Tag: jawans

  • ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಹುತಾತ್ಮ

    ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಹುತಾತ್ಮ

    ರಾಯ್ಪುರ: ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲೀಯರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ರಾಜ್ಯ ಕಾರ್ಯಪಡೆಯ ಮುಖ್ಯ ಕಾನ್ಸ್‌ಟೇಬಲ್ ಭರತ್ ಲಾಲ್ ಸಾಹು ಮತ್ತು ಕಾನ್‌ಸ್ಟೇಬಲ್ ಸತೇರ್ ಸಿಂಗ್ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೋವಿಡ್‌ ದೃಢ

    ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಮಾರ್ಕಾ ಅರಣ್ಯದಲ್ಲಿ ಕಳೆದ ರಾತ್ರಿ ಐಇಡಿ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಪೈಪ್ ಬಾಂಬ್ ಸ್ಫೋಟಗೊಂಡಿದೆ.

    ಗಾಯಗೊಂಡ ಯೋಧರು ಪುರುಷೋತ್ತಮ್ ನಾಗ್, ಕೋಮಲ್ ಯಾದವ್, ಸಿಯಾರಾಮ್ ಸೋರಿ ಮತ್ತು ಸಂಜಯ್ ಕುಮಾರ್ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಮ ವೈದ್ಯಕೀಯ ಆರೈಕೆಗಾಗಿ ಅವರನ್ನು ರಾಯ್‌ಪುರಕ್ಕೆ ವಿಮಾನದಲ್ಲಿ ಸಾಗಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

  • ಛತ್ತೀಸ್‍ಗಢದಲ್ಲಿ ನಕ್ಸಲ್ ದಾಳಿಗೆ 20 ಯೋಧರು ಹುತಾತ್ಮ – ಹಲವರು ನಾಪತ್ತೆ

    ಛತ್ತೀಸ್‍ಗಢದಲ್ಲಿ ನಕ್ಸಲ್ ದಾಳಿಗೆ 20 ಯೋಧರು ಹುತಾತ್ಮ – ಹಲವರು ನಾಪತ್ತೆ

    ರಾಯ್‍ಪುರ: ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದೊಡ್ಡ ದಾಳಿಗೆ 20 ಯೋಧರು ಹುತಾತ್ಮರಾಗಿದ್ದಾರೆ.

    ಛತ್ತೀಸ್‍ಗಢದ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಿಡುಬಿಟ್ಟಿರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್‍ಪಿಎಫ್ ನೊಂದಿಗೆ ಜಂಟಿ ಕಾರ್ಯಾಚರಣೆಗೆ ನಡೆಸಿತ್ತು. ಸಿಆರ್‍ಪಿಎಫ್‍ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆಗಿಳಿದು, ನಕ್ಸಲರ ಅಡಗುತಾಣದ ಮೇಲೆ ಶನಿವಾರ ದಾಳಿ ನಡೆಸಿದೆ. ಈ ವೇಳೆ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

    ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಒಟ್ಟು 4 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 20 ಜನ ಯೋಧರು ಈಗಾಗಲೇ ಹುತಾತ್ಮರಾಗಿದ್ದು, ಯೋಧರ ಮೃತದೇಹಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದೆ. ಕಾರ್ಯಾಚರಣೆ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿದ್ದು ನಾಪತ್ತೆಯಾಗಿರುವ ಯೋಧರಿಗಾಗಿ ತೀವ್ರ ಹುಡುಕಾಟ ಆರಂಭಿಸಿದೆ. ಈ ದಾಳಿಯಲ್ಲಿ 15 ಮಂದಿ ನಕ್ಸಲರು ಮೃತಪಟ್ಟಿದ್ದಾರೆ.

    ನಿನ್ನೆ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ 23 ಮಂದಿ ಯೋಧರನ್ನು ಬಿಜಾಪುರ ಆಸ್ಪತ್ರೆಗೆ ಹಾಗೂ 7 ಮಂದಿಯನ್ನು ರಾಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಛತ್ತೀಸ್‍ಗಢ ಪೊಲೀಸ್ ಮೂಲಗಳು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದೆ.

    ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಸಂತಾಪ ಸೂಚಿಸಿ, ನಮ್ಮ ದೇಶವು ಯೋಧರ ಬಲಿದಾನವನ್ನು ಯಾವತ್ತು ಮರೆಯುವುದಿಲ್ಲ. ಯೋಧರ ಕುಟುಂಬದೊಂದಿಗೆ ನಾವಿದ್ದೇವೆ. ಶತ್ರುಗಳ ವಿರುದ್ಧ ಹೋರಾಟ ಮುಂದುವರಿಯಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

  • 68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು

    68 ಮಂದಿ ಸಿಆರ್‌ಪಿಎಫ್ ಯೋಧರಿಗೆ ಸೋಂಕು

    ನವದೆಹಲಿ: ದೇಶದಲ್ಲಿ ಇಂದು 68 ಸಿಆರ್‌ಪಿಎಫ್ ಯೋಧರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈವರೆಗೆ 127 ಸಿಆರ್‌ಪಿಎಫ್ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಸಿಆರ್‌ಪಿಎಫ್ ಯೋಧರನ್ನು ರಾಜಧಾನಿ ದೆಹಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಕೊರೊನಾ ಪತ್ತೆಯಾದ ಎಲ್ಲ 68 ಸೈನಿಕರು ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‍ಗೆ ಸೇರಿದವರಾಗಿದ್ದಾರೆ. ಈ ಬೆಟಾಲಿಯನ್‍ನ ಸೈನಿಕರಲ್ಲಿ ಒಬ್ಬರಿಗೆ ಮೊದಲೇ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದನ್ನೂ ಓದಿ: 24 ಗಂಟೆಯಲ್ಲಿ ದೇಶದ 2,293 ಜನರಿಗೆ ಕೊರೊನಾ- 71 ಮಂದಿ ಸಾವು

    ಈವರೆಗೂ ಪೂರ್ವ ದೆಹಲಿಯಲ್ಲಿರುವ ಬೆಟಾಲಿಯನ್‍ನ ಒಟ್ಟು 122 ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ದೇಶದಲ್ಲಿ ಒಟ್ಟು 127 ಸಿಆರ್‌ಪಿಎಫ್ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಓರ್ವ ಗುಣಮುಖರಾದರೆ, ಮತ್ತೊಬ್ಬರು ಮೃತಪಟ್ಟಿದ್ದಾರೆ.

    ಸಿಆರ್‌ಪಿಎಫ್‍ನ 55 ವರ್ಷದ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಸೋಂಕು ತಗುಲಿರುವುದು ಕಳೆದ ವಾರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಮೃತಪಟ್ಟಿದ್ದರು. ಅವರ ನಿಧನಕ್ಕೆ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಸಂತಾಪ ವ್ಯಕ್ತಪಡಿಸಿದ್ದರು.

  • ಮತಕ್ಕಾಗಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಹತ್ಯೆ: ರಾಮ್ ಗೋಪಾಲ್ ಯಾದವ್

    ಮತಕ್ಕಾಗಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಹತ್ಯೆ: ರಾಮ್ ಗೋಪಾಲ್ ಯಾದವ್

    ಲಕ್ನೋ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ವಿಚಾರವಾಗಿ ಸಮಾಜವಾದಿ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕೇಂದ್ರ ಸರ್ಕಾರವು ಮತಕ್ಕಾಗಿ ಯೋಧರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಅರೇ ಸೇನಾಪಡೆಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿವೆ ಎಂದ ಅವರು, ಜಮ್ಮು ಮತ್ತು ಶ್ರೀನಗರ ಮಧ್ಯೆ ಯಾವುದೇ ತಪಾಸಣೆ ನಡೆಯಲಿಲ್ಲ. ಜೊತೆಗೆ ಯೋಧರು ಸಾಮಾನ್ಯ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.

    ಪುಲ್ವಾಮಾ ದಾಳಿಯಲ್ಲಿ ಪಿತೂರಿ ನಡೆದಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ತನಿಖೆಗೆ ನೀಡಲು ಸಾಧ್ಯವಾಗುತ್ತದೆ. ತನಿಖೆಯ ಬಳಿಕ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೊರಬೀಳುತ್ತವೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಇದೇ ತಿಂಗಳು ಕೂಡ ಇಂತಹದ್ದೇ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಹೀಗಾಗಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆದಿದೆ ಎಂದು ಬಿ.ಕೆ.ಪ್ರಕಾಶ್ ಹೇಳಿದ್ದರು.

    ಜಮ್ಮು-ಕಾಶ್ಮೀರ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಅದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ತನ್ನ ಇಕೋ ಕಾರನ್ನು ಸಿಆರ್‌ಪಿಎಫ್ ಯೋಧರ ಬಸ್ಸಿಗೆ ಗುದ್ದಿದ್ದ. ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು. ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ವಾಯು ಪಡೆಯು ಪಾಕಿಸ್ತಾನದ ಉಗ್ರರ ಮೂರು ನೆಲೆಗಳ ಮೇಲೆ ದಾಳಿ ಮಾಡಿತ್ತು.

  • ಬಿಎಸ್‍ಎಫ್ ಯೋಧರ ಜೊತೆ ನಟ ಅಕ್ಷಯ್ ಕುಮಾರ್ ಕಿಕ್ ಬಾಕ್ಸಿಂಗ್: ವಿಡಿಯೋ

    ಬಿಎಸ್‍ಎಫ್ ಯೋಧರ ಜೊತೆ ನಟ ಅಕ್ಷಯ್ ಕುಮಾರ್ ಕಿಕ್ ಬಾಕ್ಸಿಂಗ್: ವಿಡಿಯೋ

    ನವದೆಹಲಿ: ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ನವದೆಹಲಿಯಲ್ಲಿ ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡಿ ಅವರ ಕಿಕ್ ಬಾಕ್ಸಿಂಗ್ ಆಡಿದ್ದಾರೆ.

    ಇತ್ತೀಚೆಗೆ ಅಕ್ಷಯ್ ಕುಮಾರ್ ತಮ್ಮ ಮುಂಬರುವ ‘ಕೇಸರಿ’ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಹೋಗಿದ್ದರು. ಈ ವೇಳೆ ಅವರು ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡಿ ಅವರ ಜೊತೆ ಕಿಕ್ ಬಾಕ್ಸಿಂಗ್ ಆಡಿದ್ದಾರೆ. ಈ ವಿಡಿಯೋವನ್ನು ಅಕ್ಷಯ್ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ, “ಬಿಎಸ್‍ಎಫ್ ಯೋಧರನ್ನು ಭೇಟಿ ಮಾಡುವುದಕ್ಕೆ ಯಾವಾಗಲೂ ಖುಷಿಯಾಗುತ್ತದೆ. ಅವರ ತರಬೇತಿ ಹಾಗೂ ಉತ್ಸಾಹವು ಉನ್ನತ ದರ್ಜೆಯಲ್ಲಿ ಇರುತ್ತದೆ ಹಾಗೂ ಯಾವಾಗಲೂ ಒಂದು ಕಲಿಕೆಯ ಅನುಭವವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಕ್ಷಯ್ ಕುಮಾರ್ ಜೊತೆ ಕೇಸರಿ ಚಿತ್ರದ ನಟಿ ಪರಿಣೀತಿ ಚೋಪ್ರಾ ಕೂಡ ಭಾಗಿಯಾಗಿದ್ದು ಬಾಕ್ಸಿಂಗ್ ಆಟದ ವಿಡಿಯೋ ಈಗ ವೈರಲ್ ಆಗಿದೆ.

    1897 ರಲ್ಲಿ 10 ಸಾವಿರ ಅಫ್ಘಾನರ ವಿರುದ್ಧ ಬ್ರಿಟಿಷ್ ಸೇನೆಯ ಸಿಖ್ ರೆಜಿಮೆಂಟ್ ನ 21 ಮಂದಿ ಸೈನಿಕರು ಅಫ್ಘಾನಿಸ್ತಾನದಲ್ಲಿ ನಡೆಸಿ ಸಾರ್ಗಘಿ ಯುದ್ಧದ ಕಥೆಯನ್ನು ಆಧಾರಿಸಿ ಕೇಸರಿ ಚಿತ್ರ ನಿರ್ಮಿಸಲಾಗಿದೆ.

  • ಕೃತ್ಯವನ್ನು ನಾವು ಮರೆಯಲ್ಲ, ನಿಮ್ಮನ್ನು ಕ್ಷಮಿಸಲ್ಲ: ಸಿಆರ್‌ಪಿಎಫ್‌

    ಕೃತ್ಯವನ್ನು ನಾವು ಮರೆಯಲ್ಲ, ನಿಮ್ಮನ್ನು ಕ್ಷಮಿಸಲ್ಲ: ಸಿಆರ್‌ಪಿಎಫ್‌

    ನವದೆಹಲಿ: ಪುಲ್ವಾಮದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಭಾರತೀಯ ಯೋಧರನ್ನು ಬಲಿಪಡೆದಿದ್ದನ್ನು ನಾವು ಮರೆಯುವುದೂ ಇಲ್ಲ, ಕೃತ್ಯ ಎಸಗಿದ ಪಾಪಿಗಳನ್ನು ನಾವು ಕ್ಷಮಿಸುವುದು ಇಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌) ಟ್ವೀಟ್ ಮಾಡಿ ಉಗ್ರರಿಗೆ ಎಚ್ಚರಿಕೆ ನೀಡಿದೆ.

    ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಸುಮಾರು 47 ಸಿಆರ್‌ಪಿಎಫ್‌ ಯೋಧರ ಜೀವವನ್ನು ಬಲಿಪಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದಿರುವ ಸಿಆರ್‌ಪಿಎಫ್‌ ಉಗ್ರರು ಈ ದುಷ್ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ ಎಂದು ಹೇಳಿ ಖಡಕ್ ಸಂದೇಶ ರವಾನಿಸಿದೆ. ಇದನ್ನೂ ಓದಿ: ಒಳಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂಬ ಕನಸನ್ನು ಬಿಟ್ಟುಬಿಡಿ- ಪಾಕಿಗೆ ಮೋದಿ ಸಂದೇಶ

    ಟ್ವೀಟ್‍ನಲ್ಲಿ ಏನಿದೆ?
    ನಾವು ದುಷ್ಕೃತ್ಯ ಮೆರೆದವರನ್ನು ಮರೆಯುವುದಿಲ್ಲ, ಅವರನ್ನು ಕ್ಷಮಿಸುವುದೂ ಇಲ್ಲ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನಾವು ಗೌರವಿಸುತ್ತೇವೆ. ಹಾಗೆಯೇ ಹುತಾತ್ಮರಾಗಿರುವ ನಮ್ಮ ಸಹೋದರರ ಕುಟುಂಬದೊಂದಿಗೆ ನಾವಿದ್ದೇವೆ. ಈ ಘೋರ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ನಾವು ನೀಡುತ್ತೇವೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿಆರ್‌ಪಿಎಫ್‌ ಬರೆದುಕೊಂಡಿದೆ.

    ಉಗ್ರರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರಿಗಾಗಿ ಇಡೀ ದೇಶವೆ ಸಂತಾಪ ಸೂಚಿಸುತ್ತಿದೆ. ಅಲ್ಲದೇ ಕೃತ್ಯವೆಸೆಗಿರುವ ಉಗ್ರರ ವಿರುದ್ಧ ಎಲ್ಲಡೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಭದ್ರತಾ ಪಡೆಗೆ ಈ ದಾಳಿಗೆ ಪ್ರತ್ಯುತ್ತರ ನೀಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಯೋಧರನ್ನು ಬಲಿಪಡೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಿ – ಯುವ ಕಾಂಗ್ರೆಸ್ಸಿನಿಂದ ಶ್ರದ್ಧಾಂಜಲಿ

    ಯೋಧರನ್ನು ಬಲಿಪಡೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಿ – ಯುವ ಕಾಂಗ್ರೆಸ್ಸಿನಿಂದ ಶ್ರದ್ಧಾಂಜಲಿ

    ಬೆಂಗಳೂರು: ಪುಲ್ವಾಮದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಜಧಾನಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಾಗೆಯೇ ದುಷ್ಕೃತ್ಯ ಮೆರೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.

    ಯುವ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಗುರುವಾರದಂದು ಪುಲ್ವಾಮದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಉಗ್ರರ ತವರು ಪಾಕಿಸ್ತಾನದ ರಾಕ್ಷಸಿತನಕ್ಕೆ ತಕ್ಕ ಉತ್ತರ ಕೋಡಲೇಬೇಕು. ವಿಶ್ವಸಂಸ್ಥೆ ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಘೋಷಿಸಬೇಕು. ಯೋಧರನ್ನು ಬಲಿಪಡೆದ ಉಗ್ರ ಪಿಪಾಸುಗಳನ್ನ ಗಲ್ಲಿಗೇರಿಸಬೇಕು ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದರು.

    ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಪಾಕಿಸ್ತಾನಕ್ಕೆ ಬೆಂಬಲ ಕೊಡುವ ದೇಶಗಳಿಗೂ ಎಚ್ಚರಿಕೆ ಕೊಡಬೇಕು. ನಮ್ಮ ಸೈನಿಕರನ್ನ ಮೋಸದಿಂದ ಬಲಿಪಡೆದ ಯಾರನ್ನೂ ಬಿಡಬಾರದು. ಈ ಬಗ್ಗೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಜೈಕರ್ನಾಟಕ ಸಂಘಟನೆ ವತಿಯಿಂದ ಮೈಸೂರು ಸರ್ಕಲ್‍ನಲ್ಲಿ ಕೂಡ ಶ್ರದ್ದಾಂಜಲಿ ಸಲ್ಲಿಸಲಾಯಿತು. ಆತ್ಮಾಹುತಿ ದಾಳಿಯಲ್ಲಿ 47 ಯೋಧರ ಸಾವಿನ ಹಿನ್ನೆಲೆ ಪಾಕ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಸೈನಿಕರು ನಮ್ಮ ಹೆಮ್ಮೆ ಎಂದು ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ದೇಶಕ್ಕಾಗಿ ಮತ್ತೊಬ್ಬ ಮಗನನ್ನು ಸೇನೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆ

    ದೇಶಕ್ಕಾಗಿ ಮತ್ತೊಬ್ಬ ಮಗನನ್ನು ಸೇನೆ ಕಳುಹಿಸುತ್ತೇನೆ: ಹುತಾತ್ಮ ಯೋಧನ ತಂದೆ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರೊಬ್ಬರ ತಂದೆ ಮಗನ ಸಾವಿನ ನೋವಿನಲ್ಲೂ ದೇಶದ ಮೇಲೆ ತಮಗಿರುವ ಪ್ರೀತಿಯನ್ನು ತೋರಿಸಿದ್ದಾರೆ.

