Tag: japan

  • ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಭಾರತ, ಜಪಾನ್ ನಡುವೆ ಸಂಭಾಷಣೆಗೆ ಧ್ವನಿಯಾದ ಕನ್ನಡಿಗ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಈ ಬುಲೆಟ್ ರೈಲು ಯೋಜನೆ ಸೇರಿದಂತೆ ಎರಡು ದೇಶಗಳ ನಡುವೆ ನಡೆದ ಮಹತ್ವದ ಒಪ್ಪಂದಗಳಿಗೆ ಎರಡು ಭಾಷೆಗಳ ಸೇತುವೆಯಾಗಿ ಕೆಲಸ ಮಾಡಿದವರು ಕರ್ನಾಟಕದ ಮಣ್ಣಿನ ಮಗ ರಾಜೇಶ ನಾಯ್ಕ.

    ರಾಜೇಶ ನಾಯ್ಕ ಭಾರತದ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಡೀ ವಿದೇಶಾಂಗ ಇಲಾಖೆಯಲ್ಲಿಯೇ ಜಪಾನಿ ಭಾಷೆಯನ್ನು ಕಲಿತು ಸುಲಲಿತವಾಗಿ ಮಾತನಾಡಬಲ್ಲ ವಿಶಿಷ್ಟತೆಯನ್ನು ಹೊಂದಿದ್ದಾರೆ. ಇವರಿಗೆ ಬುಲೆಟ್ ರೈಲು ಯೋಜನೆ, ಜಪಾನ್ ಪ್ರಧಾನಿ ಶಿಂಬೊ ಅಬೆ ಅವರ ಬಗ್ಗೆ ಹೇಳಿ ಅವರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ನೀಡಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಶ್ರಮವಹಿಸಿ ದುಡಿದು, ಮಹತ್ವದ ಕಾರ್ಯವನ್ನು ರಾಜೇಶ ನಾಯ್ಕ ಯಶಸ್ವಿಗೊಳಿಸಿದ್ದಾರೆ.

    ರಾಜೇಶ್ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಇವರು ವಕೀಲ ಎನ್.ಡಿ.ನಾಯ್ಕ ಐಸೂರು ಮತ್ತು ಲಕ್ಷ್ಮೀ ನಾಯ್ಕ ದಂಪತಿಯ ನಾಲ್ಕನೇ ಪುತ್ರ. 10 ನೇ ತರಗತಿ ಓದುತ್ತಿದ್ದಾಗಲೇ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು.

    ಮೊದಲು ಕೆಎಎಸ್ ಪರೀಕ್ಷೆಯನ್ನು ಬರೆದು ಅದರಲ್ಲಿ 7ನೇ ರ‍್ಯಾಂಕ್‌ ಪಡೆದು ಉತ್ತೀರ್ಣರಾಗಿದ್ದ ರಾಜೇಶ್ ಅವರು ಕೆಲವು ದಿನಗಳ ಕಾಲ ಉಡುಪಿ ಜಿಲ್ಲೆಯ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ತಮ್ಮ ಕನಸಿನತ್ತಾ ಸಾಗಲು ಉತ್ಸುಕತೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2009 ರಲ್ಲಿ ಸಿಎಸ್‍ಇ ಬ್ಯಾಚ್‍ನಲ್ಲಿ 260 ನೇ ರ್ಯಾಂಕ್ ಪಡೆದು ವಿದೇಶಾಂಗ ಇಲಾಖೆಗೆ ಆಯ್ಕೆಯಾಗಿದ್ದರು. ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

     

     

     

  • ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಬುಲೆಟ್ ರೈಲಿನಿಂದಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ: ಮೋದಿ

    ಅಹಮದಾಬಾದ್: ಬುಲೆಟ್ ರೈಲಿನಿಂದ ಎರಡು ಪ್ರದೇಶಗಳ ನಡುವಿನ ಅಂತರ ಕಡಿಮೆಯಾಗಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಜಪಾನಿನ ಪ್ರಧಾನಿ ಶಿಂಜೋ ಅಬೆ ಜೊತೆಗೂಡಿ ಅಹಮದಾಬಾದ್‍ನಲ್ಲಿ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಶಂಕಸ್ಥಾಪನೆಯನ್ನು ಮೋದಿ ನೆರವೇರಿಸಿದರು. ಬಳಿಕ ಬುಲೆಟ್ ರೈಲು ಯೋಜನೆಗೆ ಹಣಕಾಸಿನ ಸಹಕಾರ ನೀಡಿದ್ದಕ್ಕೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರಿಗೆ ಧನ್ಯವಾದ ಹೇಳಿದರು.

