Tag: Jayadeva Flyover

  • ಜಯದೇವ ಫ್ಲೈಓವರ್ ಬಂದ್- ಡೆಮಾಲಿಷನ್‍ಗೆ ಸಕಲ ಸಿದ್ಧತೆ

    ಜಯದೇವ ಫ್ಲೈಓವರ್ ಬಂದ್- ಡೆಮಾಲಿಷನ್‍ಗೆ ಸಕಲ ಸಿದ್ಧತೆ

    ಬೆಂಗಳೂರು: ನಗರದ ಜಯದೇವ ಫ್ಲೈಓವರ್ ತೆರವು ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಫ್ಲೈಓವರ್ ಮೇಲಿನ ಸಾರಿಗೆ ಸಂಚಾರವನ್ನು ಬಂದ್ ಮಾಡಲಾಗಿದೆ. ನಗರದ ಆರ್.ವಿ ರಸ್ತೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಇದರ ತೆರವು ಕಾರ್ಯ ಇಂದು ಮಧ್ಯ ರಾತ್ರಿಯಿಂದ ಆರಂಭವಾಗಲಿದೆ.

    ಜಯದೇವ ಸಿಲ್ಕ್ ಬೋರ್ಡ್ ಫ್ಲೈಓವರ್ ಮೇಲೆ ಇಂದು ರಾತ್ರಿಯಿಂದ ಸಂಚರಿಸಲು ಅವಕಾಶವಿಲ್ಲ ಎಂದು ಈಗಾಗಲೇ ಆ ಪ್ರದೇಶದ ಸುತ್ತಮುತ್ತ ನೋಟಿಸ್ ಅಂಟಿಸಿ ಮಾಹಿತಿ ನೀಡಲಾಗಿದೆ. ಬಿಎಂಆರ್ ಸಿಎಲ್‍ನಿಂದ ಇಂದು ರಾತ್ರಿ 10 ಗಂಟೆಯಿಂದ ಫ್ಲೈಓವರ್ ತೆರವು ಕಾರ್ಯ ಶುರುವಾಗಲಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.

    ಫ್ಲೈಓವರ್ ತೆರವು ಕಾರ್ಯಾಚರಣೆ ಆರಂಭವಾಗುವ ಪರಿಣಾಮ ನಾಳೆಯಿಂದ ಬನಶಂಕರಿ, ಜೆ.ಪಿ.ನಗರ, ಸೌತ್ ಎಂಡ್ ಸರ್ಕಲ್, ಬನ್ನೇರುಘಟ್ಟ ರಸ್ತೆ, ಬಿಟಿಎಂ ಲೇಔಟ್, ಕೋರಮಂಗಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್ ನ ಮೆಟ್ರೋ ರೀಚ್ 2-5ರ ಕಾಮಗಾರಿ ಹಿನ್ನೆಲೆಯಲ್ಲಿ ಫ್ಲೈಓವರ್ ತೆರವು ಮಾಡಲಾಗುತ್ತಿದೆ. ಜಯದೇವ ಜಂಕ್ಷನ್‍ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ಮೆಟ್ರೋ ನಿಲ್ದಾಣ ನಿರ್ಮಾಣವಾಗಲಿದೆ. ಗೊಟ್ಟಿಗೆರೆ-ನಾಗವಾರ ಹಾಗೂ ಆರ್.ವಿ ರಸ್ತೆ-ಬೊಮ್ಮಸಂದ್ರಕ್ಕೆ ಮೆಟ್ರೋ ಮಾರ್ಗಗಳು ರೆಡಿಯಾಗುತ್ತಿದೆ. ಇದರ ಕೆಳಗೆ ನಿರ್ಮಾಣವಾಗಲಿರುವ ಹೊಸ ಮೇಲುರಸ್ತೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‍ಗೆ ಸಂಪರ್ಕ ಕಲ್ಪಿಸಲಿದೆ.

    ಸುಮಾರು 500 ಮೀಟರ್ ಉದ್ದದ ಫ್ಲೈಓವರ್  ರ್ಮಾಣಕ್ಕೆ 1998 ರಲ್ಲಿ ಕಾರ್ಯ ಯೋಜನೆ ಸಿದ್ಧಮಾಡಿಕೊಳ್ಳಲಾಗಿತ್ತು. 2000ರಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯ ಆರಂಭವಾಗಿ 2003 ರಲ್ಲಿ ಕಾಮಗಾರಿ ಪೂರ್ಣಗೊಂಡು 2004 ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಅಂದು 13.50 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ ಮಾಡಲಾಗಿತ್ತು. ಪ್ರತಿನಿತ್ಯ ಈ ಫ್ಲೈಓವರ್ ಮೇಲೆ 16 ಸಾವಿರ ವಾಹನಗಳ ಸಂಚಾರವಿತ್ತು.

    ನಿತ್ಯ ಸಂಚರಿಸುತ್ತಿದ್ದ ಜನರು ಫ್ಲೈಓವರ್ ತೆರವಿನಿಂದ ಟ್ರಾಫಿಕ್ ಕಿರಿಕ್ ಎದುರಿಸುತ್ತಾರೆ ಎಂದು ವಾಹನ ಸವಾರ ಸಂತೋಷ್ ತಿಳಿಸಿದ್ದಾರೆ. ಇತ್ತ ಈ ಪ್ರದೇಶದ ಸುತ್ತಮುತ್ತಲಿನ ವಾಣಿಜ್ಯ ಮಳಿಗೆ ಮಾಲೀಕರು ಬಿಸಿನೆಸ್ ನಷ್ಟ ಮತ್ತಷ್ಟು ದಿನ ಮುಂದುವರೆಯಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಮೆಟ್ರೋ 2ನೇ ಹಂತದ ಕಾಮಗಾರಿಗಾಗಿ ಜಯದೇವ ಫ್ಲೈಓವರ್ ತೆರವು

    ಮೆಟ್ರೋ 2ನೇ ಹಂತದ ಕಾಮಗಾರಿಗಾಗಿ ಜಯದೇವ ಫ್ಲೈಓವರ್ ತೆರವು

    ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ‘ನಮ್ಮ ಮೆಟ್ರೋ’ ಎರಡನೇ ಹಂತದ ಕಾಮಗಾರಿಗಾಗಿ ಜಯದೇವ ಫ್ಲೈಓವರ್ ನ ಲೂಪ್ ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಿದೆ. ಉಳಿದ ಮುಖ್ಯ ಭಾಗ ತೆರವಿಗೆ ಸಿದ್ಧತೆ ಸಹ ನಡೆಸಲಾಗುತ್ತಿದೆ. ಇದರಿಂದ ರಸ್ತೆಯ ತುಂಬಾ ಪುಲ್ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

    ಜಯದೇವ ಜಂಕ್ಷನ್‍ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಗೊಟ್ಟಿಗೆರೆ-ನಾಗವಾರ ಹಾಗೂ ಆರ್‍ವಿ ರಸ್ತೆ-ಬೊಮ್ಮಸಂದ್ರಕ್ಕೆ ಮೆಟ್ರೋ ಮಾರ್ಗಗಳು ರೆಡಿಯಾಗುತ್ತಿವೆ. ಇದರ ಕೆಳಗೆ ನಿರ್ಮಾಣವಾಗಲಿರುವ ಹೊಸ ಮೇಲುರಸ್ತೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಕಲ್ಪಿಸಲಿದೆ.

    ಈ ಯೋಜನೆಗಾಗಿ ಮೇಲುರಸ್ತೆಯ ಲೂಪ್ ತೆರವು ಮಾಡಲಾಗುತ್ತಿದೆ. ಸದ್ಯ 150 ಮೀಟರ್ ಉದ್ದದ ಲೂಪ್ ತೆರವುಗೊಳಿಸಲಾಗಿದೆ. ಅಲ್ಲದೆ ರಾತ್ರಿ ವೇಳೆ ಮಾತ್ರ ಕಾಮಗಾರಿ ನಡೆಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಹೀಗಾಗಿ ರಾತ್ರಿ ಕಾಮಗಾರಿ ಮಾಡಿದ ಕೂಡಲೇ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದೆ.

    ಸುಮಾರು 2 ರಿಂದ 3 ತಿಂಗಳು ಕಾಲ ಈ ಕಾಮಗಾರಿ ನಡೆಯಲಿದ್ದು, ಕಾಮಗಾರಿ ವೇಳೆ ಮೇಲುರಸ್ತೆಯ ಕೆಳಗಿನ ರಸ್ತೆಯಲ್ಲಿ ಮುಂಜಾನೆ 6 ರಿಂದ ರಾತ್ರಿ 10 ಗಂಟೆವರೆಗೆ ದ್ವಿಚಕ್ರ ವಾಹನ, ಅಂಬುಲೆನ್ಸ್ ಹಾಗೂ ಬಿಎಂಟಿಸಿ ಬಸ್‍ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10 ರಿಂದ ಮುಂಜಾನೆ 6 ಗಂಟೆವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಕಾಮಗಾರಿ ಆರಂಭವಾದ ಮೇಲೆ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗುತ್ತದೆ ಎನ್ನಲಾಗಿದೆ.