Tag: Jarkiholi Brothers

  • ಕೊನೆಗೂ ಜಾರಕಿಹೊಳಿ ಸಹೋದರರ ಪಾಲಾದ ಡಿಸಿಸಿ ಬ್ಯಾಂಕ್‌ ಗದ್ದುಗೆ – ತೊಡೆ ತಟ್ಟಿದ್ದ ಸವದಿ, ಕತ್ತಿಗೆ ಮುಖಭಂಗ

    ಕೊನೆಗೂ ಜಾರಕಿಹೊಳಿ ಸಹೋದರರ ಪಾಲಾದ ಡಿಸಿಸಿ ಬ್ಯಾಂಕ್‌ ಗದ್ದುಗೆ – ತೊಡೆ ತಟ್ಟಿದ್ದ ಸವದಿ, ಕತ್ತಿಗೆ ಮುಖಭಂಗ

    ಬೆಳಗಾವಿ: ಪೈಪೋಟಿ, ಜಟಾಪಟಿ ನಡುವೆ ಕೊನೆಗೂ ಡಿಸಿಸಿ ಬ್ಯಾಂಕ್‌ (DCC Bank) ಗದ್ದುಗೆ ಜಾರಕಿಹೊಳಿ ಸಹೋದರರ ಪಾಲಾಗಿದೆ. ಜಾರಕಿಹೊಳಿ‌ ಬ್ರದರ್ಸ್‌ ವಿರುದ್ಧ ತೋಡೆ ತಟ್ಟಿದ ಸವದಿ, ಕತ್ತಿಗೆ ಶಾಕ್ ಕೊಟ್ಟಿದ್ದಾರೆ.

    ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಿತು. ಹದಿನಾರು ಸ್ಥಾನಗಳ ಪೈಕಿ ಒಂಬತ್ತು ಸ್ಥಾನ ಗೆಲ್ಲುವುದರ ಮೂಲಕ ಜಾರಕಿಹೊಳಿ‌ ಬ್ರದರ್ಸ್ ಕಮಾಲ್ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ – ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು

    ನಾಲ್ಕು ಸ್ಥಾನಗಳ ರಿಸಲ್ಟ್ ಬರದಿದ್ದರೂ ಜಾರಕಿಹೊಳಿ‌ ಬ್ರದರ್ಸ್ ಗೆಲುವು ಸಾಧಿಸಿದ್ದಾರೆ. ಏಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇಂದು ನಡೆದ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಗೆಲುವು ಸಾಧಿಸಿದ್ದಾರೆ. ಒಂಬತ್ತು ಸ್ಥಾನಗಳನ್ನ ಗೆಲ್ಲುವುದರ ಮೂಲಕ ಜಾರಕಿಹೊಳಿ ಮತ್ತೆ ಬ್ಯಾಂಕ್‌ನ್ನು ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ.

    ಮೊನ್ನೆ ಗೆದ್ದಿರುವ ರಾಜು ಕಾಗೆ, ಗಣೇಶ್ ಹುಕ್ಕೇರಿ ತಟಸ್ಥವಾಗಿ ಉಳಿದುಕೊಂಡಿದ್ದರು. ಇಂದು ಗೆದ್ದ ಮಲ್ಲಣ್ಣ ಯಾದವಾಡ ಸವದಿ ಬಣಕ್ಕೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ. ಬಣ‌‌ ಮಾಡಿಕೊಂಡು ಓಡಾಡಿದ್ದ ಲಕ್ಷ್ಮಣ ಸವದಿ ಮತ್ತು ರಮೇಶ್ ಕತ್ತಿಗೆ ಮುಖಭಂಗವಾಗಿದೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೈಡ್ರಾಮಾ; ಜಾರಕಿಹೊಳಿ v/s ಸವದಿ-ಕತ್ತಿ ಬಣ ಜಟಾಪಟಿ

  • ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾದ ವಿಧಾನ ಪರಿಷತ್ ಚುನಾವಣೆ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯು ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆ ಕಣವಾಗಿ ಪರಿಣಾಮಿಸಿದೆ.