    ಇದು ಭಾರತದ ದಶಕಗಳ ಕನಸನಾಗಿದ್ದು, ಎರಡು ದೇಶಗಳ ಸ್ನೇಹ ಪೂರಕವಾಗಿ ಜಪಾನ್ ಭಾರತಕ್ಕೆ ಬುಲೆಟ್ ರೈಲನ್ನು ನೀಡುತ್ತಿರುವ ಉಡುಗೊರೆಯಿದು. ಬುಲೆಟ್ ರೈಲು ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿ ಉದ್ಯೋಗ ನೀಡಲಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ಬಡತನ ನಿರ್ಮೂಲನೆಯಾಗುವ ಮೂಲಕ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

    ಯಾವುದೇ ದೇಶ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದರೆ ಅದು ಅಭಿವೃದ್ಧಿಯನ್ನು ಸೂಚಿಸುತ್ತದೆ. ಆದ್ದರಿಂದ ಸಾರಿಗೆ ವ್ಯವಸ್ಥೆ ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

    ಭಾರತವು ಯಾವಾಗ ಬುಲೆಟ್ ರೈಲನ್ನು ಪ್ರಾರಂಭಿಸುತ್ತದೆ ಎಂದು ಚಿಂತೆಯಾಗಿತ್ತು. ಆದರೆ ಇಂದು ಈ ಯೋಜನೆಗೆ ಚಾಲನೆ ನೀಡಿದ ಬಳಿಕ ನನಗೆ ಭರವಸೆ ಬಂದಿದೆ. ಆದ್ದರಿಂದ ಈ ಯೋಜನೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದರು.

    ಯಾವುದೇ ವ್ಯಕ್ತಿಯಾಗಲಿ ಅಥವಾ ದೇಶವಾಗಲಿ ಸಾಲ ಕೊಟ್ಟು 50 ವರ್ಷಗಳಲ್ಲಿ ಸಾಲ ಹಿಂದಿರುಗಿಸು ಎಂದು ಯಾರಾದರೂ ಹೇಳುತ್ತಾರಾ? ಆದರೆ ಭಾರತದ ಮಿತ್ರ ಜಪಾನ್ ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ತಾಂತ್ರಿಕ ನೆರವು ಅಲ್ಲದೇ ಶೇ.01 ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರೂ. ಹಣವನ್ನು ಸಾಲವಾಗಿ ನೀಡಿದೆ. ಈ ಕಾರಣಕ್ಕೆ ಬುಲೆಟ್ ರೈಲು ಜಪಾನ್ ನೀಡುತ್ತಿರುವ ಉಡುಗೊರೆ ಎಂದು ಹೇಳಿದೆ ಎಂದು ಮೋದಿ ಬಣ್ಣಿಸಿದರು.

    ಬುಲೆಟ್ ರೈಲು ನವ ಭಾರತದ ಸಂಕೇತವಾಗಿದ್ದು ಇದಕ್ಕೆ ಕಾರಣರಾದ ನನ್ನ ಮಿತ್ರ ಅಬೆ ಅವರಿಗೆ ಧನ್ಯವಾದಗಳು. ಜೊತೆಗೆ ಈ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ಭಾರತದ ಸಮಸ್ತ ಜನರಿಗೆ ಧನ್ಯವಾದಗಳನ್ನು ತಿಳಿಸಿ ಮೋದಿ ಭಾಷಣ ಮುಕ್ತಾಯಗೊಳಿಸಿದರು.

  • ಬುಲೆಟ್ ರೈಲು ಯೋಜನೆಗೆ ನಾಳೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

    ಬುಲೆಟ್ ರೈಲು ಯೋಜನೆಗೆ ನಾಳೆ ಅಡಿಗಲ್ಲು: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

    ಪ್ರಧಾನಿ ನರೆಂದ್ರ ಮೋದಿ ಅವರ ಕನಸಿನ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಪನೆ ನಡೆಯಲಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಚಾಲನೆ ಸಿಗಲಿದೆ. ಹೀಗಾಗಿ ಈ ಯೋಜನೆಗೆ ಸಂಬಂಧಿಸಿದ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಯೋಜನೆಯ ಪ್ರಮುಖ 12 ಅಂಶಗಳು

    1) ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಸುಮಾರು 1.10 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಯ ಒಟ್ಟು ವೆಚ್ಚದಲ್ಲಿ 88 ಸಾವಿರ ಕೋಟಿ(ಶೇ.81)ಹಣವನ್ನು ಜಪಾನ್ ಸಾಲ ರೂಪದಲ್ಲಿ ಭಾರತಕ್ಕೆ ಒದಗಿಸುತ್ತಿದೆ. ಜಪಾನ್ ಸಾಲವನ್ನು 50 ವರ್ಷದ ಒಳಗಡೆ ಮರು ಪಾವತಿ ಮಾಡಬೇಕಾಗಿದ್ದು, ಈ ಸಾಲಕ್ಕೆ ಶೇ.0.1 ರಷ್ಟು ಬಡ್ಡಿಯನ್ನು ವಿಧಿಸಿದೆ.

    2) ಹೊಸ ಬುಲೆಟ್ ಟ್ರೈನ್ ಗುಜರಾತ್‍ನಿಂದ ಮುಂಬೈಗೆ ಸಂಚಾರವನ್ನು ನಡೆಸಲಿದ್ದು, ಒಮ್ಮೆ 750 ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಪ್ರತಿ ದಿನ 70 ಬಾರಿ ಅಹಮದಾಬಾದ್ – ಮುಂಬೈ ನಡುವೆ ಈ ರೈಲು ಸಂಚರಿಸಲಿದೆ.

    3) ಬುಲೆಟ್ ಟ್ರೈನ್ ಸರಾಸರಿ ಘಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಗರಿಷ್ಟ 350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

    4) ಬುಲೆಟ್ ಟ್ರೈನ್ 508 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಶೇ.92 ರಷ್ಟು ಮೇಲ್ಸೇತುವೆ, ಶೇ.6 ರಷ್ಟು ಸುರಂಗ ಹಾಗೂ ಇನ್ನುಳಿದ ಶೇ.2 ರಷ್ಟು ನೆಲದಲ್ಲಿ ಹಾದು ಹೋಗಲಿದೆ. ಅಂದರೆ ಸುಮಾರು 460 ಕಿ.ಮೀ ಮೇಲ್ಸೇತುವೆ ಮಾರ್ಗದಲ್ಲೂ, 27 ಕಿಮೀ ಸುರಂಗ ಮಾರ್ಗದಲ್ಲೂ, ಉಳಿದ 13 ಕಿ.ಮೀ ನೆಲದಲ್ಲಿ ಸಂಚರಿಸಲಿದೆ.

    5) ದೇಶದ ಅತೀ ದೊಡ್ಡ ಸುರಂಗ ಮಾರ್ಗವನ್ನು (21 ಕಿ.ಮೀ) ಹೊಂದಿರಲಿದ್ದು, 7 ಕಿ.ಮೀ ಸಮುದ್ರ ಅಡಿಯ ಸುರಂಗದಲ್ಲಿ ಸಂಚರಿಸುವುದು ವಿಶೇಷ. ಒಟ್ಟು 508 ಕಿ.ಮೀ ಮಾರ್ಗದಲ್ಲಿ 351 ಕಿ.ಮೀ ಗುಜರಾತ್ ರಾಜ್ಯದಲ್ಲಿ ಹಾಗೂ 156 ಕಿ.ಮೀ ಮಹಾರಾಷ್ಟ್ರ ರಾಜ್ಯದಲ್ಲಿ ಬುಲೆಟ್ ರೈಲು ಸಂಚರಿಸಲಿದೆ.