    ಗುರುವಾರ ಸಂಜೆ ಸಿಆರ್‌ಪಿಎಫ್ ಯೋಧ ರತನ್ ಠಾಕೂರ್ ಜೈಶ್-ಇ-ಮೊಹಮ್ಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಿಂದ ಹುತಾತ್ಮರಾಗಿದ್ದಾರೆ. ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧನ ಅಂತ್ಯ ಈ ರೀತಿ ಆಗುತ್ತದೆ ಎಂದು ಯಾರು ಯೋಚಿಸಲು ಸಾಧ್ಯವಿರಲಿಲ್ಲ. ಯೋಧ ರತನ್ ಠಾಕೂರ್ ಅವರನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆ ಮತ್ತೊಬ್ಬ ಮಗನನ್ನು ಕೂಡ ದೇಶ ಸೇವೆಗೆ ಕಳುಹಿಸಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ರತನ್ ಠಾಕೂರ್ ಅವರು ಮೂಲತಃ ಬಿಹಾರದ ಭಾಗಲ್‍ಪುರದವರು. ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ತಂದೆ, ದೇಶಕ್ಕಾಗಿ ಓರ್ವ ಮಗನನ್ನು ಅರ್ಪಿಸಿದ್ದೇನೆ. ಈಗ ಇರುವ ಇನ್ನೊಬ್ಬ ಮಗನನ್ನೂ ಉಗ್ರರ ವಿರುದ್ಧ ಹೋರಾಡಲು ಕಳುಹಿಸಲು ಸಿದ್ಧನಿದ್ದೇನೆ. ಯೋಧರನ್ನು ಬಲಿಪಡೆದಿರುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಎಂದು ಠಾಕೂರ್ ಅವರ ತಂದೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಒಳಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದೆಂಬ ಕನಸನ್ನು ಬಿಟ್ಟುಬಿಡಿ- ಪಾಕಿಗೆ ಮೋದಿ ಸಂದೇಶ

    ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಸ್ಫೋಟಕ ತುಂಬಿದ್ದ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 47 ಮಂದಿ ಯೋಧರು ವೀರ ಮರಣವನ್ನು ಅಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಭ್ಯಾಸದ ವೇಳೆ ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಯೋಧರು: ವಿಡಿಯೋ ನೋಡಿ

    ಅಭ್ಯಾಸದ ವೇಳೆ ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಯೋಧರು: ವಿಡಿಯೋ ನೋಡಿ

    ನವದೆಹಲಿ: ಜನವರಿ 15ರ ಸೇನಾ ದಿನಾಚರಣೆ ಅಂಗವಾಗಿ ಅಭ್ಯಾಸ ಮಾಡುವ ವೇಳೆ ಮೂವರು ಭಾರತೀಯ ಯೋಧರು ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

    ಯೋಧರು ಹೆಲಿಕಾಪ್ಟರ್‍ನಿಂದ ಹಗ್ಗ ಹಿಡಿದು ಕೆಳಗಿಳಿಯುತ್ತಿದ್ದರು. ಇಬ್ಬರು ಯೋಧರು ಹಗ್ಗದ ಮೇಲೆ ಇಳಿಯುತ್ತಿದ್ದರು. ಇನ್ನೇನು ಮೂರನೇ ಯೋಧ ಹಗ್ಗದಿಂದ ಇಳಿಯಬೇಕು ಎನ್ನುವಾಗ ಹಗ್ಗ ಕಟ್ ಆಗಿದೆ. ಪರಿಣಾಮ ಮೂವರು ಯೋಧರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಯೋಧರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಘಟನೆ ಮಂಗಳವಾರದಂದು ನಡೆದಿದ್ದು, ಇದರ ವಿಡಿಯೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ಇಂದು ಪ್ರಸಾರವಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

    1949ರ ಜನವರಿ 15ರಂದು ಲೆಫ್ಟಿನೆಂಟ್ ಜೆನರಲ್ ಕೆಎಂ ಕಾರ್ಯಪ್ಪ ಭಾರತ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆದ ಜನರಲ್ ಸರ್ ಫ್ರಾನ್ಸಿಸ್ ಬುಚ್ಚರ್ ರಿಂದ ಅಧಿಕಾರ ವಹಿಸಿಕೊಂಡಿದ್ದರು. ಇದರ ಅಂಗವಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ.