Tag: jawan Tej Bahadur Yadav

  • ಮೋದಿ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

    ಮೋದಿ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಎಸ್‍ಪಿ, ಬಿಎಸ್‍ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

    ಗಡುವು ನೀಡಿದರೂ ದಾಖಲಾತಿಗಳನ್ನು ಸಲ್ಲಿಸಲು ವಿಫಲವಾದ ಹಿನ್ನಲೆಯಲ್ಲಿ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಆಯೋಗದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ತೇಜ್ ಬಹದ್ದೂರ್, ನನಗೆ ನಿನ್ನೆ ಸಂಜೆ 6.15ಕ್ಕೆ ದಾಖಲಾತಿಗಳನ್ನು ನೀಡಲು ಹೇಳಿದ್ದರು. ನಾನು ದಾಖಲೆಗಳನ್ನು ಸಲ್ಲಿಸಿದ್ದರೂ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಈ ನಿರ್ಧಾರವನ್ನು ನಾನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

    ಆರಂಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ತಮ್ಮ ನಾಮಪತ್ರದಲ್ಲಿ ಬಿಎಸ್‍ಎಫ್‍ನಿಂದ ವಜಾಗೊಂಡಿರುವುದಾಗಿ ಉಲ್ಲೇಖಿಸಿದ್ದರು. ಎಡನೇ ಬಾರಿ ಮಹಾಮೈತ್ರಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಈ ಮಾಹಿತಿಯನ್ನು ಉಲ್ಲೇಖಿಸಿರಲಿಲ್ಲ. ನಾಮಪತ್ರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟಿಸ್ ನೀಡಿ ಸ್ಪಷ್ಟನೆ ಕೇಳಿತ್ತು.

    ಕೇಂದ್ರ ಅಥವಾ ರಾಜ್ಯ ಸರ್ಕಾರ ಉದ್ಯೋಗಿಯೊಬ್ಬ ವಿಶ್ವಾಸ ದ್ರೋಹ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಸೇವೆಯಿಂದ ಅಮಾನತುಗೊಂಡಿದ್ದರೆ ಆ ವ್ಯಕ್ತಿ 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗಾಗಿ ಚುನಾವಣಾ ಆಯೋಗ ಬಿಎಸ್‍ಎಫ್‍ನಿಂದ ನಿರಪೇಕ್ಷಣಾ ಪತ್ರವನ್ನು ತರುವಂತೆ ತೇಜ್ ಬಹದ್ದೂರ್ ನೋಟಿಸ್ ಜಾರಿ ಮಾಡಿತ್ತು.

    ಎಸ್‍ಪಿ, ಬಿಎಸ್‍ಪಿ ಮತ್ತು ಆರ್‌ಎಲ್‌ಡಿ ಮೈತ್ರಿ ಕೂಟ ಮೊದಲು ಬಿ ಫಾರಂ ನೀಡಿದ್ದ ಅಭ್ಯರ್ಥಿಯನ್ನು ಬದಲಿಸಿ ತೇಜ್ ಬಹದ್ದೂರ್ ಅವರಿಗೆ ಟಿಕೆಟ್ ನೀಡಿತ್ತು. ಪ್ರತಿಷ್ಠಿತ ಕ್ಷೇತ್ರದಲ್ಲಿ ಈಗ ಮೈತ್ರಿ ಕೂಟ ಮುಖ ಭಂಗ ಅನುಭವಿಸಿದಂತಾಗಿದೆ. ಇದೀಗ ವಾರಣಾಸಿಯಲ್ಲಿ ಕಾಂಗ್ರೆಸ್‍ನ ಅಜಯ್ ರಾಯ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಸ್ಪರ್ಧೆ ಎದುರಾಗಿದೆ.

    2017 ರಲ್ಲಿ ಸೇನೆಯಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ತೇಜ್ ಬಹದೂರ್ ಶಿಸ್ತುಕ್ರಮವಾಗಿ ಅಮಾನತುಗೊಂಡಿದ್ದರು.