ್ಲಿ ಮಾಡಲಾಗುತ್ತದೆ ಎಂದು ಬೆಟ್ಟೆಗೌಡ ಹೇಳಿದ್ದಾರೆ.

    ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪ್ರತಿಕ್ರಿಯಿಸಿ, 300 ಮೀಟರ್ ನ ರಾಜಕಾಲುವೆಯಲ್ಲಿ ಕೆಲಸ ನಡೆಯುತ್ತಿದೆ. ಮಾನ್ಯ ಸಚಿವೆ ಜಯಮಾಲಾ ಅವರು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ. ಸದನ ಸಮಿತಿಯ ಒಪ್ಪಿಗೆ ಪಡೆದುಕೊಂಡು ನಗರೋತ್ಪನ್ನ ಅನುದಾನದಲ್ಲಿ 2.5 ಕೋಟಿ ರೂ. ವೆಚ್ಛದಲ್ಲಿ ಈ ಕೆಲಸ ನಡೆಯುತ್ತಿದೆ. ಮುಂಬೈನ ಬಾಂದ್ರಾ ಸಿಟಿಯಲ್ಲಿ ಏರ್ ಪೋರ್ಟ್ ಇಳಿದ ತಕ್ಷಣ ಈ ಯೋಜನೆ ಮಾಡಿದ್ದಾರೆ. ಜಯಮಾಲಾ ಮೇಡಮ್ ನಮ್ಮ ಜಾಗದಲ್ಲಿ ಈ ಕಾಲುವೆ ಮಾಡಿ ಎಂದು ಹೇಳಿಲ್ಲ. ಆದರೆ ನಮ್ಮ ಅಧಿಕಾರಿಗಳು ಜಯಮಾಲ ಅವರ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಯೋಜನೆಗೆ ಅವರ ಶ್ರಮ ಹೆಚ್ಚಾಗಿದೆ ಎಂದು ಈ ಕಾಲುವೆ ಮಾಡಲು ಆ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಾಗದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ ಪರಿಷತ್ ಸದಸ್ಯೆ ಜಯಮಾಲಾ ಪ್ರತಿಕ್ರಿಯಿಸಿ, ನಮ್ಮ ಏರಿಯಾದಲ್ಲಿ ಸೊಳ್ಳೆ ತುಂಬಾ ಇದೆ. ಮಕ್ಕಳಿಗೆ ತುಂಬಾ ಡೆಂಗ್ಯೂ ಬಂದಿದೆ. ಹೀಗಾಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ನಾನು ಸದನದಲ್ಲಿ ಮನವಿ ಮಾಡಿದ್ದೆ. ಎರಡು ಬಾರಿ ವಿಚಾರವನ್ನು ಪ್ರಸ್ತಾಪ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಬಳಿಕ ನಮ್ಮ ಏರಿಯಾದಲ್ಲಿ 159 ಜನರು ಒಂದು ಪತ್ರ ಬರೆದು ಸಹಿ ಮಾಡಿ ಎಂಎಲ್‍ಸಿ ಆಗಿದ್ದೀರಿ ಏನಾದರೂ ಮಾಡಿ ಎಂದು ಮನವಿ ಮಾಡಿಕೊಂಡರು. ನಾನು ಅದನ್ನು ಪಿಟಿಷನ್ ಕಮಿಟಿಗೆ ಹಾಕಿದೆ. ಎಂಎಲ್‍ಎ ಆಗಿದ್ದ ವೈ. ನಾರಾಯಣಸ್ವಾಮಿ ಅವರಿಗೆ ಹೇಳಿದೆ. ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಏನು ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದರು.

  • ಕೈ ಪರಿಷತ್ ಸದಸ್ಯರಿಂದ ಸಚಿವೆ ಜಯಮಾಲ ವಿರುದ್ಧ ಅಸಮಾಧಾನ!

    ಕೈ ಪರಿಷತ್ ಸದಸ್ಯರಿಂದ ಸಚಿವೆ ಜಯಮಾಲ ವಿರುದ್ಧ ಅಸಮಾಧಾನ!

    ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರನ್ನು ವಿಧಾನಪರಿಷತ್ ಸಭಾ ನಾಯಕಿಯನ್ನಾಗಿ ನೇಮಿಸಿದ್ದಕ್ಕೆ, ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

    ಭಾನುವಾರ ಸಮನ್ವಯ ಸಮಿತಿ ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಅನೇಕ ಶಾಸಕರು, ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಂದಾಗುತ್ತಿದ್ದಾರೆ. ಅವರಲ್ಲಿ ಅನೇಕರು ಜಯಮಾಲ ಅವರಿಗೆ ಮಂತ್ರಿಗಿರಿ ಹಾಗೂ ವಿಧಾನ ಪರಿಷತ್ ಸಭಾನಾಯಕಿ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಜಯಮಾಲ ಅವರನ್ನು ಸಭಾನಾಯಕಿ ಮಾಡಬಾರದು. ಬದಲಿಗೆ ಹಿರಿಯ ಪರಿಷತ್ ಸದಸ್ಯರೊಬ್ಬರನ್ನು ಸಚಿವರನ್ನಾಗಿ ನೇಮಿಸಿ ಅವರಿಗೆ ಸಭಾ ನಾಯಕರ ಸ್ಥಾನ ನೀಡಬೇಕು ಎಂದು ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಹೆಚ್.ಎಂ.ರೇವಣ್ಣ, ಕೊಂಡಜ್ಜಿ ಮೋಹನ್ ಅವರ ನೇತೃತ್ವದ ಸದಸ್ಯರ ನಿಯೋಗ ಮನವಿ ಸಲ್ಲಿಸಿದೆ.

    ಕೆ.ಸಿ.ವೇಣುಗೋಪಾಲ್ ಅವರನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದು, ರಾಜ್ಯ ರಾಜಕೀಯದ ಪ್ರಸಕ್ತ ವಿದ್ಯಮಾನ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿನ ಬೆಳವಣಿಗೆ ಕುರಿತಾಗಿ ಗಮನಕ್ಕೆ ತಂದಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಬೆಂಗಳೂರು: ಮಂತ್ರಿ ಸ್ಥಾನ ಹಂಚಿಕೆಯಾದ ದಿನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ನಡುವಿನ `ಸೇವೆ’ ಸಮರ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮಂದುವರಿದಿದೆ.

    ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ನಾನು ಹೇಳಿದ ಸೇವೆಯನ್ನು ಅವರು ಯಾವ ಸೇವೆ ಅಂದುಕೊಂಡರೋ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವ ಮೂಲಕ ಮತ್ತೊಮ್ಮೆ ಜಯಮಾಲಾರನ್ನು ಕೆಣಕಿದ್ದಾರೆ.

    ಜಯಮಾಲಾರವರ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಮುಖಂಡರು ಸಚಿವ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರ ಬಗ್ಗೆ ನನಗೇನೂ ಹೊಟ್ಟೆಕಿಚ್ಚು ಇಲ್ಲ. ಉತ್ತರ ಕರ್ನಾಟಕದ ಕಡೆ ಉರುಳು ಸೇವೆ, ದೇವರ ಸೇವೆ ಹಾಗೂ ಅಭಿಷೇಕ ಸೇವೆ ಎಲ್ಲವೂ ಇದೆ. ಈ ಅರ್ಥದಲ್ಲಿ ನಾನು ಸೇವೆ ಎಂದು ಪದ ಬಳಕೆ ಮಾಡಿದ್ದೆ, ನಮ್ಮಲ್ಲಿ `ಸೇವೆ’ ಎಂದರೆ `ಕೆಲಸ’ ಎಂಬರ್ಥ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಏನಿದು ಟಾಂಗ್ ರಾಜಕೀಯ?
    ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿತ್ತು. ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ `ಸೇವೆ’ಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತಿನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.

  • ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಉತ್ತರ ಕನ್ನಡ ಭಾಗದಲ್ಲಿ ಸೇವೆ ಎಂದರೆ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಸೇವೆ ಪದವನ್ನು ಅನರ್ಥ ಮಾಡಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ ಸೇವೆ ಎಂದರೆ ಕೆಲಸ. ನೀವು ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಅದಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಜಯಮಾಲಾಗೆ ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನು ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಕೆಲಸದ ಅರ್ಥದಲ್ಲಿ ನಾನು ಸೇವೆ ಎಂಬ ಪದ ಬಳಸಿದ್ದೇನೆ. ಅದಕ್ಕೆ ಸಚಿವರು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪಕ್ಷದ ಚಟುವಟಿಕೆಗಳಲ್ಲಿ ಇಬ್ಬರು ಕೂಡಿ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಯಾವುದೇ ಕೆಲಸ ಇದ್ದರೂ ನಾನು ಜಯಮಾಲಾ ಅವರಿಗೆ ಮೊದಲು ಫೋನ್ ಕರೆ ಮಾಡುತ್ತಿದ್ದೆ. ಜಯಮಾಲಾ ಅವರಿಗೆ ಖಾತೆ ಸಿಕ್ಕಿದ್ದಕ್ಕೆ ನಾನು ಹೊಟ್ಟೆ ಕಿಚ್ಚುಪಟ್ಟಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.  ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಏನಿದು ಟಾಂಗ್ ರಾಜಕೀಯ?
    ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ ಸೇವೆಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.

  • ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಬೆಂಗಳೂರು: ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಮುಖಂಡರು ಪ್ರಶ್ನಿಸಿದ್ದರು ಹಾಗೂ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಬೆಳವಣಿಗೆಗೆ ಗುರುವಾರ ಜಯಮಾಲಾ ಉತ್ತರ ನೀಡಿದ್ದಾರೆ.

    ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ಕಾಂಗ್ರೆಸ್ ಸಚಿವ ಎಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲಾ ಟಾಂಗ್ ನೀಡಿದ್ದಾರೆ. ಇದನ್ನು ಓದಿ:  ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿದೆ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಪದ ಪ್ರಯೋಗ ನನಗೆ ಸರಿ ಅನಿಸಲಿಲ್ಲ. ಅವರ ಮಾತುಗಳು ರಾಹುಲ್ ಗಾಂಧಿಯವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ ಎಂದಿದ್ದಾರೆ.

    ಸಂವಿಧಾನ ಇಲ್ಲದಿದ್ದರೇ ಕೇವಲ ಪುರುಷರು ಮಾತ್ರ ದೇಶವನ್ನು ಆಳುತ್ತಿದ್ದರು. ನಮ್ಮನ್ನ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುತ್ತಿದ್ದರು. ಕಾಂಗ್ರೆಸ್ಸಿಗೆ ಧ್ವನಿಪೆಟ್ಟಿಯಾಗಿದ್ದು ಹೆಣ್ಣು, ಇಂದಿರಾ ಗಾಂಧಿ ಪಕ್ಷಕ್ಕೆ ಬಲ ತುಂಬಿದ್ದರು. ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷಕ್ಕೆ ಮರು ಚೇತನ ನೀಡಿದ್ದಾರೆ. ನನಗೆ ವಿಧಾನ ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿಯಿದೆ. ನಾನು ಏನು ಗೊತ್ತಿಲ್ಲದೇ ರಾಜಕೀಯಕ್ಕೆ ಬಂದಿಲ್ಲ ಎಂದು ಟಾಂಗ್ ನೀಡಿದರು.

  • ಸಿದ್ದರಾಮಯ್ಯ ಬೆಂಕಿಯ ಮೇಲೆ ನಡೆದು ಯಶಸ್ವಿ ಸರ್ಕಾರ ನಡೆಸಿದ್ದಾರೆ- ಜಯಮಾಲಾ

    ಸಿದ್ದರಾಮಯ್ಯ ಬೆಂಕಿಯ ಮೇಲೆ ನಡೆದು ಯಶಸ್ವಿ ಸರ್ಕಾರ ನಡೆಸಿದ್ದಾರೆ- ಜಯಮಾಲಾ

    ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಸಿಎಂ ಸಿದ್ದರಾಮಯ್ಯನವರು ಬೆಂಕಿಯ ಮೇಲೆ ನಡೆದು, ಯಶಸ್ವಿ ಸರ್ಕಾರವನ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ, ಚಿತ್ರನಟಿ ಜಯಮಾಲಾ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವಲ್ಲಿ ಕಾರ್ಯತಂತ್ರ ಕುರಿತಂತೆ ಸೋಮವಾರ ನಗರದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಅಂತ ಕಿವಿ ಮಾತು ಹೇಳಿದ್ರು.

    ಇದೇ ವೇಳೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಕೂಡ ಸಭೆಯಲ್ಲಿ ವಿವರಿಸಿದ್ರು. ಸಾಕಷ್ಟು ಜನ ಮೆಚ್ಚುವಂತಹ ಯೋಜನೆಗಳನ್ನ ಜನರಿಗೆ ಮುಟ್ಟಿಸಿ ಯಶಸ್ವಿಯಾದ ನಮ್ಮ ಸರ್ಕಾರ ಒಂದು ಕಪ್ಪು ಚುಕ್ಕೆ ಇಲ್ಲದೆ ಅಧಿಕಾರವನ್ನ ನಡೆಸಿದೆ ಎಂದರು.

    ಮಹಾದಾಯಿ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳಕಳಿ ಇದೆ. ನಮ್ಮ ಸರ್ಕಾರ ಮಹದಾಯಿ ಹೋರಾಟದ ಪರವಿದ್ದು, ಹೋರಾಟಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವವರಿಗೆ ಸಾಯುವಾಗ ನೀರು ಸಿಗುವುದಿಲ್ಲ ಎಂಬಂತೆ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

  • ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಬೆಂಗಳೂರು: ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಧಾನಸಭಾ ಕ್ಷೇತ್ರದ ಮೇಲೆ ನಟಿ, ಪರಿಷತ್ ಸದಸ್ಯೆ ಜಯಮಾಲಾ ಕಣ್ಣಿಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಈ ಬಾರಿ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸದೇ ಇದ್ದರೆ ಸಾಗರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕೆಂದು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಚಿವ ಕಾಗೋಡು ತಿಮ್ಮಪ್ಪ ಬದಲಾಗಿ ಅವರ ಪುತ್ರಿಗೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿಗಳು ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿವೆ. ಈ ವದಂತಿ ನಡುವೆ ಜಯಮಾಲಾ ಸಾಗರ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ.

    ಈ ಕಾರಣಕ್ಕೆ ಟಿಕೆಟ್ ಕೊಡಿ: ಸಾಗರದಲ್ಲಿ ಈಡಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಮಾಲಾ ತಾವು ಈಡಿಗ ಸಮುದಾಯದವರಾಗಿದ್ದರಿಂದ ಪ್ರಬಲ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಸಾಗರದ ಚುನಾವಣೆಯಲ್ಲಿ ಹವ್ಯಕ ಸಮುದಾಯದ ಜನರ ಮತಗಳು ಕೂಡ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಜಯಮಾಲಾ ಪತಿ ರಾಮಚಂದ್ರ ಹವ್ಯಕ ಸಮುದಾಯಕ್ಕೆ ಸೇರಿದ ಸಾಗರದ ಮೂಲದವರಾಗಿದ್ದಾರೆ. ಈ ಎಲ್ಲ ಕಾರಣಗಳು ನನ್ನ ಗೆಲುವಿಗೆ ಪೂರಕವಾಗಲಿವೆ ಎಂಬುದನ್ನು ಜಯಮಾಲಾ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಕಾಂಗ್ರೆಸ್ ಮಾತ್ರ ಇದೂವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿಲ್ಲ. ಎಲ್ಲ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ.

    ಸಾಗರ ಟಿಕೆಟ್‍ಗಾಗಿ ಬಿಜೆಪಿಯಲ್ಲೂ ಪೈಪೋಟಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

    ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.