Tag: Javagal Srinath

  • ಏಕದಿನ ಪಂದ್ಯದಲ್ಲಿ 300 ವಿಕೆಟ್ ಪಡೆದ ಭಾರತದ ಏಕೈಕ ವೇಗಿ ಜಾವಗಲ್ ಶ್ರೀನಾಥ್

    ಏಕದಿನ ಪಂದ್ಯದಲ್ಲಿ 300 ವಿಕೆಟ್ ಪಡೆದ ಭಾರತದ ಏಕೈಕ ವೇಗಿ ಜಾವಗಲ್ ಶ್ರೀನಾಥ್

    – ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾರತದ ಲೆಜೆಂಡ್ ವೇಗಿ
    – ಮೈಸೂರ್ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿ

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಲೆಜೆಂಡ್ ವೇಗಿ ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಇಂದು 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

    ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗರೇ ಮೇಲುಗೈ ಸಾಧಿಸಿದ್ದರು. ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್ ಇವೆರೆಲ್ಲರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಿದ್ದರು. ಅದರಲ್ಲಿ ಮೋಸ್ಟ್ ಡೆಡ್ಲಿ ವೇಗದ ಬೌಲರ್ ಎಂದರೆ ಅದೂ ಜವಾಗಲ್ ಶ್ರೀನಾಥ್ ಅವರು, ಅವರ ಬಾಲ್ ವೇಗ ಕಂಡ ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್‍ಗಳು ಸುಸ್ತಾಗಿ ಹೋಗುತ್ತಿದ್ದರು.

    90ರ ದಶಕದಲ್ಲಿ ಕ್ರಿಕೆಟ್ ತಂಡಗಳಲ್ಲಿ ಬೌಲರ್‍ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಬ್ಯಾಟ್ಸ್ ಮ್ಯಾನ್‍ಗಳದೇ ಮೇಲುಗೈ. ಈ ರೀತಿಯ ಸಮಯದಲ್ಲಿ ಶ್ರೀನಾಥ್ ಅವರು ಬರೋಬ್ಬರಿ 12 ವರ್ಷಗಳ ಕಾಲ ಭಾರತದ ಕ್ರಿಕೆಟ್ ತಂಡದಲ್ಲಿ ಆಡಿದ್ದರು. ಮೊದಲು ಇವರು 1991ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157 ಕಿಮೀ ವೇಗದಲ್ಲಿ ಬೌಲ್ ಮಾಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದರು.

    12 ವರ್ಷ ಭಾರತದ ಪರವಾಗಿ ಆಡಿದ ಅವರು, 67 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 236 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಹತ್ತು ಬಾರಿ ಒಂದು ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದಾರೆ. ಭಾರತದ ಪರವಾಗಿ 229 ಏಕದಿನ ಪಂದ್ಯಗನ್ನು ಆಡಿರುವ ಶ್ರೀನಾಥ್ ಅವರು, 315 ವಿಕೆಟ್‍ಗಳನ್ನು ಕಿತ್ತಿದ್ದಾರೆ. ಈ ಮೂಲಕ ಏಕದಿನದಲ್ಲಿ 300 ವಿಕೆಟ್ ಪಡೆದ ಭಾರತದ ಐಕೈಕ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ನಿವೃತ್ತಿ ಹೊಂದಿ 17 ವರ್ಷವಾದರೂ ಈ ದಾಖಲೆಯನ್ನು ಯಾರೂ ಮುರಿಯಲು ಆಗಿಲ್ಲ.