    6) ದಿನದಲ್ಲಿ 20 ಗಂಟೆಗಳ ಕಾಲ ರೈಲು ಓಡಲಿದ್ದು, ನಾಲ್ಕು ಗಂಟೆಯಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ. ಜಪಾನ್ ನಲ್ಲಿ ಕೇವಲ 7 ನಿಮಿಷದಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ.

    7) ಬುಲೆಟ್ ರೈಲು ಮೊದಲ ಸಂಚಾರವನ್ನು 2022ರ ಆಗಸ್ಟ್ 15 ರಂದು ಆರಂಭಿಸಬೇಕೆಂಬ ಗುರಿಯನ್ನು ರೈಲ್ವೇ ಸಚಿವಾಲಯ ಹಾಕಿಕೊಂಡಿದೆ. ಆರಂಭದಲ್ಲಿ 2023ಕ್ಕೆ ಈ ಯೋಜನೆ ಪೂರ್ಣಗೊಳಿಸಲು ಡೆಡ್‍ಲೈನ್ ನಿಗದಿಗೊಳಿಸಲಾಗಿತ್ತು. ಆದರೆ 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಆಚರಿಸುವ ಕಾರಣ ಜನರಿಗೆ ಉಡುಗೊರೆ ಎಂಬಂತೆ ಅವಧಿಗೂ ಮುನ್ನವೇ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

    8) ಮುಂಬೈ – ಅಹಮದಾಬಾದ್ ಮಾರ್ಗವು 12 ನಿಲ್ದಾಣಗಳನ್ನು ಹೊಂದಿರಲಿದೆ. ಎಲ್ಲಾ ನಿಲ್ದಾಣಗಳಲ್ಲಿಯೂ ರೈಲು ನಿಲ್ಲಿಸಿ ಪ್ರಯಾಣ ನಡೆಸಿದರೂ ಕೇವಲ 3 ಘಂಟೆಯಲ್ಲಿ ಕೊನೆಯ ನಿಲ್ದಾಣವನ್ನು ತಲುಪಲಿದೆ. ಸದ್ಯ ಈ ದೂರವನ್ನು ಕ್ರಮಿಸಲು ಸುಮಾರು 8 ಗಂಟೆಯ ಅವಧಿಯನ್ನು ರೈಲು ತೆಗೆದುಕೊಳ್ಳುತ್ತಿದೆ.

    9) ಜಪಾನ್ ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

    10) ಜಪಾನ್ ಶಿಕಾನ್‍ಸೆನ್ ಬುಲೆಟ್ ರೈಲು 1964ರಲ್ಲಿ ಆರಂಭವಾಗಿದ್ದು, ಈವರೆಗೂ ಒಂದೇ ಒಂದು ಅಪಘಾತವಾಗಿಲ್ಲ. ಈ ರೈಲಿನಲ್ಲಿ ಸೆನ್ಸರ್ ಅಳವಡಿಸಲಾಗಿದ್ದು ಹಳಿಯಲ್ಲಿ ಏನಾದರೂ ಇದ್ದರೆ ಅಥವಾ ಹಳಿ ತುಂಡಾಗಿದ್ದರೆ ಅದರ ಮಾಹಿತಿ ತಿಳಿದು ಸ್ವಯಂ ಚಾಲಿತವಾಗಿ ನಿಲ್ಲುವ ವ್ಯವಸ್ಥೆಯನ್ನು ರೈಲು ಹೊಂದಿದೆ.

  • ಸೊಳ್ಳೆ ಕೊಂದಿದ್ದಕ್ಕೆ ಟ್ವಿಟ್ಟರ್‍ನಲ್ಲಿ ನಿಷೇಧ!

    ಸೊಳ್ಳೆ ಕೊಂದಿದ್ದಕ್ಕೆ ಟ್ವಿಟ್ಟರ್‍ನಲ್ಲಿ ನಿಷೇಧ!

    ಟೋಕಿಯೋ: ಉಗ್ರಗಾಮಿ ಸಂಘಟನೆ ಪರ ಟ್ವಿಟ್ ಮಾಡಿದರೆ ಆ ಖಾತೆಗಳನ್ನು ಟ್ವಿಟ್ಟರ್ ನಿಷೇಧಿಸುವುದು ನಿಮಗೆ ಗೊತ್ತೆ ಇದೆ. ಆದರೆ ಸೊಳ್ಳೆ ಕೊಂದಿದ್ದಕ್ಕೆ ಜಪಾನ್ ಪ್ರಜೆಯೊಬ್ಬನಿಗೆ ಟ್ವಿಟ್ಟರ್ ನಲ್ಲಿ ನಿಷೇಧ ಹೇರಲಾಗಿದೆ.

    ಆಗಿದ್ದು ಇಷ್ಟು ಆಗಸ್ಟ್ 20ರಂದು ಆತ ಟಿವಿ ನೋಡುತ್ತ ಕುಳಿತ್ತಿದ್ದಾಗ ಸೊಳ್ಳೆಯೊಂದು ಈತನನ್ನು ಕಡಿದಿದೆ. ಕೂಡಲೇ ಆತ ಸೊಳ್ಳೆಯನ್ನು ಕೊಂದು @nemuismywife ಖಾತೆಯಿಂದ ಫೋಟೋ ಹಾಕಿ ಟ್ವೀಟ್ ಮಾಡಿದ್ದ.

    ಇದಾದ ಕೆಲವೇ ಗಂಟೆಗಳಲ್ಲಿ ನಿಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎನ್ನುವ ಸಂದೇಶ ಬಂದಿದೆ. ನಂತರ ಆತ @DaydreamMatcha ಹೆಸರಿನ ಹೊಸ ಖಾತೆಯನ್ನು ತೆರೆದು, ನಾನು ಸೊಳ್ಳೆಯನ್ನು ಕೊಂದು ಫೋಟೋವನ್ನು ಹಾಕಿದ್ದಕ್ಕೆ ನನ್ನ ಹಿಂದಿನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ನಾನು ಸೊಳ್ಳೆಯನ್ನು ಕೊಂದಿದ್ದು ತಪ್ಪೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾನೆ.

    ಕೋಪದಿಂದ ಮಾಡಿದ ಈತನ ಟ್ವೀಟನ್ನು 31 ಸಾವಿರಕ್ಕೂ ಅಧಿಕ ಜನ ರೀ ಟ್ವೀಟ್ ಮಾಡಿದ್ದು, 27 ಸಾವಿರ ಕ್ಕೂ ಅಧಿಕ ಜನ ಲೈಕ್ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.

    ಆನ್ ಲೈನ್ ನಲ್ಲಿ ಕ್ರೈಂ, ಹಿಂಸಾಚಾರಕ್ಕೆ ಸಂಬಂಧಿಸಿದ ಟ್ವೀಟ್ ಗಳನ್ನು ತಡೆಗಟ್ಟಲು ಟ್ವಿಟ್ಟರ್ ಕೆಲವೊಂದು ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಆತನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು.

     

  • ಈ ಬಾರ್‍ನಲ್ಲಿ ಎಣ್ಣೆ ಬಾಟ್ಲಿಯನ್ನ ಟೇಬಲ್‍ಗೆ ತಂದುಕೊಡ್ತಾವೆ ಕೋತಿಗಳು!

    ಈ ಬಾರ್‍ನಲ್ಲಿ ಎಣ್ಣೆ ಬಾಟ್ಲಿಯನ್ನ ಟೇಬಲ್‍ಗೆ ತಂದುಕೊಡ್ತಾವೆ ಕೋತಿಗಳು!

    ಟೋಕಿಯೋ: ಜಪಾನ್‍ನ ಬಾರ್‍ವೊಂದು ತನ್ನ ವಿಶೇಷವಾದ ವೇಯ್ಟರ್‍ಗಳಿಂದಲೇ ಫೇಮಸ್ ಆಗಿದ್ದು ಗ್ರಾಹಕರನ್ನ ಸೆಳೆಯುತ್ತಿದೆ.

    ಹೌದು. ಇಲ್ಲಿ ವೇಯ್ಟರ್ಸ್ ಆಗಿರೋದು ಯಾವುದೋ ಸುಂದರಿಯಲ್ಲ, ಮಕಾವ್ ಕೋತಿಗಳು. ಉತ್ಸುನೋಮಿಯಾದ ಕಯಬುಕಿ ಬಾರ್‍ನಲ್ಲಿ 17 ವರ್ಷದ ಫುಕು ಚಾನ್ ಎಂಬ ಹೆಸರಿನ ಕೋತಿ ಗ್ರಾಹಕರಿಗೆ ಪಾನೀಯ ಹಾಗೂ ನ್ಯಾಪ್‍ಕಿನ್ ತಂದುಕೊಡುವುದನ್ನ ವಿಡಿಯೋದಲ್ಲಿ ಕಾಣಬಹುದು.

    ಹಲವು ವರ್ಷಗಳ ಹಿಂದೆ ನನ್ನ ಗೆಳೆಯರೊಬ್ಬರು ಯಚ್ಚನ್ ಎಂಬ ಹೆಸರಿನ ಸಾಕು ಕೋತಿಯೊಂದನ್ನ ನೀಡಿದ್ರು. ನಾನು ಅದನ್ನ ಕೆಲಸಕ್ಕೆ ಕರೆದುಕೊಂಡು ಬರ್ತಿದ್ದೆ. ಒಂದು ದಿನ ಯಚ್ಚನ್ ನನಗೆ ನ್ಯಾಪ್‍ಕಿನ್ ಎತ್ತಿಕೊಡ್ತು. ಅದನ್ನ ನಾನು ಕೆಲವು ಗ್ರಾಹಕರೊಂದಿಗೂ ಮುಂದುವರೆಸಿದೆ ಎಂದು ಬಾರ್‍ನ ಮಾಲೀಕ ಕವೋರು ಒಟ್ಸುಕಾ ಹೇಳಿದ್ದಾರೆ.

    ಫುಕು ಚಾನ್ ಚಿಕ್ಕಂದಿನಿಂದಲೂ ಯಚ್ಚನ್‍ನನ್ನು ಅನುಕರಿಸುತ್ತಿತ್ತು. ಹೀಗಾಗಿ ಈಗ ಎರಡು ವೇಯ್ಟರ್ಸ್‍ಗಳಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ ಮಾಲೀಕನ ಬಳಿ ಹಲವು ಮರಿ ಕೋತಿಗಳಿದ್ದು, ಅವು ಗ್ರಾಹಕರೊಂದಿಗೆ ಫೋಟೋಗೆ ಪೋಸ್ ಕೊಡುತ್ತವೆ. ಆದ್ರೆ ಅವಕ್ಕೆ ಇನ್ನೂ ಸರ್ವಿಂಗ್ ಮಾಡೋ ತರಬೇತಿ ನೀಡಿಲ್ಲ. ಗ್ರಾಹಕರು ಈ ಕೋತಿಗಳಿಗೆ ತಿಂಡಿ ಕೊಟ್ಟು ಜೊತೆಯಲ್ಲಿ ಫೋಟೋ ತೆಗೆಸಿಕೊಳ್ತಾರೆ ಅಂತಾರೆ ಮಾಲೀಕ.

    ಈ ಕೋತಿಗಳು ನನಗೆ ಕುಟುಂಬ ಸದಸ್ಯರಿಗಿಂತಲೂ ಹೆಚ್ಚು. ಇಡೀ ದಿನ ಅವುಗಳೊಂದಿಗೆ ಇರ್ತೀನಿ. ಅವುಗಳ ಜೊತೆಯಲ್ಲೇ ಮಲಗುತ್ತೇನೆ. ಕೋತಿಗಳ ಕಾಳಜಿ ಮಾಡುತ್ತಾ ಅವುಗಳನ್ನ ದೂರ ಮಾಡಲು ಸಾಧ್ಯವಾಗಲಿಲ್ಲ. ಇವು ತುಂಬಾ ಕ್ಯೂಟ್ ಅಂತಾರೆ ಇದರ ಮಾಲೀಕ.