Tag: Javelin

  • ನೀರಜ್ ಹೆಸರಿನವರಿಗೆ ಭಟ್ಕಳ ಹೋಟೆಲ್‍ನಲ್ಲಿ ಫ್ರೀ ಮೀಲ್ಸ್!

    ನೀರಜ್ ಹೆಸರಿನವರಿಗೆ ಭಟ್ಕಳ ಹೋಟೆಲ್‍ನಲ್ಲಿ ಫ್ರೀ ಮೀಲ್ಸ್!

    ಕಾರವಾರ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಹೆಸರು ಈಗ ಫೇಮಸ್. ಅವರ ಹೆಸರಿಟ್ಟುಕೊಂಡವರಿಗೂ ಇದೀಗ ಅದೃಷ್ಟ ಖುಲಾಯಿಸಿದ್ದು, ನೀರಜ್ ಎಂಬ ಹೆಸರಿನವರಿಗೆ ಈ ಹೋಟೆಲಿನಲ್ಲಿ ಫ್ರೀ ಆಹಾರ ನೀಡಲಾಗುತ್ತಿದೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ವೆಂಕಟಾಪುರದಲ್ಲಿರುವ ತಾಮ್ರ ಹೋಟೆಲ್‍ನಲ್ಲಿ ಈ ವಿಶೇಷ ಆಫರ್ ನೀಡಲಾಗಿದೆ. ನೀರಜ್ ಎಂಬ ಹೆಸರಿನ ಯಾರೇ ಬಂದರೂ ಉಚಿತವಾಗಿ ಊಟ ನೀಡಲಾಗುತ್ತಿದೆ. ಅಲ್ಲದೆ ಈ ಹೋಟೆಲ್‍ ನಲ್ಲಿ ಸಿಗುವ ಯಾವ ಪದಾರ್ಥಗಳನ್ನು ಆರ್ಡರ್ ಮಾಡಿದರೂ ಉಚಿತವಾಗಿ ತಿಂದು ಹೋಗಬಹುದಾಗಿದೆ. ಈ ಆಫರ್ ಆಗಸ್ಟ್ 15ರ ವರೆಗೂ ಇರಲಿದೆ.

    ಇತ್ತೀಚೆಗೆ ಆರಂಭಗೊಂಡ ತ್ರಾಮ ಹೋಟೆಲ್‍ ಮಾಲೀಕ ಆಶೀಶ್ ನಾಯಕ ಮಾತನಾಡಿ, ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆಗಸ್ಟ್ 15ರ ವರೆಗೆ ಈ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದೇವೆ. ಚಿನ್ನ ಗೆದ್ದಿರುವ ನೀರಜ್ ಅದ್ವಿತೀಯ ಸಾಧನೆಗೆ ಮನಸೋತಿದ್ದೇನೆ. ನೀರಜ್ ಹೆಸರಿನ ಗ್ರಾಹಕರು ನಮ್ಮ ಹೋಟೆಲ್‍ಗೆ ಬಂದು ಅವರಿಗೆ ಇಷ್ಟವಾದ ಯಾವುದೇ ಆಹಾರ ಪಡೆದರೂ ಉಚಿತವಾಗಿದೆ. ಇದು ನಮ್ಮ ಜಿಲ್ಲೆಯಿಂದ ಕ್ರೀಡಾಪಟುವಿಗೆ ಸಲ್ಲಿಸುವ ಗೌರವ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ನೀರಜ್ ಹೆಸರಿನವರಿಗೆ ಉಚಿತ ಪೆಟ್ರೋಲ್ ಕೊಟ್ಟ ಬಂಕ್ ಮಾಲೀಕ!

    ಈ ಹಿಂದೆ ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ತೆರಳುವ ರೋಪ್ ವೇನಲ್ಲಿ ಕೂಡ ನೀರಜ್ ಹೆಸರಿನವರಿಗೆ ಉಚಿತವಾಗಿ ಪ್ರಯಾಣಿಸಬಹುದಾದ ವಿಶೇಷ ಆಫರ್ ನೀಡಲಾಗಿತ್ತು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಮತ್ತು ಹಾಕಿಯಲ್ಲಿ ಹ್ಯಾಟ್ರಿಕ್ ಗೋಲ್ ಮಾಡಿದ ವಂದನಾ ಕಟಾರಿಯಾ ಅವರಿಗೆ ರೋಪ್ ವೇ ನಿರ್ವಹಣಾ ಕಂಪನಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ

    ಇತ್ತ ಗುಜರಾತ್ ನ ಭರೂಚ್‍ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್ ಅವರು ಕೂಡ ವಿಶೇಷ ಆಫರ್ ನೀಡಿ ಸುದ್ದಿಯಾಗಿದ್ದರು. ನೀರಜ್ ಹೆಸರಿನವರಿಗೆ 500ರೂ. ವರೆಗೆ ಉಚಿತ ಪೆಟ್ರೋಲ್- ಡೀಸೆಲ್ ನೀಡುವ ಮೂಲಕ ನೀರಜ್ ಗೆಲುವನ್ನು ವಿಶೇಷವಾಗಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನಿಮ್ಮ ಹೆಸರು ನೀರಜ್, ವಂದನಾ ಆಗಿದ್ರೆ ರೋಪ್ ವೇ ಸೇವೆ ಉಚಿತ

  • ಜಾವಲಿನ್ ಎಸೆತದ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

    ಜಾವಲಿನ್ ಎಸೆತದ ವೇಳೆ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

    ಹಾವೇರಿ: ಜಾವಲಿನ್ ಎಸೆತದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

    ಮಲ್ಲಿಕ್ (16) ಮೃತ ವಿದ್ಯಾರ್ಥಿ. ಮಲ್ಲಿಕ್ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದು, ಮಂಗಳವಾರ ಶಾಲೆಯಲ್ಲಿ ಜಾವಲಿನ್ ಎಸೆತದ ವೇಳೆ ಭರ್ಜಿ ಚುಚ್ಚಿ ತೀವ್ರವಾಗಿ ಗಾಯಗೊಂಡಿದ್ದ.

    ಗಾಯಗೊಂಡಿದ್ದ ವಿದ್ಯಾರ್ಥಿಗೆ ಕೂಡಲೇ ಶಾಲೆಯಲ್ಲಿ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಯಿತಾದರೂ, ತೀವ್ರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ವಿದ್ಯಾರ್ಥಿ ಮಲ್ಲಿಕ್ ಮೃತಪಟ್ಟಿದ್ದಾನೆ.

    ಘಟನೆ ಸಂಬಂಧ ವಿದ್ಯಾರ್ಥಿಯ ಪೋಷಕರು ಶಾಲಾ ದೈಹಿಕ ಶಿಕ್ಷಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ಬೇಜವಾಬ್ದಾರಿ ತನದಿಂದಲೇ ಮಗ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಯ ಸಾವಿನಿಂದಾಗಿ ಇಂದು ಸ್ವಯಂ ಪ್ರೇರಿತವಾಗಿ ಶಾಲೆ ಬಂದ್ ಮಾಡಲಾಗಿದೆ. ಘಟನೆ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=vsHIDtOwKKE