    ಇದರ ಜೊತೆ ಜಾವಗಲ್ ಶ್ರೀನಾಥ್ ಅವರು ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಖ್ಯಾತಿಗಳಿಸಿದ್ದಾರೆ. ಈ ದಾಖಲೆಯನ್ನು ಬಾರತದ ಮತ್ತೊಬ್ಬ ವೇಗಿ ಜಾಹಿರ್ ಖಾನ್ ಜೊತೆ ಹಂಚಿಕೊಂಡಿದ್ದಾರೆ. ಒಟ್ಟು ವಿಶ್ವಕಪ್ ಪಂದ್ಯಗಳಲ್ಲಿ ಶ್ರೀನಿ 44 ವಿಕೆಟ್ ಕಬಳಿಸಿದ್ದರು. ಜಾವಗಲ್ ಶ್ರೀನಾಥ್ ಅವರು 2003ರ ವಿಶ್ವಕಪ್‍ನಲ್ಲಿ ಬಹಳ ಚೆನ್ನಾಗಿ ಆಡಿದ್ದರು. ಆದರೆ ಈ ವಿಶ್ವಕಪ್‍ನಲ್ಲಿ ಫೈನಲ್ ತಲುಪಿದ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಪಂದ್ಯದ ನಂತರ ಶ್ರೀನಾಥ್ ನಿವೃತ್ತಿ ಘೋಷಿಸಿದ್ರು. ಈ ಮೂಲಕ ಮೈಸೂರ್ ಎಕ್ಸ್‌ಪ್ರೆಸ್ ತನ್ನ ವೇಗದ ಬೌಲಿಂಗ್‍ಗೆ ಬ್ರೇಕ್ ಹಾಕಿದ್ದರು.

    ಸದ್ಯ ನಿವೃತ್ತಿ ಹೊಂದಿರುವ ಜಾವಗಲ್ ಶ್ರೀನಾಥ್ ಅವರು, ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿ ಕೆಲಸ ಮಾಡುತ್ತಿದ್ದು, ಸುಮಾರು 350 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

  • ‘ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿಸಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್’

    ‘ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿಸಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್’

    ಹೈದರಾಬಾದ್: ಟೀಂ ಇಂಡಿಯಾ ಮಾಜಿ ಆಟಗಾರ, ಮೈಸೂರು ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದಿದ್ದ ಜವಾಗಲ್ ಶ್ರೀನಾಥ್ ಟೀಂ ಇಂಡಿಯಾ ವೇಗದ ಬೌಲಿಂಗ್ ಕ್ರಾಂತಿಯ ಕಿಡಿ ಹೊತ್ತಿದ್ದರು ಎಂದು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿರುವ ಲಕ್ಷ್ಮಣ್, ಮೈಸೂರಿನ ಭಾಗದಿಂದ ಬಂದು ವೇಗದ ಬೌಲಿಂಗ್ ಮೂಲಕ ನೋಡುಗರ ಕಣ್ಣಿಗೆ ಹಬ್ಬ ನೀಡುತ್ತಿದ್ದರು. ಭಾರತದ ವೇಗದ ಬೌಲಿಂಗ್‍ನಲ್ಲಿ ಕ್ರಾಂತಿಯನ್ನು ಹುಟ್ಟು ಹಾಕಿದ್ದರು. ವೇಗದ ಬೌಲಿಂಗ್‍ಗೆ ಸಹಕಾರಿಯಲ್ಲದ ಪಿಚ್‍ಗಳಲ್ಲೂ ಅದ್ಭುತ ಸ್ಪೆಲ್ ಮಾಡುತ್ತಿದ್ದ ವೇಗಿ. ಕಠಿಣ ಸಂದರ್ಭದಲ್ಲೂ ಅತ್ಯುತ್ತಮ ಬೌಲಿಂಗ್ ಮಾಡುವ ತುಡಿತವೇ ಅವರ ಯಶಸ್ವಿ ಬೌಲಿಂಗ್‍ಗೆ ಕಾರಣ ಎಂದು ಕನ್ನಡಿಗ ಜಾವಗಲ್ ಶ್ರೀನಾಥ್‍ರನ್ನು ಹೊಗಳಿದ್ದಾರೆ.

    ಟೀಂ ಇಂಡಿಯಾ ಪರ ಅಕ್ಟೋಬರ್ 18, 1991ರಲ್ಲಿ ಪಾದಾರ್ಪಣೆ ಮಾಡಿದ್ದ ಜಾವಗಲ್ ಶ್ರೀನಾಥ್ ಅವರು 67 ಟೆಸ್ಟ್, 229 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ 236 ವಿಕೆಟ್, ಏಕದಿನ ಮಾದರಿಯಲ್ಲಿ 315 ವಿಕೆಟ್ ಕಬಳಿಸಿದ್ದಾರೆ. ಅಂದಹಾಗೇ ಪಾಕಿಸ್ತಾನ ವಿರುದ್ಧ 1999ರ ವಿಶ್ವಕಪ್ ಪಂದ್ಯದಲ್ಲಿ ಶ್ರೀನಾಥ್ ಗಂಟೆಗೆ 154.5 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. 11 ವರ್ಷಗಳ ತಮ್ಮ ವೃತ್ತಿ ಜೀವನಕ್ಕೆ 2003ರ ವಿಶ್ವಕಪ್ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ಆ ವೇಳೆಗೆ ಟೀಂ ಇಂಡಿಯಾ ಪರ ಕಪಿಲ್ ದೇವ್ ಬಳಿಕ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೀನಾಥ್ ಪಾತ್ರರಾಗಿದ್ದರು.

    ಟೀಂ ಇಂಡಿಯಾ ಬೌಲಿಂಗನ್ನು ಎದುರಿಸುತ್ತಿದ್ದ ಬ್ಯಾಟ್ಸ್ ಮನ್‍ಗಳು ತಂಡದ ಸ್ಪಿನ್ ಬೌಲಿಂಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲ ಸಮಯದಿಂದ ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದು, ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಹಲವು ಅನುಭವಿ ಆಟಗಾರರು ಟೀಂ ಇಂಡಿಯಾ ವೇಗದ ಪಡೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದಿಂದ ಅದ್ಭುತ ಬೌಲರ್ ಗಳು ಬೆಳಕಿಗೆ ಬರುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ದಿಗ್ಗಜ ಆಟಗಾರ ಜಾಸನ್ ಗಿಲೆಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದರು.

    ಕೊರೊನಾ ಕಾರಣದಿಂದ ವಿಶ್ವ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದು, ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣದ ಮೂಲಕ ವೃತ್ತಿ ಜೀವನ ವಿಶೇಷ ಅನುಭವ ಹಾಗು ಎದುರಿಸಿದ್ದ ಸನ್ನಿವೇಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ವಿವಿಎಸ್ ಲಕ್ಷ್ಮಣ್ ಕೂಡ ತಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದ ಹಲವು ಆಟಗಾರರಿಗೆ ಗೌರವ ಸಲ್ಲಿಸುತ್ತಿದ್ದು, ಈಗಾಗಲೇ ರಾಹುಲ ದ್ರಾವಿಡ್, ಸಚಿನ್ , ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಅವರಿಗೆ ಗೌರವ ಸಲ್ಲಿಸಿದ್ದಾರೆ.

  • ಎಲ್ಲರೂ ಮನೆಯಲ್ಲಿರಿ, ಯಾರೂ ಅನಗತ್ಯವಾಗಿ ಓಡಾಡ್ಬೇಡಿ: ಜಾವಗಲ್ ಶ್ರೀನಾಥ್

    ಎಲ್ಲರೂ ಮನೆಯಲ್ಲಿರಿ, ಯಾರೂ ಅನಗತ್ಯವಾಗಿ ಓಡಾಡ್ಬೇಡಿ: ಜಾವಗಲ್ ಶ್ರೀನಾಥ್

    ಮೈಸೂರು: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಟ, ನಟಿಯರು ಸೇರಿದಂತೆ ರಾಜಕೀಯ ನಾಯಕರು ಕೂಡ ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಖ್ಯಾತ ಅಂತರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಕೂಡ ಜಾಗೃತಿ ಮೂಡಿಸಿದ್ದಾರೆ.

    ಈ ಬಗ್ಗೆ ವಿಡಿಯೋ ಮಾಡಿರುವ ಶ್ರೀನಾಥ್, ಕೊರೊನಾ ಪ್ರಪಂಚದಾದ್ಯಂತ ಹಬ್ಬಿ ಬಹಳ ತೊಂದರೆ ಕೊಡುತ್ತಿದೆ. ಈ ಬಗ್ಗೆ ನಮ್ಮ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದು, ಬಹು ಬೇಗನೇ ಲಾಕ್‍ಡೌನ್ ಮಾಡುವ ಮೂಲಕ ಇಂದು ನಾವೆಲ್ಲರೂ ಪರಿಣಾಮಕಾರಿಯಾಗಿರುವ ಸ್ಥಿತಿಯಲ್ಲಿದ್ದೇವೆ. ಇನ್ನೂ ಎರಡು ವಾರ ಕಷ್ಟಪಡಬೇಕಾಬಹುದು. ಆ ಕಷ್ಟ ನಾವೆಲ್ಲರೂ ಪಡೋಣ ಎಂದಿದ್ದಾರೆ.

    ಸರ್ಕಾರದ ಎಲ್ಲಾ ನಿರ್ಧಾರಗಳಿಗೂ ನಾವು ಸ್ಪಂದಿಸೋಣ. ಬಹಳ ಮುಖ್ಯವಾದ ವಿಚಾರವೆಂದರೆ ಪೊಲೀಸ್ ಇಲಾಖೆ, ನರ್ಸ್ ಹಾಗೂ ವೈದ್ಯರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದೇ ಕರೆಯಬಹುದು. ಇವರೊಂದಿಗೆ ದಿನಾ ಬೆಳಗ್ಗೆ ಬಂದು ಕಸ ಗುಡಿಸುವ ಪೌರಕಾರ್ಮಿಕರೂ ಕೂಡ ವಾರಿಯರ್ಸ್. ಈ ಮೂಲಕ ಅವರು ದೇಶವನ್ನು ಕ್ಲೀನ್ ಆಗಿ ಇಡುತ್ತಿದ್ದಾರೆ. ಇವರೆಲ್ಲರಿಗೂ ನಮ್ಮ ಕಡೆಯಿಂದ ಒಂದು ಸಹಕಾರ ಆಗಬೇಕು. ಈ ಸಹಕಾರ ಈಡೇರಬೇಕಾದರೆ ನಾವು ತೃಪ್ತಿ ಪಡಿಸಬೇಕು. ಅದೇ ಮನೆ ಬಿಟ್ಟು ಹೊರಗಡೆ ಬರಬಾರದು ಎಂದು ಜನರಲ್ಲಿ ಕೇಳಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸರು ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದು, ಅವರಿಗೆ ಚಿರಋಣಿ ಎಂದು ಹೇಳಿದ್ದಾರೆ. ಹಾಗೆಯೇ ವೈದ್ಯರು ಹಾಗೂ ನರ್ಸ್‍ಗಳು ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಿಮಗೆ ಯಾವ ರೀತಿಯಲ್ಲಿ ಬೆಂಬ ಬೇಕೋ ಅದೇ ರೀತಿಯಲ್ಲಿ ಜನ ಸ್ಪಂದಿಸುತ್ತಾರೆ. ಒಟ್ಟಿನಲ್ಲಿ ಈ ರೀತಿಯ ಒಳ್ಳೆಯ ಕೆಲಸಗಳಿಂದ ಕೊರೊನಾ ವೈರಸನ್ನು ಈ ಪ್ರಪಂಚದಿಂದ ತೊಲಗಿಸೋಣ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕನ್ನಡದ ಮೂವರು ಕ್ರಿಕೆಟ್ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ.

    ಈ ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮೋದಿ ಅವರು ಆಹ್ವಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಆಹ್ವಾನಿಸಲಾಗಿದೆ.

    ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾದಾರ ಚೆನ್ನಯ್ಯ ಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    ಕ್ರೀಡಾ ವಿಭಾಗದಿಂದ ಮಾಜಿ ಓಟಗಾರ್ತಿ ಪಿ.ಟಿ ಉಷಾ, ಮತ್ತು ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತರಬೇತುಗಾರ ಪುಲೆಲ್ಲಾ ಗೋಪಿಚಂದ್ ಮತ್ತು ಜಿಮ್ನಾಸ್ಟಿಕ್ ಆಟಗಾರ್ತಿ ದೀಪಾ ಕರ್ಮಕರ್ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರದ ಮುಖ್ಯಸ್ಥರು, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮತ್ತು ಚಲನಚಿತ್ರ ನಟರನ್ನು ಆಹ್ವಾನ ಮಾಡಲಾಗಿದೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ಸಾವನ್ನಪ್ಪಿದ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಆಹ್ವಾನ ಮಾಡಲಾಗಿದೆ.

    ವಿದೇಶಿ ಗಣ್ಯರುಗಳಾಗಿ ಪ್ರಮಾಣ ವಚನ ಸ್ವೀಕರ ಸಭೆಗೆ ಬಿಮ್‍ಸ್ಟಿಕ್ (ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಇರುವ ಸಂಘಟನೆ) ಈ ಸಂಘಟನೆಯ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶದ ಮುಖ್ಯಸ್ಥರು ಬರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನ ಮಾಡಲಾಗಿದೆ. ಇವರ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಾರಂಭಕ್ಕೆ ಆಗಮಿಸಲಿದ್ದಾರೆ.

  • ಐಪಿಎಲ್ ಮ್ಯಾಚ್‍ಗಳಲ್ಲಿ ಅಂಪೈರ್‍ಗಳಿಗೆ ಎಷ್ಟು ಸಂಬಳ ಸಿಗುತ್ತೆ? ಇಲ್ಲಿದೆ ಮಾಹಿತಿ

    ಐಪಿಎಲ್ ಮ್ಯಾಚ್‍ಗಳಲ್ಲಿ ಅಂಪೈರ್‍ಗಳಿಗೆ ಎಷ್ಟು ಸಂಬಳ ಸಿಗುತ್ತೆ? ಇಲ್ಲಿದೆ ಮಾಹಿತಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ (ಐಪಿಎಲ್) ಹಣದ ಹೊಳೆ ಹರಿಯುವುದು ನಿಮಗೆ ಗೊತ್ತೆ ಇರುವ ವಿಚಾರ. ಆಟಗಾರರು ಕೋಟಿಗಟ್ಟಲೇ ಹಣಕ್ಕೆ ಸೇಲ್ ಆದರೆ ಅಂಪೈರ್‍ಗಳಿಗೂ ಲಕ್ಷಗಟ್ಟಲೇ ಹಣ ಸಂಬಳ ರೂಪದಲ್ಲಿ ಸಿಗುತ್ತಿದೆ.

    2016ರಲ್ಲಿ ಸಿ.ಕೆ.ನಂದನ್, ಅನಿಲ್ ಚೌಧರಿ ಮತ್ತು ಸಿ.ಸಂಶುದ್ದೀನ್ ಐಪಿಎಲ್ ಪಂದ್ಯಗಳ ಅಂಪೈರ್‍ಗಳಾಗಿ ಕಾರ್ಯನಿರ್ವಹಿಸಿದ್ದು ಇವರು ಹತ್ತಿರ ಹತ್ತಿರ ಒಟ್ಟು 40 ಲಕ್ಷ ರೂ. ಸಂಬಳವನ್ನು ಪಡೆದಿದ್ದಾರೆ.

    2016 ರಲ್ಲಿ ಅನಿಲ್ ಚೌಧರಿ ಅವರು ಸರಿಸುಮಾರು 39.63 ಲಕ್ಷ ಸಂಭಾವನೆಯನ್ನು ಪಡೆದಿದ್ದರೆ, ನಂದನ್ ಸಂಶುದ್ದೀನ್ ಕೂಡ ಸರಿ ಸುಮಾರು 40.83 ಲಕ್ಷ ರೂ. ಸಂಬಳವನ್ನು ಐಪಿಎಲ್‍ನಿಂದ ಪಡೆದಿದ್ದರು.

    ರೆಫ್ರಿಗಳಿಗೂ ಐಪಿಎಲ್ ಒಳ್ಳೆಯ ಸಂಭಾವನೆಯನ್ನ ನೀಡುತ್ತಿದೆ. ಜಾವಗಲ್ ಶ್ರೀನಾಥ್ ಹಲವು ವರ್ಷಗಳಿಂದ ಮ್ಯಾಚ್ ರೆಫ್ರಿಯಾಗಿದ್ದು, ಐಪಿಎಲ್ ನಿಂದ ಬರೋಬ್ಬರಿ 26.42 ಲಕ್ಷ ರೂ. ಸಂಬಳವನ್ನು ಪಡೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ರೀನಾಥ್ ಅವರನ್ನು ಹತ್ತು ವರ್ಷಗಳ ಹಿಂದೆ ಮ್ಯಾಚ್ ರೆಫ್ರಿಯಾಗಿ ನೇಮಕ ಮಾಡಿಕೊಂಡಿತ್ತು. ಇದೂವರೆಗೂ 24 ಟೆಸ್ಟ್, 122 ಅಂತರಾಷ್ಟ್ರೀಯ ಏಕದಿನ ಮತ್ತು 25 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತೊಬ್ಬ ಅಂಪೈರ್ ಕೆ.ಎನ್. ಅನಂತಪದ್ಮನಾಭನ್ ಅವರಿಗೆ 26.65 ಲಕ್ಷ ರೂ.ಸಂಬಳವನ್ನು ಬಿಸಿಸಿಐ ನೀಡಿದೆ.

    ಇದನ್ನೂ ಓದಿ: ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್ ಕೋಚ್‍ಗೆ 15 ಲಕ್ಷ ರೂ. ಸಂಬಳ!

    ದೆಹಲಿ ಮೂಲದವರಾದ ಅನಿಲ್ ಚೌಧರಿ ವಿಶ್ವ ಕ್ರಿಕೆಟ್‍ನ ಅಂಪೈರ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನಿಲ್ ಈಗಾಗಲೇ 39 ಐಪಿಎಲ್ ಮ್ಯಾಚ್‍ಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 17 ಏಕದಿನ ಪಂದ್ಯಗಳು ಮತ್ತು 16 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಅಂಪೈರಾಗಿ ಕೆಲಸ ಮಾಡಿದ್ದಾರೆ.

    ಸಿ.ಕೆ.ನಂದನ್ ಇವರು ಹುಟ್ಟಿದ್ದು ದೆಹಲಿ ಆದರೆ ರಣಜಿ ಕ್ರಿಕೆಟ್‍ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಆಡಿದ್ದಾರೆ. ನಂದನ್ 6 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 7 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ನಿರ್ಣಾಯಕರಾಗಿದ್ದರು.

    ಹೈದರಾಬಾದ್ ನಿವಾಸಿಯಾಗಿರುವ ಸಿ.ಸಂಶುದ್ದೀನ್ ಇದೂವರೆಗೂ 17 ಅಂತರಾಷ್ಟ್ರೀಯ ಏಕದಿನ ಪಂದ್ಯ ಮತ್ತು 11 ಟಿ-20 ಪಂದ್ಯಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿರುವ ಅನುಭವವಿದೆ.

    ಇದನ್ನೂ ಓದಿ: ಆರ್‍ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನೇ ಖರೀದಿಸಿದ್ದು ಯಾಕೆ?