    ಬೆಳಗಾವಿಯ ವಿಧಾನ ಪರಿಷತ್ ಚುನಾವಣೆಯು ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆಯಾಗಿದೆ. ಲಖನ್ ಜಾರಕಿಹೊಳಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹಿನ್ನೆಲೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನೆ ಮೂಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ್ ಕವಟಗಿಮಠ, ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಗಳಾಗಿ ನಿಂತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ರಮೇಶ್ ಜಾರಕಿಹೊಳಿ ಅವರ ಹೆಗಲ ಮೇಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಿಸಿ ತರುವ ಜವಾಬ್ದಾರಿ ಸತೀಶ್ ಅವರದ್ದಾಗಿದೆ. ಈ ಹಿನ್ನೆಲೆ ಇವರಿಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬಾ ಸುತ್ತಾಡುತ್ತಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಬೆಳಗಾವಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸುವ ಹೊಣೆ ಕೇವಲ ರಮೇಶ್ ಜಾರಕಿಹೊಳಿ ಹೆಗಲಿಗೆ ಬಿಟ್ರಾ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿಯೂ ಓಡಾಡುತ್ತಿದೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಸೋತ್ರೆ ಅದಕ್ಕೆ ರಮೇಶ್ ಜಾರಕಿಹೊಳಿ ಒಬ್ಬರೇ ಕಾರಣ ಎಂದು ಬಿಂಬಿಸಲು ವ್ಯವಸ್ಥಿತ ಸಂಚು ನಡೀತಿದ್ಯಾ ಎಂದು ಕೆಲವರು ಆರೋಪವನ್ನು ಮಾಡುತ್ತಿದ್ದಾರೆ. ಈ ರೀತಿ ಹಲವು ಚರ್ಚೆಗಳು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್

    ಬಹುತೇಕ ಬಿಜೆಪಿ ನಾಯಕರು ಪರಿಷತ್ ಚುನಾವಣೆಯಿಂದ ದೂರ ಉಳಿದುಕೊಂಡಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಜನಸ್ವರಾಜ್ ಸಮಾವೇಶ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಅವರು ಒಂದೆರಡು ದಿನ ಪ್ರಚಾರ ನಡೆಸಿ ಬೆಂಗಳೂರಿಗೆ ತೆರಳಿದರು. ಇನ್ನೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚುನಾವಣಾ ಅಖಾಡದಿಂದ ದೂರ ಉಳಿದ್ರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

    ಸಚಿವ ಉಮೇಶ್ ಕತ್ತಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದು, ಈಗ ಅವರು ಸಹ ಕಾಣಿಸುತ್ತಿಲ್ಲ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹ ಚುನಾವಣಾ ಉಸಾಬರಿಯಿಂದ ದೂರ ಉಳಿದ್ರಾ ಎಂಬ ಅನುಮಾನವಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇಬ್ಬರು ಬಿಜೆಪಿ ಸಂಸದರು, ಓರ್ವ ರಾಜ್ಯಸಭಾ ಸದಸ್ಯ ಇದ್ದರೂ ಬಿಜೆಪಿ ಪಾಳಯದಲ್ಲಿ ಆತಂಕ ಉಂಟಾಗಿದೆ. ಇದನ್ನೂ ಓದಿ:  ಇಂದು 400 ಗಡಿದಾಟಿದ ಕೊರೊನಾ – 6 ಸಾವು

    ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಹುಕಾರ್ ಪಣ ತೊಟ್ಟಿದ್ರೆ, ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸತೀಶ್ ಜಾರಕಿಹೊಳಿ ಕಸರತ್ತು ಮಾಡುತ್ತಿದ್ದಾರೆ. ಜಾರಕಿಹೊಳಿ ಸಹೋದರರ ಮಧ್ಯೆ ಗೆಲ್ಲೋರು ಯಾರು? ಸೋಲೋರು ಯಾರು? ಅನ್ನೋದೇ ಸಸ್ಪೆನ್ಸ್.

  • ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ ಅಂಗಳದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಿವಾನಂದ್ ಬೆಂತೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ಚುನಾವಣೆಯ ಜವಾಬ್ದಾರಿಯನ್ನು ಕೈ ಕಮಾಂಡ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಉತ್ತರ ಕರ್ನಾಟಕದ ದಂಡಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ತಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೇ ಮುಂದಾದ್ರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಂಡಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಜಾರಕಿಹೊಳಿ ಸಹೋದರು ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿಕೆಶಿ ಟಾರ್ಗೆಟ್ ಯಾಕೆ?
    ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಹೆಗಲಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ. ಒಂದು ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ರೆ ಜಯದ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಿಗಲಿದೆ. ಈ ಒಂದು ಗೆಲುವಿನ ಮೂಲಕ ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಹಿಡಿತ ಹೆಚ್ಚಾಗುತ್ತೆ ಅನ್ನೋ ಭಯ ಜಾರಕಿಹೊಳಿ ಸೋದರರು ಮತ್ತು ಸ್ಥಳೀಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ಸ್ಥಳೀಯ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕುಸುಮಾ ಶಿವಳ್ಳು ಸೋಲು ಕಂಡರೆ ಸಿದ್ದರಾಮಯ್ಯರಿಗೂ ಮುಖಭಂಗ, ಡಿಕೆಶಿಗೂ ಭಾರೀ ಹಿನ್ನಡೆ ನಿಶ್ಚಿತ. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿಯೂ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು. ಅಂದು ಸಹ ಜಾರಕಿಹೊಳಿ ಸೋದರರು ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

  • ಡಿಕೆಶಿಗೆ ಮತ್ತೆ ಟಾಂಗ್ ಕೊಡಲು ಸಜ್ಜಾದ ಜಾರಕಿಹೊಳಿ ಸಹೋದರರು!

    ಡಿಕೆಶಿಗೆ ಮತ್ತೆ ಟಾಂಗ್ ಕೊಡಲು ಸಜ್ಜಾದ ಜಾರಕಿಹೊಳಿ ಸಹೋದರರು!

    ಬಳ್ಳಾರಿ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಬೆಳಗಾವಿ ರಾಜಕಾರಣದಿಂದ ಹಿಂದೆ ಸರಿದು ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ತಲೆಕೆಡಿಸಿಕೊಂಡರೆ, ಸಚಿವ ರಮೇಶ ಜಾರಕಿಹೊಳಿ ಸಹೋದರರು ಬಳ್ಳಾರಿ ರಾಜಕಾರಣಕ್ಕೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ.

    ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಜಾರಕಿಹೊಳಿ ಸಹೋದರರು ಇದೀಗ ಲಾಬಿ ಶುರು ಮಾಡಿದ್ದಾರೆ. ಹರಪನಹಳ್ಳಿಯ ಅರಸಿಕೇರಿ ಗ್ರಾಮದಲ್ಲಿ ಬೀಗರಾಗಿರುವ ಬಳ್ಳಾರಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರಸಿಕೇರಿ ದೇವೇಂದ್ರಪ್ಪರಿಗೆ ಜಾರಕಿಹೊಳಿ ಸಹೋದರರು ಟಿಕೆಟ್ ಕೊಡಿಸಲು ಇದೀಗ ಮುಂದಾಗಿದ್ದಾರೆ.

    ದೇವೇಂದ್ರಪ್ಪ

    ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿರುವ ಅರಸಿಕೇರಿ ದೇವೇಂದ್ರಪ್ಪ ಪುತ್ರ ಮಂಜುನಾಥರಿಗೆ ಸತೀಶ ಜಾರಕಿಹೊಳಿ ಸಹೋದರಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಹೀಗಾಗಿ ಅಬಕಾರಿ ಆಯುಕ್ತರಾಗಿರುವ ಮಂಜುನಾಥರ ತಂದೆ ದೇವೇಂದ್ರಪ್ಪಗೆ ಎಂಪಿ ಟಿಕೆಟ್ ಕೊಡಿಸುವ ಮೂಲಕ ಜಾರಕಿಹೊಳಿ ಸಹೋದರರು ಡಿಕೆ ಶಿವಕುಮಾರ್ ಗೆ ಮತ್ತೊಮ್ಮೆ ಟಾಂಗ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಶಾಸಕ ನಾಗೇಂದ್ರ ಸಹೋದರಗೆ ಟಿಕೆಟ್ ಕೊಡಲು ಬಳ್ಳಾರಿ ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಇದೀಗ ತಮ್ಮ ಬೀಗರಿಗೆ ಟಿಕೆಟ್ ಕೊಡಿಸಲು ಲಾಬಿ ಶುರು ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv