Tag: janatha curfew

  • ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ?, ನೀವೇನು ಬಂಡವಾಳ ಹಾಕಿದ್ದೀರಾ..?- ಪೊಲೀಸರಿಗೆ ವ್ಯಕ್ತಿ ಅವಾಜ್

    ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ?, ನೀವೇನು ಬಂಡವಾಳ ಹಾಕಿದ್ದೀರಾ..?- ಪೊಲೀಸರಿಗೆ ವ್ಯಕ್ತಿ ಅವಾಜ್

    ಮಂಡ್ಯ: ಸದ್ಯ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಸೋಮಾರದಿಂದ ಮತ್ತೆ 14 ದಿನ ಲಾಕ್ ಡೌನ್ ಹೇರಲಾಗಿದೆ. ಜನ ಹೊರಗಡೆ ಬಾರದಂತೆ ಕರ್ಫ್ಯೂ ಹೇರಿದರೆ ಈ ಮಧ್ಯೆಯೂ ಜನ ಓಡಾಟ ನಡೆಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸರು ತಮ್ಮ ಲಾಠಿ ರುಚಿ ತೋರಿಸುತ್ತಿದ್ದಾರೆ. ಅಂತೆಯೇ ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಅವಾಜ್ ಹಾಕಿದ ಪ್ರಸಂಗ ನಡೆದಿದೆ.

    ಹೌದು. ಅನಾವಶ್ಯಕವಾಗಿ ಓಡಾಡುತ್ತಿದ್ದವರ ಬೈಕ್ ಕೀ ಕಿತ್ತುಕೊಂಡ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ವ್ಯಕ್ತಿ ಪೊಲೀಸರನ್ನೇ ಪ್ರಶ್ನಿಸಿ ಅವಾಜ್ ಹಾಕಿದ್ದಾರೆ. ಈ ಘಟನೆ ಮಂಡ್ಯದ ನೂರಡಿ ರಸ್ತೆಯಲ್ಲಿ ನಡೆದಿದೆ.

    ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಯಾಕ್ರಿ ಬೈಕ್ ಕೀ ತಗೊತ್ತೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬಂಡವಾಳ ಹಾಕಿದ್ದೀರಾ ಎಂದು ಅವಾಜ್ ಹಾಕಿದ್ದಾನೆ. ವ್ಯಕ್ತಿಯ ಮಾತಿನಿಂದ ಸಿಟ್ಟಾದ ಪೊಲೀಸರು, ಅದಕ್ಕೆ ನೀನು ರಸ್ತೆಯಲ್ಲಿ ನಿಂತು ಕೆಲಸ ಮಾಡು ಬಾ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಹೀಗೆ ಕೆಲ ಕಾಲ ಪೊಲೀಸರು ಮತ್ತು ವ್ಯಕ್ತಿಯ ನಡುವೆ ವಾಗ್ವಾದ ನಡೆದಿದೆ.

    ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪಿಎಸ್ ಪಿ ವೆಂಕಟೇಶ್, ನೀನ್ಯಾಕೆ ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗಲೂ ತನ್ನ ಮಾತನ್ನ ಮುಂದುವರಿಸಿದ ವ್ಯಕ್ತಿಯನ್ನ ಜೀಪ್ ಹತ್ತಿಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

  • ಜನತಾ ಕರ್ಫ್ಯೂ ಫೇಲ್ ಅಂದ್ರು ಸುಧಾಕರ್ – 100 ಪರ್ಸೆಂಟ್ ಸಕ್ಸಸ್ ಅಂದ್ರು ಸೋಮಶೇಖರ್

    ಜನತಾ ಕರ್ಫ್ಯೂ ಫೇಲ್ ಅಂದ್ರು ಸುಧಾಕರ್ – 100 ಪರ್ಸೆಂಟ್ ಸಕ್ಸಸ್ ಅಂದ್ರು ಸೋಮಶೇಖರ್

    – ಸಚಿವರಲ್ಲಿ ಗೊಂದಲವೋ, ಗೊಂದಲ

    ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರೋ 2 ವಾರಗಳ ಜನತಾ ಲಾಕ್‍ಡೌನ್ ಜಾರಿಯಾಗಿ ಒಂದು ವಾರ ಕಳೀತಿದೆ. ಆದಾಗ್ಯೂ ಕೊರೊನಾ ಕಂಟ್ರೋಲ್‍ಗೇ ಬಂದಿಲ್ಲ. ಬದಲಿಗೆ ಜನತಾ ಕರ್ಫ್ಯೂಗೆ ಮುನ್ನ ಇದ್ದ ಕೇಸ್‍ಗಳಿಗಿಂತಲೂ ಜನತಾ ಕರ್ಫ್ಯೂ ಘೋಷಿಸಿದ ಮೇಲೇ ಹೆಚ್ಚಾಗಿರೋದು ಎಂಥಹವರಿಗೂ ಸ್ಪಷ್ಟವಾಗಿ ಗೋಚರಿಸ್ತಿದೆ.

    ಈ ಮಧ್ಯೆ ಜನತಾ ಲಾಕ್‍ಡೌನ್ ಬಗ್ಗೆ ಸಚಿವರಲ್ಲೇ ಗೊಂದಲ ಇದೆ. ಆರೋಗ್ಯ ಸಚಿವ ಸುಧಾಕರ್ ಅವರೇ ಖುದ್ದು ಜನತಾ ಲಾಕ್‍ಡೌನ್ ವಿಫಲವಾಗಿದೆ ಅಂತ ಹೇಳಿದ್ದಾರೆ. ಆದರೆ ಸಹಕಾರ ಸಚಿವ ಎಸ್‍ಟಿ ಸೋಮಶೇಖರ್ ಮಾತ್ರ, ಜನತಾ ಲಾಕ್‍ಡೌನ್ 100ಕ್ಕೆ 100ರಷ್ಟು ಯಶಸ್ವಿ ಆಗಿದೆ ಅಂದಿದ್ದಾರೆ. ರಾಜ್ಯದಲ್ಲಿ ಲಾಕ್‍ಡೌನ್ ಬಗ್ಗೆ ಸರ್ಕಾರ ಮೀನಾಮೇಷ ಮಾಡ್ತಿರೋ ಹೊತ್ತಲ್ಲೇ ಕಿಲ್ಲರ್ ಕೊರೊನಾ ಕಂಟ್ರೋಲ್‍ಗೆ ಲಾಕ್‍ಡೌನ್ ಅಸ್ತ್ರವೇ ಪರಿಣಾಮಕಾರಿ ಅಂತ ಲಾಕ್‍ಡೌನ್ ಒತ್ತಡ ಹೆಚ್ಚಾಗ್ತಿದೆ. ಆರೋಗ್ಯ ಸಚಿವ ಸುಧಾಕರ್ ಅವರು ಸಂಪೂರ್ಣ ಲಾಕ್‍ಡೌನ್ ಸುಳಿವು ನೀಡಿದ್ದಾರೆ.

    ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು, ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ ಆಗಿದೆ. ಮುಂಬೈನಲ್ಲೂ ಲಾಕ್‍ಡೌನ್‍ನಿಂದಲೇ ಕೇಸ್ ಕಡಿಮೆ ಆಗಿದೆ. ಹಾಗಾಗಿ, ಸಂಪೂರ್ಣ ಲಾಕ್‍ಡೌನ್ ಬಗ್ಗೆ ಯೋಚನೆ ಮಾಡಲಿ ಅಂದಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ, ಜನತಾ ಲಾಕ್‍ಡೌನ್‍ನಿಂದ ಸೋಂಕು ನಿಯಂತ್ರಣ ಆಗ್ತಿಲ್ಲ. ಸಂಪೂರ್ಣ ಲಾಕ್‍ಡೌನ್ ಮಾಡಿ ಅಂತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಸಚಿವೆ ಶಶಿಕಲಾ ಜೊಲ್ಲೆ ಕೂಡ 10 ರಿಂದ 15 ದಿನ ಸಂಪೂರ್ಣ ಲಾಕ್ ಡೌನ್ ಮಾಡಿದರೆ ಒಳ್ಳೆಯದು ಅಂದಿದ್ದಾರೆ. ಇದೆಲ್ಲದರ ಮಧ್ಯೆ, ಬೆಂಗಳೂರಿನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಕಠಿಣ ಲಾಕ್‍ಡೌನ್ ಅನಿವಾರ್ಯ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಹ ಲಾಕ್‍ಡೌನ್ ಹೇರುವಂತೆ ಸರ್ಕಾರಕ್ಕೆ ತಿಳಿಸಿದ್ದಾರೆ.

  • ಜನತಾ ಕರ್ಫ್ಯೂಗೆ ಕಡಲನಗರಿಯಲ್ಲಿ ಉತ್ತಮ ಸ್ಪಂದನೆ

    ಜನತಾ ಕರ್ಫ್ಯೂಗೆ ಕಡಲನಗರಿಯಲ್ಲಿ ಉತ್ತಮ ಸ್ಪಂದನೆ

    ಮಂಗಳೂರು: ಜನತಾ ಕರ್ಫ್ಯೂಗೆ ರಾಜ್ಯದ ಕರಾವಳಿಯ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ಕೆಲವೊಂದು ಅಗತ್ಯ ವಸ್ತುಗಳಿಗಾಗಿ ಕೆಲ ಜನ ಓಡಾಟ ನಡೆಸಿದ್ರು. ಬಳಿಕ ಎಲ್ಲರೂ ಮನೆಯೊಳಗೆ ಲಾಕ್ ಆಗಿದ್ರು. ಹೀಗಾಗಿ ಮಂಗಳೂರು ಸಂಪೂರ್ಣ ಸ್ತಬ್ಧವಾಗಿದೆ.

    ನಗರದ ಸುಮಾರು 54 ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಕಿದ್ದು ಸುಮಾರು ಒಂದು ಸಾವಿರ ಪೊಲೀಸರು ಕಾರ್ಯಾಚರಣೆ ನಡೆಸಿದ್ರು. ಪ್ರತೀ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು, ಅನಗತ್ಯ ವಾಹನಗಳು ಓಡಾಟ ನಡೆಸಿದ್ರೆ ಅಂತಹ ವಾಹನಗಳನ್ನು ಸೀಜ್ ಮಾಡಲಾಗಿದೆ.

    ಸದಾ ಜನರಿಂದ ತುಂಬಿರುತ್ತಿದ್ದ ಎಂ.ಜಿ.ರೋಡ್, ಲಾಲ್ ಭಾಗ್, ಪಿವಿಎಸ್, ಕ್ಲಾಕ್ ಟವರ್, ಸ್ಟೇಟ್ ಬ್ಯಾಂಕ್ ಸರ್ಕಲ್, ಕಂಕನಾಡಿ, ಪಂಪ್ ವೆಲ್ ಸೇರಿದಂತೆ ಎಲ್ಲೆಡೆ ಜನ ಸಂಚಾರವಿಲ್ಲದೆ ಸ್ತಬ್ಧವಾಗಿದೆ.

  • ಬೆಳ್ಳಂಬೆಳಗ್ಗೆಯೇ ಬಾರ್ ಓಪನ್ – 10 ಗಂಟೆವರೆಗೆ ಮಾತ್ರ ಅವಕಾಶ

    ಬೆಳ್ಳಂಬೆಳಗ್ಗೆಯೇ ಬಾರ್ ಓಪನ್ – 10 ಗಂಟೆವರೆಗೆ ಮಾತ್ರ ಅವಕಾಶ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತನ್ನ ರೌದ್ರನರ್ತನ ತೋರುತ್ತಿದ್ದು, ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಹೇರಲಾಗಿದೆ.

    ಆರು ಗಂಟೆಯಿಂದ ಹತ್ತು ಗಂಟೆ ತನಕ ಅಗತ್ಯ ವಸ್ತುಗಳ ಜೊತೆಗೆ ಮದ್ಯ ಖರೀದಿಗೂ ಚಾನ್ಸ್ ನೀಡಲಾಗಿದೆ. ಮದ್ಯ ಮಾರಾಟ, ಅಂಗಡಿ ಮುಂಗಟ್ಟುಗಳು ಓಪನ್, ದಿನಸಿ ತರಕಾರಿ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ ಇಂದು ಬೆಳ್ಳಂಬೆಳಗ್ಗೆ ಬಾರ್ ಗಳನ್ನು ಓಪನ್ ಮಾಡಲಾಗಿದೆ.

    ಜನತಾ ಕಫ್ರ್ಯೂ ಹೇರಿದ್ದರಿಂದ ಮದ್ಯ ಪ್ರಿಯರು ಬಾರ್ ಗಳ ಕಡೆ ಮುಖ ಮಾಡಿದ್ದಾರೆ. ಜಿಲ್ಲೆಗಳಲ್ಲಿಯೂ ಬೆಳ್ಳಂಬೆಳಗ್ಗೆ ಬಾರ್, ರೆಸ್ಟೋರೆಂಟ್, ಎಮ್‍ಆರ್ ಪಿ ಗಳನ್ನು ಓಪನ್ ಮಾಡಲಾಗಿದ್ದು, ಜನ ಖರೀದಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.

    ಮಂಗಳವಾರ ರಾತ್ರಿಯಿಂದ ಇಡೀ ಕರ್ನಾಟಕ ಲಾಕ್ ಆಗಲಿದೆ. ಕಳೆದ ವಾರದಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಲಾಕ್‍ಡೌನ್ ಜಾರಿಯಲ್ಲಿದೆ. ಆದ್ರೂ ಕೊರೊನಾ ಸಾವು ನೋವು ಕಂಟ್ರೋಲ್‍ಗೆ ಬರುತ್ತಿಲ್ಲ. ಬದಲಿಗೆ ಅಪಾಯದ ಮಟ್ಟವನ್ನು ಮೀರುತ್ತಿದೆ. ದೆಹಲಿ, ಮಹಾರಾಷ್ಟ್ರಕ್ಕಿಂತಲೂ ಘನಘೋರ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗುವ ಸ್ಥಿತಿ ಎದುರಾಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಇಡೀ ರಾಜ್ಯದಲ್ಲಿ 16 ದಿನಗಳ ಕಾಲ ಕಠಿಣ ಜನತಾ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

    ಮಂಗಳವಾರ ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೂ ಕಂಪ್ಲೀಟ್ ಲಾಕ್‍ಡೌನ್ ಮಾದರಿಯ ಕ್ರಮಗಳು ಜನತಾ ಕರ್ಫ್ಯೂ ರೂಪದಲ್ಲಿ ಜಾರಿಯಲ್ಲಿ ಇರಲಿವೆ. ಮೇ 12ರ ಹೊತ್ತಿಗೂ ಸೋಂಕು ಕಂಟ್ರೋಲ್‍ಗೆ ಬರಲಿಲ್ಲ ಅಂದರೆ ಇದೇ ರೀತಿಯ ಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.

  • ಕೊರೊನಾ ವಿರುದ್ಧ ಭಾರತದ ಯುದ್ಧ- ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

    ಕೊರೊನಾ ವಿರುದ್ಧ ಭಾರತದ ಯುದ್ಧ- ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

    – ದೇಶಾದ್ಯಂತ ಇಂದು ಜನತಾ ಕರ್ಫ್ಯೂ

    ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣು ಮನುಕುಲದ ವಿನಾಶವನ್ನ ಎದುರು ನೋಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಂಡು ಕೇಳರಿಯದ ಅಪಾಯಕಾರಿ ವೈರಸ್ ಭಾರತ ಸೇರಿದಂತೆ ವಿಶ್ವಕ್ಕೆ ತಲೆ ನೋವಾಗಿ ಕಾಡುತ್ತಿದೆ. ಹಾಗಾಗಿ ಅಪಾಯ ತಡೆಗಟ್ಟಲು ಪ್ರಧಾನಿ ಮೋದಿಯೇ ದೇಶದ ಜನತೆಗೆ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಹಾಗಾಗಿ ಇಂದು ಯಾರೂ ಕೂಡ ಮನೆಯಿಂದ ಹೊರಬಾರದೇ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕರಿಸಬೇಕಾಗಿದೆ.

    ದೇಶದಲ್ಲಿ ಕೊರೊನಾ ಸೋಂಕು 300ರ ಗಡಿದಾಟಿದೆ. ಸೋಂಕು ತಡೆಗಟ್ಟಲು ನಮಗೆ ನಾವೇ ಮುಂಜಾಗ್ರತೆ ವಹಿಸಿ ಮಹಾಮಾರಿ ಹಬ್ಬುವುದನ್ನ ನಿಯಂತ್ರಿಸಬೇಕಿದೆ. ಪ್ರಧಾನಿ ಮೋದಿ ದೇಶದ ಜನತೆಗೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದ ಮೇಲೆ ಪರಕೀಯರು ದಾಳಿ ಮಾಡಿದ್ರೆ ಭಾರತೀಯರೆಲ್ಲರೂ ಹೇಗೆ ಎದೆಕೊಟ್ಟು ಹೋರಾಟ ಮಾಡಲು ಸಿದ್ಧವಾಗುವಿರೋ ಹಾಗೇ ಇಂದು ಕಾಣದ ಶತ್ರುವಿನ ವಿರುದ್ಧ ಜನತಾ ಕಫ್ರ್ಯೂ ವಿಧಿಸಿಕೊಂಡು ಹೋರಾಡಬೇಕಿರೋದು ದೇಶದ ಪ್ರಜೆಯಾಗಿ ಪ್ರತಿಯೊಬ್ಬರ ಕರ್ತವ್ಯವಾಗಿದೆ.

    ಕೊರೊನಾ ವೈರಾಣು ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಬೇಗ ಆವರಿಸುತ್ತದೆ. ಹಾಗಾಗಿ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಹೊರಗೆ ಬಾರದಂತೆ ಪ್ರಧಾನಿ ಮನವಿ ಮಾಡಿದ್ದಾರೆ.

    ಕೊರೊನಾ ವೈರಾಣು ವಿರುದ್ಧ ವೈದ್ಯರು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಮಾಧ್ಯಮವರ್ಗದವರು, ಆಟೋ, ಬಸ್, ರೈಲು ಸೇವೆ, ಪೊಲೀಸರು ಸೇರಿದಂತೆ ನಾನಾ ಕ್ಷೇತ್ರದ ಜನತೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನ ಗೌರವಿಸಿ ಸಂಜೆ 5ಗಂಟೆಗೆ ಚಪ್ಪಾಳೆ ಹೊಡೆದು, ಗಂಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಇದಕ್ಕೆ ಜನರು ಬಹುಪರಾಕ್ ಎಂದಿದ್ದಾರೆ.

    ಮೋದಿ ಸ್ವಯಂ ಕರ್ಫ್ಯೂ ಹೇರಿಕೊಂಡು ಕೊರೋನಾ ವಿರುದ್ಧ ಹೋರಾಡುವಂತೆ ಕೊಟ್ಟ ಕರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ನಾವ್ ಜನತಾ ಕರ್ಫ್ಯೂಗೆ ನಾವು ಬೆಂಬಲಿಸುತ್ತೇವೆ ಅಂದಿದ್ದಾರೆ. ಜನತಾ ಕರ್ಫ್ಯೂಗೆ ಕರುನಾಡೇ ಸ್ತಬ್ಧವಾಗಲಿದೆ. ಹೋಟೆಲ್, ಸಾರಿಗೆ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ರೈಲು ಸೇವೆ ಕೂಡ ಸ್ತಬ್ಧಗೊಂಡಿದೆ.

    ಭಾರತದಲ್ಲಿ 1975ರ ಜೂನ್ 25 ರಿಂದ 1977ರ ಮಾರ್ಚ್ 21ರವರೆಗೆ 21 ತಿಂಗಳ ಕಾಲ ಅಂದಿನ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಆದರೇ ಇಂದು ಕಾಣದ ಶತ್ರು ಕೊರೊನಾ ದೇಶದ ಜನತೆ ಮೇಲೆ ಆಕ್ರಮಣ ಮಾಡಿ ಅಟ್ಟಹಾಸ ಮೆರೆಯುತ್ತಿದ್ದು ಇದು ಒಂದು ರೀತಿ ತುರ್ತು ಪರಿಸ್ಥಿತಿಯಂತೆಯೇ ಗೋಚರಿಸುತ್ತಿದೆ. ಹಾಗಾಗಿ ಇಂದಿನ ಜನತಾ ಕರ್ಫ್ಯೂ ಬೆಂಬಲಿಸುವ ಅಗತ್ಯವಿದೆ.

  • ನಾಳೆ ಜನತಾ ಕರ್ಫ್ಯೂ ಆಚರಣೆಗೆ ಸಿಎಂ ಮನವಿ

    ನಾಳೆ ಜನತಾ ಕರ್ಫ್ಯೂ ಆಚರಣೆಗೆ ಸಿಎಂ ಮನವಿ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ನಾಳೆಯ ಜನತಾ ಕರ್ಫ್ಯೂ ಹೇಗೆ ಆಚರಿಸಬೇಕು, ಏನೆಲ್ಲ ಮಾಡಬೇಕು ಮತ್ತು ಏನೆಲ್ಲ ಮಾಡಬಾರದು ಅಂತ ಖುದ್ದು ಸಿಎಂ ಯಡಿಯೂರಪ್ಪನವರೇ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಜನತಾ ಕರ್ಫ್ಯೂಗೆ ಮುನ್ನಾದಿನವಾದ ಇಂದು ಸಿಎಂ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿ ಜನತಾ ಕರ್ಫ್ಯೂ ಆಚರಣೆ ಕುರಿತು ವಿವರ ಕೊಟ್ಟಿದ್ದಾರೆ.

    ಸಿಎಂ ಜನತೆಗೆ ಮನವಿ: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವಂತೆ ನಾಳೆ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಆಚರಣೆಗೆ ನಿಮ್ಮೆಲ್ಲರ ಬೆಂಬಲ ಅತಿ ಅಗತ್ಯವಾಗಿದೆ. ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಾವೆಲ್ಲರೂ ಮನೆಯಲ್ಲಿ ಉಳಿದು ನಿಜವಾದ ಅರ್ಥದಲ್ಲಿ ಕರ್ಫ್ಯೂವನ್ನು ಬೆಂಬಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ”ಕರ್ನಾಟಕ ರಾಜ್ಯವು ದೇಶದಲ್ಲಿ ಕೊವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಇದೆಲ್ಲದಕ್ಕೂ ರಾಜ್ಯದ 6.5 ಕೋಟಿ ಜನರ ನೈತಿಕ ಮತ್ತು ಸಾಂಘಿಕ ಬೆಂಬಲ ಕಾರಣ. ಈ ಸಮಯದಲ್ಲಿ ನನ್ನ ಕಳಕಳಿಯ ಮನವಿಯೆಂದರೆ ರಾತ್ರಿ 9.00 ಗಂಟೆಯ ನಂತರ ಕರ್ಫ್ಯೂ ಅವಧಿ ಮುಗಿದಿದೆ ಎಂದು ಎಲ್ಲರೂ ಮನೆಯ ಹೊರಗಡೆ ಬಂದು ಸಂಭ್ರಮಿಸುವುದಾಗಲೀ ಅಥವಾ ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸುವುದಾಗಲೀ ಮಾಡಬೇಡಿ. ಇದು ಬೆಳಗ್ಗೆಯಿಂದ ಆಚರಿಸಿದ ರೋಗ ತಡೆಯುವ ಕ್ರಮವಾದ ಕರ್ಫ್ಯೂವನ್ನು ಅರ್ಥರಹಿತವಾಗಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿಮಗೆ 9 ಗಂಟೆಯಿಂದ ಮನೆ ಹೊರಗಡೆ ಬರದೆ ಮನೆಯವರೆಲ್ಲರೂ ಆಪ್ತರೊಂದಿಗೆ ಕಾಲ ಕಳೆಯಲು ಮನವಿ ಮಾಡಿರುತ್ತಾರೆ. ಆವಾಗ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ಕರ್ಪೂಗೆ ಒಂದು ಅರ್ಥ ಬರುತ್ತದೆ ಮತ್ತು ಸಾರ್ಥಕವಾಗಲಿದೆ. ಇನ್ನೊಮ್ಮೆ ನನ್ನ ಕಳಕಳಿಯ ಮನವಿ ನೀವು ಯಾರೂ ರಾತ್ರಿ 9 ಗಂಟೆಯ ನಂತರ ಹೊರಗೆ ಬರಬೇಡಿ. ಆದರೆ ಸಂಜೆ 5 ಗಂಟೆಗೆ ನಿಮ್ಮ ಮನೆಯ ಕಿಟಕಿಗಳಿಂದ ಮತ್ತು ಛಾವಣಿಗಳ ಮೇಲಿಂದ ಚಪ್ಪಾಳೆ ತಟ್ಟಿ ಸರ್ಕಾರದ ಮತ್ತು ರೋಗ ತಡೆಯುವಲ್ಲಿ ಭಾಗಿಯಾಗಿರುವ ಜನರಿಗೆ ನೈತಿಕ ಬೆಂಬಲ ಸೂಚಿಸಲು ಮಾತ್ರ ಮರೆಯಬೇಡಿ” ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.