Tag: jaya tv

  • ಜಯಾ ಟಿವಿ ಮೇಲೆ ಐಟಿ ದಾಳಿ ನಡೆಸಿದ್ದು ಯಾಕೆ?

    ಜಯಾ ಟಿವಿ ಮೇಲೆ ಐಟಿ ದಾಳಿ ನಡೆಸಿದ್ದು ಯಾಕೆ?

    ಚೆನ್ನೈ/ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಐಎಡಿಎಂಕೆ ನಾಯಕರ ನಿವಾಸ, ಜಯಾ ಟಿವಿ ಕಚೇರಿ ಸೇರಿದಂತೆ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ಶಶಿಕಲಾ ಸಂಬಂಧಿ ನಟರಾಜನ್, ಶಶಿಕಲಾ ಸೋದರ ಸೊಸೆ ಕೃಷ್ಣಪ್ರಿಯ, ಜಯಾ ಟಿವಿ, ಶಶಿಕಲಾ ಒಡೆತನದ ಜಾನ್ ಥಿಯೇಟರ್ ಕಾರ್ಯಾಲಯ, ಜಯಲಲಿತಾ ಅವರ ಕೊಡನಾಡು ಎಸ್ಟೇಟ್, ಬೆಂಗಳೂರಿನ ಶಶಿಕಲಾ ಆಪ್ತ ಮುರುಗೇಶ್ ಪಾಳ್ಯದಲ್ಲಿರುವ ಅಣ್ಣಾ ಡಿಎಂಕೆಯ ನಾಯಕ ಪುಗಳೇಂದಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    12ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆ 6 ಗಂಟೆಗೆ ಜಯಾ ಟಿವಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ದೆಹಲಿ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ಹಲವಾರು ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಆದಾಯದ ಮೂಲ ತೋರಿಸಿದೇ ಶೆಲ್ ಕಂಪೆನಿಗಳು ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

    ನೋಟ್ ಬ್ಯಾನ್ ಬಳಿಕ ಭಾರೀ ಪ್ರಮಾಣದಲ್ಲಿ ಹಣವನ್ನು ನಕಲಿ ಕಂಪೆನಿಗಳ ಹೆಸರಿನಲ್ಲಿ ಹೂಡಿರುವ ಆರೋಪ ಜಯಾ ಟಿವಿ ಸಮೂಹದ ಮೇಲಿದೆ. ಜಯಾ ಟಿವಿ ನೆಟ್‍ವರ್ಕ್ ನ್ಯೂಸ್ ಚಾನೆಲ್, ಎಂಟರ್ ಟೈನ್‍ಮೆಂಟ್ ವಾಹಿನಿ ಮತ್ತು ಮೂವಿ ವಾಹಿನಿಯನ್ನು ಹೊಂದಿದೆ.

    ಪ್ರಸ್ತುತ ಈಗ ಜಯಾ ಟಿವಿ ನಿಯಂತ್ರಣವನ್ನು ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರ ಸಹೋದರ ದಿವಕರನ್ ಹೊಂದಿದ್ದಾರೆ.

    ಜಯಲಲಿತಾ ಮುಖ್ಯಮಂತ್ರಿ ಆಗಿದ್ದ ವೇಳೆ ಜಯಾಟಿವಿ ಸರ್ಕಾರದ ಮುಖವಾಣಿಯಾಗಿ ಕೆಲಸ ಮಾಡುತಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ಶಶಿಕಲಾ ವಿರುದ್ಧ ಬಂಡಾಯ ಎದ್ದ ಬಳಿಕ ಜಯಾ ಟಿವಿಯಲ್ಲಿ ಸರ್ಕಾರ ವಿರೋಧಿ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿದೆ.

    ಕೊಡನಾಡಿನಲ್ಲಿರುವ ಎಸ್ಟೇಟ್ 900 ಎಕರೆಯದ್ದಾಗಿದ್ದು ಇಲ್ಲಿನ ರಾಜವೈಭವದ ಅರಮನೆಯಂತಹ ಬೃಹತ್ ಬಂಗಲೆಯಲ್ಲಿ ಜಯಲಲಿತಾ ಆಗಾಗ ಬಂದು ವಿಶ್ರಾಂತಿ ಪಡೆದು ಹೋಗುತ್ತಿದ್ದರು. ನಿಧನಕ್ಕೆ ಮುನ್ನ ಕೆಲವು ವರ್ಷಗಳ ಹಿಂದಿನಿಂದಲೇ ಜಯಾ ಈ ಬಂಗಲೆಯಲ್ಲಿ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರು.

    ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಪ್ರಕರಣದಲ್ಲಿ ಶಶಿಕಲಾ ದೋಷಿಯಾಗಿದ್ದು, ಪ್ರಸ್ತುತ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.